ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನಿನ ಬೆನ್ನು ಹತ್ತಿ..

ಸಹನಾ ಹೆಗಡೆ ಅವರು ಛಂದ ಪುಸ್ತಕಕ್ಕಾಗಿ ಹೊಸ ಕೃತಿಯನ್ನು ಅನುವಾದಿಸಿದ್ದಾರೆ.

ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯ ಹುಡುಕಾಟ ನಡೆಸುವ ‘ಫಾಲೋಯಿಂಗ್ ಫಿಶ್’ ಆಸಕ್ತಿಕರ ಕಥನ

ಕೃತಿಯ ಲೇಖಕ ಸಮಂತ್ ಸುಬ್ರಮಣಿಯನ್ ಅವರು ಕೃತಿಗೆ ಬರೆದ ಮಾತು ಇಲ್ಲಿದೆ.

ಮನದ ಮಾತು

ಅನುವಾದ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಒಂದು ಆಕಸ್ಮಿಕ. ಹಾಗೆ ಇಟ್ಟ ಒಂದು ಹೆಜ್ಜೆ ಇಂದು ಎರಡನೆಯ ಅನುವಾದಿತ ಪುಸ್ತಕದ ಪ್ರಕಟಣೆಯ ಹಂತಕ್ಕೆ ತಂದು ನಿಲ್ಲಿಸಿದೆ. ನಾನೇ ಮೂಲ ಪುಸ್ತಕದಿಂದ ಪ್ರಭಾವಿತಳಾಗಿ ಅನುವಾದಕ್ಕೆ ತೊಡಗಿದ್ದಿರಬಹುದು ಅಥವಾ ಇಂತಹದೊಂದು ಆಲೋಚನೆಯನ್ನು ಬೇರೊಬ್ಬರು ಪ್ರೇರೇಪಿಸಿರಬಹುದು. ಅದೇನೇ ಇದ್ದರೂ ಅನುವಾದ ಪ್ರಕ್ರಿಯೆಯನ್ನು ಅದರ ಒಟ್ಟಂದದಲ್ಲಿ ಪ್ರತಿಕ್ಷಣವೆಂಬಂತೆ ಮನಃಪೂರ್ವಕವಾಗಿ ಆಸ್ವಾದಿಸಿದ್ದಂತೂ ನಿಜ. ಆಯ್ದುಕೊಂಡ ವಿಷಯ, ವಸ್ತುಗಳು ಗಂಭೀರವಾಗಿದ್ದವು, ನಾನೂ ಅವುಗಳ ಅನುವಾದದಲ್ಲಿ ಗಂಭೀರವಾಗಿಯೇ ತೊಡಗಿಕೊಂಡೆ… ನನ್ನನ್ನೇ ನಾನು ಕಳೆದುಕೊಂಡೆ.

ವಿಭಿನ್ನ ಪ್ರದೇಶಗಳು, ಪ್ರಾಂತಗಳು, ಅಲ್ಲಿಯ ಜನಜೀವನ, ಇತಿಹಾಸ, ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಇವು ನನಗೆಂದಿಗೂ ಆಸಕ್ತಿಕರ ಸಂಗತಿಗಳೇ. ಅದಕ್ಕೆ ತಕ್ಕಂತೆ ಓದಿನ ಆಯ್ಕೆಯೂ ನೋಡುವ ಕಾರ್ಯಕ್ರಮಗಳೂ ಇರುವುದು ಸ್ವಾಭಾವಿಕ. ಇವೆಲ್ಲವೂ ನನ್ನ ಅರಿವಿನ ವಿಸ್ತಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವಾಗಲೇ ಅನುವಾದಕ್ಕೆ ತೆರೆದುಕೊಂಡ ಪುಸ್ತಕಗಳೂ ಇಂತಹುದೇ ವಿಷಯಕ್ಕೆ ಸಂಬಂಧಿಸಿದ್ದಾಗಿರುವುದು ಎಷ್ಟು ಸಹಜವೋ ಅಷ್ಟೇ ಕಾಕತಾಳೀಯ…ಇಷ್ಟು ದಿನ, ಇಷ್ಟು ವರ್ಷ ಇದಕ್ಕೇ ಕಾದಿದ್ದೆನೆನ್ನುವಂತೆ.

ವಿನಿಮಯ-ವಿಕಸನಗಳು ಜೊತೆಜೊತೆಯಾಗಿ ಸಾಗುತ್ತವೆ ಎಂಬ ಮಾತಿದೆ. ಅಂತಹ ವಿಕಸನದ ಹಾದಿಯಲ್ಲಿ ಇಟ್ಟ ವಿನಿಮಯದ ಇನ್ನೊಂದು ಹೆಜ್ಜೆ ಈ ಅನುವಾದ. “ಪುಸ್ತಕ ಓದಿ ನೋಡಿ, ನಿಮಗಿಷ್ಟವಾದರೆ, ಅನುವಾದ ತರಬಹುದು” ಎಂಬುದಾಗಿ ವಸುಧೇಂದ್ರರ ಕರೆಬಂದ ಮರುದಿನವೇ ಪುಸ್ತಕ ನನ್ನ ಕೈಯಲ್ಲಿತ್ತು. ಓದಿದೆ, ಮರುಳಾದೆ… ಮುಂದೆ ನಡೆದಿದ್ದೆಲ್ಲ, ಇಂದು ನಿಮ್ಮ ಕೈಯಲ್ಲಿದೆ.

ಅನೇಕ ರಾಜ್ಯಗಳಲ್ಲಿ ಸುತ್ತಾಡಿ, ಅಲ್ಲಿನ ಕರಾವಳಿ ಪ್ರದೇಶದಲ್ಲಿ ಮೀನು ಮತ್ತದಕ್ಕೆ ಸಂಬAಧಿಸಿದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತ, ಅದು ಹುಟ್ಟುಹಾಕಿದ ಜೀವನ ಶೈಲಿ, ಆಹಾರ-ಸಂಸ್ಕೃತಿಗಳನ್ನು ಅನಾವರಣಗೊಳಿಸುತ್ತ ಸಾಗುವ ಸಮಂತ್ ಸುಬ್ರಮಣಿಯನ್‌ರವರ ಬರಹ ತನ್ನ ಮಟ್ಟಸವಾದ ದನಿ ಮತ್ತು ಬರಹದುದ್ದಕ್ಕೂ ಅವರು ಕಾಯ್ದುಕೊಂಡ ಸಮಚಿತ್ತದ ಕಾರಣ ಮನಸ್ಸನ್ನು ಸೆಳೆಯಿತು. ಶಿಸ್ತುಬದ್ಧ ಆಲೋಚನಾಕ್ರಮ, ಅಚ್ಚುಕಟ್ಟಾದ ಪ್ರಸ್ತುತಿ, ಶೈಲಿ, ಸಭ್ಯಭಾಷೆಯ ಬಳಕೆ, ಸಮಯೋಚಿತ ಪದಪ್ರಯೋಗ, ಉತ್ತಮ ಅಭಿರುಚಿ-ಅಭಿವ್ಯಕ್ತಿ, ವಿಷಯದ ಗಾಂಭೀರ್ಯ, ಆ ಕುರಿತು ಚಿಂತನೆಗೆ ಹಚ್ಚುವ ವಿಧಾನ, ತುಟಿಯಂಚಿನಲ್ಲಿ ಮೆಲುನಗೆಯೊಂದನ್ನು ತರುವ ತಿಳಿಹಾಸ್ಯ, ನೋವನ್ನುಂಟುಮಾಡದ ಲಘು ವಿನೋದಗಳೆಲ್ಲವೂ ಆಕರ್ಷಿಸಿದವು…ಅದೆಷ್ಟೋ ಮಾಹಿತಿ, ಜ್ಞಾನಗಳಿಗೆ ಅದು ಬಾಗಿಲು ತೆರೆಯಿತು.

ಅನುವಾದಿಸುವುದೆಂದರೆ, ನನ್ನ ಮಟ್ಟಿಗೆ ಅದೊಂದು ಧ್ಯಾನಸ್ಥ ಸ್ಥಿತಿ. ಈ ಸ್ಥಿತಿಗೆ ಬೇಕುಬೇಕಾದಾಗಲೆಲ್ಲ ಏರಲು, ಏರಿದ ಮೇಲೆ ಅಲ್ಲಿಯೇ ಇದ್ದು ವಿಹರಿಸಲು ಅಗತ್ಯವಾಗಿದ್ದ ಕುಟುಂಬದ ಸದಸ್ಯರ ಪ್ರೀತಿ, ಸಹಕಾರ ನನಗೆ ಸಿಕ್ಕಿದೆ. ಮೂಲ ಇಂಗ್ಲಿಷ್ ಪುಸ್ತಕವನ್ನು ಓದಿ, ಒಳ್ಳೆಯ ಆಯ್ಕೆ, ಅನುವಾದಿಸು ಎಂದು ಪ್ರೋತ್ಸಾಹಿಸಿದ ಮಗ ಡಾ.ಸಮರ್ಥ್ ಹೆಗಡೆ, ಫಿಶ್ ಫಾಲೋ ಮಾಡ್ತಾ ಮಾಡ್ತಾ ಎಲ್ಲಿಯವರೆಗೆ ಬಂದೆ, Are you not following fish today? ಎಂದು ಆಗಾಗ ಪ್ರಶ್ನಿಸುತ್ತ ಮತ್ತೆ ಮತ್ತೆ ನಾನು ಕೆಲಸದಲ್ಲಿ ತಲ್ಲೀನಳಾಗುವಂತೆ ಮಾಡಿದ ಮಗಳು ಸೃಷ್ಟಿ, ಅದೆಷ್ಟೋ ವಿಷಯಗಳ ಬಗ್ಗೆ ನಿಖರ ಮಾಹಿತಿ, ಅಧಿಕೃತತೆಯನ್ನು ಪಡೆಯುವ ಹುಡುಕಾಟದಲ್ಲಿಯೂ ನೆರವಾದರು. ಪುಸ್ತಕ ಪ್ರೀತಿಯನ್ನು ಹುಟ್ಟಿನೊಂದಿಗೇ ಹಾಕಿಕೊಟ್ಟು, ನೀರೆರೆದು ಪೋಷಿಸಿದ ಅಪ್ಪ-ಅಮ್ಮ, ಒಡಹುಟ್ಟಿದವರು ಹಾಗೂ ವಿಸ್ತೃತ ಕುಟುಂಬದ ಆಪ್ತ-ನಿಕಟ ಸದಸ್ಯರು, ತಂತ್ರಜ್ಞಾನ-ಸೌಲಭ್ಯಗಳ ವಿಷಯದಲ್ಲಿ ಬೆನ್ನೆಲುಬಾದ ಹಾಗೂ ಜೀವನ ನಿರ್ವಹಣೆಗೆ ಸಂಬAಧಿಸಿದAತೆ ಯಾವ ರೀತಿಯಲ್ಲಿಯೂ ತಲೆಕೆಡಿಸಿಕೊಳ್ಳಬೇಕಿಲ್ಲದೇ ನಿರಾಳವಾಗಿ ಓದಿ, ಬರೆದು ಮಾಡಿಕೊಂಡಿರಬಹುದಾದ ಸ್ಥಿತಿಯಲ್ಲಿ ನನ್ನನ್ನು ಸದಾ ಇಟ್ಟಿರುವ ಪತಿ ಸುಬ್ಬರಾವ್ ಹೆಗಡೆ, ವಿನಾಕಾರಣ ಪ್ರೀತಿಸುವ ಅಪಾರ ಸ್ನೇಹಿತರು ಎಲ್ಲರಿಗೂ… ಎದೆಯಾಳದಿಂದೊಂದು ನಲುಮೆಯ ನುಡಿ

ಲೇಖಕರು ಉಲ್ಲೇಖಿಸಿದ ವಿವಿಧ ಭಾಷೆಗಳ ಪದಗಳು ಹಾಗೂ ಅನೇಕಾನೇಕ ಸ್ಥಳನಾಮಗಳ ಆದಷ್ಟೂ ಸರಿಯಾದ ಉಚ್ಚಾರಗಳನ್ನು ಅಧಿಕೃತ ಮೂಲಗಳಿಂದ ಹುಡುಕಿ ಕನ್ನಡದಲ್ಲಿಡುವುದು ನನ್ನ ಉದ್ದೇಶವಾಗಿತ್ತು. ಇದಕ್ಕೆ ಪ್ರೀತಿಯಿಂದ ಸಹಕರಿಸಿದ, ಶ್ರೀಮತಿ ಅದಿತಿ ಮುಖರ್ಜಿ (ಬಂಗಾಳಿ), ಶ್ರೀಮತಿ ಲಕ್ಷ್ಮಿ ಶಂಕರ ಅಯ್ಯರ್ (ತಮಿಳು), ಶ್ರೀ ಮಲಿಪೆಡ್ಡಿ ರಮೇಶ ರೆಡ್ಡಿ (ತೆಲುಗು), ಶ್ರೀಮತಿ ಪ್ರಿಯಾ ವಿನೋದ್ (ಮಲಯಾಳಂ), ಟ್ರಿಶಾ ಸಾಲ್ದಾನಾ (ಗೋವಾ), ಶ್ರೀ ವಸಂತ. ಜಿ. ಟಿಕೇಕಾರ್ (ಮರಾಠಿ), ಹಾಗೂ ಡಾ. ಅನುಪಮಾ ದೇಸಾಯಿ (ಗುಜರಾತಿ) ಇವರೆಲ್ಲರಿಗೂ… ಹೃತ್ಪೂರ್ವಕ ಧನ್ಯವಾದಗಳು.

ಕರಾವಳಿಯಗುಂಟ ಹೀಗೆ ಒಮ್ಮೆ ಸುತ್ತಾಡಿ, ನಮ್ಮದೇ ನಾಡಿನ ಸಮೃದ್ಧ ನೆಲದಲ್ಲಿ ತಿರುಗಾಡೋಣ. ಆ ಮೂಲಕ ವಿಭಿನ್ನ ಆಚಾರ, ವಿಚಾರಗಳನ್ನು ಅರಿಯುತ್ತ ಅರಿವಿನ ದಿಗಂತವನ್ನು ವಿಸ್ತರಿಸಿಕೊಳ್ಳೋಣ.

ಸಹನಾ ಹೆಗಡೆ

ನಾವು ಇಂಡೋನೇಷಿಯಾದಲ್ಲಿ ನೆಲೆಸಿದ್ದಾಗ, ನಾನು ಹನ್ನೆರಡರ ಬಾಲಕ. ಒಮ್ಮೆ ನಾನು ಮತ್ತು ನನ್ನ ಸಹೋದರಿ, ನಮ್ಮ ತಂದೆತಾಯಿಯರೊಡನೆ ರಾತ್ರಿಯ ಭೋಜನಕೂಟವೊಂದಕ್ಕೆ ಹೋಗಿದ್ದೆವು. ಅಲ್ಲಿಯ ಭಾರತೀಯ ನಿವಾಸಿಗಳ ದಿನಚರಿಗಳಲ್ಲಿ ಈ ಕೂಟಗಳು ಸಾಮಾನ್ಯವಾಗಿದ್ದವು. ಯಾವತ್ತಿನಂತೆ ಚಿಕ್ಕವರಾದ ನಮ್ಮನ್ನು ಗೆಳೆಯ-ಗೆಳತಿಯರೊಡನೆ ಕುಳಿತು ಟಿವಿ ನೋಡಲು ಹಾಗೂ ವೀಡಿಯೋ ಗೇಮ್ಸ್ ಆಡಲು ಮಹಡಿಗೆ ಕಳುಹಿಸಲಾಯಿತು. ಬಹುಶಃ ತಮ್ಮ ಮಕ್ಕಳು ಇತ್ತೀಚೆಗೆ ಹೇಗೆ ಕೇವಲ ಟಿವಿ ನೋಡುವುದರಲ್ಲಿ ಮತ್ತು ವೀಡಿಯೋ ಗೇಮ್ಸ್ ಆಡುವುದರಲ್ಲಿಯೇ ಸಮಯ ಕಳೆಯುತ್ತಾರೆ ಎಂದು ದೂರುವುದಕ್ಕೆಂದೇ ನಮ್ಮ ಪಾಲಕರು ಮತ್ತು ಇನ್ನಿತರ ಪಾಲಕರು ಕೆಳಗೆ ಕುಳಿತಿದ್ದರು.

ಒಂದು ಅಥವಾ ಒಂದೂವರೆ ಗಂಟೆಯ ನಂತರ ಬರಹೇಳಿದಾಗ ನಾವು ಕೆಳಗಿಳಿದು ಊಟದ ಕೋಣೆಗೆ ಬಂದೆವು. ಅಲ್ಲಿ ದೊಡ್ಡದೊಂದು ಮೇಜಿನ ಮೇಲೆ ಹಲವಾರು ತಟ್ಟೆಗಳಲ್ಲಿ ಆಹಾರವನ್ನು ಇಡಲಾಗಿತ್ತು. ನನ್ನ ನೆನಪಿನಲ್ಲಿ ಅದೊಂದು ದೃಶ್ಯ ಹಾಗೇ ಉಳಿದುಕೊಂಡಿತ್ತು ಎಂದು ಕಾಣುತ್ತದೆ. ತರಲೆ ವಿನ್ಯಾಸಕಾರನ ಹಾಗೆ ಅನಂತರ ಅದನ್ನು ಮನಸ್ಸಿನ ಫೋಟೋಶಾಪಿನಲ್ಲಿ ತೀಕ್ಷ÷್ಣಗೊಳಿಸಿದೆ. ಅನವಶ್ಯಕ ಇತರ ವ್ಯಂಜನಗಳ ವಿವರಗಳನ್ನು ಮಸುಕುಗೊಳಿಸಿದೆ. ಮೇಜಿನ ಮೇಲೆ ಕೇಂದ್ರಸ್ಥಾನದಲ್ಲಿದ್ದುದನ್ನು ನಿಚ್ಚಳವಾಗಿರುವಂತೆ ಮಾಡಿದೆ. ಅದೊಂದು ಹಬೆಯಲ್ಲಿ ಬೇಯಿಸಿದ ಇಡೀ ಮೀನಾಗಿತ್ತು. ಅದರ ಕೆಟ್ಟ ಬೂದು ಬಣ್ಣವು ನನಗೆ ಆ ಕ್ಷಣ ಸಾವನ್ನು ನೆನಪಿಸಿತು. ಅದೃಶ್ಯ ಎಚ್ಚರಿಕೆಯೊಂದರ ಹಾಗೆ ಮೇಜಿನ ಮೇಲೆ ಕಂಡೂ ಕಾಣದಂತೆ ಸುಳಿದಾಡುತ್ತಿದ್ದ ಒಂದು ವಾಸನೆಯೂ ನೆನಪಿದೆ. ಅಂದು ರಾತ್ರಿ ನಾನು ಹೆಚ್ಚೇನೂ ಊಟ ಮಾಡಲಿಲ್ಲ.

ರುಚಿ ಎನ್ನುವುದು ನಮ್ಮ ಇಂದ್ರಿಯಾನುಭವಗಳಲ್ಲಿ ಅತ್ಯಂತ ಅನೂಹ್ಯವಾದದ್ದು. ಸಾಮಾನ್ಯವಾಗಿ ತನ್ನ ಮೊದಲಿನ ಸಹಜಸ್ಥಿತಿಗೆ ಹಿಂದಿರುಗುವ ಶಕ್ತಿಯನ್ನು ಅದು ಹೊಂದಿದ್ದರೂ, ಕೆಲವು ಬಾರಿ ಮಾತ್ರ ಒಂದು ಕೆಟ್ಟ ಅನುಭವದಿಂದಾಗಿ ಜೀವನಪರ್ಯಂತ ವಿಮುಖಗೊಳ್ಳುವಷ್ಟು ಕೋಮಲವೂ ಆಗಿರುತ್ತದೆ. ಅಂದಿನ ಭೋಜನಕೂಟವು ನನ್ನನ್ನು ಮುಂದೆ ದಶಕದ ಕಾಲ ಮೀನಿನಿಂದ ದೂರವೇ ಇರುವಂತೆ ಮಾಡಿಬಿಟ್ಟಿತ್ತು. ಇಪ್ಪತ್ತರ ಆರಂಭದಲ್ಲಿ ನಾನು ಜಾಗರೂಕತೆಯಿಂದ ಕಡಲ ಉಣಿಸುಗಳನ್ನು ಮತ್ತೆ ರುಚಿ ನೋಡಲು ಆರಂಭಿಸಿದಾಗ ಸಾಧ್ಯವಿದ್ದಲ್ಲೆಲ್ಲ ಸುರಕ್ಷಿತವಾದ, ಹಿಟ್ಟಿನಿಂದ ಮುಚ್ಚಿ ವಾಸನೆಯನ್ನು ಹತ್ತಿಕ್ಕಿದ ಅಥವಾ ಕರಿದ ಪದಾರ್ಥಗಳನ್ನೇ ಹುಡುಕಿಕೊಳ್ಳುತ್ತಿದ್ದೆ. ಮೀನು ಮತ್ತು ಚಿಪ್ಸ್ ಅನ್ನು ಹೇಗಾದರೂ ಎದುರಿಸಿಬಿಡುತ್ತಿದ್ದೆ. ಆದರೆ ಹಸಿಮೀನು ಹಾಕಿದ ಸೂಪ್, ಭಟ್ಟಿಯಲ್ಲಿ ಸುಟ್ಟ ಅಥವಾ ಹುರಿದ ಮೀನನ್ನು ತಿನ್ನಲು ಆಗುತ್ತಿರಲಿಲ್ಲ. ಹಬೆಯಲ್ಲಿ ಬೇಯಿಸಿದ ಮೀನೆಂದರೆ ಇನ್ನೂ ಕಷ್ಟವೆನಿಸಿದರೂ ಹೇಳಿಕೊಳ್ಳುವಷ್ಟು ಕಠಿಣವಾಗೇನೂ ಇರಲಿಲ್ಲ. ನನ್ನ ಕುಟುಂಬದವರೆಲ್ಲ ಕಟ್ಟಾ ಸಸ್ಯಾಹಾರಿಗಳಾಗಿದ್ದರೂ, ಊಟಕ್ಕೆಂದು ಹೊರಗೆ ಹೋದಾಗೆಲ್ಲ ನಾನು ಮೊಟ್ಟೆಮಾಂಸಗಳನ್ನು ತಿಂದುAಡು ಸಾಕಷ್ಟು ಸಂತೋಷವಾಗಿದ್ದೆ.

ಈ ಸಂಗತಿಗಳನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಎನ್ನುವುದರ ಮೇಲೆ, ಮೀನುಗಳ ಬಗ್ಗೆ ಬರೆಯಲು ನಾನು ಅತ್ಯಂತ ಅಸಮರ್ಪಕ ವ್ಯಕ್ತಿಯೇ ಅಥವಾ ಅತ್ಯಂತ ಸಮರ್ಪಕ ವ್ಯಕ್ತಿಯೇ ಎನ್ನುವುದು ನಿರ್ಧಾರವಾಗುತ್ತದೆ. ಸಹಜವಾಗಿಯೇ ನಾನು ಎರಡನೇ ಅಭಿಪ್ರಾಯವನ್ನು ಸ್ವೀಕರಿಸಲು ಇಷ್ಟಪಡುತ್ತೇನೆ. ಮೀನಿಗೆ ಸಂಬAಧಿಸಿದ ಮಡಿವಂತ ನೆನಪುಗಳ ಭಾರ ಈಗ ಇರದಿರುವುದೂ ಒಂದು ವಿಶಿಷ್ಟವಾದ ಲಾಭವೆಂದು ನಂಬುತ್ತೇನೆ. ಆದರೆ ಈ ಪುಸ್ತಕವು ಮೀನನ್ನು ಕೇವಲ ಒಂದು ಆಹಾರವೆಂದು ಪರಿಗಣಿಸುವುದಿಲ್ಲ, ಅದರಾಚೆಗೆ ದೃಷ್ಟಿ ನೆಟ್ಟಿದೆ. ದೀರ್ಘವಾದ ಹಾಗೂ ವೈವಿಧ್ಯಮಯವಾದ ತೀರಪ್ರದೇಶವನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಮೀನು ಎನ್ನುವುದು ಸಂಸ್ಕöÈತಿ, ಇತಿಹಾಸ, ಕ್ರೀಡೆ, ವಾಣಿಜ್ಯ, ಸಮಾಜ ಹೀಗೆ ಹಲವಾರು ಜಗತ್ತುಗಳ ಕೇಂದ್ರಬಿAದುವಾಗಬಹುದು. ಕರಾವಳಿಯನ್ನೇ ಒಟ್ಟಾಗಿ ಹೆಣೆದುಬಿಡಬಹುದಾದ ನಾಟಕೀಯ ಬೀಸು ಸಂಗತಿ ಇದಾಗಬಹುದು. ಬಂಗಾಳದ ಹೆಮ್ಮೆ ಮತ್ತು ಸಂಭ್ರಮದ ಸಂಗತಿಯಾದ ಹಿಲ್ಸಾ ಮೀನು, ಕೊಲಕತ್ತಾ ಕರಾವಳಿಯ ವಿರುದ್ಧ ದಿಕ್ಕಾದ ಗುಜರಾತಿನ ಮೀನು ಮಾರುಕಟ್ಟೆಗಳಿಂದ ಇತ್ತೀಚೆಗೆ ಸರಬರಾಜಾಗುವುದನ್ನು ಕಾಣಬಹುದು. ಅಥವಾ ಈ ಸಂಗತಿಯು ಕರಾವಳಿಯನ್ನು ಹಲವಾರು ರೀತಿಯ ಉತ್ಕಟತೆಗಳಲ್ಲಿ, ಸಂಪ್ರದಾಯ-ಪದ್ಧತಿಗಳಲ್ಲಿ ವಿಭಜಿಸಬಹುದು. ಪ್ರತಿಯೊಂದು ವಿಭಜನೆಯೂ ತನಗಿಂತ ನೂರು ಕಿಲೋಮೀಟರ್ ಉತ್ತರಕ್ಕೋ ದಕ್ಷಿಣಕ್ಕೋ ಕಂಡುಬರುವುದಕ್ಕಿAತ ಭಿನ್ನ. ಈ ಜಗತ್ತುಗಳ ಒಂದೇ ಒಂದು ಅಂಶವನ್ನು ಹೆಚ್ಚು ನಿಕಟವಾಗಿ ಅವಲೋಕಿಸುವುದೆಂದರೂ, ಮೀನಿನ ಬಲೆಯಲ್ಲಿ ಅತ್ಯಂತ ಸ್ಫುಟವಾಗಿ ಕಣ್ಣಿಗೆ ಕಾಣುವ ಎಳೆಯೊಂದನ್ನು ಹಿಡಿದು ಎತ್ತಿದಾಗ ಇದ್ದಕ್ಕಿದ್ದಂತೆ ಇಡೀ ಬಲೆಯೇ ಎದ್ದು ನೋಟಕ್ಕೆ ದಕ್ಕುವ ಹಾಗೆ.

ಕೊಲಕತ್ತಾದಿಂದ ಆರಂಭಿಸಿ, ಭಾರತದ ತೀರದುದ್ದಕ್ಕೂ ಹಲವಾರು ತಿಂಗಳುಗಳ ಕಾಲ ನಿರಂತರ ಅಡ್ಡಾಡುತ್ತ ತಿರುಗಾಡಲು ಇಷ್ಟಪಡುತ್ತಿದ್ದೆನಾದರೂ ಹಾಗೆ ಪ್ರಯಾಣ ಮಾಡಲು ನನಗೆ ಸಾಧ್ಯವಾಗಲಿಲ್ಲ. ಬದಲಿಗೆ, ಉದ್ಯೋಗದ ಬದುಕಿನಿಂದ ಆಗಾಗ ತುಸು ದೊಡ್ಡ ರಜೆ ಪಡೆದುಕೊಂಡು ಬೇರೆ ಬೇರೆ ಭಾಗದ ಕಡೆ ಪ್ರಯಾಣ ಮಾಡಿದೆ. ಆ ಪ್ರಯಾಣಗಳೇ ಈ ಪುಸ್ತಕದ ಪ್ರತ್ಯೇಕ ಅಧ್ಯಾಯಗಳಾದವು. ಬಹಳಷ್ಟು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದೆ. ಬಸ್ಸು, ಮೋಟಾರ್ ಸೈಕಲ್, ರೈಲು, ಕಾರುಗಳಲ್ಲಿಯೂ ತಿರುಗಾಡಿದೆ. ಡಜನ್ನುಗಟ್ಟಲೆ ಆಟೋ ರಿಕ್ಷಾಗಳಲ್ಲಿ (ಜನಸಂಚಾರವಿರದ ಕೇರಳದ ಹೆದ್ದಾರಿಯಲ್ಲಿ ಕೆಟ್ಟದಾಗಿಯಾದರೂ ಸರಿ, ನಾನೇ ಆಟೋ ಓಡಿಸಿದ್ದನ್ನೂ ಸೇರಿಸಿ), ಮುರಿದು ಬೀಳುವಂತೆ ಕಾಣುತ್ತಿದ್ದ ಹಲವಾರು ದೋಣಿಗಳಲ್ಲಿ, ಎರಡು ಬಾರಿ ಸೈಕಲ್ ಮೇಲೆ ಹಾಗೂ ಒಮ್ಮೆ ತಾಂತ್ರಿಕ ಹೆಸರೇ ಇಲ್ಲದ, ಸುಧಾರಿತ ಸೈಕಲ್ ರಿಕ್ಷಾವೊಂದರ ಮೇಲೆ ಓಡಾಡಿದೆ.

ಬಹುತೇಕ ಎಲ್ಲಾ ವೇಳೆಯೂ ನಾನು ಪಯಣಿಸಿದ್ದು ಒಬ್ಬಂಟಿಯಾಗಿಯೇ. ಹಾಗಾಗಿ, ನನ್ನ ಸ್ನೇಹಿತರು ಪರಿಚಯಿಸಿದ ಅಪರಿಚಿತ ಜನರ ಒಳ್ಳೆಯತನವನ್ನೇ ಅವಲಂಬಿಸಿದ್ದೆ. ಅಪರಿಚಿತ ಲೋಕವೊಂದನ್ನು ಪ್ರವೇಶಿಸುವಾಗ ಅವರು ಕನಿಷ್ಠಪಕ್ಷ ಅಂತಹ ಪ್ರವೇಶದ ಆರಂಭಿಕ ಹಂತವನ್ನಾದರೂ ಸುಗಮಗೊಳಿಸುತ್ತಿದ್ದರು. ಸ್ಥಳೀಯ ಭಾಷೆ ಅರ್ಥವಾಗದಿದ್ದಾಗ ಅವರು ಭಾಷಾಂತರಿಸುತ್ತಿದ್ದರು, ಉಪಯುಕ್ತ ಟಿಪ್ಪಣಿಗಳನ್ನು ಸೇರಿಸುತ್ತಿದ್ದರು. ಅವರ ಹಿತಕರವಾದ ನೆರಳಿನಲ್ಲಿ, ನಾನಲ್ಲದಿದ್ದರೂ ಅವರು ಇಲ್ಲಿಗೆ ಸೇರಿದವರು ಎಂಬ ಧೈರ್ಯದಲ್ಲಿ ನಾನು ನಿರಂತರವಾಗಿ ಮನಬಂದAತೆ ಅಡ್ಡಾಡಬಹುದಿತ್ತು, ನೋಡಬಹುದಿತ್ತು, ಕೇಳಬಹುದಿತ್ತು, ಬೇಕಾದಲ್ಲಿ ಸಂಭಾಷಣೆಯನ್ನು ಶುರುಮಾಡಬಹುದಿತ್ತು. ವಿ.ಎಸ್. ನೈಪಾಲ್ ಅವರು ಹೇಳಿದಂತೆ, `ಜನರ ಅನ್ವೇಷಕ, ಕತೆಗಳ ಶೋಧಕ’ ನಾಗಲು ಬಯಸಿದೆ.

ಭಾರತದ ಕರಾವಳಿಯುದ್ದಕ್ಕೂ ಆರಾಮವಾಗಿ ಸುತ್ತುವುದರಲ್ಲಿ ಹಾಗೂ ಆ ಕುರಿತು ಬರೆಯುವುದರಲ್ಲಿ ಇತರರನ್ನು ನನ್ನದೇ ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಆ ಅರ್ಥದಲ್ಲಿ ಇದು ಪ್ರವಾಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ಹೇಳುವ ಪುಸ್ತಕವಲ್ಲ. ಬದಲಿಗೆ ಇದೊಂದು ಕೇವಲ ಪ್ರವಾಸ ಕಥನ. ನನ್ನ ಪ್ರವಾಸಗಳ ಅನುಭವ ಹಾಗೂ ಅವಲೋಕನಗಳ, ನಾನು ಭೇಟಿಮಾಡಿದ ಜನರೊಂದಿಗೆ ಆಡಿದ ಮಾತುಕತೆಗಳ, ಯಾವ ವಿಷಯಗಳು ನನ್ನನ್ನು ತುಂಬಾ ಸೆಳೆದವೋ ಅವುಗಳನ್ನು ಕುರಿತು ನಾನು ಮಾಡಿದ ಶೋಧನೆಗಳ ದಾಖಲೆಯಷ್ಟೆ. ಎಲ್ಲಾ ಪ್ರವಾಸ ಬರಹಗಳೂ ಒಟ್ಟಾರೆ ಇರಬೇಕಾದ್ದೇ ಹೀಗೆ ಎಂದು ನಾನು ನಂಬುತ್ತೇನೆ. ಇದೊಂದು ಸರಳವಾದ, ಯಾವುದೇ ಆಲೋಚನೆ-ವಿಚಾರಗಳು ತಪ್ಪಾಗಿದ್ದರೆ ಮನವೊಲಿಸುವ, ಪೂರ್ವಗ್ರಹ ಪೀಡಿತ ನಂಬಿಕೆಗಳನ್ನು ನಾಶಪಡಿಸುವ, ಬದಲಾಗುತ್ತಲೇ ಇರುವ ಮತ್ತು ಸಾಪೇಕ್ಷ ಗುಣಸ್ವರೂಪವನ್ನು ಹೊಂದಿರುವ, ಸತ್ಯವನ್ನು ಅನ್ವೇಷಿಸುವ ಹಳೆಯ ಕಾಲದ ಪತ್ರಿಕೋದ್ಯಮ.

ಸಮಂತ್ ಸುಬ್ರಮಣಿಯನ್

‍ಲೇಖಕರು avadhi

26 August, 2020

1 Comment

  1. Prajna Mattihalli

    Wah Sahana very interesting book. Congratulations dear for your dedicated work. Best wishes to your book

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading