ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದ್ಲು ಟೇಲರಿಂಗ್ ಕಲಿಸಿ, ಅಂದ್ರು..

ವಿನತೆ ಶರ್ಮ

ಸ್ವಲ್ಪ ಹಳೆಯದಾದರೂ ಇನ್ನೂ ಮಿರಿ ಮಿರಿ ಅಂತಿತ್ತು. ಬೆಳ್ಳಿ, ಬಿಸ್ಕತ್ ಬಣ್ಣದ ಮೈ. ಕಪ್ಪು ಬಣ್ಣದ ಚೆಂದದ ಅಕ್ಷರಗಳು. ಎಷ್ಟು ವರ್ಷ ಆ ಪೆಟ್ಟಿಗೆಯಲ್ಲಿ ಕೂತಿತ್ತೋ ಗೊತ್ತಿಲ್ಲ. ‘ಹೊಸದಾಗೆ ಕಾಣತ್ತೆ,” ಅಂದ ಮಗ. ಅದರ ಪಾರ್ಟುಗಳನ್ನ ಬಿಚ್ಚಿ ಬೇರೆ ಬೇರೆಯಾಗಿ ಜಾಗರೂಕತೆಯಿಂದ ಕಾಗದ ಮತ್ತು ಬಟ್ಟೆಯ ಪದರಗಳಲ್ಲಿ ಪ್ಯಾಕ್ ಮಾಡಿದ್ದರು. ಅವರಿಬ್ಬರೂ ಅವನ್ನೆಲ್ಲ ಒಂದೊಂದಾಗಿ ಹುಡುಕಿ ಜೋಡಿಸುವುದಕ್ಕೆ ಹಲವಾರು ಗಂಟೆಗಳೇ ಬೇಕಿದ್ದವು.

ಅಪ್ಪ, ಮಗ ಬಹಳ ಜತನದಿಂದ ಅದನ್ನು ಜೋಡಿಸಿದ್ದರು. ಅಷ್ಟು ತಾಳ್ಮೆ ಅವರಿಬ್ಬರಲ್ಲೂ ಇತ್ತು. ಜೋಡಿಸುತ್ತಲೇ ಅಪ್ಪ ಆ ಪಾರ್ಟ್ ಗಳ ಬಗ್ಗೆ ಚಿಕ್ಕ ಚಿಕ್ಕ ಪರಿಚಯ ಪಾಠಗಳನ್ನೂ ಮಗನಿಗೆ ಕೊಟ್ಟಾಗಿತ್ತು. ಅಗತ್ಯ ಬಿದ್ದಾಗಲೆಲ್ಲಾ ಸ್ವತಃ ತಾನು ಹೇಗೆ ಸ್ವಲ್ಪ ಸ್ವಲ್ಪವಾಗಿ ಹೊಲಿಗೆ ಕಲಿತುಕೊಂಡೆ ಅನ್ನೋ ಕತೆಯನ್ನ ಹೇಳಿದ್ದು ಕೇಳಿಸಿತ್ತು. ಮಗನ ಕಣ್ಣುಗಳು ದುಂಡಾಗಿ singer-sewing-machine3ಅರಳಿರಬಹುದೆಂಬ ಕಲ್ಪನೆಯೂ ಬಂತು. ಅಂತೂ ಇಂತೂ ಅದು ಮೇಜಿನ ಮೇಲೆ ಮುದ್ದಾಗಿ ಕೂತಾಗ ಮಗನಿಗೆ ಹುರ್ರೇ ಎಂಬ ಹುರುಪು, ‘ಯೇ…’ ಅಂತ ಕೂಗಿದ್ದೂ, ಅದೇನೋ ಚಿಕ್ಕ ಶಬ್ದವೂ ಕೇಳಿಸಿತು.

ಸರಿ ನೋಡೇ ಬಿಡೋಣ ಅಂತ ಅಟ್ಟ ಹತ್ತಿ ಹೋದರೆ ಅಲ್ಲಿ ಈ ಪುಟ್ಟ ಲಕ್ಷ್ಮಿ!! ಮುದ್ದಾದ singer ಹೊಲಿಗೆ ಯಂತ್ರ ಕಣ್ಣು ಮಿಟುಕಿಸಿತು. ‘ನೋಡಮ್ಮ, grandma ಇಟ್ಟುಕೊಂಡಿದ್ದ ಹೊಲಿಗೆ ಮೆಷಿನ್. ಅದೀಗ ನನ್ನದು. ಡ್ಯಾಡಿ ಸರಿ ಅಂದ್ರು”, ಅಂತ ಒಂದೇ ಉಸಿರಲ್ಲಿ ಅದನ್ನ ಜೋಡಿಸಿದ ಕತೆ ಹೇಳಿದ. ಪಕ್ಕದಲ್ಲಿ ಅವನೇ ಬಿಡಿಸಿದ್ದ ಕೆಲ ಹೊಲಿಗೆಗಳೂ ಇದ್ದವು. ಹತ್ತಿರದಿಂದ ಇದೇ ಮೊದಲ ಬಾರಿಗೆ singer ಹೊಲಿಗೆ ಮೆಷಿನ್ ನೋಡ್ತಾ ಇರೋದು, ಚೆನ್ನಾಗಿದೆ ಆಲ್ವಾ, ಅಂದೆ ನಾನು. ನಾನು ಬೇಕಂತಲೇ ಸ್ವಇಚ್ಛೆಯಿಂದ ಹೊಲಿಗೆ ಕಲೀಲಿಲ್ಲ ಅನ್ನೋ ಕತೆ ಅಪ್ಪ ಮಕ್ಕಳಿಗೆ ಚೆನ್ನಾಗಿ ಗೊತ್ತಿದೆ. ಪಟ್ಟಂತ ಮಗರಾಯ ಹೇಳೇಬಿಟ್ಟ – “ಅಮ್ಮ, ನೀನು ಕೂಡ ಕಲೀಬೋದು. ನಾನೇ ನಿಂಗೆ ಹೇಳಿಕೊಡ್ತೀನಿ.” ತಕ್ಷಣ ಹೂಂ ಅಂದೇ ಬಿಟ್ಟೆ.

ಆಗ, ಅಷ್ಟು ಸುಲಭವಾಗಿ ಅವರಿಗೆಲ್ಲಾ ನಾನು ಹೂಂ ಅಂತ ಅನ್ನಲಿಲ್ಲ. ಪ್ರತಿ ಬೇಸಗೆ ರಜೆಯಲ್ಲೂ ಅಮ್ಮ ನಮ್ಮನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕೈ ಹೊಲಿಗೆ, ನಿಟ್ಟಿಂಗ್, ಕ್ರೋಶಾ, ತರಾವರಿ ಎಂಬ್ರಾಯ್ಡರಿ ಹೇಳಿಕೊಡೋರು. ಜಪ್ಪಯ್ಯಾ ಅಂದ್ರೂ ನಿಟ್ಟಿಂಗ್, ಕ್ರೋಶಾ ನನ್ನ ತಲೆಗೆ ಹತ್ತಲಿಲ್ಲ. ಅಷ್ಟೋ ಇಷ್ಟೋ ಕೈ ಹೊಲಿಗೆಯನ್ನ ಮಾತ್ರ ಕಲಿತೆ. ಯಾಕಂದ್ರೆ ಅಮ್ಮ ಹೇಳಿದ ಮಾತು ನಿಜ ಅನ್ಸಿತ್ತು- ಸಮಯ ಬಿದ್ರೆ ಯಾರ ಆಶ್ರಯಾನೂ ಇಲ್ದೆ ನಾನೇ ನನ್ನ ಬಟ್ಟೆ ರಿಪೇರಿ ಮಾಡ್ಕೊಬೋದು. ಆಸ್ಟ್ರೇಲಿಯಾದಲ್ಲಿ ನನ್ನ ಜೀನ್ಸ್ ಪ್ಯಾಂಟ್ ನ ಝಿಪ್ ರಿಪೇರಿ ಮಾಡಲು ಇಪ್ಪತ್ತು ಡಾಲರ್ ಕೊಟ್ಟಾಗ ಮತ್ತೆ ಅಮ್ಮನ ಮಾತು ಜ್ಞಾಪಕಕ್ಕೆ ಬಂತು. ಅಮ್ಮ ಯಾಕೆ ಝಿಪ್ ರಿಪೇರಿ ಮಾಡೋದನ್ನ ಹೇಳಿಕೊಡಲಿಲ್ಲ ಅನ್ಸಿತ್ತು. ಅಮ್ಮ ಹಾಕೋ ಆ ಎಂಬ್ರಾಯ್ಡರಿಗಳನ್ನ ನಾನು ತುಂಬಾ ಇಷ್ಟಪಡ್ತಾ ಇದ್ದೆ. ಸುಲಭದ ಕ್ರಾಸ್ ಸ್ಟಿಚ್ ನನ್ನ ಮೆಚ್ಚಿನದು. ಇವತ್ಗೂ ಅದೊಂದೇ ಜ್ಞಾಪಕ ಇರೋದು!!

ಹೈಸ್ಕೂಲ್ನಲ್ಲಿ ಹುಡುಗಿಯರಿಗೆ ಹೊಲಿಗೆ ಕ್ಲಾಸ್ ಇತ್ತು. ಹುಡುಗರಿಗೆ ಮೆಷಿನ್ ವರ್ಕ್, ಕಾರ್ಪೆನ್ಟರಿ ಕ್ಲಾಸ್ ಇತ್ತು. ನಾನು, ನನ್ನ ಸ್ನೇಹಿತೆಯೊಬ್ಬಳು ಪುಸ್ತಕದ ಹುಳುಗಳು. ಹೊಲಿಗೆ ಮೆಷಿನ್ ಕಡೆ ಕಣ್ಣು ಹಾಯಿಸದೇ ಬೆನ್ನಿಗೆ ಬೆನ್ನು ಹಚ್ಚಿ ಓದಿದ್ದೆ ಓದಿದ್ದು. ಪಾಪ, ಒಳ್ಳೆ ಮೇಷ್ಟ್ರು, ಬೈತಿರಲಿಲ್ಲ. ಆದ್ರೆ ಆಟದ ಮೈದಾನದಲ್ಲಿ, ಪಿಟಿ ಕ್ಲಾಸ್ನಲ್ಲಿ ಹಾಗೆ ಮಾಡಿ, ಪಿಟಿ ಮಾಸ್ಟರಿಂದ ಚೆನ್ನಾಗಿ ಬೈಸಿಕೊಂಡದ್ದಲ್ಲದೆ ಅವರು ನನ್ನ ಕೈಲಿದ್ದ ಪುಸ್ತಕ ಎಳೆದುಕೊಂಡು ತಲೆಗೊಂದು ಏಟನ್ನು ಕೊಟ್ಟಿದ್ದರು. ಸದ್ಯ ಜೋರಾಗೇನಲ್ಲ. ನಮ್ಮಪ್ಪ ಅವ್ರಿಗೆ ಗೊತ್ತಿದ್ರಿಂದ ನಾನು ಬಚಾವ್. ನನಗೆ ಚಿಕ್ಕಂದಿನಿಂದ ಕಾರ್ಪೆನ್ಟರಿಯಲ್ಲಿ ಆಸಕ್ತಿ ಇತ್ತು, ಆದರೆ ಅದು ಹುಡುಗಿಯರಿಗೆ ಅಲ್ಲ ಅಂತ ಎಲ್ರೂ ಕೈ ಒದ್ರಿ, ಬೈಯೋರು.

ಕಾಲೇಜ್ ಡಿಗ್ರಿ ಮುಗಿಯೋವಾಗ ನೆರೆಹೊರೆಯಲ್ಲಿ ನೋಡಿದರೆ ಸುಮಾರು ಎಲ್ಲಾ ಹುಡುಗಿಯರಿಗೂ ಹೊಲಿಗೆ ಬರುತ್ತಿತ್ತು. ನನ್ನನ್ನ ಬಿಟ್ಟು. ವರ್ತನಾವಿಜ್ಞಾನದಲ್ಲಿ ಎಂ.ಎ. ಓದಿ, ಚಿಕ್ಕದಾದ ಒಂದು ರಿಸರ್ಚ್ ಪ್ರಾಜೆಕ್ಟ್ – ಕೋತಿಗಳ ವರ್ತನೆ ಕುರಿತು – ಮಾಡಿ ಮುಗಿಸಿದ್ದೆ. ಆಫ್ರಿಕಾಕ್ಕೆ ಹೋಗಿ ಜೇನ್ ಗೂಡಾಲ್ ಅವರಿದ್ದ ಗೋಮ್ಬೆ ನ್ಯಾಷನಲ್ ಪಾರ್ಕ್ನಲ್ಲಿ ಚಿಮ್ಪಾಂಝಿಗಳ ಬಗ್ಗೆ ರಿಸರ್ಚ್ ಮಾಡ್ತೀನಿ ಅಂತ ಹೇಳ್ತಿದ್ದೆ. ಅಪ್ಪ ಗುರ್ ಗುರ್ ಅಂತಿದ್ರು. ಅಮ್ಮ ‘ಮಾರಾಯ್ತಿ, ಅದೊಂದನ್ನು ಬಿಟ್ಟು ಬೇರೆ ಮಾತನ್ನಾಡು” ಅಂತ ಕೇಳ್ಕಳೋರು.

ಮನೆಯ ಹತ್ತಿರ ನನ್ನ ಗೆಳತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು. ನನಗಿಂತಲೂ ಚಿಕ್ಕವಳು. ಅವಳು ಹೊಲಿಗೆ ಕ್ಲಾಸ್ ಗೆ ಹೋಗಲು ಆರಂಭಿಸಿದಳು. ನನ್ನ ಬಿಸಿ ರಕ್ತದ ಟೆಂಪರೇಚರ್ ಇನ್ನೂ ಸ್ವಲ್ಪ ಜಾಸ್ತಿ ಆಯ್ತು. ಅವ್ಳಿಗೆ ಬೈದೇ ಬಿಟ್ಟೆ- ‘ಥೂ ನಿನ್ನ, ಇನ್ನೂ ಮುಂದಕ್ಕೆ ಓದೋದ್ ಬಿಟ್ಟು ಮದುವೆ ಮಾಡ್ಕೊಳ್ತಾ ಇದೀಯಲ್ಲೇ,” ಅಂತ. ಪಾಪ, ಅವಳೇನ್ ಹೇಳ್ತಾಳೆ! ಆದ್ರೆ, ವಾರ ಬಿಟ್ಟು ಅವರಪ್ಪ ನಮ್ಮನೆಗೆ ಬಂದ್ರು. “ರೀ ಮೇಷ್ಟ್ರೇ, ನಿಮ್ಮ ಮಗಳಿಗೆ ಒಳ್ಳೆ ವರ ನೋಡಿ, ಮದುವೆ ಮಾಡಿ. ವಯಸ್ಸಾಗ್ತಾ ಇದೆ. ಅದೇನೋ ಆಫ್ರಿಕಾಗೆ ಹೋಗಿ ಚಿಮ್ಪಾಂಜಿ ನೋಡ್ತಾಳಂತೆ?! ಒಂದ್ಸಲ ಸುಮ್ನೆ ಮೈಸೂರ್ zooಗೆ ಕರ್ಕೊಂಡು ಹೋಗಿ. ಹೆಣ್ ಮಕ್ಳಿಗೆ ಜಾಸ್ತಿ ಓದಿಸಿದ್ರೆ ಹೀಗೇ ಆಗೋದು. ಮೊದ್ಲು ಟೇಲರಿಂಗ್ ಕಲಿಸಿ,” ಅಂತ ಗುಡುಗಿದ್ರು. ಅಪ್ಪ ‘ನಿನ್ನನ್ನ ಕೊಂದ್ ಬಿಡ್ತೀನಿ’ ಅನ್ನೋ ತರ ನನ್ನ ಕಡೆ ನೋಡಿದ್ರು.

“ನಿಂಗೆ ವರ ಹುಡುಕ್ ತೀವಿ. ಮಗಳೇ, ನಿನ್ನ ಸ್ನೇಹಿತೆಯರ ಹಾಗೆ ನೀನು ಕೂಡ ಒಪ್ಪ ಓರಣವಾಗಿ ಸೀರೆ ಉಟ್ಕೊಂಡು, ಸ್ವಲ್ಪ ಮೇಕಪ್ ಹಾಕ್ಕೊಂಡು ನಾಜೂಕಾಗಿರು’, ಅಂದ್ರು ಅಮ್ಮ. ನಾ ಹೇಳ್ದೆ – “ಅಮ್ಮ, ನೀವು ಹುಡ್ಕೊ ಹುಡುಗನ ಕಡೆಯವರು ಈ ಹುಡುಗಿಗೆ ಹೊಲಿಗೆ ಬರತ್ತಾ ಅಂದ್ರೆ ಅಲ್ಲೇ ಫುಲ್ ಸ್ಟಾಪ್.” ಅಮ್ಮನಿಗೆ ಆಗ ಆಗಿದ್ದ ಚಿಂತೆಯನ್ನ ಈಗ ನೆನೆಸಿಕೊಂಡ್ರೆ ಥೂ ನನ್ನ, ಎಷ್ಟು ಕಾಟ ಕೊಟ್ಟೆ ಅನ್ಸತ್ತೆ. ಆದ್ರೆ ಟೇಲರಿಂಗ್ ಮಾತ್ರ ಕಲಿಯಲಿಲ್ಲ. ಕಲಿತರೆ ಇವ್ರು ಬೇಡದವನ ಜೊತೆ ನನ್ನ ಮದುವೆ ಫಿಕ್ಸ್ ಮಾಡಿಬಿಡ್ತಾರೆ ಅನ್ನೋ ಹೆದರಿಕೆ ಇದ್ದಿರಬೇಕು ಅಂತ ನನ್ನ ಮಗನ ಅನಾಲಿಸಿಸ್!! ಹುಡುಗೀರು ಹೊಲಿಗೆ ಕಲೀಲೇಬೇಕು ಅಂತ ಇದ್ದದ್ದು ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಅಂತ ಅವನಪ್ಪನ ಕಮೆಂಟ್. ಆ ಮುದ್ದು singer ಟೇಲರಿಂಗ್ ಮೆಷಿನ್ ಉಪಯೋಗಿಸುತ್ತಾ ನನ್ನ ಮಗ ಕೂತು ಅಪ್ಪನಿಂದ ಹೊಲಿಗೆ ವಿದ್ಯೆಯನ್ನ ಕಲಿಯುತ್ತಿರುವುದನ್ನ ನೋಡಿ ತಾನೇ ತಾನಾಗಿ ನನ್ನ ಬಾಯಿಂದ ಮಾತು ಬಂತು “ನಾನೂ ಹೊಲಿಗೆ ಕಲೀತೀನಿ.”

ಹೆಣ್ ಮಕ್ಳು ಹಾಗೆ, ಹೀಗೇ ಇರಬೇಕು ಅನ್ನೋ ಸ್ಟೀರಿಯೋಟೈಪ್ ವಾತಾವರಣದಲ್ಲಿ ನಾನು ನರಳಿದ್ದನ್ನ ನೆನೆಸಿಕೊಂಡ್ರೆ ವಿಷಾದವಾಗತ್ತೆ. ನಾನು ಕಲಿಯಬೇಕು ಎಂದು ಆಸೆಪಟ್ಟ ವಿದ್ಯೆಗಳು ನನಗೆ ಆಗ ದಕ್ಕಲಿಲ್ಲ. ಅವಕಾಶಗಳಿದ್ದರೂ ತಾವು ಬರೆದ ಚೌಕಟ್ಟಿನಲ್ಲಿ ಮಾತ್ರ ಹೆಣ್ಣು ಮಕ್ಕಳನ್ನು ಇಟ್ಟು ನೋಡಲು ಇಷ್ಟ ಪಡುತ್ತಿದ್ದ ಸಮಾಜವದು.

singer-sewing-machineತಳಮಟ್ಟದ ಸಮುದಾಯಗಳ ಜೊತೆ ನಾನು ಅಭಿವೃದ್ಧಿ-ಕುರಿತ ಕೆಲಸ ಮಾಡುತ್ತಿದ್ದಾಗ ಅಮ್ಮಂದಿರು ಸ್ವಸಹಾಯ ಸಂಘಗಳ ಮೂಲಕ ಹೊಲಿಗೆ ಮೆಷಿನ್ ಖರೀದಿಸಿ ತಮ್ಮ ಜೀವನದಲ್ಲಿ ಸ್ವಲ್ಪ ನೆಮ್ಮದಿ ಕಂಡದ್ದನ್ನು ನೋಡಿದೆ. ಟೇಲರಿಂಗ್ ಜೈ ಅನಿಸಿತು. ಆದರೆ ಅದೇ ಹೆಣ್ಣುಗಳು ಹೊಲದ ಕೆಲಸ ಕೂಡ ಮಾಡುತ್ತಾರೆ, ಕಲ್ಲು ಹೊಡೆಯುತ್ತಾರೆ, ಕಟ್ಟಡ ಕೆಲಸದಿಂದ ಬಂದ ದಿನಗೂಲಿಯಲ್ಲಿ ಮಕ್ಕಳಿಗೆ ಗಂಜಿ ಉಣಿಸುತ್ತಾರೆ ಅನ್ನೋದನ್ನೂ ನೋಡಿದೆ.

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಅಕ್ಕಪಕ್ಕದ ಗಲ್ಲಿಗಳಲ್ಲಿ, ಅವೆನ್ಯೂ ರಸ್ತೆಯ ಸಂದುಗಳಲ್ಲಿ, ರಾಜಾ ಮಾರ್ಕೆಟ್ನಲ್ಲಿ ಅದೇ ಟೇಲರಿಂಗ್, ಎಂಬ್ರಾಯ್ಡರಿ ಮಾಡುವ ನೂರಾರು ಗಂಡು ಮಕ್ಕಳನ್ನ ಕೂಡ ಸಾವಿರಾರು ಬಾರಿ ನೋಡಿದ್ದೀನಿ. ಕುಲ ಕಸುಬು, ದಿನ ನಿತ್ಯದ ಊಟ, ಕಸಿದುಕೊಂಡ ಬಾಲ್ಯ, ಬಲವಂತದ ಮಕ್ಕಳ ದುಡಿಮೆ, ಏನೇನೋ ಕತೆಗಳು. ನನ್ನದೇ ದೂರ ಬಂಧುವಿನ ಬದುಕನ್ನ ಒಂದು ಟೇಲರಿಂಗ್ ಮೆಷಿನ್ ಕಟ್ಟಿ ನಿಲ್ಲಿಸಿದನ್ನು ನೋಡಿದ್ದು ನೆನಪಿಗೆ ಬಂತು. ಲಕ್ಷಾಂತರ ಗಂಡಸರು ಟೇಲರ್ಸ್ ಆಲ್ವಾ! ಆದರೂ ಹಿಂದಿನ ಚಲನಚಿತ್ರಗಳಲ್ಲಿ ಹೆಣ್ಣು ವಿಧವೆಯಾದರೆ ಅವಳಿಗೆ ಕೊಡುತ್ತಿದ್ದ ಕೆಲಸ ಟೇಲರಿಂಗ್  ಯಾ ಅಡಿಗೆ ಮಾಡುವುದು. ಮರು ಮದುವೆ ಇಲ್ಲ. ನಾನು ಸಿಡಿಮಿಡಿ ಅಂತಿದ್ದದ್ದು…

ಮಗನ ಸ್ನೇಹಿತರು ಈಗಾಗಲೇ ತಮ್ಮ ಒರಿಗಾಮಿ, ಗ್ರಾಫಿಕ್ ಕಲೆಗಳ ಚಿಕ್ಕ ಚಿಕ್ಕ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಡಿಸೈನ್, ಟೆಕ್ನಾಲಜಿಯಲ್ಲಿ ಪರಿಣಿತನಾದ ಅವನಿಗೆ ತಾನು ಕಲಿಯುತ್ತಿರುವ ಹೊಲಿಗೆಯ ಬಗ್ಗೆ ಪ್ರ್ರೀತಿ, ಅಭಿಮಾನ. ಅದರ ಬೆಳಕು ನನ್ನ ಮೇಲೂ ಬೀಳುತ್ತಿದೆ. Gender bias ದಿನಗಳು ಮಸುಕಾಗುತ್ತಿವೆ ಅನ್ನುವ ಅಲ್ಪ ಸಮಾಧಾನ.

‍ಲೇಖಕರು Admin

24 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading