ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮ್ಯಾಚ್ ವಿನ್ನಿಂಗ್ ಪ್ಲೇಯರ್

12193784_846269478823735_9044215110759016150_n

ಶ್ರೀಪತಿ ಮಂಜನಬೈಲು ಒಬ್ಬ ಅದ್ಭುತ ನಟ ; ಎಂಥ ಪಾತ್ರಕ್ಕಾದರೂ ಸೈ ಎಂಬುದು ಈಗಾಗಲೇ ನಾಟಕಾಸಕ್ತರಿಗೂ, ರಂಗಕರ್ಮಿಗಳಿಗೂ ತಿಳಿದ ವಿಚಾರವೇ. ಇಂಥ ಶ್ರೀಪತಿಯರನ್ನು ಕುರಿತು ಕಾಂತಾವರದ ಕನ್ನಡ ಸಂಘದವರು ಒಂದು ಪುಸ್ತಕವನ್ನು ಬರೆಯಲು ಕನ್ನಡದ ಮತ್ತೊಮ್ಮ ಹೆಮ್ಮೆಯ ರಂಗಕರ್ಮಿ ಗೋಪಾಲ ವಾಜಪೇಯಿಯವರನ್ನು ಕೇಳಿದಾಗ ಅವರು ಕೂಡಲೇ ಒಪ್ಪಿಕೊಂಡು, ಅದನ್ನು ಪ್ರೀತಿಯಿಂದ ಸಿದ್ಧಪಡಿಸಿದ್ದಾರೆ.

ಆದರೆ, ಅಷ್ಟು ಆತ್ಮೀಯನಾಗಿರುವ ವ್ಯಕ್ತಿಯ ಕುರಿತು ಬರೆಯುವುದು ಅದೆಷ್ಟು ಕಷ್ಟದ ಕೆಲಸ ಎಂಬುದು ನನಗೆ ಗೊತ್ತಾಗಿ ಸ್ವಲ್ಪ ಹಿಂದೇಟು ಹಾಕಿದ್ದೂ ಉಂಟು. ಆದರೂ, ಧೈರ್ಯ ಮಾಡಿ ಮಾಹಿತಿ ಸಂಗ್ರಹಿಸಲು ಕೂತೆ. ಶ್ರೀಪತಿಯೊಂದಿಗೆ ಪ್ರತಿ ದಿನ ಮೂರು ತಾಸುಗಳ ಬೈಠಕ್ಕು ಎರಡು-ಮೂರು ವಾರ ನಡೆಯಿತು. ಈ ಶ್ರೀಪತಿಯ ಒಂದೊಂದೇ ಮುಖದ ಪರಿಚಯವಾಗುತ್ತ ಹೋದಂತೆಲ್ಲ ನಾನು ಅವಾಕ್ಕಾದೆ.

-ಗೋಪಾಲ ವಾಜಪೇಯಿ 

ನಾಳೆ ಭಾನುವಾರ, ನವೆಂಬರ್ 1ರಂದು ಕಾಂತಾವರದಲ್ಲಿ ಈ ಪುಸ್ತಕ ಬಿಡುಗಡೆ ಆಗುತ್ತಿದೆ.

ಪುಸ್ತಕಕ್ಕಾಗಿ ’ಅವಧಿ’ ಬಳಗದ ಸಂಧ್ಯಾರಾಣಿ ಬರೆದ ಬರಹ ಇಲ್ಲಿದೆ 

ಕಲ್ಯಾಣದಲ್ಲಿ ಸಿಕ್ಕ ಬಿಜ್ಜಳ
208451_214192258592268_8084220_n
ಅಂದು ರಂಗಶಂಕರದಲ್ಲಿ ಲಂಕೇಶರ ಹೆಸರಿನಲ್ಲಿ ರಂಗ ಉಗಾದಿ. ಮಧ್ಯಾಹ್ನ ಲಂಕೇಶರ ’ಸಂಕ್ರಾಂತಿ’ ನಾಟಕ. ಅದಾಗಲೇ ನಾನು ಕಂಬಾರರ ’ಶಿವರಾತ್ರಿ’ ನೋಡಿದ್ದೆ. ನನಗೇ ಅರಿವಿಲ್ಲದಂತೆ ಮನಸ್ಸು ಎರಡು ನಾಟಕಗಳ ತುಲನೆ ಮಾಡುತ್ತಿತ್ತು. ಅಷ್ಟರಲ್ಲಿ ರಂಗದ ಮೇಲೆ ಬಿಜ್ಜಳನ ಪ್ರವೇಶ ಆಗಿತ್ತು.  ಒಬ್ಬನೇ ಒಬ್ಬ ಆಟಗಾರ ಮನಸ್ಸಿಟ್ಟು ಪ್ರಯತ್ನಿಸಿ, ಆಡಿ ಕ್ರಿಕೆಟ್ ಆಟವನ್ನು ತನ್ನ ತಂಡಕ್ಕೆ ಗೆಲ್ಲಿಸಿಕೊಡಬಹುದು ಎಂದು ಕೇಳಿದ್ದೆ. ಅಂತಹವರನ್ನು ಮ್ಯಾಚ್ ವಿನ್ನಿಂಗ್ ಪ್ಲೇಯರ್ ಎನ್ನುತ್ತಾರೆ. ನಾನು ಆ ದಿನ ರಂಗಸ್ಥಳದಲ್ಲಿ ಅಂತಹ ಒಬ್ಬ ಮ್ಯಾಚ್ ವಿನ್ನರ್ ನ ನೋಡಿದ್ದೆ.
ಬಿಜ್ಜಳನ ಪಾತ್ರವನ್ನು ಎಷ್ಟು ಹಿಗ್ಗಿಸಬಹುದೋ, ಅದಕ್ಕೆ ಎಷ್ಟು ಪದರಗಳನ್ನು ಕೊಡಬಹುದೋ, ಎಷ್ಟು ಆಯಾಮಗಳನ್ನು ವ್ಯಕ್ತಪಡಿಸಬಹುದೋ ಅಷ್ಟೂ ಅಲ್ಲಿ ಕಾಣುತ್ತಿತ್ತು. ವಾಕ್ಯಗಳ ನಡುವೆ ಒಂದು ನಿಲುಗಡೆ, ಮಾತುಗಳ ಕೊನೆಯಲ್ಲಿ ಮೇಲೇರುತ್ತಿದ್ದ ಹುಬ್ಬು, ವಿಶಿಷ್ಟವಾದ ಆಂಗಿಕ, ಆಡುತ್ತಿದ್ದ ಮಾತುಗಳಿಗೂ ಮಿಗಿಲಾಗಿ ಇನ್ಯಾವುದೋ ಭಾವ ನಮಗೆ ದಕ್ಕುವಂತೆ ಮಾಡುತ್ತಿತ್ತು.
ನಾಟಕಗಳ ತುಲನೆ ಮರೆತು ನಾನು ಬಿಜ್ಜಳನ ಪಾತ್ರದಲ್ಲಿ ಮುಳುಗಿ ಹೋಗಿದ್ದೆ. ನಾಟಕ ಮುಗಿದಾಗ ನನ್ನ ಮನದಲ್ಲಿದ್ದದ್ದು ಒಂದೇ ಪ್ರಶ್ನೆ, ’ಬಿಜ್ಜಳನ ಪಾತ್ರ ಮಾಡಿದ್ದವರು ಯಾರು?’. ಅವರಿವವರನ್ನು ವಿಚಾರಿಸುವಷ್ಟರಲ್ಲಿ ಆ ಪಾತ್ರ ಮಾಡಿದ್ದವರು ‘ಶ್ರೀಪತಿ ಮಂಜನಬೈಲು’ ಎಂದು ತಿಳಿಯಿತು. ಅಂದೇ ಹೋಗಿ ಅವರನ್ನು ಮಾತನಾಡಿಸಿದೆ. ಶ್ರೀಪತಿ ಅವರ ಪರಿಚಯ ನನಗಾಗಿದ್ದು ಹೀಗೆ.
ಆಮೇಲೆ ನಾನು ಉಪಸಂಪಾದಕಿಯಾಗಿದ್ದ ’ಅವದಿ’ ಅಂತರ್ಜಾಲ ಪತ್ರಿಕೆಗೆ ಅವರು ರಂಗಭೂಮಿಗೆ ಸಂಬಂದಿಸಿದಂತೆ ಹಲವು ಲೇಖನಗಳನ್ನ ಬರೆದರು. ಅವುಗಳ ವಿಷಯವಾಗಿ ಪ್ರತಿ ಸಲ ಅವರ ಜೊತೆ ಮಾತನಾಡುವಾಗಲೂ ರಂಗಭೂಮಿಯ ಬಗ್ಗೆ ಅವರ ಆಳವಾದ ಗ್ರಹಿಕೆ, ತಿಳವಳಿಕೆ ನನಗೆ ಅಚ್ಚರಿ ಮತ್ತ ಅವರ ಬಗ್ಗೆ ಗೌರವ ಹುಟ್ಟಿಸುತ್ತಿತ್ತು. ಕನ್ನಡ ರಂಗಭೂಮಿಯ ಜೊತೆಜೊತೆಯಲ್ಲಿಯೇ ಮರಾಠಿ ರಂಗಭೂಮಿಯ ಬಗ್ಗೆಯೂ ಅವರಿಗೆ ಅಪಾರವಾದ ಜ್ಞಾನ ಇತ್ತು. ಆ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಅವರಿಗೆ ಕರೆ ಮಾಡಬಹುದಾಗಿತ್ತು.
sankranti abhinaya taranga
ನಂತರ ಈಟೀವಿ ನ್ಯೂಸ್ ಗಾಗಿ ನಾನು ರಂಗಭೂಮಿಗೆ ಸಂಬಂಧಿಸಿದಂತೆ ‘ಸೈಡ್ ವಿಂಗ್’ ಎನ್ನುವ ಕಾರ್ಯಕ್ರಮ ಮಾಡುತ್ತಿದ್ದೆ. ಆ ಕಾರ್ಯಕ್ರಮಕ್ಕಾಗಿ ನಾನು ಶ್ರೀಪತಿ ಅವರನ್ನು ಸಂದರ್ಶಿಸಿದ್ದೆ. ಬೆಳಗಾವಿಯಲ್ಲಿ ಕನ್ನಡ ರಂಗಭೂಮಿಯನ್ನು ಬೆಳೆಸಿದವರಲ್ಲಿ ಇವರು ಪ್ರಮುಖರು ಎಂದು ನಾನು ಕೇಳಿದ್ದೆ.
ಅದೇ ಸಂಬಂಧವಾಗಿ ಇವರ ಮೇಲೆ ಒಮ್ಮೆ ಕಲ್ಲನ್ನೂ ಎಸೆಯಲಾಗಿತ್ತು ಎಂದೂ ಕೇಳಿದ್ದೆ. ಆ ಬಗ್ಗೆ ಇವರನ್ನು ಕೇಳಿದೆ. ಅದೊಂದು ದೊಡ್ಡ ಘಟನೆಯೇ ಅಲ್ಲವೆನ್ನುವಂತೆ ಅದರ ಬಗ್ಗೆ ಮಾತನಾಡಿ, ‘ಕಲೆಗೆ ಭಾಷೆಯ ಹಂಗಿರುವುದಿಲ್ಲ ಸಂಧ್ಯಾ, ರಂಗಕಲಾವಿದರು ರಂಗಕಲಾವಿದರು ಮಾತ್ರ’ ಎಂದು ಹೇಳಿದ್ದರು. ಅವರ ದನಿಯಲ್ಲಿದ್ದ ಪ್ರಾಮಾಣಿಕತೆಯನ್ನು ನಾನು ಇಂದಿಗೂ ಮರೆತಿಲ್ಲ.
ಆಗಲೇ ಅವರು ಬಿ ವಿ ಕಾರಂತರ ಜೊತೆ ಅವರಿಗಿದ್ದ ಒಡನಾಟದ ಬಗ್ಗೆ ಹೇಳಿದ್ದರು, ‘ಸೋಲಿಸಬ್ಯಾಡ ಗೆಲಿಸಯ್ಯ’ ಹಾಡು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹುಟ್ಟಿದ ಬಗೆಯನ್ನೂ, ಬೆಳಗ್ಗೆ ಎದ್ದ ಬಂದ ಅವರ ಮಗಳು ಕಣ್ಣರಳಸಿ ಆ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದನ್ನು ಹೇಳಿದ್ದರು. ಅದನ್ನು ಅವರು ಹೇಳಿದ ರೀತಿ ತುಂಬಾ ಸ್ವಾರಸ್ಯಕರವಾಗಿತ್ತು. ರಂಗಭೂಮಿಯ ತಮ್ಮ ನೆನಪುಗಳನ್ನು ಅವರು ದಾಖಲಿಸಬೇಕು ಎನ್ನುವುದು ನನ್ನ ನಿರಂತರ ಒತ್ತಾಯ. ಈ ಸಂದರ್ಭದಲ್ಲಿ ಅದನ್ನು ಅವರೆಡೆಗಿನ ಗೌರವ ಮತ್ತು ಪ್ರೀತಿಯ ಹಕ್ಕೊತ್ತಾಯವಾಗಿ ಮಂಡಿಸುತ್ತಿದ್ದೇನೆ.

‍ಲೇಖಕರು admin

28 October, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading