ಸ್ಮಿತಾ ಅಮೃತರಾಜ್
ಪುಟ್ಟು ಪುಟ್ಟ ಮಕ್ಕಳೆಲ್ಲರೂ ಅಪ್ಪ-ಅಮ್ಮನನ್ನು,ಹಿರಿಯರನ್ನು,ತನ್ನ ಸುತ್ತಮುತ್ತಲಿನವರನ್ನು ಅನುಕರಿಸುವುದು ಸಹಜ.ಅದರಲ್ಲೂ ಮನೆಯಲ್ಲಿ ಪುಟ್ಟ ಗೌರಿಗಳಂತೆ ಹೆಣ್ಣು ಮಕ್ಕಳಿದ್ದರಂತೂ ಮುಗಿಯಿತು.ಅಮ್ಮನಂತೆ ವೇಷ ಭೂಷಣ ಧರಿಸುವುದೇನು? ಸೀರೆ ರವಿಕೆ ತೊಡುವುದು,ಅವಳ ಹಾವ -ಭಾವಗಳನ್ನೆಲ್ಲಾ ಚಾಚು ತಪ್ಪದೇ ಅನುಕರಿಸುವುದು ನಡೆದೇ ಇರುತ್ತದೆ.
ಅದೃಷ್ಟವಶಾತ್ ನಾನೂ ಹೆಣ್ಣಾದ ಕಾರಣ ನನ್ನ ಎಳವೆಯೂ ಇದಕ್ಕೆ ಹೊರತಾಗಿರಲಿಲ್ಲ.ಮನೆಗೆ ಕೆಲಸಕ್ಕೆ ಬರುತ್ತಿದ್ದ ಪಾಚು ,ಲಚುಮಿಯರ ಸುತ್ತ ದಿನವಿಡೀ ಸುಳಿಯುತ್ತಾ ಅವರ ಬಿಟ್ಟರೆ ಬೇರೆ ಯಾರು ಅವರ ಸರಿಗಟ್ಟುವವರು ಈ ಲೋಕದಲ್ಲಿ ಬೇರೆ ಇಲ್ಲವೆಂಬಂತೆ ಅವರನ್ನು ಗಮನಿಸುವುದರಲ್ಲೇ ಸಮಯ ಸರಿದು ಹೋಗುತ್ತಿತ್ತು. ಇಂತಿಪ್ಪ ಆದರ್ಶಪ್ರಾಯ ಪಾಚು,ಲಚುಮಿಯರು ಏಕಾಏಕಿ ಒಂದು ದಿನ ಗೈರು ಹಾಜರಾಗಿ , ಸ್ತ್ರೀ ಸಂಕೇತವಾಗಿ ಹೆಣ್ತನವನ್ನು ಸಾಬೀತು ಪಡಿಸಲು,ಮೂಗಿಗೊಂದು ಮುದ್ರೆ ಒತ್ತಿಸುವ ಸಲುವಾಗಿ ಅಕ್ಕಸಾಲಿಗನ ಬಳಿ ಪವಡಿಸಿದ್ದರು. ಮಾರನೇ ದಿನ ಬರುವಾಗ ಅವರ ಮೂಗಿನಲ್ಲಿ ಬಿಳಿ ನತ್ತೊಂದು ಪಳ ಪಳನೇ ಮಿನುಕುತ್ತಾ,ಪಾಚು ಲಚುಮಿಯರು ಹಿಂದೆಂದಿಗಿಂತಲೂ ಸುಂದರವಾಗಿ ಲಕಲಕಿಸುತ್ತಿದ್ದರು.ಬಂದವರೇ ಮೂಗುತಿಯ ವೃತ್ತಾಂತಗೈಯುತ್ತಾ ಇರುವ ಸಮಯವನ್ನು ಕೊಯ್ಯಲು ಶುರುಹತ್ತಿದ್ದರು.ಆ ಕ್ಷಣಕ್ಕೆ ನತ್ತಿನ ಮಿನುಗು ಅವರ ಕಣ್ಣೊಳಗೂ ಹೊಳೆಯುತ್ತಿತ್ತು.ಹೆಣ್ಣಾದ ಮೇಲೆ ಕಡ್ಡಾಯವಾಗಿ ಮೂಗಿಗೆ ಮೂಗುತಿ ಏರಿಸಬೇಕೆಂದೂ,ಮೂಗಿಗೆ ನತ್ತಿಲ್ಲದ ಹೆಣ್ಣನ್ನು ಯಾರೂ ಮದುವೆಯಾಗುವುದಕ್ಕೆ ಮುಂದೆ ಬರುವುದಿಲ್ಲವೆಂದೂ,ಈ ಕಾರಣಕ್ಕಾಗಿ ಎಷ್ಟೋ ಮದುವೆಗಳು ಮುರಿದು ಬಿದ್ದಿದೆಯೆಂತಲೂ..ಇನ್ನು ಏನೇನೋ ಬಡಾಯಿ ಕೊಚ್ಚಿಕೊಳ್ಳುತ್ತಾ ಬುರುಡೆ ಬಿಡುತ್ತಿದ್ದದ್ದು ನನ್ನ ಬುರುಡೆಯೊಳಗೂ ಮೆಲ್ಲ ಮೆಲ್ಲನೆ ಇಳಿಯದಿದ್ದರೆ ಹೇಗೆ?ಯಾಕೆಂದರೆ ನಾನೂ ಕೂಡ ಹೆಣ್ಣಲ್ಲವೇ? ಮುಂದೊಮ್ಮೆ ಮೂಗುತಿ ತೊಡುವ ಮುಹೂರ್ತಕ್ಕೆ ಅಣಿಯಾಗಬೇಕಾದವಳಲ್ಲವೇ?

ಹಾಗಾಗಿ ಸಹಜವೆಂಬಂತೆ ನನಗೂ ಅವರಂತೆ ಮೂಗುತಿ ಚುಚ್ಚಿಸಿಕೊಳ್ಳುವ ಆಸೆ ಬಲವಾಯಿತು. ಅಮ್ಮನೊಂದಿಗೆ ಹೇಳಿದರೆ..ಅಕೋ! ನೋಡು! ಈಗಲೇ ಇವಳಿಗೆ ಮದುವೆ ಆಸೆ ಆಗಿದೆ ಅಂತ ರೇಗಿಸುತ್ತಾ,ನೀನಿನ್ನೂ ತೀರಾ ಚಿಕ್ಕವಳು. ದೊಡ್ಡವಳಾದ ಮೇಲೆ ನಿನ್ನ ಮೂಗಿಗೆ ಚಿನ್ನದ ಕಟ್ಟಿರುವ,ಚೆಂದದ ಮುತ್ತಿನ ನತ್ತನ್ನು ಚುಚ್ಚಿಸುವ ಅಂತ ಸಮಾಧಾನಿಸಿದರೂ,ನನಗೇರಿದ ಮೂಗುತಿಯ ನಶೆ ಕೆಳಗಿಳಿಯಲೇ ಇಲ್ಲ.ಪಾಚು,ಲಚುಮಿಯರ ಹೊಳೆವ ಮೂಗುತಿ ನೋಡುತ್ತಾ..ನೋಡುತ್ತಾ ಅದೇನು ಹೊಳೆಯಿತೋ ಗೊತ್ತಿಲ್ಲ.ಸೀದಾ ಮಲಗುವ ಕೋಣೆಗೆ ಹೋಗಿ,ಅಮ್ಮನ ಪುಟ್ಟ ಕರಡಿಗೆಯೊಳಗಿದ್ದ ಒಂದು ಸಣ್ಣ ಕೆಂಪು ಮಣಿಕಾಯಿಯನ್ನು ತೆಗೆದು,ಕನ್ನಡಿ ನೋಡುತ್ತಾ ಅದನ್ನು ಆಗಾಗ್ಗೆ ಮೂಗಿಗೆ ಹಿಡಿದು ಅಂಟಿಸಿಕೊಳ್ಳುತ್ತಾ,ಕೆಲವೊಮ್ಮೆ ಮೂಸಿ ನೋಡುತ್ತಾ ಸಂಭ್ರಮಿಸುತ್ತಿರುವಾಗ, ಅಚಾನಕ್ ಅನಾಹುತವೊಂದು ನಡೆದೇ ಹೋಯಿತು.ಸರಕ್ಕನೆ ಕೆಂಪು ಮಣಿಕಾಯಿ ನೇರ ಮೂಗಿನ ಹಾದಿ ಹಿಡಿದು ಒಳಗಡೆ ಗಪ್ಪೆಂದು ಕುಳಿತು ಬಿಟ್ಟಿತ್ತು. ಎಷ್ಟು ಬಿರುಸಾಗಿ ಉಸಿರು ಹೊರ ಹಾಕಿದರೂ ಕೆಂಪು ಮಣಿಕಾಯಿ ಮಾತ್ರ ಜಪ್ಪಯ್ಯ ಅಂದರೂ ಕೆಳಗಿಳಿಯಲು ಒಪ್ಪಲೇ ಇಲ್ಲ. ಒಮ್ಮೆ ಮೇಲೇರಿದವರು ಮತ್ತೆ ಕೆಳಗಿಯಲು ಬಯಸುವುದಿಲ್ಲವೆಂಬುದು ಬಹುತೇಕ ಎಲ್ಲಾ ವಿಷಯಗಳಲ್ಲೂ ಸತ್ಯವೇ ಎಂಬುದು ಮಾತ್ರ ದಿಟ.
ನನಗೋ ಒಮ್ಮೆಗೇ ಹೇಳತೀರದ ಭಯ ಹುಟ್ಟಿ ಎರಡೂ ಮೂಗು ಮುಚ್ಚಿದಂತಾಗಿ ಉಸಿರು ಕಟ್ಟತೊಡಗಿತು.ಯಾಕೆಂದರೆ ನನ್ನ ಮಾವನೊಬ್ಬ ನನಗೆ ಹೀಗೇ ಹೆದರಿಕೆ ಹುಟ್ಟಿಸಿದ್ದ.ಒಮ್ಮೆ ತೋಟದ ಗಿಡದಲ್ಲಿ ಸಿಕ್ಕಿದ ಒಂದೇ ಒಂದು ಹಳದಿ ಬಣ್ಣದ ಗುಮ್ಮಟೆ ಹಣ್ಣನ್ನು ತಿನ್ನಲು ಮನಸಾಗದೇ, ತಿಂದರೆ ಎಲ್ಲಿ ಒಮ್ಮೆಗೇ ಮುಗಿದು ಹೋಗಿಬಿಡುತ್ತದೆ ಎಂಬ ಆಸೆಯಿಂದ, ಹಾಗೇ ಬಾಯೊಳಗೆ ಅದನ್ನು ಮುಚ್ಚಟ್ಟೆಯಿಂದ ಮುಚ್ಚಿಟ್ಟುಕೊಂಡಿರುವಾಗ ,ಯಾವುದೋ ಒಂದು ಮಾಯಕದಲ್ಲಿ ಅದು ಗುಳುಂ ಎಂದು ಹೊಟ್ಟೆ ಸೇರಿತ್ತು.ಅಷ್ಟಕ್ಕೇ ದಿಗಿಲುಗೊಂಡು ಮಾವನೊಂದಿಗೆ ಹೇಳಿಕೊಂಡರೆ, ಅವನೋ..ನೋಡು! ನಾಳೆ ಗುಮ್ಮಟ್ಟೆ ಹೊಟ್ಟೆಯೊಳಗೆ ಗಿಡವಾಗಿ,ಹೊಟ್ಟೆಯೇ ಗುಮ್ಮಟ್ಟೆಯಂತಾಗಿ,ಮತ್ತೆ ಬಾಯಿಂದ ಹೊರಗೆ ಗೊಂಚಲು ಗೊಂಚಲು ಗುಮ್ಮಟೆ ಹಣ್ಣುಗಳೆಲ್ಲಾ ಹೊರಚಾಚುತ್ತವೆ ಅಂದಿದ್ದ. ನಾಳೆ ನಾನು ಆ ಅವತಾರದಲ್ಲಿ ಹೇಗಪ್ಪಾ ಶಾಲೆಗೆ ಹೋಗುವುದು ಅಂತ ನೆನೆದುಕೊಂಡಾಗಲೇ ಗಂಟಲುಬ್ಬಿ ಅಳು ಒತ್ತರಿಸಿ ಬಂದಿತ್ತು.
ಇರಲಿ ಬಿಡು. ನಾನು ಹೇಗೋ ಮಾಯಮಂತ್ರ ಮಾಡಿ ಆ ಗುಮ್ಮಟೆಯನ್ನು ಹೊಟ್ಟೆಯೊಳಗೇ ಕರಗಿಸುತ್ತೇನೆ,ಭಯಪಡಬೇಡ ಅಂತ ಸಮಾಧಾನ ಕೂಡ ಮಾಡಿದ್ದ.ಈಗ ನೋಡಿದರೆ..ಕೆಂಪು ಮಣಿಕಾಯಿ ಮೂಗೊಳಗೆ ಹುಟ್ಟಿ ಬೆಳೆದು,ಮೂಗಿನ ತುಂಬೆಲ್ಲಾ ಮಣಿಕಾಯಿಗಳು ಪುತಪುತನೇ ಉದುರತೊಡಗಿದರೆ ನನ್ನ ಗತಿ?ಛೂ ಮಂತ್ರ ಮ್ಯಾಜಿಕ್ ಮಾಡಿ ಮಣಿಕಾಯಿ ಕರಗಿಸಲು ಮಾವ ಕೂಡ ಹತ್ತಿರದಲ್ಲಿಲ್ಲ ಎಂಬ ಸಂಕಟಕ್ಕೆ ಉಸಿರೇ ನಿಂತು ಹೋದಂತಾಗುತ್ತಿತ್ತು.ಉಪಾಯವಿಲ್ಲದೆ ಅಮ್ಮನ ಬಳಿ ಮೂಗು ಸೇರಿದ ಮಣಿಕಾಯಿಯ ಬಗ್ಗೆ ಮೆಲ್ಲನುಸುರಿದರೆ..ಅಷ್ಟಕ್ಕೇ ಅಮ್ಮ ಹೆದರಿ ಕಂಗಾಲಾಗಿ ಏದುಸಿರು ಬಿಡುತ್ತಾ ,ಒಂದೇ ಉಸುರಿಗೆ ಅಪ್ಪನಲ್ಲಿ ಉಸುರಿ ,ಗಡಿಬಿಡಿಯಲ್ಲಿ ಬೈಕು ಏರಿಸಿ ಡಾಕ್ಟ್ರ ಬಳಿ ಕಳುಹಿಸಿಬಿಟ್ಟಿದ್ದಳು.ಡಾಕ್ಟ್ರೋ…ಅದೇನೋ ನಳಿಕೆ ಹಾಕಿ ಮೂಗಿಗೇರಿದ ಮಣಿಯನ್ನು ಪುಸಲಾಯಿಸಿ,ರಮಿಸಿ ,ಹೇಗೋ ಹೊಟ್ಟೆಗಿಳಿಸಿ ಉಸ್ಸಪ್ಪಾ ಅಂತ ನಿರಾಳರಾದರು. ನನ್ನ ಮೂಗುತಿ ಆಸೆ ಅಲ್ಲಿಗೇ ಟುಸ್ಸ ಆಯಿತು.ಮತ್ತೆ ಬೆಳೆದು ದೊಡ್ಡವಳಾಗಿ ಮೂಗುತಿ ಚುಚ್ಚಿಸಿಕೊಳ್ಳದೆ ಮದುವೆ ಕೂಡ ಆಗಿ ಹೋಯಿತು.
ಹಾಗಂತ,ಯಕಶ್ಚಿತ್ ಇದೊಂದು ಪುಟ್ಟ ಮೂಗುತಿ ಕತೆ ಅಂತ ಯಾರೂ ಲಘುವಾಗಿ ಪರಿಗಣಿಸುವ ಹಾಗಿಲ್ಲ.ಕೈಗೆತ್ತಿಕೊಂಡ ವಿಷದ ಬಟ್ಟಲಲ್ಲಿ ವಜ್ರದ ಮೂಗೂತಿ ಮಿನುಗಿ ಪುರಂದರ ದಾಸರ ಬದುಕೇ ಬದಲಾಯಿತು ಅಂದ ಮೇಲೆ ..ಮೂಗುತಿಯದ್ದು ಸಾಮಾನ್ಯ ಸಂಗತಿಯೇ?ಮೂರುತಿ ಸಣ್ಣದಾದರೂ ಕೀರುತಿ ದೊಡ್ಡದೇ.ಕೊನೆಗೂ ನಿನ್ನ ಮೂಗಿನ ನತ್ತಾದರೂ ನಾ ಆಗಬಾರದಿತ್ತೇ ಅಂತ ಹಳಹಳಿಸುತ್ತಾ ಓಲೈಸುವ ಪ್ರೇಮಿಗಳಿಗೇನು ಕಡಿಮೆಯಿಲ್ಲ.ಆದರೆ ಕೆಲವರ ಮೂಗಿಗೂ ಮೂಗುತಿಗೂ ಆಗಿ ಬರುವುದಿಲ್ಲವೆಂಬ ಸಂಗತಿ ಕೂಡ ರೋಚಕವಾದದ್ದೆ. ಎಷ್ಟೇ ಕೊಂಡಾಡಿದರೂ ಅಷ್ಟೆ.ಇನ್ನೂ ಮುಂದಕ್ಕೆ ಹೋಗಿ ನನಗೆ ಗೊತ್ತಿರುವ ಸಂಗತಿ ಹೇಳಬೇಕೆಂದರೆ ನನ್ನ ಚಿಕ್ಕಮ್ಮನ ಮೂಗಿಗೂ ಮೂಗುತಿಗೂ ಅಷ್ಟಕಷ್ಟೆ.ಅವಳ ಮದುವೆ ನಿಶ್ಚಯವಾಗಿ,ಮೂಗು ಚುಚ್ಚುವ ಶಾಸ್ತ್ರ ನಡೆದು ಹೋದರೂ,ಮೂಗುತಿ ಇಟ್ಟಾಕ್ಷಣ ಮೂಗಿನ ಚರ್ಮದ ಮಾಂಸವೇ ಬಲಿತು ಮೂಗುತಿಯನ್ನೇ ಮುಚ್ಚಿ ಹಾಕಿ ಬಿಡುತ್ತಿತ್ತು.ಎಷ್ಟೇ ಉಪಚಾರ ಮಾಡಿ ಓಲೈಸಿದರೂ ಸೊಪ್ಪು ಹಾಕದೇ ಒಂದೇ ಸಮನೆ ರಚ್ಚೆ ಹಿಡಿದು ನಿರಾಕರಿಸುತ್ತಿತ್ತು.ಅಂತೂ ಒಮ್ಮೆ ಮೂಗು ಚುಚ್ಚಿದರ ಫಲವಾಗಿ ಮೂಗಿನ ಮೇಲೆ ಮೂಗುತಿಯಷ್ಟು ಸಣ್ಣಕ್ಕೆ ಚರ್ಮವೊಂದು ಬೆಳೆದು ನಿಂತು ತಾನೇ ಮೂಗುತಿಯೆಂದು ಈಗ ಬೀಗುತ್ತಿದೆ.
ಪಾಪ! ಆಕೆಯೋ ವಿಧಿಯಿಲ್ಲದೆ ಅದರ ಮೇಲೆ ಗಿಲೀಟಿನ ಮಣಿ ಅಂಟಿಸಿ ಮದುವೆ ಶಾಸ್ತ್ರಕ್ಕೆ ಅಣಿಯಾದದ್ದು ಈಗ ಹಳೇ ಕಥೆ.ಯಾಕೋ ಏನೋ..ಕೆಲವರ ಮೂಗಿಗೆ ಮೂಗುತಿ ಸುಂದರ ಮುತ್ತಿನ ನತ್ತಾಗಿ ಶೋಭಿಸಿದರೆ,ಇನ್ನು ಕೆಲವರಿಗೆ ಕುತ್ತಾಗಿ ಬಿಡುತ್ತಿತ್ತು.ಇಷ್ಟೆಲ್ಲಾ ಮೂಗುತಿಯ ಅವಾಂತರಗಳ ನಡುವೆಯೂ ಮೂಗು ತೂರಿಸುತ್ತಾ,ಬರೀ ಮೂಗನ್ನು ನೋಡಿ ಮೂಗ್ಯಾಕೆ ಚುಚ್ಚಿಸಲಿಲ್ಲ ?ಅಂತ ಚುಚ್ಚುತ್ತಲೇ ಇರುತ್ತಾರೆ.ತನ್ನ ಚೆಂದದ ಮೂಗಿಗೆ ಉದ್ದನೆಯ ಹೊಸ ನಮೂನೆಯ ಮೂಗುತಿ ಧರಿಸಿ ಟೆನ್ನಿಸ್ ಆಡುವ ಸಾನಿಯಾ ಮಿಜರ್ಾಳ ಮೂಗುತಿಯನ್ನು ಆಟಕ್ಕಿಂತ ಹೆಚ್ಚಾಗಿ ಮೂಗುತಿಯನ್ನೇ ನೋಡಿ ಕೊಂಡಾಡುವರಿಗೇನು ಕಡಿಮೆಯಿಲ್ಲ.ಈಗಂತು ಚಿನ್ನದ ಬೆಲೆ ಗಗನಕ್ಕೇರಿ ಮೂಗುತಿ ಏರಿಸಿಕೊಳ್ಳದ್ದಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ.ಈ ಹೊತ್ತಿನಲ್ಲಿ,ನತ್ತಿಲ್ಲದ ಮೂಗಿನ ಬಗ್ಗೆ ಯಾರಾದರೂ ಪ್ರಶ್ನೆ ಎಸೆದರೆ..ಮೂಗುತಿ ಮುಂಬಾರ..ಅಂತ ಪದ ಹಾಡಿ ಮಾತು ತೇಲಿಸುವವರಿಗೇನು ಕಡಿಮೆಯಿಲ್ಲ.ಅಂತೂ ಇಂತೂ ಮೂಗಿಗೆ ಮೂಗುತಿ ಇದ್ದರೂ ,ಇಲ್ಲದಿದ್ದರೂ ಉಸಿರುವವರೆಗೂ ಮೂಗು ನಮಗೆ ಉಸಿರಾಟಕ್ಕೆ ಏನೂ ತೊಂದರೆ ಮಾಡಲಾರದು ಅಂತ ಖಾತ್ರಿ ಪಡಿಸಿಕೊಂಡ ಮೇಲೆ ಮೂಗುತಿಯ ಉಸಾಬರಿ ಬಿಟ್ಟು ತೆಪ್ಪಗಿದ್ದೇನೆ.






tumba chennaagi bredideera. ellindellige vaydiddeeri!
ಖುಷಿಯಾದ ಬರಹ..
nanna akka meera muuugu chucchisikondaaga naane novu anubhavisi atthidda nenapaytu…eega avalha minchuva muuguti ella novannu maaya maadide..lekhana tanna praamanikateyinda hrudya aagidhe
uttama baraha..muguLnagu tarisitu smita madam..