ಕನ್ನಿಮೊಳಿ ತಮಿಳು ಕವನ
ಮುಟ್ಟಾದವರು
ಕನ್ನಡಕ್ಕೆ : ಪ್ರತಿಭಾ ನಂದಕುಮಾರ್
ಉತ್ತರದಲ್ಲಿ ಚಳಿಗಾಲದಲ್ಲಿ
ಪೂಜಾರಿಗಳು ಉಣ್ಣೆಯ ಪ್ಯಾಂಟು ತೊಡುತ್ತಾರೆ
ಪೆರುಮಾಳ್ ದೇವಸ್ಥಾನದ ರಥಕ್ಕೆ
ಮೋಟಾರು ಅಳವಡಿಸಲಾಗಿದೆ
ತಿರುಪತಿಗೆ ಹೋಗಲಾಗದವರು
ಸ್ಥಳೀಯ ಬ್ರ್ಯಾಂಚಿನಲ್ಲಿ ಕಾಣಿಕೆ ಸಲ್ಲಿಸಬಹುದು
ಅಯ್ಯಪ್ಪನ ವ್ರತದಲ್ಲಿ
ಉಪವಾಸವನ್ನು ಮೂರೇ ದಿನಕ್ಕೆ ಇಳಿಸಲಾಗಿದೆ
ಇಸ್ಕಾನ್ ನಲ್ಲಿ ಬಿಳಿಯರು ಪೂಜಾರಿಗಳಾಗಿದ್ದಾರೆ
ಇಂಡೋನೇಷಿಯಾದ ದೇವಸ್ಥಾನಗಳ ಒಳಗೆ
ಚಪ್ಪಲಿ ಹಾಕಿಕೊಂಡೇ ಹೋಗಬಹುದು
ಅಲ್ಲಿ ಗಣೇಶನಿಗೆ ಕೋಳಿ ಸಾರಿನ ನೈವೇದ್ಯ ಶ್ರೇಷ್ಟ
ಎಲ್ಲಾ ಜಾತಿಗಳವರು ದೇವಸ್ಥಾನ ಪ್ರವೇಶಿಸಲು
ಕಾನೂನನ್ನು ಬದಲಾಗಿಸಲಾಗಿದೆ
ಆದರೆ ಎಲ್ಲಿಗೆ ಹೋದರೂ
ನಮ್ಮ ಮಹಾಮಹಿಮ ದೇವರು
ಸಹಿಸಲು ಸಾಧ್ಯವೇ ಆಗದಿರುವುದು
ಮುಟ್ಟಾದ ಹೆಂಗಸರನ್ನು ಮಾತ್ರ.





ಹೆಣ್ಣಿಗೊಂದು ಶಾಪ
ನಿಜ, ರಗಳೆಯ ದಿನಗಳಲ್ಲಿ ಹಾಗೇ ಅನಿಸುವುದುಂಟು.
ಆದಾಗ್ಯೂ, ಇದು ಶಾಪ ಎಂದು ನಾವ್ಯಾಕೆ ಯೋಚಿಸಬೇಕು?
ಹುಟ್ಟಿಗೆ ಕಾರಣವಾದ ಪವಿತ್ರ ಎಂದು ಭಾವಿಸುವುದು ಸಮಂಜಸ.
ಅದು ವರ್ಜ್ಯ ಎಂದು ಯಾರೋ ಅಂದುಕೊಂಡಿದ್ದರೆ ಅದು ಅವರ ಬೌದ್ಧಿಕ ದಾರಿದ್ರ್ಯ.
ಮೊದಲು ನಾವು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ರೂಢಿಸಿಕೊಳ್ಳಬೇಕು.
ಎಂದು ನನ್ನ ಅನಿಸಿಕೆ.