
ಡಬ ಡಬ ಎಂದು ಡ್ರೈಯರ್ ಬಡಿದುಕೊಳ್ಳಲು ಶುರು ಮಾಡಿತ್ತು. ಆಗಲೇ ಹುಡುಗಿಗೆ ಓಹ್ ನನ್ನ ಬಟ್ಟೆಯ ಕೆಲಸ ಆಯಿತು ಎಂದು ತನ್ನ ಟಬ್ಬಿಗೆ ಬಟ್ಟೆಯನ್ನೆಲ್ಲಾ ಹಾಕಿಕೊಂಡು ತೋಡಿಕೊಂಡು ಹೊರಡುತ್ತಿದ್ದಾಗ ಮತ್ತೆ ಹುಡುಗರು ಕಾಣುತ್ತಾರಾ ಎಂದು ನೋಡಿದಳು. ಅವರೆಲ್ಲೂ ಅಲ್ಲಿ ಕಾಣಲ್ಲಿಲ್ಲ. “ಛೆ ಒಳ್ಳೆ ಕಥೆ ಮಿಸ್ ಆಯಿತಲ್ಲ” ಎಂದು ಖೇದ ಪಟ್ಟುಕೊಂಡು ಮೆಟ್ಟಿಲು ಹತ್ತುತ್ತಿರುವಾಗಲೇ ಎಲೆನಾ ಕೋಪ ಮಾಡಿಕೊಂಡು ನಿಂತಿದ್ದಳು. “ಈ ಇಂಡಿಯನ್ಸ್ ಹೇಗೆ ಅಂದರೆ ಫ್ರೀಯಾಗಿ ಏನು ಸಿಕ್ಕಿದರೂ ಮೊದಲು ರೆಡಿಯಾಗಿ ನಿಂತಿರುತ್ತಾರೆ ಅಲ್ವಾ, ಫ್ರೀ ಲಾಂಡ್ರಿ ಅಂಥ ೨ ಘಂಟೆ ವ್ಯರ್ಥ ಮಾಡಿಕೊಂಡು ಬಿಟ್ಟೆಯಲ್ಲಾ ಇನ್ನೂ ಎಷ್ಟೊಂದು ಕೆಲಸವಿದೆ, ನಿಂಗೆ ಒಂಚೂರು ಕಾಮನ್ ಸೆನ್ಸ್ ಇಲ್ಲ” ಎಂದು ಬೈಯ್ಯಲು ಶುರುಮಾಡಿದಳು. “ನನ್ನ ಬೈದಿದ್ರೆ ಪರ್ವಾಗಿಲ್ಲ ನನ್ನ ದೇಶವನ್ನ ಅಂದುಬಿಟ್ಟಳಲ್ಲಾ ” ಎಂದು ಕುಪಿತಗೊಂಡ ಹುಡುಗಿ, “ಅಯ್ಯೋ ಹೋಗೆಲೆ ನಿನ್ನ ದೇಶದ ಪುರಾಣಾನೆ ಕೇಳ್ಕೊಂಡು ನಿಂತಿದ್ದೆ, ನಾವ್ ಸ್ವತಂತ್ರವಾಗಿ ೭೦ ವರ್ಷಗಳಿಗೂ ಜಾಸ್ತಿ ಬದುಕುತ್ತಾ ಇದ್ದೀವಿ, ನಿಮಗೆ ನಿಮ್ಮ ಸ್ವತಂತ್ರ , ಸ್ವಾಯತ್ತತೆ ಎನೂ ಕಾಪಾಡಿಕೊಳ್ಳೋದಕ್ಕೆ ಆಗಲ್ಲಿಲ್ಲ, ನೀನೇನು ಮಾತಾಡೋಡು” ಎಂದು ಆಕ್ರೋಶದಿಂದ ಅಂದು ರೂಮಿನ ಬಾಗಿಲು ಹಾಕಿಕೊಂಡಳು. ಎಲೆನಾಗೆ ಅವಳ ತಪ್ಪು ಅರಿವಾಗಿ,ಬಾಗಿಲು ಕುಟ್ಟುತ್ತಾ ಸಾರಿ ಹೇಳಿ, ಮತ್ತೆ ಹುಡುಗಿಯೂ ಸಾರಿ ಹೇಳಿ ಇಬ್ಬರೂ ಕೈ ಕುಲುಕಿ ಸ್ನೇಹ ಸರಿಮಾಡಿಕೊಂಡರು. ಎಲೆನಾ ನಕ್ಕು, “ನಾವು ಮೊರೊಕ್ಕೋದವರು , ನೀವು ಪಾಕಿಗಳು ಹೀಗೆ ಯಾಕೆ ಪ್ರಾಬ್ಲಮ್ ಸಾಲ್ವ್ ಮಾಡ್ಕೊಳಲ್ಲ” ಎಂದು ಕಿಚಾಯಿಸಿ ನಕ್ಕು ಸುಮ್ಮನಾದಳು.
ನಾಳಿನ ಸ್ಪರ್ಧೆಗೆ ಏನು ಬೇಕು ಎಂಬ ಚರ್ಚೆ ಮಾಡತೊಡಗಿದರು. ಇಲ್ಲಿ ಇದ್ದ ಸ್ಪರ್ಧೆ ಮಾಂಟ್ ಜ್ಯೂಯಿಕ್ ಕೋಟೆಯಲ್ಲಿ ಬಾರ್ಸಾದ ಚರಿತ್ರೆ ತಿಳಿಸುವ ಒಂದು ವಾಯ್ಸ್ ತಯಾರು ಮಾಡಬೇಕಿತ್ತು. ಮಾಂಟ್ ಜ್ಯೂಯಿಕನಲ್ಲಿಯೇ ಕಂಪಾನಿಸ್ ತನ್ನ ಕಡೆಯ ದಿನಗಳನ್ನು ಕಳೆದಿದ್ದರಿಂದ ಅವನ ಧ್ವನಿಯನ್ನೇ ಸಿಂಥಸೈಸ್ ಮಾಡಿ ಅವನೇ ಬಾರ್ಸಾದ ಚರಿತ್ರೆ ಹೇಳುವ ಒಂದು ಕಾರ್ಯವನ್ನು ಅಲ್ಲಿನ ಸರ್ಕಾರ ಹೊತ್ತುಕೊಂಡಿತ್ತು. ಈಗ ಸಿಂಥ್ ವಾಯ್ಸಿಗೆ ಮೆಷೀನ್ ಲರ್ನಿಂಗ್ ಕೆಲಸ ಬೇಕಿತ್ತು ಇದಕ್ಕೆ ಇವರಿಬ್ಬರೂ ಇವರ ಕಾಲೇಜಿನಿಂದ ಆಯ್ಕೆಯಾಗಿದ್ದರು. ಎಲೆನಾ ೩ ಥರದ ಧ್ವನಿಗಳನ್ನ ಕೇಳಿಸಿದ್ದಳು. ಕೇಳು ಇದು ಕಂಪಾನಿಸ್ ಟೀನೇಜ್ ಅಲ್ಲಿದ್ದಾಗಿನ ವಾಯ್ಸ್, ಇದು ೩೦ ವರ್ಷ ಜೈಲು ಎಂದು ಹೇಳಿದಾಗ ಅವರು ಕೊಟ್ಟ ರೇಡಿಯೋ ಸಂದರ್ಶನದ ವಾಯ್ಸು, ಇದು ಅವರ ಕೊನೆಯ ದಿನಗಳ ವಾಯ್ಸು ಎಂದು ಕೇಳಿಸುತ್ತಾ ಹೋದಳು. ಆ ವಾಯ್ಸುಗಳಲ್ಲಿನ ಫ್ರೀಕ್ವೆನ್ಸಿ ಅದು ಇದು ಎಲ್ಲವನ್ನು ನೋಟ್ ಮಾಡಿಕೊಂಡು ೩೦ ವರ್ಷ ಜೈಲು ಎಂದಾಗ ಹೇಳಿದ ವಾಯ್ಸು ಒಪ್ಪುತ್ತದೆ, ಅದನ್ನ ಸಿಂಥ್ ಮಾಡೋದು ಸುಲಭ ಎಂದು ಹುಡುಗಿ ಹೇಳಿದ ಮೇಳೆ ಎಲೆನಾ ಸ್ವಲ್ಪ ಭಾವುಕಳಾಗಿ “ಹೀಗೆ ಧ್ವನಿಯನ್ನು ಮತ್ತೆ ತರಿಸುವ ಹಾಗೆ ಜನರನ್ನ ಹಾಗೆ ವಾಪಸ್ಸು ತರಿಸುವ ಸಾಧನವನ್ನ ಕಂಡುಹಿಡಿಬೇಕು ನೋಡು, ಬೈ ದ ವೇ ನಿನಗೆ ಯಾರನ್ನ ಕರೆತರಬೇಕು ಹಾಗೆ?” ಎಂದು ಕೇಳಿದಾಗ, ಅವಳಿಗೆ ನೆನಪಾದ್ದದ್ದು ಎರಡೇ ಹೆಸರು ಒಂದು ಅವಳ ತಾತ ಮತ್ತೊಬ್ಬರು ಡಾ ರಾಜಕುಮಾರ್, ತಾತನ ಹೆಸರು ಹೇಳಿದರೆ ನೆಪೋಟಿಸಮ್ ಆಗತ್ತೆ ಅಂದುಕೊಂಡು “ನಮ್ಮ ಅಣ್ಣಾವ್ರು” ಎಂದು ನಕ್ಕು ಸುಮ್ಮನಾದಳು. “ಓಹ್ ಫ್ರೀಡಮ್ ಫೈಟರಾ” ಎಂದಾಗ “ನೋ ನೋ ಅ ಲೆಜೆಂಡ್” ಎಂದು ಸುಮ್ಮನಾಗಿ ಮ್ಯಾಕ್ ಬುಕ್ಕಿನಲ್ಲಿ ಕೋಡ್ ಬರೆಯಲು ಶುರು ಮಾಡಿದಳು.

ಹುಡುಗಿಯ ನಿರಾಸಕ್ತಿ ಕಂಡು ಎಲೆನಾಳೆ ಮತ್ತೆ ಮತ್ತೆ ನಿನಗೆ ಯಾಕೆ ಈ ಕಥೆಗಳನ್ನ ಕೇಳುವ ಆಸೆ ಇಲ್ಲ ಎಂದು ಕೇಳುತ್ತಳೆ ಇದ್ದಳು. “ಅಯ್ಯೋ ಬಿಡೆ ಕೋಡ್ ಮಾಡಿ ಮುಗಿಸೋಣ” ಎಂದು ಇದ್ದಳು. “ನೀನು ಹೀಗೆ ಮಾಡಿದರೆ ನಾನು ಸಿವಿಲ್ ವಾರ್ ಮಾಡುತ್ತೇನೆ” ಎಂದು ಎಲೆನಾ ಹೇಳಿದಾಗಲೇ, ಹುಡುಗಿಗೆ ಮುಂದಿನ ಕಥೆಯ ಬಗ್ಗೆ ಹೊಳೆದಿದ್ದು. “ಕಂಪಾನಿಸ್ ನ ಜೈಲಿಗೆ ಹಾಕೋ ಹುನ್ನಾರವಾಗಿತ್ತಂತಲ್ಲ ಆಮೇಲೇನಾಯಿತು” ಎಂದಾಗ ಎಲೆನಾ ” ೩೦ ವರ್ಷದ ತೀರ್ಪು ಬಂದ ಮೇಲೆ ಇದನ್ನ ವಿರೋಧಿಸಿ ಕಂಪಾನಿಸ್ ಅಸ್ತೂರಿಯಾದ ಗಣಿ ಹೋರಾಟದಲ್ಲಿ ತೊಡಗಿಕೊಂಡ ಕತಲಾನಿನ ಸಹವಾಸವೇ ಬೇಡ ಎಂದೂ ಹೋಗಿದ್ದ, ಆಗ ಸ್ಪೇನ್ ಮತ್ತು ಕತಲಾನಿನವರು ಇಬ್ಬರೂ ಇವನ ಮೇಲೆ ಎರಗಿದ್ದರು, ಪುಣ್ಯಕ್ಕೆ ೧೯೩೬ರಲ್ಲಿ ಮತ್ತೆ ಚುನಾವಣೆಯಾಗಿ ಕತಲಾನ್ ಗದ್ದುಗೆಯನ್ನ ಅಲಂಕರಿಸಿದ.
ಇದಾದ ನಂತರ ಸ್ಪೇನಿನಲ್ಲಿ ಸಿವಿಲ್ ವಾರ್ ಶುರುವಾಯಿತು. ಇದರಲ್ಲಿ ಬಾರ್ಸಾದ ಸರ್ಕಾರ ಒಂದು ಕಡೆ, ಮತ್ತೊಂದು ಕಡೆ ಬಾರ್ಸಾದ ಆರ್ಮಿ. ಇವೆರೆಡು ಒಟ್ಟುಗೂಡಿ ಕೆಲಸ ಮಾಡಬೇಕಾದವರು ಬೇರೆಬೇರೆಯಾಗಿ ಹೋರಾಡಲು ಶುರು ಮಾಡಿದರು. ವಿಶ್ವ ಯುದ್ಧಕ್ಕೆ ತಯಾರಾಗಿದ್ದ ಯೂರೋಪ್ , ಸೋವಿಯತ್ ದೇಶಗಳು ಇಲ್ಲಿ ಬೇಳೆ ಬೇಯಿಸಿಕೊಳ್ಳಲು ಕಾಯುತ್ತಿದ್ದರು. ಅತ್ತ ಕಡೆ ಜರ್ಮನಿಯ ನಾಝಿಗಳು, ಇತ್ತಕಡೆ ಸೋವಿಯತ್ತಿನವರು ತಮ್ಮ ಬಾಂಬುಗಳು, ಗನ್ನುಗಳನ್ನು ಕೊಟ್ಟು ಇಲ್ಲಿನ ಜನರನ್ನ ಕೊಬ್ಬಿಸಿದ್ದರು.
ಕಂಪಾನಿಸ್ ಮಾತ್ರ ಫಾಸಿಸಮ್ ವಿರುದ್ಧಾ ಹೋರಾಡೋದಕ್ಕೋಸ್ಕರ ಸ್ಪೇನಿನವರ ಹತ್ತಿರ ಹೋಗಿ ನಮ್ಮ ಪ್ರಜಾಪ್ರಭುತ್ವವನ್ನ ಉಳಿಸಿ ಎಂದು ಕೇಳಿಕೊಳ್ಳುವವರೆಗೆ ಹೋದ. ಫ್ಯಾಸಿಸಮ್ ಜನರನ್ನ ಬದಿಗಿರಿಸುವುದು, ಗುಂಡಿನಲ್ಲೇ ಮಾತಾಡುವವರನ್ನ ಹತ್ತಿಕ್ಕುವ ಸಾಹಸಕ್ಕೆ ಕೈ ಹಾಕಿದ್ದ. ಯಾರೂ ನಮ್ಮ ಪರ್ಮನೆಂಟ್ ಶತ್ರುಗಳಲ್ಲ ಎಂದು ತಿಳಿದು ಸ್ಪೇನಿನವರ ಹತ್ತಿರವೇ ಸಹಾಯವನ್ನೂ ಬೇಡಿದ್ದ. ಆದರೆ ಸ್ಪೇನಿನನವರು ಇವನ್ನನ್ನ ಮುಗಿಸುವ ಕಾರ್ಯ ನಮಗೆ ಸುಲಭವಾಯಿತು ಎಂದು ತಿಳಿದು ಅಲ್ಲಿನ ಸೈನ್ಯದ ವಿರುದ್ಧ ದಂಗೆಗೆ ಅವನ್ನನ್ನ ಬೆಂಬಲಿಸಿ ಯುದ್ಧವನ್ನೂ ಮಾಡಿ, ಮತ್ತೆ ಕತಲೂನ್ಯವನ್ನ ಮೋಸದಿಂದ ತಮ್ಮ ತೆಕ್ಕೆಗೆ ತೆಗೆದುಕೊಂಡರು. ೧೯೩೯ರಲ್ಲಿ ಕಂಪಾನಿಸ್ ನ ಫ್ರಾನ್ಸಿಗೆ ಗಡಿಪಾರು ಮಾಡಿದ್ದರು.

ಆದರೂ ಕತಲೂನ್ಯ ಸ್ವತಂತ್ರ ಎಂದು ತಾನೇ ಆ ದೇಶವನ್ನು ಆಳುತ್ತಿದ್ದ. ಫ್ರಾನ್ಸಿನಲ್ಲಿದ್ದರೆ ತನಗೆ ಅಪಾಯವೆಂದು ಗೊತ್ತಿದ್ದರೂ ತನ್ನ ಮಗನ ಆರೋಗ್ಯದ ಸಲುವಾಗಿ ತನ್ನ ಪ್ರಾಣವನ್ನು ಲೆಕ್ಕಿಸದೇ ಅಲ್ಲಿದ್ದ. ನನ್ನ ಪ್ರಾಣ ಹೋದರೂ ಸರಿಯೇ ಮಗನ ಪ್ರಾಣಕ್ಕೆ ಏನೂ ಆಗಬಾರದೆಂದು ಅಲ್ಲೇ ಉಳಿಯಲು ನಿರ್ಧರಿಸಿದ. ಅಲ್ಲಿ ನಾಝಿಗಳ ಸಹಾಯದಿಂದ ಮತ್ತು ಅವರ ಕುಟಿಲ ತಂತ್ರದಿಂದ ಕಂಪಾನಿಸ್ ನ್ನನ್ನು ಬಂಧಿಸಿ ಸ್ಪೇನಿನವರಿಗೆ ಹಿಡಿದುಕೊಟ್ಟರು. ದೇಶದ್ರೋಹದ ಆರೋಪದ ಮೇಲೆ ಅವನ್ನನ್ನ ಸತತ ಒಂದು ವರ್ಷಗಳ ಕಾಲ ಹಿಂಸೆಗೆ ಗುರಿಪಡಿಸಲಾಗಿತ್ತು. ಇದೇ ಮಾಂಟ್ ಜೂಯಿಕ್ ಕೋಟೆಯ ಒಂದು ಸೆಲ್ಲಿನಲ್ಲಿ ಥರ ಥರದ ಹಿಂಸೆ, ಭಯೋತ್ಪಾದನೆ, ಸೆಡಿಷನ್, ಮತ್ತು ಭ್ರಷ್ಟಾಚಾರದ ಎಲ್ಲಾ ಆರೋಪಗಳಿಗೂ ಗುರು ಮಾಡಿ ಒಂದು ಯುದ್ಧ ಖೈದಿಯನ್ನು ಎಷ್ಟು ತುಚ್ಛವಾಗಿ ನಡೆಸಿಕೊಳ್ಳಬಹುದೋ ಅಷ್ಟು ಕೆಟ್ಟದಾಗಿ ನಡೆಸಿಕೊಂಡು, ಕೋರ್ಟಿನಲ್ಲಿ ಅವರಿಗೆ ಬೇಕಾದ ಹಾಗೆ ತೀರ್ಪನ್ನ ಬರೆಸಿಕೊಂಡರು. ಅಲ್ಲಿದ್ದ ಸ್ಪೇನಿನ ಸೈನಿಕರು ಸುಮ್ಮನೆ ಅವನಿಗೆ ನಾಣ್ಯ ಮತ್ತು ಬ್ರೆಡ್ ತುಂಡುಗಳನ್ನು ಎಸೆದು ಇನ್ನಷ್ಟು ಅವಮಾನ ಮಾಡುತ್ತಿದ್ದರು. ರಾಮನ್ ದೆ ಕಲೂಬಿಯೊಬ್ಬ ಎಂಬ ಸೈನಿಕ ರೆಬೆಲ್ಸ್ ಗುಂಪಿನಲ್ಲಿದ್ದವನು ಕಂಪಾನಿಸ್ ಪರವಾಗಿ ವಾದ ಮಾಡಿದರೂ ಅವನ ಮಾತನ್ನ ಕೇಳದೆ ಗಲ್ಲಿಗೇರಿಸುವ ಎಲ್ಲ ತಯಾರಿಯನ್ನೂ ಮಾಡಿಕೊಂಡರು.
ಅದರ ಪ್ರಕಾರ ಕಂಪಾನಿಸ್ ನ್ನನ್ನ ಗಲ್ಲಿಗೇರಿಸುವ ಶಿಕ್ಷೆ ವಿಧಿಸಲಾಯಿತು. ಕಂಪಾನಿಸ್ ಯಾವುದೇ ಭಯವಿಲ್ಲದೇ ಆ ತೀರ್ಪನ್ನ ಒಪ್ಪಿ ಮತ್ತೇನೂ ಕೊನೆಯ ಆಸೆ ಹೇಳದೆ ತನ್ನ ಜೈಲಿಗೆ ವಾಪಸ್ಸು ಹೋದ. ಹೋಗುವ ಮುನ್ನ ಕೆಂಪಾದ ಆಕಾಶವನ್ನು ಕಂಡು ಕೈ ಮುಗಿದನಂತೆ. ಅಕ್ಟೋಬರ್ ೧೫, ೧೯೪೦ರಂದು ಬೆಳಗ್ಗೆ ಆರು ಘಂಟೆಗೆ ಎಬ್ಬಿಸಿ ಅವನ್ನನ್ನ ಗಲ್ಲಿಗೇರಿಸುವ ಜಾಗಕ್ಕೆ ಕರೆದುಕೊಂಡು ಹೋದರಂತೆ. ಅಲ್ಲಿ ತಾನು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಳ್ಳುವುದಿಲ್ಲ ಎಂದು ಹಠ ಮಾಡಿದ್ದಕ್ಕೆ ಬರಿಗಾಲಿನಲ್ಲಿ ಸಿವಿಲ್ ಗಾರ್ಡುಗಳ ಮುಂದೆ ತಂದು ನಿಲ್ಲಿಸಿದರಂತೆ, ಫೈರ್ ಎಂದು ೧ ೨ ೩ ೪ ಗುಂಡುಗಳನ್ನು ಅವರು ಹೊಡೆದಾಗ, ‘ಪರ್ ಕತಲೂನ್ಯಾ'( ಕತಲೂನ್ಯಕ್ಕಾಗಿ) ಎಂದು ಕೂಗಿ ಪ್ರಾಣ ಬಿಟ್ಟನಂತೆ. ಡಾಕ್ಟರ್ ಒಬ್ಬಾಕೆ ಬಂದು ಇಂಟರ್ನಲ್ ಹೆಮಾರೇಜ್ ಎಂದು ಶರಾ ಬರೆದು ಅವನ ಸಾವನ್ನ ಗುಂಡಿಟ್ಟುಕೊಂದು ಮಾಡಿಲ್ಲ ಎಂದು ಬರೆದು ಹೋದಳಂತೆ” ಎಂದು ಹೇಳಿ ಎಲೆನಾ ಬಿಕ್ಕಿ ಬಿಕ್ಕಿ ಅಳೋದಕ್ಕೆ ಶುರು ಮಾಡಿದಳು…
ಹುಡುಗಿ ಮಾತ್ರ ಸಿಂಥ್ ವಾಯ್ಸಿನಲ್ಲಿ “ಪರ್ ಕತಲೂನ್ಯ, ಪರ್ ಕತಲೂನ್ಯ…” ಎಂದು ಪದೇ ಪದೇ ಪ್ಲೇ ಮಾಡುತ್ತಲೇ ಹೋದಳು.






ಬಾರ್ಸ ಅನ್ನೋದು ಫುಟ್ಬಾಲ್ ಕ್ಲಬ್ ಅಲ್ಲವಾ? ಬಾರ್ನ ಅನ್ನೋದು ಬಾರ್ಸಿಲೋನ ದ ಹ್ರಸ್ವ ರೂಪ. ಗೊಂದಲ ಬಗೆಹರಿಸಿ.
ಇಂಗ್ಲಿಷ್ ಬಳಕೆ ಹೇರಳವಾಗಿದೆ
ಇಂಟರೆಸ್ಟಿಂಗ್