ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋದಿ-ಟ್ರಂಪ್ ಅಮೆರಿಕಾಲಿಂಗನ

ಪ್ರಸಾದ್ ನಾಯ್ಕ್

ಅಂಗೋಲಾದಿಂದ 

`ಜೀವದ ಗೆಳೆಯ’ರ `ಹಗ್ಗು’-ಹಿಗ್ಗು – ಇತ್ತೀಚೆಗಿನ ಅಮೆರಿಕಾ ಪ್ರವಾಸದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಅಮೆರಿಕಾ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರ ಅಪ್ಪುಗೆಯನ್ನು ಕಂಗ್ಲಿಷ್ ಶೈಲಿಯಲ್ಲಿ ಹೀಗೆ ಕರೆಯಬಹುದೇ?

ಬರಹಗಳಿಗೆ ಆಕರ್ಷಕ ಶೀರ್ಷಿಕೆಯನ್ನು ನೀಡುವುದೂ ಕೂಡ ಪತ್ರಿಕೋದ್ಯಮದಲ್ಲಿ ಒಂದು ಕಲೆಯೆಂದು ಓದಿದ ನೆನಪು. ಹೀಗಾಗಿ ಪ್ರಧಾನಿಯವರ ಅಮೆರಿಕಾ ಪ್ರವಾಸಕ್ಕೆ ಸಂಬಂಧಪಟ್ಟಂತೆ ನಾಲ್ಕು ಪದಗಳನ್ನು ಜೋಡಿಸಿ, ಕನ್ನಡ ಪದವೊಂದನ್ನು ಕಸಿ ಮಾಡಿದ ಇಂಗ್ಲಿಷ್ ಪದದೊಂದಿಗೆ ಪ್ರಾಸಬದ್ಧವಾಗಿ ಗಂಟುಹಾಕಿ `ಜೀವದ ಗೆಳೆಯ’ರ `ಹಗ್ಗು’-ಹಿಗ್ಗು ಎಂದು ಬರೆದು ಬುದ್ಧಿವಂತಿಕೆಯ ಶೀರ್ಷಿಕೆಯನ್ನು ಕೊಡಲಾಗುವುದೇ ಎಂದು ನಾನೂ ಈ ಬಾರಿ ಒಂದು ಕೈ ನೋಡೇಬಿಟ್ಟಿದ್ದೇನೆ.

ಅಂದಹಾಗೆ ಮೋದಿ-ಟ್ರಂಪ್ ಜೋಡಿಯ ಜಂಟಿ ಪತ್ರಿಕಾಗೋಷ್ಠಿಯನ್ನು ನೇರಪ್ರಸಾರದಲ್ಲೇ ನಾನು ವೀಕ್ಷಿಸುತ್ತಿದ್ದೆ. ಆದರೆ ಈ ಅಪ್ಪುಗೆಯೂ ಕೂಡ ಒಂದು ಸುದ್ದಿಯಾಗಲಿದೆ ಎಂಬ ನಿರೀಕ್ಷೆಯೂ ನನಗಿರಲಿಲ್ಲ. ನಂತರ ಇದು ದಿನದ `ಟ್ರೆಂಡ್’ ಆದಾಗ ಸಹಜ ಆಸಕ್ತಿಯಿಂದ ಸುದ್ದಿಯ ಬೆನ್ನುಹತ್ತಿದ್ದಂತೂ ಹೌದು. ಈ ಬಗ್ಗೆ ಟೈಮ್ಸ್ ನಿಂದ ಹಿಡಿದು ಬಿಬಿಸಿ, ಟೆಲಿಗ್ರಾಫ್ ಗಳ ವರದಿಗಳಿಗೂ ಸುಮ್ಮನೆ ಕಣ್ಣಾಡಿಸಿದ್ದೆ. ನನ್ನ ಎಣಿಕೆಯು ತಪ್ಪಾಗಿರಲಿಲ್ಲ. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸ್ವಾರಸ್ಯಕರ ಸಂಗತಿಗಳೇ ವಿವಿಧ ಪತ್ರಿಕಾವರದಿಗಳಲ್ಲಿ ಕಾಣಸಿಕ್ಕವು. ಟೆಲಿಗ್ರಾಫ್ ನ ವರದಿಯಂತೂ ಇತ್ತೀಚೆಗಿನ ಅಮೆರಿಕಾದ ರಾಷ್ಟ್ರಾಧ್ಯಕ್ಷರ ಚುನಾವಣಾ ದಿನಗಳಲ್ಲಿ ಬೇಕಾಬಿಟ್ಟಿ ಸ್ಪರ್ಶದ ಗೋಜಿನಿಂದ ದೂರವೇ ಉಳಿದಿದ್ದ ಟ್ರಂಪ್ ಹಸ್ತಲಾಘವಗಳ ಬದಲು ತನ್ನ ಕೆಂಪು ಬೇಸ್ ಬಾಲ್ ಟೋಪಿಯನ್ನೇ ಜನರತ್ತ ಎಸೆಯುತ್ತಿದ್ದ ನಡೆಯನ್ನು ನೆನಪಿಸಿದೆ.

ವಿಶ್ವನಾಯಕರ ಬಾಡಿ ಲಾಂಗ್ವೇಜ್ (ದೇಹ ಭಾಷೆ)ಗಳನ್ನು ಸೂಕ್ಷ್ಮವಾಗಿ ಗಮನಿಸುವುದು, ಅವುಗಳನ್ನು ವಿಶ್ಲೇಷಿಸುವುದು, ವರದಿ ಮಾಡುವುದು ಇತ್ಯಾದಿಗಳು ನಿನ್ನೆ ಮೊನ್ನೆಯ ಸಂಗತಿಗಳೇನಲ್ಲ. ಐವತ್ತು- ಅರವತ್ತರ ದಶಕಗಳಲ್ಲೂ ಇವುಗಳು ಇದ್ದವು. ನಿಕ್ಸನ್, ಕೆನಡಿ, ಚರ್ಚಿಲ್, ಥ್ಯಾಚರ್ ರವರಿಂದ ಹಿಡಿದು ಮಾಧ್ಯಮದ ಕಣ್ಮಣಿಗಳಾಗಿದ್ದ ಹಲವು ಖ್ಯಾತನಾಮರನ್ನೂ ಮಾಧ್ಯಮಗಳು ಮತ್ತು ಸಂವಹನ ತಜ್ಞರು ಈ ದೃಷ್ಟಿಕೋನದಿಂದ ನೋಡಿದ್ದಿದೆ. ಸರಣಿ ಹಂತಕರ, ಅಪರಾಧ ಪತ್ತೆಯ ಪ್ರಕರಣಗಳಲ್ಲೂ ಮಾನವನ ವರ್ತನೆಯ ಇಂಥಾ ಸೂಕ್ಷ್ಮ ಅಂಶಗಳನ್ನು ಯಶಸ್ವಿಯಾಗಿ ಬಳಸಿಕೊಂಡ ಉದಾಹರಣೆಗಳಿವೆ. ಇಷ್ಟಿದ್ದರೂ ಎಲ್ಲದಕ್ಕೂ ಅಮೆರಿಕಾದತ್ತ ನೋಡುವ ನಮಗೆ ಈ ಒಂದು ವಿಚಾರ ಅಂಥಾ ಆಸಕ್ತಿಯನ್ನೇಕೆ ಕೆರಳಿಸಲಿಲ್ಲ ಎಂಬುದು ಅಚ್ಚರಿಯ ವಿಚಾರ. ಈ ಬಾರಿಯೂ ಕೂಡ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಅಪ್ಪುಗೆಯ ನೋಟವನ್ನು `ಹಿಡಿದಿಡಬೇಕಾದ ಕ್ಷಣ’ದಂತೆ ಪ್ರಸ್ತುತಪಡಿಸದೇ ಇರುತ್ತಿದ್ದರೆ ಇದೂ ಕೂಡ ಒಂದು `ಸುದ್ದಿಯಾಗಲು ಲಾಯಕ್ಕಾದ ಸುದ್ದಿ’ ಎಂದು ನಮಗೆ ಅನ್ನಿಸುತ್ತಲೇ ಇರಲಿಲ್ಲ.

ಬಾಡಿ ಲಾಂಗ್ವೇಜ್ ಗಳ ಲೋಕಕ್ಕೆ ನನ್ನ ಮೊದಲ ಪ್ರವೇಶವಾಗಿದ್ದು ಸುಮಾರು ಆರು ವರ್ಷಗಳ ಹಿಂದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರವರನ್ನೂ ಸೇರಿದಂತೆ ವಿಶ್ವದ ಹಲವು ಪ್ರಭಾವೀ ನಾಯಕರ ಬಾಡಿ ಲಾಂಗ್ವೇಜ್ ಗಳನ್ನು ನಿಯಮಿತವಾಗಿ ಅಭ್ಯಸಿಸಲು ಪೆಂಟಗನ್ ಸಾಕಷ್ಟು ದೊಡ್ಡ ಮೊತ್ತವನ್ನು ವ್ಯಯಿಸುತ್ತಿದೆ ಎಂಬ ಪತ್ರಿಕಾವರದಿಯೊಂದು ನನ್ನ ಆಸಕ್ತಿಯನ್ನು ಕೆರಳಿಸಿತ್ತು. ಇಂಥದ್ದೂ ಒಂದಿದೆ ಎಂದು ನನಗೆ ತಿಳಿದಿದ್ದೇ ಆಗ. ಈಗ ನಗೆಹನಿಗಳನ್ನು ಪತ್ರಿಕೆಯ ಒಳಪುಟಗಳಲ್ಲಿ ಹೇಗೆ ಪ್ರಕಟಿಸುತ್ತಾರೋ ಹಾಗೆಯೇ ಇದೂ ಕೂಡ `ಪೇಜ್ ಫಿಲ್ಲರ್’ ಎಂಬಂತೆ ಪ್ರಕಟವಾಗಿತ್ತು. ಬಹುಷಃ ಆ ಪತ್ರಿಕೆಗೆ ಅದೊಂದು ಸ್ವಾರಸ್ಯಕರವಾದ ಸುದ್ದಿಯೇ ಆಗಿರಲಿಲ್ಲ. ಹೀಗಾಗಿ ಸುಮ್ಮನೆ ಪುಟ ತುಂಬಿಸುವುದಕ್ಕಷ್ಟೇ ಲಾಯಕ್ಕು ಎಂಬಂತೆ ಇದನ್ನು ಬಳಸಲಾಗಿತ್ತು. ಮೋದಿ-ಟ್ರಂಪ್ ಜೋಡಿಯ ಅಪ್ಪುಗೆಯು ಸುದ್ದಿಯಾದಾಗಲೂ ನನಗೆ ನೆನಪಾಗಿದ್ದು ಅದೇ ವರದಿ. ಆದರೆ ಇಲ್ಲೂ ಹೆಚ್ಚಿನ ಬದಲಾವಣೆಗಳೇನೂ ಕಾಣಸಿಗಲಿಲ್ಲ. ಈ ಬಾರಿಯೂ ಕೂಡ `ದೋಸ್ತಿಗಳ ಅಪ್ಪುಗೆ’ಯು ಪತ್ರಿಕೆ ಮತ್ತು ನ್ಯೂಸ್ ಚಾನೆಲ್ ಗಳಿಗಿಂತ ಟ್ರೋಲ್, ಮೀಮ್ಸ್ ಗಳಾಗಿ ಸೋಷಿಯಲ್ ಮೀಡಿಯಾಗಳಲ್ಲೇ ಸದ್ದು ಮಾಡಿ ಮರೆಯಾದವು.

ಅಥರ್ೈಸಿಕೊಂಡಷ್ಟೂ ಸ್ವಾರಸ್ಯವು ಹೆಚ್ಚಾಗುತ್ತಲೇ ಹೋಗುವ ದೇಹಭಾಷೆಯ ವಿಜ್ಞಾನವು ನಮ್ಮಲ್ಲಿ ಇನ್ನೂ ಅಷ್ಟಾಗಿ ಮುನ್ನೆಲೆಗೆ ಬಾರದೇ ಉಳಿದಿದ್ದು ನನಗಂತೂ ಅಚ್ಚರಿಯ ಸಂಗತಿ. ನಿಮಗಿಷ್ಟವಾಗಿರುವಂಥದ್ದು ಎಲ್ಲರಿಗೂ ಇಷ್ಟವಾಗಿರಬೇಕು ಅಂತೇನಿಲ್ಲವಲ್ಲಾ ಎಂದು ನೀವು ಕೇಳಿದರೆ ಅದಕ್ಕೆ ನಾನೇನೂ ಹೇಳಲಾರೆ. ಇದು ಇಷ್ಟ-ಕಷ್ಟಗಳಿಗಿಂತಲೂ ಪ್ರಸ್ತುತತೆಯ ವಿಚಾರ. ಸಾಮಾನ್ಯವಾಗಿ `ನಾಯಕ’ನ ಕಿರೀಟವನ್ನು ಹೊತ್ತಿರುವವರಿಗೆ ತನ್ನ `ಇಮೇಜ್’ ಅನ್ನುವುದು ವ್ಯಕ್ತಿತ್ವದ ಒಂದು ಭಾಗವಾಗದೇ ಹೋದಲ್ಲಿ ಅದಕ್ಕಿಂತ ವಿಪಯರ್ಾಸ ಇನ್ನೇನೂ ಇರಲಾರದು. ಈ `ನಾಯಕ’ ಅನ್ನುವಂಥವನು ರಾಜಕಾರಣಿ ಅಥವಾ ಸೆಲೆಬ್ರಿಟಿಯೊಬ್ಬನಿಂದ ಹಿಡಿದು ನಮ್ಮದೇ ಆಫೀಸಿನ ಬಾಸ್ ಕೂಡ ಆಗಿರಬಹುದು. ಇನ್ನು ಖ್ಯಾತನಾಮರು ನಿರಂತರವಾಗಿ ಮಾಧ್ಯಮದ ಕ್ಯಾಮೆರಾ ಕಣ್ಣುಗಳಿಗೆ ಆಹಾರವಾಗುವ ಪರಿಣಾಮವಾಗಿ ಈ ಅಂಶಗಳು ಇವರುಗಳ ವ್ಯಕ್ತಿತ್ವಕ್ಕೊಂದು ಹೊಸ ಭಾಷ್ಯವನ್ನೇ ಬರೆದುಬಿಡುತ್ತವೆ. ಹೀಗಾಗಿ ಬೇಡವೆಂದರೂ ಅಪ್ಪಿಕೊಳ್ಳದೆ ವಿಧಿಯಿಲ್ಲ.

ನಮ್ಮ ರಾಜಕಾರಣಿಗಳನ್ನೇ ಪರಿಗಣಿಸಿದರೂ ಈ `ಬಾಡಿ ಲಾಂಗ್ವೇಜ್’ ಪರಿಕಲ್ಪನೆಯ ಬಗ್ಗೆ ಮಾಧ್ಯಮಗಳಲ್ಲಾಗಲೀ ನಮ್ಮ ನಡುವಿನ ಕಾಡುಹರಟೆಗಳಲ್ಲಾಗಲೀ ಚಚರ್ೆಗಳಾಗಿದ್ದು ಕಮ್ಮಿ. ಸಮಾರಂಭಗಳಲ್ಲಿ ತೂಕಡಿಸುತ್ತಿದ್ದ ರಾಜಕೀಯ ಧುರೀಣರನ್ನು ಆಗೊಮ್ಮೆ ಈಗೊಮ್ಮೆ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದನ್ನು ಬಿಟ್ಟರೆ ಹೆಚ್ಚಿನ ಗಮನವನ್ನೇನೂ ನಾವ್ಯಾರೂ ಹರಿಸಿಲ್ಲ. ಇವುಗಳೂ ಕೂಡ ಒಂದು ಜೋಕ್ ಆಗಿಯಷ್ಟೇ ಬಂದುಹೋದವುಗಳು. 2014 ರ ಚುನಾವಣಾ ದಿನಗಳಲ್ಲಿ ಮೋದಿ ಮತ್ತು ರಾಹುಲ್ ಗಾಂಧಿಯವರ ಒಟ್ಟಾರೆ ವ್ಯಕ್ತಿತ್ವದ ಬಗ್ಗೆ ಕೆಲ ಚಚರ್ೆಗಳಾಗಿದ್ದು ನನಗೆ ನೆನಪಿದೆ. ರಾಹುಲ್ ಗಾಂಧಿಯವರು ಅನರ್ಾಬ್ ಗೋಸ್ವಾಮಿಯವರಿಗೆ ಕೊಟ್ಟ ನೀರಸ ಸಂದರ್ಶನವೂ ಇದಕ್ಕೆ ಕಾರಣವಾಗಿತ್ತು. ಮೇಲಾಗಿ ವಾಕ್ಚಾತುರ್ಯ, ವಿಷಯಗಳನ್ನು ಮಂಡಿಸುವ ರೀತಿ, ಯೋಚನಾಕ್ರಮದಲ್ಲಿರುವ ಸ್ಪಷ್ಟತೆ, ಸಮಯಪ್ರಜ್ಞೆ ಇತ್ಯಾದಿಗಳಲ್ಲಿ ಇಬ್ಬರಲ್ಲೂ

ಅಜಗಜಾಂತರ ವ್ಯತ್ಯಾಸವಿದ್ದಿದ್ದು ಇದೇ ಮೊದಲಬಾರಿಗೆ ಈ ಅಂಶಗಳತ್ತ ಬೆಳಕು ಚೆಲ್ಲುವಂತೆಯೂ ಮಾಡಿತು ಎನ್ನಬಹುದು. ರಾಜಕಾರಣಿಯಾಗಿ, ಗುಜರಾತಿನ ಮುಖ್ಯಮಂತ್ರಿಯಾಗಿ ಮೋದಿಯವರ ಯಶಸ್ಸು ಮತ್ತು ವೈಫಲ್ಯಗಳು ಏನೇ ಆಗಿರಬಹುದು. ಆದರೆ ಪ್ರತಿಸ್ಪಧರ್ಿ ನಾಯಕನ ಕಳೆಗುಂದಿದ ಇಮೇಜ್ ಅವರ ಒಟ್ಟಾರೆ ಇಮೇಜಿಗೆ ಮತ್ತಷ್ಟು ಹೊಳಪನ್ನು ತಂದು ಗೆಲುವಿನತ್ತ ಕರೆದೊಯ್ಯುವಲ್ಲಿ ಮುಖ್ಯಪಾತ್ರವನ್ನು ವಹಿಸಿತು ಎಂಬುದರಲ್ಲಿ ಸಂದೇಹವಿಲ್ಲ.

ಹಾಗೆ ನೋಡಿದರೆ ಪ್ರತಿಪಕ್ಷದ ಧುರೀಣನಾಗಿ ಮುಂದೆಯೂ ತಮ್ಮ ಇಮೇಜ್ ಅನ್ನು ಉತ್ತಮಪಡಿಸಲು ರಾಹುಲ್ ಗಾಂಧಿಯವರಿಗೆ ಅವಕಾಶವಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಮೋದಿಯವರ ಉಡುಗೆತೊಡುಗೆಗಳನ್ನು `ಫ್ಯಾಷನ್ ಸ್ಟೇಟ್ ಮೆಂಟ್’ ಎಂದು ಉಲ್ಲೇಖಿಸುತ್ತಿದ್ದ ದಿನಗಳಲ್ಲಿ ಸರಳ ಕುತರ್ಾ-ಪೈಜಾಮಾಧಾರಿಯಾದ ರಾಹುಲ್ ಗಾಂಧಿಯವರು ಈ ಅವಕಾಶವನ್ನಾದರೂ ಬಳಸಿಕೊಳ್ಳಬಹುದಾಗಿತ್ತು. ಅದೂ ಆಗಲಿಲ್ಲ. ರಾಹುಲ್ ಗಾಂಧಿಯವರ ಮಾತುಗಳಷ್ಟೇ ಮುಖ್ಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಸಿಗುವ ಅವರು ಕುಳಿತುಕೊಳ್ಳುವ, ನಿಲ್ಲುವ, ನಡೆದಾಡುವ ಭಂಗಿಗಳೂ ಕೂಡ ಎಂಬ ಸತ್ಯವು ಅವರಿಗೆ ದುರಾದೃಷ್ಟವಶಾತ್ ಅರಿವಾದಂತಿಲ್ಲ.

`ಬಾಡಿ ಲಾಂಗ್ವೇಜ್’ ಅನ್ನುವುದು ಒಟ್ಟಾರೆ ವ್ಯಕ್ತಿತ್ವದ ಒಂದು ಭಾಗವಷ್ಟೇ. ದೇಹಭಾಷೆಯ ಹೊರತಾಗಿ ಧ್ವನಿಯ ಏರಿಳಿತಗಳು, ಪದಗಳ ನಡುವೆ ಕೊಡಬೇಕಾದ ವಿರಾಮ (ಪಾಸ್), ವೇದಿಕೆ ಮತ್ತು ಸಂದರ್ಭಕ್ಕನುಗುಣವಾಗಿ ಮುಖದಲ್ಲಿ ಭಾವನೆಗಳನ್ನು ತೋರ್ಪಡಿಸುವ ವಿಧಾನ, ಸಭಿಕರೊಂದಿಗೆ ಭಾಷಣಕಾರನು ಹಲವು ವಿಧಾನಗಳಲ್ಲಿ ಕೃತಕವಾಗಿ ಸೃಷ್ಟಿಸಬಹುದಾದ ಒಂದು ಆತ್ಮೀಯತೆ… ಹೀಗೆ ಸಾಕಷ್ಟು ಸಂಗತಿಗಳು ಬರುತ್ತವೆ. ಈ ಲೇಖನವನ್ನು ಓದುತ್ತಿರುವ ಬಹಳಷ್ಟು ಓದುಗರಿಗೆ ಇದೊಳ್ಳೆ ಪುಸ್ತಕದ ಬದನೆಕಾಯಿ ಎಂದು ಅನ್ನಿಸಬಹುದು. ಆದರೆ ಜಾಗತಿಕ ಮಟ್ಟದ ಹಲವು ಪ್ರಭಾವೀ ನಾಯಕರುಗಳು ಇವೆಲ್ಲವನ್ನೂ ಚಾಚೂತಪ್ಪದೆ ಪಾಲಿಸುತ್ತಾ ಬಂದಿದ್ದಾರೆ ಎಂಬುದನ್ನು ಒಪ್ಪಿಕೊಳ್ಳದಿರಲು ಸಾಧ್ಯವೇ ಇಲ್ಲ. ವಿಶ್ವದ ಪ್ರಭಾವಿ ವ್ಯಕ್ತಿಗಳು ತಮ್ಮ ಖಾಸಗಿ ಜೀವನದಲ್ಲಿ ಹೇಗೂ ಇರಬಹುದು. ಆದರೆ ಕ್ಯಾಮೆರಾಗಳ ಎದುರಿನ ಅವರ ಪ್ರತಿಯೊಂದು ನಡೆಯೂ ಪೂರ್ವನಿಧರ್ಾರಿತ ಜಾಣನಡೆಗಳೇ ಆಗಿರುತ್ತವೆ. ಅಡಾಲ್ಫ್ ಹಿಟ್ಲರನಿಂದ ಹಿಡಿದು ಬಿಲ್ ಕ್ಲಿಂಟನ್ ವರೆಗೂ, ಮಾರ್ಗರೆಟ್ ಥ್ಯಾಚರ್ ರಿಂದ ಹಿಡಿದು ನಮ್ಮ ಇಂದಿರಾಗಾಂಧಿಯವರೆಗೂ ಹಲವಾರು ವಿಶ್ವನಾಯಕರು ತಮ್ಮ ತಮ್ಮ ಮಾತುಗಳ, ದೇಹಭಾಷೆಗಳ ಮತ್ತು ತನ್ಮೂಲಕವಾಗಿ ಒಟ್ಟಾರೆ `ಇಮೇಜ್’ ಬಗ್ಗೆ ತಲೆಕೆಡಿಸಿಕೊಂಡು ಈ ನಿಟ್ಟಿನಲ್ಲಿ ದುಡಿಸಿಕೊಂಡವರೇ.

ಇನ್ನು ನಮ್ಮ ದಿನನಿತ್ಯದ ಜೀವನಕ್ಕೆ ಬಂದರೆ ಇಂದಿನ ಉದ್ಯೋಗಾಕಾಂಕ್ಷಿಗಳೆಲ್ಲಾ `ಪರ್ಸನಾಲಿಟಿ ಡೆವಲಪ್ಮೆಂಟ್ / ಸಾಫ್ಟ್ ಸ್ಕಿಲ್’ ಗಳು ಇಂಟವ್ಯರ್ೂಗಳನ್ನು ನಿಭಾಯಿಸಲು ಬೇಕಾಗಿರುವ ಒಂದು ಕಲೆಯಷ್ಟೇ ಎಂದು ತಿಳಿದಿರುವ ಹಾಗಿದೆ. ಇದನ್ನೊಂದು ಜೀವನಶೈಲಿಯನ್ನಾಗಿಸಲೂಬಹುದು ಎಂಬ ಸತ್ಯವು ಹಲವರಿಗೆ ಇನ್ನೂ ತಿಳಿದಿಲ್ಲ. ನಾನೂ ಕೂಡ ಕೇವಲ ಆರು ವರ್ಷಗಳ ಹಿಂದಷ್ಟೇ ಎಂಜಿನಿಯರಿಂಗ್ ಪದವಿಯನ್ನು ಪಡೆದು ಬಂದವನಾಗಿ ಇವೆಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಹಾಗೆ ನೋಡಿದರೆ ಬಾಡಿ ಲಾಂಗ್ವೇಜ್ ನಿಂದ ಹಿಡಿದು ಲೆಕ್ಕಾಚಾರದ ಮಾತುಗಾರಿಕೆಯವರೆಗೂ ಪ್ರತಿಯೊಂದೂ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ. ಪರವಾಗಿಲ್ಲ ಎಂಬ ಉತ್ಪನ್ನವೊಂದನ್ನು ನಮ್ಮಿಂದ ಖರೀದಿಸಿಯೇ ಬಿಡುವಲ್ಲಿ ಸೇಲ್ಸ್ ಉದ್ಯೋಗಿಗಳು ಸಫಲರಾಗುತ್ತಾರೆ. ಫೇರ್ ನೆಸ್ ಕ್ರೀಮುಗಳು ಇಂದಿಗೂ ಬಿಳಿ ತೊಗಲಿನ ಪೊಳ್ಳುಕನಸನ್ನು ಮಾರುತ್ತಿವೆ. ಅರ್ಥವಿಲ್ಲದ ಪಾಂಝಿ ಸ್ಕೀಮುಗಳಿಗೆ ಇಂದಿಗೂ ಜನರು ಬೇಸ್ತುಬೀಳುತ್ತಾರೆ. ಇವೆಲ್ಲದರ ಹಿಂದೆಯೂ ಇರುವುದು ಮಾನವನ ವರ್ತನೆಗಳನ್ನು ಚೆನ್ನಾಗಿ ಅರಿತು, ಅದಕ್ಕೆ ತಕ್ಕಂತೆಯೇ ಜಾಲಗಳನ್ನು ಹೆಣೆಯುವ ಮಹಾಬುದ್ಧಿವಂತರು. `ಪಿಂಕ್’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪಾತ್ರವು ಹೇಳುವ `ಹಿಂಟ್’ ಬಗೆಗಿನ ಡೈಲಾಗು ತೀರಾ ಸರಳೀಕೃತ ಎಂದು ಕೆಲವೊಮ್ಮೆ ನನಗನ್ನಿಸುವುದುಂಟು. ಏಕೆಂದರೆ ನಾವೆಲ್ಲರೂ ಕೂಡ ಇಂಥಾ `ಹಿಂಟ್’ ಗಳಲ್ಲೇ ಜೀವಿಸುವವರು. ಅಪ್ಪ ಭೋಳೇಶಂಕರ ಎಂಬ ಮಾತ್ರಕ್ಕೆ ಆತನನ್ನು ನಿರಂತರವಾಗಿ ಯಾಮಾರಿಸುವ ಮಗ, ಉದ್ಯೋಗಿಯೊಬ್ಬನ ದೌರ್ಬಲ್ಯವೊಂದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಮೇಲಧಿಕಾರಿ, ಮತದಾರನಿಗೆ ಹೆಂಡವನ್ನು ಕೊಟ್ಟು ಓಟು ಖರೀದಿಸುವ ಪುಢಾರಿ, ರಾಜಕೀಯ ಅಜೆಂಡಾಗಳನ್ನಿಟ್ಟುಕೊಂಡು ಸುದ್ದಿಯನ್ನು ತಿರುಚುವ ಮಾಧ್ಯಮಗಳು… ಹೀಗೆ ಎಲ್ಲೆಲ್ಲೂ `ಸುಳಿವು’ಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಲೋಕವೇ ನಮ್ಮದು. ಸಂವಹನ ಕಲೆಯ ಪುಸ್ತಕಗಳಲ್ಲಿ ಥಿಯರಿಯಾಗಿ ಸಿಗುವ ಹಲವು ಪರಿಕಲ್ಪನೆಗಳನ್ನು ನಮಗರಿವಿಲ್ಲದಂತೆಯೇ ನಾವು ದಿನನಿತ್ಯದ ಜೀವನದಲ್ಲಿ ಪಾಲಿಸುತ್ತಾ ಬಂದಿದ್ದೇವೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾಯಶಃ ಇದು ಮಾನವ ಮೆದುಳಿನ ಮೂಲ ಸ್ವಭಾವವೂ ಹೌದು.

ಎಸ್. ಎಂ. ಕೃಷ್ಣ, ಸದಾನಂದ ಗೌಡರ ಎಂದಿನ ನಗುಮುಖ, ಜಯಲಲಿತಾರ ಕಟ್ಟುನಿಟ್ಟಿನ ವ್ಯಕ್ತಿತ್ವ, ಸೋನಿಯಾ ಗಾಂಧಿಯವರ ಭಾರತೀಯತೆಯ ವ್ಯಕ್ತಿತ್ವ, ಧೋನಿಯವರ ಕೂಲ್ ವ್ಯಕ್ತಿತ್ವ… ಹೀಗೆ ಎಲ್ಲವೂ ಕೂಡ ಅವರವರ `ಇಮೇಜ್’ ಗಳನ್ನು ರೂಪಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನೇ ವಹಿಸಿವೆ. ಜನಸಾಮಾನ್ಯರಲ್ಲಿ ತಮ್ಮ ವ್ಯಕ್ತಿತ್ವದ ಬಗ್ಗೆ ಅಂಥದ್ದೊಂದು ಭ್ರಮೆಯನ್ನು ಸೃಷ್ಟಿಸುವ ಅನಿವಾರ್ಯತೆಗಳೂ ಅವರಿಗಿರುತ್ತವೆ. ಸಾಮಾನ್ಯವಾಗಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಿಗಿರುವಂತೆ ಇಂದು ಮೋದಿಯವರಿಗೂ ಸಂವಹನ ಕಲೆ, ಬಾಡಿ ಲಾಂಗ್ವೇಜ್ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿಶೇಷ ತರಬೇತುದಾರರಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಜಾಗತಿಕ ಮಟ್ಟದಲ್ಲಿ ಇದರ ಅವಶ್ಯಕತೆಯೂ ದೇಶದ ಹಿರಿಯ ನಾಯಕರುಗಳಿಗಿದೆ. ಇನ್ನು ಅಪ್ಪುಗೆಯು ಭಾರತೀಯ ಸಾಂಸ್ಕೃತಿಕ ನೆಲೆಯಲ್ಲಿ ಸ್ವಾಗತವನ್ನು ತೋರ್ಪಡಿಸುವ ಅಥವಾ ಪಡೆದುಕೊಳ್ಳುವ ಅಷ್ಟೊಂದು ಜನಪ್ರಿಯ ವಿಧಾನವೂ ಅಲ್ಲದಿರುವುದರಿಂದ ಮೋದಿಯವರ ಅಪ್ಪುಗೆಯನ್ನು ಒಂದು ಚಾಣಾಕ್ಷ ರಾಜಕೀಯ ನಡೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಲೆಕ್ಕಹಾಕಿದ್ದರೆ ಅದರಲ್ಲೂ ವಿಶೇಷವೇನಿಲ್ಲ. ಏನಿಲ್ಲವೆಂದರೂ ಇಂಥಾ ಸೂಕ್ಷ್ಮ ಅವಲೋಕನಗಳು ಮುಂದಿನ ನಾಯಕರಿಗಾದರೂ ದಾರಿದೀಪವಾಗಬಹುದು.

ಬಾಡಿ ಲಾಂಗ್ವೇಜ್, ವಾಕ್ಚಾತುರ್ಯಗಳೇ ಜಗತ್ತಿನ ನಾಯಕರ ಸಾಧನೆಯನ್ನು ಅಳೆಯುವ ಮಾನಗಳು ಎಂದು ಹೇಳುವುದು ಮೂರ್ಖತನ. ಆದರೆ ನಾಯಕನ ಸಿಂಹಾಸನದಲ್ಲಿ ಕುಳಿತಿರುವವರಿಗೆ ಇವುಗಳ ಪ್ರಾಮುಖ್ಯತೆಯೂ ತಿಳಿದಿರಬೇಕು ಎಂಬುದನ್ನು ತಳ್ಳಿಹಾಕುವಂತಿಲ್ಲ. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾಕರ್ೆಲ್ ರಿಗೆ ಮಾತಿನ ಹಂಗಿಲ್ಲದೆ ನಿರಾಕರಿಸಿದ ಹಸ್ತಲಾಘವದಿಂದ ಹಿಡಿದು ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ರೊಂದಿಗಿನ ಸುದೀರ್ಘ ಹಸ್ತಲಾಘವದವರೆಗೂ `ಮಿಸ್ಟರ್ ಪ್ರೆಸಿಡೆಂಟ್’ ಡೊನಾಲ್ಡ್ ಟ್ರಂಪ್ ಸ್ವತಃ ತನ್ನ ವಿಚಿತ್ರ ಮ್ಯಾನರಿಸಂಗಳಿಂದಾಗಿ ಹಲವು ಬಾರಿ ಕ್ಯಾಮೆರಾಗಳ ಎದುರಿನಲ್ಲೇ ಇಕ್ಕಟ್ಟಿಗೆ ಸಿಲುಕಿದವರು. ಅಂತೂ ಈ ಬಾರಿಯ ಅಪ್ಪುಗೆಯು `ಆಲಿಂಗನಂ ದಂತಭಗ್ನಂ’ ಆಗಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ.

‍ಲೇಖಕರು avadhi

30 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading