ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ: ಒಲವು ನಿಲುವು
ಬಿ ಎಂ ಬಶೀರ್
‘ಮುಸ್ಲಿಮ್ ಹೆಣ್ಣು ಮಕ್ಕಳು ಮಸೀದಿಗೆ ನಮಾಝ್‌ಗೆ ಹೋಗುವುದರ ಕುರಿತಂತೆ ನೀನ್ಯಾಕೆ ಮಾತನಾಡುವುದಿಲ್ಲ….?’ಎಂದು ಕೆಲವು ಗೆಳೆಯರು ನನ್ನ ಹಣೆಗೆ ಪಿಸ್ತೂಲ್ ಒತ್ತಿ ಕೇಳುತ್ತಿದ್ದಾರೆ. ಹೀಗೆಂದು ಕೇಳಿದವರಲ್ಲಿ, ಹೆಣ್ಣು ಮಕ್ಕಳು ತಲೆವಸ್ತ್ರ ಹಾಕಿ ಶಾಲೆಗೆ ಹೋಗುವುದನ್ನು ಶತಾಗತಾಯ ವಿರೋಧಿಸಿದವರಿದ್ದಾರೆ. ‘ತಲೆವಸ್ತ್ರ (ಸ್ಕಾರ್ಫ್) ಅವರಿಗೆ ಮುಖ್ಯವೆಂದಾದರೆ ಅವರು ಮನೆಯಲ್ಲೇ ಇರಲಿ’ ಎಂದು ವಾದಿಸಿದ ಕಮ್ಯುನಿಸ್ಟ್ ಗೆಳೆಯರಿದ್ದಾರೆ. ಇದೀಗ ಕೆಲವರಂತೂ ‘ದಲಿತರ ಮೇಲೆ ಪ್ರೀತಿ ತೋರಿಸುವ ನೀನು ಮುಸ್ಲಿಮ್ ಮಹಿಳೆ ಮಸೀದಿಯಲ್ಲಿ ನಮಾಝ್ ಮಾಡುವುದರ ಕುರಿತಂತೆ ಯಾಕೆ ಸುಮ್ಮನಿದ್ದೀಯ?’ ಎಂದು ಪದೇ ಪದೇ ಕೇಳಿ, ನನ್ನ ಬಾಯಿ ಮುಚ್ಚಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ನಾನಿಲ್ಲಿ ಅನಿವಾರ್ಯವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಯಾಕೆಂದರೆ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಬೇಕು, ಹೋಗಬಾರದು ಎನ್ನುವುದು ನನಗೆ ಯಾವತ್ತೂ ಪ್ರಶ್ನೆಯಾಗಿರಲಿಲ್ಲ. ಮಸೀದಿಗೆ ಹೋಗಲೇ ಬೇಕೆಂದರೆ, ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನೀಡುವ ಮಸೀದಿಗಳು ಇದೀಗ ಎಲ್ಲ ಕಡೆ ತಲೆಯೆತ್ತುತ್ತಿವೆ. ನನಗೆ ಮುಖ್ಯವೆನಿಸುವುದು ಶಾಲೆ, ಕಾಲೇಜುಗಳಿಗೆ ಮುಸ್ಲಿಮ್ ಮಹಿಳೆಯರು ಇನ್ನಷ್ಟು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತೆರಳಬೇಕು. ನಾವಿಂದು ಧ್ವನಿಯೆತ್ತಬೇಕಾದುದು ಈ ಕುರಿತಂತೆ.

ಹಾಸನದಲ್ಲಿ ನಡೆದ ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ ವಿವಾದ ಹೊಸತೇನೂ ಅಲ್ಲ. ಮತ್ತು ಈ ಚಳವಳಿಯ ಹಿಂದೆ ಮುಸ್ಲಿಮ್ ಮೂಲಭೂತವಾದಿಗಳೆಂದು ಪ್ರಗತಿಪರರು ಯಾರನ್ನು ಕರೆಯುತ್ತಾರೆಯೋ ಅವರೂ ಇದ್ದಾರೆ ಎಂದರೆ ಎಂದರೆ ನೀವು ಒಪ್ಪುತ್ತೀರೋ ಇಲ್ಲವೋ. ಸುಮಾರು ಹದಿನೈದು ವರ್ಷಗಳ ಹಿಂದೊಮ್ಮೆ ಇಂತಹದೇ ಪ್ರಕರಣ ಹಾಸನದಲ್ಲಿ ನಡೆದಿತ್ತು. ಮಸೀದಿ ಪ್ರವೇಶವನ್ನು ಎತ್ತಿ ಹಿಡಿದ ಭಾನು ಮುಷ್ತಾಕ್ ಮೇಲೆ ಕೆಲವರು ನಿಷೇಧವನ್ನೂ ಹೇರಿದ್ದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಅದನ್ನು ಬಲವಾಗಿ ಖಂಡಿಸಿದವನಲ್ಲಿ ನಾನೂ ಒಬ್ಬ. ಆದರೆ ನಾನು ಈ ಸಂದರ್ಭದಲ್ಲಿ ಇನ್ನೂ ಒಂದು ಸಾಲನ್ನು ಒತ್ತಿ ಹೇಳಿದ್ದೆ. ಮುಸ್ಲಿಮ್ ಮಹಿಳೆಯರ ಸಮಸ್ಯೆ ಮಸೀದಿಯಲ್ಲ. ಶಾಲೆ, ಕಾಲೇಜುಗಳು ಎಂದು ಅಭಿಪ್ರಾಯಿಸಿದ್ದೆ. ಅದಕ್ಕೆ ಕಾರಣವೂ ಇತ್ತು.
ಕರ್ನಾಟಕದಲ್ಲಿ ಮುಸ್ಲಿಮ್ ಮಹಿಳೆಯರೂ ಧರ್ಮದ ಪ್ರಮುಖ ಭಾಗವಾದುದು ಈ ಭಾಗದಲ್ಲಿ ಜಮಾತೆ ಇಸ್ಲಾಮ್ ತಲೆ ಎತ್ತಿದ ಬಳಿಕ ಎನ್ನುವುದನ್ನು ಗಮನಿಸಬೇಕು. ಜಮಾತೆ ಇಸ್ಲಾಮನ್ನು ಕೆಲವರು ಮುಸ್ಲಿಮ್ ಮೂಲಭೂತವಾದಿ ಸಂಘಟನೆಯೆಂದು ಕರೆಯುತ್ತಿರುವುದೂ ಇಲ್ಲಿ ಮುಖ್ಯವಾಗುತ್ತದೆ. ನಿಜಕ್ಕೂ ಇದೊಂದು ಬಿಕ್ಕಟ್ಟೇ ಸರಿ. ನಾವು ಯಾರನ್ನು ಮುಸ್ಲಿಮ್ ಮೂಲಭೂತವಾದಿಗಳೆಂದು ಟೀಕಿಸುತ್ತೇವೆಯೋ ಅವರೇ ಮೊತ್ತ ಮೊದಲಾಗಿ ಕನ್ನಡದಲ್ಲಿ ಕುರ್‌ಆನನ್ನು ತರ್ಜುಮೆ ಮಾಡಿದರು. ಬಹುಸಂಸ್ಕೃತಿಯ ಪ್ರತಿನಿಧಿಗಳೆನಿಸಿಕೊಂಡ ಇಲ್ಲಿನ ದರ್ಗಾದ ಜನರೆಲ್ಲ ಇದನ್ನು ಪ್ರತಿಭಟಿಸಿದ್ದರು. ‘‘ಕನ್ನಡದಲ್ಲಿ ಕುರ್‌ಆನ್…ತರುವುದೇ…’’ ಎಂದು ಆಘಾತ ವ್ಯಕ್ತಪಡಿಸಿದ್ದರು. ನನ್ನ ಬಾಲ್ಯದಲ್ಲಿ, ಮುಸ್ಲಿಮ್ ಸಮುದಾಯದ ಬಹುತೇಕ ಮಂದಿ ಜಮಾತೆ ಇಸ್ಲಾಮಿನ ವಿರುದ್ಧ ಧ್ವನಿಯೆತ್ತಿದ್ದರು. ಕತ್ತಿ ಹಿಡಿದು ಅವರ ಮೇಲೆ ಏರಿ ಹೋದವರೂ ಇದ್ದಾರೆ. ಅದಕ್ಕೆ ಮುಖ್ಯ ಕಾರಣವೊಂದಿತ್ತು. ಜಮಾತೆ ಇಸ್ಲಾಮ್ ದರ್ಗಾಗಳನ್ನು ನಂಬುವುದಿಲ್ಲ. ಅದಕ್ಕೆ ಕುರ್‌ಆನ್‌ನಲ್ಲಿ ಸ್ಥಾನವಿಲ್ಲ ಎಂದು ವಾದಿಸುತ್ತಾರೆ. ದರ್ಗಾದಲ್ಲಿ ದೀಪ ಹಚ್ಚುವುದು, ಉರೂಸ್ ಆಚರಿಸುವುದು ಇತ್ಯಾದಿಗಳೆಲ್ಲ ಇಸ್ಲಾಮ್ ಧರ್ಮಕ್ಕೆ ವಿರುದ್ಧ ಎಂದು ಜಮಾತೆ ಇಸ್ಲಾಮಿನ ಮಂದಿ ವಾದಿಸುತ್ತಾರೆ. ಬಾಬಾಬುಡಾನ್‌ಗಿರಿ ದರ್ಗಾದ ಬಗ್ಗೆ ಯಾವುದೇ ಧಾರ್ಮಿಕ ಭಾವನೆಗಳನ್ನೂ ಜಮಾಅತೆ ಇಸ್ಲಾಮಿ ಪಂಗಡವಾಗಲಿ, ಸಲಫಿ ಪಂಗಡವಾಗಲಿ ಹೊಂದಿಲ್ಲ. ಪರೋಕ್ಷವಾಗಿ ಅದು ಧ್ವಂಸವಾಗಬೇಕು ಎಂದೇ ಅವರು ಆಶಿಸುತ್ತಾರೆ. ಆದರೆ ಸೂಫಿ ಸಂತರ ದರ್ಗಾಗಳ ಬಗ್ಗೆ, ಭಾರತದ ಭಾವನೆ ಭಿನ್ನವಾದುದು. ಅದು ಈ ದೇಶದ ಬಹುಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಗತಿಪರರ ಸಹಿತ ಎಲ್ಲರೂ ವಾದಿಸುತ್ತಾರೆ. ಆದರೆ ಇಂದು ನಮ್ಮ ನಡುವಿನ ದರ್ಗಾಗಳನ್ನು ನೆಲೆ ಮಾಡಿಕೊಂಡ ಸುನ್ನಿಗಳು ಮುಸ್ಲಿಮ್ ಮಹಿಳೆಯರು ಶಾಲಾ ಕಾಲೇಜುಗಳಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಮಸೀದಿಗಳಲ್ಲಿ ಮಹಿಳೆಯರು ನಮಾಝ್ ಮಾಡುವುದನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಾರೆ. ಇಂತಹ ಕಾಲಘಟ್ಟದಲ್ಲಿ, ಇಸ್ಲಾಮ್‌ನ ಮೂಲಭೂತ ತತ್ವಗಳ ಆಧಾರದ ಮೇಲೆ ನಿಂತಿದ್ದೇವೆ ಎನ್ನುವ ಜಮಾತೆ ಇಸ್ಲಾಮಿಗಳು ಮುಸ್ಲಿಮರು ವೇದಿಕೆ ಏರುವುದನ್ನು, ಶಾಲೆಗೆ ಹೋಗುವುದನ್ನು ಪ್ರೋತ್ಸಾಹಿಸಿದರು. ಆದರೆ ಅದು ಧಾರ್ಮಿಕ ಗೆರೆಗಳ ಒಳಗೆ ಎನ್ನುವುದನ್ನು ನಾವು ಗಮನಿಸಬೇಕು.
ಜಮಾತೆ ಇಸ್ಲಾಮಿನ ನಂತರ ಕರಾವಳಿಯಾದ್ಯಂತ ತಲೆಯೆತ್ತಿದ ಸಂಘಟನೆ ಸಲಫಿ ಮೂವ್‌ಮೆಂಟ್. ಅದೀಗ ತನ್ನ ರೆಕ್ಕೆಗಳನ್ನು ಬಿಚ್ಚಿದೆ. ಇದು ಜಮಾತೆ ಇಸ್ಲಾಮಿಗಿಂತಲೂ ಕಟುವಾಗಿ ಇಸ್ಲಾಮ್ ಮೂಲಭೂತ ತತ್ವಗಳನ್ನು ಪಾಲಿಸಲು ಹೆಣಗುತ್ತಿದೆ. ಮುಸ್ಲಿಮ್ ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು, ಅದಕ್ಕೆ ಕುರ್‌ಆನ್‌ನ ಸಾಕ್ಷಗಳನ್ನು ಒದಗಿಸಿದ್ದು ಇದೇ ಸಲಫಿಗಳು. ಕರಾವಳಿಯಲ್ಲಿ ಉಳ್ಳಾಲ ದರ್ಗಾಕ್ಕೆ ಸವಾಲಾಗಿ ಸಲಫಿಗಳು ಹುಟ್ಟಿಕೊಂಡರು. ಸೌದಿ ಅರೇಬಿಯಾದ ಸಲಫಿಗಳು ಇವರಿಗೆ ಆದರ್ಶವಾದರು. ದರ್ಗಾಗಳ ವಿರುದ್ಧ ಇವರ ಹೋರಾಟ ಹಲವು ಮನೆಗಳನ್ನು, ಕುಟುಂಬಗಳನ್ನು ಒಡೆದಿದೆ. ಪ್ರವಾದಿಯ ಹುಟ್ಟು ಹಬ್ಬ ದಿನಾಚರಣೆಯನ್ನು, ಸಾರ್ವಜನಿಕ ಮೆರವಣಿಗೆಯನ್ನು ಇವರು ಶತಾಯಗತಾಯ ವಿರೋಧಿಸುತ್ತಾರೆ. ಒಂದೇ ಮನೆಯಲ್ಲಿ ತಂದೆ ಸುನ್ನಿ, ಮಗ ಸಲಫಿಗಳಾಗಿ ಬದುಕುವುದಿದೆ. ಅವರ ನಡುವೆಯೇ ಜಗಳಗಳಾಗುವುದಿದೆ. ಮನೆಯಲ್ಲಿ ಪ್ರವಾದಿಯ ಪಾರಾಯಣ(ವೌಲೂದು)ವನ್ನು ತಂದೆ ಒಪ್ಪಿದ್ದರೆ ಮಗ ವಿರೋಧಿಸುವುದಿದೆ. ಇದೇ ಸಲಫಿಗಳು ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು ಮತ್ತು ಮಂಗಳೂರು ಸೇರಿದಂತೆ ಇವರ ಎಲ್ಲ ಮಸೀದಿಗಳಲ್ಲಿ ಮಹಿಳೆಯರು ಮಸೀದಿಗೆ ಹೋಗುತ್ತಾರೆ. ಮಾತ್ರವಲ್ಲ, ಇವರ ಶಾಲಾ ಕಾಲೇಜುಗಳಿವೆ. ಅಲ್ಲಿ ಮುಸ್ಲಿಮ್ ಮಹಿಳೆಯರು ಕೇವಲ ಅರಬೀ ಅಕ್ಷರ ಮಾತ್ರ ಕಲಿಯುವುದಲ್ಲ, ಅದರ ಅರ್ಥ ಸಹಿತ ಕಲಿಯುತ್ತಾರೆ. ಸಲಫಿಯ ಮಹಿಳೆಯರು ಯಾವುದೇ ಮುಸ್ಲಿಮ್ ಧರ್ಮಗುರುವನ್ನು ಮೀರುವಂತೆ ಧಾರ್ಮಿಕ ಜ್ಞಾನವನ್ನು ಹೊಂದಿರುತ್ತಾರೆ. ಸುನ್ನಿ ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಲು ಅವಕಾಶ ನೀಡಬೇಕು ಎಂದು ಮಂಗಳೂರಿನ ಕೆಲವು ಸಲಫಿ ಮಹಿಳೆಯರು ನ್ಯಾಯಾಲಯಕ್ಕೂ ತೆರಳಿದ್ದಾರೆ.
ಮಸೀದಿಗೆ ತೆರಳಿದಾಕ್ಷಣ ಮುಸ್ಲಿಮ್ ಮಹಿಳೆಯರ ಹಕ್ಕುಗಳು ಸಿಕ್ಕೇ ಬಿಡುತ್ತವೆ ಎಂದು ನಾನು ಈ ಕಾರಣಕ್ಕಾಗಿಯೇ ನಂಬುವುದಿಲ್ಲ. ಕೆಲವು ಕಟ್ಟಾ ಸಲಫಿಗಳು ಮುಸ್ಲಿಮ್ ಮಹಿಳೆಯ ಕುರಿತಂತೆ ಅಷ್ಟೇ ಕಟ್ಟಾ ನಿಲುವನ್ನು ತಳೆದಿದ್ದಾರೆ. ಕಣ್ಣು ಮಾತ್ರ ಕಾಣುವಂತೆ ಮುಖ ಮುಚ್ಚಿಕೊಳ್ಳುವ ಬುರ್ಖಾಗಳು ಬಂದಿರುವುದು ಈ ಸಲಫಿಗಳ ಮೂಲಕವೇ ಎನ್ನುವುದನ್ನು ನಾವು ಗಮನಿಸಬೇಕು. ಕೆಲವು ಸಲಫಿಗಳ ಗಡ್ಡಗಳು ವಿಕಾರವಾಗಿ ಬೆಳೆದಿರುತ್ತವೆ. ಮತ್ತು ಅವರು ಅದನ್ನು ಉದ್ದೇಶಪೂರ್ವಕವಾಗಿ, ಪ್ರದರ್ಶನಕ್ಕಾಗಿಯೇ ಬಿಟ್ಟಿರುತ್ತಾರೆ. ಪ್ರವಾದಿಯವರು ಮಧ್ಯಮ ನಿಲುವಿಗೆ ಆದ್ಯತೆ ನೀಡಿದವರು. ಪ್ರೀತಿ, ದ್ವೇಷ ಮಾತ್ರವಲ್ಲ ಆರಾಧನೆಯೂ ತನ್ನ ಮಧ್ಯಮ ನಿಲುವನ್ನು ದಾಟ ಬಾರದು ಎಂದು ಹೇಳಿದವರು. ಮನುಷ್ಯನ ಸೌಂದರ್ಯಕ್ಕೆ ಒತ್ತುಕೊಟ್ಟವರು. ಗಡ್ಡ ಆಧ್ಯಾತ್ಮದ ಸಂಕೇತ. ಅದು ಮನುಷ್ಯನ ಮುಖದಲ್ಲಿ ಆಧ್ಯಾತ್ಮದ ಬೆಳಕನ್ನು ಚಿಮ್ಮಿಸಬೇಕು. ನನ್ನ ಸಲಫಿ ಗೆಳೆಯನಿದ್ದ. ಅವನಿಗೆ ಗಲ್ಲದಲ್ಲಿ ಅದಾಗಷ್ಟೇ ನಾಲ್ಕೈದು ಕೂದಲುಗಳಷ್ಟೇ ಮೂಡಿತ್ತು. ಅದನ್ನು ವಿಕಾರವಾಗಿ ನೇತಾಡಿಸಿಕೊಂಡು ಓಡಾಡುತ್ತಿದ್ದ. ನಾನು ಹೇಳಿದೆ ‘‘ಅದನ್ನು ಸ್ವಲ್ಪ ಟ್ರಿಮ್ ಮಾಡಿಸು. ಇನ್ನಷ್ಟು ಸುಂದರವಾಗಿ ಕಾಣುತ್ತೀಯ’’
‘‘ಇಲ್ಲ, ಗಡ್ಡದಲ್ಲಿ ಮಲಾಯಿಕ್‌ಗಳು ನೇತಾಡುತ್ತಾರಂತೆ…ಪ್ರವಾದಿಯವರು ಹೇಳಿದ್ದಾರೆ…’’
ಇಸ್ಲಾಮ್‌ನಲ್ಲಿ ಯಾವುದೇ ಆಚರಣೆಗಳಿಗೂ ಲೌಕಿಕ ಕಾರಣವೊಂದು ಇರುತ್ತದೆ. ಇದೇ ಸಲಫಿಗಳು ತಮ್ಮ ಪ್ಯಾಂಟನ್ನು ಮೊಣಕಾಲುವರೆಗೆ ಮಾತ್ರ ಬಿಡುತ್ತಾರೆ. ಬಟ್ಟೆಯನ್ನು ನೆಲ ತಾಗುವಂತೆ ಬಿಡುವುದನ್ನು ಪ್ರವಾದಿಯವರು ದ್ವೇಷಿಸಿದ್ದರು. ಅದು ದುರಹಂಕಾರದ, ಅಶುಚಿತ್ವದ ಸಂಕೇತ ಎಂದೂ ಹೇಳಿದ್ದರು. ಲೌಕಿಕ ಕಾರಣವಿಲ್ಲದ ಯಾವ ಆಚರಣೆಯೂ ಇಸ್ಲಾಮ್ ಧರ್ಮದಲ್ಲಿಲ್ಲ.
‘‘ಸುಂದರವಾಗಿ ಕಾಣುವುದು ಪ್ರವಾದಿಯವರ ಆಗ್ರಹವಾಗಿತ್ತು. ನೀನು ಗಡ್ಡ ತೆಗೆದರೆ ಗಡ್ಡದಲ್ಲಿ ನೇತಾಡುವ ಮಲಾಯಿಕ್‌ಗಳೇನು ನೆಲೆಯಿಲ್ಲದೆ ಮರದಲ್ಲಿ ನೇತಾಡುವ ಪ್ರಸಂಗ ಬರುವುದಿಲ್ಲ. ಗಡ್ಡವನ್ನು ಚೆಂದ ಬಾಚಿ, ಟ್ರಿಮ್ ಮಾಡು’’ ಎಂದು ಆ ಸಲಫಿ ಹುಡುಗನಿಗೆ ಸಲಹೆ ನೀಡಿದ್ದೆ. ಆದರೆ ಅವನು ನನಗೇ ಗಡ್ಡ ಬಿಡಲು ಪ್ರತಿ ಸಲಹೆ ಕೊಟ್ಟಿದ್ದ.
ಪ್ರಗತಿ ಪರರು ಸೇರಿದಂತೆ ಕೆಲವು ಮಹಿಳಾವಾದಿಗಳು ‘‘ಮುಸ್ಲಿಮ್ ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಅವಕಾಶ ನೀಡಬೇಕು’’ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ಅದಕ್ಕೆ ಪ್ರೋತ್ಸಾಹ ನೀಡುವ ಜಮಾಅತೆ ಇಸ್ಲಾಮಿ ಮತ್ತು ಸಲಫಿ ಮೂವ್‌ಮೆಂಟ್‌ಗಳನ್ನು ಮೂಲಭೂತವಾದಿಗಳು ಎಂದೂ ಕರೆಯುತ್ತಾರೆ. ಇದು ನಿಜಕ್ಕೂ ನಮ್ಮ ಮುಂದಿರುವ ಬಿಕ್ಕಟ್ಟು. ಈ ಬಿಕ್ಕಟ್ಟಿನಿಂದ ಪಾರಾಗಲು ನಾನು ಆರಿಸಿದ್ದು ಒಂದೇ. ನಾನೇ ಮಸೀದಿಗೆ ಹೋಗುವುದು ಅಪರೂಪವಾಗಿರುವಾಗ, ಇನ್ನು ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶದ ಕುರಿತಂತೆ ಆಗ್ರಹಿಸುವುದು ಹಾಸ್ಯಾಸ್ಪದ. ಆದರೆ ಮುಸ್ಲಿಮ್ ಮಹಿಳೆಯರು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳಿಗೆ ತೆರಳಬೇಕು, ಅದಕ್ಕೆ ಅವಕಾಶ ನೀಡಬೇಕು ಎನ್ನುವುದು ನನ್ನ ಆಗ್ರಹ.
ಇತ್ತೀಚೆಗೆ ಮುಸ್ಲಿಮ್ ಮಹಿಳೆಯರು ವ್ಯಾಪಕವಾಗಿ ಕಾಲೇಜು ಮೆಟ್ಟಲುಗಳನ್ನು ಹತ್ತುತ್ತಿದ್ದಾರೆ. ಇಂಜಿನಿಯರ್, ಡಾಕ್ಟರ್‌ಗಳಾಗಿ ಮೆರೆಯುತ್ತಿದ್ದಾರೆ. ಇದು ಮುಸ್ಲಿಮ್ ಸಮುದಾಯಕ್ಕೆ ತುಂಬಾ ಸಂತೋಷ ತರುವ ವಿಚಾರ. ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಮುಸ್ಲಿಮ್ ಬಾಲಕಿಯರ ಫೋಟೋಗಳು ಪತ್ರಿಕೆಯ ಸಂಪಾದಕೀಯ ವಿಭಾಗಗಳಲ್ಲಿ ರಾಶಿರಾಶಿಯಾಗಿ ಬೀಳುತ್ತಿರುವುದು ನೋಡುವಾಗ ಎದೆ ತುಂಬುತ್ತದೆ. ದುರದೃಷ್ಟಕ್ಕೆ ಮಸೀದಿ ಪ್ರವೇಶ ಪಕ್ಕಕ್ಕಿರಲಿ, ಮುಸ್ಲಿಮ್ ಮಹಿಳೆಯರಿಗೆ ಶಾಲೆಗಳಿಗೆ ಪ್ರವೇಶ ನೀಡಲು ನಾವು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಮಹಿಳೆ ಶಾಲೆ ಮೆಟ್ಟಿಲು ಹತ್ತುವುದೇ ಕಷ್ಟಕರವಾಗಿತ್ತು. ಇಂದು ಅದಕ್ಕೆ ಭಿನ್ನವಾಗಿ ಮಹಿಳೆಯರೇ ಆಸಕ್ತಿಯಿಂದ ಶಾಲೆಯ ಮೆಟ್ಟಿಲನ್ನು ತುಳಿಯುವಾಗ, ಸ್ಕಾರ್ಫ್ ಹಾಕಿದರೆ ಪ್ರವೇಶವಿಲ್ಲ ಎಂದು ಅವರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ.
ಮನೆಯಲ್ಲಿ ತಂದೆ ತಾಯಿಗಳನ್ನು ಒಲಿಸಿ, ಮುಸ್ಲಿಮ್ ಬಾಲಕಿಯರು ಶಾಲೆಗೆ ಬಂದರೆ, ಅಲ್ಲಿ ‘ನೀನು ಸ್ಕಾರ್ಫ್ ಹಾಕಿದರೆ ಶಾಲೆಗೆ ಪ್ರವೇಶವಿಲ’್ಲ ಎಂದು ವಿದ್ಯಾವಂತರೆನಿಸಿಕೊಂಡವರೇ ತಡೆಯುವುದು ಅಮಾನವೀಯ, ಕ್ರೌರ್ಯ. ಮಸೀದಿಯ ಪ್ರವೇಶಕ್ಕಿಂತಲೂ ಶಾಲೆಯ ಪ್ರವೇಶ ಬಹಳ ಮುಖ್ಯ. ಆದರೆ ವಿದ್ಯಾವಂತರೆನಿಸಿಕೊಂಡವರೇ ಇದಕ್ಕೆ ತಡೆಯಾಗಿರುವಾಗ, ಮಸೀದಿಯ ಪ್ರವೇಶದ ಬಗ್ಗೆ ನಾವು ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವಿದೆ? ಶಿಕ್ಷಣಕ್ಕೆ ಪೂರಕವಾಗಿ ಯುನಿಫಾರ್ಮ್ ಹೊರತು, ಯುನಿಫಾರ್ಮ್‌ಗಾಗಿ ಶಿಕ್ಷಣವಲ್ಲ. ಯುನಿಫಾರ್ಮ್ ಬಣ್ಣದ ಸ್ಕಾರ್ಫನ್ನೇ ತಲೆಗೆ ತೊಟ್ಟುಕೊಳ್ಳುತ್ತೇವೆ ಎಂದರೂ ಆಸ್ಪದ ನೀಡದೆ ಅದೆಷ್ಟೋ ಮುಸ್ಲಿಮ್ ಬಾಲಕಿಯರನ್ನು ಕರಾವಳಿಯಲ್ಲಿ ಶಾಲೆಯಿಂದ ಹೊರ ಹಾಕಿದರಲ್ಲ, ಅದು ಇಂದಿನ ನಿಜವಾದ ಸಮಸ್ಯೆ. ಮುಸ್ಲಿಮರು ಮಾತ್ರವಲ್ಲ, ಇಡೀ ಸಮಾಜ ಇಂದು ಇದರ ವಿರುದ್ಧ ಧ್ವನಿಯೆತ್ತಬೇಕು. ಮುಸ್ಲಿಮ್ ವಿದ್ಯಾರ್ಥಿನಿಯರ ಶಾಲಾ ಕಲಿಕೆಯ ಪರವಾಗಿ ನಿಲ್ಲಬೇಕು. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು, ಚರ್ಚೆಗಿಳಿಯಬೇಕಾಗಿದೆ. ಮುಸ್ಲಿಮ್ ಮಹಿಳೆಯರನ್ನೂ, ಸಮಾಜವನ್ನು, ದೇಶವನ್ನು ಒಟ್ಟಾಗಿ ಮೇಲೆತ್ತಬೇಕಾಗಿದೆ.






ನೀವು ಹಾವು ಸಾಯಬಾರದು ಕೋಲು ಮುರಿಯಬಾರದು ಅನ್ನುವ ಹಾಗೆ ಹೇಳಿದಿರಿ ನಿಮ್ಮ ಬುದ್ದಿವಂತಿಕೆಗೆ ನೀವೇ ಮೆಚ್ಚಬೇಕು. ನಿಮಗೆ ನಿಮ್ಮ ಮಹಿಳೆಯರ ಕಷ್ಟ ಕಷ್ಟವೇ ಅಲ್ಲ. ಬೇರೆಯವರ ಮನೆಯ ದೋಸೆಯ ಮೇಲೆಯೇ ಕಣ್ಣು.
ನಿಮ್ಮವರಿಗೆ ಸಡ್ಡು ಹೊಡೆದು ನೇರವಾಗಿ ಹೇಳಿ ಬುರ್ಖಾ ಹಾಕೋದು ಯಾಕೆ ಅಂತ ಸವಾಲ್ ಮಾಡಿ ಬರೆಯಿರಿ .. ಅದು ಆಗಲ್ಲ. ಯಾಕಂದ್ರೆ ವಿರೋಧ ಮಾಡುವವರನ್ನು ಎದುರು ಹಾಕಿಕೊಳ್ಳೊದಿಕ್ಕೂ ತಯಾರಿಲ್ಲ ಇಲ್ಲಿ ವಿರೋದಿಸದೆ ಇದ್ದವರನ್ನು ಬಿಡದ ಹಾಗೆ ನಾಜೂಕಾಗಿ ಬರೆದ್ರೆ ಯಾರು ನಂಬೋದಿಲ್ಲ .
ಒಬ್ಬ ‘ಗಂಡಸು’ ಗಂಡಸಿನ ಹಾಗೆ ಹೇಗೆ ಬುದ್ಧಿವಂತಿಕೆಯಿಂದ ಬರೆಯಬಲ್ಲ, ಸಾಮಾಜಿಕ ಜವಾಬ್ದಾರಿಯಿಂದ ನುಣಚಿಕೊಳ್ಳಬಲ್ಲ ಈ ಲೇಖನ ಸಾಕ್ಷಿ… ಹಾಗೆ ಹೀಗೆ ಓಲಾಡಿಸಿ ಕೊನೆಗೆ ಯಥಾ ಸ್ಥಿತಿಯ ಮುಂದುವರಿಕೆಗೆ ಹಂಬಲಿಸುವಂತಿದೆ… ಪತ್ರಕರ್ತನಿಗೆ ಸ್ಪಷ್ಟ ನಿಲುವು ಇಲ್ಲದಿದ್ದರೆ ಕಷ್ಟ
“ಯಾರು ಯಾವ ಕಂದಾಚಾರವನ್ನಾದರೂ ಪಾಲಿಸಲಿ ಆ ಕಂದಾಚಾರವನ್ನು ಪ್ರಶ್ನಿಸಲು ಹೋಗದೆ ಅವರು ಹೇಗಿರುವರೋ ಹಾಗೇ ಶಾಲೆಗೆ ಕರೆತನ್ನಿ. ಶಾಲಾ ಶಿಕ್ಷಣದಿಂದ ಅವರ ಕಂದಾಚಾರ ತಾನಾಗೇ ತೊಲಗೀತು” ಎಂಬ ನಿಮ್ಮ ತರ್ಕ ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿದೆ ಎಂದು ಕಡತಗಳಲ್ಲಿ ತೋರಿಸಿ ಬಚಾವಾಗಲು ಆತುರ ಪಡುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಥವಾ ನಿರ್ದೇಶಕರ ವಾದದಂತಿದೆ. ಸ್ಕಾರ್ಫ್ ಕಟ್ಟಿಕೊಳ್ಳುವ ಹುಡುಗಿಯರನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸಿಕೊಂಡರೂ ಖಾಸಗಿಯವರು ಸೇರಿಸಿಕೊಳ್ಳಬಲ್ಲರೇ? ಇಂತಹ ಖಾಸಗಿಯವರನ್ನು ನೀವು ಅಚಾತುರ್ಯದಿಂದ ವಿದ್ಯಾವಂತರೆಂದು ಕರೆದಿರುವಿರಿ!
ರೋಗದ ಮೂಲ ಸ್ಪಷ್ಟವಾಗೇ ಕಣ್ಣಿಗೆ ಕಾಣಿಸುತ್ತಿರುವಾಗ ಇನ್ನೆಲ್ಲೋ ಪರಿಹಾರ ಕಂಡುಕೊಳ್ಳುವ ನಿಮ್ಮ ಕಸರತ್ತು ಹುತ್ತವ ಬಡಿಯದೆ ಹಾವು ಸಾಯಿಸುವ ಪ್ರಯತ್ನದಂತೆ ತೋರುತ್ತಿದೆ. ಜಮಾತೆ ಇಸ್ಲಾಂ, ಸಲಫಿ ಮೂವ್‌ಮೆಂಟ್ ಇತ್ಯಾದಿ ಧಾರ್ಮಿಕ ಸಂಘಟನೆಗಳನ್ನು ನಂಬಿ ಸಾಮಾಜಿಕ ಸುಧಾರಣೆಗೆ ಹೊರಡುವುದು ಸಾಧ್ಯವೇ ಅಥವಾ ಸಾಧುವೇ? ಹಾಗೆ ಸಾಧ್ಯವೆಂದಾದಲ್ಲಿ ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆಗಳನ್ನೂ ಬೆಂಬಲಿಸಬೇಕಾಗುತ್ತದೆ ಅಲ್ಲವೇ? ಧಾರ್ಮಿಕ ಸಂಘಟನೆಗಳು ಮೇಲು ಮೇಲಿನ ಹುಸಿಸುಧಾರಣೆಯನ್ನು ಅನುಮೋದಿಸುತ್ತವೆಯೇ ವಿನಃ ಆಮೂಲಾಗ್ರ ಬದಲಾವಣೆಗೆ ಅದು ಆಸ್ಪದ ನೀಡುವುದಿಲ್ಲ. ಇಂತಹ ವಾದಗಳಿಂದ ಬುದ್ಧಿಜೀವಿಗಳು ನಾವು ಪೊಲಿಟಿಕಲಿ ಕರೆಕ್ಟ್ ಆಗಿದ್ದೇವೆ ಎಂದು ಸಮರ್ಥಿಸಿಕೊಳ್ಳಬಹುದೇ ವಿನಃ ವಾಸ್ತವದಲ್ಲಿ ಯಾವ ಬದಲಾವಣೆಯನ್ನೂ ತರಲು ಸಾಧ್ಯವಿಲ್ಲ.
ಧಾರ್ಮಿಕ ಲಾಂಛನಗಳು ತಮ್ಮ ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ ಎಂದು ಅರಿಯುವ ಕಳಕಳಿಯುಳ್ಳ ತಾಯ್ತಂದೆಯರು ಆ ಲಾಂಛನಗಳಿಂದ ಅವರನ್ನು ವಿಮೋಚನೆಗೊಳಿಸುವರೇ ವಿನಃ ’ವಿದ್ಯಾವಂತ’ರೆನಿಸಿಕೊಂಡವರ ಬಳಿ ಅಂಗಲಾಚಲು ಹೋಗುವುದಿಲ್ಲ.
ನಿಮ್ಮಂಥವರು ವಿದ್ಯಾವಂತರಿಗೆ ಮನವರಿಕೆ ಮಾಡಿಸುವುದನ್ನು ನಿಲ್ಲಿಸಿ ಮುಸ್ಲಿಮರು ಬೆಳೆಸಿಕೊಂಡಿರುವ ಮೌಢ್ಯವನ್ನು ತುರ್ತಾಗಿ ತೊಲಗಿಸಬೇಕಾಗಿದೆ.
ditta lekthana