ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌಲ್ಯವೇ ಇಲ್ಲದ ಸಮಾಜದಲ್ಲಿ ಪ್ರಜ್ಞೆಯ ಹುಡುಕಾಟ

ನಾ ದಿವಾಕರ

ಅಪರಾಧಗಳು ಸಂಭವಿಸದ ಸಮಾಜವನ್ನು ಕಾಣಲಾಗುವುದಿಲ್ಲ. ಸಾಮಾಜಿಕ ಮೌಲ್ಯಗಳು, ನೈತಿಕತೆ, ಸಾಕ್ಷಿ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆ ಎಷ್ಟೇ ಜಾಗೃತವಾಗಿದ್ದರೂ ಸಮಾಜದಲ್ಲಿ ಯಾವುದೋ ಒಂದು ಸ್ತರದಲ್ಲಿ ಅಪರಾಧಗಳು ಸಂಭವಿಸುತ್ತಲೇ ಇರುತ್ತವೆ. ಮಾನವ ಜಗತ್ತಿನ ಅಭ್ಯುದಯದ ಹಾದಿಯಲ್ಲಿ ತನ್ನ ಮುನ್ನಡೆಗೆ ಮನುಕುಲ ಅಪರಾಧಗಳ ಹಾಸುಗಲ್ಲುಗಳನ್ನು ಮೆಟ್ಟುತ್ತಲೇ ಬಂದಿರುವುದು ಚಾರಿತ್ರಿಕ ಸತ್ಯ. ಸತ್ಯಾಸತ್ಯತೆಗಳು, ನ್ಯಾಯಾನ್ಯಾಯಗಳು ಸಮಾಜದಲ್ಲಿ ಒಟ್ಟೊಟ್ಟಿಗೇ ಸಾಗುವ ವಿದ್ಯಮಾನಗಳು. ನಿಷ್ಠೆಯ ನೆರಳಿನಲ್ಲೇ ಮೋಸ ವಂಚನೆಗಳ ಮೆರವಣಿಗೆ ನಡೆಯುತ್ತಿರುತ್ತದೆ. ಆದರೆ ಒಂದು ಪ್ರಬುದ್ಧ ಸಾಮಾಜಿಕ ಚೌಕಟ್ಟಿನಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾದಂತೆಲ್ಲಾ ಅಪರಾಧಿ ಪ್ರಜ್ಞೆಯೂ ಜಾಗೃತವಾಗಬೇಕಾಗುತ್ತದೆ. ರಾಜಕೀಯ ಪರಿಭಾಷೆಯಲ್ಲಿ ಅಪರಾಧ ಎನ್ನುವುದು ಸಾಪೇಕ್ಷ ವಿದ್ಯಮಾನವಾಗಿ ಕಂಡರೂ ಪ್ರಜಾತಂತ್ರ ಮೌಲ್ಯಗಳಿಗಾಗಿ ಹಾತೊರೆಯುವ ಜನಸಾಮಾನ್ಯರ ಪರಿಭಾಷೆಯಲ್ಲಿ ಅಪರಾಧ ಎನ್ನುವುದು ಮೌಲ್ಯಗಳ ನೆಲೆಯಲ್ಲಿ ವ್ಯಕ್ತವಾಗುತ್ತದೆ. ದೇಶದ ರಾಜಕಾರಣದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಶಿಕ್ಷಣ, ಧರ್ಮ, ಆಧ್ಯಾತ್ಮ ಮತ್ತು ಔದ್ಯಮಿಕ ಕ್ಷೇತ್ರದಲ್ಲಿ ಸಾಮಾಜಿಕ ನೈತಿಕ ಮೌಲ್ಯಗಳ ಅಧಃಪತನವಾಗಿದ್ದರೂ ಸಹ ಭಾರತದ ಜನಮಾನಸದಲ್ಲಿ ಮೌಲ್ಯಗಳಿಗೆ ಇಂದಿಗೂ ಮೌಲ್ಯ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನೈತಿಕ ಮೌಲ್ಯಗಳಿಗಾಗಿ ಜನತೆಯಲ್ಲಿ ವ್ಯಕ್ತವಾಗುವ ಹಪಾಹಪಿ ಆಕ್ರೋಶದ ಮೂಲಕ , ಹತಾಶೆಯ ಮೂಲಕ ಕೆಲವೊಮ್ಮೆ ಮತದಾನದ ಮೂಲಕ ಪ್ರಕಟಗೊಳ್ಳುತ್ತವೆ. ಪ್ರಜಾತಂತ್ರ ವ್ಯವಸ್ಥೆಯ ಸಮರ್ಥಕರಾದ ಸಾರ್ವಭೌಮ ಪ್ರಜೆಗಳು ಆಡಳಿತ ವ್ಯವಸ್ಥೆಯಲ್ಲಿ ಕೆಲವು ಸಾಮಾಜಿಕ ಮೌಲ್ಯಗಳನ್ನು, ನೈತಿಕ ಹೆಜ್ಜೆಗಳನ್ನು, ಮಾನವೀಯ ಸ್ಪಂದನೆಯನ್ನು ನಿರೀಕ್ಷಿಸುವುದು ಸಹಜ. ಏಕೆಂದರೆ ತಾವು ಪರಿಭಾವಿಸುವ ಜೀವನ ಮೌಲ್ಯಗಳು ಈ ಆಡಳಿತ ವ್ಯವಸ್ಥೆಯ ನಿರ್ವಹಣೆಯಿಂದಲೇ ನಿಯಂತ್ರಿಸಲ್ಪಡುತ್ತವೆ ಎಂದು ಜನತೆಗೆ ಅರಿವಾಗಿರುತ್ತದೆ. ಹಾಗಾಗಿಯೇ ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಸಿಡಿದೇಳುವ ಕಥಾವಸ್ತು ಇರುವ ಸಿನಿಮಾ ಹೀರೋಗಳನ್ನು ಕಂಡು ಜನರು ವಿಜೃಂಭಿಸುತ್ತಾರೆ. ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ರಣಬೀರ್ ಕಪೂರ್ವರೆಗೂ ವ್ಯವಸ್ಥೆಗೆ ಪ್ರತಿರೋಧ ಒಡ್ಡುವ ನಾಯಕರು ಆರಾಧಿಸಲ್ಪಡುತ್ತಾರೆ. ಇದು ಒಂದು ಆಯಾಮ. ಮತ್ತೊಂದು ಆಯಾಮದಲ್ಲಿ ನೋಡಿದಾಗ ಆಡಳಿತ ವ್ಯವಸ್ಥೆಯ ಭ್ರಷ್ಟತೆ ಮತ್ತು ಅನೈತಿಕತೆ, ಅಕ್ರಮ, ಅಪ್ರಮಾಣಿಕತೆಯ ವಿರುದ್ಧ ದನಿ ಎತ್ತುವ ಸಾರ್ವಜನಿಕ ನಾಯಕರು ಸಹ ಜನರ ಕಣ್ಣಲ್ಲಿ ಹೀರೋಗಳಾಗುತ್ತಾರೆ. ಕೃಪಲಾನಿ , ಜಯಪ್ರಕಾಶ್ ನಾರಾಯಣ್ ಅವರಿಂದ ಅಣ್ಣಾ ಹಜಾರೆ ಮತ್ತು ಕೇಜ್ರಿವಾಲ್ವರೆಗೂ ಈ ವಿದ್ಯಮಾನವನ್ನು ಕಾಣಬಹುದು.
ಒಂದು ಪರ್ಯಾಯ ರಾಜಕೀಯ ಆಡಳಿತ ವ್ಯವಸ್ಥೆಯನ್ನು ಪ್ರತಿಪಾದಿಸದೆಯೇ ಅಧಿಕಾರಗ್ರಹಣ ಮಾಡಿರುವ ಕೇಜ್ರಿವಾಲ್ ಯಶಸ್ಸಿಗೆ ಪ್ರಜೆಗಳ ಈ ಹಪಾಹಪಿಯೇ ಕಾರಣ. ಅಪರಾಧದ ವ್ಯಾಖ್ಯಾನ ಮತ್ತು ಅಪರಾಧಿಗಳನ್ನು ಗುರುತಿಸುವ ವಿಧಾನದ ನಡುವೆ ಒಂದು ಸೂಕ್ಷ್ಮ ಸೇತುವೆ ಇರುವುದನ್ನು ಗಮನಿಸಬೇಕಾಗುತ್ತದೆ. ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಅಪರಾಧಗಳ ಹಿಂದಿನ ಅಪರಾಧಿಯನ್ನು ಗುರುತಿಸುವುದು ಸುಲಭ. ಆದರೆ ಸಾಂಸ್ಥಿಕವಾದ ಅಥವಾ ಸಂಘಟನಾತ್ಮಕವಾದ ಅಪರಾಧಗಳ ಹಿಂದಿನ ಅಪರಾಧಿಗಳನ್ನು ಗುರುತಿಸುವುದು ಕ್ಲಿಷ್ಟಕರ. ಹಾಗೆಯೇ ಸಾರ್ವಜನಿಕ ವಲಯದಲ್ಲಿ ಅಧಿಕಾರಯುತ ಸ್ಥಾನದಲ್ಲಿರುವವರ ಅಪರಾಧವನ್ನು ವ್ಯಕ್ತಿಗತ ನೆಲೆಯಲ್ಲಿ ಗುರುತಿಸುವುದೂ ಅಷ್ಟೇ ಕ್ಲಿಷ್ಟಕರ. ಏಕೆಂದರೆ ಇಲ್ಲಿ ಇಡೀ ವ್ಯವಸ್ಥೆಯೇ ವ್ಯಕ್ತಿಗತ ಅಪರಾಧದ ತಳಹದಿಯಾಗಿ ಕಾರ್ಯ ನಿರ್ವಹಿಸಿರುತ್ತದೆ. ಸ್ಥಾಪಿತ ವ್ಯವಸ್ಥೆಯನ್ನು ಶಿಕ್ಷಿಸುವುದಿರಲಿ, ಪ್ರಶ್ನಿಸುವುದನ್ನೇ ಮಹಾಪರಾಧ ಎಂದು ಬಿಂಬಿಸಲಾಗುತ್ತದೆ. ಹಾಗಾಗಿ ಈ ಸ್ಥಾಪಿತ ವ್ಯವಸ್ಥೆಯ ಛಾಯೆಯಲ್ಲಿ ಅಪರಾಧ ಎಸಗುವ ವ್ಯಕ್ತಿಗಳು ಶಿಕ್ಷೆಗೊಳಗಾಗುವುದೇ ಇಲ್ಲ. ಇಲ್ಲಿ ಉತ್ತರದಾಯಿತ್ವ, ನೈತಿಕತೆ, ರಾಜಕೀಯ ಮೌಲ್ಯ ಮತ್ತು ಪ್ರಾಮಾಣಿಕತೆ ಹೆಚ್ಚು ಪ್ರಧಾನವಾಗಿ ಕಾಣುತ್ತದೆ. ಈ ಮೌಲ್ಯಗಳು ನಿಶ್ಶೇಷವಾದಾಗ ಅಪರಾಧಿಗಳು ವಿಜೃಂಭಿಸಲ್ಪಡುತ್ತಾರೆ. ಪ್ರಜೆಗಳ ಆಕ್ರೋಶದ ದನಿ, ಪ್ರತಿರೋಧದ ಅಭಿವ್ಯಕ್ತಿ ನೇಪಥ್ಯಕ್ಕೆ ಸರಿಯುತ್ತದೆ. ಸ್ವತಂತ್ರ ಭಾರತದ ಇತಿಹಾಸದ ಆಡಳಿತ ವ್ಯವಸ್ಥೆಯಲ್ಲಿ ಗಂಗಾನದಿಯಂತೆ ನಿರಂತರವಾಗಿ ಹರಿಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳು, ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವಂತಹ ವಿಧ್ವಂಸಕ ಘಟನೆಗಳು, ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯನ್ನಾಗಿ ಮಾಡುವ ಘಟನೆಗಳು, ಹಲವು ಪೀಳಿಗೆಗಳ ಬದುಕನ್ನೇ ಕರಾಳ ಕೂಪದಲ್ಲಿ ನೂಕುವಂತಹ ಘಟನೆಗಳು ವ್ಯಾಪಕ ಚರ್ಚೆಗೊಳಗಾಗಿವೆಯೇ ಹೊರತು ಈ ಘಟನೆಗಳ ಹಿಂದಿನ ಅಪರಾಧಿಗಳು ಶಿಕ್ಷೆಗೊಳಗಾಗಿಲ್ಲ. ಇದು ಸ್ಥಾಪಿತ ಮೌಲ್ಯಗಳು ಮತ್ತು ಪ್ರಜೆಗಳ ಹಪಾಹಪಿಯ ನಡುವೆ ಏರ್ಪಟ್ಟಿರುವ ಸಂಘರ್ಷದ ಒಂದು ಆಯಾಮ.
ಸಾರ್ವಭೌಮ ಪ್ರಜೆಗಳ ನಿರೀಕ್ಷಿತ ಮೌಲ್ಯಗಳು ಸ್ಥಾಪಿತ ಮೌಲ್ಯಗಳೆದುರು ಮಂಡಿಯೂರಿ ಶರಣಾಗುವ ಮಟ್ಟಿಗೆ ಆಡಳಿತ ವ್ಯವಸ್ಥೆ ಪ್ರಬಲವಾಗಿದೆ. 1984ರ ಸಿಖ್ ವಿರೋಧಿ ಹಿಂಸಾಕೃತ್ಯ , 1993ರ ಮುಂಬಯಿ ಹಿಂಸಾಕಾಂಡ, ಭೂಪಾಲ್ ದುರಂತ, ಗೋದ್ರಾ ಮತ್ತು ಗುಜರಾತ್ ಹತ್ಯಾಕಾಂಡ ಮುಂತಾದ ಘಟನೆಗಳು ವ್ಯವಸ್ಥೆಯ ಚೌಕಟ್ಟಿನಲ್ಲಿ ರಕ್ಷಣೆ ಪಡೆದರೆ, ರಾಜಕೀಯ ನಾಯಕರುಗಳನ್ನೊಳಗೊಂಡ ಭ್ರಷ್ಟಾಚಾರ ಪ್ರಕರಣಗಳು ವ್ಯಕ್ತಿಗತ ವರ್ಚಸ್ಸಿನ ಚೌಕಟ್ಟಿನಲ್ಲಿ ವ್ಯವಸ್ಥೆಯನ್ನು ಆಶ್ರಯಿಸುತ್ತವೆ. ಅಪರಾಧಗಳು ಕಣ್ಣ ಮುಂದೆಯೇ ಸ್ಪಷ್ಟವಾಗಿವೆ. ಅಪರಾಧಿಗಳು ಯಾರು ? ಇದು ಸಾರ್ವಭೌಮ ಪ್ರಜೆಗಳನ್ನು ಕಾಡುವ ಪ್ರಶ್ನೆ. ಉತ್ತರ ಹುಡುಕಲು ಸಂವಿಧಾನ ಬೇಕಿಲ್ಲ. ಸಮಾಜದಲ್ಲಿ ಅಪರಾಧಿ ಪ್ರಜ್ಞೆ ಇದ್ದರೆ ಸಾಕು.

‍ಲೇಖಕರು G

1 June, 2015

2 Comments

  1. Hanumanth Ananth Patil

    ದಿವಾಕರರವರಿಗೆ ವಂದನೆಗಳು
    ಮೌಲ್ಯವೆ ಇಲ್ಲದ ಸಮಾಯಜದಲ್ಲಿ ಪ್ರಜ್ಞೆಯ ಹುಡುಕಾಟ ಇಂದಿನ ನಮ್ಮ ದೇಶದ ಜನ ಮನಸ್ತಿತಿಯನ್ನು ಸಮರ್ಥವಾಗಿ ಬಿಂಬಿಸುವ ಬರಹ, ಲೇಖನಕ್ಕೆ ಸೂಕ್ತವಾದ ತೆಲೆಬರಹ, ಧನ್ಯವಾದಗಳು ಸರ್.

  2. noorullathyamagondlu

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading