ಮುದ್ದು ತೀರ್ಥಹಳ್ಳಿ ಅವರ ಹೊಸ ಕವನ ಸಂಕಲನ
‘ಕ್ಷಮಿಸಲಾಗುವುದಿಲ್ಲ ಕ್ಷಮಿಸಿ’ಗೆ
ವಿಮರ್ಶಕ ಕೆ ವೈ ನಾರಾಯಣಸ್ವಾಮಿ ಬರೆದ ಮುನ್ನುಡಿ ಇಲ್ಲಿದೆ-
ಕವಿತೆಯೆಂಬ ಲೋಕ ಸಂವಾದ
ಕೆ ವೈ ನಾರಾಯಣಸ್ವಾಮಿ
ಅತ್ಯಂತ ಕಿರಿಯ ವಯಸ್ಸಿನಲ್ಲಿ ತನ್ನ ಸೃಜನಶೀಲ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗುರುತಿಸಲ್ಪಟ್ಟ ಕವಿಗಳು ತುಂಬಾ ವಿರಳ. ಇಂತಹ ವಿರಳ ಗುಂಪಿಗೆ ಸೇರಿದ ಕವಿ ಮುದ್ದು ತೀರ್ಥಹಳ್ಳಿ.
ನಾವೆಲ್ಲರೂ ಬಲ್ಲ ಹಾಗೆ ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಚ್ಚರಿಗಳ ತಾಣ ತೀರ್ಥಹಳ್ಳಿ. ಕುವೆಂಪು, ಅನಂತಮೂರ್ತಿ ಅವರಂತಹ ಮೇರು ಪ್ರತಿಭೆಗಳನ್ನು ಕಡೆದ ಮಲೆಸೀಮೆಯ ಮತ್ತೊಂದು ಅಚ್ಚರಿ ಆಕೆ.
ಈಗ ಹರೆಯದ ಹುಡುಗಿಯಾಗಿ ತನ್ನ ಸೃಜನಶೀಲ ಚಟುವಟಿಕೆಯನ್ನು ಮುದ್ದು ಮುಂದುವರೆಸಿದ್ದರೂ ಕನ್ನಡದ ಓದುಗರ ಮನಸ್ಸಿನಲ್ಲಿ ಆಕೆ ಇನ್ನೂ ಪುಟ್ಟ ಹುಡುಗಿಯಾಗಿಯೇ ಇದ್ದಾಳೆ. ಆರೇಳು ವರ್ಷಗಳ ವಯಸ್ಸಿಗೆ ಪುಸ್ತಕ ಪ್ರಕಟಿಸಿ ವಿಮರ್ಶಾ ವಲಯದ ಗಮನ ಸೆಳೆದ ಪೋರಿ ಈಕೆ. ಮುದ್ದು ತನ್ನ ವಯಸ್ಸಿಗೆ ಮೀರಿದ ಅರಿವನ್ನು ಗಳಿಸಿಕೊಂಡ ಸಾಧಕಿ. ಈಕೆಯ ಓರಿಗೆಯವರು ಆಟ ಪಾಠಗಳಲ್ಲಿ ಮಗ್ನರಾಗಿ ಲೋಕವನ್ನು ಮರೆತಿರುವಾಗ, ಈಕೆ ತನ್ನ ಸುತ್ತಲ ಪರಿಸರವನ್ನು ಬೆರಗುಗಣ್ಣಿನಿಂದ ಗಮನಿಸುವ, ಗ್ರಹಿಸುವ,ಅಭಿವ್ಯಕ್ತಿಸುವ ಮಾಯೆಯನ್ನು ಹೇಗೋ ಕಲಿತುಕೊಂಡವಳು.
ಚಿಕ್ಕ ವಯಸ್ಸಿಗೆ ಸಿಕ್ಕ ಪ್ರಸಿದ್ಧಿ ಪ್ರಶಸ್ತಿಗಳಿಂದ, ಹೊಗಳಿಕೆಗಳಿಂದ ಹಲವು ಪ್ರತಿಭಾವಂತರು ತಮ್ಮ ಸೃಜನ ಪ್ರಯಾಣವನ್ನು ನಿಲುಗಡೆಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಆದರೆ ಕವಿ ಮುದ್ದು ಮಾತ್ರ ಇದಕ್ಕೆ ಅಪವಾದವಾಗಿದ್ದಾಳೆ. ಆಕೆಯ ಮುಗ್ದತೆಯ ಕಣ್ಣು ಲೋಕವನ್ನು ನೋಡುವ ಕೌತುಕಗಳ ಹರಹು ಮಾತ್ರ ವಿಸ್ತಾರವಾಗುತ್ತಿರುವುದಕ್ಕೆ ಸಮರ್ಥ ಉದಾಹರಣೆ ಈ ಕವನ ಸಂಕಲನ.
ಮುದ್ದು ನನಗೆ ಪರಿಚಯವಾದ್ದು ತೀರ ಈಚೆಗೆ. ಕಾಗಿನೆಲೆಯ ಕನಕದಾಸ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಕೆಲ ತಿಂಗಳ ಹಿಂದೆ ಏರ್ಪಾಟು ಮಾಡಿದ್ದ ಕನಕ ಕಾವ್ಯ ಅಧ್ಯಯನ ಶಿಬಿರದಲ್ಲಿ. ಅಲ್ಲಿ ಗುಂಪಿನಲ್ಲಿರುವಾಗಲೂ ಯಾವುದೋ ಗಹನವಾದ ಚಿಂತೆಯಲ್ಲಿ ಲೀನವಾಗಿರುವ ಆಕೆಯ ತನ್ಮಯತೆ ನನ್ನನ್ನು ಬೆರಗುಗೊಳಿಸಿತು. ಕನ್ನಡ ಕಾವ್ಯಪರಂಪರೆಯನ್ನು ಅರಿಯುವ ಅದರ ನಡೆ ನಿಲುವುಗಳನ್ನು ನಿಕಟವಾಗಿ ನೋಡುವ ಹಂಬಲ ಆಕೆಯನ್ನು ಇತರರಿಂದ ಪ್ರತ್ಯೇಕವಾಗಿ ಕಾಣಿಸುತ್ತಿತ್ತು. ಆ ಮೂರು ದಿನ ಹಗಲಿರುಳು ನಡೆದ ಕನ್ನಡದ ಕಾವ್ಯ ಪರಂಪರೆಯ ಓದು ಚರ್ಚೆಗಳಲ್ಲಿ ಆಕೆ ತೊಡಗಿಕೊಂಡ ರೀತಿ ಆಕೆಯ ಸೃಜನಶೀಲ ಹಸಿವನ್ನು ಕಾಣಿಸುತ್ತಿತ್ತು. ಈಕೆ ಭವಿಷ್ಯದಲ್ಲಿ ಕನ್ನಡ ಸಂಸ್ಕತಿ ನೆನಪಿಡುವಂಥ ಕಾರ್ಯಗಳನ್ನು ಮಾಡಬಲ್ಲಳು ಎಂಬ ಭರವಸೆಯನ್ನು ನನ್ನಲ್ಲಿ ಮೂಡಿಸಿದ್ದಂತೂ ನಿಜ. ಮುದ್ದು ಬರೆದ ಈ ಕವಿತೆಗಳನ್ನು ಓದುತ್ತಾ ನಾನು ಕನ್ನಡ ಕವಿತೆಯ ವರ್ತಮಾನವನ್ನು ಕುರಿತು ಚಿಂತಿಸಿದ ಕೆಲ ಸಂಗತಿಗಳು ಇಲ್ಲಿವೆ.
ಕನ್ನಡ ಕವಿತೆ ಇಂದು ಹಲವು ತೊರೆಗಳು ಸೇರಿ ಹರಿಯುವ ನದಿಯಂತೆ ಕಾಣುತ್ತಿದೆ. ಕನ್ನಡ ಸಾಹಿತ್ಯ ಅಧ್ಯಯನದ ಹಿನ್ನೆಲೆಯಿಂದ ಕಾವ್ಯ ಕಟ್ಟುತ್ತಿದ್ದ ಕವಿಗಳ ಸಂಖ್ಯೆ ಇಂದು ಕಡಿಮೆಯಾಗಿದೆ. ಆದರೆ ಕನ್ನಡ ಕವಿತೆಯ ಲೋಕಕ್ಕೆ ಅನೇಕ ವಲಯಗಳಿಂದ, ಭಿನ್ನ ಭಿನ್ನವಾದ ವಸ್ತು ಮತ್ತು ಅನುಭವಗಳಿಂದ ಕವಿಗಳು ಪ್ರವೇಶಿಸಿದ್ದಾರೆ ಆದ್ದರಿಂದ ವತರ್ಮಾನದ ಕವಿತೆಗಳು ವೈವಿಧ್ಯತೆಯನ್ನು ಪಡೆದುಕೊಂಡಿವೆ. ಇವರಲ್ಲಿ ಮೊದಲ ಬಾರಿಗೆ ಅಕ್ಷರದ ಮಾಯೆ ಪಡೆದುಕೊಂಡ ಸಮುದಾಯಗಳು ತಮ್ಮ ಸಾಂಸೃತಿಕ ನೆನಪುಗಳನ್ನು ಮೊಗೆದು ತಂದು ಪದ ಕಟ್ಟುತ್ತಿದ್ದಾರೆ. ಲೋಕ ಮತ್ತು ಕವಿಯ ಸಂಬಂಧಗಳು ಇಂದು ಬದಲಾಗಿವೆ.
ಕನ್ನಡದ ಶ್ರೇಷ್ಠ ಕವಿತೆಗಳನ್ನು ಬರೆದ ಕವಿಗಳು ಲೋಕ ತನ್ನೊಳಗೆ ಪ್ರತಿಫಲಿಸುವ ವಿನ್ಯಾಸಗಳನ್ನು ನಿರೂಪಿಸುತ್ತಿದ್ದರು.ಆದರೆ ಇಂದು ಈ ವಿದ್ಯಮಾನ ಅದಲು ಬದಲಾಗಿದೆ.ಲೋಕ ಪರಿವರ್ತನೆಯ ಗತಿಯನ್ನು ಕವಿಗಳು ಗ್ರಹಿಸುವ ಬಗೆ, ನಂಬಿದಸಿದ್ದಾಂತಗಳು ಕವಿತೆಯಾಗಿರೂಪ ತಳೆಯುತ್ತಿರುವುದನ್ನು ಗುರುತಿಸಬಹುದು.ಇದರಿಂದಾಗಿ ಕವಿತೆಯಲ್ಲಿ ಭಾವನಾತ್ಮಕ ನೆಲೆಗಳು ಹಿಂದೆ ಸರಿದು ಸಾಮಾಜಿಕತೆಯ ಆಯಾಮಗಳು ಮುನ್ನೆಲೆಗೆ ಬಂದಿವೆ.ಅಲ್ಲದೆ ಕನ್ನಡಕವಿತೆ ಮೈದಾಳುತ್ತಿದ್ದ ಕಾವ್ಯ ಭಾಷೆಯು ಕೂಡ ಇಂದು ತನ್ನ ಚಹರೆಯನ್ನು ಬಹುಪಾಲು ಬದಲಿಸಿಕೊಂಡಿದೆ.
ನೂರು ವರ್ಷಗಳಿಂದಲೂ ಹಲವು ರೂಪಗಳನ್ನು ದಾಟಿ, ಹಲವು ಚಳುವಳಿಗಳ ಕುಲುಮೆಯಲ್ಲಿ ಕಾದು ಇಷ್ಟಾದೇವತಾ ಪ್ರತಿಮೆಯಾಗಿದ್ದ ಆಧುನಿಕ ಕಾವ್ಯ ಭಾಷೆ ತನ್ನ ಭಾವೋಪಯೋಗಿ ಗುಣವನ್ನು ಕಳೆದುಕೊಂಡಿದೆ. ಲೋಕೋಪಯೋಗಿ ಭಾಷೆಯನ್ನು ವರ್ತಮಾನದ ಕವಿಗಳು ಮುಂದು ಮಾಡುತ್ತಿರುವುದರಿಂದ ಕವಿತೆಯ ಮಾಯಕದ ನೆಲೆ ಹಿಂದೆ ಸರಿದು ಚಿಂತನೆಯ ನೆಲೆಗಳು ಗಾಢವಾಗಿ ಎದ್ದು ಕಾಣುತ್ತಿವೆ. ಆದಕಾರಣ ಕವಿತೆಯ ನುಡಿಗಟ್ಟುಗಳು ಪೆಡಸುತನ ಪಡೆದುಕೊಂಡಿವೆ.ಈ ಮಾತಿಗೆ ಅಪವಾದಗಳು ಇಲ್ಲವೆಂದಲ್ಲ ರಮೇಶ ಅರೋಲಿ ಆರೀಫ್ ರಾಜ, ರಾಜೇಂದ್ರ ಕುಮಾರ್ ಮುಂತಾದ ಹಲವು ಕವಿಗಳು ತನ್ನ ಅನುಭವಕ್ಕೆ ತಕ್ಕ ಕಾವ್ಯ ಭಾಷೆಯೊಂದನ್ನು ತೀವ್ರವಾಗಿ ಹುಡುಕುತ್ತಿರುವುದನ್ನು ನೆನೆಯಬಹುದು.
ಒಟ್ಟು ಹೊಸ ತಲೆಮಾರು ಸೃಷ್ಟಿಸುತ್ತಿರುವ ಕಾವ್ಯ ಪದಾರ್ಥದ ಸಂದ ಕಟ್ಟು ಕನ್ನಡ ಕವಿತೆಗೆ ಹೊಸತು. ವಸ್ತು ಮತ್ತು ಅನುಭವಗಳು ಕನ್ನಡ ಲೋಕದ ಅಂಚುಗಳಿಂದ ಶತಮಾನಗಳ ಮೌನದಿಂದ ಎದ್ದು ಬರುತ್ತಿವೆ. ಎಪ್ಪತ್ತರ ದಶಕದಲ್ಲಿ ದಲಿತ ಲೋಕದಿಂದ ಬಂದ ಅನಿರೀಕ್ಷಿತ ಪ್ರವಾಹವೊಂದು ಕನ್ನಡದ ನದಿಯ ನೀರಿನ ಪಾರಂಪರಿಕ ಗತಿಯನ್ನುಏರುಪೇರು ಮಾಡಿತ್ತು. ಆಗ ನದಿ ಪಾತ್ರದ ರೂಹೇ ಬದಲಾಗಿತ್ತು. ಈಗ ಆ ಪ್ರವಾಹವು ತನ್ನ ಅಬ್ಬರವನ್ನು ಕಳೆದುಕೊಂಡು ರೂಢಿಗೆ ಬಿದ್ದಿದೆ. ಇಂದು ಮತ್ತೆ ಕನ್ನಡ ಕವಿತೆಯ ನದಿ ಪಾತ್ರದ ರೂಪ ಬದಲಿಸುವ ಪ್ರವಾಹವನ್ನು ಉಂಟು ಮಾಡುವ ಸಾಮರ್ಥ್ಯ ಶಕ್ತಿಯನ್ನು ಹೆಣ್ಣು ಮಕ್ಕಳು ಸೃಷ್ಟಿಸಯವ ಕವಿತೆಗೆ ಮಾತ್ರ ಸಾಧ್ಯವಿದೆ.
ಆದರೆ ಇವರ ಕೂಡ ಒಂದು ತೊಡಕನ್ನು ಎದುರಿಸುತ್ತಿದ್ದಾರೆ. ಅದು ಹೆಣ್ಣು ಮಕ್ಕಳು ಬಳಸುವ ಭಾಷೆಗೆ ಸಂಬಂಧಿಸಿದ್ದಾಗಿದೆ. ಗಂಡು ಲೋಕ ತನ್ನ ಮನೋವ್ಯಾಪಾರಗಳ ಅಗತ್ಯಕ್ಕೆ ಸಿದ್ದಪಡಿಸಿಕೊಂಡ ಭಾಷೆಯಲ್ಲಿ ಹೆಣ್ಣು ಮಾತನಾಡುವ ಪ್ರಯತ್ನ ಮಾಡುತ್ತಿರುವುದರಿಂದ ಈ ತೊಡಕು ಉಂಟಾಗುತ್ತಿದೆ. ಲಲಿತಾ ಸಿದ್ದಬಸವಯ್ಯ, ಜ.ನ.ತೇಜಶ್ರೀ, ವಿನಯ ವಕ್ಕುಂದ ಮುಂತಾದವರು ಈ ಕಂದಕವನ್ನು ದಾಟಲು ಮಾಡುತ್ತಿರುವ ಪ್ರಯತ್ನಗಳನ್ನು ಹೊಸಬರು ಅಧ್ಯಯನ ಮಾಡಬೇಕಿದೆ. ಮುದ್ದು ಅವರ ಕವಿತೆಗಳ ನೈಜ ಸವಾಲು ಆಕೆ ಕವಿತೆ ಕಟ್ಟಲು ಬಳಸುತ್ತಿರುವ ಭಾಷೆಯ ಪ್ರಯೋಗಗಳಿಗೆ ಸಂಬಂಧಿಸಿದುದೇ ಆಗಿದೆ. ಯಾವುದೇ ಕವಿತೆಯ ಜೀವವಿರುವುದೇ ರೂಪಕಗಳ ನಿರ್ಮಾಣದಲ್ಲಿ. ಮುದ್ದು ಅವರ ಕವಿತೆಗಳು ಉಪಮೆಗಳನ್ನು ಹಾಗೂ ವಿವರಣೆಗಳನ್ನು ಮಾತ್ರ ಆಶ್ರಯಸಿವೆ. ಇವರು ತಮ್ಮ ಮುಂದಿನ ಕಾವ್ಯ ಪ್ರಯೋಗಗಳಲ್ಲಿ ರೂಪಕ ನಿರ್ಮಾಣದ ಕಡೆ ಚಲಿಸುತ್ತಾರೆ ಎಂಬ ನಂಬಿಕೆ ನನಗಿದೆ.
ನನ್ನೊಳಗೆ ಯುದ್ಧ ನಡೆಯುತ್ತಲೇ ಇರುತ್ತದೆ
ಒಳಗೆ ಅಸಂಖ್ಯ ಗಾಯಗಳುಳಿದಿವೆ ಮಾಯದೇ!
ಗಾಯಗಳು ಕಣ್ಣೀರು ಸುರಿಸುತ್ತಲೇ ಇರುತ್ತವೆ
ಲೋಕದೆದುರು ನಾನು ನಗುತ್ತಲೇ ಇರುತ್ತೇನೆ
ಹೀಗೆ ನನ್ನೊಳಗೆ ಯುದ್ಧ ನಡೆಯುತ್ತಲೇ ಇರುತ್ತದೆ! (ಯುದ್ಧ)
ಯುದ್ಧ ಎಂಬ ಈ ಕವಿತೆ ಮುದ್ದು ಅವರ ಕಾವ್ಯದ ಗುರುತ್ವ ಕೇಂದ್ರವನ್ನು ಕಟ್ಟಿಕೊಡುತ್ತದೆ. ಮುದ್ದು ಅವರ ಕವಿತೆಗಳಲ್ಲಿ ಅನ್ಯಾಯವನ್ನು ಕಂಡು ಸಿಡಿಮಿಡಿಗೊಳ್ಳುವ ಪ್ರತಿಭಟಿಸುವ ದಿಟ್ಟವಾದ ನ್ಯಾಯಪರ ನಿರ್ಭಯ ಸಂವೇದನೆಯೊಂದು ಪ್ರಕಟಗೊಳ್ಳುವುದನ್ನು ಓದುಗರು ಗುರುತಿಸಬಹುದು. ಕವಿಯ ಅನುಭವಕ್ಕೆ ಆಕರವಾಗಿರುವ ಲೋಕದೊಳಗಿನ ಜೀವಪರ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಕವಿಯ ಮನೋವಲಯದ ಯುದ್ಧಗಳಾಗಿ ಪರಿವರ್ತನೆಗೊಳ್ಳುವುದನ್ನು ಈ ಮೇಲಿನ ಪದ್ಯ ಧ್ವನಿಸುತ್ತದೆ. ಈ ಕವಿತೆ ಮಂಡಿಸುವ ಮನೋಧರ್ಮವೇ ಮುದ್ದು ಅವರ ಎಲ್ಲಾ ಕವಿತೆಗಳ ಹಿಂದಿನ ಚಾಲಕ ಶಕ್ತಿಯಾಗಿದೆ. ಮುದ್ದು ಅವರ ಕವಿತೆಗಳು ಸಮಾಜ ವಿಮರ್ಶೆಯ ಸಾಧನಗಳಾಗಿ ಬಳಕೆಯಾಗಿವೆ.
ನನ್ನ ಕಣ್ಣಿನೆದುರು ಒಂದು ಅಳುವ ಚಿತ್ರ
ನಾನು ಹುಡುಕಾಟದಲ್ಲಿದ್ದೇನೆ..
ಆ ಕಂಬನಿಯ ಒರೆಸಿಹಾಕಲೊಂದು ಕೈ
ಒಂದು ಕುಂಚ,
ಒಂದು ಕರವಸ್ತ್ರ
ಅಥವಾ….
ಇಂತಹ ಆಪ್ತವೂ ವಿಷಾದವೂ ಆದ ಸಾಲುಗಳನ್ನು ಸುಲಭವಾಗಿ ಬರೆದುಬಿಡಬಲ್ಲ ಮುದ್ದು ಅವರ ಕವಿತೆಗಳಿಗೆ ಹಲವು ಆಯಾಮಗಳು ಇವೆ. ಈ ಸಂಕಲನದ ಅನೇಕ ಕವಿತೆಗಳು ಹಳ್ಳಿ ಮತ್ತು ನಗರ ಬದುಕಿನ ವೈರುಧ್ಯಗಳನ್ನು ಕಟ್ಟಿಕೊಡುವುದಕ್ಕೆ ಮೀಸಲಾಗಿವೆ. ಹಳ್ಳಿಯ ಅನೌಪಚಾರಿಕವೂ ಭಾವನಾತ್ಮಕೂ ಆದ ಮನುಷ್ಯ ಸಂಬಂಧಗಳು ನಗರಗಳಲ್ಲಿ ಅತ್ಯಂತ ವ್ಯವಹಾರಿಕವೂ ಔಪಚರಿವೂ ಆಗಿರುವುದನ್ನು ಮುದ್ದು ಅವರು ಸಾಂಸ್ಕೃತಿಕ ವಿಕಲ್ಪ ಎಂಬಂತೆ ಕಟು ಮಾತುಗಳ ಮೂಲಕ ಚಿತ್ರಿಸುತ್ತಾರೆ.

ಆಕೆ ಕಾನೂನಿನ ವಿದ್ಯಾರ್ಥಿಯಾಗಿರುವುದರ ಪ್ರಭಾವವನ್ನು ಕೂಡ ಕವಿತೆಗಳ ರಚನೆಯನ್ನು ನಿಯಂತ್ರಿಸುತ್ತಿದೆ.ಇಲ್ಲಿನ ಕವಿತೆಗಳು ಮೇಲು ನೋಟಕ್ಕೆ ನಗರಜೀವನಕ್ರಮದ ಬಗ್ಗೆ ಆಕ್ಷೇಪಣೆಯ ದನಿಯಲ್ಲಿ ಮಾತನಾಡುವುದು ನಿಜವಾದರು ನಗರಗಳಿಗೆ ವಲಸೆ ಬರುವ ಪ್ರವೃತ್ತಿಯನ್ನು ಜೀವನ ನಿರ್ವಹಣೆಯ ಅನಿವಾರ್ಯವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿವೆ. ಕವಿತೆಗಳು ರಚನೆಯಾಗುತ್ತಿರುವ ಕಾಲದ ಚಾರಿತ್ರಿಕ ದಾಖಲೆಗಳಾಗಿ ಪರಿವರ್ತನೆಯಾಗುವ ಆಯಾಮವನ್ನು ಇಂತಹ ಕವಿತೆಗಳು ಪ್ರಕಟಿಸುತ್ತವೆ. ಕಳೆದ ದಶಕದಲ್ಲಿ ಬೆಂಗಳೂರು ಸೇರಿದಂತೆ ಮಹಾನಗರಗಳ ನಕ್ಷೆಗಳು ಹಿಗ್ಗುತ್ತಿರುವಂತೆ ಅನೇಕ ಹಳ್ಳಿಗಳು ನಕಾಶೆಯಿಂದ ಅಳಿಸಿ ಹೋಗುವ ಸಾಮಾಜಿಕ ಚಲನೆಯನ್ನು ಮುದ್ದು ಅವರ ಕವಿತೆಗಳು ನಿರೂಪಿಸುತ್ತಿವೆ. ಪ್ರಕೃತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ದಿಟ್ಟವಾಗಿ ಮಾತನಾಡುವ ಧೈರ್ಯವನ್ನು ತೋರುತ್ತವೆ. ಗ್ರಾಮ ಕುರಿತಾದ ರೋಮ್ಯಾಂಟಿಕ್ ಮುಗ್ಧತೆಯ ದೃಷ್ಟಿಕೋನದಿಂದಾಗಿ ಗ್ರಾಮಜೀವನದೊಳಗಿನ ಬಿರುಕುಗಳು ಕವಿತೆಯ ಕಣ್ಣಿಗೆ ಕಾಣಿಸುವುದಿಲ್ಲ.
ಕಲೆಯ ಕಲೆಗಾರಿಕೆಯೆಂದರೆ
ಕೊನೆವರೆಗೂ ನಿಯತ್ತಿನಲಿ
ಹಸಿಗಾಯಗಳ ನೆನಪುಗಳ
ಹಸಿಯಾಗಿಯೇ ಇಡುವುದು——-
ಕಟು ವಾಸ್ತವನ್ನು ಎದುರುಗೊಳ್ಳುವ ನೈತಿಕ ಬಲವಿಲ್ಲದ ಕವಿಗಳು ಕಲ್ಪಕವಾದ ಜಗತ್ತುಗಳನ್ನು ಸೃಷ್ಟಿಮಾಡಿಕೊಂಡು ಅಲಂಕಾರ ಛಂದಸ್ಸುಗಳ ವಾಕ್‍ಚಮತ್ಕಾರದಲ್ಲಿ ಸಧ್ಯ:ಪರ ನಿವೃತ್ತವಾಗುವ ಕಾವ್ಯವನ್ನು ನಿರ್ಮಾಣ ಮಾಡುತ್ತಾ ಆತ್ಮಘಾತಕವಾದ ಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುದ್ದು ಸೃಷ್ಟಿಸಿರುವ ಲೋಕದಲ್ಲಿ ತರತಮ ಸೃಷ್ಟಿ ಮಾಡಿರುವ ಗಾಯ ಮಾಯದೆ ಹಸಿಯಾಗಿರಲಿ ಎಂಬ ಅಪೇಕ್ಷೆಯನ್ನು ಕವಿತೆಯಾಗಿ ಸಮಾಜದ ಮುಂದೆ ಇರಿಸಿದ್ದಾರೆ. ಕವಿತೆ ಸರ್ವರಿಗೂ ಲೇಸ ಬಯಸುವ ಕಾರ್ಯ ಮಾಡಬೇಕು. ಸಮಾಜದ ಎದೆಯ ಗಾಯದ ಹಸಿತನವನ್ನು ಕಾಯುವ ಕೆಲಸ ಕಲೆಯ ಜವಾಬ್ದಾರಿ ಎಂದು ಸಾರುವ ಮುದ್ದು ಜೀವನಕ್ಕಾಗಿ ಕಲೆ ಎಂಬ ಎಡ ಸಿದ್ದಾಂತದ ನಿಲುವನ್ನುಎತ್ತಿ ಹಿಡಿಯುವಂತೆ ಮೇಲಿನ ಸಾಲುಗಳು ನಿರೂಪಿಸಲ್ಪಟ್ಟಿವೆ. ಮುದ್ದು ಅವರ ಈ ನಿಲುವು ಪ್ರಗತಿಶೀಲ ಸಾಹಿತ್ಯ ಚಳುವಳಿಯ ಸಾಹಿತ್ಯಕ ನಿಲುವುಳಿಗೆ ಹತ್ತಿರವಾದುದ್ದಾಗಿದೆ. ಬರಹಕ್ಕೆ ಸಮಾಜವನ್ನು ಬದಲಿಸುವ ಹಂಬಲ ಮತ್ತು ಹೊಣೆಗಾರಿಕೆ ಇದೆ ಎಂಬ ನಂಬಿಕೆಯೊಂದು ಈ ಬರವಣಿಗೆಯ ತಳಹದಿಯಾಗಿದೆ.
ಕ್ಯಾನ್ವಾಸಿನ ಮೇಲೊಂದು
ಕಲಾಕೃತಿಯಾಗಿ ಅರಳಿದಾಗಲೂ
ಎಲ್ಲ ಬಣ್ಣ ಮಸಿ ನುಂಗಿದಾಗಲೂ
ಬಣ್ಣವೊಂದು ಕಲೆ
ಕಣ್ಣ ನೀರಿಳಿದು ಅಳಿಸುವುದು
ಜಡ್ಡುಗಟ್ಟಿದ ಪಾತಕದ ಕಲೆ
ಅತ್ತ ಮೇಲೂ ಉಳಿಯಲೂಬಹುದು
ನೋವಿನೊಂದು ಎಳೆ( ಆ ಬಣ್ಣಗಳು)
ಆ ಬಣ್ಣಗಳು ಎಂಬ ಕವಿತೆಯಲ್ಲಿ ಬಳಸಿರುವ ಕಲೆ ಎಂಬ ಪದ ತನ್ನ ಶ್ಲೇಷಾರ್ಥದಿಂದ ತಟ್ಟನೆ ಓದುಗರನ್ನು ಹಿಡಿದು ನಿಲ್ಲಿಸುತ್ತದೆ. ಸಮಾಜದ ನೋವನ್ನು ಅನುಸಂಧಾನಿಸದೆ ಕೇವಲ ಭಾವಾಭಿವ್ಯಕ್ತಿಯಾಗಿ ಉಳಿಯುವ ಕಲೆಯು(ಸೌಂದರ್ಯ) ನೋವಿನ ನೆಲೆಗಳನ್ನು ಸಂವೇದನೆಯಲ್ಲಿ ಕಾಣಿಸಿದೆ ಹೋದರೆ ಅದು ಕಲೆಯಲ್ಲ ಅದು ಕೊಳೆ ಎಂಬ ಹೀನಾರ್ಥಕ್ಕೆ ಹೊರಳುತ್ತದೆ. ನಮ್ಮ ವರ್ತಮಾನದ ಕವಿತೆಗಳು ಆತ್ಮ ಚರಿತಾತ್ಮಕವಾದ ಸ್ವಕೀಯ ಮರುಕಗಳಲ್ಲಿ, ಭಾವವೊಂದರ ಕ್ಷಣಿಕ ಸಂಭ್ರಮದ ನಿರೂಪಣೆಯಲ್ಲಿ ಹಾಗೂ ರಾಜಕೀಯ ಪ್ರತಿಕ್ರಿಯೆಗಳಲ್ಲಿ ಮೈಮರೆತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕವಿತೆಗಳಿಗೆ ಮಹತ್ವವಿದೆ. ಈ ಕವಿತೆಗಳು ಸಮಾಜದ ಬಗೆಗೆ ಹೊಂದಿರುವ ನಿರಂಕುಶ ಧೋರಣೆಯಿಂದಾಗಿಯೇ ಭಿನ್ನವಾಗಿ ಕಾಣುತ್ತವೆ. ಈ ಮಾತಿಗೆ ಉದಾಹರಣೆಯಾಗಿ ‘ಲಯವಾದೆಯಲ್ಲೋ’ ಎಂಬ ಕವಿತೆಯನ್ನು ಗಮನಿಸಬಹುದು.
ಈಗ ಬರುವೆನೆಂದು ಹೇಳಿ ಹೋಗಿದ್ದೆಯಲ್ಲೋ ಅಣ್ಣಾ
ಮಲದ ಗುಂಡಿಯೊಳಗೆ ಲಯವಾದೆಯಲ್ಲೋ
ಹಬ್ಬಕ್ಕೆಂದು ರಟ್ಟೆ ಬೆನ್ನ ಮುರಿದು ಹಣವ ಜೋಡಿಸುತ್ತಿದ್ದೆಯಲ್ಲೋ
ಹಬ್ಬಕ್ಕೆ ಮುನ್ನಾದಿನವೇ ಹಾದಿಯ ಹೆಣವಾದೆಯಲ್ಲೋ
ಮಲದ ಗುಂಡಿಯೊಳಗೇ ಲಯವಾದೆಯಲ್ಲೋ
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಸಮಾನತೆಯ ಕನಸು ದೂರವೇ ಉಳಿದಿರುವ ವಾಸ್ತವದ ಬಗ್ಗೆ ಕಡು ವಿಷಾದದಿಂದ ಬರೆಯುವ ಕವಿ ಆಧುನಿಕವೂ ಮತ್ತು ಸೋಕಾಲ್ಡ್ ನಾಗರೀಕವೂ ಆದ ಈ ಸಮಾಜದ ರೋಗಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ನಾಡು ಇನ್ನೂ ಉಳಿಸಿಕೊಂಡಿರುವ ಮಲ ಹೊರುವ ಅಮಾನವೀಯ ಪದ್ದತಿಯ ಬಗ್ಗೆ ಹಾಗೂ ಆಗಿಂದಾಗ್ಯೆ ಮ್ಯಾನ್ ಹೋಲ್ಗಳಿಗೆ ಇಳಿದು ಉಸಿರುಗಟ್ಟಿ ಸಾಯುವ ಅಮಾಯಕರನ್ನು ಕುರಿತ ಬರೆದ ಕವಿತೆ ಇದು. ಈ ಕವಿತೆಯ ವಿಶೇಷತೆ ಇರುವುದು ಮಲದ ಗುಂಡಿಯಲ್ಲಿ ಸತ್ತ ವ್ಯಕ್ತಿಯನ್ನು ತನ್ನ ಅಣ್ಣನೆಂದು ಸಂಬಂಧ ಬೆಳಸಿಕೊಳ್ಳುವ ಮಾನವೀಯ ನೆಲೆಯಲ್ಲಿ. ತಳವರ್ಗ ಮತ್ತು ಹಿಂದುಳಿದವರ ಪ್ರಗತಿಯ ಕಲ್ಪನೆಗಳಲ್ಲಿ ಹುದುಗಿರುವ ಭೌದ್ಧಿಕ ಹಿಪೋಕ್ರಸಿಯನ್ನು ಈ ಕವಿತೆ ಹೊರಗೆಳೆಯುವಷ್ಟು ಸಮರ್ಥವಾಗಿದೆ. ಈ ಕವಿತೆಯನ್ನು ಓದುವಾಗ ನಮ್ಮೊಳಗೆ ಪಾಪ ಪ್ರಜ್ಞೆಯನ್ನು ಮೂಡಿಸುವ ಮೂಲಕ ಕವಿತೆ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ.
ಗನ್ನು ಹಿಡಿವ ಕೈಗಳು ಪೆನ್ನು ಹಿಡಿಯಲಿ
ಬರೆಯಲೊಂದು ಪ್ರೇಮ ಕವಿತೆ
ಗನ್ನು ಹಿಡಿವ ಕೈಗಳು ಗುಲಾಬಿ ಹಿಡಿಯಲಿ
ನೆತ್ತರ ಕೆಂಪು ಕಲೆ ಬಳಿದುಕೊಳುವ ಕೈಗಳಲಿ
ನವಿರು ಕೆಂಗುಲಾಬಿ ನಳನಳಿಸಲಿ
ನಮ್ಮ ದೇಶದಲ್ಲಿ ಜಾತಿ, ಉಳಿಗಮಾನ್ಯಪದ್ದತಿ, ಶಕ್ತಿರಾಜಕಾರಣ ಮತ್ತು ಬಂಡವಾಳಶಾಹಿ ಮಾರುಕಟ್ಟೆಗಳು ಸೃಷ್ಟಿಸಿರುವ ಆರ್ಥಿಕ ಅಸಮಾನತೆಯನ್ನು ಪ್ರತಿಭಟಿಸಲು ದೇಶವ್ಯಾಪಿಯಾಗಿ ಹುಟ್ಟಿಕೊಂಡ ಶಸ್ತ್ರ ಚಳವಳಿಯನ್ನು ಕೂಡ ಮುದ್ದು ಅವರ ಕವಿತಾ ಲೋಕ ತನ್ನೊಳಗೆ ಸೇರಿಸಿಕೊಂಡಿದೆ. ದೇಶದಲ್ಲಿ ಕೇಳಿಸಿದ ಗುಂಡಿನ ಸಪ್ಪಳ ಕವಿಯ ಮನವನ್ನು ಕಲುಕಿದೆ. ಅಲ್ಲದೆ ಹಿಂಸೆಯು ಸೃಷ್ಟಿಸುವ ನಿರರ್ಥಕತೆಯ ಕುರಿತು ಖಚಿತ ಅಭಿಪ್ರಾಯವನ್ನು ಹೊಂದಿರುವ ಮುದ್ದು ಶಾಂತಿ ನೆಲೆಸುವ ಕನಸು ಕಾಣುತ್ತಾರೆ. ಗನ್‍ಗೆ ಬದಲು ಪೆನ್ನನ್ನು ಬಳಸುವ ಪರ್ಯಾಯವನ್ನು ಕವಿತೆ ಸೂಚಿಸಿದೆ.
ಹೀಗೆ ಮುದ್ದು ತನ್ನ ವಯೋಮಾನಕ್ಕೆ ಮೀರಿದ ಲೋಕಾಂತ ಸಂಗತಿಗಳನ್ನು ಕವಿತೆಯಾಗಿಸುವ ಕಾರ್ಯವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಾ ಬಂದಿದ್ದಾರೆ. ಈ ಕವಿತೆಗಳಲ್ಲಿ ಮುದ್ದು ಅವರು ಸಾಮಾಜಿಕ ವ್ಯಕ್ತಿಯಾಗಿ ರೂಪಗೊಳ್ಳುತ್ತಿರುವ ‘ವಿಚಾರಿತ’ ವೈಚಾರಿಕ ನೆಲೆಗಳು ವ್ಯಕ್ತವಾಗುವ ಹಾಗೆ ಕವಿಯ ನೈಜಪ್ರತಿಭೆ ಪ್ರಕಟವಾಗುವ ‘ಅವಿಚಾರಿತರಮಣೀಯ ಹಾದಿ ಇನ್ನೂ ರೂಪ ತಳೆಯುವ ಹಂತದಲ್ಲಿದೆ.
ಕವಿತೆಗೆ ಅಗತ್ಯವಿರುವ ಕನಸುಗಾರಿಕೆ, ಭಾವ ತೀವ್ರತೆ ಹಾಗೂ ಏಕಾಂತ ಸಂವಾದಕ್ಕೆ ಮುದ್ದು ಮುಂದಿನ ದಿನಗಳಲ್ಲಿ ಮುಂದಾಗುತ್ತಾರೆ ಎಂಬ ನಂಬಿಕೆ ನನ್ನದು. ಈ ಕವಿತೆಗಳಲ್ಲಿ ಆರೋಗ್ಯಕರವಾದ ಮನಸ್ಸೊಂದು ಲೋಕಾಂತ ಚಿಂತನೆಗಳಲ್ಲಿ ತೊಡಗಿರುವ ಚಿತ್ರಗಳು ಓದುಗರ ಜೊತೆಗೂ ಮಾತಿಗೆ ತೊಡಗುತ್ತವೆ. ಕತಾ ನಿರೂಪಣೆಯಲ್ಲಿ ಅಚ್ಚರಿಯನ್ನು ಸೃಷ್ಟಿಸಿರುವ ಮುದ್ದು ಕವಿತಾ ಪ್ರಪಂಚದಲ್ಲಿ ಕೂಡ ನವೋನ್ಮೇಷನಿಯಾದ ಪ್ರತಿಮಾ ನಿರ್ಮಾಣ ಮಾಡಲಿ ಎಂಬ ಹಾರೈಕೆ ನನ್ನದು. ಕನ್ನಡ ಕವಿತೆಯ ರಸಿಕರು ಈ ಸಂಕಲನವನ್ನು ಪ್ರೀತಿಯಿಂದ ಸ್ವಾಗತಿಸಬೇಕೆಂದು ವಿನಂತಿಸುತ್ತೇನೆ.





Muddada padyagalu sir, evra kavithigalu
saddilllde samajamukhi aaguvudaralli yavude anumanagalilla, all the best,
Chi na hally kirana