ಮೇಘನಾ ಸುಧೀಂದ್ರ ಕಾಲಂ: ಮೊದಲು ಬಟ್ಟೆ ಕ್ಲೀನ್ ಮಾಡೋಣ ಆಮೇಲೆ ಮುಂದಿನ ಕಥೆ..

“ನನ್ನ ಮನನೋಯಿಸಿದ್ದವರನ್ನು ನಾನು ಕ್ಷಮಿಸುತ್ತೇನೆ, ನನ್ನ ಮನಸ್ಸನ್ನು ಯಾರಾದರೂ ನೋಯಿಸಿದ್ದರೆ ಅವರ ಹತ್ತಿರ ಕ್ಷಮೆ ಬೇಡುತ್ತೇನೆ. ನಾನು ನೆಮ್ಮದಿಯಿಂದ ಸಾಯಬೇಕು, ನಾನು ಯಾರ ಮೇಲೂ ದ್ವೇಷ ಸಾಧಿಸುವುದಿಲ್ಲ. ದೇವರು ನನಗೆ ಇಂತಹ ಬದುಕು ಕೊಟ್ಟಿದ್ದಕ್ಕೆ ಕೃತಜ್ಞ. ಈ ಸಾವು ಕತಲೂನ್ಯಾಗೆ, ಕತಲೂನ್ಯ ಪ್ರತಿನಿಧಿಸುವ ನ್ಯಾಯ, ನೀತಿ ಧರ್ಮ ಮತ್ತು ಶಾಂತಿಗೆ…. – ಕಂಪಾನಿಸ್” …. ಹೀಗೆ ಒಂದು ಫೋಟೋವನ್ನ ಎಲೆನಾ ಕಳಿಸಿ “ನನ್ನ ಹೀರೋ ಇವನು ಓದು” ಎಂದಳು. “ಭಗತ್ ಸಿಂಗ್, ರಾಜಗುರು, ಸುಖದೇವರನ್ನ ಗಲ್ಲಿಗೇರಿಸುವ ಮುನ್ನ ಹೀಗೆ ಸಂತೋಷದಿಂದ ತಮ್ಮ ದೇಶಕ್ಕಾಗಿ ಇಷ್ಟು ಮಾಡುತ್ತಿದ್ದೇವೆ ಎಂದು ಆರಾಮಾಗಿ ಪ್ರಾಣ ತ್ಯಾಗ ಮಾಡಿದ್ದರು ಹಾಗೂ ಅವರಿಗೆ ೨೩ ವಯಸ್ಸಷ್ಟೆ ಆಗಿದ್ದು” ಎಂದು ಹುಡುಗಿ ತನ್ನ ದೇಶದ ಅಲ್ಪ ಸ್ವಲ್ಪ ಚರಿತ್ರೆಯನ್ನು ಹೇಳಿದ್ದಳು. ಎಲೆನಾ “ನೋ ನೋ ನಿನ್ನ ಹೀರೋಗಳು ಯಾವುದೇ ದೇಶದ ಹುದ್ದೆಯಲ್ಲಿರಲ್ಲಿಲ್ಲ ನನ್ನ ಹೀರೋ ನನ್ನ ದೇಶದ ಅಧ್ಯಕ್ಷನಾಗಿದ್ದ” ಎಂದಳು, ಹುಡುಗಿ, “ಹುದ್ದೆಯಲ್ಲಿದ್ದವರಿಗೆ ಅದನ್ನ ಕಾಪಾಡಿಕೊಳ್ಳುವ ದರ್ದು ಇರುತ್ತದೆ, ಯಾವುದೇ ಹುದ್ದೆಯಲ್ಲಿರದ ೨೩ ವರ್ಷದ ಹುಡುಗರಿಗೆ, ನಾಗರೀಕರಿಗೆ ದೇಶ ಉಳಿಸುವ ಕಲ್ಪನೆ ಬರೋದು ಅಸಹಜ, ನನ್ನ ಪ್ರಕಾರ ಅವರೂ ಹೀರೋಗಳೇ” ಎಂದಾಗ ಎಲೆನಾ ಮಾತು ನಿಲ್ಲಿಸಿದ್ದಳು. ಎಲೆನಾಳ ಸ್ವಭಾವವೇ ಹಾಗೆ ಅವಳ ವಾದವನ್ನು ಒಪ್ಪದವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲ್ಲಿಲ್ಲ. “ಸರಿ ಲಾಂಡ್ರಿ ಮಾಡೋಣ” ಎಂದು ತನ್ನ ಪಾಡಿಗೆ ಅಲ್ಲಿ ಉಳಿಯಲು ಕೊಟ್ಟಿದ್ದ ಮನೆಯ ಬೇಸ್ಮೆಂಟಿಗೆ ಹೋದಳು.

ಅಲ್ಲಿ ಕಚಕಚ ಸದ್ದಾಗುತ್ತಿತ್ತು. ಅಲ್ಲಿ ಸ್ಪರ್ಧೆಗೆ ಬಂದ ಎಲ್ಲರೂ ಅವರವರ ಲಾಂಡ್ರಿಗೆ, ಐರನ್ನಿಗೆ ಬಂದಿದ್ದರು. ಕೋಡಿಂಗ್ ಅಂತ ಬಂದಾಗ ಇಲ್ಲೂ ಜಾಸ್ತಿ ಗಂಡುಮಕ್ಕಳನ್ನೇ ಕಂಡು ಅಯ್ಯೋ ಎಂದುಕೊಂಡಳು ಹುಡುಗಿ. ಆದರೆ ಅವರೆಲ್ಲರೂ ಲಾಂಡ್ರಿಗೆ ಬಂದಿದ್ದು ನೋಡಿ ಖುಷಿಯಾಯಿತು. ಹೇಗೆ ತನ್ನ ಭಾರತೀಯ ಸ್ನೇಹಿತರಿಗೆ ಲಾಂಡ್ರಿ ಮಾಡಲು ಅವರ ಮನೆಗೆ ಹೋಗಿ ಹೇಳಿಕೊಡುವ ಪ್ರಮೇಯ ಬಂದಿತ್ತು ಎಂದು ನೆನಪಿಸಿಕೊಂಡು ನಕ್ಕಳು. ಅಲ್ಲಿ ಎಲ್ಲರೂ ಸರತಿ ಸಾಲಿನಲ್ಲಿ ನಿಂತಿದ್ದರು. ಯಾವ ಹುಡುಗನೂ ಹುಡುಗಿಗೆ ಜಾಗ ಬಿಟ್ಟುಕೊಡುತ್ತಿರಲ್ಲಿಲ್ಲ. ಸಮಾನತೆಯನ್ನ ಹಣೆಗ ಹಚ್ಚಿಕೊಂಡು ಎಲ್ಲರೂ ಅಲ್ಲಿದ್ದರು. ಜಪಾನೀಸ್ ಹುಡುಗನೊಬ್ಬ ಮಾತ್ರ “ಜಾಗ ಬೇಕಾ ಮುಂದಕ್ಕೆ ಹೋಗುತ್ತೀಯಾ” ಎಂದು ನಾಲ್ಕೈದು ಹುಡುಗಿಯರನ್ನ ಕೇಳಿದ್ದ. ಯಾರೂ ಅದನ್ನ ವಿಶೇಷ ಎಂದು ಭಾವಿಸದೇ ಅವರ ಪಾಡಿಗೆ ಅವರಿದ್ದರು. ನಮ್ಮ ಬಾಲಿವುಡ್ ಮತ್ತು ಕನ್ನಡ ಸಿನೆಮಾಗಳು ಈ ಲಾಂಡ್ರಿಗೆ ಜಾಗ ಬಿಟ್ಟುಕೊಟ್ಟ ಹುಡುಗನ್ನನ್ನ ಬಗ್ಗೆ ಅದೆಷ್ಟು ಚೆನ್ನಾಗಿರುವ ಪ್ರೇಮಕಥೆಯನ್ನ ಮಾಡುತ್ತಿದ್ದರು, ಅಂಥಹ ಸೀನ್ ಮಿಸ್ ಆಗಿ ಹೋಯ್ತಲ್ಲ ಎಂದು ಹುಡುಗಿ ಖೇದ ಪಟ್ಟುಕೊಂಡು ತನ್ನ ಲಾಂಡ್ರಿ ಬಾಸ್ಕೆಟನ್ನ ಹಿಡಿದು ನಿಂತಿದ್ದಳು. ಇಲ್ಲಿ ಉಚಿತ ಲಾಂಡ್ರಿ ಎಂದು ಇದ್ದ ಬದ್ದ ಅಲ್ಪ ಸ್ವಲ್ಪ ಬಟ್ಟೆಯನ್ನೂ ತಂದಿದ್ದಳು. ವಿದೇಶದಲ್ಲಿ ಓದುವಾಗ ಒಂದೊಂದು ಯುರೋವನ್ನು ಲೆಕ್ಕ ಹಾಕಿ ಹಾಕಿ ಬಳಸಬೇಕಿತ್ತು. ಇಲ್ಲಿ ಒಂದು ಟ್ಯಾಕ್ಸಿ ಅಥವಾ ಕಾರು ಹತ್ತಿ ತಿಂಗಳಾಗಿತ್ತು. ಇಲ್ಲಿ ೯೫೦ ಮೀಟರ್ಸಾ ಗಾಡಿ ಹತ್ತೋಣ ಎಂದು ಆಡುತ್ತಿದ್ದ ಹುಡುಗಿ, ಅಲ್ಲಿ ೪ ಕಿಲೋ ಮೀಟರ್ ಆದರೂ ೧೦ ಯುರೋ ಕಡಿಮೆಯಾಗುತ್ತದೆ ಎಂದು ನಡೆದುಕೊಂಡು ಹೋಗಿ ಗ್ರಾಸರಿ ತರುವ ಹುಡುಗಿಯಾಗಿ ಬದಲಾಗಿದ್ದಳು. ಇದನ್ನು ನೆನೆಸಿಕೊಂಡು ಅವಳ ಪಾಡಿಗೆ ನಗುತ್ತಿದ್ದಳು.

ಪಕ್ಕದಲ್ಲಿ ನಿಂತಿದ್ದ ಇಬ್ಬರು ಹುಡುಗರು ಅವಳನ್ನೇ ಗಮನಿಸುತ್ತಿದ್ದರು, ಹುಚ್ಚಿಯಾಗಿ ನಗುತ್ತಿದ್ದಾಳಾ ಎಂಬ ಅನುಮಾನದಿಂದ. ಅವಳು ಆ ಕಡೆ ನೋಡಿ ಸುಮ್ಮನೆ ನಕ್ಕಳು, ಅವರು ನಕ್ಕು ಸುಮ್ಮನಾದರು. “ಪೀಪಲ್ ಆರ್ ಸೋ ಜಡ್ಜ್ಮೆಂಟಲ್” ಎಂದು ಅಂದುಕೊಂಡು ತನ್ನ ಸರತಿಗಾಗಿ ಮುಂದೆ ಮುಂದೆ ಹೋಗುತ್ತಿದ್ದಳು. ಹಂಗೆ ಹೋಗುತ್ತಿರುವಾಗ ತನ್ನ ಲಾಂಡ್ರಿಯ ಬುಟ್ಟಿ ಬಿದ್ದು ಅದರಲ್ಲಿರುವ ಬಟ್ಟೆಯೆಲ್ಲಾ ಬಿದ್ದು ಚೆಲ್ಲಾಪಿಲ್ಲಿಯಾಗಿತ್ತು. ಅಲ್ಲಿ ಒಳ ಬಟ್ಟೆಗಳೆಲ್ಲವೂ ಬಿದ್ದು ಒಂಥರಾ ಆಗಿಹೋಯ್ತು. ಚಕಚಕನೆ ಅದನ್ನ ಎತ್ತಿಕೊಳ್ಳುವಾಗಲೇ ಪಕ್ಕದಲ್ಲಿ ನಗುತ್ತಿದ್ದ ಹುಡುಗರು ಬಂದು ಸಹಾಯ ಮಾಡಿದರು. “ಇಟ್ಸ್ ಓಕೆ ಇಟ್ಸ್ ಜಸ್ಟ್ ಕ್ಲಾತ್ಸ್ ” ಎಂದು ಯಾವ ಅಸಹ್ಯವೂ ಪಟ್ಟುಕೊಳ್ಳದೇ ಅವಳ ಬಟ್ಟೆಗಳನ್ನೆಲ್ಲಾ ಎತ್ತಿಕೊಟ್ಟರು. ಲಾಂಡ್ರಿಗೆ ಇನ್ನೂ ತುಂಬಾ ಸಮಯವಿದೆ ಎಂದು ಮಾತಾಡಿಸಲು ನಿಂತರು. ಅವರೆಲ್ಲಾ ಬಾಸ್ಕಿನವರು ಎಂದು ತಿಳಿಸಿದರು. ಬಾಸ್ಕ್ ಭಾಷೆ ಕನ್ನಡಕ್ಕೆ ಬಹಳ ಹತ್ತಿರವಾದ ಭಾಷೆ. ಅವರೂ ಅಪ್ಪ ಅಮ್ಮನ್ನನ್ನ ಅಪ್ಪ ಅಮ್ಮ ಎಂದೇ ಅನ್ನುತ್ತಾರೆ. ಸುರಿ, ನಾರು, ಅಪ್ಪು, ಕೊಂಕು ಮತ್ತು ಬುರುಡೆ ಶಬ್ದಗಳಿಗೆ ಕನ್ನಡದ್ದೇ ಅರ್ಥಗಳಿವೆ. “ಬಾಸ್ಕ್ ಇಂಡೋ ಯುರೋಪಿಯನ್ ಭಾಷೆ ಸಮೂಹಕ್ಕೆ ಸೇರುತ್ತದೆ. ಯೂರೋಪಿನ ಲಾಟಿನ್ ಮಾದರಿಯದ್ದಲ್ಲ” ಎಂದು ಹುಡುಗರು ಅವಳಿಗೆ ಹೇಳಿದರು. ಹುಡುಗಿಗೆ “ಅಲ್ಲಿನ ಯುವಜನತೆ ತಮ್ಮದನ್ನ ಪರರಿಗೆ ಎಷ್ಟು ಚೆನ್ನಾಗಿ ಹೇಳುತ್ತಾರೆ, ಎಲ್ಲವನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ತಿಳಿಸುತ್ತಾರೆ, ನಮಗ್ಯಾಕೆ ಕನ್ನಡ ಓದೋದಕ್ಕೆ ಬರೆಯೋದಕ್ಕೆ ಬರೋದಿಲ್ಲ ಅನ್ನೋದು ಬಹಳ ಹೆಮ್ಮೆಯ ವಿಷಯವಾಗುತ್ತದೆ” ಎಂದು ಯೋಚಿಸುತ್ತಾ ನಿಂತಳು.

“ಸೋ ಕಂಪಾನಿಸ್ ವಾಯ್ಸಿನ ಕೋಡಿಂಗ್ ಮಾಡೋದಕ್ಕೆ ಅವರ ವಾಯ್ಸ್ ಅನ್ನು ಗುರುತಿಸುವುದಕ್ಕೆ ಏನೇನು ಗೊತ್ತು ನಿನಗೆ” ಎಂದು ಪ್ರಶ್ನೆ ಮಾಡಿದ್ದರು. ಹುಡುಗಿ ಅಲ್ಪ ಸ್ವಲ್ಪ ಎಲೆನಾಳಿಂದ ತಿಳಿದರೂ ಅವರ ಪೂರ್ತಿ ಕಥೆ ಗೊತ್ತಿರಲ್ಲಿಲ್ಲ. ಗಾಂಧೀಜಿಯನ್ನ ಮಹಾತ್ಮ ಮಾಡಿದ ಹಾಗೆ ಇಲ್ಲೂ ಒಂದು ಮಾದರಿ ಇದೆ ಎಂದು ಅಂದುಕೊಂಡು , “ಹೋಗಲಿ ನೀವಿಬ್ಬರೇ ಹೇಳೋದಲ್ವಾ” ಎಂದಾಗ  ಸರತಿ ಸಾಲಿನಿಂದ ಹುಡುಗಿಯನ್ನ ಎಳೆದು ಇನ್ನೊಂದು ಕಡೆ ಕೂರಿಸಿಕೊಂಡು ವಿಷಯ ಶುರು ಮಾಡಿದರು.

“ಕಂಪಾನಿಸ್ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಹುಡುಗ. ಅವನಿಗೆ ಬಾರ್ಸಾದಲ್ಲಿ ಯಾವ ತೊಂದರೆಯೂ ಇರಲ್ಲಿಲ್ಲ. ಅವನ್ನನ್ನ ಒಳ್ಳೆ ವಿದ್ಯಾಭ್ಯಾಸಕ್ಕೆ ಮತ್ತೆಲ್ಲೋ ಕಳಿಸುವ ಹುನ್ನಾರವನ್ನ ಅಪ್ಪ ಅಮ್ಮ ಮಾಡಿದ್ದರು. ೨೦ನೇ ವಯಸ್ಸಿಗೇ ಸೊಲಿದಾರಿತ್ ಕತಲೂನ್ಯ ಎಂಬ ಕತಲೂನ್ಯಾ ಪಾರ್ಟಿಗಳ ಒಕ್ಕೂಟವನ್ನು ಕಟ್ಟಿಕೊಂಡಿದ್ದ. ಬಾರ್ಸಾದ ದಿನಪತ್ರಿಕೆಗಳ ಮೇಲೆ ದಾಳಿಯಾದ್ದದ್ದನ್ನ ಖಂಡಿಸಲು. ಬಾರ್ಸಿಲೋನಾದ ಯುನಿಯೋ ಫೆಡರಲ್ ನಾಶಿನೊಲಿಸ್ಟಾ ಪಾರ್ಟಿಯ ಯುವ ಗುಂಪಿನ ನೇತಾರನಾಗಿದ್ದ. ೧೫ ಬಾರಿ ಜೈಲಿಗೆ ಹೋಗಿ ಬಂದ ಸಾಹಸಿಯಾಗಿದ್ದ. “ಅತಿ ಅಪಾಯಕಾರಿ ಮನುಷ್ಯ” ಎಂದು ಪೊಲೀಸರ ಲಿಸ್ಟಿನಲ್ಲಿದ್ದ. ತಳಮಟ್ಟದಿಂದ ಮೇಲೆ ಬಂದ ಹೀರೋ ಅವನು, ಮೊದಲು ಕತಲೂನ್ಯಾದದ ಮುನಿಸಿಪಾಲಿಟಿಯಲ್ಲಿ ಬಾರ್ಸಾದ ಪ್ರತಿನಿಧಿಯಾಗಿದ್ದ, ನಂತರ ತೀಕ್ಷ್ಣ ಬದಲಾವಣೆಯಲ್ಲಿ ಕಂಪಾನಿಸ್ ಮೇಯರ್ ಸಹ ಆಗಿ ಹೋದ. ಫ್ರಾನ್ಸೆಸ್ ಇವನ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ ಇವನ್ನನ್ನ ಸಣ್ಣ ವಯಸ್ಸಿಗೆ ದೊಡ್ಡ ದೊಡ್ಡ ಹುದ್ದೆಯನ್ನ ಅಲಂಕರಿಸುವ ಹಾಗೆ ಮಾಡಿತ್ತು. ಯಾವುದೇ ವಿಷಯದ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತಾಡುವ ಚಾಕಚಕ್ಯತೆ ಇದ್ದುದ್ದರಿಂದ ಅವನು ಬಾರ್ಸಾದ ಫೇಸ್ ಆದ. ಕಂಪಾನಿಸ್ ಫ್ರಾನ್ಸೆಸ್ ಗಿಂತ ಬಹಳ ಪ್ರಮುಖ ವ್ಯಕ್ತಿಯಾದ. ಅವನ್ನನ್ನೇ ಹೊಗೊಳೋದಕ್ಕೆ ಶುರು ಮಾಡಿದರು. ಇಲ್ಲಿಗೆ ಒಂದೇ ಗುರಿಗಾಗಿ ಹೋರಾಡುತ್ತಿದ್ದ ಇಬ್ಬರಿಗೆ ಅವರವರ ಈಗೋ ಹೋರಾಟ ಜಾಸ್ತಿಯಾಯಿತು. ಹಂಗಾಗಿಯೂ ಬಾರ್ಸಾದ ಪ್ರತಿನಿಧಿಯಾಗಿ ಸ್ಪಾನಿಷ್ ಪಾರ್ಲಿಮೆಂಟಿಗೂ ಹೋಗಿ, “ನಾನಿಲ್ಲಿ ನನ್ನ ಸ್ವಾಯತ್ತತೆಯನ್ನ ಕಾಪಾಡಿಕೊಳ್ಳಲು ಬಂದಿಲ್ಲ ಆದರೆ ಸ್ಪೇನಿನ ದೊಡ್ಡತನದಲ್ಲಿ ನಮ್ಮ ಪಾಲು ದೊಡ್ಡದಾಗಿದೆ ಎಂದು ತಿಳಿಹೇಳಲು ಬಂದಿದ್ದೇನೆ” ಎಂದು ಎಲ್ಲ ಘನ ವ್ಯಕ್ತಿಗಳ ಮುಂದೆ ಬಂದು ಹೇಳಿ ಹೋದ…

೨೫ ಡಿಸೆಂಬರ್ ೧೯೩೩ರಲ್ಲಿ ಫ್ರಾನ್ಸಿಸ್ ನ ಸಾವಾಯಿತು. ಕಂಪಾನಿಸ್ ನನ್ನ ಸರ್ವಾನುಮತದಿಂದ ಸ್ವತಂತ್ರ  ಕತಲೂನ್ಯಾದ ಅಧ್ಯಕ್ಷ ಎಂದು ಘೋಷಣೆ ಮಾಡಲಾಯಿತು. ಎಡ ಮತ್ತು ಬಲದ ಸಮ್ಮಿಶ್ರ ಸರ್ಕಾರವನ್ನ ಯಾವುದೇ ಗೊಂದಲವಿಲ್ಲದೇ ನಡೆಸಿಕೊಂಡು ಹೋಗುವಷ್ಟು ಸಾಮರ್ಥ್ಯ ಅವನಿಗೆ ಇತ್ತು. ಅಧಿಕಾರಕ್ಕೆ ಬಂದಾಗ ಉಳುವವನಿಗೆ ಹೊಲದ ಒಡೆತನವನ್ನ ಕೊಟ್ಟು ಅಲ್ಲಿನ ರೈತರ ದೊಡ್ಡ ಹೀರೋ ಆಗಿ ಅವರ ಕಾಯುವ ದೇವರಾಗಿಬಿಟ್ಟ, ಆದರೆ ಸ್ಪೇನಿನ ದೊಡ್ಡ ಜಮೀನುದಾರರಿಗೆ ಇವೆಲ್ಲವನ್ನ ಸಹಿಸಿಕೊಳ್ಳಲಾಗದೇ ಇದನ್ನ ಕೋರ್ಟು ಆಡರು ತಂದು ತಡೆಯೊಡ್ಡಿದ್ದರು. ೧೯೩೪ರಲ್ಲಿ ಕತಲಾನ್ ಜನರನ್ನ ಸೇರಿಸಿಕೊಂಡು ಮತ್ತೆ ಸ್ಪೇನಿನ ಜನರ ವಿರುದ್ಧ ದಂಗೆಯೆದ್ದ. ಕತಲಾನಿನ ಜನರೇ ಅವನ ವಿರುದ್ಧ ತಿರುಗಿ ಬಿದ್ದಿದ್ದರು. ಕೆಲವರಿಗೆ ಅವರ ಬೇಳೆ ಬೇಯಲ್ಲಿಲ್ಲ ಎಂದು… ಈ ಗಲಾಟೆಗೆ ಅವನ್ನ ೩೦ ವರ್ಷ ಜೈಲಿಗೆ ಹಾಕುವ ತೀರ್ಪು ಕೋರ್ಟಿನಿಂದ ಹೊರಗೆ ಬಿತ್ತು… ”

“ಆಮೇಲೆ” ಎಂದಳು ಹುಡುಗಿ.. “ಮೊದಲು ಬಟ್ಟೆ ಕ್ಲೀನ್ ಮಾಡೋಣ ಆಮೇಲೆ ಮುಂದಿನ ಕಥೆ” ಎಂದು ಬಟ್ಟೆಯನ್ನ ತೆಗೆದುಕೊಂಡು ಹೋದರು…

ಈ ಬಟ್ಟೆ ಕೊಳೆ ಹೋದಹಾಗೆ ಬಾರ್ಸಾದ ರಕ್ತದ ಕಲೆಯೂ ಹೋಗುತ್ತದಾ ಎಂದು ಯೋಚಿಸುವಷ್ಟರಲ್ಲಿ ಅವಳ ಸರದಿ ಬಂತು… ಕಂಪಾನಿಸ್ ಕಥೆ ಇವತ್ತು ಮುಗಿಯುವ ಹಾಗಿರಲ್ಲಿಲ್ಲ….

‍ಲೇಖಕರು avadhi

January 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: