ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಲಿಗೆ

ಆದಿತ್ಯ ಪ್ರಸಾದ್ ಪಾಂಡೇಲು

ಸಂತಾಪಗಳು ನೆಪಗಳಿಗಷ್ಟೆ
ಆರೈಕೆ ಹಾರಿಕೆಯ ತೋರಿಕೆಗಳಂತೆ
ಬೆಚ್ಚನೆಯ ಮನೆಗಳಲಿ ಹಬೆಯಾಡುವ ಚಹಾಗಳ
ನಡುವೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನಮಗೆ
ತಿಳಿದೀತೆ ಕಾಲ ಬಿರುಕುಗಳ ದೀರ್ಘ ಅರ್ಥ!

ಬೆಳಗ ಹೊತ್ತಿಗೂ ಚುಕ್ಕಿ ಬೆಳಕು
ಓರೆಗೆ ಕಾಣುವ ಖಾಲಿ ಒಲೆಯ ಭೀಕರ ನೆರಳು
ತುಂಬಿದ ಚೀಲಗಳಲ್ಲಿ ಸೋರಿ ಹೋದ ನಿದಿರೆಗಳು
ನಾಳೆಗೂ ಸುಡಲು ಕೈ ಕಾಲಿದೆ
ಹೊಟ್ಟೆಗೆ ಕಣ್ಣೀರು ಅದ್ದಿದ ಬಟ್ಟೆಯಿದೆ

ಈಗ ಬೀಳುವ ಕನಸುಗಳಿಗೆಲ್ಲಾ ಉತ್ತರಗಳೇ ಸಿಗುತ್ತಿಲ್ಲ
ಹಳಸಿದ ಮಾತಿನೊಳಗೆ ಕಸವ ಹೆಕ್ಕಿ
ರಸ ಸಿಕ್ಕಿದೆಂತು ಹಾಯಾಗಿ ಚಾಪೆ ಬಿಡಿಸಿದವನು
ನಿದ್ದೆ ಯಾಕೆ ಬಾರದೆಂದು ಯೊಚಿಸುವುದನ್ನೂ ಮರೆತಂತಿದೆ!

ಕೆತ್ತ ಹೊರಟಿರುವ ಶಿಲ್ಪಿಗೂ ಅರಿವಿರಲಿ
ವಿಗ್ರಹದ ಕಳೆ ಮೊಗದ ನಗುವಿಗೆ ಮಾತ್ರ ಸೀಮಿತವಲ್ಲ
ಒಳಗು ಬತ್ತಿ ಹೊಗಿರಲು ಹೊರಗ ನಗುವಿನ ಗೆರೆ
ಮರಳು ಕಾಡೊಳು ಕರಿಮೋಡಗಳು ಸುಂಯ್ಯನೆ ಬೀಸಿ ಹೋದಂತೆ
ಮಳೆ ಬರಲು ವರುಷಗಳೇ ಬೇಕು…

ಆದಿತ್ಯ ಪ್ರಸಾದ್ ಪಾಂಡೇಲು : ವೃತ್ತಿಯಲ್ಲಿ ಎಂಜಿನೀಯರ್. ಪ್ರವೃತ್ತಿಯಲ್ಲಿ ಕವಿ ಮತ್ತು ರಂಗನಟ

‍ಲೇಖಕರು Avadhi

18 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading