ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್
ನಿನ್ನೆ ಸಂಜೆ ಎಂತಾ ಒಂದು ತಮಾಷೆ ಘಟನೆ ನಡೆಯಿತು ಗೊತ್ತೆ? ನಾನೋ, ಹನ್ನೆರಡು ವರ್ಷ ವಯಸ್ಸಿನ ಹುಡುಗಿ. ನನ್ನಮ್ಮನಿಗೆ ಮುವ್ವತ್ತನಾಲ್ಕು. ಆದರೂ, ಹೆಚ್ಚುಕಮ್ಮಿ ನಾನು ಈಗಾಗಲೇ ಅವಳಷ್ಟು ಎತ್ತರಕ್ಕೆ ಬೆಳೆದಿದ್ದೇನೆ! ನಿನ್ನೆ ಮಧ್ಯಾಹ್ನ ಅಮ್ಮ ನನ್ನನ್ನು ಲಂಡನಿಗೆ ದಂತ ವೈಧ್ಯರಲ್ಲಿಗೆ ಕರೆದುಕೊಂಡು ಹೋಗಿದ್ದಳು. ವೈಧ್ಯರು ದವಡೆಯಲ್ಲಿದ್ದ ಕುಳಿಯನ್ನು ಹೆಚ್ಚು ನೋವಾಗದಂತೆ ತುಂಬಿಸಿ ಕಳುಹಿಸಿದರು. ಅಲ್ಲಿಂದ ನಾವು ಒಂದು ಹೋಟೆಲಿಗೆ ಹೋದೆವು. ನಾನು ‘ಬನಾನ ಸ್ಪ್ಲಿಟ್’ ಮೆಲ್ಲುತ್ತಿದ್ದರೆ, ಅಮ್ಮ ಬರೇ ಕಾಫಿ ಸಾಕೆಂದಳು. ನಾವು ಹೋಟೆಲಿನಿಂದ ಹೊರಗೆ ಬಂದಾಗ, ಅದಾಗಲೇ ಆರಾಗಿತ್ತು ಮತ್ತು ಮಳೆ ಶುರುವಾಯಿತು. ‘ನಾವು ಆದಷ್ಟು ಬೇಗ ಒಂದು ಟ್ಯಾಕ್ಸಿಯನ್ನು ಹಿಡಿಯೋಣ..’ ಎಂದಳು ಅಮ್ಮ. ನಾವು ಮಳೆಗೆ ತಯಾರಾಗಿರಲಿಲ್ಲ. ಮಳೆ ಕೊಂಚ ಬಿರುಸಾಗಿಯೇ ಬೀಳತೊಡಗಿತು. ‘ಅಮ್ಮಾ, ನಾವು ಮಳೆ ನಿಲ್ಲೋವರೆಗೆ ಹೋಟಲಿಗೆ ವಾಪಸಾಗೋಣ.’ ನಾನೆಂದೆ. ನನಗೆ ಮತ್ತೊಂದು ಐಸ್ಕ್ರೀಮ್ ತಿನ್ನುವ ಆಸೆ! ‘ಈ ಮಳೆ ನಿಲ್ಲವಂತೆ ಕಾಣುತ್ತಿಲ್ಲ ಮಗಳೇ, ನಾವು ಹೋಗುವುದೇ ಒಳ್ಳೆಯದು.’ ಅಮ್ಮ ಎಂದಳು. ನಾವು ಟ್ಯಾಕ್ಸಿಯನ್ನು ಎದುರು ನೋಡುತ್ತಾ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದೆವು. ಟ್ಯಾಕ್ಸಿಗಳೇನೋ ಬಹಳಷ್ಟು ನಮ್ಮನ್ನು ಹಾದು ಹೋದವು. ಯಾವುದೂ ಖಾಲಿಯಿರಲಿಲ್ಲ. ‘ನಮ್ಮದೇ ಒಂದು ಕಾರು ಇದ್ದಿದ್ದರೆ!’ ಅಮ್ಮ ಹೇಳುತ್ತಿದ್ದಳು. ಅಷ್ಟರಲ್ಲಿ ಒಬ್ಬ ಆಗಂತುಕ ವ್ಯಕ್ತಿ ನಮ್ಮ ಕಡೆಗೆ ಬಂದ. ವಯಸ್ಸಾದ ಸಣಕಲ ಮನುಷ್ಯ. ವಯಸ್ಸು ಎಪ್ಪತ್ತು ಅಥವಾ ಮತ್ತಷ್ಟು ದಾಟಿರಬಹುದು. ಎದ್ದು ಕಾಣುವಂತ ಬಿಳಿ ಮೀಸೆ. ಅವನು ತನ್ನ ಹ್ಯಾಟನ್ನು ತೆಗೆದು ವಿನಮ್ರನಾಗಿ ಅಮ್ಮನ ಮುಂದೆ ತಲೆ ಬಾಗಿಸಿದ. ‘ಮೇಡಂ.. ನನ್ನನ್ನು ಕ್ಷಮಿಸಿ.’ ನನಗೆ ಅವನ ಬಿಳಿ ಮೀಸೆ, ಪೊದೆ ಕಣ್ಣುಬ್ಬು ಮತ್ತು ನೆರಿಗೆಗಟ್ಟಿದ ಕೆಂಪು ಮುಖದ ಮೇಲೆಯೇ ದೃಷ್ಟಿ! ಅವನ ಕೈಯಲ್ಲಿ ಒಂದು ಛತ್ರಿ ವಿರಾಜಿಸುತ್ತಿತ್ತು. ಅಮ್ಮ, ‘ಏನು?’ ಎಂಬಂತೆ ಅಸಹನೆಯಿಂದ ಹುಬ್ಬೇರಿಸಿದಳು. ‘ನಿಮ್ಮಿಂದ ಒಂದು ಉಪಕಾರವಾಗಬೇಕಿತ್ತು.. ಮಹತ್ತರವಾದುದೇನಲ್ಲ.. ಸಣ್ಣ ಉಪಕಾರ.’ ಅವನೆಂದ. ನನ್ನಮ್ಮ ಪಕ್ಕಾ ಅನುಮಾನದ ಪಿಶಾಚಿ. ಅಪರಿಚಿತ ಗಂಡಸರೆಂದರೆ ಮತ್ತೂ ಅನುಮಾನ! ಅವಳ ಕಣ್ಣುಗಳು ಕಿರಿದಾದವು. ಅತೀ ವಿನಯ, ಸಭ್ಯತೆ ತೋರುವ ಗಂಡಸರನ್ನೂ ಎಂದೂ ನಂಬಬಾರದೆಂದು ಅವಳು ಆಗಾಗ್ಗೆ ಹೇಳುತ್ತಿದ್ದಳು. ಮುದುಕ ಅತೀ ವಿನಯವಂತ, ಅತೀ ಸಭ್ಯನಂತೆ ತೋರುತ್ತಿದ್ದ. ಗರಿ ಗರಿ ಉಡುಪು ಧರಿಸಿದ್ದ. ಅವನೊಬ್ಬ ಸಭ್ಯ ಮನುಷ್ಯನೆಂದು ನನಗೆ ಗೊತ್ತಾಯಿತು. ಒಬ್ಬ ಗಂಡಸು ಸಭ್ಯ ಹೌದೋ ಅಲ್ಲವೋ ಎಂದು ಅವನ ಪಾದರಕ್ಷೆಗಳನ್ನು ನೋಡಿಯೇ ಹೇಳಬಹುದೆಂದು ಅಮ್ಮ ಹೇಳುತ್ತಿದ್ದಳು. ಮುದುಕ ಮಿರಮಿರನೆ ಮಿಂಚುತ್ತಿದ್ದ ಕಂದು ಬಣ್ನದ ಶೂಗಳನ್ನು ತೊಟ್ಟಿದ್ದ! ‘ಮೇಡಂ, ಹೇಳಲು ನಾಚಿಕೆಯಾಗುತ್ತದೆ.. ನಾನು ಎಂತಾ ಒಂದು ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆಂದರೆ ನಿಮ್ಮ ಸಹಾಯ ಕೇಳದೆ ಗತ್ಯಂತರವಿಲ್ಲ. ಅಯ್ಯೋ, ಈ ಹಾಳು ವಯಸ್ಸಿನ ಮರೆವು ಎಂತಾ ಪೇಚಿಗೆ ಸಿಲಿಕಿಸುತ್ತೆ ನೋಡಿ!..’ ಅವನು ನಿಟ್ಟಿಸಿರು ಬಿಟ್ಟ. ನನ್ನಮ್ಮ ಗದ್ದವನ್ನು ಮೇಲೆತ್ತಿ ಅವಳ ಮೂಗಿನೇರದಿಂದ ಮುದುಕನನ್ನೇ ತೀಕ್ಷ್ಣವಾಗಿ ನೋಡಿದಳು. ನನ್ನಮ್ಮನ ಈ ದೃಷ್ಟಿಯನ್ನು ಎದುರಿಸುವುದಕ್ಕೆ ನಿಜಕ್ಕೂ ಎಂಟೆದೆ ಬೇಕು. ಬಡಪಾಯಿಗಳು ನಿಂತಲ್ಲೇ ನೀರಾಗುತ್ತಾರೆ. ಒಮ್ಮೆ ನನ್ನಮ್ಮನ ಈ ದೃಷ್ಟಿಯನ್ನು ಎದುರಿಸಲಾಗದೆ ನನ್ನ ಹೆಡ್ ಮಿಸ್ಟ್ರೆಸ್ಸು ವಿಚಿತ್ರವಾಗಿ ತೊದಲಿದ್ದನ್ನು ನಾನು ಕಣ್ಣಾರೆ ಅವಾಕ್ಕಾಗಿ ನೋಡಿದ್ದೇನೆ! ಆದರೆ ಮುದುಕ ಬಲು ಘಾಟಿಯಾಗಿದ್ದ. ಅಮ್ಮನ ದೃಷ್ಟಿ ಅವನ ಮೇಲೆ ಕಿಂಚಿತ್ತೂ ಪ್ರಭಾವ ಬೀರಲಿಲ್ಲ. ಅವನು ಸೌಮ್ಯವಾಗಿ ಒಂದು ಮುಗುಳ್ನಗೆ ಬೀರುತ್ತಾ, ‘ತಪ್ಪು ತಿಳಿದುಕೊಳ್ಳಬೇಡಿ ಮೇಡಂ. ದಾರಿಯಲ್ಲಿ ಎದುರಾಗುವ ಸ್ತ್ರೀಯರೊಂದಿಗೆ ನನ್ನ ಗೋಳು ತೋಡಿಕೊಳ್ಳುವುದು ನಿಜಕ್ಕೂ ನನ್ನ ಜಾಯಮಾನವಲ್ಲ.’ ಎಂದ. ‘ನೀವು ಹೇಳುತ್ತಿರುವುದು ನಿಜವೆಂದು ಭಾವಿಸುತ್ತೇನೆ.’ ಎಂದಳು ಅಮ್ಮ, ಎಚ್ಚರಿಕೆ ಕೊಡುವಂತೆ. ನನಗ್ಯಾಕೋ ಅಮ್ಮನದು ಅತಿಯಾಯ್ತು ಎಂದೆನಿಸಿತು. ‘ಅವನೊಬ್ಬ ಪಾಪದ ಮುದುಕ ಕಣಮ್ಮ. ಏನೋ ತಾಪತ್ರಯದಲ್ಲಿದ್ದಾನೆ. ಯಾಕಿಷ್ಟು ಅವನ ಗೋಳು ಹುಯ್ಕೋತ್ತಿದ್ದೀಯಾ?’ ಎಂದು ಚೀರಿ ಹೇಳಬೇಕೆಂದೆನಿಸಿತು. ಆದರೂ, ನಾನು ಏನೂ ಹೇಳಲಿಲ್ಲ. ಮುದುಕ ಛತ್ರಿಯನ್ನು ಒಂದು ಕೈಯಿಂದ ಮತ್ತೊಂದು ಕೈಗೆ ಬದಲಾಯಿಸುತ್ತಾ ಚಡಪಡಿಸುತ್ತಿರುವಂತೆ ತೋರುತ್ತಿದ್ದ. ‘ನಾನು ಈ ಮೊದಲು ಎಂದೂ ಮರೆತಿರಲಿಲ್ಲ!’ ಅವನೆಂದ. ‘ಏನದು?.. ಏನು ಮರೆತಿರಲಿಲ್ಲ?’ ಅಮ್ಮ ಗಡುಸಾಗಿ ಕೇಳಿದಳು. ‘ನನ್ನ ಪಸರ್ು ಮೇಡಂ. ನನ್ನ ಮತ್ತೊಂದು ಜಾಕೆಟಿನಲ್ಲಿ ಮರೆತು ಬಂದಿರಬೇಕು!
ಯಾವತ್ತೂ ಹೀಗಾಗಿರಲಿಲ್ಲ.’ ‘ಅಂದರೆ ನಾನು ನಿನಗೀಗ ದುಡ್ಡು ಕೊಡಬೇಕು? ಅದಕ್ಕೆ ಇಷ್ಟೆಲ್ಲಾ ನಾಟಕ!’ ‘ಅಯ್ಯೋ, ದೇವರೇ! ಖಂಡಿತಾ ಹಾಗಲ್ಲ ಕಣಮ್ಮ.’ ಮುದುಕ ಮತ್ತೂ ಕೆಂಪಗಾದ. ‘ಮತ್ತೇಗೆ?’ ಅಮ್ಮ ಭುಸುಗುಟ್ಟಿದಳು. ‘ಬೇಗ ಹೇಳು. ನಾವಿಲ್ಲಿ ನೆಂದು ತೊಪ್ಪೆಯಾಗುತ್ತಿದ್ದೇವೆ.’ ‘ಅದಕ್ಕೇ ನಾನು ಹೇಳುತ್ತಿರುವುದು ಮೇಡಂ. ನನ್ನ ಈ ಛತ್ರಿಯನ್ನು ನಿಮಗೇ ಕೊಡುತ್ತಿದ್ದೇನೆ. ಅದನ್ನು ನೀವೇ ಇಟ್ಟು ಕೊಳ್ಳಬಹುದು. ಆದರೆ…’ ‘ಆದರೆ.. ಏನು?’ ‘ನನಗೆ ಮನೆಗೆ ವಾಪಸ್ಸು ಹೋಗಲು ನೀವು ಒಂದು ಪೌಂಡು ಕೊಟ್ಟರೆ ಸಾಕು. ಟ್ಯಾಕ್ಸಿ ಬಾಡಿಗೆಗಾಗಿ!’ ಅಮ್ಮನ ಅನುಮಾನ ಮತ್ತಷ್ಟೂ ಹೆಚ್ಚಾಯಿತು. ‘ನಿನ್ನ ಬಳಿ ದುಡ್ಡೇ ಇಲ್ಲದಿದ್ದ ಪಕ್ಷದಲ್ಲಿ ನೀನು ಮನೆಯಿಂದ ಇಲ್ಲಿಗೆ ಬಂದದ್ದಾದರೂ ಹೇಗೆ?’ ಅಮ್ಮ ಕೇಳಿದಳು. ‘ನಾನು ನಡೆದುಕೊಂಡು ಬಂದೆ.’ ಮುದುಕ ಹೇಳಿದ. ‘ನಾನು ಪ್ರತಿದಿನ ನಡೆದು ಬಂದು ವಾಪಾಸ್ಸಾಗುವಾಗ ಟ್ಯಾಕ್ಸಿ ಹಿಡಿದು ಹೋಗುತ್ತೇನೆ.’ ‘ಇವತ್ತೊಂದು ದಿನ ನಡೆದುಕೊಂಡೇ ಮನೆಗೆ ಹೋಗಬಹುದಲ್ಲ?’ ‘ನನಗಿಷ್ಟ ಕಣಮ್ಮ. ಆದ್ರೆ ಈ ಹಾಳಾದ ಕಾಲುಗಳು ನನಗೆ ಸಹಕಾರ ಕೊಡಬೇಕಲ್ಲ? ನಾನು ಈಗಾಗಲೇ ಬಹಳಷ್ಟು ನಡೆದಿದ್ದೇನೆ..’ ಅಮ್ಮ ಸಂಧಿಗ್ಧದಲ್ಲಿ ಸಿಕ್ಕಿಕೊಂಡಳು. ಏನೂ ತೋಚದೆ ಕೆಳತುಟಿಯನ್ನು ಕಚ್ಚುತ್ತಾ ಯೋಚಿಸತೊಡಗಿದಳು. ನನಗೆ ಅವಳು ಕರಗುತ್ತಿರುವಂತೆ ಭಾಸವಾಯ್ತು. ಛತ್ರಿಯ ಪ್ರಲೋಭನೆ ಅವಳ ಗಡಸುತನ ಮೆತ್ತಗಾಗಿಸತೊಡಗಿತ್ತು. ‘ಮೇಡಂ, ಇದು ಹೊಚ್ಚ ಹೊಸ ಛತ್ರಿ..’ ಮುದುಕ ಹೇಳಿದ. ‘ನನಗೆ ಕಾಣುತ್ತಿದೆ.’ ಅಮ್ಮ ಹೇಳಿದಳು. ‘ಸಿಲ್ಕ್ ಛತ್ರಿ ಕಣಮ್ಮ..’ ‘ಅದೂ ಕಾಣುತ್ತದೆ.’ ‘ಹಾಗಾದ್ರೆ ಮತ್ತೂ ಯಾಕಮ್ಮ ಅನುಮಾನ? ನಿಜವಾಗಲೂ ಹೇಳ್ತಾ ಇದ್ದೀನಿ ಈ ಛತ್ರಿಗೆ ಇಪ್ಪತ್ತು ಪೌಂಡುಗಳನ್ನು ಕೊಟ್ಟಿದ್ದೇನೆ. ನಾನೀಗ ಮನೆಗೋಗಿ ಈ ದರಿದ್ರ ಕಾಲುಗಳಿಗೆ ಬಿಸಿ ನೀರಿನ ಶಾಖ ಕೊಡುವುದೊಂದೇ ನನಗೆ ದೊಡ್ಡ ಸಮಧಾನ..’ ಅಮ್ಮನ ಕೈಗಳು ಪರ್ಸನ್ನು ಬಿಚ್ಚುವುದಕ್ಕೆ ತಡಕಾಡುತ್ತಿರುವುದು ನನಗೆ ಗೋಚರಿಸಿತು. ನಾನು ಗಮನಿಸುತ್ತಿರುವುದನ್ನು ಅವಳೂ ಗಮನಿಸಿದಳು. ನಾನೂ ಅವಳಂತೆಯೇ ದುರುಗುಟ್ಟಿ ನೋಡಿದೆ. ಅವಳಿಗೆ ಅದು ಗೊತ್ತಾಗಿರಬೇಕು. ‘ನೀನೂ ಏನಮ್ಮ? ಒಬ್ಬ ನಿಸ್ಸಾಹಯಕ ಮುದುಕನ ಅಸಹಾಯಕತೆಯನ್ನು ದುರುಪಯೋಗ ಪಡೆದುಕೊಳ್ಳುತ್ತಿದ್ದಿಯಲ್ಲ?’ ಇದು ನನ್ನ ಪ್ರತಿಭಟನೆಯಾಗಿತ್ತು. ಅವಳು ನನ್ನನ್ನೊಮ್ಮೆ ನೋಡಿ ಮುದುಕನಿಗೆ ಹೇಳಿದಳು: ‘ನೋಡಪ್ಪಾ, ಇಪ್ಪತ್ತು ಪೌಂಡು ಬೆಲೆ ಬಾಳುವ ಛತ್ರಿಯನ್ನು ನಿನ್ನಿಂದ ಒಂದು ಪೌಂಡಿಗೆ ಪಡೆದುಕೊಳ್ಳುವುದು ನನಗ್ಯಾಕೋ ಸರಿ ಕಾಣುತ್ತಿಲ್ಲ. ನಿನಗೆ ಟ್ಯಾಕ್ಸಿ ಬಾಡಿಗೆ ಬೇಕಾದರೆ ಕೊಡುತ್ತೇನೆ, ಈ ಛತ್ರಿ ನನಗೆ ಬೇಡ.’ ‘ಛೆ, ಛೆ! ಅದು ಖಂಡಿತಾ ಸಾಧ್ಯವಿಲ್ಲ. ನನ್ನ ಮನಸ್ಸು ಇದನ್ನು ಒಪ್ಪುವುದಿಲ್ಲ. ಅನ್ಯಥಾ ಭಾವಿಸಬೇಡಿ. ಈ ಛತ್ರಿಯನ್ನು ಪಡೆದು ಮಳೆಯಿಂದ ರಕ್ಷಿಸಿಕೊಳ್ಳಿ.’ ಎಂದ ಮುದುಕ. ಅಮ್ಮ ನನ್ನ ಕಡೆಗೊಂದು ಜಯದ ನಗೆ ಬೀರಿದಳು. ಪರ್ಸಿಂದ ಒಂದು ಪೌಂಡಿನ ನೋಟನ್ನು ಮುದುಕನಿಗೆ ಕೊಟ್ಟಳು. ಅವನು ಅದನ್ನು ಪಡೆದು ಛತ್ರಿಯನ್ನು ಅಮ್ಮನ ಕೈಗೆ ಕೊಟ್ಟ. ತಲೆಯ ಮೇಲಿಂದ ಹ್ಯಾಟನ್ನು ತೆಗೆದು ನಡು ಬಗ್ಗಿಸಿ, ‘ಥ್ಯಾಂಕ್ಯೂ ಮೇಡಂ ಥ್ಯಾಂಕ್ಯೂ!’ ಎಂದು ವಂದಿಸಿ ಹೊರಟು ಹೋದ. ‘ಬಾರೆ ಛತ್ರಿಯೊಳಗೆ, ಸುಮ್ಮನೆ ನೆನಿ ಬೇಡ! ಎಂತಾ ಅದೃಷ್ಟ ನೋಡು. ಒಂದು ಸಿಲ್ಕ್ ಛತ್ರಿಯನ್ನು ತೆಗೆದುಕೊಳ್ಳಬೇಕೆಂದು ಬಹಳಷ್ಟು ಸಲ ಅಂದು ಕೊಂಡಿದ್ದೆ. ಸಾಧ್ಯವಾಗಿರಲಿಲ್ಲ.’ ಅಮ್ಮ ಅಂದಳು. ‘ಅಲ್ಲ ಕಣಮ್ಮ, ಮೊದಮೊದಲು ಪಾಪ ಆ ಮುದುಕನ ಗೋಳು ಯಾಕೆ ಹೊಯ್ಕೊಂಡೆ?’ ‘ಅವನೊಬ್ಬ ‘ಛತ್ರಿ’ಯಲ್ಲವೆಂದು ಖಾತ್ರಿಯಾಗೋದು ಬೇಡ್ವೇನೆ? ಅವನಲ್ಲವೆಂದು ಖಾತ್ರಿಯಾಯ್ತು. ಅವನು ನಿಜಕ್ಕೂ ಒಬ್ಬ ‘ಜೆಂಟಲ್ಮನ್’. ಅವನಿಗೆ ನೆರವು ಮಾಡಿದ್ದಕ್ಕಾಗಿ ನನಗೆ ಹೆಮ್ಮೆ ಎನಿಸುತ್ತದೆ. ಸಿಲ್ಕ್ ಛತ್ರಿ ಇಟ್ಟುಕೊಂಡಿರುವುದು ನೋಡಿದರೆ ಶ್ರೀಮಂತ ಅಂತಲೂ ಕಾಣಿಸುತ್ತದೆ! ನೋಡೇ, ಇದರಲ್ಲಿ ನಿನಗೊಂದು ಒಳ್ಳೇ ಪಾಠ ಇದೆ. ಯಾವತ್ತೂ ಅವಸರದ ತೀರ್ಮಾನಗಳನ್ನು ಮಾಡಬೇಡ. ಸ್ವಲ್ಪ ತಡವಾದರೂ ಪರವಾಯಿಲ್ಲ. ಮುಂದೆ ಎಡವಟ್ಟಾಗಬಾರದು.’ ಅಮ್ಮ ಒಂದು ಬಾಷಣವನ್ನೇ ಕೊಟ್ಟಳು. ‘ಅಲ್ಲಿ ನೋಡಮ್ಮ ಮುದುಕನನ್ನ! ರಸ್ತೆಯ ಟ್ರಾಫಿಕ್ನಲ್ಲಿ ಹೇಗೆ ಅವಸರವಸರದಿಂದ ನುಸುಳಿ ಹೋಗುತ್ತಿದ್ದಾನೆ!’ ನಾನೆಂದೆ. ನಾವು ನೋಡುತ್ತಲೇ ನಿಂತೆವು. ಅವನು ರಸ್ತೆ ದಾಟಿ ಆಚೆ ಬದಿಗೆ ಹೋದ. ನಾವು ನೋಡುತ್ತಿದ್ದಂತೆ ಎಡಕ್ಕೆ ತಿರುಗಿದ. ಅವನು ವೇಗವಾಗಿ ನಡೆಯುತ್ತಿದ್ದ. ‘ಅವನ ಕಾಲುಗಳು ಸರಿಯಾಗಿರುವಂತೆ ಕಾಣುತ್ತವಮ್ಮ! ಅವನೇನು ನಿಶ್ಶಕ್ತನಲ್ಲ!’ ಅಮ್ಮ ಮಾತನಾಡಲಿಲ್ಲ. ‘ಅವನಿಗೆ ಟ್ಯಾಕ್ಸಿ ಹಿಡಿಯುವ ಯೋಚನೆ ಇರುವಂತೆ ಕಾಣುತ್ತಿಲ್ಲ ಕಣಮ್ಮ!’ ಅಮ್ಮ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿ
ದ್ದಳು. ಅವನು ಬಹಳ ಅವಸರದಲ್ಲಿರುವವನಂತೆ ಕಾಣಿಸುತ್ತಿದ್ದ. ಜನಜಂಗುಳಿ ಮಧ್ಯೆ ಲೀಲಾಜಾಲವಾಗಿ ನುಸುಳಿ ಹೋಗುತ್ತಿದ್ದ. ‘ಅವನ್ಯಾಕೋ ಘಾಟಿ ಮುದುಕನಂತೆ ಕಾಣುತ್ತಿದ್ದಾನೆ ಕಣೇ! ಅವನ ನಿಯತ್ತೇಕೋ ನನಗೆ ಸರಿ ಕಾಣಿಸುತ್ತಿಲ್ಲ. ಅವನಿಗೇನೋ ದುರಾಲೋಚನೆಯಿರುವಂತೆ ಕಾಣಿಸುತ್ತದೆ. ಅದೇನೆಂದು ತಿಳಿದುಕೊಳ್ಳಬೇಕು!’ ಅಮ್ಮ ಅವಡುಗಚ್ಚಿ ಹೇಳಿದಳು. ಅಮ್ಮ ನನ್ನ ಕೈಯನ್ನು ಹಿಡಿದುಕೊಂಡು ದರದರನೆ ಎಳೆದುಕೊಂಡೇ ಹೋದಳು. ರಸ್ತೆ ದಾಟಿ ನಾವು ಮುದುಕನ ಬೆನ್ನಿಗೆ ಬಿದ್ದೆವು. ‘ಕಾಣಿಸುತ್ತಾನೇನೆ?’ ಅಮ್ಮ ಏದುಸಿರು ಬಿಡುತ್ತಾ ಕೇಳಿದಳು. ‘ಅಗೋ, ಅಲ್ಲಿ ಹೋಗುತ್ತಿದ್ದಾನಮ್ಮ!… ನೋಡು ಬಲಕ್ಕೆ ತಿರುಗಿದ.’ ನಾನು ಹೇಳಿದೆ. ನಾವು ಬೀದಿಯ ಅಂಚಿಗೆ ಬಂದೆವು. ಬಲಕ್ಕೆ ಅವನು ನಮ್ಮಿಂದ ಸುಮಾರು ಮುವ್ವತ್ತು ಗಜ ದೂರದಲ್ಲಿದ್ದ. ಮಳೆ ಜೋರಾಗಿ ಹುಯ್ಯುತ್ತಿತ್ತು. ಮುದುಕನ ಕೋಟಿನಿಂದ ನೀರು ಇಳಿಯುತ್ತಿತ್ತು. ಏದುಸಿರು ಬಿಡುತ್ತಾ ನಾವು ಅವನ ಹಿಂದೆ ಓಡುತ್ತಿದ್ದೆವು. ಬೀದಿಯ ಅಂಚಿನಲ್ಲಿ ಮುದುಕ ಮತ್ತೊಮ್ಮೆ ತಿರುಗಿದ. ನಾವು ನೋಡು ನೋಡುತ್ತಿದ್ದಂತೆ ಒಂದು ಕಟ್ಟಡದೊಳಗೆ ನುಗ್ಗಿದ. ನಾವು ಹತ್ತಿರ ಬರುತ್ತಿದ್ದಂತೆ ಆ ಕಟ್ಟಡದ ಮೇಲೆ ‘ರೆಡ್ ಲಯನ್’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು. ಅದೊಂದು ಬಾರ್ ಎಂದು ಗೊತ್ತಾಗಲು ತಡವಾಗಲಿಲ್ಲ. ‘ಅಮ್ಮ, ನೀನು ಒಳಗೆ ಹೋಗಲ್ಲ ತಾನೆ?’ ನಾನು ಗಾಬರಿಯಿಂದ ಕೇಳಿದೆ. ‘ಇಲ್ಲ ಕಣೆ, ನಾವು ಹೊರಗಿಂದಲೇ ನೋಡೋಣ.’ ಬಾರಿನ ಹೊರಕ್ಕೆ ದಪ್ಪ ಗಾಜು ಹೊದಿಸಲಾಗಿತ್ತು. ಒಳಗೆ ಆವಿ, ಹೊಗೆಯಿಂದಾಗಿ ಮಬ್ಬಾಗಿ ಕಾಣಿಸುತ್ತಿತ್ತಾದರೂ ಹತ್ತಿರದಿಂದ ಒಳಗೆ ಕಾಣಿಸುತ್ತಿತ್ತು. ನಾನು, ಅಮ್ಮ ಗಾಜಿನೊಳಗೆ ಕಣ್ಣಗಲಿಸಿ ನೋಡಿದೆವು. ನಮ್ಮ ಕಣ್ಣುಗಳು ಒಳಗಿನ ಸಿಗರೇಟು ಹೊಗೆ ಮತ್ತು ಮಂದ ಬೆಳಕಿಗೆ ಹೊಂದಿಕೊಂಡಂತೆ, ಜನಜಂಗುಳಿಯ ದೊಡ್ಡ ಹಾಲಿನ ಮಧ್ಯೆ ಮುದುಕ ಕಾಣಿಸಿಕೊಂಡ. ಅವನ ಕೋಟು ಮತ್ತು ಹ್ಯಾಟು ಕಾಣಿಸುತ್ತಿರಲಿಲ್ಲ. ಅವನು ಬಾರ್ ಕೌಂಟರಿನ ಕಡೆಗೆ ನುಸುಳಿ ಹೋಗುತ್ತಿದ್ದ. ಬಾರ್ ಕೌಂಟರಿನ ಬಳಿ ಹೋಗುತ್ತಿದ್ದಂತೆ ಮದುಕ ಕೌಂಟರಿನ ಮೇಲೆ ಎರಡೂ ಕೈಗಳನ್ನೂರಿ ಬಾರ್ಮನನೊಡನೆ ಏನೋ ಮಾತನಾಡಿದ. ಬಾರ್ಮನ್ ಬೆನ್ನು ತಿರುಗಿಸಿ, ಸ್ವಲ್ಪ ಹೊತ್ತಿನಲ್ಲಿ ಒಂದು ಗಾಜಿನ ಲೋಟದ ಕಂಠಪೂತರ್ಿ ಒಂದು ಕಂದು ದ್ರವವನ್ನು ತುಂಬಿಸಿ ಮುದುಕನಿಗೆ ಕೊಟ್ಟ. ಮುದುಕ ಜೇಬಿಂದ ಒಂದು ಪೌಂಡ್ ನೋಟನ್ನು ತೆಗೆದು ಕೌಂಟರಿನ ಮೇಲಿಟ್ಟ. ‘ಅದು ನನ್ನ ಪೌಂಡು!’ ಅಮ್ಮ ಹೇಳಿದಳು. ಬಾರ್ಮನ್ ಅವನಿಗೆ ಚಿಲ್ಲರೆ ಕೊಡದಿದ್ದಾಗ ಅಮ್ಮ ಹೇಳಿದಳು. ‘ನೋಡೇ ಮುದುಕನ್ನ! ತ್ರಿಬಲ್ ಡ್ರಿಂಕ್ ಹಾಕ್ಸೊಂಡಿದ್ದಾನೆ!’ ‘ಅಂಗಂದ್ರೆ ಏನಮ್ಮ?’ ನಾನು ಕೇಳಿದೆ. ‘ಸಾಮಾನ್ಯ ಡ್ರಿಂಕಿಗಿಂತ ಮೂರರಷ್ಟು ಕಣೇ!’ ಅಮ್ಮ ಅನ್ನುತ್ತಿದ್ದಂತೆ ಮುದುಕ ಗ್ಲಾಸನ್ನು ಎತ್ತಿ ಎಲ್ಲವ ನ್ನೂ ಒಂದೇ ಗುಟುಕಿಗೆ ಗಂಟಲಿಗೆ ಇಳಿಸಿಕೊಂಡ! ‘ಒಂದು ಪೌಂಡ್ ಬೆಲೆಯ ಮದ್ಯವನ್ನು ಹೇಗೆ ನೀಟಾಗಿ ಇಳಿಸಿಕೊಂಡ ನೋಡು!’ ‘ಒಂದು ಪೌಂಡು ಅಲ್ಲ ಕಣಮ್ಮ, ಇಪ್ಪತ್ತು ಪೌಂಡಿನ ಸಿಲ್ಕ್ ಛತ್ರಿ!’ ‘ಹೂಂ.. ಇವನು ಬಹಳ ಘಾಟಿ ಕಣೇ!’ ‘ನೀನು ಜೆಂಟಲ್ಮನ್ ಅಂದ್ಯಲ್ಲಮ್ಮ?! ‘ಮುಚ್ಚೇ ಬಾಯಿ!’ ಗ್ಲಾಸನ್ನು ಖಾಲಿ ಮಾಡಿದ ಮುದುಕ ಒಮ್ಮೆ ಸುತ್ತಲೂ ನೋಡಿದ. ಅವನ ಮುಖ ರಂಗೇರಿತ್ತು ಹಾಗೂ ಅವನು ಮಂದಹಾಸ ಬೀರುತ್ತಿದ್ದ. ಅವನ ನಾಲಗೆ ಬಿಳಿ ಮೀಸೆಗಳಿಗೆ ಅಂಟಿಕೊಂಡಿದ್ದ ದ್ರವವನ್ನು ಚಪ್ಪರಿಸುತ್ತಿತ್ತು. ಅವನು ಮೆಲ್ಲಗೆ ಅಲ್ಲಿಂದ ಕದಲಿ ತನ್ನ ಕೋಟು ಹ್ಯಾಟು ತೂಗು ಹಾಕಿದ್ದ ಮುಂಭಾಗದ ಜಗುಲಿಗೆ ಬಂದ. ಹ್ಯಾಟು ಕೋಟನ್ನು ಧರಿಸಿದ. ಅಷ್ಟೇ ಕೂಲಾಗಿ ಅಲ್ಲಿ ತೂಗು ಬಿದ್ದಿದ್ದ ಬಹಳಷ್ಟು ನೆಂದ ಛತ್ರಿಗಳಿಂದ ಒಂದನ್ನು ಎತ್ತಿಕೊಂಡು ಹೊರನಡೆದ! ‘ನೋಡ್ದ್ಯೇನೇ?’ ಅಮ್ಮ ಹೌಹಾರಿದಳು. ‘ಶ್ಶ್!! ಸುಮ್ನಿರಮ್ಮಾ.’ ನಾನೆಂದೆ. ಅವನು ಹೊರಗೆ ಬಂದಿದ್ದ. ನಾವು ಅವನ ಸಿಲ್ಕ್ ಛತ್ರಿಯ ಮರೆಯಲ್ಲಿದ್ದೆವು. ಮುದುಕ ನಮ್ಮನ್ನು ಗಮನಿಸಲೇ ಇಲ್ಲ. ತನ್ನ ಹೊಸ ಛತ್ರಿಯನ್ನು ಬಿಡಿಸಿ ಅವನು ತಾನು ಬಂದ ದಾರಿಯಲ್ಲೇ ಹಿಂದಿರುಗಿದ. ‘ಒಹೋ, ಇದೇ ಮುದುಕನ ಆಟ! ಸೂಪರ್!’ ಎಂದಳು ಅಮ್ಮ. ನಾವು ಅವನನ್ನು ಹಿಂಭಾಲಿಸಿ ಮುಖ್ಯ ರಸ್ತೆ ಬಂದೆವು. ಮುದುಕ ಮತ್ತೆ ದಂಧೆಗೆ ಇಳಿದಿದ್ದ. ಅವನಿಗೊಬ್ಬ ತೆಳ್ಳನೆ ಎತ್ತರದ ಗಿರಾಕಿ ಸಿಕ್ಕಿದ್ದ. ಪೌಂಡು ಸಿಕ್ಕಿದಾಕ್ಷಣ ಮುದುಕ ಚುರುಕಾದ. ಈ ಭಾರಿ ಬೇರೆ ಮಾರ್ಗ ಹಿಡಿದು ಜನಜಂಗುಳಿಯಲ್ಲಿ ಮಾಯವಾದ. ‘ನೋಡೇ ಎಷ್ಟೊಂದು ಬುದ್ಧಿವಂತ. ಒಮ್ಮೆ ಹೋದ ಬಾರಿಗೆ ಮತ್ತೊಮ್ಮೆ ಹೋಗುವುದಿಲ್ಲ!’ ಅಮ್ಮ ಹೇಳಿದಳು.
*****






oh nice, anuvada kooda tumba chennagide,thank you sir.