ಮತಧರ್ಮ ನಿರಪೇಕ್ಷ ನಾಡಹಬ್ಬ ಆಚರಣೆಯಾಗಲಿ
– ಪಂಡಿತಾರಾಧ್ಯ
ಮೈಸೂರಿನ ನಟರಾಜ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮದಾಸ್ ಅವರು `ನಗರದ ರಾಮಸ್ವಾಮಿ ವೃತ್ತದ ಐತಿಹಾಸಿಕ ಹಿನ್ನೆಲೆ ಬಹುಮಂದಿಗೆ ತಿಳಿದಿಲ್ಲ. ಆ ವೃತ್ತದ ಕಂಬವೊಂದರಲ್ಲಿದ್ದ ಬ್ರಿಟಿಷರ ಬಾವುಟವನ್ನು ಸುಟ್ಟ ಯುವಕ ರಾಮಸ್ವಾಮಿಯನ್ನು ಬ್ರಿಟಿಷರು ಗುಂಡಿಕ್ಕಿ ಕೊಂದರು’ ಎಂದು ಹೇಳಿದರೆಂದು ವರದಿಯಾಗಿದೆ(ಆಂದೋಲನ ೨೧ ನವೆಂಬರ್ ೨೦೧೨).
ರಾಮಸ್ವಾಮಿ ಬ್ರಿಟಿಷರ ವಿರುದ್ಧವೇನೂ ಪ್ರತಿಭಟಿಸಿ ಅವರ ಗುಂಡಿಗೆ ಬಲಿಯಾಗಲಿಲ್ಲ. ಅವನು ಪ್ರತಿಭಟಿಸಿದ್ದು ಮೈಸೂರು ಅರಸರ ವಿರುದ್ಧ. ಅದರ ಪರಿಣಾಮವಾಗಿ ಮೈಸೂರು ಜಿಲ್ಲಾಧಿಕಾರಿಯ ಗುಂಡಿಗೆ ಬಲಿಯಾದ. ಕೆ.ಎಂ. ಸೀತಾರಾಮಯ್ಯಂಗಾರ್ ಅವರು ಬರೆದಿರುವ `ಸ್ವಾತಂತ್ರ್ಯ ಹೋರಾಟಗಾರರು’ ಲೇಖನದಲ್ಲಿ ಈ ಬಗ್ಗೆ ವಿವರಗಳಿವೆ(ಮೈಸೂರು ದಶ೯ನ ಸಂ ೧, ಕರಾಮುವಿ ಪ್ರಸಾರಾಂಗ ಮೈಸೂರು ೨೦೧೧ ಪು. ೧೮೩-೯೨):
“೧೫-೮-೧೯೪೭ ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಮಹಾರಾಜರು ರಾಜ್ಯದ ಜನತೆಗೆ ಸ್ವಾತಂತ್ರ್ಯ ನೀಡಲಿಲ್ಲ. ರಾಜ್ಯವನ್ನು ಸ್ವತಂತ್ರ ರಾಷ್ಟ್ರವಾಗಿ ತಾವೇ ಆಳುವುದಾಗಿ ಘೋಷಿಸಿದರು. ಹೀಗಾಗಿ ಪ್ರಜಾತಂತ್ರ ಸ್ಥಾಪನೆಗಾಗಿ ಮಹಾರಾಜರ ವಿರುದ್ಧ `ಮೈಸೂರು ಚಲೋ’ ಚಳವಳಿ ಆರಂಭಿಸಬೇಕಾಯಿತು. ಈ ಚಳವಳಿ ೩-೯-೧೯೪೭ರಿಂದ ೨೪-೧೦-೧೯೪೭ರವರೆಗೂ ನಡೆಯಿತು. ಈ ಚಳವಳಿಯಲ್ಲಿ ರಾಜ್ಯಾದ್ಯಂತ ೩೭ ಜನರು ಗುಂಡಿಗೆ ಬಲಿಯಾಗಿ ಹುತಾತರಾದರು. ಮೈಸೂರು ನಗರದಲ್ಲೇ ಮೂರು ಜನ ಗುಂಡಿಗೆ ಎದೆ ಒಡ್ಡಿದರು…
“೧೩-೯-೧೯೪೭ರಂದು ಈಗಿನ ರಾಮಸ್ವಾಮಿ ವೃತ್ತ ಇರುವ ಕಡೆ ಐದು ರಸ್ತೆಗಳಿಂದಲೂ ವಿದ್ಯಾಥಿ೯ಗಳು ಶಾಲಾ ಕಾಲೇಜು ತ್ಯಜಿಸಿ ಮೆರವಣಿಗೆಯಲ್ಲಿ ಬಂದು ನಿಂತರು. ವೃತ್ತದ ತುಂಬ ಪೊಲೀಸರೂ, ಆರೆ ಸೈನಿಕರೂ, ಅಧಿಕಾರಿಗಳೂ ತುಂಬಿದ್ದರು. ಜಿಲ್ಲಾಧಿಕಾರಿ ನಾಗರಾಜರಾಯರು ವಿದ್ಯಾಥಿ೯ಗಳನ್ನು ಚದುರಲು ತಿಳಿಸಿದರೂ ಯಾರೂ ಚದುರಲಿಲ್ಲ. ಲಾಠಿಚಾಜ್೯ ಮಾಡಿದರೂ ಹುಡುಗರು ಎದೆಗುಂದದೆ ನಿಂತೇ ಇದ್ದರು. ಘೋಷಣೆ ಕೂಗತೊಡಗಿದರು. ಕುಪಿತರಾದ ಜಿಲ್ಲಾಧಿಕಾರಿ ಗೋಲಿಬಾರ್ ಮಾಡಲು ಅಜ್ಞೆ ಇತ್ತರು. ಕೇವಲ ೪-೫ ಅಡಿ ದೂರದಲ್ಲಿ ನಿಂತಿದ್ದ ಹುಡುಗರ ವೆುಲೆ ಗುಂಡು ಹಾರಿಸಲು ಪೊಲೀಸರು ಹಿಂತೆಗೆದರು. ಕುಪಿತರಾದ ಜಿಲ್ಲಾಧಿಕಾರಿ ತಾವೇ ರಿವಾಲ್ವರಿನಿಂದ ಗುಂಡು ಹಾರಿಸಿಯೇ ಬಿಟ್ಟರು. ಒಂದು ಗುಂಡು ರಾಮಸ್ವಾಮಿ ಎಂಬ ಹಾಡ್ವಿ೯ಕ್ ಶಾಲೆಯ ವಿದ್ಯಾಥಿ೯ಗೆ ಬಡಿದು ಆವನು ಸ್ಥಳದಲ್ಲೇ ಮೃತನಾದ. ಮತ್ತೆರಡು ಗುಂಡು ಕಡಕೊಳದಿಂದ ಚಾಪೆ ಮಾರಲು ಬಂದಿದ್ದ ತೋರನಾಯ್ಕನಿಗೂ, ಏನೂ ಅರಿಯದೆ ಗುಂಪಿನಲ್ಲಿದ್ದ ರಂಗ ಎಂಬುವವನಿಗೂ ತಗುಲಿ ಅವರಿಬ್ಬರೂ ಸ್ಥಳದಲ್ಲೇ ಮೃತರಾದರು. ಸ್ವಾತಂತ್ರ್ಯಾನಂತರ ಆ ವೃತ್ತಕ್ಕೆ ರಾಮಸ್ವಾಮಿಯ ನೆನಪಿನಲ್ಲಿ ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಗಿದೆ…
“ಕಡೆಗೆ ಮಹಾರಾಜರು ರಾಜ್ಯವನ್ನು ಭಾರತ ಸರಕಾರದಲ್ಲಿ ವಿಲೀನಗೊಳಿಸಲು ಒಪ್ಪಿದರು. ೨೪-೧೦೧೯೪೭[ವಿಜಯದಶಮಿಯಂದು] ಮೈಸೂರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ. ಚಂಗಲರಾಯರೆಡ್ಡಿ(ಕೆ.ಸಿ. ರೆಡ್ಡಿ) ಅವರಿಗೆ ಅಧಿಕಾರ ವಹಿಸಿಕೊಟ್ಟರು. ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆದರು”.
ಆಗಸ್ಟ್ ೧೫ರಂದು ಭಾರತ ಒಕ್ಕೂಟದಲ್ಲಿ ಮೊಟ್ಟಮೊದಲಿಗೆ ಪ್ರತಿರೋಧವಿಲ್ಲದೆ ವಿಲೀನವಾದುದು ಪಟವಧ೯ರ ಜಮಖಂಡಿ ಸಂಸ್ಥಾನ. ಹೈದರಾಬಾದ್ ಪ್ರದೇಶ ಸೆಪ್ಟೆಂಬರ್ ೧೮ರವರೆಗೆ ಕಾಯಬೇಕಾಯಿತು. ಮೈಸೂರು ಅಕ್ಟೋಬರ್ ೨೪ರವರೆಗೆ ಪ್ರತಿಭಟನೆಗಳನ್ನು ನಡೆಸಬೇಕಾಯಿತು. ಆದ್ದರಿಂದ ಸಾಮ್ರಾಜ್ಯಶಾಹಿಯ ಪಳೆಯುಳಿಕೆಯಾದ ದಸರಾವನ್ನು ಸರಕಾರವೇ ನಾಡಹಬ್ಬವೆಂದು ಆಚರಿಸುತ್ತಿರುವುದು ಅಥ೯ಹೀನವಾಗಿದೆ. ಇತಿಹಾಸ ಮತ್ತು ಸಂಪ್ರದಾಯಗಳಲ್ಲಿರದಿದ್ದ ಹಾಗೂ ಒಂದು ಧಮ೯ದ ನಂಬಿಕೆಯ ದೇವತೆಯಾದ ಚಾಮುಂಡಿಯನ್ನು ನಾಡದೇವಿಯೆಂದು ಅಂಬಾರಿಯಲ್ಲಿಟ್ಟು ವೆುರೆಸುವುದು ಮತಧಮ೯ನಿರಪೇಕ್ಷ ಪ್ರಜಾಪ್ರಭುತ್ವ ತತ್ತ್ವಗಳಿಗೂ ವಿರುದ್ಧವಾಗಿದೆ. ಅದರ ಬದಲು ಅರಸೊತ್ತಿಗೆಯ (ದಸರಾದ) ಮುಕ್ತಾಯವೂ ಪ್ರಜಾಪ್ರಭುತ್ವ ಸ್ಥಾಪನೆಯಾದ ದಿನವೂ ಆದ ಅಕ್ಟೋಬರ್ ೨೪ರಂದು ಪ್ರಜಾಪ್ರಭುತ್ವ ಸ್ಥಾಪನೆಯ ದಿನವನ್ನು ಆಚರಿಸಬೇಕು. ಅಂದಿನಿಂದ ನವೆಂಬರ್ ೧ರ ಕನ್ನಡ ರಾಜ್ಯೋತ್ಸವ ದಿನವರೆಗೆ ಯಾವುದೇ ಧಮ೯ದ (ಭುವನೇಶ್ವರಿ, ರಾಜರಾಜೇಶ್ವರಿ, ಚಾಮುಂಡೇಶ್ವರಿ ಇತ್ಯ್ಯಾದಿ) ಸೋಂಕೂ ಇಲ್ಲದ ಮತಧಮ೯ನಿರಪೇಕ್ಷ ಪ್ರಜಾಪ್ರಭುತ್ವದ ನಾಡಹಬ್ಬವನ್ನು ಆಚರಿಸಬೇಕು. ಈ ಬಗ್ಗೆ ನಾಡಿನ ಪ್ರಜ್ಞಾವಂತರು, ಸರಕಾರ ಚಿಂತಿಸಬೇಕೆಂದು ವಿನಂತಿಸುತ್ತೇನೆ.






ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಜೈಲಿನಲ್ಲಿದ್ದ ಕಳ್ಳ ಕೊಲೆಗಾರರೆಲ್ಲಾ ಅನಂತರ ಓರಾಟಗಾರರಾಗಿ ಎಲ್ಲಾ ಸವಲತ್ತು ಸೂರೆಗೊಂಡ ಕತೆ ಕೇಳಿದ್ದೇನೆ. ಇದು ಇಡಿಯ ಹೋರಾಟವನ್ನೇ ಮತಾಂತರ ಮಾಡಿ ಸತ್ತವರೂ ಖಳರೂ ಏಕಕಾಲಕ್ಕೆ ಉದಾತ್ತರಾದ ವಿಚಿತ್ರ. ಮೂವತ್ತೇಳು ಮಂದಿಯನ್ನು ಕೊಲೆಮಾಡಿದವರು `ಯಾರಿಂದ ಸ್ವಾತಂತ್ರ್ಯ’ ಎಂದು ಪ್ರಶ್ನೆ ಏಳದಂತೆ ಇತಿಹಾಸವನ್ನು ಮರೆ ಮಾಡಿ, ಇಂದಿಗೂ ಗೌರವಾನ್ವಿತರಾಗಿ ಉಳಿದ ಪ್ರಸಂಗ ಆಶ್ಚರ್ಯ, ಪರಮಾಶ್ಚರ್ಯ.