ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುನ್ನೂರು ಕೇಳುತ್ತಾರೆ : ಪಠ್ಯಪುಸ್ತಕದಲ್ಲಿ ಏಕಿಲ್ಲ ವಿಮೋಚನೆಯ ರೋಚಕ ಸಂಗತಿಗಳು?

ಪಠ್ಯಪುಸ್ತಕದಲ್ಲಿ ಏಕಿಲ್ಲ ವಿಮೋಚನೆಯ ರೋಚಕ ಸಂಗತಿಗಳು?

-ಮಹಿಪಾಲರೆಡ್ಡಿ ಮುನ್ನೂರ್

ಅದು 1946 ರ ಕಾಲ.

ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರನ್ನು ಆರಿಸಬೇಕಾಗಿದ್ದ ಪರಿಸ್ಥಿತಿ. ಆಗ ದೇಶದಲ್ಲಿ ಆಡಳಿತ ನಡೆಸುತ್ತ ಇದ್ದ ಹದಿನೈದು ಪ್ರಾಂತೀಯ ಸರಕಾರಗಳಲ್ಲಿ 12 ಪ್ರಾಂತೀಯ ಸರಕಾರಗಳು `ಒಬ್ಬ’ ವ್ಯಕ್ತಿಯ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದವು.

ಇನ್ನುಳಿದ ಮೂರು ಪ್ರಾಂತೀಯ ಸರಕಾರಗಳು `ಇನ್ನೊಬ್ಬರ’ ಹೆಸರನ್ನು ಸೂಚಿಸಿದ್ದವು. ಆ ಕಾಲಕ್ಕೆ ಅಂದರೆ, ಅಂದಿನ ವರ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವುದು ಅತೀ ಮಹತ್ವದ್ದಾಗಿತ್ತು. ಏಕೆಂದರೆ, ಬ್ರಿಟಿಷ್ರು ಭಾರತೀಯರಿಗೆ ಆಡಳಿತ ವಹಿಸಿಕೊಡುವ ಸಮಯ ಬಂದಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸಮಯ ಸನ್ನಿಹಿತವಾಗಿತ್ತು. ಈ ಸಮಯದಲ್ಲಿ ಕಾಂಗ್ರೆಸ ಪಕ್ಷದ ಅಧ್ಯಕ್ಷರಾಗಿರುವ ವ್ಯಕ್ತಿಯೇ ಭಾರತದ ಪ್ರಧಾನ ಮಂತ್ರಿ ಆಗುವ ಸಾಧ್ಯತೆಗಳಿದ್ದವು.

ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಆಗುವ ಅವಕಾಶಗಳಲ್ಲಿ ಶೇ. 90 ರಷ್ಟು ಮೊದಲನೇ `ಒಬ್ಬ’ ವ್ಯಕ್ತಿಗೆ ಸೇರಿದಾಗಿತ್ತು. ಇಂತಹ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವುದು ಬೇಡವೆಂದು `ಒಬ್ಬ’ ವ್ಯಕ್ತಿಗೆ ಮಹಾತ್ಮಗಾಂಧೀಗೆ ಸೂಚಿಸಿದರು. ಗಾಂಧಿಯವರ ಮಾತಿಗೆ ಮರು ಮಾತನಾಡದೇ `ಒಬ್ಬ’ ಚುನಾವಣೆಯಿಂದ ಹಿಂದೆ ಸರಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ `ಇನ್ನೊಬ್ಬ’ ಸ್ವತಂತ್ರ ದೇಶದ ಮೊದಲ ಪ್ರಧಾನಿಯಾದರು. ಪ್ರಧಾನಿಯಾಗಬೇಕಿದ್ದ `ಒಬ್ಬ’ ಉಪ ಪ್ರಧಾನಿಯಾದರು. ತಮ್ಮ ಗುರುವಿನ ಮಾತಿಗೆ ಬೆಲೆ ಕೊಟ್ಟು ಈ ದೇಶದ ಅತ್ಯುನ್ನತ ಅಧಿಕಾರ ತನ್ನದಾಗುವಂತಿದ್ದರೂ, ಅದಕ್ಕೆ ಆಸೆ ಪಡದೆ, ತಮ್ಮ ಗುರು ಗಾಂಧಿಜೀಯವರ ಇಚ್ಛೆಯಂತೆ ನಡೆದ `ಒಬ್ಬ’ ತಮ್ಮ ವ್ಯಕ್ತಿತ್ವವನ್ನು ಮೆರೆದರು, ಸರ್ವಮಾನ್ಯರಾದರು.

ಇಲ್ಲಿ `ಒಬ್ಬ’ ಎಂದು ಕರೆಸಿಕೊಳ್ಳುವ ವ್ಯಕ್ತಿಯೇ ಸರದಾರ್ ವಲ್ಲಭಬಾಯಿ ಪಟೇಲ್ ಹಾಗೂ `ಇನ್ನೊಬ್ಬ’ ಎಂದು ಕರೆಸಿಕೊಳ್ಳುವ ವ್ಯಕ್ತಿಯೇ ಪಂಡಿತ ಜವಾಹರಲಾಲ್ ನೆಹರೂ ಎಂದು ನಿಮಗೀಗಾಗಲೇ ತಿಳಿದಿದೆ ಎಂದುಕೊಳ್ಳುತ್ತೇನೆ.

ಹೆಸರಲ್ಲಿರುವ `ಸರದಾರ್’ ಎಂಬ ಬಿರುದಿಗೆ ತಕ್ಕಂತೆ ಪಟೇಲರು ನಡೆದರು.

ಅಂತಹ ಸರದಾರ್ ವಲ್ಲಭಬಾಯಿ ಪಟೇಲ್ರನ್ನು ಇವತ್ತು ನೆನಪಿಸಿಕೊಳ್ಳಬೇಕಾದ್ದು ಅತಿ ಅವಶ್ಯಕವೆನಿಸುತ್ತದೆ. ಈ ದೇಶವು ಸ್ವಾತಂತ್ರ್ಯಗೊಂಡರೂ ನಮ್ಮ ಹೈದ್ರಾಬಾದ್ ಕನರ್ಾಟಕ ಪ್ರದೇಶ ಸ್ವಾತಂತ್ರ್ಯಗೊಂಡಿರಲಿಲ್ಲ. ಸ್ವಾತಂತ್ರ್ಯ ಸಿಕ್ಕು ಮರು ವರ್ಷದಲ್ಲಿ ಗಾಂಧಿಜಿಯವರನ್ನು ಕೊಲೆ ಮಾಡಲಾಯಿತು. ಆ ಸಂದರ್ಭದಲ್ಲಿ ಪಟೇಲರಿಗೆ ದೇಶದಲ್ಲಿದ್ದ 500 ಸಣ್ಣ ಪುಟ್ಟ ರಾಜ್ಯಗಳ ವ್ಯವಹಾರಗಳನ್ನು ನೋಡಿಕೊಳ್ಳುವುದಾಗಿತ್ತು. ಅವುಗಳನ್ನು ಹಾಗೆಯೇ ಇರಗೊಟ್ಟರೆ `ಅಖಂಡ ಭಾರತ’ ಕನಸಾಗಿಯೇ ಇರುತ್ತದೆ. ಈ ಚಿಕ್ಕ ಪುಟ್ಟ ರಾಜರು ಕಿತ್ತಾಡಿ ಮತ್ತಾರೋ ವಿದೇಶಿಯರಿಂದ ನಾವು ದಾಸ್ಯದ ಸಂಕೋಲೆಗೆ ಒಳಗಾಗುವ ಪರಿಸ್ಥಿತಿ ಬಂದುಬಿಡುತ್ತದೆ.

ಹಾಗಾಗದಿರಲು ಏನು ಮಾಡಬೇಕು?

ಅದಕ್ಕೆ ಸರದಾರ್ ಪಟೇಲರು ಎಲ್ಲ ರಾಜ್ಯಗಳನ್ನು ಭಾರತದಲ್ಲಿ ವಿಲೀನಗೊಳಿಸಲು ಸೂಚಿಸಿದರು. ಬಹುತೇಕ ರಾಜರುಗಳು ಒಪ್ಪಿಕೊಂಡರು. ತಮ್ಮ ತಮ್ಮ ರಾಜ್ಯಗಳನ್ನು ಭಾರತ ದೇಶದಲ್ಲಿ ವಿಲೀನಗೊಳಿಸಿ, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡರು. ರಾಜರುಗಳಿಗೆ ಅವರ ಅಂತಸ್ತಿಗನುಗುಣವಾಗಿ ಅವರ ಅರಮನೆಗಳ ಪಾಲನೆಗೆ, ರಾಜರ ಪೋಷಣೆಗೆ, ರಾಜರ ಮಕ್ಕಳ ವಿದ್ಯಾಭ್ಯಾಸಕ್ಕೆ ಭಾರತ ಸಕರ್ಾರವೇ ಪ್ರತೀ ವರ್ಷ ಇಂತಿಷ್ಟು ಹಣ ಎಂದು ಕೊಡುತ್ತ ಬಂದಿತು. ಇದನ್ನೇ `ರಾಜಧನ’ ಎಂದರು. ಬರುಬರುತ್ತಾ ಈ ರಾಜಧನವನ್ನು ನೀಡುವುದನ್ನು ನಿಲ್ಲಿಸಲಾಯಿತು. ಎಲ್ಲ ರಾಜ್ಯಗಳು ಭಾರತಕ್ಕೆ ಸೇರಿಕೊಂಡರೂ ಒಂದೆರಡು ಸಂಸ್ಥಾನಗಳು ಹೊರಗೇ ಉಳಿದುಕೊಂಡವು.

ಅವುಗಳಲ್ಲಿ ಹೈದ್ರಾಬಾದು ಸಂಸ್ಥಾನವೂ ಒಂದು.

ಆಗ ಭಾರತದಲ್ಲಿದ್ದ ರಾಜ್ಯಗಳ ಪೈಕಿ ಇದು ಅತೀ ದೊಡ್ಡ ಸಂಸ್ಥಾನ. ಇಲ್ಲಿ ನಿಜಾಮನ ಆಳ್ವಿಕೆ. ಇವನಿಗೆ ಒಣ ಪ್ರತಿಷ್ಠೆ, ಜಂಭ. ಹೈದ್ರಾಬಾದು ಸಂಸ್ಥಾನವು ಭಾರತದಂತೆಯೇ ಸ್ವತಂತ್ರ ರಾಜ್ಯ ಎಂಬುದು ಅವನ ಬಡಬಡಿಕೆ. ತಾನು ಭಾರತದಲ್ಲಿ ಸೇರಲಾರೆ ಎಂಬುದು ಇವನ ಮೊಂಡು ಹಟ. ಇವನಿಗೊಬ್ಬ ಬಾಯಿಬಡುಕ ಅಳಿಯನ ಬೆಂಬಲ ಬೇರೆ. ಇವನ ಹೆಸರು ಕಾಸೀಂ ರಜ್ವಿ ಅಂತ. ಈತ ಹೈದ್ರಾಬಾದಿನ `ರಜಾಕಾರರು’ ಎಂಬ ಪುಂಡರ ದಂಡು ಕಟ್ಟಿಕೊಂಡು ಸಲ್ಲದ ಪುಂಡಾಟಿಕೆಗೆ ತೊಡಗಿದ್ದ. ಹಳ್ಳಿಗರನ್ನು ದೋಚುವುದು, ಹಿಂಸಿಸುವುದು, ಕೊಲೆ-ಕಳ್ಳತನಗಳು ರಜಾಕಾರರ ಕಸುಬಾಗಿತ್ತು. ಈ ಪುಂಡರ ಬೆಂಬಲ ತನಗಿದೆ ಎಂಬುದಕ್ಕಾಗಿಯೇ ಹೈದ್ರಾಬಾದಿನ ನಿಜಾಮ ಕಳ್ಳತನದಲ್ಲಿ ಮದ್ದುಗುಂಡು ಕೊಂಡು ಭಾರತದ ವಿರುದ್ಧ ಯುದ್ಧ ಮಾಡಲು ಸಿದ್ಧತೆ ನಡೆಸಿದ್ದ. ಇವನಿಗೆ ಬೆಂಬಲವಾಗಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದು, ಆ ಸಂದರ್ಭದಲ್ಲಿ ಪ್ರಧಾನಿ ಪಟ್ಟ ಕಳೆದುಕೊಂಡಿದ್ದ ಚಚರ್ಿಲ್ ಮಹಾಶಯ. ಈತ ಎರಡನೇ ಮಹಾಯುದ್ಧದ ವೀರ. ಚಚರ್ಿಲ್ನ ಬೆಂಬಲ ತನಗಿದೆ ಎಂದು ನಿಜಾಮ ಹಾರಾಡತೊಡಗಿದ್ದ.

ರಜಾಕಾರರ ಪುಂಡಾಟ ನಡೆದೇ ಇತ್ತು. ಕಡೆಗೊಮ್ಮೆ ಕಾಸೀಂ ರಜ್ವಿ ತಾನೇ ಪಟೇಲರೊಂದಿಗೆ ಮಾತನಾಡುತ್ತೇನೆ. ಹೈದ್ರಾಬಾದಿನ ತಂಟೆಗೆ ಬರದಂತೆ ಭಾರತಕ್ಕೆ ತಾಕೀತು ಮತ್ತು ಎಚ್ಚರಕೊಟ್ಟು ಬರುತ್ತೇನೆ ಎಂದು ನಿಜಾಮನ ಮುಂದೆ ಜಂಭ ಕೊಚ್ಚಿಕೊಂಡು ಸರದಾರ್ ಪಟೇಲ್ರ ಹತ್ತಿರಕ್ಕೆ ಬಂದ.

`ನಮ್ಮ ತಂಟೆಗೇಕೆ ಬರುತ್ತಿದ್ದೀರಿ, ಹೈದ್ರಾಬಾದು ಸ್ವತಂತ್ರ ರಾಜ್ಯ. ನಾವು ಹಾಗೇ ಉಳಿಯಲಿದ್ದೇವೆ. ನಿಮ್ಮ ಭಾರತದ ಒಕ್ಕೂಟಕ್ಕೆ ನಾವು ಸೇರಲಾರೆವು’ ಎಂದ ಕಾಸೀಂ ರಜ್ವಿ.

ಪುಂಡರ ಗುಂಪು ಕಟ್ಟಿಕೊಂಡು ಬಡವರನ್ನು ಸುಲಿಗೆ ಮಾಡುತ್ತಿದ್ದ ಈ ಕಾಸೀಂ ರಜ್ವಿಯ ಉಪಟಳ ಗೊತ್ತುಮಾಡಿಕೊಂಡಿದ್ದ ಸರದಾರ್ ಪಟೇಲರು, `ನೀವು ಹಾಗೆಯೇ ಉಳಿಯುವಂತಿಲ್ಲ. ಭಾರತದೊಂದಿಗೆ ಸೇರಲೇಬೇಕು. ನೀವಾಗಿಯೇ ಸೇರಿದರೆ ಉತ್ತಮ. ಇಲ್ಲದಿದ್ದರೆ ಸೈನ್ಯವನ್ನು ಕಳಿಸುವ ವಿನಃ ನಮಗೆ ಬೇರೆ ದಾರಿಯಿಲ್ಲ’ ಎಂದು ಹೇಳಿಯೇಬಿಟ್ಟರು.

`ನಾವು ಕಡೆಯವರೆಗೂ ಹೋರಾಡುತ್ತೇವೆ’ ಎಂದ ರಜ್ವಿ.

`ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನಾನೇಕೆ ಬೇಡವೆನ್ನಲಿ. ನಿಮ್ಮಿಷ್ಟವಿದ್ದಂತೆ ಮಾಡಿ’ ಎಂದರು ಪಟೇಲರು.

ಕಾಸೀಂ ರಜ್ವಿ ಸೆಟೆದುಕೊಂಡು ಹೊರನಡೆದ.

ಅದಾಗಿ, ಹೈದ್ರಾಬಾದಿಗೆ ಅನೇಕ ಬಾರಿ ಎಚ್ಚರಿಕೆ ಕೊಟ್ಟ ಮೇಲೂ ಅದು ಭಾರತದೊಂದಿಗೆ ಸೇರಲು ಒಪ್ಪದೇ ಇದ್ದಾಗ ಕಡೆಯ ಅಸ್ತ್ರವೆಂದು ಭಾರತದ ಸೇನೆಯನ್ನು ಹೈದ್ರಾಬಾದಿಗೆ ಕಳಿಸಲಾಯಿತು. ಭಾರತದ ಸೇನೆಯೆದುರು ಹೈದ್ರಾಬಾದಿನ ಆಟ ನಡೆಯಲಿಲ್ಲ. ಮೂರೇ ದಿನದಲ್ಲಿ ಹೈದ್ರಾಬಾದು ಸಂಸ್ಥಾನ ಶರಣಾಯಿತು.

ಹೈದ್ರಾಬಾದು ಸಂಸ್ಥಾನ ವಿರುದ್ಧ ಸೇನೆ ನಡೆಸಿದ ಈ ಪ್ರಕ್ರಿಯೆಗೆ `ಪೊಲೀಸ್ ಆ್ಯಕ್ಷನ್’ ಎಂದು ಕರೆದರು.

ಹೈದ್ರಾಬಾದು ಸಂಸ್ಥಾನವನ್ನು ಕೈವಶ ಮಾಡಿಕೊಂಡು ಶಾಂತಿ, ಸುವ್ಯವಸ್ಥೆ ನೆಲೆಸುವಂತೆ ಮಾಡಬೇಕೆಂದು ಸರದಾರ್ ಅವರನ್ನು ನಿಜಾಮರು ಕೇಳಿಕೊಂಡರು. ಹೈದ್ರಾಬಾದು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಿಕೊಂಡಿತು.

ಸೇರಿಕೊಂಡ ದಿನವೇ 1948 ರ ಸೆಪ್ಟೆಂಬರ್ 17.

ಅಂದು ಅಖಂಡ ಭಾರತ ದೇಶ ರೂಪುಗೊಂಡಿತು.

ಹರಿತ ಬುದ್ಧಿಯ ಚುರುಕು ಮಾತುಗಾರ, ನೇರವಾದ ಅಭಿಪ್ರಾಯ, ಸ್ಪಷ್ಟ ಮಾತು, ಸಾಮಾನ್ಯ ಮನುಷ್ಯ ಸಾಧಿಸಬೇಕಾದುದೆಲ್ಲವನ್ನೂ ಅದಕ್ಕಿಂತ ಹೆಚ್ಚು ಸಾಧಿಸಿದ, ಅವಿರತ ದುಡಿಮೆ, ನಿರಂತರ ಶ್ರಮದ ಸರದಾರ್ ವಲ್ಲಭಬಾಯಿ ಪಟೇಲ್ ಎಂಬ ಉಕ್ಕಿನ ಮನುಷ್ಯ ಹೈದ್ರಾಬಾದು ಸಂಸ್ಥಾನಕ್ಕೆ ಒಳಪಟ್ಟ ನಮ್ಮ ಪ್ರದೇಶಗಳಾದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರುಗಳಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅಂತಹ ಮಹಾನ್ ಚೇತನವನ್ನು ನೆನಪು ಮಾಡಿಕೊಳ್ಳುವ ಸಮಯ ಇದು. ಹೈದ್ರಾಬಾದ್ ಕನರ್ಾಟಕದ ವಿಮೋಚನಾ ದಿನಾಚರಣೆಯ ಸಂಭ್ರಮದ ಸಮಯ.

ಈ ಸಂದರ್ಭದಲ್ಲಿ, ಸರದಾರ್ ಅವರನ್ನು, ಅವರು ಮಾಡಿದ ಅಮೋಘ ಸಾಧನೆಯನ್ನು ಮೆಲುಕು ಹಾಕುವುದು ಸೂಕ್ತ ಎಂದು ಅನಿಸಿದ್ದಕ್ಕೆ ಇದೆಲ್ಲ.

ಮೊನ್ನೆ, ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಹಮ್ಮಿಕೊಂಡಿದ್ದ ವಿಮೋಚನಾ ಉತ್ಸವದ ನಿಮಿತ್ತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಆವತ್ತು ಅವರಾಡಿದ ಮಾತುಗಳು, ನಾವು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ನಿಜಾಮಶಾಹಿ ಆಡಳಿತದಲ್ಲಿದ್ದೆವು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ನಾವು ನಿಜಾಮನ ಆಡಳಿತದಲ್ಲಿ ಇದ್ದೆವು. ಒಂದು ವರ್ಷದ ತರುವಾಯ ಭಾರತದಲ್ಲಿ ವಿಲೀನಗೊಂಡಿದ್ದೇವೆ. ಈ ವಿಮೋಚನೆಯ ಇತಿಹಾಸ ನಮ್ಮ ಮಕ್ಕಳಿಗೆ ಗೊತ್ತೇ ಇಲ್ಲ. ಯಾಕೆಂದರೆ, ಅವರು ಓದುವ ಇತಿಹಾಸವೇ ಬೇರೆ ಇದೆ. ಇಡೀ ದೇಶದ ಎಲ್ಲ ಇತಿಹಾಸವನ್ನು ಓದುತ್ತಾರೆ. ನಮ್ಮ ಈ ವಿಮೋಚನೆಯ ಇತಿಹಾಸ ಮಾತ್ರ ಓದುವುದಿಲ್ಲ’ ಎಂಬ ನೋವಿನ ಕಾಳಜಿಯನ್ನು ಹೊರಹಾಕಿದರು.

ನಿಜ.

ಭಾರತಕ್ಕೆ ಬಂದ ಬ್ರಿಟಿಷರ, ಪೋಚರ್ುಗೀಸರ, ಮುಸ್ಲಿಂ ದೊರೆಗಳ ಇನ್ನೂ ಅನೇಕರ ಇತಿಹಾಸ ಮತ್ತು ಸಾಂಬಾರ ಪದಾರ್ಥಗಳ ವ್ಯಾಪಾರ, ಆ ನಂತರ ಇಲ್ಲಿಯೇ ಜಾಂಡಾ ಹೂಡಿದ್ದು, ಬಿಟ್ಟು ಹೋಗುವ ಸಂದರ್ಭ ಬಂದಾಗ ತಡಕಾಡಿದ್ದು, ಇದೆಲ್ಲವನ್ನು ಇತಿಹಾಸದಲ್ಲಿ ಓದುತ್ತೇವೆ.

ನಮ್ಮ ಇತಿಹಾಸವೇ ನಮ್ಮ ಮಕ್ಕಳಿಗೆ ಗೊತ್ತಿಲ್ಲ. ಹೀಗೆಯೇ ಮುಂದುವರಿದರೆ, ಮುಂದಿನ ಜನಾಂಗಕ್ಕೆ ವಿಮೋಚನೆಯ ಲವಲೇಶವೂ ಅರಿವಿಗೆ ಬಾರದು.

ಹೈದ್ರಾಬಾದು ಸಂಸ್ಥಾನದ ವಿಮೋಚನೆಯ ಈ ಸಂಗತಿಗಳನ್ನು ಪಠ್ಯಪುಸ್ತಕದಲ್ಲಿ ಓದುವಂತಾಗಬೇಕು. ಆ ಮೂಲಕ ಇತಿಹಾಸವನ್ನು ನೆನಪು ಮಾಡಿಕೊಳ್ಳುವಂತಾಗಬೇಕು. ಜಗತ್ತಿನ ಇತಿಹಾಸ ನಮಗೆ ಗೊತ್ತು. ನಮ್ಮ ನೆಲದ ಇತಿಹಾಸವೊಂದನ್ನು ಬಿಟ್ಟು ಎನ್ನುವಂತಾಗಬಾರದು. ಯಾಕೆಂದರೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹೀಗೆ ಹೇಳಿದ್ದಾರೆ.

`ಇತಿಹಾಸವನ್ನು ಮರೆತವನು.. ಇತಿಹಾಸವನ್ನು ಸೃಷ್ಟಿಸಲಾರ’.

ಪಠ್ಯಪುಸ್ತಕದಲ್ಲಿ ವಿಮೋಚನೆಯ ರೋಚಕ ಸಂಗತಿಗಳನ್ನು ಸೇರಿಸಬೇಕೆಂಬ ಬಹುದೊಡ್ಡ ಹೋರಾಟವನ್ನು ರೂಪಿಸುವುದು ಅನಿವಾರ್ಯ ಎನಿಸುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಿದೆ.

‍ಲೇಖಕರು G

25 November, 2012

1 Comment

  1. sunil rao

    dear sir,
    i second your views.
    unless a country or one centralisation doesnt bow for the facts that had happened which are true….and if it can see the facts as facts rather its politics or so called any agendas…..it would reap all the above u said in our texts and books as well…

    wonderful write up

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading