ಶ್ರೀಕಲಾ ಡಿ.ಎಸ್.
ಅಪ್ಪನೆಂದರೆ (ಶ್ರೀಧರ.ಡಿ.ಎಸ್) ಯಕ್ಷಗಾನ, ತಾಳ ಮದ್ದಲೆ, ಪುರಾಣ ಪ್ರಪಂಚ.. ಅದಕ್ಕೆ ಸಂಬಂಧಿಸಿದ ಓದು, ಸಂಶೋಧನೆ. ಅವರ ಈ ಅಗಾಧ ಯಕ್ಷ ಸಾಹಿತ್ಯದ ಆಸಕ್ತಿಯ ಫಲವೇ ಮೂವತ್ತೈದಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನೆ.
ಈ ಹಿಂದೆ ಬಿಡಿಬಿಡಿಯಾಗಿ ಬಾಲ ಭಾರತ, ಮಹಾಪ್ರಸ್ಥಾನ, ಶುಕ್ರ ಸಂಜೀವಿನಿ, ಗರುಡ ಪ್ರತಾಪ ಪ್ರಸಂಗಗಳು ಪ್ರಕಟಗೊಂಡಿದ್ದವು. ನಂತರ ಉಡುಪಿಯ ಯಕ್ಷಗಾನ ಕಲಾಕೇಂದ್ರ ಅಪ್ಪನ ಹದಿಮೂರು ಪ್ರಸಂಗಗಳನ್ನು ಕಲೆಹಾಕಿ ‘ಯಕ್ಷಗಾನ ಪ್ರಸಂಗ ಮಾಲಿಕಾ’ ಪ್ರಕಟಿಸಿತ್ತು. ಬಹಳಷ್ಟು ಯಕ್ಷ ಕಲಾವಿದರು ಇದರ ಉಪಯೋಗ ಪಡೆದಿದ್ದರು. ಜೊತೆಗೆ 2011ರ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿಯೂ ಇದಕ್ಕೆ ಸಂದಿತ್ತು. ಅಕಾಡೆಮಿ ಪ್ರಶಸ್ತಿ ಆರಂಭಿಸಿದ ವರ್ಷವೇ ಅಪ್ಪನಿಗೆ ಮೊದಲ ಪ್ರಶಸ್ತಿ ಸಂದಿದ್ದು ವಿಶೇಷ.
ಈಗ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ(ರಿ) ‘ಯಕ್ಷಗಾನ ಪ್ರಸಂಗ ಮಾಲಿಕಾ’ದ ದ್ವಿತೀಯ ಸಂಪುಟ ಪ್ರಕಟಿಸುತ್ತಿದೆ. ಸೆಪ್ಟೆಂಬರ್ 15ರ ಭಾನುವಾರ ಈ ಪ್ರಸಂಗ ಗುಚ್ಛ ಲೋಕಾರ್ಪಣೆಯಾಗಲಿದೆ. ಮೊದಲ ಸಂಪುಟದಲ್ಲಿ ಇಲ್ಲದ ಹದಿಮೂರು ಪ್ರಸಂಗಗಳು ಈ ಸಂಪುಟದಲ್ಲಿದೆ. ಯಕ್ಷಗಾನಾಸಕ್ತರಿಗೆ ಇದು ಬಹು ಉಪಯುಕ್ತ, ಸಂಗ್ರಹಯೋಗ್ಯ ಸಂಪುಟವಾಗಬಹುದು ಎಂಬುದು ನಂಬುಗೆ.
ಕರಾವಳಿಯ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಲಭಿಸಲಿದೆ. ಉಳಿದಂತೆ ಕೊಳ್ಳುವ ವಿವರಗಳನ್ನು ಪುಸ್ತಕ ಬಿಡುಗಡೆಯ ನಂತರ ನೀಡಲಾಗುವುದು.






0 Comments