ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬೈ ಕನ್ನಡ ಲೋಕ ಇಂದು ಬರಡಾಗುತ್ತಾ ಸಾಗಿದೆ..

ಶ್ಯಾಮಲಾ ಮಾಧವ

ಸಮೀಪಿಸುತ್ತಿದ್ದ ದೀಪಾವಳಿಯ ಸಂಭ್ರಮದ ಸನ್ನಾಹದಲ್ಲಿದ್ದ ಮಹಾನಗರ ಮುಂಬೈ. ನಗರ ಮಧ್ಯದ ಮಾತುಂಗಾ ಪ್ರದೇಶದಲ್ಲಿನ ಕರ್ನಾಟಕ ಸಂಘದ ಕಛೇರಿಯ ವಿಶ್ವೇಶ್ವರಯ್ಯ ಸ್ಮಾರಕ ಸಭಾಂಗಣದಲ್ಲಿ ಶೋಕ – ಸಂಭ್ರಮದ ವಾತಾವರಣ. ನಗರದ ನೆಚ್ಚಿನ ಸಾಹಿತಿಗೆ ವಿದಾಯ ಕೋರುವ ಶೋಕ; ವಿದಾಯದ ಪ್ರಯುಕ್ತ ಸನ್ಮಾನಿಸುವ ಸಂಭ್ರಮ!

೧೯೯೫ ಅಕ್ಟೋಬರ್ ದಿನಾಂಕ ಇಪ್ಪತ್ತೊಂದರ ಶನಿವಾರದಂದು ಇಲ್ಲಿ ನಡೆದ ಈ ಸಮಾರಂಭ, ಬಹಳ ಆಪ್ಯಾಯಮಾನವಾದ, ಅಂತಃಕರಣವನ್ನು ಕಲಕಿದ, ಜನತೆಯ ಪ್ರೀತ್ಯಭಿಮಾನದ ಅಭಿವ್ಯಕ್ತಿಯ ಪ್ರಸಂಗ. ಮುಂಬೈಯ ಮಧ್ಯಮ ವರ್ಗದ ಜನಜೀವನದ ಯಥಾ ಚಿತ್ರಣವನ್ನು ತನ್ನ ಕೃತಿಗಳಲ್ಲಿ ಬಿಂಬಿಸಿ, ಇದೀಗ ನಗರದ ಜೊತೆಗಿನ ಐವತ್ತೊಂದು ವರ್ಷಗಳ ಸಹಜೀವನದ ಬಂಧವನ್ನು ಹರಿದುಕೊಂಡು, ಕನ್ನಡ ರಾಜಧಾನಿಗೆ ಹೊರಟ ಪ್ರಿಯ ಸಾಹಿತಿಗೆ ನಗರದ ಕನ್ನಡ ಬಂಧುಗಳು ನೀಡಿದ ಈ ಬೀಳ್ಕೊಡುಗೆಯ ಸಮಾರಂಭ ಎಷ್ಟೊಂದು ಹೃದಯ ಸ್ಪರ್ಶಿಯಾಗಿತ್ತೆಂದರೆ, ನೋಡಿದ ಕಣ್ಗಳೇ ಧನ್ಯ!

ಸೌಮ್ಯ ಮಂದಹಾಸದ ಮೊಗದ ನಿಡಂಬೂರು ವ್ಯಾಸರಾಯ ಬಲ್ಲಾಳರು ಅಂದು ಗಂಭೀರ ಮ್ಲಾನವದನರಾಗಿದ್ದರು. ವೇದಿಕೆಯಲ್ಲಿ ಅವರ ಪಕ್ಕದಲ್ಲಿ ನಗುಮೊಗದ ಸಹಧರ್ಮಿಣಿ ರಾಜೀವಿ ಬಲ್ಲಾಳರು, ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿಯವರು, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸಿಧ್ಧ ಸಾಹಿತಿ ಎಸ್.ಎಲ್.ಭೈರಪ್ಪನವರು, ಶ್ರೀ ಯಶವಂತ ಚಿತ್ತಾಲರು, ಪ್ರಖ್ಯಾತ ಪತ್ರಕರ್ತ ಎಂ.ವಿ.ಕಾಮತರು, ಶ್ರೀನಿವಾಸ ಹಾವನೂರರು, ಬಿ.ಎ.ಸನದಿ ಅವರು, ಕುರ್ಕಾಲರು, ಸುನೀತಾ ಶೆಟ್ಟಿ ಅವರು, ವಿ.ಕೃ. ಗೋಕಾಕರ ಪುತ್ರಿ ವೀಣಾ ಅವರು, ಅಭಿನಂದನ ಸಮಿತಿಯ ಉಪಾಧ್ಯಕ್ಷ ಯು.ವೆಂಕಟರಾಜರು ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆಯ ಬಳಿಕ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ಹುರುಪಿನಿಂದಲೇ ಬಲ್ಲಾಳರ ಜೊತೆಗಿನ ತಮ್ಮ ಸ್ನೇಹ, ಸಹಚರ್ಯ, ಸಂಘದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಬಗೆಯ ಬಗ್ಗೆ ಮಾತನಾಡಿ, ಮುಂದೆ ನಗರಕ್ಕೆ ಭೇಟಿಯೀಯುವಾಗಲೆಲ್ಲ ಸಂಘವೇ ಅವರ ಮೊದಲ ಮನೆಯಾಗಲೆಂದು ಹಾರೈಸಿದರು.

ತದನಂತರ ಮಾತನಾಡಿದ ಸಾಹಿತಿ ಯಶವಂತ ಚಿತ್ತಾಲರ ಬಿನ್ನಹವು ಹೃದಯದ ಭಾವನೆಗಳ ಎಳೆಗಳನ್ನೇ ಮಿಡಿದು ಮಧುರವಾದ ವಿರಹಗೀತೆಯಂತೆ ಹರಿಯಿತು. ಭಾವಪರವಶರಾಗಿ ಅಣ್ಣನೆಂಬ ಪ್ರೀತ್ಯಭಿಮಾನದಿಂದ ನಡುಗುವ ಕಂಠದೊಡನೆ ಹೃದಯದ ಭಾವನೆಗಳನ್ನು ತೋಡಿಕೊಂಡ ಚಿತ್ತಾಲರು ಶತಾಂಶ ಭಾವಜೀವಿಗಳಾಗಿದ್ದರು. ಹಿರಿಯರಾದ ಬಲ್ಲಾಳರನ್ನು ತಾನೆಂತು ಅಣ್ಣನೆಂದು ಪ್ರೀತಿಸುತ್ತಿದ್ದೆನೆಂದೂ, ಸಾಂದರ್ಭಿಕವಾಗಿ ಭಿನ್ನಾಭಿಪ್ರಾಯಗಳು ಬಂದಾಗ ಎಂತು ಜಗಳಾಡುತ್ತಿದ್ದೆವೆಂದೂ ಅವರು ಭಾವಪೂರ್ಣರಾಗಿ ನುಡಿದರು.

ಪತ್ರಕರ್ತ ಎಂ.ವಿ.ಕಾಮತ್‌ರ ಚುರುಕಾದ ನವಿರು ಹಾಸ್ಯದ ಮಾತುಗಳು ಬಲ್ಲಾಳರ ಬಗೆಗಿನ ಪ್ರೀತ್ಯಭಿಮಾನವನ್ನು ಮೆರೆದುವು. ಹುಟ್ಟೂರಿನ ವಾಸದ ಬಳಿಕ ಮುಂಬೈಯಲ್ಲಿ ಜೀವನ ತೊಡಗಿ ತಾವೆಲ್ಲ ಸೇರಿ ಆರಂಭಿಸಿದ ‘ನುಡಿ’ ಪತ್ರಿಕೆಯ ಸಹಸಂಪಾದಕತ್ವದ ದಿನಗಳನ್ನು ಸ್ಮರಿಸಿಕೊಳ್ಳುತ್ತಾ ಬಲ್ಲಾಳರ ಬರವಣಿಗೆಯ ಬಗ್ಗೆ, ಬೆಳವಣಿಗೆಯ ಬಗ್ಗೆ ಸ್ವಾರಸ್ಯಕರವಾಗಿ ಅವರು ಮಾತನಾಡಿದರು.

ಶ್ರೀನಿವಾಸ ಹಾವನೂರರೂ ಹಿಂದಿನ ದಿನಗಳನ್ನು ನೆನೆದುಕೊಳ್ಳುತ್ತಾ, ಬಲ್ಲಾಳರು ಸಾಹಿತಿಯಾಗಿ ರೂಪುಗೊಂಡ ಬೆಳವಣಿಗೆಯನ್ನು ವಿಶ್ಲೇಷಿಸುತ್ತಾ, ಈ ಸುದೀರ್ಘ ಸಮಯ ಈ ನಗರದೊಂದಿಗೆ ಬೆಳೆಯುತ್ತಾ ಬಂದ ಬಲ್ಲಾಳರು ಇದೀಗ ತಮ್ಮ ಪ್ರೀತಿಯ ಮುಂಬೈಯನ್ನು ತ್ಯಜಿಸಿ ಬೆಂಗಳೂರಿಗೆ ಹೊರಟಿದ್ದರೂ, ಆ ಕನ್ನಾಡ ರಾಜಧಾನಿಯಲ್ಲಿ ಕನ್ನಡವಿಲ್ಲವೆಂಬ ನಿಷ್ಠುರ ಸತ್ಯವನ್ನು ಆಡಿ ತೋರಿದರು. ‘ನುಡಿ’ ಪತ್ರಿಕೆಯ ಕಾಯಕದ ದಿನಗಳಲ್ಲಿ ರಾಮಚಂದ್ರ ಉಚ್ಚಿಲರೂ ತಮ್ಮೊಡನಿದ್ದುದನ್ನು ಸ್ಮರಿಸಿದರು.

ಕವಿ ಬಿ.ಎ.ಸನದಿಯವರು ಪ್ರೀತಿಯಿಂದ ವರಕವಿ ಬೇಂದ್ರೆಯವರ ಕವನದ ಮೊದಲ ಸಾಲುಗಳಿಂದಾರಂಭಿಸಿ,

‘ಘಮ ಘಮ ಘಮಾಡಸ್ತಾವ ಮಲ್ಲಿಗೀ
ನೀವು ಹೊರಟಿದ್ದೀಗ ಎಲ್ಲಿಗೀ?’

ಎಂದು ಕೇಳುತ್ತಾ ಕವನವೊಂದನ್ನು ಸಮರ್ಪಿಸಿದರು:

‘ಬೆದಿ ನೋಡಿ ನೀವು ಹದಾ ಮಾಡಿದಿರಿ
ಕನ್ನಡ ನೆಲ ಹರಗಿ
ಇಲ್ಲಿಯ ಹೊಲದಾಗ ಬಂದ ಬೆಳಿ ಮ್ಯಾಗ
ಮಾಡಿದಿರಿ ಸುಗ್ಗಿ’

ಎಂದು ಪ್ರಶಂಸಿಸಿದರು.

‘ಮುಂಬೈ ಮನಿಗಿ
ಬೆಂಕಿ ಬಿದ್ದ ಪರಿ
ನೋಡಿ ಕೊರಗಿ ಕೊರಗಿ
ನೀವು ಹೊರಟಿದ್ದೀಗ ಎಲ್ಲಿಗಿ?ʼ

ಎಂದು ಹಾಡುತ್ತಾ ಪ್ರಶ್ನಿಸಿದರು.

‘ನಿಮ್ಮ ನೆನಪು
ಹಸಿರಾಗಿ ಉಳೀತಾವು
ನೀವೆಲ್ಲಿದ್ದರೂ ಹೋಗಿ
ನಂಬಿದ ಜನಗಳ
ಅಪಾರ ಎದಿಭಾರ
ನೀವ ನೋಡಿ ತೂಗಿ’

ಎಂದು ನಿವೇದಿಸಿಕೊಂಡರು.

ಸಮಿತಿಯ ಉಪಾಧ್ಯಕ್ಷ ವೆಂಕಟ್ರಾಜ ರಾವ್ ಅವರು, ಸುದೀರ್ಘವೂ, ಸುಂದರವೂ ಆದ ಬಿನ್ನವತ್ತಳೆಯನ್ನು ಓದಿ, ಶಾಲು, ಹೂಹಾರ, ಸುಂದರ ಕೆತ್ತನೆಯುಳ್ಳ ಪೀಠದ ಸ್ಮರಣಿಕೆಗಳೊಡನೆ ರೂ.೭೫,೦೦೦- ಗೌರವನಿಧಿಯನ್ನು ಸಮರ್ಪಿಸಿದರು. ಶ್ರೀಮತಿ ಬಲ್ಲಾಳರನ್ನೂ ಫಲ ಪುಷ್ಪ, ತಾಂಬೂಲ, ರೇಶ್ಮೆ ಸೀರೆಯಿತ್ತು ಸನ್ಮಾನಿಸಲಾಯ್ತು.

ಪ್ರಿಯ ಸಾಹಿತಿಗೆ ಮುಂಬೈಯ ಹಲವಾರು ಕನ್ನಡ ಸಂಘ, ಸಂಸ್ಥೆಗಳು, ವಿದ್ಯಾಪೀಠಗಳು ಸಮರ್ಪಿಸಿದ ಪುಷ್ಪಗುಚ್ಛಗಳಿಂದ ವೇದಿಕೆ ತುಂಬಿಹೋಯ್ತು. ಹೂಮಾಲೆಗಳು ಮೇಜನ್ನು ತುಂಬಿ ಅಲಂಕರಿಸಿದುವು. ಜನತೆಯ ಪ್ರೀತಿಯ ಈ ದ್ಯೋತಕಗಳು ವೇದಿಕೆಯನ್ನೇ ಶೋಭಾಯಮಾನವಾಗಿಸಿ ಸಮಾರಂಭಕ್ಕೆ ಕಳೆಯಿತ್ತುವು.

ಸನ್ಮಾನಕ್ಕುತ್ತರವಾಗಿ ನುಡಿಯಲುದ್ಯುಕ್ತರಾದ ಬಲ್ಲಾಳರು ಭಾವೋತ್ಕರ್ಷದಿಂದ ಗಂಟಲು ಕಟ್ಟಿದಂತಾಗಿ ಕಂಪಿಸುವ ಸ್ವರವನ್ನೂ, ಹೃದಯದಿಂದುಕ್ಕಿ ಬಂದು ಕಣ್ಗಳಲ್ಲಿ ಹರಿದ ಬಾಷ್ಪಾಂಜಲಿಯನ್ನೂ ಕ್ರಮೇಣ ತಹಬಂದಿಗೆ ತಂದುಕೊಳ್ಳುತ್ತಾ ತಮ್ಮ ಹೃದಯ ತುಂಬಿ ಬಂದ ಕೃತಜ್ಞತೆಯನ್ನೂ, ಈ ಎಲ್ಲ ಪ್ರೀತ್ಯಾದರಗಳಿಂದ ದೂರಾಗಿ ಬೆಂಗಳೂರಿಗೆ ಹೊರಟು ನಿಂತಿರುವ ಅಗಲಿಕೆಯ ನೋವನ್ನೂ ತೋಡಿಕೊಂಡಾಗ ಅಳದ ಹೃದಯಗಳೇ ಅಲ್ಲಿದ್ದಿರಲಾರವು.

ಎಲ್ಲರ ಪ್ರಶ್ನೆಗಳಿಗುತ್ತರವಾಗಿ ಅಲ್ಲೊಂದು ವಾಸಸ್ಥಾನವು ಸಿಕ್ಕಿದ ಕಾರಣ ಗೃಹ ನಿರ್ಮಾಣವೂ ಆಯ್ತೆಂದೂ, ಹಾಗೆಂದೇ ಈಗ ಹೋಗುತ್ತಿರುವುದಾಗಿಯೂ ನುಡಿದರು. ತಮಗೆ ಸಮರ್ಪಿಸಲಾದ ಗೌರವ ನಿಧಿಯಲ್ಲಿ ರೂ.೨೫,೦೦೦- ಮೊತ್ತವನ್ನು ಅಲ್ಲೇ ಕರ್ನಾಟಕ ಸಂಘಕ್ಕೆ ದಾನವಾಗಿತ್ತು, ಮುಂಬೈ ನಗರದ ಕನ್ನಡ ಶಾಲೆಗಳ ಶಿಕ್ಷಕ ವೃಂದದ ನೆರವಿಗಾಗಿ ಅದನ್ನು ವಿನಿಯೋಗಿಸುವಂತೆ ತಿಳಿಸಿದರು. ಉಳಿದ ಮೊತ್ತವನ್ನೂ ಹೀಗೆಯೇ ಸದ್ವಿನಿಯೋಗಿಸುವ ಯೋಜನೆಯನ್ನು ರೂಪಿಸಲಾಗುವುದೆಂದೂ ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಶ್ರೇಷ್ಠ ಎಸ್.ಎಲ್.ಭೈರಪ್ಪನವರು ಬಲ್ಲಾಳರ ಕೃತಿಗಳನ್ನು ತಾನು ಬಹಳ ಮೆಚ್ಚಿರುವೆವೆನೆಂದೂ, ಮುಂಬೈ ನಗರದ ಬಗ್ಗೆ ತನಗಿದ್ದ ಪ್ರೀತಿಯು, ಇಂದಿನ ಈ ಸಮಾರಂಭದಲ್ಲಿ ಜನರ ಪ್ರೀತಿ, ವಿಶ್ವಾಸವನ್ನು ಕಣ್ಣಾರೆ ಪರಾಂಬರಿಸಿದ ಮೇಲೀಗ ಇನ್ನೂ ಹೆಚ್ಚಿಕೊಂಡಿದೆಯೆಂದೂ ಮೆಚ್ಚಿ ನುಡಿದರು. ಸದಾ ಬೆಳೆಯುತ್ತಿರುವ ಜೀವಂತ ನಗರ ಮುಂಬೈ ಎಂದೂ, ಇಲ್ಲಿನ ನೆಲ, ಜನರೊಡನೆ ಒಂದಾಗಿ ಬೆಳೆದ ಕಾರಣವೇ ಬಲ್ಲಾಳರು ಬಂಡಾಯದಂಥ ಕೃತಿಯನ್ನು ರಚಿಸುವುದು ಸಾಧ್ಯವಾಯಿತು ಎಂದೂ ನುಡಿದರು.

ಮಹಾನಗರವು ತನ್ನ ನೆಚ್ಚಿನ ಸಾಹಿತಿಗೆ ಅರ್ಪಿಸಿದ ಈ ವಿದಾಯ ಸಮಾರಂಭಕ್ಕಾಗಿ ನಗರದ ಹಲವಾರು ಕನ್ನಡ ಸಂಘ, ಸಂಸ್ಥೆಗಳು ಒಂದಾಗಿ ದುಡಿದು ಪ್ರೀತಿಯ ಅಮೃತ ವರ್ಷವನ್ನು ಹರಿಸಿ ಈ ಮಧುರಾನುಭವವನ್ನು ಅವಿಸ್ಮರಣೀಯವಾಗಿಸಿದುವು.

ಈ ಸಂದರ್ಭದಲ್ಲಿ ಮುಂಬೈಯ ಕನ್ನಡಿಗರ ಪರವಾಗಿ ಬೆಂಗಳೂರಿನ ಕನ್ನಡಿಗರೊಡನೆ ಕವಿ ಸನದಿಯವರ ನಿವೇದನೆ ಹೀಗಿತ್ತು :

‘ಮುಂಬಯಿ ಮನೆಯಂಗಳದಿ ಬೆಳೆದೊಂದು ಹೂವನ್ನು
ಬೆಂಗಳೂರಿನ ಮಡಿಲೊಳಗೊಪ್ಪಿಸುವೆವು
ಕನ್ನಾಡ ಜನಮನದ ಸೇವೆಯಲಿ ಹೊರಟವರ
ಮಧುರ ಸ್ಮರಣೆಯ ನಾವು ಜಪ್ಪಿಸುವೆವು’

ಪ್ರೇಕ್ಷಕರಾಗಿ ಈ ಸಹೃದಯದನುಬಂಧವನ್ನು ಕಣ್ಣಾರೆ ಕಂಡ ಭಾಗ್ಯ, ನಾವು ಮುಂಬೈ ಕನ್ನಡಿಗರದು. ವರ್ಷಗಳು ಸಂದಿವೆ. ಆ ವಾತ್ಸಲ್ಯ ಪಥದ ಪಥಿಕ ಆ ಕನ್ನಾಡಲ್ಲೇ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈ ಮಾನವ್ಯ ಕವಿಯೂ ಕುಮಟಾದ ತನ್ನ ನೆಲೆಯ ಮಣ್ಣಲ್ಲಿ ಒಂದಾಗಿ ಹೋಗಿದ್ದಾರೆ. ಚಿತ್ತಾಲರು, ಹಾವನೂರರು, ಕಾಮತರು, ರಾಮಚಂದ್ರ ಉಚ್ಚಿಲರು – ಎಲ್ಲರನ್ನೂ ಕಳಕೊಂಡು ಮುಂಬೈ ಕನ್ನಡ ಲೋಕ ಇಂದು ಬರಡಾಗುತ್ತಾ ಸಾಗಿದೆ.

‍ಲೇಖಕರು Admin

3 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading