ನಾ ದಿವಾಕರ
ಅಧ್ಯಾಯ ಒಂದು :
ಮಾರುಕಟ್ಟೆ ವ್ಯವಸ್ಥೆ ಮತ್ತು ಗ್ರಾಹಕ ಸಂಸ್ಕೃತಿ ಈ ಎರಡೂ ವಿದ್ಯಮಾನಗಳು ಬಂಡವಾಳ ಪ್ರೇರಿತ ಅರ್ಥವ್ಯವಸ್ಥೆಯ ಅವಳಿ ಮಕ್ಕಳಿದ್ದಂತೆ. ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡುವ ಮಾರುಕಟ್ಟೆ ವ್ಯವಸ್ಥೆ ಗ್ರಾಹಕರಲ್ಲಿ ಭ್ರಮೆ ಮೂಡಿಸುತ್ತದೆ. ಭ್ರಮಾಲೋಕದಲ್ಲಿ ವಿಹರಿಸುವ ಗ್ರಾಹಕರು ಮಾರುಕಟ್ಟೆ ಒದಗಿಸುವ ಪದಾರ್ಥಗಳನ್ನು ಹಿಂದೆ ಮುಂದೆ ನೋಡದೆ ಖರೀದಿಸಲು ಮುಗಿ ಬೀಳುತ್ತಾರೆ. ಮಧ್ಯಮ ವರ್ಗಗಳಲ್ಲಿ ಪಾರಂಪರಿಕವಾಗಿ, ಶತಮಾನಗಳಿಂದ ಕಂಡುಬಂದಿರುವ ಒಂದು ಲಕ್ಷಣ ಎಂದರೆ ತಮ್ಮ ಬದುಕನ್ನು ರೂಪಿಸಿಕೊಳ್ಳುವಾಗ ಬಾಹ್ಯ ಜಗತ್ತಿನ ಕೃಪಾದೃಷ್ಟಿಗಾಗಿ ಹಾತೊರೆಯುವುದು. ಶ್ರೀಮಂತ ವರ್ಗಗಳ ಜೀವನಶೈಲಿಯನ್ನು ಅನುಕರಿಸುವುದು ಒಂದು ಆಯಾಮವಷ್ಟೆ. ಹಾಗಾಗಿಯೇ ಮಾರುಕಟ್ಟೆ ವ್ಯವಸ್ಥೆ ಜನಸಾಮಾನ್ಯರ ಮುಂದೆ ಸೃಷ್ಟಿಸುವ ಮಾಯಾ ಬಜಾರಿನಲ್ಲಿ ಗ್ರಾಹಕರ ಸಂತೆ ಸದಾ ನಳನಳಿಸುತ್ತಿರುತ್ತದೆ. ಒಂದು ಭೌಗೋಳಿಕ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಈ ವಿದ್ಯಮಾನ ನಿಣರ್ಾಯಕವಾದಾಗ ಸಮಾಜ ಹಾದಿ ತಪ್ಪುತ್ತದೆ. ತಪ್ಪು ಒಪ್ಪುಗಳನ್ನು ಪರಾಮಶರ್ಿಸಲು ವಿಫಲವಾಗುತ್ತದೆ. ಕೆಟ್ಟ ಮೇಲೆಯೇ ಬುದ್ಧಿ ಬರುವುದು ಖಚಿತ.
ಆಧುನಿಕ ಜೀವನ ಶೈಲಿಯ ಒಂದು ಆಯಾಮವನ್ನು ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾಣಬಹುದು. ಮಧ್ಯಮ ಮತ್ತು ಮೇಲ್ವರ್ಗಗಳ ಸಮಯಾಭಾವದ ಜೀವನ ಶೈಲಿ ಹಲವು ವಿಭಿನ್ನ ಮಜಲುಗಳನ್ನು ಸೃಷ್ಟಿಸುತ್ತದೆ. ಇವುಗಳ ಪೈಕಿ ಥಟ್ಟನೆ ತಯಾರಾಗುವ ಅಥವಾ ಸಿದ್ಧವಾಗುವ ನಿತ್ಯಜೀವನದ ಪರಿಕರಗಳ ಅವಿಷ್ಕಾರ ಮಹತ್ತರವಾದದ್ದು. ಥಟ್ ಎಂದರೆ ಎದುರಾಗುವ ಆಹಾರ ಪದಾರ್ಥಗಳು ಷಾಪಿಂಗ್ ಮಾಲ್ಗಳಲ್ಲಿ ಕಂಗೊಳಿಸುವಾಗ ಮಧ್ಯಮ ವರ್ಗಗಳ ಜೇಬು ಖಾಲಿಯಾಗಿದ್ದರೂ ಮನದೊಳಗಿನ ಹಪಾಹಪಿ ತಳ್ಳುವ ಗಾಡಿಗಳನ್ನು ತುಂಬಿಸಲು ಪ್ರೇರೇಪಿಸುತ್ತದೆ. ಇಂತಹ ಒಂದು ಪರಿಸರದಲ್ಲಿ ಉದ್ಭವಿಸಿದ ಮ್ಯಾಗಿ ಟು ಮಿನಟ್ಸ್ ನೂಡಲ್ಸ್ ಇಂದು ವಿವಾದಕ್ಕೀಡಾಗಿದೆ. ನೂಡಲ್ಲಾ, ಅತ್ತ ಕಡೆ ತಿರುಗಿಯೂ ನೋಡಲ್ಲ ಎಂದು ಜನ ಹೇಳಲಾರಂಭಿಸಿದ್ದಾರೆ. ಕಾರಣ ಥಟ್ ಎಂದರೆ ತಿನ್ನಲು ತಯಾರಾಗುವ ಈ ಆಹಾರ ಪದಾರ್ಥದಲ್ಲಿ ವಿಷಪೂರಿತ ರಾಸಾಯನಿಕ ವಸ್ತುಗಳಿವೆ. ಮ್ಯಾಗಿ ನಿಜಕ್ಕೂ ಪಾಪ ಮಾಡಿದ ವಸ್ತು. ಏಕೆಂದರೆ ಮ್ಯಾಗಿಯ ಸಂತತಿ ಷಾಪಿಂಗ್ ಮಾಲ್ಗಳಲ್ಲಿ, ಪಿಜ್ಜಾ ಹಟ್ಗಳಲ್ಲಿ, ಷಾಪಿಂಗ್ ಮಾಲ್ಗಳಲ್ಲಿ ರಾರಾಜಿಸುತ್ತಿವೆ. ಮ್ಯಾಗಿ ಮಾತ್ರ ಬಂದಿಖಾನೆಯಲ್ಲಿದೆ .

ಇರಲಿ. ಮ್ಯಾಗಿಗಿಂತಲೂ ಪಾಪಾತ್ಮರೆಂದರೆ ಈ ವಿಷಪೂರಿತ ಆಹಾರ ಪದಾರ್ಥವನ್ನು ಬಳಸಲು ಜನಸಾಮಾನ್ಯರನ್ನು ಪ್ರೇರೇಪಿಸಿ ಬಾಯಲ್ಲಿ ನೀರೂರಿಸಿದ ಸಿನಿಮಾ ನಟ ನಟಿಯರು. ಮಧ್ಯಮ ವರ್ಗಗಳು ಸಿನಿಮಾ ಪರದೆಯ ಮೇಲೆ ಸಮಾಜವನ್ನು ತಿದ್ದಲು ಪ್ರಾಣವನ್ನೇ ಕೊಡುವ ನಾಯಕ ನಟರನ್ನು ನಿಜ ಜೀವನದಲ್ಲೂ ಪ್ರಾಮಾಣಿಕರೆಂದೇ ಭಾವಿಸುತ್ತಾರೆ. ಏಕೆಂದರೆ ದೃಶ್ಯ ಮಾಧ್ಯಮ ಒಂದು ಪ್ರಭಾವಶಾಲಿ ಭ್ರಮಾಲೋಕವನ್ನು ಸೃಷ್ಟಿಸುತ್ತದೆ. ಹಾಗಾಗಿ ಈ ನಟನಟಿಯರು ಯಾವುದೇ ಪದಾರ್ಥವನ್ನು ಸೇವಿಸದೆ, ಬಳಸದೆ ವೈಭವೀಕರಿಸಿದರೂ ಜನರು ಆಕರ್ಷಣೆ, ಆಮಿಷಕ್ಕೆ ಬಲಿಯಾಗುತ್ತಾರೆ. ಇಲ್ಲಿ ಜಾಹೀರಾತು ನೀಡುವ ರೂಪದಶರ್ಿಗಳ, ಬ್ರಾಂಡ್ ಅಂಬಾಸಡರ್ಗಳ ಉತ್ತರದಾಯಿತ್ವದ ಪ್ರಶ್ನೆ ಉದ್ಭವಿಸಿದಾಗ ಗೊಂದಲ ಎದುರಾಗುತ್ತದೆ. ಇಲ್ಲಿ ಜನರಲ್ಲಿ ನಂಬಿಕೆ ಹುಟ್ಟಿಸಿ ದ್ರೋಹ ಎಸಗುವುದು ಕಾಪರ್ೋರೇಟ್ ಉದ್ಯಮಿಗಳು. ರೂಪದಶರ್ಿಗಳು ನಿಮಿತ್ತ ಮಾತ್ರ. ಆದರೂ ಜನಸಾಮಾನ್ಯರ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಲಾಭ ಗಳಿಸುವ ಉದ್ಯಮಿಗಳಿಗೆ ಸಾಥ್ ನೀಡಿದವರು ಶಿಕ್ಷಾರ್ಹರೇ. ಅಪರಾಧ ಶಿಕ್ಷಾರ್ಹ, ಅಪರಾಧಕ್ಕೆ ಪ್ರೇರಣೆ ನೀಡುವುದೂ ಶಿಕ್ಷಾರ್ಹ.
ಅಧ್ಯಾಯ ಎರಡು
ಜನಸಾಮಾನ್ಯರ ಅಮಾಯಕತೆಯನ್ನು, ಅಜ್ಞಾನವನ್ನು ಮತ್ತು ಆಧುನಿಕ ಜೀವನಶೈಲಿಯ ಹಪಾಹಪಿಯನ್ನು ತಮ್ಮ ವ್ಯಕ್ತಿಗತ, ಔದ್ಯಮಿಕ ಅಥವಾ ವೃತ್ತಿಪರ ಲಾಭಕ್ಕಾಗಿ ಬಳಸಿಕೊಳ್ಳುವುದು ನಾಗರಿಕ ಸಮಾಜದಲ್ಲಿ ಅಪರಾಧವೇ ಆಗುತ್ತದೆ ಎಂದಾದಲ್ಲಿ, ಇಂತಹ ಅಪರಾಧಕ್ಕೆ ಪೂರಕವಾಗಿ ಪ್ರಚಾರ ಮಾಡುವುದೂ ಅಪರಾಧವೇ ಆಗುತ್ತದೆ. ಆಧುನಿಕ ಭಾರತದ ದೃಶ್ಯ ಮಾಧ್ಯಮದಲ್ಲಿ ಇಂತಹ ಅಪರಾಧಗಳು ಆಧ್ಯಾತ್ಮಿಕ ನೆಲೆಯಲ್ಲಿ, ಸಂಸ್ಕೃತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಂಭವಿಸುತ್ತಿರುವುದು ದುರಂತವೇ ಆದರೂ ಸತ್ಯ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಪದಾರ್ಥಗಳನ್ನು ತಯಾರಿಸುವ ಕಾಪರ್ೋರೇಟ್ ಉದ್ಯಮಿಗಳು ತಮ್ಮ ಪದಾರ್ಥಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಜಾಹೀರಾತಿನ ಮೊರೆ ಹೋಗುತ್ತಾರೆ. ಬ್ರಾಂಡ್ ಅಂಬಾಸಡರ್ಗಳ ಮೂಲಕ ಒಂದು ಭ್ರಮಾಲೋಕವನ್ನು ಸೃಷ್ಟಿಸುತ್ತಾರೆ. ಹೇಳುವುದಕ್ಕಿಂತಲೂ ಮುಚ್ಚಿಡುವುದೇ ಹೆಚ್ಚಾಗಿರುವ ಜಾಹೀರಾತಿನ ಮೂಲಕ ಜನರ ಗಮನ ಸೆಳೆದು ತಮ್ಮ ಲಾಭಾಂಶ ಮತ್ತು ಬಂಡವಾಳ ಹೆಚ್ಚಿಸಿಕೊಳ್ಳುತ್ತಾರೆ. ಇದು ಔದ್ಯಮಿಕ ಜಗತ್ತಿನ ಕಸರತ್ತು.
ಇದೇ ವಿದ್ಯಮಾನವನ್ನು ಆಧ್ಯಾತ್ಮ ಮತ್ತು ಧರ್ಮದ ಜಗತ್ತಿನ ಕಸರತ್ತಿನಲ್ಲೂ ಕಾಣಬಹುದಲ್ಲವೇ. ಕನ್ನಡ ದೃಶ್ಯಮಾಧ್ಯಮಗಳು ಮಾತ್ರವಲ್ಲ ದೇಶದ ಬಹುತೇಕ ಮಾಧ್ಯಮಗಳು ಆಧ್ಯಾತ್ಮ, ಜ್ಯೋತಿಷ್ಯ, ವಾಸ್ತು ಮುಂತಾದ ಅವೈಜ್ಞಾನಿಕ ವಿಚಾರಗಳನ್ನು ಜನರ ಮನದಲ್ಲಿ ಬಿತ್ತುವ ಕೃಷಿಯನ್ನು ವ್ಯವಸ್ಥಿತವಾಗಿ, ಸಮರ್ಪಕವಾಗಿ ಪೂರ್ಣ ಪ್ರಮಾಣದಲ್ಲಿ ಮಾಡುತ್ತಿರುವುದು ಗುಟ್ಟಿನ ಮಾತೇನಲ್ಲ. ಟಿವಿ ಸ್ಟುಡಿಯೋದಲ್ಲಿ ಕುಳಿತ ಗುರೂಜಿಯೊಬ್ಬರು ತಮ್ಮ ಬದಿಯಲ್ಲಿನ ವೀಳ್ಯದೆಲೆಯನ್ನು ಕೈಗೆತ್ತಿಕೊಂಡು ತಮಗೆ ನೇರ ದೂರವಾಣಿ ಕರೆ ಮಾಡುವ ದರ್ಶಕರ ಭವಿಷ್ಯವನ್ನು ವೀಳ್ಯದೆಲೆಯ ಮೇಲಿನ ಕಪ್ಪು ಕಲೆಯ ಆಧಾರದ ಮೇಲೆ ವಿಶ್ಲೇಷಿಸುತ್ತಾರೆ. ಇದಕ್ಕಿಂತಲೂ ಮೌಢ್ಯ ಇರಲು ಸಾಧ್ಯವಿಲ್ಲ. ಆದರೂ ಈ ಕಾರ್ಯಕ್ರಮ ಮತ್ತು ಇಂತಹುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ವಾಸ್ತು ಪಂಡಿತರು ಜನಮಾನಸದಲ್ಲಿ ಇಲ್ಲಸಲ್ಲದ ನಂಬಿಕೆಗಳನ್ನು ಸೃಷ್ಟಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡುವುದೂ ಹೌದು.
ಇಲ್ಲಿ ಆಧ್ಯಾತ್ಮದ ಹೆಸರಿನಲ್ಲಿ ಅಗೋಚರ ಸಂಸ್ಥೆಯೊಂದು ತನ್ನ ಪಾರಮಾಥರ್ಿಕ ಸರಕುಗಳನ್ನು ನಂಬಿಕೆ, ವಿಶ್ವಾಸಗಳ ನೆಲೆಯಲ್ಲಿ ಮಾರಾಟ ಮಾಡುತ್ತದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾರಾಜಿಸುವ ಆಧ್ಯಾತ್ಮ ಗುರೂಜಿಗಳು, ವಾಸ್ತು ಪಂಡಿತರು, ಜ್ಯೋತಿಷಿಗಳು ಜನರ ಎಲ್ಲ ಸಂಕಷ್ಟಗಳನ್ನೂ ತಮ್ಮ ಸಲಹೆಗಳ ಮೂಲಕ, ಮೌಢ್ಯಾಧಾರಿತ ಚಿಂತನೆಗಳ ಮೂಲಕ ಪರಿಹರಿಸಲು ಯತ್ನಿಸುತ್ತಾರೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಪ್ರತಿಯೊಬ್ಬ ಪಂಡಿತರೂ ಒಂದು ದೇವಾಲಯವನ್ನು ಉಲ್ಲೇಖಿಸಿ ಆ ದೇವಾಲಯಕ್ಕೆ ಹರಕೆ, ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ಭ್ರಮೆ ಸೃಷ್ಟಿಸುತ್ತಾರೆ. ದೇವಾಲಯಗಳ ಬ್ರಾಂಡ್ ಅಂಬಾಸಡರ್ಗಳಿಗೆ ಸೂಕ್ತ ಸಂಭಾವನೆ ಬರುತ್ತದೆ. ದೇವಾಲಯಗಳ ಜೀಣರ್ೋದ್ಧಾರವೂ ಆಗುತ್ತದೆ. ( ಜೀಣರ್ೋದ್ಧಾರ – ಅಮಾಯಕ ಪ್ರಜೆಗಳ ಹಣ ಜೀರ್ಣ, ಧರ್ಮದಶರ್ಿಗಳ ಉದ್ಧಾರ ಎಂದರ್ಥ )
ತುಲನಾತ್ಮಕವಾಗಿ ನೋಡಿದಾಗ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ. ಮಾರುಕಟ್ಟೆ ಸರಕನ್ನು ಮಾರುವ ಉದ್ಯಮಿಯಂತೆಯೇ ಧರ್ಮ ಮತ್ತು ಆಧ್ಯಾತ್ಮ ಸಂಸ್ಥೆಗಳು ಆಧ್ಯಾತ್ಮಿಕ ಸರಕುಗಳನ್ನು ಮಾರಾಟ ಮಾಡುತ್ತವೆ. ಮಾರುಕಟ್ಟೆ ಸರಕುಗಳಿಗೆ ಸಿನಿಮಾ ತಾರೆಯರು ಅಂಬಾಸಡರ್ ಆದರೆ ಆಧ್ಯಾತ್ಮಿಕ ಸರಕುಗಳಿಗೆ ಗುರೂಜಿಗಳು ಅಂಬಾಸಡರ್ಗಳು. ಎರಡೂ ಸರಕುಗಳು ಅಮಾಯಕ ಜನರ ದಿಕ್ಕು ತಪ್ಪಿಸುತ್ತವೆ. ಜನರಲ್ಲಿ ಭ್ರಮೆ ಉಂಟುಮಾಡುತ್ತವೆ ಜನರ ಅಮಾಯಕತೆ ಮತ್ತು ಅಸಹಾಯಕತೆಯನ್ನು ಬಳಸಿಕೊಳ್ಳುವ ಸಾಧನಗಳಾಗುತ್ತವೆ. ಒಂದೆಡೆ ವಾಣಿಜ್ಯೋದ್ಯಮಿಗಳಿಗೆ ಲಾಭವಾದರೆ ಮತ್ತೊಂದೆಡೆ ಆಧ್ಯಾತ್ಮಿಕೋದ್ಯಮಿಗಳಿಗೆ ಲಾಭವಾಗುತ್ತದೆ. ದೋಷಪೂರಿತ ಮ್ಯಾಗಿಯನ್ನು ಅಮಿತಾಬ್ ಬಚ್ಚನ್ ವೈಭವೀಕರಿಸಿದರೆ, ವೈಚಾರಿಕ ನೆಲೆಯಿಲ್ಲದ ವಾಸ್ತು ಅಥವಾ ವೀಳ್ಯದೆಲೆ ಶಾಸ್ತ್ರವನ್ನು ಗುರೂಜಿಯೊಬ್ಬರು ವೈಭವೀಕರಿಸುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ಬಲಿಯಾಗುವುದು ಅಮಾಯಕ ಜನತೆ ಮತ್ತು ಎರಡೂ ಸಂದರ್ಭಗಳಲ್ಲಿ ಲಾಭದ ಆಕರವಾಗಿ ಪರಿಣಮಿಸುವುದು ಮೌಢ್ಯ ಮತ್ತು ಭ್ರಮೆ.
ಹಾಗಾಗಿ ದೋಷಪೂರಿತ ಮ್ಯಾಗಿ ನೂಡಲ್ಸ್ ಪರವಾಗಿ ಜಾಹೀರಾತಿನ ಮೂಲಕ ಪ್ರಚಾರ ಮಾಡಿದ ಅಮಿತಾಬ್, ಮಾಧುರಿ, ಪ್ರೀತಿ ಜಿಂಟಾ ಮುಂತಾದವರು ಅಪರಾಧಿಗಳೆಂದಾದರೆ, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಮೌಢ್ಯದ ಸರಕುಗಳನ್ನು ಮಾರಾಟ ಮಾಡುವ ಗುರೂಜಿಗಳೂ ಅಪರಾಧಿಗಳಲ್ಲವೇ ? ಎರಡೂ ನೆಲೆಯಲ್ಲಿ ಇಂತಹ ಮೌಢ್ಯ ಬಿತ್ತನೆ ಯೋಜನೆಗೆ ಆಶ್ರಯ ನೀಡುವುದು ಮಾಧ್ಯಮಗಳೇ ಅಲ್ಲವೇ ? ಮಾಧ್ಯಮಗಳ ಔದ್ಯಮಿಕ ಹಿತಾಸಕ್ತಿಯನ್ನು ಕಡೆಗಣಿಸಲಾಗುವುದಿಲ್ಲ ಅಲ್ಲವೇ ? ಹಾಗಾದಲ್ಲಿ ಯಾರಿಗೆ ಶಿಕ್ಷೆಯಾಗಬೇಕು. ಈಗ ಬ್ರಾಂಡ್ ಅಂಬಾಸಡರ್ಗಳು ಬಚಾವಾಗುತ್ತಾರೆ. ಗುರೂಜಿಗಳ ಮೌಢ್ಯ ಬಿತ್ತನೆ ಮುಂದುವರೆದೇ ತೀರುತ್ತದೆ. ಆದರೆ ನೂಡಲ್ಸ್ ತಯಾರಿಸುವ ಸಾವಿರಾರು ಕಾಮರ್ಿಕರು ಬೀದಿ ಪಾಲಾಗುತ್ತಾರೆ. ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಅಪರಾಧಿಗಳು ಯಾರು ? ನಾಗರಿಕ ಸಮಾಜವೋ, ಸಾಮಾಜಿಕ ಪ್ರಜ್ಞೆಯೋ ? ಇದು ಮೂರ್ತ ಪ್ರಶ್ನೆ.






0 Comments