ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮೈ ಮನಗಳ ಸುಳಿಯಲ್ಲಿ ಈಜಿದ ಮಂಜುಳೆ ’ – ಸ್ವರ್ಣ ಬರೀತಾರೆ

ಮಂಜುಳೆಯ ಮೈ- ಮನಸು

– ಸ್ವರ್ಣ ಎನ್ ಪಿ


ಅಯ್ಯೋ! ಇದು ಸೆಕ್ಸ್ ಬಗೆಗಿನ ಪುಸ್ತಕವಂತೆ ಇದನ್ನ ಓದಲೇಬೇಕಾ? ಮನುಷ್ಯನ ಮನಸ್ಸು ಯಾವ ಸುಳಿಗೂ ಕಡಿಮೆಯಲ್ಲ, ಹಾಗೆ ನೋಡಿದರೆ ಸುಳಿಗಿಂತಲೂ ಸೆಳವು ಅಧಿಕ. ಆದರೆ ದೇಹವೂ ಸುಳಿಯೇ ? ಹೀಗೆ ಹತ್ತು ಹಲವು ಪ್ರಶ್ನೆಗಳೊಡನೆ ಕೊಂಡು ತಂದ ಪುಸ್ತಕ ‘ಮೈ ಮನಗಳ ಸುಳಿಯಲ್ಲಿ’. ಇದೊಂದು ವೇಶ್ಯೆಯ ಕಥೆ ಅದೂ ಇದೂ ಅಂತ ಅಲ್ಲಿ ಇಲ್ಲಿ ತುಂಡು ತುಂಡಾಗಿ ಮಂಜುಳೆಯ ಬಗ್ಗೆ ಓದಿದ್ದೆ. ಇಷ್ಟ ಪಟ್ಟು ತಂದಿದ್ದು ನಾನಲ್ಲವಾದ್ದರಿಂದ ಎಷ್ಟೋ ದಿನ ನಾನು ಪುಸ್ತಕವನ್ನು ಕೈಗೆತ್ತಿಕೊಳ್ಳಲೂ ಇಲ್ಲ.
ಶಿವರಾಮ ಕಾರಂತರ ಕೃತಿಗಳನ್ನು ಮೊದಲ ಹತ್ತಿಪ್ಪತ್ತು ಪುಟಗಳವರೆಗೆ ಕಷ್ಟಪಟ್ಟು ಓದಿದ್ದು ನನ್ನ ಮಟ್ಟಿಗಿನ ಸತ್ಯ. ಹತ್ತಿಪ್ಪತ್ತು ಪುಟ ಮೀರಿದ ನಂತರ ಅವು ಆವರಿಸಿಕೊಂಡದ್ದೂ ಅಷ್ಟೇ ಸತ್ಯ. ಆದಾಗ್ಯೂ, ಅವರ ಕೆಲವು ಕೃತಿಗಳನ್ನು ಮಾತ್ರ ನಾನು ಓದಿರುವುದು. ‘ಮೈ ಮನಗಳ ಸುಳಿಯಲ್ಲಿ’ ಯ ಪ್ರಮುಖ ಪಾತ್ರ ಮಂಜುಳೆಯ ಪ್ರವೇಶವಾಗುವುದೇ ಶಾರಿ ಹಾಗೂ ಚಂದ್ರಿಯ ಪಾತ್ರಗಳ ವಿಸ್ತಾರದ ನಂತರ. ತನ್ನ ಕಥೆಯನ್ನು ತನ್ನದೇ ರೀತಿಯಲ್ಲಿ ಹೇಳುತ್ತಾ ಹೋಗುವ ಮಂಜುಳೆ ಓದಿದಂತೆ ಹೆಚ್ಚು ಆಪ್ತಳಾಗುತ್ತಾಳೆ, ಹೆಚ್ಚೆಚ್ಚು ಕಾಡುತ್ತಾಳೆ.
ಬದುಕಿನ ವಿವಿಧ ಹಂತಗಳ ಅನುಭವ ಮತ್ತು ವಯೋಸಹಜವಾದ ಕಾಮನೆಗಳನ್ನು ಮಂಜುಳೆಯ ಮೂಲಕ ಕಾರಂತರು ಚಿತ್ರಿಸಿರುವ ಪರಿ ಅನನ್ಯ. ‘ನಾನಿವುದು ಮೈ ಮಾರುವುದಕ್ಕೆ , ಮನಸ್ಸನಲ್ಲ’ ಎಂದು ನಂಬಿದ ಭವಾನಿಯ ಮಗಳು ತನಗೆ ತಿಳಿದೋ ತಿಳಿಯದೆಯೋ ಮೈ ಮನಸುಗಳ ಹೊಯ್ದಾಟದಲ್ಲಿ ಬೀಳುತ್ತಾಳೆ. ಬದುಕು ತನ್ನನ್ನೂ ತನ್ನ ಅಮ್ಮನನ್ನೂ ನಡೆಸಿಕೊಂಡ ರೀತಿಯ ಬಗ್ಗೆ ಯಾವುದೇ ಸ್ವಾನುಕಂಪ ತೋರದೆ ಮಂಜುಳೆ ಬರೆದ ಆತ್ಮವೃತ್ತಾಂತ ಕಾರಂತರ ಜೀವನ ದೃಷ್ಟಿಯನ್ನೂ ಸಾರುತ್ತದೆ.
ಸುಂದರಿ ಮತ್ತು ಉತ್ತಮ ಹಾಡುಗಾರ್ತಿಯಾದ ಮಂಜುಳೆಯನ್ನರಸಿ ಬರುವವರಿಗೆ ಕಡಿಮೆ ಇಲ್ಲ. ಆದರೆ ಭವಾನಿ ಹೇಳುವ ಜಾಗರೂಕತೆ ಎಲ್ಲೋ ಒಂದು ಕಡೆ ಎಲ್ಲ ಹೆಣ್ಣುಗಳಿಗಿರಬೇಕಾದ್ದೆ ಎನಿಸುತ್ತದೆ. ಜಾಗರೂಕಳಾದ ಮಂಜುಳೆ ಕಂಡಲೂರು ಪೈ ಗಳನ್ನು ಆರಿಸಿಕೊಂಡು . ಅವಳೇ ಬರೆದುಕೊಂಡಂತೆ ಮನಸೇ ಇಲ್ಲದ ದೇಹವಾಗುತ್ತಾಳೆ. ಮಾಮರವನ್ನು ತಬ್ಬ ಬೇಕಾಗಿದ್ದ ಮಲ್ಲಿಗೆ ಬಳ್ಳಿ ಹೊಂಗರುಕವನ್ನು ತಬ್ಬಿದ ಹಾಗಾಯ್ತೆಂದು ಕೊರಗುವ ಮಂಜುಳೆ ಅನುಕಂಪಕ್ಕೆ ಪಾತ್ರಳಾಗುತ್ತಾಳೆ. ಅಂದ ಚಂದಕ್ಕೆ, ಆಡಂಬರಕ್ಕೆ ಮಾರು ಹೋಗುವ ವಯಸ್ಸು , ಮನಸ್ಸು ಅದರಿಂದಾಗುವ ನೋವುಗಳಲ್ಲಿ ನಮ್ಮದೇ ಪ್ರತಿಬಿಂಬಗಳೂ ಕಾಣಬಹುದು. ನಾಟಕದ ಸಂಭಾಷಣೆಗಳಿಗೆ ಮಾರು ಹೋದ ಮಂಜುಳೆ ಕೊಕ್ಕರಣೆ ಸೀನನನ್ನಪ್ಪುತ್ತಾಳೆ. ಪರದೆಯ ಮೇಲಿನ ನಟ ನಟಿಯರಿಗೆ ಸೋಲುವ ಮನಸುಗಳಿಗೇನು ಬರ ? ಪೈಗಳಲ್ಲಿ ಕಾಣದ ನಯ ನಾಜೂಕುಗಳನ್ನು ಸೀನನಲ್ಲಿ ಕಂಡು, ಒಬ್ಬನ ಮೇಲಿನ ಸೇಡಿಗಾಗಿಯೇ ಇನ್ನೊಬ್ಬನನ್ನು ಮೆಚ್ಚುವ, ಆದರೆ ಅಲ್ಲೂ ಸೋಲನ್ನೇ ಕಾಣುವ ಹೆಣ್ಣಿಗೆ ಸಿಗುವುದು ಮತ್ತಷ್ಟುನೊವು. ತಾಯ್ತನಕ್ಕಾಗಿ ಬಹುವಾಗಿ ಹಂಬಲಿಸುವ ಮಂಜುಳೆಗೆ ಅದೂ ಕನಸಾಗೆ ಉಳಿಯುತ್ತದೆ.
ನೋವಿನ ಮಡುವಿನಲ್ಲಿದ್ದ ಮಂಜುಳೆಗೆ ಕೊಂಚ ಸಮಾಧಾನ ತರುವುದು ದುಗ್ಗಿ ,ಪಮ್ಮರ ದೈವಿಕ ಪ್ರೇಮ. ಇಲ್ಲಿ ದುಗ್ಗಿ ಕುರುಡಿಯಾಗಿರುವುದು ಕಾಕತಾಳೀಯವಲ್ಲವಷ್ಟೇ ? ಚಿಪ್ಪಿನಲ್ಲಿದ್ದ ಅನ್ನವನ್ನು ಹೆಂಡತಿಗೆ ಉಪಚರಿಸಿ ಉಣಿಸುವ ಗಂಡ , ತೃಪ್ತಿಯನ್ನು ಮುಖದಲ್ಲೇ ತೋರ್ಪಡಿಸುವ ಹೆಂಡತಿ , ಮಾಗಿದ ಆದರೆ ಇಳಿವಯಸಿನಲ್ಲೂ ಸೊರಗದ ಪ್ರೇಮ ಕಂಡು, ತನ್ನ ಮೈ-ಮನದ ತರ್ಕ ಅದೆಷ್ಟು ಅಪೂರ್ಣ ಎಂಬುದನ್ನು ಮನಗಾಣುತ್ತಾಳೆ. ಸುಬ್ರಾಯ ಉಳ್ಳೂರರಿಂದ ದೊರೆವ ಸಮಾಧಾನ ದೇಹದ ದಾಹವನ್ನು ಮರೆಸುವಲ್ಲಿ ಸೋಲುತ್ತದೆ. ಕಂಟ್ರಾಕ್ಟರ್ ಮಂಜಪ್ಪ , ಮೆಕ್ಕೆ ಮನೆಯವರು, ಪ್ರಾಯದ ಸನ್ಯಾಸಿ ಎಂಬೆಲ್ಲಾ ಪಾತ್ರಗಳು ಅವಳ ಹುಡುಕಾಟವನ್ನು ಕೊನೆಯಾಗಿಸುವುದಿಲ್ಲ
ಕಾದಂಬರಿಯ ಕಥೆ ಹೇಳಿ ಕೇಳುವಂಥದ್ದಲ್ಲ. ಕಾರಂತರಂತ ಕಾರಂತರನ್ನು ವಿಮರ್ಶೆ ಮಾಡುವಷ್ಟು ನನಗೆ ತಿಳಿದಿಲ್ಲ. ಆದ್ದರಿಂದ ‘ಮೈ ಮನಗಳ ಸುಳಿಯಲ್ಲಿ’ ಓದುವಾಗಿನ ಮತ್ತು ಓದಿದ ನಂತರದ ಅನುಭವಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಹೆಣ್ಣೊಬ್ಬಳ ಅಂತರಂಗದ ಸುಳಿಯ ಪದರುಗಳನ್ನು ಇಷ್ಟು ಸುಂದರವಾಗಿ ಬಿಡಿಸಿದ ಕೃತಿಯನ್ನು ನಾನಿನ್ನೂ ಓದಿಲ್ಲ. ತಾರುಣ್ಯದ ಭಾವದಲೆಯಲ್ಲಿ ಮಿಂದ ಹೆಣ್ಣು , ವೈಭೋಗಕ್ಕೆ, ದೇಹದ ಅಂದ ಚಂದಕ್ಕೆ ಎಚ್ಚರದಿಂದ್ದೇನೆಂಬ ಭ್ರಮೆಯಲ್ಲಿ ಮರುಳಾಗಿ ನಂತರ ಮಾಗುವ ಮಂಜುಳೆ, ತಾಳಿ ಕರಿಮಣಿಗಳಿಲ್ಲದೆಯೂ ‘ಗರತಿ’ಯಂತೆ ಬಾಳುವ ಭವಾನಿ , ಮಂಜುಳೆ ಮತ್ತವಳ ತಾಯಿಯ ವೃತ್ತಿಯನ್ನರಿತೂ ಅಂತಃಕರಣ ತೋರುವ ಅಡಿಗಳ ಪತ್ನಿ ಕಾವೇರಮ್ಮ, ಮೌನದಲ್ಲೂ ಮಾತಾಡುವ ಕುರುಡಿ ದುಗ್ಗಿ, ತನ್ನ ಗಂಡನನ್ನು ತನ್ನಿಂದ ಕಸಿದವಳು ಎಂಬುದು ತಿಳಿದಾಗ್ಯೂ ಮಂಜುಳೆಯನ್ನು ಆದರಿಸುವ ಉಳ್ಳೂರರ ಪತ್ನಿ ಲಕ್ಷ್ಮಿ , ಆಸೆಗಾಗಿ ಎಲ್ಲವನ್ನೂ ಪಣಕ್ಕೊಡ್ಡಿದ ಕಪಿಲಾ, ಅವಳದೇ ಮತ್ತೊಂದು ರೂಪವಾದ ಮಗಳು ಶಾರಿ , ಪ್ರಸ್ತುತ ತಲೆಮಾರಿನ ಪ್ರತಿನಿಧಿ ಚಂದ್ರಿ, ಹೆಣ್ಣನ್ನು ಕೇವಲ ದೇಹ ದಾಹಕ್ಕೆ ಬಳಸಿಕೊಳ್ಳುವ ಪೈ ಮತ್ತು ಕಂಟ್ರಾಕ್ಟರ್ ನಂತವರು, ಮನಸಿನಾಳಕ್ಕೆ ಇಳಿಯ ಬಯಸುವ ಉಳ್ಳೂರರು, ಪಕ್ಕವಾದ್ಯ ನುಡಿಸುತ್ತಲೇ ಎಲ್ಲ ಹಂತಗಳಲ್ಲೂ ಮಂಜುಳೆಯ ಪಕ್ಕ ನಿಲ್ಲುವ ಪದ್ಮನಾಭ, ನಾಟಕದ ಕೊಕ್ಕರಣೆ ಸೀನ, ಸಂಗೀತ ಕಲಿಸುವ ಬುವಾ, ಪತ್ನಿಯನ್ನು ಸದಾ ‘ಓ ಹೆಣ್ಣೇ’ ಎಂದೇ ಕೂಗುವ ಅಡಿಗಳಂತ ಗಂಡಸರು ……ಅದೆಷ್ಟು ಹೆಸರುಗಳು ಅದೆಷ್ಟು ಪಾತ್ರಗಳು ! ಎಲ್ಲರನ್ನೂ ನಾವು ನಮ್ಮ ಸುತ್ತಲೂ ಕಾಣಬಹುದು. ಬದುಕು ಕೂಡ ಹಾಗೆ ಅಲ್ಲವೇ ? ಬೆಂಕಿಗೆ ನೂಕಿದವರೊಡನೆಯೇ ಆತುಕೊಂಡು ಆದರಿಸಿದವರೂ ಇದ್ದಾರೆ.
ತಾನು ಹೇಳುವ ನೇರ ವಿಷಯಗಳನ್ನು ಬಿಟ್ಟು ಓದುಗನಲ್ಲೊಂದು ಚಿಂತನಾ ಲಹರಿಯನ್ನು ಹುಟ್ಟುಹಾಕುವುದು ಉತ್ತಮ ಕೃತಿಯ ಲಕ್ಷಣಗಳಲೊಂದು. ಅಗ್ನಿಗೆ ಏಳು ಬಿಟ್ಟು ಎಪ್ಪತ್ತು ಸುತ್ತು ಬಂದರೂ ಎರಡು ಜೀವಗಳು, ಬದುಕಿನ ನೊಗದ ಸಮಾನ ಭಾರ ಹೊರದಿದ್ದರೆ , ಗರತಿ ಏನು? ನನ್ನಂತ ವೇಶ್ಯೆ ಏನು? ಎಂದು ಪ್ರಶ್ನಿಸುವ ಮಂಜುಳೆ ಕಾರಂತರು ಕಡೆದಿಟ್ಟ ಹೆಣ್ಣು. ‘ಗರತಿ’ ಎಂಬ ಶಬ್ಧದಲ್ಲೇ ರತಿ ಶಬ್ದ ಬರಲು ಕಾರಣವೇನು ? ಗೆಳತಿಯೊಬ್ಬಳು ಹೇಳಿದ ಇದೇ ಕಾದಂಬರಿಯ ಸಾಲು “ಪ್ರಣಯದಲ್ಲಿ ಗಂಡು ಹೆಣ್ಣು ಇಬ್ಬರೂ ಯಾಚಕರೇ! ಭಿಕ್ಷೆ ನೀಡುವವರೂ ಪರಸ್ಪರ ಅವರೇ.ಇಲ್ಲಿ ಒಬ್ಬರು ಕೀಳಲ್ಲ; ಇನ್ನೊಬ್ಬರು ಮೇಲಲ್ಲ…”. ಎಂತೆಂತಾ ವಿಚಾರಗಳು.
ಹಿರಿಯ ವಿಮರ್ಶಕ ಕೆ.ವಿ.ನಾರಾಯಣ ಅವರು ಕಾರಂತರ ಕಾದಂಬರಿಗಳ ಶಿಲ್ಪವನ್ನು ಅಧ್ಯಯನ ಮಾಡುತ್ತಾ “ಕಾರಂತರ ಮಟ್ಟಿಗೆ ಕಾದಂಬರಿಯ ಶಿಲ್ಪವೆಂದರೆ , ಅದು ಜೀವನದ ಶಿಲ್ಪ.” ಎಂದು ಬರೆದಿದ್ದಾರೆ. ಓದಿದಾಗ ಈ ಸಾಲು ಅಷ್ಟಾಗಿ ಅರ್ಥವಾಗಿರಲಿಲ್ಲ. ಬದುಕಿನ ಶಿಲ್ಪ ಎಂದರೇನು ? ಉಳಿ ಪೆಟ್ಟು ಬಿದ್ದ ಕಲ್ಲು ಶಿಲ್ಪವಾಗಿ ಕಲಾಕೃತಿಯಾಗಿ ಅರಳಿದಂತೆ, ನಮ್ಮ ನಿರ್ಧಾರದ ಉಳಿ ಬದುಕೆಂಬ ಕಲಾಕೃತಿಯನ್ನು ಸೃಷ್ಟಿಸಬಹುದು. ಆದರೆ ಕಲ್ಲನ್ನು ಕಡಿದು ಸುಂದರ ಮೂರ್ತಿ ಮಾಡಿದಂತಲ್ಲ ಬದುಕಿನ ಶಿಲ್ಪವನ್ನು ಕೆತ್ತುವುದು, ಒಂದು ಕಡೆ ಕೆತ್ತಿ ಒಪ್ಪ ಮಾಡುವುದರೊಳಗೆ ಮತ್ತೊಂದು ಊನವಾಗಿರುತ್ತದೆ. ಓರೆ ಕೋರೆಗಳ ನಡುವೆಯೂ ಬದುಕನ್ನು ಸುಂದರವಾಗಿ ಕೆತ್ತ ಬಯಸುವ ಜೀವಗಳು ನಮ್ಮ ನಿತ್ಯ ಬದುಕಿನ ಭಾಗವಾಗಿರಲೂ ಸಾಕು. ಇಷ್ಟನ್ನು ತಿಳಿಯಪಡಿಸಿದ್ದು ಮೈ ಮನಗಳ ಸುಳಿಯಲ್ಲಿ ಈಜಿದ ಕಾರಂತರ ಮಂಜುಳೆ.
ಜೀವನದ ವಿವಿಧ ಹಂತಗಳಲ್ಲಿ ಹೆಣ್ಣು ಬಯಸುವ ಕಾಮ, ಪ್ರೀತಿ , ಪ್ರೇಮ, ಸಾಂತ್ವನ, ವಾತ್ಸಲ್ಯಗಳನ್ನ ಕಾರಂತರು ಅದ್ಭುತವಾಗಿ ಬರೆದಿದ್ದಾರೆ. ಯಾವುದೇ ಸಾಮಾನ್ಯ ಹೆಣ್ಣಿಗಿರಬಹುದಾದ ಕನಸು, ತುಮುಲ, ಹುಡುಕಾಟ , ತಾಳ್ಮೆಯ ಗುಣಗಳನ್ನು ಪರಿಣಾಮಕಾರಿಯಾಗಿ ಸಮಾಜದೆದುರು ಬಿಚ್ಚಿಡಲು ನಾಯಕಿಯ ವೃತ್ತಿ ಸಹಾಯಕಾರಿಯಾಗಿರಬಹುದು. ಬಂಧ, ಬಾಂಧವ್ಯಗಳ ಹುಡುಕಾಟದಲ್ಲಿ ತನ್ನನರಿವತ್ತ ಸಾಗುವ ಮಂಜುಳೆ ಎಲ್ಲ ಕಾಲಕ್ಕೂ ಸಲ್ಲುವ ಸ್ತ್ರೀ. ೧೯೭೦ರಲ್ಲಿ ಬರೆಯಲಾದ ಕಾದಂಬರಿ ಅದೆಷ್ಟು ಮುದ್ರಣ ಕಂಡಿದೆಯೋ ಗೊತ್ತಿಲ್ಲ , ನಾನು ಓದಿದ್ದು ಇತ್ತೀಚಿನ ಮುದ್ರಣಗಳಲ್ಲಿ ಐದನೆಯ ಮುದ್ರಣ. ಹೆಣ್ಣಿನ ತಾರುಣ್ಯದ ಕನಸುಗಳು , ಯವ್ವೌನದ ದುಡುಕುಗಳು, ತಾಯ್ತನದ ಹಂಬಲ, ಮಧ್ಯವಯಸಿನ ತುಮುಲ ಎಲ್ಲವನ್ನೂ ಬರೆದಾಗ ಬಹುಶಃ ಕಾರಂತಜ್ಜನ ವಯಸ್ಸು ಸುಮಾರು ೬೦ (ಹುಟ್ಟಿದ್ದು ೧೯೦೨ – ಕಾದಂಬರಿಯ ಮೊದಲ ಮುದ್ರಣ ೧೯೭೦).
ನನ್ನ ಮಟ್ಟಿಗೆ ಕಾದಂಬರಿಯೊಂದನ್ನು ಓದಿ ಮುಗಿಸಿದಾಗ, ಅದರ ಎಲ್ಲ ಪಾತ್ರಗಳಿಗೂ ನಾವೊಂದು ಚಹರೆಯನ್ನೂ, ವ್ಯಕ್ತಿತ್ವವನ್ನೂ ನಮ್ಮದೇ ಊಹೆಯಲ್ಲಿ ಕೊಟ್ಟುಕೊಳ್ಳಬಲ್ಲೆವಾದರೆ ,ಆ ಕೃತಿ ಓದಿದ್ದು ಸಾರ್ಥಕ. ಈ ಕೃತಿ ಪಾತ್ರಗಳಿಗೇನು ಬಸರೂರು , ಉಳ್ಳೂರು, ದೋಣಿ , ನದಿ, ಘಟ್ಟ ಎಲ್ಲಕ್ಕೂ ಚಹರೆ ಕೊಟ್ಟು, ಎಲ್ಲರಲ್ಲೂ ಅಡಗಿರಬಹುದಾದ ಮಂಜುಳೆಯ ಒಂದು ಮುಖವನ್ನು ತೋರಿಸಿದೆ. ಸ್ತ್ರೀಯೊಬ್ಬಳ ಬಗ್ಗೆ ಇಷ್ಟು ಚಂದಗೆ ಬರೆದ ಕಾರಂತಜ್ಜನಿಗೊಂದು ನಮನ.
 

‍ಲೇಖಕರು G

21 July, 2014

1 Comment

  1. Anonymous

    I too feel the same … thanks swarna ji.
    ನನ್ನ ಮಟ್ಟಿಗೆ ಕಾದಂಬರಿಯೊಂದನ್ನು ಓದಿ ಮುಗಿಸಿದಾಗ, ಅದರ ಎಲ್ಲ ಪಾತ್ರಗಳಿಗೂ ನಾವೊಂದು ಚಹರೆಯನ್ನೂ, ವ್ಯಕ್ತಿತ್ವವನ್ನೂ ನಮ್ಮದೇ ಊಹೆಯಲ್ಲಿ ಕೊಟ್ಟುಕೊಳ್ಳಬಲ್ಲೆವಾದರೆ ,ಆ ಕೃತಿ ಓದಿದ್ದು ಸಾರ್ಥಕ. ಈ ಕೃತಿ ಪಾತ್ರಗಳಿಗೇನು ಬಸರೂರು , ಉಳ್ಳೂರು, ದೋಣಿ , ನದಿ, ಘಟ್ಟ ಎಲ್ಲಕ್ಕೂ ಚಹರೆ ಕೊಟ್ಟು, ಎಲ್ಲರಲ್ಲೂ ಅಡಗಿರಬಹುದಾದ ಮಂಜುಳೆಯ ಒಂದು ಮುಖವನ್ನು ತೋರಿಸಿದೆ. ಸ್ತ್ರೀಯೊಬ್ಬಳ ಬಗ್ಗೆ ಇಷ್ಟು ಚಂದಗೆ ಬರೆದ ಕಾರಂತಜ್ಜನಿಗೊಂದು ನಮನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading