ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲಬಾರಿ ಲಿಫ಼್ಟ್ ಹೊಕ್ಕಾಗ…

ಇದಕ್ಕಿದ್ದಂತೆ ಲಿಫ್ಟ್ ಚಲಿಸಿದ ಅನುಭವವಾಯಿತು

ಪ್ರಶಾಂತ ಸಾಗರ

ಐಟಿಐ ಮುಗಿಸಿ ಬೆಂಗಳೂರಿಗೆ ಬಂದಾಗ ನಾನು ಮೊದಲು ಕೆಲಸಕ್ಕೆ ಸೇರಿದ್ದು ಬಿಡದಿ ಬಳಿಯ ಟೊಯೋಟ ಕಾರುಗಳನ್ನು ತಯಾರಿಸುವ ಕಂಪೆನಿಯಲ್ಲಿ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರಿಂದ ಅದರ ಕಾಂಟ್ರ್ಯಾಕ್ಟ್ ಮುಗಿದ ಮೇಲೆ ಪಿ.ಎಫ್ ಹಣಕ್ಕೆ ಅರ್ಜಿ ಸಲ್ಲಿಸಲು ನಾನು ಮತ್ತು ನನ್ನ ರೂಮ್ ಮೇಟ್ ಸೂರ್ಯಕಾಂತ ಇಬ್ಬರೂ ಬನಶಂಕರಿಯಲ್ಲಿದ್ದ ಕಾಂಟ್ರ್ಯಾಕ್ಟ್ ಆಫೀಸಿಗೆ ಹೋದೆವು. ನಾವು ಆ ಕಟ್ಟಡದ ಕೆಳಗೆ ಬರುವುದಕ್ಕೂ ನಮ್ಮ ಮುಂದೆ ಯಾರೋ ಲಿಫ್ಟ್ ಒಳಗಿಂದ ಹೊರಬರುವುದಕ್ಕೂ ಸರಿಯಾಯಿತು. ‘ಮೂರನೇ ಮಹಡಿಯಲ್ಲಿರುವ ಆಫೀಸಿಗೆ ನಡೆದುಕೊಂಡು ಯಾಕೆ ಹೋಗುವುದು? ಆರಾಮವಾಗಿ ಲಿಫ್ಟ್ ಮೂಲಕ ಹೋಗಬಹುದಲ್ಲ’ ಎಂಬ ಸೂರ್ಯನ ಅಮೋಘ ಸಲಹೆಯನ್ನು ಪುರಸ್ಕರಿಸಿ ಅದರೊಳಕ್ಕೆ ಹೊಕ್ಕೆವು. ಮಾತಿನಲ್ಲಿ ಮೈ ಮರೆತಿದ್ದ ನಮ್ಮಿಬ್ಬರಿಗೂ ಮೊದಲು ಲಿಫ್ಟ್ ನಿಂತಲ್ಲೇ ನಿಂತಿದ್ದ ಅರಿವಾಗಲಿಲ್ಲ. ‘ನಾವು ಅದರೊಳಕ್ಕೆ ಹೋದರೆ ಸಾಕು. ಅದು ತಾನಾಗಿಯೇ ನಮ್ಮನ್ನು ಮೇಲೆ ಕರೆದುಕೊಂಡು ಹೋಗುತ್ತದೆ’ ಎಂದು ಮೊದಲ ಬಾರಿಗೆ ಲಿಫ್ಟ್ ಹೊಸಿಲು ದಾಟಿದ್ದ ನಮ್ಮೀರ್ವರ ಅಭಿಪ್ರಾಯವಾಗಿತ್ತು. ಆದರೆ ಎಷ್ಟು ನಿಮಿಷಗಳಾದರೂ ನಿಂತಲ್ಲೇ ನಿಂತಿದ್ದ ಲಿಫ್ಟ್ ಬಗ್ಗೆ ನಿಧಾನವಾಗಿ ಅನುಮಾನ ಬರತೊಡಗಿತು. ಬಾಗಿಲ ಪಕ್ಕದಲ್ಲಿದ್ದ ಸಂಖ್ಯೆಯ ಗುಂಡಿಗಳನ್ನು ನೋಡಿ ಅವುಗಳನ್ನು ಒಂದೊಂದಾಗಿ ಒತ್ತಿದೆವು. ಏನೂ ಸಂಭವಿಸಲಿಲ್ಲ. ಇಬ್ಬರೂ ಮುಖ ಮುಖ ನೋಡಿಕೊಂಡೆವು.

ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಗುಂಡಿಗಳನ್ನು ಒತ್ತಿದೆವು. ಹೀಗೆ ಎಷ್ಟು ಬಾರಿ ಪ್ರಯತ್ನಿಸಿದರೂ ಲಿಫ್ಟ್ ಜಪ್ಪಯ್ಯ ಎನ್ನದಿರಲು ನಮ್ಮ ಚಡಪಡಿಕೆ ಉದ್ವೇಗ ಜಾಸ್ತಿಯಾಗುತ್ತಾ ಹೋಯಿತು. ಹೊರಗಿನಿಂದ ಯಾರಾದರೂ ಬಾಗಿಲು ತೆರೆಯಬಹುದೆಂದು ಜೋರಾಗಿ ಕೂಗಿದೆವು. ಬಾಗಿಲನ್ನು ದಬದಬನೆ ಬಡಿದೆವು. ಏನೂ ಪ್ರಯೋಜನವಾಗಲಿಲ್ಲ. ಯಾರಿಗಾದರೂ ಬರುವಂತೆ ಕರೆ ಮಾಡೋಣವೆಂದು ಮೊಬೈಲ್ ತೆಗೆದರೆ ಅದರಲ್ಲಿ ನೆಟ್’ವರ್ಕೂ ಇಲ್ಲ. ನಮ್ಮ ಎಲ್ಲಾ ಪ್ರಯತ್ನಗಳು ಹೀಗೆ ವಿಫಲವಾದಾಗ ಮುಂದೇನು ಮಾಡುವುದೆಂದು ತೋಚದಾಯಿತು. ಹೋಗಲಿ ಇಂತ ಸಂದರ್ಭವನ್ನು ಆಸ್ವಾದಿಸೋಣವೆಂದರೆ ನಾವೇನು ಪೋಕಿರಿ ಚಿತ್ರದ ಮಹೇಶ್ ಬಾಬು ಇಲಿಯಾನ ಅಲ್ಲವಲ್ಲ. ಇಬ್ಬರೂ ಹುಡುಗರೇ! ನನ್ನ ಮುಖ ಅವನು, ಅವನ ಮುಖ ನಾನು ಎಷ್ಟೂಂತ ನೋಡುವುದು? ದಿನಾ ರೂಮಿನಲ್ಲೇ ನೋಡಿಕೊಂಡು ಸಾಕಾಗಿತ್ತು ಇಬ್ಬರಿಗೂ. ಬೆಳಗಾಗೆದ್ದು ಯಾರ ಮುಖ ನೋಡಿದೆವೋ ಎಂದು ಒಬ್ಬರ ಮೇಲೊಬ್ಬರು ಶಪಿಸಿಕೊಳ್ಳದ ಹೊರತು ಬೇರೇನು ಮಾಡುವಂತಿರಲಿಲ್ಲ. ಹೊರಗಿನಿಂದ ಗಾಳಿ ಬೆಳಕು ಬರಲು ಆ ಲಿಫ್ಟಲ್ಲಿ ಒಂದು ಕಿಂಡಿಯೂ ಇರಲಿಲ್ಲ. ನನಗೆ ನೆಗಡಿ ಬೇರೆ ಆಗಿದ್ದರಿಂದ ಕ್ಷಣಕ್ಷಣಕ್ಕೂ ಉಸಿರಾಡಲು ಪರದಾಡುವಂತಾಗುತಿತ್ತು.

‘ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡು, ಹೆಂಡತಿ ಮಕ್ಕಳು ಸಂಸಾರದ ಯಾವ ಸುಖವನ್ನೂ ಕಾಣದೆ ಇಷ್ಟೂ ಹೀನಾಯವಾಗಿ ಬದುಕನ್ನು ಕೊನೆಗಾಣಿಸಬೇಕಾಯಿತೇ.. ಅಯ್ಯೋ ನನ್ನ ವಿಧಿಯೇ..’ ಎಂದು ಮನಸಲ್ಲೇ ಗೋಳಾಡತೊಡಗಿದೆ. ಮನೆಯವರು, ಸ್ನೇಹಿತರೆಲ್ಲರೂ ಸಾಲಗಿ ನೆನಪಾಗತೊಡಗಿದರು. ಬುದ್ದಿ ತಿಳಿದಾಗಿನಿಂದ ದೇವರುಗಳನ್ನು ಸ್ವಲ್ಪ ದೂರವೇ ಇಟ್ಟಿದ್ದ ನನಗೆ ಅದೆಲ್ಲಿಂದ ದೈವಭಕ್ತಿ ಬಂತೋ ಕಂಡ ಕಂಡ ದೇವರುಗಳನ್ನೆಲ್ಲ ಮನದಲ್ಲಿ ಪ್ರಾರ್ಥಿಸತೊಡಗಿದೆ. ನನ್ನ ಕೂಗು ಅದ್ಯಾವ ಕಿಂಡಿಯಿಂದ ಭಗವಂತನನ್ನು ಮುಟ್ಟಿತೋ.. ಇದಕ್ಕಿದ್ದಂತೆ ಲಿಫ್ಟ್ ಚಲಿಸಿದ ಅನುಭವವಾಯಿತು. ಒಮ್ಮಿಲೇ ನಿಂತಂತಾಗಿ ಧಡಾರನೆ ಬಾಗಿಲು ತೆರೆದುಕೊಂಡಿತು. ಬದುಕಿದೆಯಾ ಬಡ ಜೀವವೇ ಎಂದು ಇಬ್ಬರೂ ಚಂಗನೆ ಹೊರಕ್ಕೆ ಜಿಗಿದೆವು. ಸುಲಭವಾಗಿ ಮೇಲೇರುವ ನಮ್ಮಾಸೆಯನ್ನು ಅಣಕಿಸುವಂತೆ ಲಿಫ್ಟ್ ಪೂರ್ತಿ ನೆಲಮಹಡಿಗೆ ನಮ್ಮನ್ನು ತಂದು ಬಿಸಾಕಿತ್ತು. ನಿನ್ನ ಸಹವಾಸವೇ ನಮಗೆ ಬೇಡವೆಂದು ನಡೆದುಕೊಂಡೇ ಮೇಲೆ ಹೋದೆವು. ಮೂರನೇ ಮಹಡಿಯಿಂದ ನೋಡಿದಾಗ ವಿಶಾಲ ಬೆಂಗಳೂರು, ಮರಗಳು, ಮೋಡಗಳು, ತಂಗಾಳಿಯೆಲ್ಲವೂ ಅಪ್ಯಾಯಮಾನವೆನಿಸಿ ‘ಲೈಫ್ ಈಸ್ ಬ್ಯೂಟಿಪುಲ್ ಮಗಾ’ ಎಂದೆ ಸೂರ್ಯನಿಗೆ.

ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳೆದು ಹೊರ ಪ್ರಪಂಚಕ್ಕೆ ಕಾಲಿಟ್ಟವರಿಗೂ ಹೀಗೆ ಅನ್ನಿಸಬಹುದೇನೋ.. ಈಗ ಯಾವುದೇ ಲಿಫ್ಟ್ ಹತ್ತಿದರೂ ಆ ಘಟನೆ ನೆನಪಾಗಿ ಮುಖದಲ್ಲಿ ಮಂದಹಾಸ ಮೂಡುತ್ತದೆ. ಗೆಳೆಯ ಸಿಕ್ಕಾಗಲೆಲ್ಲ ಅದನ್ನು ಹೇಳಿಕೊಂಡು ಜೋರಾಗಿ ನಗುತ್ತೇವೆ. ಜೀವನದಲ್ಲಿ ಮೇಲೇರಲು ಮೆಟ್ಟಿಲೆಂಬ ಪರಿಶ್ರಮದ ಹೊರತು ಲಿಫ್ಟ್’ನಂಥ ಅಡ್ಡದಾರಿಗಳನ್ನು ನೆಚ್ಚಿಕೊಂಡರೆ ಕೆಲವೊಮ್ಮೆ ಮೇಲೂ ಹೋಗದೆ, ಕೆಳಗೂ ಬಾರದೆ, ಹೊರಬರುವ ಬಾಗಿಲೂ ತೆರೆಯದೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡು ಒದ್ದಾಡಬೇಕಾಗುತ್ತದೆ. ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ನಮ್ಮ ಬದುಕಿನ ಅಸಹಾಯಕತೆಯ ದರ್ಶನ ಮಾಡಿಸಿ, ಸಮಸ್ತ ಬಂಧು ಮಿತ್ರರು ದೇವರುಗಳನ್ನು ಕಣ್ಮುಂದೆ ಬರುವಂತೆ ಮಾಡಿದ ಲಿಫ್ಟ್ ಎಂಬ ಮಹಾಶಯನಿಗೆ ನಮೋ ನಮಃ.

‍ಲೇಖಕರು avadhi

25 February, 2014

1 Comment

  1. Vaman Gopalrao Kulkarni

    I have such experience in our KPCL Office on residency Road, Bangalare and also once or twice during our stay at Singapore and Kualalumpur. Probably 90% people go through such ordeals very often.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading