ನಾ ದಿವಾಕರ
ಏನು ಮಾತನಾಡುವೆ
ಈ ಮಂದಸ್ಮಿತ ಮೌನ ತಪಸ್ವಿಯೊಡನೆ
ಇವ ಮೌನಿ ;
ಹೌದು ಶತಮಾನಗಳಿಂದ
ತನ್ನೊಡಲಾಳದ ಬೇಗುದಿಗಳ
ಹುಗಿದು
ಕಣ್ಣಾವೆಗಳ ಮುಚ್ಚಿ
ನೆನೆದುದೆಲ್ಲವನೂ ಮರೆತು
ಸಂತೆಯಲಿ ನಿಂತ ಕಬೀರನೊಡನೆ
ಎನಿತು ಸಂವಾದ ?

ಒಂದು ಹನಿ ಮಳೆಗೆ
ವಟಗುಟ್ಟುವ ನಿನಗೆ ಮೌನದ
ಅರ್ಥವೇ ತಿಳಿಯದಲ್ಲವೇ ?
ನೀ ಕಂಡ ಜಗವೇ ಸ್ವರ್ಗ
ನೀನಾಡುವ ನುಡಿಯೇ ಮಧುರ
ಎಂದೆಣಿಸುವ ನಿನಗೆ
ಮುಗಿಲೆತ್ತರಕೆ ನಿಂತ
ಮೌನಿಯ ಮನದಾಳದ ಮಾತು
ಅರಿವಾಗುವುದೆಂತು !
ಏಕೀ ಮೌನ ?
ವಿಕೃತಿಯೋ ವಿಸ್ಮೃತಿಯೋ
ಬೃಹಸ್ಪತಿಗಳ ಲೋಕದ
ಅನುಭೂತಿಯೋ
ಎಲ್ಲವೂ ಸಂಕೀರ್ಣ ;
ಎತ್ತರದಿ ಕುಳಿತಿರುವೆ
ಅಚ್ಚರಿಯ ನೋಟದಲಿ
ದನಿಯಡಗಿಸಿ ಸುತ್ತ
ದೃಷ್ಟಿ ಹಾಯಿಸು
ಮೌನದ ನೆಲೆ ಕಾಣುತ್ತದೆ !
ಏನು ತಾನೇ ಮಾಡಿಯಾನು
ದನಿಗೆ ದನಿಯಾದರೆ
ದಮನ
ಭುಜಕೆ ಭುಜ ನೀಡಿದರೆ
ಹರಣ
ಕಣ್ಣಿಗೆ ಕಣ್ಣೆನುವ ದ್ವೇಷಾಗ್ನಿಯಲಿ
ಎತ್ತೆತ್ತಲೂ ಕಗ್ಗತ್ತಲೆಯೇ
ಸುತ್ತ ಬಂಧನದ ಸೆಲೆಯೇ !
ಶಿಲೆಯಲ್ಲ ಇವ
ಕಲೆಯಲ್ಲರಳಿದ ಶಿವ
ಎದೆಬಡಿತದಲಿ ಆಲಿಸು
ಮೌನಿಯ ಮಾತುಗಳನು ;
ಜಗವರಿಯದವ ನೀನು
ಕೂಪದಿಂ ಜಿಗಿದು
ಶಿಖರ ಏರಿರುವೆ
ಮೌನಿಯಾಗಿಬಿಡು
ಮತ್ತೊಂದು ಹನಿಮಳೆಯ
ಗುಂಗಿನಲಿ !





Tumba arthapoornavagide – nice