ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’

ಕಾಟೇರ ಎಂಬ ಸ್ವಾಭಿಮಾನದ ದನಿ

ಕೆ. ಮುರಳಿ ಮೋಹನ್ ಕಾಟಿ

**
ಭಾರತ ವಸಾಹತುಶಾಹಿ ಶಕ್ತಿಗಳಿಂದ ಸ್ವತಂತ್ರವಾಗಿ ತನ್ನದೇ ಸಂವಿಧಾನ ರೂಪಿಸಿಕೊಂಡು ಹೊಸ ನಾಡನ್ನು ಕಟ್ಟುವ ಕನಸಿನಿಂದ ತನ್ನೊಳಗೆ ಶತಮಾನಗಳಿಂದ ಇದ್ದ ಅಸಮಾನತೆ ಬದುಕಿನ ಕ್ರಮಗಳನ್ನು ದಾಟಿ ಹೊಸ ರಾಷ್ಟ್ರ ಕಟ್ಟುವ ಛಲದೊಂದಿಗೆ ೨೦ನೇ ಶತಮಾನದ ಕೊನೆಯ ಅರ್ಧ ಭಾಗವನ್ನ ಮುಗಿಸಿತ್ತು. ಸ್ವಾತಂತ್ರ ಬಂದ ೫೦ ವರ್ಷಗಳು ದೇಶ ಕಟ್ಟುವಿಕೆ ಹಲವು ಪ್ರಯೋಗಗಳು ಈ ದೇಶದಲ್ಲಿ ನಡೆದವು. ೨೧ನೇ ಶತಮಾನದ ಹೊತ್ತಿಗೆ ನಮ್ಮ ಬದುಕು ಯಾವುದೇ ಅಸಮಾನತೆ, ಅವಮಾನ ಇಲ್ಲದ ಸಮೃದ್ಧ ದೇಶವಾಗಿಲಿದೆ ಎಂದೇ ದೇಶದ ಎಲ್ಲಾ ಮುಂದಾಳುಗಳು ಹೇಳಿದ್ದರು. ಅದರೆ ೨೧ನೇ ಶತಮಾನದ ಸರಿಸುಮಾರು ಕಾಲು ಭಾಗವನ್ನು ನಾವು ಕ್ರಮಿಸಿದ್ದೇವೆ ಇಲ್ಲಿ ನಿಂತು ನಾವು ಎಲ್ಲಿದ್ದೇವೆ? ನಮ್ಮ ಬದುಕು ಹೇಗಿದೆ? ನಮ್ಮ ಲೋಕ ದೃಷ್ಟಿ ಏನು ಎಂದು ಸಮಾಜದ ಭಿನ್ನ ಸ್ಥರಗಳಲ್ಲಿ ಇರುವ ನಾವು ಪ್ರಶ್ನೆ ಮಾಡಿಕೊಂಡರೆ ಸಿಗುವ ಉತ್ತರಗಳು ಹೆಚ್ಚು ಆಶಾದಾಯಕವಾಗಿಲ್ಲ. ಪ್ರತಿ ಅಕ್ಷರ ಬರೆಯುವಾಗ, ಪ್ರತಿ ಮಾತು ಆಡುವಾಗ ಭಯ, ಅಭದ್ರತೆಯ ಯೋಚನೆ ಸುಳಿದು ಹೋಗುತ್ತದೆ. ಸ್ವಾತಂತ್ರ, ಸೃಜನಶೀಲತೆ ಹಾಗು ಸ್ವಾಭಿಮಾನವುಳ್ಳ ಅಭಿವ್ಯಕ್ತಿಯ ಸಾಧ್ಯತೆಗಳು ಅಪಾಯಕ್ಕೆ ಸಿಲುಕಿದೆ ಎಂದೆನಿಸುತ್ತದೆ.

ರಾಜಪ್ರಭುತ್ವ ಹಾಗು ವಸಹತುಶಾಹಿ ಆಡಳಿತ ಪೋಷಿಸಿದ ಜಾತಿ ಹಾಗು ಲಿಂಗಾಧಾರಿತ ಶ್ರೇಣಿಕೃತ ವ್ಯವಸ್ಥೆಯನ್ನು ಸ್ವಾತಂತ್ರ ನಂತರದ ಪ್ರಭುತ್ವಗಳೂ ಮುಂದುವರೆಸಿ ಬಂಡವಾಳಶಾಹಿಗಳಿಗೆ ಪೂರಕವಾದ ನೀತಿ ನಿರೂಪಣೆಗಳನ್ನು ನಿರಂತವಾಗಿ ಮಾಡುತ್ತಲೇ ಬಂದಿವೆ. ಈ ಕಾರಣಕ್ಕೆ ತಳಸಮುದಾಯಗಳು ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾಗಿ ಬದುಕುವ ಸಾಧ್ಯತೆಗಳಿಗಾಗಿ ನಿರಂತರ ಸಂಘ? ಮಾಡುವ ಸ್ಥಿತಿ ರೂಪುಗೊಂಡಿದೆ. ತಮ್ಮ ಬದುಕಿನ ಅಸ್ಮಿತೆಗಳ ಹುಡುಕಾಟಕ್ಕೆ ಪ್ರವಾಹದಂತೆ, ಕೆಲವೊಮ್ಮೆ ಅಂತರ್ಗಾಮಿನಿಯಂತೆ ಚಲನೆಯನ್ನು ಕಾಯ್ದುಕೊಂಡಿದ್ದೇವೆ. ಸಮಕಾಲೀನ ಭಾರತದಲ್ಲಂತೂ ಬಹುಜನರನ್ನು ಮೌನಕ್ಕೆ ತಳ್ಳುವ ಹೊಸ ಮಾದರಿಗಳನ್ನು ಪ್ರಭುತ್ವಗಳು ರೂಪಿಸಿಕೊಂಡಿವೆ. ಜಾತಿವ್ಯವಸ್ಥೆ ಹಾಗು ಹಿಂದುತ್ವ ಸಂಕಥನದ ಮೂಲಕ ಭಾವನಾತ್ಮಕ ರಾಜಕಾರಣ ಮಾಡಿ ತಳಸಮುದಾಯಗಳನ್ನು ವಿಸ್ಮೃತಿಗೆ ತಳ್ಳುವುದು, ಬಂಡವಾಳಶಾಹಿ ಆರ್ಥಿಕತೆ ಮೂಲಕ ಬದುಕಲು ಬೇಕಾಗಿರುವ ಸಂಪನ್ಮೂಲಗಳನ್ನು ಕೆಲವೇ ಜನರಲ್ಲಿ ಸಂಗ್ರಹಗೊಳ್ಳುವಂತೆ ಮಾಡಿ ದೇಶದ ಬಹುಪಾಲು ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಸಂಘ? ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿರುವುದು, ಪ್ರಭುತ್ವ ತನಗಿರುವ ಅಧಿಕಾರ ಹಾಗು ತೋಳ್ಬಲದ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದು ಹಾಗು ಮಾಧ್ಯಮಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದನ್ನು ನಿರಂತರವಾಗಿ ಮಾಡುತ್ತಿದೆ.

ಈ ಎಲ್ಲಾ ಸವಾಲುಗಳ ನಡುವೆ ಡಾ. ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದ ಚಿಂತನೆಗಳ ನೆರಳಲ್ಲಿ ಸಮಕಾಲೀನ ಭಾರತದಲ್ಲಿ ಮೌನ ಮುರಿದು ಮಾತನಾಡುವ ದಾರಿದೀಪಗಳು ರೂಪಗೊಂಡಿವೆ. ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ತಮ್ಮ ಕೊನೆಯ ಭಾ?ಣದಲ್ಲಿ ಜನರು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ತೃಪ್ತರಾಗಬಾರದು ಇದರ ಜೊತೆಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲ ತತ್ವಗಳೊಂದಿಗೆ ಸಾಮಾಜಿಕ ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸಬೇಕು ಎಂದು ಹೇಳುತ್ತಾರೆ. ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದೇ ಹೋದರೆ ರಾಜಕೀಯ ಪ್ರಜಾಪ್ರಭುತ್ವ ಉಳಿಯುವುದಿಲ್ಲ, ಸಾಮಾಜಿಕ ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಆಚರಣೆಗೆ ತರುವಂತದ್ದು. ಈ ಮೂರು ಮೌಲ್ಯಗಳು ಒಟ್ಟಾಗಿ ಇರಬೇಕು ಸಮಾನತೆ ಇಲ್ಲದ ಸ್ವಾತಂತ್ರ್ಯ, ಭ್ರಾತೃತ್ವವಿಲ್ಲದ ಸ್ವಾತಂತ್ರ್ಯ ಅರ್ಥಹೀನ ಇದು ಆಗುವಂತೆ ಮಾಡಲು ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನ ಅಗತ್ಯ ಎಂದು ಹೇಳುತ್ತಾರೆ. ಬ್ರಿಟಿ?ರಿಂದ ರಾಜಕೀಯ ಸ್ವಾತಂತ್ರ್ಯ ಪಡೆದ ನಾವು ಉಳಿದದ್ದು ಸಾಧಿಸಲು ನಿರಂತರ ಪ್ರಯತ್ನ ಹಾಗು ಸಂಘ? ಮಾಡುತ್ತಾ ಸಾಮಾಜಿಕ, ಆರ್ಥಿಕ ಸಮಾನತೆ ಮತ್ತು ಭ್ರಾತೃತ್ವ ಒಳಗೊಂಡ ಪ್ರಜಾಪ್ರಭುತ್ವವನ್ನು ರೂಪಿಸಿ ಆ ಮೂಲಕ ಬಹುಜನರ ಹಿತವನ್ನು ಸಾಧಿಸಿ, ಭದ್ರಗೊಳಿಸಿಕೊಳ್ಳಲು ಭಿನ್ನ ದಾರಿಗಳನ್ನು ಕಂಡುಕೊಂಡಿದ್ದಾರೆ. ಶಿಕ್ಷಣ, ರಂಗಭೂಮಿ, ಸಿನಿಮಾ, ಸಾಹಿತ್ಯ, ಉದ್ಯಮ, ಸಂಗೀತ-ನೃತ್ಯ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದಾರೆ. ಕಳೆದುಕೊಂಡಿದ್ದ ’ಮಾತ’ನ್ನು ಮರಳಿ ಪಡೆದುಕೊಂಡಿದ್ದಾರೆ. ದಲಿತ ಬಹುಜನರ ಹೋರಾಟದ ಪರಂಪರೆ ಇವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ. ಈ ಪ್ರಯತ್ನಗಳು ಭಾರತೀಯ ಸಮಾಜದ ’ಪಾರಂಪರಿಕ ಚಲನೆ’ ಯ ಕ್ರಮವನ್ನು ಬದಲಿಸಿದೆ. ಜೊತೆಗೆ ಇವತ್ತಿನ ಪ್ರಭುತ್ವ ರೂಪಿಸುತ್ತಿರುವ ಸಾಮಾಜಿಕ ಸಂಕಂಥನಕ್ಕೆ ಬದಲಾಗಿ ಜನಸಂಕಥನದ ಧ್ವನಿಯನ್ನು ಗಟ್ಟಿಯಾಗಿ ರೂಪಿಸುತ್ತಿದೆ. ಆ ಮೂಲಕ ಬಾಬಸಾಹೇಬ್ ಅಂಬೇಡ್ಕರ್ ರೂಪಿಸಿಕೊಟ್ಟ ದಾರಿಗೆ ಗಟ್ಟಿಯಾದ ನೆಲಹಾಸುಗಳು ರೂಪುಗೊಳ್ಳತೊಡಗಿವೆ.

ಅಂಚಿಗೆ ತಳ್ಳಲ್ಪಟ್ಟಿರುವ ಜನಸಮುದಾಯಗಳ ಕತೆಗಳಲ್ಲಿ ಪ್ರತಿರೋಧದ ಧ್ವನಿಗಳು ಇತ್ತೀಚಿನ ವರ್ಷಗಳಲ್ಲಿ ಕೆಲವು ಭಾರತೀಯ ಸಿನಿಮಾಗಳಲ್ಲಿ ಕಾಣಿಸುತ್ತಿದೆ ಹಾಗು ಸಾಮಾಜಿಕ ನ್ಯಾಯದ ಕುರಿತ ಸೂಕ್ಷ್ಮವಾದ ವಿಚಾರಗಳನ್ನು ಹರಿತವಾದ ಪ್ರಶ್ನೆಗಳ ಮೂಲಕ ಮುನ್ನಲೆಗೆ ತರುತ್ತಿದೆ. ಈ ಪ್ರಯತ್ನಗಳ ಭಾಗವಾಗಿ ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಸಿನಿಮಾವನ್ನು ಗಮನಿಸಬಹುದು. ಈ ಹಲವು ಮಿತಿಗಳ ನಡುವೆಯೇ ಈ ಸಿನಿಮಾ ಜಾತಿ ಪ್ರಶ್ನೆಯನ್ನು ಗಟ್ಟಿಯಾಗಿ ನಮ್ಮ ಮುಂದಿಟ್ಟಿದೆ. ಸಿನಿಮಾವು ನಾಯಕ ಪ್ರಧಾನ ಗಂಡಾಳ್ವಿಕೆಯ ಮಾದರಿಯ ಸುತ್ತಲೇ ನಿರ್ಮಿಸಿದ್ದರೂ ಕನ್ನಡದ ಸಿನಿಮಾ ಪರಂಪರೆಯಲ್ಲಿ ಗೈರಾಗಿದ್ದ ಜಾತಿ ದೌರ್ಜನ್ಯದ ವಿರುದ್ಧ ಪ್ರತಿರೋಧದ ಹಾಗು ಭೂಮಿ ಹಕ್ಕಿನ ಪ್ರಶ್ನೆಯನ್ನು ನೇರವಾಗಿ ಚರ್ಚಿಸಿರುವ ಕಾರಣಕ್ಕೆ ಈ ಪ್ರಯತ್ನ ಮುಖ್ಯವಾಗುತ್ತದೆ. ಹಾಗೇಯೇ ಕನ್ನಡದ ಜನಪ್ರಿಯ ಸಿನಿಮಾ ನಟ ದರ್ಶನ್ ಕಾಟೇರದ ನಾಯಕನ ಪಾತ್ರದಲ್ಲಿ ಅಭಿನಯಿಸಿರುವುದು ಮುಂದಿನ ಕನ್ನಡ ಸಿನಿಮಾ ಚಹರೆಯನ್ನು ಬದಲು ಮಾಡಬಲ್ಲ ಹಾಗು ತಿದ್ದಬಲ್ಲ ಸಾಧ್ಯತೆಯನ್ನು ತೆರೆದಿದೆ.

ಬ್ರೆಕ್ಟ್ ಹೇಳುವಂತೆ ಸಿನಿಮಾಕ್ಕಿಂತ ಹೆಚ್ಚು ರಾಜಕೀಯವಾದದ್ದು ಬೇರಾವುದೂ ಇಲ್ಲ. ನಾವು ಸಿನಿಮಾ ಮೂಲಕ ರೂಪಿಸಿರುವ ಪ್ರತಿ ಪಾತ್ರವು ಒಂದು ರಾಜಕೀಯ ಘೋಷಣೆಯೇ. ಹಾಗಾಗಿ ಪಾತ್ರಗಳು ಕೇವಲ ಮನರಂಜನೆ ನೆಲೆಯಲ್ಲಿ ಅಷ್ಟೇ ಅಲ್ಲದೇ ಅದರ ಉದ್ದೇಶ ಹಾಗು ಪರಿಣಾಮಗಳ ಬಗ್ಗೆಯೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸಮಕಾಲೀನ ಸಮಾಜದಲ್ಲಿ ಬ್ರಾಹ್ಮಣ್ಯದ ಪರಂಪರೆ ಮೂಲಕ ಬಂದಿರುವ, ಈಗಲೂ ಹೆಚ್ಚೆಚ್ಚು ಬಲಿಷ್ಟವಾಗುತ್ತಿರುವ ಜಾತಿ, ಧರ್ಮ, ಲಿಂಗ ಆಧಾರಿತ ಹಿಂಸೆಯ ಕುರಿತು ಸಿನಿಮಾಗಳಲ್ಲಿ ನಾಯಕ ಪಾತ್ರಗಳ ನಿಲುವು ಎಂಥದ್ದು ಅಥವಾ ಸಿನಿಮಾಗಳಲ್ಲಿ ರೂಪುಗೊಂಡಿರುವ ನಾಯಕ ಪಾತ್ರಗಳ ಲೋಕದೃಷ್ಟಿ ಏನು? ಎನ್ನುವುದನ್ನು ನಾವು ಗಮನಿಸಿದರೆ. ಸಾಕಷ್ಟು ವಿರೋಧಭಾಸಗಳು ಕಾಣುತ್ತದೆ. ಕಳೆದ ಇಪ್ಪತ್ತು ವರ್ಷದಲ್ಲಿನ ಅತ್ಯಂತ ಜನಪ್ರಿಯ ಬಾಕ್ಸ್ ಆಫೀಸ್‌ನಲ್ಲಿ ಹಣ ಮಾಡಿದ ನೂರು ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಅರ್ಧದಷ್ಟು ಸಿನಿಮಾಗಳ ಕತೆ ಪ್ರೀತಿ, ಮದುವೆ, ಸಂಬಂಧದ ಕುರಿತೆ ಇರುತ್ತದೆ. ಆದರೆ ನಾಯಕ ಕೇಂದ್ರಿತ ಈ ಸಿನಿಮಾಗಳು ಸಮಕಾಲೀನ ಸಮಾಜದಲ್ಲಿ ನಡೆಯುತ್ತಿರುವ ಭಿನ್ನ ಜಾತಿಯ ಪ್ರೇಮಿಗಳ ಕೊಲೆ, ಅವರಿಗೆ ಇರುವ ಸಾಮಾಜಿಕ ತೊಡಕು, ಬಹಿಷ್ಕಾರ, ಧರ್ಮ-ಸಂಸ್ಕೃತಿಯ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ಮೇಲಾಗುತ್ತಿರುವ ಹಲ್ಲೆಗಳ ಕುರಿತು ತೆರೆಯ ಮೇಲೆ ತರಲು ಪ್ರಯತ್ನಿಸಿಯೇ ಇಲ್ಲ.

ಕನ್ನಡದ ಹಲವು ಸಿನಿಮಾಗಳಲ್ಲಿ ಊರಿನ ಗೌಡನಾಗಿ ನಾಯಕ ಪಾತ್ರಗಳು ಕಾಣಿಸಿವೆ. ಯಜಮಾನ, ಆಪ್ತಮಿತ್ರ, ಕೋಟಿಗೊಬ್ಬ, ದಿಗ್ಗಜರು, ಗೌಡ್ರು ॒ಈ ಸಿನಿಮಾಗಳ ಪ್ರಧಾನ ಪಾತ್ರಗಳನ್ನು ಭಾರತದ ಜಾತಿವ್ಯವಸ್ಥೆಯ ಶೋಷಕ ಪ್ರತಿನಿಧಿಗಳಾಗಿ ರೂಪಿಸಲಾಗಿದೆ. ಭಾರತದ ಸಂವಿಧಾನ, ಕಾನೂನುಗಳನ್ನು ಮೀರಿ ಈಗಲೂ ಊರಿಗೊಬ್ಬ ಗೌಡ, ಆತ ಜನಪ್ರತಿನಿಧಿ, ಸರ್ಕಾರ, ಪೋಲಿಸ್ ವ್ಯವಸ್ಥೆ, ನ್ಯಾಯ ವ್ಯವಸ್ಥೆಗಿಂತ ಮೇಲಾಗಿರುತ್ತಾನೆ. ಊರಿನಲ್ಲಿ ಯಾವುದೇ ಘಟನೆ ನಡೆದರು ಆತನೇ ಪಂಚಾಯತಿ ಕಟ್ಟೆಗೆ ಬಂದು ಅದಕ್ಕೊಂದು ಪರಿಹಾರ ಹೇಳಬೇಕು. ತಮ್ಮ ಪೂರ್ವಜರಿಂದ ಬಂದ ನೂರಾರು ಎಕರೆ ಜಮೀನಿನ ಒಡೆಯನಾಗಿರುತ್ತಾನೆ (ಇವರಿಗೆ ಉಳುವವನೇ ಭೂಮಿಯ ಒಡೆಯ ಕಾನೂನು ಅಪ್ಲೈ ಆಗಿರುವುದಿಲ್ಲ.) ಆತ ಹೇಳಿದ್ದೆ ನ್ಯಾಯ, ಮಾಡಿದ್ದೆ ಕಾನೂನು. ಇದನ್ನು ಮೀರಿದವರಿಗೆ ಉಗ್ರ ಶಿಕ್ಷೆ ಹಾಗು ಸಾಮಾಜಿಕ ಬಹಿಷ್ಕಾರ. ಇದು ಬಹುತೇಕ ಸಿನಿಮಾಗಳ ಕಥಾವಸ್ತುವಾಗಿರುತ್ತದೆ. ಹಾಗು ಈ ನಾಯಕ ಪಾತ್ರಗಳ ಮೂಲಕ ಇಂತಹ ವ್ಯವಸ್ಥೆಗೆ ಸಾಮಾಜಿಕ ಒಪ್ಪಿಗೆಯನ್ನು ಪಡೆಯಲಾಗಿದೆ. ಈ ಹಿನ್ನಲೆಯಲ್ಲಿ ಕಾಟೇರ ಸಿನಿಮಾ ಈ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುವ ಸಿನಿಮಾವಾಗಿ ಕಾಣಿಸುತ್ತದೆ.
ಭೀಮನಹಳ್ಳಿ ಎಂಬ ಗ್ರಾಮದಲ್ಲಿ ಕಬ್ಬಿಣದ ಕುಲುಮೆಯಲ್ಲಿ ಕೃಷಿಗೆ ಅಗತ್ಯವಿರುವ ಪರಿಕರಗಳು ಹಾಗು ಆಯುಧಗಳನ್ನು ತಯಾರಿಸುವ ಕಾಟೇರನಿಗೆ ಬೆಂಕಿಯಲ್ಲಿ ಕಾದ ಕಬ್ಬಿಣವನ್ನು ಅಗತ್ಯಕ್ಕೆ ತಕ್ಕಂತೆ ಬಗ್ಗಿಸುವುದು ಕೂಡ ತನ್ನ ಜೊತೆಗಿನ ಸಂಬಂಧ ಬೆಸೆವ ಕ್ರಿಯೆಯಾಗಿ ನೋಡುವುದು, ತಾನು ರೂಪಿಸಿದ ಕೊಡಲಿ, ಮಚ್ಚುಗಳೊಂದಿಗೆ ಮಾತಾನಾಡುವ ಕ್ರಿಯೆ ಶ್ರಮಶಕ್ತಿಯ ಜೊತೆಗಿನ ಆತನ ಅಭಿನ್ನತೆಯನ್ನು ಸೂಚಿಸುತ್ತದೆ. ಕಾಟೇರನಲ್ಲಿನ ಕೆಲಸದ ಕುರಿತ ಬದ್ಧತೆ ಹಾಗು ಅಸ್ಮಿತೆಯ ಕುರಿತ ಸ್ವಾಭಿಮಾನಗಳು ಇಡೀ ಸಿನಿಮಾದ ಧ್ವನಿಯಾಗಿ ಕೆಲಸ ಮಾಡಿದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಗೆ, ಬ್ರಾಹ್ಮಣ ಜಾತಿಯನ್ನು ನೇರ ಎದುರುಗೊಂಡ, ಜಾತಿ ದೌರ್ಜನ್ಯವನ್ನು ಗಟ್ಟಿ ದನಿಯಲ್ಲಿ ವಿರೋಧಿಸಿ ಶೋಷಣೆ ಮಾಡುವ ಜಾತಿಗಳ ಆಶಾಡಭೂತಿತನವನ್ನು, ಅವಕಾಶವಾದಿತನವನ್ನು ಬಯಲು ಮಾಡಿ ಕೊನೆಗೆ ಕೋಣನ ಬದಲು ಜಾತಿವಾದಿಗಳನ್ನು ಇಲ್ಲವಾಗಿಸುವ ಮೂಲಕ ಸಾಂಕೇತಿಕವಾಗಿ ವ್ಯವಸ್ಥೆಯನ್ನು ಬದಲು ಮಾಡುವ ಕ್ರಿಯೆಯನ್ನು ಕಟ್ಟಲಾಗಿದೆ. ಇಡೀ ಸಿನಿಮಾವು ಜಾತಿ ಹಾಗು ಗಂಡಾಳ್ವಿಕೆಯ ಸಂರ್ಕೀತೆಯನ್ನು ಕಟ್ಟಿಕೊಡುವಲ್ಲಿ ಸೋತ್ತಿದ್ದರೂ, ಕಾಟೇರನ ಕೆಲವು ಮಾತುಗಳು ಸಿನಿಮಾದ ಆಶಯವನ್ನು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ ನಡಿಯೋ ದಾರಿ ನಮ್ದಲ್ಲ, ಉಳೊ ಭೂಮಿ ನಮ್ದಲ್ಲ, ಕುಡಿಯೋ ನೀರ್ ನಮ್ದಲ್ಲ, ತಿನ್ನೋ ಅನ್ನದಿಂದ ಉಡೊ ಬಟ್ಟೆತಂಕ ಎಲ್ಲಾ ಜಾತಿ ಮೇಲಳಿತಾರೆ ಬೆಳೆ ಬೆಳೆಯೋದ್ ನಾವು, ಪಾಲ್ ತಗೊಳೋರ್ ಅವ್ರು ಮೆಟ್ಟೊಲಿಯೋದ್ ನಾವು, ಮೆಟ್ಕೊಂಡ್ ಓಡಾಡೋರ್ ಅವ್ರು ಗೇಮೆ ನಮ್ದು, ಆದಾಯ ಅವ್ರ್ದು ನಾಯ್ಗಳಾದ್ರೂ ಎಲ್ಲಂದ್ರಲ್ಲಿ ಓಡಾಡ್ತವೆ ನಾವು ಅದಕ್ಕಿಂತ ಕಡೆಯಾಗೋದ್ವಾ ಇದೆಲ್ಲಾ ಯಾರ್ತವ ಹೇಳ್ಕೊಳ್ಳುವ. ದೇವ್ರ ಹತ್ರ ಹೇಳ್ಕೋಳುವ ಅಂದ್ರೆ ದೇವಸ್ಥಾನಕ್ಕೂ ಬಿಟ್ಕೋಳ್ಳಲ್ಲ ಇಂತಹ ಮಾತುಗಳು ಪ್ರೇಕ್ಷಕರನ್ನು ಕೆಣಕುವಲ್ಲಿ, ಆಲೋಚನೆಗೆ ತಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ತಮಿಳಿನ ಅಸುರನ್, ಕರ್ಣನ್, ಮರಾಠಿಯ ಪ್ಯಾಂಡ್ರಿ ಮುಂತಾದ ಸಿನಿಮಾಗಳಲ್ಲಿ ಜಾತಿ ವಿಚಾರದ ಕುರಿತು ದೃಶ್ಯಗಳನ್ನು ಕಟ್ಟುವಲ್ಲಿ ಇದ್ದ ಸ್ಪಷ್ಟತೆ, ತಯಾರಿ ಕಾಟೇರದಲ್ಲಿ ಕಾಣಲಿಲ್ಲ. ಜನಪ್ರಿಯ ನಾಯಕನೊಬ್ಬನ ಇಮೇಜ್ ಅನ್ನು ಉಳಿಸಿಕೊಳ್ಳುವ ಆತುರದಲ್ಲಿ ಸಿನಿಮಾದ ನಡಿಗೆ ಹಲವು ಬಾರಿ ಎಡವಿದೆ. ಉಳುವವನೇ ಭೂಮಿಯ ಒಡೆಯ ಎನ್ನುವ ಐತಿಹಾಸಿಕ ಮಹತ್ವದ ವಿಚಾರದ ಸುತ್ತ ಭಾರತದ ಪ್ರತಿ ಹಳ್ಳಿಯಲ್ಲಿ ನಡೆದಿರಬಹುದಾದ ಸಂರ್ಘಷಮಯ ಸ್ಥಿತಿಯನ್ನು ದೃಶ್ಯ ಅಭಿವ್ಯಕ್ತಿಗೆ ಒಗ್ಗಸುವುದಕ್ಕೆ ಆಳವಾದ ಸಂಶೋಧನೆ, ಮಾನಸಿಕ ಸಿದ್ದತೆ, ಸಾಮಾಜಿಕ ವ್ಯವಸ್ಥೆಯ ಸಂಕೀರ್ಣತೆಗಳು ತಳದ ನೆಲೆಯಿಂದ ನೋಡುವ ಕ್ರಮಗಳು ಸಿನಿಮಾದಲ್ಲಿ ಅಲ್ಲಲ್ಲಿ ಇಣುಕಿದೆ. ಇವುಗಳು ಇನ್ನಷ್ಟು ಗಟ್ಟಿಯಾಗಬೇಕಿತ್ತು.

ಕಾಟೇರ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಬಾಕ್ಸ್‌ಆಫೀಸ್ ದೃಷ್ಟಿಯಿಂದ ಯಶಸ್ಸುಗಳಿಸಿರುವ ಮೊದಲ ಹತ್ತು ಸಿನಿಮಾಗಳ ಸಾಲಿನಲ್ಲಿ ಬಂದು ನಿಂತಿದೆ. ಸಿನಿಮಾ ನೂರು ಕೋಟಿಗೂ ಅಧಿಕ ಆದಾಯ ಗಳಿಸಿ ಈಗಲೂ ಹೌಸ್‌ವುಲ್ ಪ್ರದರ್ಶನವನ್ನು ಕಾಣುತ್ತಿದೆ. ಬಲಪಂಥೀಯ ಪ್ರಾಪಗ್ಯಾಂಡ ಸಿನಿಮಾಗಳು ಸಾಲುಸಾಲಾಗಿ ಬರುತ್ತಿರುವ ಈ ಹೊತ್ತಿನಲ್ಲಿ, ಇಡೀ ಸಮಾಜ ಜಾತಿ ಹಾಗು ಧರ್ಮದ ಮೇಲರಿಮೆಯ ಅಮಲಿನಲ್ಲಿ ತೇಲುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಜಾತಿ ವಿರೋಧಿ ಸಿನಿಮಾ ಬಂದಿರುವುದು ಹಾಗು ಅಪಾರ ಜನಪ್ರಿಯತೆ ಗಳಿಸಿರುವುದು ಗಮನಾರ್ಹ. ಜಾತಿವಿರೋಧಿ ಕಥಾನಕವುಳ್ಳ ತಮಿಳು ಸಿನಿಮಾಗಳು ಈಗಾಗಲೇ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಗಳಿಸಿರುವ ಪರಂಪರೆ ಹೊಂದಿರುವುದು ಇಲ್ಲಿ ಗಮನಿಸಬೇಕು. ಸಿನಿಮಾಗಳನ್ನು ಸಾಮಾನ್ಯವಾಗಿ ಎರಡು ರೂಪದಲ್ಲಿ ವಿಭಾಗಿಸಲಾಗುತ್ತದೆ. ಜನಪ್ರಿಯ ಸಿನಿಮಾ ಹಾಗು ಪರ್ಯಾಯ ಸಿನಿಮಾ ಈ ಎರಡು ಮಾದರಿ ಸಿನಿಮಾಗಳೂ ನಿರ್ಧಿಷ್ಟ ಸ್ವರೂಪಗಳಲ್ಲಿ ಇರುತ್ತವೆ ಎಂದು ಭಾವಿಸಲಾಗುತ್ತದೆ. ಇತ್ತೀಚೆಗೆ ಈ ಎರಡು ಮಾದರಿಗಳಿಗೆ ಬದಲಾಗಿ ಮೂರನೇಯ ಸಾಧ್ಯತೆ ರೂಪುಪಡೆಯುತ್ತಿರುವುದನ್ನು ಇಂತಹ ಸಿನಿಮಾದ ಮೂಲಕ ಗುರುತಿಸಬಹುದು. ಕತೆಯ ವಿವರಗಳನ್ನು ಅತ್ಯಂತ ಚುರುಕಾಗಿ ದೃಶ್ಯೀಕರಿಸುತ್ತಲೇ ಜನರ ನಡುವಿನ ಕತೆಗಳನ್ನು ಸೃಜನಶೀಲ ಸ್ವಾತಂತ್ರವನ್ನು ಬಳಸಿಕೊಂಡು ಮನರಂಜನಾತ್ಮಕವಾಗಿ ಸಿನಿಮಾ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಕಾಟೇರ ಸಿನಿಮಾ ಕೂಡ ಇಂತಹ ಒಂದು ಪ್ರಯತ್ನ ಎಂದು ಗುರುತಿಸಬಹುದು.

ಈ ರೀತಿಯ ಸಿನಿಮಾ ಕುರಿತು ಸಿಗ್ಮಾಂಡ್ ಫ್ರಾಯ್ಡ್ “ಯಾವುದೇ ಸೃಜನಶೀಲ ಕ್ರಿಯೆ ಮನುಷ್ಯನ ಅವ್ಯಕ್ತ ಭಾವನೆಗಳಿಗೆ ಬಿಡುಗಡೆಯ ಮಾಧ್ಯಮವಾದರೆ ಅದು ಜನಪ್ರಿಯವಾಗುತ್ತದೆ” ಎನ್ನುತ್ತಾನೆ. ಪ್ರೇಮ ಮತ್ತು ಹಿಂಸೆ ಸಮಾಜದಲ್ಲಿ ಸಾಮಾನ್ಯ ವಿಷಯ. ಇದನ್ನು ಎದುರುಗೊಳ್ಳಲಾರದೇ, ಅರ್ಥ ಮಾಡಿಕೊಳ್ಳಲಾಗದ ಜನ ಅವ್ಯವಸ್ಥೆಯ ಸಮಾಜ, ದಬ್ಬಾಳಿಕೆ. ದೌರ್ಜನ್ಯ ಮುಂತಾದ ಹಲವಾರು ಸಮಸ್ಯೆಗಳ ಹಿಂಸೆಯಿಂದ ನರಳುತ್ತಿರುತ್ತಾರೆ, ಇದರ ವಿರುದ್ಧ ವ್ಯಕ್ತಿ ತನ್ನ ಸಿಟ್ಟನ್ನು, ಆಕ್ರೋಶವನ್ನು ನೇರವಾಗಿ ತೋರಿಸಿಕೊಳ್ಳಲಾರದನ್ನು, ಸಿನಿಮಾ ಒಂದರ ನಾಯಕನಲ್ಲಿ ತನ್ನನ್ನು ಕಂಡುಕೊಂಡು, ಆತ ಬಡಿದಾಡುವ-ಹೊಡೆದಾಡುವ ಮೂಲಕ ಸಾಧಿಸುವ ಯಶಸ್ಸಿನಲ್ಲಿ ಭಾಗಿಯಾಗಿ ಸಂತೋಷಿಸುತ್ತಾರೆ ಆ ಮೂಲಕ ಭ್ರಾಮಕವಾಗಿಯಾದರೂ ಹಿಂಸೆಯಿಂದ ಬಿಡುಗಡೆಯಾಗಿ ಸಮಾಧಾನ ಹಾಗು ಆತ್ಮವಿಶ್ವಾಸದಿಂದ ಬದುಕಲು ಸಹಾಯ ಮಾಡುತ್ತದೆ. ಈ ಹಿನ್ನಲೆಯಲ್ಲೂ ಕಾಟೇರ ಸಿನಿಮಾವನ್ನು ವಿಶ್ಲೇಷಿಸಬೇಕು. ನೋಡುಗರು ಕೇವಲ ತೆರೆಯ ಮೇಲೆ ನೋಡಿ ತಮ್ಮ ಒಳಗೆ ಇರುವ ಅಭಿವ್ಯಕ್ತಿಯ ಒತ್ತಡವನ್ನು ತಣಿಸಿಕೊಳ್ಳುವುದಷ್ಟೇ ಅಲ್ಲದೇ ಸಿನಿಮಾದಲ್ಲಿ ಘಟಿಸುವ ಸನ್ನಿವೇಶ, ಪಾತ್ರಗಳು ಸಮಕಾಲೀನ ಬದುಕಿನ ಮೇಲೆ ಪ್ರಭಾವಿಸುವುದರಿಂದ ಸಮಾಜದಲ್ಲಿ ಜಾತಿ ಹಾಗು ಜಮೀನ್ದಾರಿ ದಬ್ಬಾಳಿಕೆ ವಿರುದ್ಧದ ಜಾಗೃತಿಯ ವಿಸ್ತಾರಕ್ಕೆ ಹೇಗೆ ಪೂರಕವಾಗಬಲ್ಲದು ಎನ್ನುವ ಸಾಧ್ಯತೆಗಳನ್ನು ಈ ಸಿನಿಮಾ ತೆರೆದಿಟ್ಟಿದೆ.

| ಈ ಬರಹ ಈ ಮೊದಲು ‘ಸಂವಾದ’ ಮಾಸಿಕದಲ್ಲಿ ಪ್ರಕಟವಾಗಿತ್ತು |


‍ಲೇಖಕರು avadhi

February 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This