ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈ ರಸ್ತೆಯಲ್ಲಿ ಅಳುತ್ತಾ ನಿಂತ ಆ ಹುಡುಗಿ..

ಸಿಹಿಗಿಂತಲೂ ಸಿಹಿಯಾದದ್ದು !

ವಿದ್ಯಾಧರ್

ಹಿಂಗ ಒಂದ್ ದಿನ (ಜುಲೈ ೩೦,೨೦೧೩) ಮುಂಬೈದಾಗ ಸಂಜಿಕ ಕೆಲಸ ಮುಗಿಸಿ ನಾನು ಮತ್ತ ನನ್ನ ಆಫೀಸ್ ಕಲ್ಲೀಗ್ ಒಬ್ಬಾವ ಮನಿಗಿ ವಾಪಸ್ ಹೋಗಬೇಕಾದ್ರ ದಾರ್ಯಾಗ ಏನಾರ ಸಿಹಿ ತಿನಬೇಕ್ ಅನ್ಸ್‌ತು . ಮಾರ್ಕೆಟ್ ಸನಿ ಬಂದಾಗ ಅಲ್ಲೊಂದ್ ಒತ್ತು ಗಾಡ್ಯಾಗ ಗಿಣ್ಣು ಕಾಣಸ್ತು. ಇನ್ನೇನ್ ಹೋಗಿ ತಿನ್ಬೇಕ್ ಅನ್ನೋದ್ರಾಗ ಆ ಗಿಜಿ ಗಿಜಿ ಮಾರ್ಕೆಟ್ನ್ಯಾಗ ಒಂದ್ ಸಣ್ಣ ಹುಡುಗಿ, ೩-೪ ವರ್ಷದ್ ಇರ್ಬೇಕು, ರೋಡ್ ನಡುವ ಅಳಕೋತ ನಿಂತಿದ್ದು ಕಾಣಸ್ತು. ಅಕಿ ಸುತ್ತ ಮುತ್ತ ಯಾರು ದೊಡ್ಡವರು ಕಾಣಸ್ಲಿಲ್ಲ . ಹುಡುಗಿ ಕಳಕೊಂಡೈತಿ ಅಂತ ಖಾತ್ರಿ ಆಯ್ತು . ಅಕಿ ಹತ್ರ ಹೋಗಿ ಎತ್ಗೊಂಡ್ವಿ . ರಮ್ಸಿದ್ವಿ . ಹುಡುಗಿ ಗಪ್ಪ ಆದ್ಳು.
ಹುಡುಗಿ ಕೈಯಾಗ್ ಒಂದ್ ಬಿಸ್ಕಿಟ್ ಪಾಕಿಟ್ ಇತ್ತು . ಬಾಯಿ ಸುತ್ತ ಬಿಸ್ಕಿಟ್ ಮೆತ್ಕೊಂಡಿತ್ತು . ಒಂದು ಕೆಂಪು ಕುರ್ತಾ ಹಾಕೊಂಡಿದ್ಳು . ಕಾಲಾಗ್ ಚಪ್ಪಲ್ ಇದ್ವು. ಹಂಗ ಸುತ್ತ ಮುತ್ತ ಹುಡುಕ್ಯಾಡಿದ್ವಿ. ಯಾರು ಅಕಿನ ಹುಡುಕಾಕತ್ತಂಗ ಕಾಣಲಿಲ್ಲ. ಅಲ್ಲೇ ಇದ್ದವರಿಗಿ ಕೇಳಿದ್ವಿ. “ಇಸ್ ಲಡ್ಕಿ ಕೊ ಕಹಿನ್ ದೇಖೆ ಹೋ? ಘುಮ್ ಹೋ ಗಯಿ ಹೈ. ಹಮೆ ಯಹೀ ಸಿಗ್ನಲ್ ಪೆ ಮಿಲಿ”.ಎಲ್ಲಾರೂ ಹುಡುಗಿ ಗೊತ್ತಿಲ್ಲ ಅಂದ್ರು. ಬಾಳ ಮಂದಿ ಹುಡುಗಿನ ಯಾವ್ದರ ಗುಡಿಗರೆ ಇಲ್ಲ ಮಸೇದಿಗರೆ ಕರ್ಕೊಂಡ್ ಹೋಗ್ರಿ, ಅಲ್ಲಿ ಮೈಕಿನ್ಯಾಗ ಒದರಿ ಹೇಳ್ತಾರ. ಕಳ್ಕೊಂಡೋರು ಜಾಸ್ತಿ ಅಲ್ಲೇ ಹುಡುಕೊಂಡು ಹೊಕ್ಕಾರ ಅಂದ್ರು . ಆಯ್ತು ಅಂತ್ಹೇಳಿ ಸಮೀಪದಾಗ ಗುಡಿ ಎಲ್ಲಿ ಐತಿ ಅಂತ ತಿಳ್ಕೊಂಡು ಹೊಂಟ್ವಿ.
ಹತ್ತು ನಿಮಿಷ ನಡದ ಮ್ಯಾಗ ಹನುಮಂತ ದೇವರ ಗುಡಿ ಸಿಕ್ತು. ಆಗ ರಾತ್ರಿ ೯:೩೦ ಆಗಿತ್ತು. ಅಲ್ಲಿ ಪೂಜಾರಿಗಿ ಸುದ್ದಿ ಏನಂತ ಹೇಳದ್ನಿ. ಅವ್ರು ಹಿಂದ್ಯಾಗ ಹೇಳಿದ್ದು ಕನ್ನಡದಾಗ ಹೇಳ್ತೀನಿ. “ಇನ್ನೊಂದ್ ಎರಡ ತಾಸ್ನ್ಯಾಗ ಗುಡಿ ಮುಚ್ತಿವಿ. ಅಲ್ಲಿ ತನಕ ಯಾರರೆ ಹುಡುಕೊಂಡು ಬಂದ್ರ ಚಲೊ. ಇಲ್ಲಾಂದ್ರ ಪ್ರಾಬ್ಲಮ್ ಆಕ್ಕೈತಿ. ಅದಕ ಒಂದ್ ಕೆಲ್ಸ ಮಾಡ್ರಿ . ಹುಡುಗಿನ ಕರ್ಕೊಂಡ್ ಪೋಲಿಸ್ ಸ್ಟೇಷನ್ ಹೊಗ್ರಿ. ಅಲ್ಲಿ ಲೇಡಿ ಪೋಲಿಸ್ ಇರ್ತಾರ. ಅವರು ನೋಡ್ಕೋತಾರ. ” ನಮಗ ಆ ಹುಡುಗಿ ಅಪ್ಪ ಅವ್ವ ಇಲ್ಲೇ ಹುಡುಕ್ಯಾಡ್ತಿರ್ತರ, ನಾವೂ ಇನ್ನೊಂದು ಸ್ವಲ್ಪ ಸುತ್ತ ಮುತ್ತ ಹುಡುಕ್ಯಾಡಿ ನೋಡೂನು ಅನ್ಸ್ತು. ಗುಡಿ ಆತು, ಈಗ ಮಸೀದಿ ಕಡೆ ಹೋಗೂನು ಅಂತ ಹೊಂಟ್ವಿ. ಆ ಹುಡುಗಿ ಬ್ಯಾರೆ ಮುಸ್ಲಿಂ ಹುಡುಗಿ ಹಂಗ ಕಂಡ್ಳು.

ಹಂಗ ದಾರ್ಯಾಗ ಮಂದಿಗಿ ಕೇಳ್ಕೋತ ಹೊಂಟ್ವಿ . ಕಡೀಗಿ ಹುಡುಗೀಗೆ ಕೇಳಿದ್ವಿ. “ತೇರಾ ನಾಮ್ ಕ್ಯಾ ಹೈ? ಘರ್ ಕಹಾ ಹೈ? ಅಮ್ಮಿ ಕಹಾ ಹೈ? ಪಾಪಾ ಕಹಾ ಹೈ?. ” ಹುಡುಗಿ ಮಾತ್ಯಾಡಲಿಲ್ಲ. ಬರೆ ನಮ್ಮ ಮುಖ ನೋಡ್ತಿತ್ತು, ನಗತಿತ್ತು. ಹುಡುಗಿನ ಎತಗೊಂಡಿದ್ವಿ. ಒಬ್ಬಕ್ಕಿ ಹೆಣ್ಮಗಳು ಒಂದ್ ಮಾತ್ ಹೇಳಿದ್ಳು ಹಿಂದ್ಯಾಗ . ಕನ್ನಡದಾಗ ಹೇಳ್ತೀನಿ – “ಹುಡುಗಿನ ಎತ್ಗೊಂಡು ಹೊಗ್ಬ್ಯಾಡ್ರಿ, ನಡಸ್ಕೊಂಡು ಹೋಗ್ರಿ. ಮಂದಿ ಕಿಡ್ನ್ಯಾಪ್ ಮಾಡಾತೀರಿ ಅನ್ಕೋತಾರ.” ಅದು ಖರೇನೊ ಅನ್ಸ್ತು. ಒಬ್ಬವ ಈ ಮೊದಲ “ಈ ಹುಡುಗಿ ನಿಮಗ ಏನಾಕ್ಕಾಳ. ಎಲ್ಲಿಗಿ ಕರ್ಕೊಂಡು ಹೊಂಟೀರಿ.” ಅಂತ ಕೇಳಿದ್ದು ನೆನಪಿಗಿ ಬಂತು. ಹುಡುಗಿನ ಕೆಳಗ ಇಳ್ಸಿ ನಡಸ್ಕೊಂಡು ಮಸೀದಿ ಕಡೆ ಹೊಂಟ್ವಿ. ಅದು ಸೌಕಸ ನಡೀತಿತ್ತು. ಮಸೀದ್ಯರೆ ದೂರಿತ್ತು. ರಾತ್ರಿ ೧೦ ಆಗಾಕತ್ತಿತ್ತು. ಮಸೀದಿ ಮುಟ್ಟಿದ್ವಿ. ಹೇಳಿಕೇಳಿ ಅದು ರಮಜಾನ್ ಟೈಮ್. ಅಲ್ಲಿ ಪ್ರೇಯರ್ ನಡೀತಿತ್ತು. ನಮ್ಮ ಕಡೆ ಯಾರೂ ಲಕ್ಷ್ಯ ಕೊಡಂಗ ಕಾಣಲಿಲ್ಲ . ಡಿಸ್ಟರ್ಬ್ ಮಾಡೂದು ಬ್ಯಾಡ ಅಂತ ಪೋಲಿಸ್ ಸ್ಟೇಷನ್ ಹೋಗಾಕ ರೆಡಿ ಆದ್ವಿ.
ದಾರ್ಯಾಗ ಆಟೋ ತರ್ಬಿಸಿ ಸಮೀಪದ ಪೋಲಿಸ್ ಸ್ಟೇಷನ್ ಕರ್ಕೊಂಡ್ ಹೋಗು ಅಂತ ಅಂದ್ಯಾ. ಅವಗೂ ಪಕ್ಕಾ ಸ್ಟೇಷನ್ ಎಲ್ಲಿ ಐತಿ ಅಂತ ಗೊತ್ತಿರ್ಲಿಲ್ಲ. ದಾರ್ಯಾಗ ಕೇಳ್ಕೋತ ಹೋದ್ವಿ . ಆ ಏರಿಯಾದಾಗ ಸ್ಟೇಷನ್ ಇರ್ಲಿಲ್ಲ. ಮುಂದಿನ ಏರಿಯಾಕ ಹೋದ್ವಿ. ೧೦:೩೦ ಕ್ಕ ಸ್ಟೇಷನ್ ಮುಟ್ಟಿದ್ವಿ. ಬೆಂಗಳೂರಾಗ ಆಗಿದ್ರ ಆಟೋದವ ಎಕ್ಸ್ಟ್ರಾ ಚಾರ್ಜ್ ಕೇಳ್ತಿದ್ನೇನೋ ೧೦:೩೦ ಆಗೇತಿ ಅಂತ. ಮುಂಬೈ ದಾಗ ರಾತ್ರಿ ೧೨ ರ ಮ್ಯಾಲ ಎಕ್ಸ್ಟ್ರಾ ಚಾರ್ಜ್ ಚಾಲೂ. ಜೀವನದಾಗ ಫಸ್ಟ್ ಟೈಮ್ ಪೋಲಿಸ್ ಸ್ಟೇಷನ್ ಹೋಗುವಂಗಾಯ್ತು ಈ ಹುಡುಗಿ ಸಮಂದ. ಅಲ್ಲಿ ಹೋಗಿ ಯಾರ್ನ ನೋಡಬೇಕು ಏನು ಮಾಡಬೇಕು ಗೊತ್ತಿಲ್ಲ. ಫಸ್ಟ್ ಸಿಕ್ಕ ಪೋಲಿಸ್ ಗ ವಿಷ್ಯ ಹೇಳಿದ್ವಿ. ಅವ ಒಂದು ರೂಂ ಕಡೆ ಕೈ ಮಾಡಿ ತೋರಿಸಿ ಅಲ್ಲಿ ಹೋಗ್ರಿ ಅಂದ.
ಪೋಲಿಸ್ ಸ್ಟೇಷನ್ ತುಂಬಿತ್ತು. ನಮ್ಮ ಪಾಳಿ ಸಮಂದ ಕಾಯಕೋತ ಕುಂತ್ವಿ. ಒಂದ್ ಹದಿನೈದು ನಿಮಿಷದ ಮ್ಯಾಲ ಪಾಳಿ ಬಂತು. ರಿಜಿಸ್ಟರ್ ನ್ಯಾಗ ಎಂಟ್ರಿ ಮಾಡ್ಕೊಂಡ್ರು. ನಮ್ಮ ಹೆಸರು ಅಡ್ದ್ರೆಸ್ಸು ಮೊಬೈಲ್ ನಂ ಎಲ್ಲ ತೊಗೊಂಡ್ರು. ನೀವಿನ್ನು ಹೋಗ್ರಿ ಅಂದ್ರು . ನಾವು ಹೊಂಟಂಗ ಹುಡುಗಿ ನಮ್ಮ ಹಿಂದ್ ಬರಾಕ್ ಚಾಲೂ ಮಾಡ್ತು. ಪಾಪ ಅದಕೇನು ಗೊತ್ತು. ಅದಕ ಪೋಲೀಸ್ನೂರು – “ಲಡ್ಕಿ ಆಪಸೇ ಇತ್ನೆ ದೇರ್ ಸೆ ಮಿಲ್ ಗಯಿ ಹೈ. ಆಪಕೋ ನಹಿ ಚೋಡೇಗಿ. ಏಕ್ ಕಾಮ್ ಕೀಜಿಯೇ . ಇಸಕೇ ಘರವಾಲೇ ೧೧-೧೧:೧೫ ಕೆ ಅಂದರ ಆ ಜಾಯೇಂಗೆ . ತಬ್ ತಕ ಯಹಿ ರಹೋ”. ನಮಗ ಆಶ್ಚರ್ಯ ಆಯ್ತು. ಇಷ್ಟು ಬರೋಬ್ಬರಿ ಹೆಂಗ ಹೇಳ್ತಾರ್ ಇವ್ರು? ಇನ್ನೊದು ಅರ್ಧ ತಾಸ್ನ್ಯಾಗ್ ಈ ಹುಡುಗಿ ಮನ್ಯಾಗ ಕರ್ಕೊಂಡು ಹೋಗಾಕ ಬರ್ತಾರ ಅಂತ? ಆಯ್ತು ಅಂತ ಅಲ್ಲೇ ಕುಂತ್ವಿ.
ಆ ಅರ್ಧ ತಾಸು ಪೋಲಿಸ್ ಸ್ಟೇಷನ್ ನ್ಯಾಗ ಏನೇನ್ ನಡೀತದ, ಎಂಥೆಂಥ ಜನ ಬರ್ತರ ಅಂತ ಗಮನಿಸ್ಕೊತ ಕುಂತ್ಯ. ಒಂದು ಫ್ಯಾಮಿಲಿ ಬಂದಿತ್ತು. ಫ್ಯಾಮಿಲಿ ಜಗಳ ಕಾಣಸ್ತೈತಿ. ೫-೬ ಜನ ಇದ್ರು. ಒಂದು ೯-೧೦ ವರ್ಷದ ಹುಡುಗಿನೂ ಇತ್ತು. ಕಂಪ್ಲೇಂಟ್ ಎಲ್ಲ ಆಗೋಗಿತ್ತು. ಎಲ್ಲ ಹೊರಗ ಹ್ವಾದ ಮ್ಯಾಗ ಆ ಹುಡುಗಿ ಒಬ್ಬಕ್ಕಿನ ಅವರ ಕಣ್ಣ ತಪ್ಪಿಸಿ ಒಳಗ ಬಂದು ಇನ್ಸ್ಪೆಕ್ಟರ್ ಗ ಹೇಳಿದ್ಳು – “ಅಂಕಲ್ ಮುಝೆ ಮಮ್ಮಿ ಕೆ ಸಾಥ್ ನಹಿ ರೆಹ್ನಾ ಹೈ. ಮಮ್ಮಿ ಬಹುತ್ ಡಾಂಟತಿ ಹೈ. ಮುಝೆ ಪಾಪಾ ಕೆ ಸಾಥ್ ರೆಹ್ನಾ ಹೈ. ” ಹುಡುಗಿನ ನೋಡಿ ಪಾಪ ಅನ್ಸ್ತು. ಹಂಗ ಖುಶಿನೂ ಆಯ್ತು ಎಷ್ಟು ಧೈರ್ಯ ಆಯ್ತಲ ಅಂತ. ಇನ್ನೊಂದು ಕೋಣ್ಯಾಗ ಒಬ್ಬಗ ಪೋಲೀಸ್ನೂರು ಹೊಡ್ಯಾತಿದ್ರು. ಅವ ಅಳಾತಿದ್ದ. ಒಬ್ಬ ಕುಡುಕನ್ನ ಎಳಕೊಂಡು ಬಂದು ಮೂಲ್ಯಾಗ ಗೂಡ್ಗಾಲ ಹಾಕಿ ಕುಂಡ್ಸಿದ್ರು. ಪಕ್ಕದ ಟೇಬಲ್ನ್ಯಾಗ ರಾತ್ರಿ ಪಾಳಿ ಪೊಲೀಸ್ರು ರೆಜಿಸ್ಟೆರ್ನ್ಯಾಗ ಗೋಲಿ ಎಂಟ್ರಿ ಮಾಡಿಸಿ ಪಿಸ್ತೂಲ್ ತುಂಬಿಸಿಕೊಂಡು ಹೊಂಟಿದ್ರು. ಹಿಂಗ ಎಲ್ಲ ಗಮನಿಸ್ಕೊತ ಕುಂತಿದ್ಯ.
ಅಷ್ಟ್ರಾಗ ಒಂದು ೫-೬ ಮಂದಿ ಗುಂಪು ಬಂತು. ಈ ಹುಡುಗಿನ ನೋಡಿ “ಏ ಲಡ್ಕಿ ಖೊಯಿ ಹುಯಿ ಮಿಲಿ ಹೈ ಕ್ಯಾ. ಅಭಿ ಇಸಿ ಕಾ ತೋ ವಹಾ ಅನೌನ್ಸ್ ಕರಕೆ ಆ ರಹೇ ಹೈ. ಇಸ್ಕಿ ಪಿತಾ ಆಯಾ ಥಾ, ಲಾಲ್ ರಂಗ್ ಕಿ ಕುರ್ತಿ ಪೆಹ್ನಿ ಹುಯಿ ಗೋರಿ ರಂಗ್ ಚಾರ್ ಸಾಲ್ ಕಿ ಲಡ್ಕಿ”. ನಮಗ ಫುಲ್ ಖುಷಿ ಆಯ್ತು. ಸಿಕ್ರಲ್ಲ ಕಡೀಗೂ ಅಂತ. ಆ ಹುಡುಗಿ ಅಪ್ಪ ನಂಬರ್ ಕೊಟ್ಟಿದ್ದ ಇವ್ರಿಗಿ . ಅವ್ರು ಫೋನ್ ಮಾಡಿದ್ರು. ಆದ್ರ ಸ್ವಿಚ್ ಆಫ್ ಬಂತು. ಅದ ಏರಿಯಾದ ಬ್ಯಾರೆಯವರ್ನ ಕಾಂಟಾಕ್ಟ್ ಮಾಡಿ ಜುನೈದ್ ಖಾನ್ ಅನ್ನಾವ ಹುಡುಗಿ ಕಳ್ಕೊಂಡಾಳ ಅಂತ ಅನೌನ್ಸ್ ಮಾಡ್ಸಾಕ ಬಂದಿದ್ದ. ಪತ್ತೆ ಹಚ್ಚಿ ಕಾಂದಿವಿಲಿ ಪೋಲಿಸ್ ಸ್ಟೇಷನ್ ಬರಾಕ್ ಹೇಳು . ಹುಡುಗಿ ಇಲ್ಲೇ ಅದಾಳ ಅಂತ ಹೇಳಿದ್ರು.
ಬರೋಬ್ಬರಿ ೧೧:೧೫ ಕ್ಕ ಪೊಲಿಸ್ನೋರು ಹೇಳ್ದಂಗ ಆ ಹುಡುಗಿ ಅಪ್ಪ ಬಂದ. ಹುಡುಗಿನ ಎತ್ಕೊಂಡ. ಕಣ್ಣಾಗ ನೀರ್ ಬರಾತಿತ್ತು. ಹೆಂಡತಿಗಿ ಫೋನ್ ಹಚ್ಚಿ ಹುಡುಗಿ ಸಿಕ್ಳು ಅಂತ ಸುದ್ದಿ ಮುಟ್ಸಿದ. ಪೋಲಿಸ್ನೋರು ಅವಗ ಬೈಯಾಕ್ ಚಾಲೋ ಮಾಡಿದ್ರು . ಪೋಲಿಸ್ -“ಬಸ್ ಪೈದಾ ಕಿಯೇ ಔರ್ ಛೋಡ್ ದಿಯೇ, ಲಡ್ಕಿ ಕಹಾ ಹೈ, ಕೋಯಿ ಪರವಾ ನಹಿ?”.
ಅವನು – “ಸರ್ ಹಮ್ ಡ್ಯುಟಿ ಪರ ಥೆ, ವೈಫ್ ನೆ ಫೋನ್ ಕರ್ಕೆ ಬತಾಯಿ ತೋ ಪತಾ ಚಲಾ. ಹಮ್ ಬಹುತ್ ಢೋಂಡ್ ರಹೇ ಥೆ, ಅನೌನ್ಸ್ ಭಿ ಕರ್ವಾಯೆ”.
ಪೋಲಿಸ್ -“ಕ್ಯಾ ಢೋಂಡಾ ?(ನಮ್ಮನ್ನ ತೋರಿಸಿ) ಏ ದೋನೋ ನೇ ಕಬ್ಸೆ ತುಮ್ಹಾರಿ ಬೇಟಿ ಕಾ ದೆಖ್ಬಾಲ್ ಕರ್ ರಹೇ ಹೈ ಪತಾ ಹೈ? ಇನ್ಕೋ ಕೋಯಿ ಧಂಧಾ ನಹಿ ಹೈ?”.
ಅವನು – “ಸರ್ ಮೈ ತೋ ಡ್ಯುಟಿ ಪರ್ ಥಾ. ಬಚ್ಚೋ ಕಿ ನಜರ್ ರಖ್ನಾ ತೋ ವೈಫ್ ಕಾ ಕಾಮ್ ಹೈ ನಾ?”.
ಪೋಲಿಸ್ -“ತುಮ್ಹಾರಾ ಬಸ್ ಪೈದಾ ಕರ್ನಾ?”.
ಅವನು -“ಸಾರೀ ಸರ್. ಫಿರ್ ಐಸಾ ನಹಿ ಹೋಗಾ. ಮೈ ನಜರ್ ರಖೋಂಗಾ.”
ಪೋಲಿಸ್ -“ಇನ್ಕಾ ಶುಕ್ರಿಯಾದಾ ಕರೋ”.
ಇಷ್ಟು ಅಂದ ಮ್ಯಾಲ ಪೋಲಿಸ್ ರಿಜಿಸ್ಟರ್ ನ್ಯಾಗ ಮೊದಲ ಮಾಡಿದ್ದ ಎಂಟ್ರಿ ಮ್ಯಾಲ ಕೆಂಪು ಪೆನ್ನಿಂದ ಎನೋ ಬರದ. ಆಮ್ಯಾಲ ಇನ್ಸ್ಪೆಕ್ಟರ್ ಕಡೆ ಸೈನ್ ತೊಗೊಂಡು ನಮ್ಮ ಹತ್ರ ಬಂದು ಕೈ ಕುಲುಕಿದ. ಥ್ಯಾಂಕ್ಸ್ ಹೇಳಿದ್ರು . ಪೋಲಿಸ್ನೋರು ನಮಗ ಥ್ಯಾಂಕ್ಸ್ ಹೇಳಿದ್ದ ನೋಡಿ ಭಾಳ ಹೆಮ್ಮೆ ಆಯ್ತು. ಅವರು ನಾವು ಹೆಂಗ ಬಂದೀವಿ ಅಂತ ಕೇಳಿದ್ರು. ಆಟೋದಾಗ ಅಂತ ಗೊತ್ತಾದಮ್ಯಾಗ , ಆ ಹುಡುಗಿ ಆಪ್ಪಗ ನಮಗ ಮನಿ ತನ ಮುಟ್ಸು ಜವಾಬ್ದಾರಿ ಕೊಟ್ರು. ಆವಾ ಹು ಅಂದ. ನಾವು “ಕೋಯಿ ಪ್ರಾಬ್ಲಮ್ ನಹಿ ಸರ್, ಹಮ್ ಆಟೋ ಸೆ ಜಾಯೆಂಗೆ. ಆಪ್ ಫಿಕರ್ ಮತ ಕೀಜಿಯೇ” ಅಂತ ಹೇಳ್ತಾ ಹೊರಗೆ ಬಂದ್ವಿ.
ಆವಾಗ ಆ ಹುಡುಗಿ ಅಪ್ಪ ನಮಗೆ ಥ್ಯಾಂಕ್ಸ್ ಹೇಳಿದ. “ಥ್ಯಾಂಕ್ಸ್ ಸರ್. ಹಮಾರಾ ಜಾನ್ ಜಾ ರಹಿ ಥಿ. ಇಸ್ಕಿ ಮಾ ಪ್ರೆಗ್ನೆಂಟ್ ಹೈ. ಮೆಡಿಕಲ್ ಸ್ಟೋರ್ ಮೈ ದವಾಯಿ ಲೇನೆ, ಮಿಸ್ಬಾಹ ಕೋ ಲೇಕೆ ಆಯಿ ಥಿ (ಮಿಸ್ಬಾಹ ಆ ಹುಡುಗಿ ಹೆಸರು, ನಮಗೆ ಗೊತ್ತಾದದ್ದೂ ಆಗ್ಲೇ). ತಬ್ ಭೀಡ್ ಮೇ ಹಾಥ್ ಸೆ ಛೂಟ್ ಗಯಿ. ಇನ್ಕಿ ಮಾ ಬಹುತ್ ಪರೆಶಾನ್ ಹೈ. ಬಹುತ್ ರೋ ರಹಿ ಥಿ.”
ಆ ಹುಡುಗಿ ಕೈಯಾಗ ಬಿಸ್ಕಿಟ್ ಪಾಕೀಟ್ ಹಂಗ ಇತ್ತು. ಕಾಲಾಗ ಚಪ್ಪಲ್ ಇನ್ನು ಇದ್ವು. ಹುಡುಗಿ ನಮಗ ಯಾವ ಸ್ಥಿತಿಯೊಳಗ ಸಿಕ್ಕಿದ್ಳೋ ಅದ ಸ್ಥಿತಿಯೊಳಗ ಅಕಿ ಅಪ್ಪಗ ಒಪ್ಪಿಸಿದ್ವಿ. ಆ ಹುಡುಗಿ ಗಲ್ಲ ಚಿವುಟಿ ಬೈ ಹೇಳಿ ಹೊಂಟ್ವಿ. ನಮ್ಮ ಮ್ಯಾಗ ನಮಗ ಭಾಳ ಹೆಮ್ಮೆ ಆಗಾತಿತ್ತು. ಆಟೋ ಹತ್ತಿ ಮನಿ ಕಡೆ ಹೊಂಟಾಗ ರಾತ್ರಿ ೧೨. ದಾರ್ಯಾಗ ನನ್ನ ಕಲ್ಲೀಗ್ ಹೇಳ್ದ – “Arey man we wanted to have some sweets.!”. ಈ ಖುಷಿ ಮುಂದ ಯಾವ ಸ್ವೀಟ್ ತಾನೇ ಇದಕಿಂತ ಸ್ವೀಟ್ ಇರಾಕ ಸಾಧ್ಯ ಐತಿ.!

 
 

‍ಲೇಖಕರು avadhi

16 August, 2013

4 Comments

  1. umesh desai

    nice write-up and good deed

  2. samyuktha

    Vidyadhar…..avadhi li nodi tumba khushi aytu!! wonderful write-up and ofcourse loved the language… 🙂

  3. vijay

    good job vid.luck chalo aiti hudgi appa amma sikru illa andidra nimdu pajjitti agttittu….

  4. Laxmi Bagali

    Good job Vidyadhar…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading