ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಮಾಟದಿಂದ ಸಾಕಷ್ಟು ವ್ಯಾಪಾರ ಮಾಡಕೋಬೌದು ಅಂತ ಅವರಿಗೆ ಅನಿಸಿತ್ತು..

– ಹನುಮ೦ತ ಹಾಲಿಗೇರಿ   ಮೊಳಕೆ ಹಣ್ಣಾದುದು… ಈ ಕೃತಿಯ ರಚನೆ ಬಗ್ಗೆ ತಿಳಿದುಕೊಂಡ ನನ್ನ ಕೆಲ ಮಿತ್ರರು ‘ವೇಶ್ಯೆಯರ ಬದುಕಿನ ಬಗ್ಗೆ ಬರೆಯುವಷ್ಟು ಅನುಭವಗಳನ್ನು ಈ ವಯಸ್ಸಿನಲ್ಲಿಯೇ ದಕ್ಕಿಸಿಕೊಂಡಿದ್ದಿಯಾ’ ಎಂದು ಹುಬ್ಬುಹಾರಿಸಿದವರು, ಮಡಿವಂತಿಕೆಯಿಂದ ಮೂಗು ಮುರಿದವರು ಹಲವು ಜನ. ಅವರಿಗುತ್ತರವಾಗಿ ಈ ಬರಹ. ಅತ್ಯಂತ ಹೆಚ್ಚು ಲೈಂಗಿಕ ಕಾರ್ಯಕರ್ತರು, ದೇವದಾಸಿಯರನ್ನು ತನ್ನೆದೆಯ ಹುಣ್ಣಿನಲ್ಲಿ ತುಂಬಿಕೊಂಡಿರುವ ಬಾಗಲಕೋಟೆ ನನ್ನ ಜಿಲ್ಲೆ. ರಾಜ್ಯ ಮಹಿಳಾ ಆಯೋಗದ ಸಮೀಕ್ಷೆಯ ಪ್ರಕಾರ ನನ್ನ ಜಿಲ್ಲೆಯಲ್ಲಿ 17 ಸಾವಿರ ಎಚ್ಐವಿ ಮತ್ತು ಏಡ್ಸ್ ಪೀಡಿತರಿದ್ದಾರೆ. ತಮ್ಮ ಹರೆಯದ ಕಾಲದಲ್ಲಿ ತಮ್ಮ ಮನೆಯನ್ನು ಬಿಟ್ಟು ಮಾಯವಾಗುತ್ತಿದ್ದ ನನ್ನೂರು ಮತ್ತು ನೆರೆಯ ಹಳ್ಳಿಗಳ ದೇವದಾಸಿಯರು ಎಲ್ಲಿ ಹೋಗಿ ಸೇರುತ್ತಿದ್ದರು ಎಂಬುದು ನನ್ನ ಬಾಲ್ಯದಲ್ಲಿ ಕಾಡಿಸುತ್ತಿದ್ದ ಬಹುಮುಖ್ಯ ಪ್ರಶ್ನೆಯಾಗಿತ್ತು. ಮುಂದೆ ಹೊಟ್ಟೆ ಹೊರೆಯಲು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಟ್ಟ ಎನ್ಜಿಓ ಒಂದರಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗದಗ, ಕೊಪ್ಪಳ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಎಚ್ಐವಿ, ಏಡ್ಸ್ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕ್ರಿಯಾಶೀಲವಾಗಿರುವ ಎನ್ಜಿಓಗಳ ಸಂಪರ್ಕದಿಂದಾಗಿ ಈ ಪ್ರಶ್ನೆಗೆ ಅಸ್ಪಷ್ಟವಾದ ಉತ್ತರ ಸಿಗುತ್ತಾ ಹೋಯಿತು. ಈ ಪ್ರಶ್ನೆಯ ಚುಂಗನ್ನು ಹಿಡಿದು ಎನ್ಜಿಓ ಸಹದ್ಯೋಗಿಗಳಿಗೆ ಅಂಗಲಾಚಿ, ಹುಬ್ಬಳ್ಳಿಯ ದಂಧೆ ಮನೆಗಳಿಗೆ ಲೈಂಗಿಕ ಕಾರ್ಯಕರ್ತರ ಪ್ರತಿಭಟನಾ ಸ್ಥಳಗಳಿಗೆ, ಅಲೆದಾಡಿದ್ದೂ ಇದೆ. ಬೆಂಗಳೂರಿನ ಸಂಗಮ ಕಚೇರಿಗೆ ಹೋಗಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂದರ್ಶನ ನಡಿಸಿದ್ದಿದೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾಕರ್ೆಟ್ಗಳ ರಸ್ತೆಗಳಲ್ಲಿ ಸಂಕೋಚ ತೊರೆದು ಅಡ್ಡಾಡಿದ್ದೂ ಇದೆ. ಇಲ್ಲಿ ನಾನು ಲೈಂಗಿಕವೃತ್ತಿ ಸರಿ ಅಥವಾ ತಪ್ಪು ಎಂದು ವಾದಿಸಲು ಹೋಗಿಲ್ಲ. ಈ ಕೃತಿ ಓದಿದ ನಂತರ ನಿಮ್ಮೊಳಗಡೆ ಮೂರ್ತಗೊಳ್ಳುವ ತೀಮರ್ಾನಕ್ಕೆ ನೀವೆ ಜವಾಬ್ದಾರರು! ಲೈಂಗಿಕ ವೃತ್ತಿ ಜಗತ್ತಿನಲ್ಲಿ ತುತ್ತು ಅನ್ನಕ್ಕಾಗಿ ಕಾರ್ಯಕತರ್ೆಯರು ನಡೆಸುವ ನಿರಂತರ ಹೋರಾಟದ ಬದುಕನ್ನು ವಿವರಿಸುವ ಕೆಲಷವನ್ನಷ್ಟೆ ಮಾಡಿದ್ದೇನೆ. ಇದು ಗರ್ಭಗಟ್ಟುವ ಸಮಯದಲ್ಲಿ ನನಗನ್ನಿಸಿದ್ದೇನೆಂದರೆ; ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ-ನೀರಡಿಕೆಯಷ್ಟೆ ಮೈಥುನವು ಪ್ರಾಥಮಿಕ ಅಗತ್ಯ ಮತ್ತು ನಿಸರ್ಗ ನಿಯಮ. ಅದನ್ನು ಬಂಧಿಸಲು ಹೋದಷ್ಟು ಅಪಾಯ ಹೆಚ್ಚು. ಬಂಧಿಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವತರ್ುಲದಲ್ಲಿ ಸಿಲುಕುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಇದೆಲ್ಲದಕ್ಕೂ ಅವಕಾಶವಾಗದೆ ಅವರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ. ಈ ವೃತ್ತಿಯ ಬಗ್ಗೆ ನನ್ನೊಳಗಿದ್ದ ತಹತಹಿಕೆಯನ್ನು ‘ಕತ್ತಲಗರ್ಭದ ಮಿಂಚು’ ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ ಆ ಕಥೆಯನ್ನು ಕರವೇ ನಲ್ನುಡಿ ಪತ್ರಿಕೆಯ ಕಥಾ ಸ್ಪಧರ್ೆಗೆ ಕಳುಹಿಸಿಕೊಟ್ಟಿದ್ದೆ. ತೀಪರ್ುಗಾರರ ಮೆಚ್ಚುಗೆಗೆ ಪಾತ್ರವಾಗಿ ಆ ಕಥೆ ಪ್ರಕಟವೂ ಆಯಿತು. ಆಗ ರಾಜ್ಯಾದ್ಯಂತ ಈ ಕಥೆಯ ಬಗ್ಗೆ ಬಂದ ಪ್ರತಿಕ್ರಿಯೆಗಳು ನನ್ನನ್ನು ದಿಗ್ಮೂಡಗೊಳಿಸಿದವು. ಲೈಂಗಿಕ ವೃತ್ತಿಯಲ್ಲಿರುವ ನಾಲ್ಕಾರು ಮಹಿಳೆಯರೇ ನನ್ನೊಂದಿಗೆ ಮಾತನಾಡಿ ‘ಸತ್ಯ ಬರೆದಿದ್ದಿರಿ’ ಎಂದು ಅತ್ತು ಕರೆದು ಮಾಡಿದರು. ಇದನ್ನು ವಿಸ್ತರಿಸಿ ಕಾದಂಬರಿಯ ಚೌಕಟ್ಟನ್ನು ತೊಡಿಸಬೇಕೆನಿಸಿತು. ಬರೆದು ಐದಾರು ತಿಂಗಳು ಗತಿಸಿದ್ದರೂ ಪ್ರಕಟಿಸಬೇಕೋ, ಬೇಡವೋ ಎಂಬ ಒಂದು ಬಗೆಯ ಕೀಳರಿಮೆಯ ಗೊಂದಲದಲ್ಲಿ ಇದ್ದೆ. ಇದನ್ನು ಓದಿದ ಮಿತ್ರರು ಧೈರ್ಯ ತುಂಬಿದ್ದರಿಂದ ಈ ಕೃತಿ ಹೊರ ಬರುತ್ತಿದೆ. ವೇಶ್ಯಾವೃತ್ತಿಯ ಬಗ್ಗೆ ಕನ್ನಡದಲ್ಲಿ ಇದೇ ಮೊದಲ ಕೃತಿಯೇನಲ್ಲ. ಈ ಮೊದಲು ಬಸವರಾಜ ಕಟ್ಟಿಮನಿಯವರ ‘ಬೀದಿಗೆ ಬಿದ್ದವಳು’, ಎಂ.ಕೆ.ಇಂದಿರಾ ಅವರ ‘ಗೆಜ್ಜೆಪೂಜೆ’, ತರಾಸು ಅವರ ‘ಮಸಣದ ಹೂವು’ ಸೇರಿದಂತೆ ಇನ್ನೂ ಹಲವಾರು ಕೃತಿಗಳು ಬಂದಿವೆ. ತನ್ನೊಳಗೆ ಸಾವಿರಾರು ಕಥಾ ವಸ್ತುಗಳನ್ನು ಸದಾ ಹುಟ್ಟಿಸುವ ಫಲವಂತಿಕೆಯ ಭೂಮಿ ಈ ವೇಶ್ಯಾ ಜಗತ್ತು. ಈ ಜಗತ್ತಿನ ವರ್ತಮಾನದ ತಲ್ಲಣಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ ಅಷ್ಟೇ.

ಪುಸ್ತಕದ ಒ೦ದು ಅಧ್ಯಾಯ ನಿಮಗಾಗಿ : ಸವದತ್ತಿ ಯಲ್ಲವ್ವನಿಗೆ ನನ್ನವ್ವಳನ್ನು ಜೋಗತಿಯನ್ನಾಗಿ ಬೀಡಲಾಗಿತ್ತು. ನಮ್ಮಜ್ಜ ಅಂದ್ರ ನಮ್ಮವ್ವನ ಅಪ್ಪನ ಕಾಲದೊಳಗ ಕೂಲಿ ಭಾಳ ತ್ರಾಸ ಇತ್ತಂತ. ನಮ್ಮಜ್ಜನು ಚಪ್ಪಲಿ ಹೊಲೆಯೋ ಕೆಲಸಾ ಮಾಡತಿದ್ದನಂತೆ. ನಮ್ಮಜ್ಜನಿಗೆ ನಮ್ಮವ್ವ ಹಿರಿಮಗಳು. ಆಗಿನ ಕಾಲಕ್ಕ ನಮ್ಮಜ್ಜ 50 ಪೈಸಾ ಖಚರ್ು ಮಾಡಿ ಒಂದು ಜೊತಿ ಚಪ್ಪಲಿ ಹೊಲೀತಿದ್ದನಂತ. ಅದನ್ನ ಒಂದ್ರೂಪಾಯಿಗೆ ಮಾರಾಂವ. ಹಿಂಗ ಚಪ್ಪಲಿ ಹೊಲಿಯೋದಕ್ಕ ಮತ್ತ ಹರದ ಚಪ್ಪಲಿಗಳನ್ನು ರಿಪೇರಿ ಮಾಡೋದ ಬಾಗಲಕೋಟಿಯೊಳಿಗಿನ ಹಳ್ಳಿಗಳನ್ನೆಲ್ಲಾ ಅಡ್ಡಾಡಾಂವ. ಅಂವನ ಕೂಡ ನಾನು ಒಮ್ಮೊಮ್ಮಿ ಹಳ್ಳಿಗೊಳಿಗಿ ಹೊಕ್ಕಿದ್ನಿ. ಇಗೆಲ್ಲ ನಮ್ಮಜ್ಜನ ಪರಿಸ್ಥಿತಿ ನೋಡಿ ನಾನು ಸತ್ರೋ ಈ ಕಾಲ್ಮರಿ ಹೊಲಿಯೋ ಕೆಲಸ ಮಾಡಬಾರದು ಅನಕೊಳ್ತಿದ್ದೆ. ಊರ ಅಗಸಿ ಬಾಗಿಲ ಮುಂದೆ ಜನ ಅಡ್ಡಾಡೋ ದಾರಿಯೊಳಗ ಒಂದು ಕುಡಿಕ್ಯಾಗ ನೀರು, ಕಟ್ಟಿಗೆ ಕೊಡ್ಡ, ಹದ ಮಾಡಿದ ಚರ್ಮ, ಸಣ್ಣಾನು ನಟ್ಟು, ಬೋಲ್ಟು, ಚಾಕು, ಕತ್ರಿ, ಮುಂತಾದ ತನ್ನ ಸಾಮಾನು ಸರಂಜಾಮು ತೊಗೊಂಡ ನಮ್ಮಜ್ಜ ಹಳ್ಳಿಕಡೆ ಹೊಂಟ ಬಿಡತಿದ್ದ. ಕೆಲವೊಮ್ಮೆ ನಾನು ಅಜ್ಜನ ಸಾಮಾನು ಸರಂಜಾಮು ಚೀಲದೊಂದಿಗೆ ನಾನು ಹೆಗಲೇರಿರುತ್ತಿದ್ದೆ. ಮ್ಯಾಲ ಉರಿಯೋ ಸೂರ್ಯ. ಮಗ್ಗಲದೊಳಗ ನಮ್ಮಜ್ಜನ ಮುಖ ನೋಡಿ ಥೂ ಎಂದು ಎಂಜಲು ಉಗುಳಿ ಮೂಗು ಮುರಕೊಂಡ ಅಡ್ಡಾಡೋ ಜನ. ಆಗೆಲ್ಲಾ ಚಪ್ಪಲಿ ರಿಪೇರಿ ಮಾಡಿದರ ಜನಾ ರೊಕ್ಕ ಕೊಡತಿರಲಿಲ್ಲ. ನಿನ್ನೆ ಮೊನ್ನಿ ಉಳಿದಿದ್ದ ಕಟಕ್ ರೊಟ್ಟಿ, ಅದರ ಮ್ಯಾಲ ಹಿಟನಾಶಿ ಪಲ್ಯೆ ಹಾಕಿ ದೂರ್ನಿಂದ ನಮ್ಮಜ್ಜನ ಕೈಗೆ ಒಗೆಯೋರು, ಅಜ್ಜ ಚಪ್ಪಲಿ ಹೊಲಿಯೋ ಕೈಗಳಿಂದಲೇ ಅದನ್ನು ಹಿಡಿದು ಮಡಚಿ ಗೋಣಿ ಚೀಲದೊಳಗ ತುರುಕತ್ತಿದ್ದ. ಸಂಜಿ ಮಟಾ ಒಂದ ಜಾಗಾದೊಳಗ ಕುಂತ ಆಮ್ಯಾಲ ಸಂಜಿ ಮುಂದ ಅಂವ ಮತ್ತ ನಾನು ಹಳಸಿದ ರೊಟ್ಟಿ ಪಲ್ಯೆ ತಿಂದು ಊರ ಕಡೆ ಮುಖ ಮಾಡುತ್ತಿದ್ದೆವು. ಉಳಕಲ ರೊಟ್ಟಿ ಮಡಚಿ ಬಗಲೊಳಗ ಇಟ್ಟಕೊಳ್ಳತಿದ್ದ. -ಅಜ್ಜಿ, ಮಕ್ಕಳು, ಮೊಮ್ಮಕ್ಕಳಿಗಾಗಿ. ಹೊಸ ಚಪ್ಪಲಿ ಮಾರಾಟ ಆದ್ರ ಮಾತ್ರ ರೊಕ್ಕ ಕೈಗೆ ಬರತಿದ್ವು. ಬಂದ ರೊಕ್ಕದಾಗ ಜ್ವಾಳಾ ತರಾಂವಾ. ಅದ್ನ ಬೀಸುಕಲ್ಲಾಗ ಬೀಸಿ ನುಚ್ಚು ಮಾಡಿಕೇಸಿ ತಪಲೀನಾಗ ಇಟ್ಟು ಕುದಿಸಿ ಉಣ್ಣುಸುತಿದ್ದಳು ಅಜ್ಜಿ. ಸ್ವಂತ ಊರಾಗ ಮಾತ್ರ ಯಾರು ರೊಕ್ಕನೂ ಕೊಡ್ತಿರಲಿಲ್ಲ, ಜ್ವಾಳನೂ ಕೊಡ್ತಿರಲಿಲ್ಲ. ಆಗ ಊರಾಗ ಆಯಾ ಕೊಡು ಪದ್ದತಿ ಚಾಲ್ತಿಯಲ್ಲಿತ್ತು. ಆಯಾ ಅಂದ್ರ ಊರ ರೈತಗಾರಿಕಿ ಮನಿಗಳೊಳಗ ರಾಶಿ ಮಾಡೋ ಟೈಮ್ನೊಳಗ, ಅವರು ರಾಶಿ ಮಾಡೋ ಕಣಕ್ಕ ಹೋಗಬೇಕಾಗತಿತ್ತು. ಅವು ಸುಗ್ಗಿ ದಿನ ಆಗಿರೋದ್ರಿಂದ ಸಹಜವಾಗಿಯೆ ಅಜ್ಜ ಕೂಡ ರಾಶಿ ಮಾಡಾಕ ಕೈಗೂಡತಿದ್ದ. ಹಗಲೆಲ್ಲಾ ದುಡಿದ ಮ್ಯಾಲ ಒಂದೆರಡು ಮರ ಅಥವಾ ಒಂದರೆಡು ಸೇರು ಜ್ವಾಳ ಇಸಕೊಂಡ ಮನಿಗೆ ಬರಬೇಕಾಗತಿತ್ತು. ಅವರು ಕೊಟ್ಟಷ್ಟ, ಅಜ್ಜ ಇಸಗೊಂಡಷ್ಟ ಸೈ. ಈ ಹಿಂದ ರೈತರ ಮನಿಗಳಲ್ಲಿ ದನಕರಾ ಸತ್ತು ಅವುಗಳನ್ನು ಅಜ್ಜ ಮತ್ತು ಸಂಗಡಿಗರು ಹೊತ್ತಕೊಂಡು ಹೋಗಿ ಖಂಡ, ಚರ್ಮ ಬಳಸಿಕೊಂಡಿದ್ರ ಆ ರೈತರ ಮನೆಯಲ್ಲಿ ಆಯಾನೂ ಕೊಡತಿರಲಿಲ್ಲ. ಹಿಂಗಾಗಿ ಇದರವ್ವನ ಈ ದಂದೆನ ಬ್ಯಾಡ ಅನಕೊಂಡು ಮನ್ಯಾಗ ಹೆಣ್ಣಮಕ್ಕಳು ಹುಟ್ಟಿದರ ಈ ಕಷ್ಟಗೊಳೆಲ್ಲ ತಪ್ಪತಾವು ಅಂತ ನಮ್ಮಜ್ಜ ಬಯಸಿದ್ದನಂತ. ಅಷ್ಟ ಅಲ್ಲದ ಹೆಣ್ಣು ಹುಟ್ಟಿದರ ನಿನಗ ಕ್ವಾಣ ಬಿಡತೆನಿ ಅಂತ ದುರಗವ್ವಗ ಬೇಡಿಕೊಂಡಿದ್ದನಂತ. ಆದ್ರ ನಮ್ಮಜ್ಜಿ ಮ್ಯಾಲ, ಮ್ಯಾಲ ಎರಡು ಗಂಡ ಮಕ್ಕಳನ್ನು ಹಡದ ಮ್ಯಾಲ ನಮ್ಮವ್ವನ ಹಡದಳಂತ. ನಮ್ಮವ್ವ ಹುಟ್ಟಿದಮ್ಯಾಗ ನಮ್ಮಜ್ಜನ ತಡಿಯೋವ್ರೆ ಯಾರ ಇದ್ದಿರಲಿಲ್ಲಂತ. ಈ ಮೊದಲ ದೇವರಿಗೆ ಬೇಡಿಕೊಂಡಂಗ ಮನಿಯಾಗ ಎಮ್ಮಿ ಕ್ವಾಣ ಇಳಿದಿದ್ದರಿಂದ ಆ ಕ್ವಾಣಾನ ದುರಗವ್ವ ತಾಯಿಗೆ ಬಿಟ್ಟು ತನ್ನ ಭಕ್ತಿ ಮುಟ್ಟಿಸಿದ್ದ. ನಮ್ ಕಡೀಗ ನಮ್ ಕುಲದ ಹೆಣ್ಗೊಳಿಗೆ ಮುತ್ತ ಕಟ್ಟಿ ಸೂಳಿ ಬಿಡಾದು ಹಳ್ಳ್ಳಳಿಗೂ ಐತಿ. ನಮ್ಮವ್ವ ಮೈನರೆಯೋದನ್ನೆ ಕಾಯುತ್ತಿದ್ದ ನಮ್ಮಜ್ಜ ಮೈನರೆದ ಮೇಲೆ ಮುತ್ತು ಕಟ್ಟಿಸಿ ಮೆರವಣಿಗೆ ಮಾಡಿಸೋ ಮೂಲಕ ತನ್ನ ಮಗಳು ಸೂಳೆಗಾರಿಕೆ ಮಾಡಾಕ ಇಂದಿನಿಂದ ತಯಾರಿದ್ದಾಳೆ ಎಂಬುದನ್ನು ಡಂಗೂರ ಸಾರಿದ. ಅಂದಿನಿಂದ ನಮ್ಮವ್ವ ಊರವರ ವಸ್ತುವಾದಳು. ಅಂದಿನಿಂದ ಊರಾಗಿನ ಮ್ಯಾಗಳ ಕುಲಸ್ಥರೆಲ್ಲ ನಮ್ಮವ್ವನನ್ನು ಹರಕೊಂಡು ತಿನ್ನಾಕ ಶುರು ಮಾಡಿದ್ರು. ಕೆಲವೊಬ್ಬರಿಗಂತೂ ದುಡ್ಡಿಲ್ಲ ಕಾಸಿಲ್ಲ. ಪುಗಸಟ್ಟೆ ಮಾಲ ಆಗಿಬಿಟ್ಲು ನಮ್ಮವ್ವ. ಹಂಗಾಗಿ ಕಂಡ ಕಂಡ ಹಡಬೇ ಮಕ್ಕಳೆಲ್ಲ ಎಳಕಂಡು ಹೋಗಾವರೆ ಆಕಿನ್ನ. ಬದಲೀಗೆ ನುಚ್ಚೋ ಜ್ವಾಳವೋ. ಅವರು ಕೊಟ್ರೆ ಉಂಟು ಇಲ್ಲಾಂದ್ರ ಇಲ್ಲ. ಬಸವೀ ಇದೀಯಲ್ಲ ನೀ ಇರಾದ ನಮ್ ತೀಟಿ ತೀರಿಸಾಕ ಅಂತ ನಗೋರಂತ ಆಗ. ಆದ್ರ ಹೊಟ್ಟಿಗಿ ಹಿಟ್ಟು ಬೇಕಲ್ಲ. ಅದಕ್ಕ ನಮ್ಮವ್ವ ಊರು ಬಿಟ್ಟು ಬಸ್ ಹತಿಗೆಂಡು ಬಸ್ ಸ್ಟಾಂಡುಗಳಾಗ ದಂಧಿ ಮಾಡಾಕ ಶುರು ಮಾಡಿದ್ಲಂತ. ಅದೂ ಒಂದೋಸು ದಿನ ನಡೀತು. 50-100 ಕಡೀಗೆ ಇಪ್ಪತ್ತು, ಆಗಿನ ಕಾಲಕ್ಕೆ ಅಷ್ಟೆ ಸಿಕ್ಕರೆ ಅದೆ ದೊಡ್ಡದಂತ. ಊರಿಗ ಹೊಳ್ಳಿ ಹೋಗಾಕ ಬಸ್ ಚಾಜರ್ಿಗೆ ರೊಕ್ಕ ಇರಲಿಕ್ಕಂದ್ರ ಹತ್ತಿಪ್ಪತ್ತಕ್ಕೂ ಸೆರಗ ಹಾಸಿತಂತ ಕೋಡಿ ನಮ್ಮವ್ವ. ಆ ಹತ್ತಿಪ್ಪತ್ತರೊಳಗೆ ಪೋಲೀಸರು ತಿಂದು, ರೌಡಿಗೊಳು ತಿಂದು, ಮಿಕ್ಕಿದ್ದು ಆಕಿಗೆೆ. ಇಂಥ ಟೈಮಿನೊಳಗ ನಮ್ಮೂರಿನಲ್ಲಿ ಹನುಮಪ್ಪನ ಓಕಳಿ ನಡೆತಂತ. ಈ ಓಕಳಿ ಐದು ವರ್ಷಕ್ಕೊಮ್ಮೆ ನಡೆತೈತಿ ನಮ್ಮೂರಾಗ. ಆ ಓಕಳಿಯಿಂದ ಅವ್ವನ ವೃತ್ತಿಗೆ ಬಡ್ತಿ ಸಿಕ್ಕಿತೆಂದೆ ಹೇಳಬೇಕು. ಹನುಮಪ್ಪನ ಒಕಳಿಯಂದರೆ ಅದೊಂದು ರೀತಿಯಲ್ಲಿ ಕೆಳ ಕುಲಸ್ಥರ ವೈಶ್ಯೆಯರ ಮೇಲಿನ ಕುಲಸ್ತರ ಮುಂದೆ ಪ್ರದರ್ಶನಕ್ಕೆ ಇಡೋ ವ್ಯವಸ್ಥೆ ಅಷ್ಟೆ. ಅಂದು ಊರ ಗುಡಿಯ ಮುಂದೆ ಇರುವ ಹೊಂಡದ ಸುತ್ತಲೂ ಮಂದಿ ಸೇರಿರತಾರ. ಊರ ಮತ್ತು ಪರೂರಿನ ಶ್ರೀಮಂತ ಕುಳಗಳು ಅಲ್ಲಿ ಸೇರಿರುತಾವು. ಊರಿನ ಹರಿಜನ ಕೇರಿಯಿಂದ ಸೂಳೆ ಬಿಟ್ಟವರನ್ನೆಲ್ಲ ಅರಿಶಿನ ಸೀರೆ ಉಡಿಸಿಕೊಂಡು, ಮುಖಕ್ಕೆ ಭಂಡಾರ ಹಚ್ಚಿಕೊಂಡು ಬಲಿಕೊಡುವ ಪ್ರಾಣಿಗಳನ್ನು ಎಳೆದುಕೊಂಡು ಕರೆತರಲಾಗುತ್ತದೆ. ಸೂಳೆಯರು ಮೆರವಣಿಗೆಯಲ್ಲಿ ಹೊಂಡಕ್ಕೆ ಐದು ಸುತ್ತು ಹಾಕಿದ ನಂತರ ಓಕಳಿಯಾಟ ಪ್ರಾರಂಭವಾಗುತ್ತದೆ. ಅವ್ವ ಮತ್ತು ಅವ್ವನ ಜೊತೆಗಾತಿ ಇತರೆ ಸೂಳೆಯರು ತಮ್ಮ ರಕ್ಷಣೆಗಾಗಿ ಲಕ್ಕಿ ಪೊರಕೆಗಳನ್ನು ಹಿಡಿದುಕೊಂಡಿರತಾರ. ಗರಡಿಯಲ್ಲಿ ಪಳಗಿದ ಕುಸ್ತಿ ಗಡಿಗಳು ಹೊಂಡಕ್ಕೆ ಇಳಿದು ತಮ್ಮ ದೋತರಗಳಲ್ಲಿ, ಚಂಬು, ಬಕೇಟ್ಗಳಲ್ಲಿ ಹೊಂಡದಲ್ಲಿನ ಬಣ್ಣದ ನೀರು ತುಂಬಿಕೊಂಡು ಗೊಜ್ಜತಾರ. ಕುಲಸ್ಥರ ಗಂಡಸರು ಬಣ್ಣ ಎರಚೋರು, ಸೂಳೆಯರು ಎರಚಿಸಿಕೋತಾ ಹಾಂಗಾ ನಿಂದರಬೇಕ್ಕಕ್ಕೆತಿ. ನೀರಾಗ ನೆಂದು ಅವರ ಮೈ ಎಲ್ಲ ಅರಬಿಯೊಳಗ ಹಾಸಿ ಹಂಗಂಗೇ ಕಾಣಿತಿರ್ತದ. ನೀವಾ ಲೆಕ್ಕಾ ಹಾಕ್ಕೋರೀ ನಮ್ಮವ್ವನಂಥವರ ಪಾಡು ಏನಾಗಿರತೇತಿ ಅಂತ. ಓಡಿ ಹೋದ್ರೂ ಬಿಡಾಂಗಿಲ್ಲ, ಅಟ್ಟಿಸಿಕೋತಾ ಬಂದು ನೀರು ಗೊಜ್ಜತಾರ. ಹಿಂಗ ಓಕಳಿ ಆಡಾಕಂತಲೇ ನಮ್ ಕೆಳ ಕುಲಸ್ಥರ ಮನೆಗೊಳಿಗಿ ಪಾಳಿ ಹಚ್ಚಿರತಾರ. ಓಕಳಿ ಮುಗಿದ ಮ್ಯಾಲ ಹಣಮಂತ ದ್ಯಾವರಿಗೆ ಪೂಜೆ ಮಾಡ್ತಾರ, ಆದ್ರ ನಮ್ಮ ಮಂದಿ ಗುಡಿ ಕಟ್ಟೆ ಹತಂಗಿಲ್ಲ ನೋಡ್ರಿ. ಕೆಳಗಾ ನಿಂತು ಕೈ ಮುಗೀಬೇಕು. ಆಮ್ಯಾಲ ಮ್ಯಾಗಳ ಕುಲಸ್ಥರು ಅವರವ್ರಿಗೆ ಇಷ್ಟ ಆದ ಹೆಣಮಕ್ಕಳ ಕೂಟೆ ಕರಕೊಂಡು ಹೋಯತಾರು. ಓಕಳಿ ಆಡಿದ ಬಣ್ಣದ ಗುತರ್ು ಮುಖದ ಮ್ಯಾಲೆಲ್ಲಾ ಇನ್ನೂ ಹಂಗ ಇತ್ತು. ಅಷ್ಟರೊಳಗ ಒಂದಿಬ್ಬರು ಗಣಮಕ್ಕಳು ನಮ್ಮನಿಗೆ ಬಂದ್ರಂತ. ಅವರು ನಿನ್ನೆಯ ಓಕಳಿಯೊಳಗ ತೊಯ್ದ ಅರಬ್ಯಾಗ ನಮವ್ವನ ನೋಡಿದ್ರು. ದೂರದ ಪ್ಯಾಟಿಯಿಂದ ನಮ್ಮವ್ವನಂತ ಸೂಳೆರನ್ನು ನೋಡುದಕ್ಕಾಗಿಯೆ ಅವರು ನಿನ್ನೆ ಓಕಳಿಗೆ ಬಂದಿದ್ರಂತ. ಹಿಂಗ ಪ್ರತೀ ಸಲ ಓಕಳಿ ನಡೆಯುವಾಗ ಬರೋದು ಅವರ ಕಾಯಕ. ಸುತ್ತಮುತ್ತಲ ಹಳ್ಳಿಗಳೊಳಗ ಯಾವಾಗ ಓಕಳಿ ನಡೆತಾವು ಅಂತ ಅವರು ಕಾಯತಿರತಾರಂತ. ನಮ್ಮವ್ವನ ಮೈಮಾಟದಿಂದ ಸಾಕಷ್ಟು ವ್ಯಾಪಾರ ಮಾಡಕೋಬೌದು ಅಂತ ಅವರಿಗೆ ಅನಿಸಿತ್ತು. ಬಂದೋರು ನಮ್ಮಜ್ಜನ ಕೂಡ ಅದೆನನ್ನೋ ಮಾತಾಡಿದರು. ನಮ್ಮವ್ವ ನಿನ್ನೆ ರಾತ್ರಿಯ ದುಡಿಮೆಯಿಂದ ಮುಲುಗುತ್ತ ಮೈ ಮುರಕೋತ ಮಲಗಿದ್ಲು. ಬಂದೋರು ನಮ್ಮವ್ವನನ್ನು ಕರೆಸಿ ಮತ್ತೊಮ್ಮೆ ಅವಳನ್ನು ಕಣ್ಣಿನಲ್ಲಿಯೆ ಅಳೆದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಅಜ್ಜನ ಸೂಚನೆಯಂತೆ ನಮ್ಮವ್ವ ಬಟ್ಟೆಗಂಟು ಕಟ್ಟಕೊಂಡು ಅವತ್ತು ಹೊರಟು ನಿಂತಳು. ಆಕೆಗೆ ತಾನು ಎಲ್ಲಿ ಹೊರಟಿರುವುದೆಂದು ಗೊತ್ತಿತ್ತು. ಈ ಹಿಂದೆ ಹೀಗೆ ಹೋದವರು ಬಣ್ಣ ಬಣ್ಣದ ಚಿತ್ತಾರದ ಸೀರೆ ಉಟ್ಟುಕೊಂಡು ಕೊರಳು ತುಂಬಾ ಬಂಗಾರ ಹೊತ್ಕೊಂಡು ಮರಳಿ ಬರುತ್ತಿದ್ದುದು ಆಕೆಯ ಕಣ್ಮುಂದೆ ಕಟ್ಕೊಂಡಿತ್ತು. ಅವ್ವ ಬಾಂಬೇದಾಗಿನ ದಂಧೆ ಮನೆಗೊಳ ಪಾಲಾದ್ಲು. ಅಲ್ಲಿಗೆ ಹೊದ ಮೇಲೆ ಆಕಿಗೆ ಗೊತ್ತಾತು. ಅದು ಬೇಕು, ಇದು ಸಾಕು ಅಂತ. ನೀರಿಗೆ ಇಳಿದ ಮ್ಯಾಲ ಇದ್ದಷ್ಟು ದಿನ ಈಜಾಡಬೇಕು. ಬಾಂಬೆದಾಗ ಭಿಂಡಿಚಾಳ್, ಪತ್ರಚಾಳ್ ಅನ್ನಾ ಕಡೇ ನಮ್ಮವ್ವ ಇರೋ ದಂಧೆ ಮನಿ ಇತ್ತಂತೆ. ಅಲ್ಲಿ ಮಾತ್ರ ಆ ಜಾತಿ ಈ ಜಾತಿ ಅನ್ನೋರು ಇರಲಿಲ್ಲ. ಮುಸಲ್ಮಾನರು, ಮರಾಠ್ರು, ಒಡ್ಡರು, ಕೊರಮರು, ಹಿಂಗೆ ಎಲ್ಲಾ ಜಾತಿ ಗಣಮಕ್ಕಳು ಬರ್ತಿದ್ರಂತೆ. ಮನೀ ಒಳಗ ಬಂದ್ರ ಅಲ್ಲಿ ಒಂದೊಂದು ಖೋಲಿ ಇರತಿದ್ವು… ನಮಗಾ ಒಂದೊಂದು ಖೋಲಿ. ಗಿರಾಕಿಗೊಳ ದುಡ್ಡಿನಾಗ ಘರವಾಲಿಗೆ ಅರ್ಧಪಾಲು ಕೊಡಬೇಕಾಗತಿತ್ತು.  ]]>

‍ಲೇಖಕರು G

4 January, 2012

3 Comments

  1. ನಾಗವೇಣಿ ಎ.

    ತುಂಬಾ ಆಳವಾಗಿದೆ.

  2. D.RAVIVARMA

    ನಿಮ್ಮ ಅಂತರಾಳದ ನೋವು ,ಹಳಹಳಿಕೆ ನಿಜಕ್ಕೂ ಮನಕರಗಿಸುವಂತಿದೆ. ಓದುವುದು ಬೇರೆ,ಅನುಭವಿಸುವುದು ಬೇರೆ, ನೀವು, ಈ ಸಾಮಾಜಿಕ ದುರಂತದ ಬಗ್ಗೆ ಪುಸ್ತಿಕೆ ಬರೆದು ,ಎಚ್ಚರಿಸಲು ಪ್ರಯತಿಸಿದ್ದೀರ , ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಪುಸ್ತಕ ಪ್ರಕಾಶಕರು ಯಾರು ,ಅದರ ಬೆಲೆ ಎಷ್ಟು ಯಾವ ವಿವರಗಳು ನಿಮ್ಮ ಲೇಖನದ ಜೊತೆ ಇಲ್ಲ. ನನಗೆ ನಿಮ್ಮ ಪುಸ್ತಿಕೆ ತಕ್ಷಣ ಕಳಿಸಿಕೊಡಿ , ಅದರ ಬೆಲೆ ನಾನು ಕಳಿಸಿಕೊಡುವೆ .
    ರವಿ ವರ್ಮ ಭಾರತೀಯ ಜೀವ ವಿಮಾ ನಿಗಮ ಹೊಸಪೇಟೆ ೯೯೦೨೫೯೬೬೧೪

  3. Hanamanth

    ನಿಮ್ಮ ಕಾಳಜಿಗೆ ಧನ್ಯವಾದಗಳು ಸರ್. ಪುಸ್ತಕವನ್ನು ಚೆ ಪುಸ್ತಕ ಪ್ರಕಾಶನದವರು ಪ್ರಕಟಿಸಲಿದ್ದು, ಜನವರಿ 10ರಂದು ನನ್ನ ಕೈಗೆ ಸಿಗುತ್ತಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ಪುಸ್ತಕಕ್ಕಾಗಿ ದೂರವಾಣಿ ಸಂಖ್ಯೆ 9986302947ಗೆ ಸಂಪರ್ಕಿಸಿರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading