ಮೀನಾಕ್ಷಿ ಜೀಜಿವಿಷಾ ಕವಿತೆಗಳು…

ಪ್ರಸಾದ್ ನಾಯ್ಕ್

ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು.  ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು.  ‘ಅವಧಿ’ಯಲ್ಲಿ ಇವರು ಬರೆಯುತ್ತಿದ್ದ ‘ಹಾಯ್ ಅಂಗೋಲಾ!’ ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ ‘ಹಾಯ್ ಅಂಗೋಲಾ!’ ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ. 

ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ ‘ಪಟ್ಟಾಂಗ’ ಅಂಕಣವೂ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ, ಪುರವಣಿಗಳಲ್ಲಿ ಇವರ ಕಥೆಗಳು, ಲೇಖನಗಳು, ಸರಣಿಬರಹಗಳು ಮತ್ತು ಅನುವಾದಗಳು ಪ್ರಕಟವಾಗಿವೆ. 

ಈ ಸಂಚಿಕೆಯಲ್ಲಿ ಹಿಂದಿಯ ಕವಿಯತ್ರಿ ಮೀನಾಕ್ಷಿ ಜೀಜಿವಿಷಾ ಕವನಗಳನ್ನು ಅನುವಾದಿಸಿದ್ದಾರೆ. 

ಮೀನಾಕ್ಷಿ ಜೀಜಿವಿಷಾ ಹಿಂದಿಯ ಕವಿಯಿತ್ರಿ. ಇವರು ಹರಿಯಾಣಾದ ಫರೀದಾಬಾದ್‌ನಲ್ಲಿದ್ದಾರೆ.  ಕ್ಷಿತಿಜ್‌ ಖೋಜ್ತೆ ಪಕೇರು, ಯಾದೇ ಕಾವ್ಯಧಾರಾ, ಆವಾಜ್‌ ಮೇಂ ಉತರ್ತಿ ದುನಿಯಾ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಿಯಸಿ ಮಹಾದೇವಿ ಸಮ್ಮಾನ್‌, ದೀಪಶಿಖಾ ಸಮ್ಮಾನ್‌ ಮೊದಲಾದ ಪುರಸ್ಕಾರಗಳನ್ನು ಪಡೆದಿದ್ದಾರೆ.

1. ‘ಒಳ್ಳೆಯದೇ ಆಯಿತು’

ಈ ಜಗತ್ತಿನ ಯಾವುದೋ ಪಟ್ಟಣದ
ಯಾವುದೋ ಗಲ್ಲಿಯ, ಯಾವುದೋ ಕಟ್ಟಡವೊಂದರಲ್ಲಿ,
ಕೂತ ಓರ್ವ ಹೆಣ್ಣುಮಗಳು ದಿನಪತ್ರಿಕೆಯನ್ನು ಓದುತ್ತಿದ್ದಾಳೆ…
ಕಿಲಾಡಿ ಪ್ರೇಮಿಯೊಬ್ಬ ತನ್ನ ಮುಗ್ಧೆ ಪ್ರಿಯತಮೆಯೊಬ್ಬಳನ್ನು ವಂಚಿಸಿದನಂತೆ…
ಭಯಪಟ್ಟು ಯೋಚಿಸುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಯಾರನ್ನೂ ಪ್ರೀತಿಸಲಿಲ್ಲ…
ಯಾರಿಂದಲೂ ಮೋಸ ಹೋಗಲಿಲ್ಲ…

ಇವಳಿಗೆ ಸುದ್ದಿ ಸಿಕ್ಕಿತು,
ಮಾರುಕಟ್ಟೆಯಲ್ಲಿ, ನಾಲ್ಕು ರಸ್ತೆಗಳು ಕೂಡುವಲ್ಲಿ,
ನಿನ್ನೆ ರಾತ್ರಿ ಯಾವುದೋ ಹೆಣ್ಣೊಬ್ಬಳ ಮೇಲೆ ಅತ್ಯಾಚಾರವಾಯಿತಂತೆ…
ಭಯಪಟ್ಟು ತನ್ನನ್ನು ತಾನೇ ಸಂತೈಸುವಂತೆ ಹೇಳುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಈ ಮನೆಯ ಗೋಡೆಗಳನ್ನು ದಾಟಲಿಲ್ಲ…

ಓಣಿಯ ಹೆಂಗಸರಿಂದ, ತನ್ನ ಗೆಳತಿಯರಿಂದ ಮಾತುಗಳು ಕೇಳುತ್ತವೆ,
ಧನದಾಹದಿಂದ ಗಂಡಿನ ಮನೆಯವರು
ಸುಂದರ-ಸುಶೀಲ ಸೊಸೆಯೊಬ್ಬಳನ್ನು ಸುಟ್ಟುಬಿಟ್ಟರೆಂದು…
ಬದುಕಿಕೊಂಡೆ ಎಂಬಂತೆ ಸಮಾಧಾನದ ನಿಟ್ಟುಸಿರಿಡುತ್ತಾಳೆ ಇವಳು,
ಒಳ್ಳೆಯದೇ ಆಯಿತು,
ತಾನೆಂದೂ ಸುಳ್ಳು ಸಂಬಂಧಗಳ ಹಸಿದಾರದಿಂದ ಬಂಧಿಸಲ್ಪಟ್ಟಿಲ್ಲವೆಂದು…

ಹಿರಿಯರ, ಸಂಬಂಧಿಗಳ ಕತೆಗಳಂತಿರುವ ಮಾತುಗಳು ಅವಳಿಗೆ ಕೇಳುತ್ತಿವೆ,
ತಮ್ಮವರದ್ದೇ ಸುಳ್ಳು ಮತ್ತು ವಂಚನೆಗಳ ಬಗ್ಗೆ…
ಒಳಗೊಳಗೇ ಖುಷಿಯಾಗುತ್ತಾಳೆ ಇವಳು,
ಒಳ್ಳೆಯದೇ ಆಯಿತು, ತಾನೆಂದೂ ಯಾರನ್ನೂ ನಂಬಲಿಲ್ಲವೆಂದು…

ಹೀಗಂದುಕೊಳ್ಳುತ್ತಲೇ,
ಮನೆಯ ಉಸಿರುಗಟ್ಟಿಸುವ ನಾಲ್ಕು ಗೋಡೆಗಳ ನಡುವೆ,
ವ್ಯರ್ಥವಾಯಿತೊಂದು ಜೀವನ…
ನಿರುದ್ದೇಶದ್ದು, ನಿರುಪಾಯದ್ದು, ನಿರರ್ಥಕ…

ಅದೆಷ್ಟೋ ಸಾಧ್ಯತೆಗಳಿದ್ದ ಬದುಕಾಗಿತ್ತದು,
ಈ ಬಗ್ಗೆಯೂ ನೀನು ಹೇಳುತ್ತೀಯಾ,
ಸದ್ಯ ಒಳ್ಳೆಯದೇ ಆಯಿತು, ಎಂದೆಲ್ಲಾ…

2. ‘ಮಹಾನಗರ’

ಮಹಾನಗರದಿ
ಮಾರ್ಬಲ್ ಮತ್ತು ಗ್ರಾನೈಟ್ ಗಳಿಂದ ಮಾಡಲ್ಪಟ್ಟ
ವಿಲಾಸಿ ಕಾಲೊನಿಯ ಫ್ಲಾಟ್ ಒಂದರ ನಾಲ್ಕನೇ ಮಾಳಿಗೆಯಲ್ಲಿ ಕೂತು
ಒಂದು ದಿನ ತನ್ನ ಹಳ್ಳಿಯ ಬಗ್ಗೆ ನೆನೆಸಿಕೊಂಡು
ಕಣ್ತುಂಬಿಕೊಳ್ಳುತ್ತಾ ನಾನಂದೆ,
”ಹಕ್ಕಿಗಳ ಮಧುರ ಕಲರವವನ್ನು ಕೇಳುವ ಹಂಬಲವಾಗಿದೆ ನನಗೆ,
ಹಚ್ಚಹಸಿರ ಮರಗಳು ಹವೆಗೆ ಹಾಯಾಗಿ ತೊಯ್ದಾಡುವುದನ್ನು
ಕಾಣುವ ಹಂಬಲವಾಗಿದೆ ನನಗೆ,
ಶ್ರಾವಣದ ಮಳೆಯಲ್ಲಿ ನೆನೆಯುವ ಹಂಬಲ ನನಗೆ,
ಬಣ್ಣಬಣ್ಣದ ಹೂಗಳನ್ನು ಸ್ಪರ್ಶಿಸುವ ಹಂಬಲ ನನಗೆ,
ಚಂದ್ರ-ತಾರೆಗಳನ್ನು ಹೊದ್ದ ಆಕಾಶವನ್ನು ಅಳೆಯುವ ಹಂಬಲ ನನಗೆ,
ಬಟಾಬಯಲಿನಲ್ಲಿ ಕೈಗಳನ್ನು ಅಗಲಿಸಿ ಓಡುವ ಹಂಬಲ ನನಗೆ,
ನದಿಯಲ್ಲಿ ಈಜಾಡುವ ಮೀನುಗಳನ್ನು ಹಿಡಿಯುವ ಹಂಬಲ ನನಗೆ…”
ನನ್ನ ಮಾತುಗಳನ್ನೆಲ್ಲಾ ನೀನು ಗಂಭೀರವಾಗಿ ಕೇಳಿದೆ…
ನಂತರ ಈ ಬಗ್ಗೆ ಮುಂದುವರೆಯುತ್ತಾ
ಮರುದಿನವೇ ನೀನು ಮೇಸ್ತ್ರಿಯೊಬ್ಬನನ್ನು ಕರೆದೆ…

ಹಕ್ಕಿಗಳ ಕಲರವವುಳ್ಳ ಕರೆಗಂಟೆಯನ್ನು ಅಳವಡಿಸಿದೆ,
ಪಕ್ಕದ ನರ್ಸರಿಯೊಂದರಿಂದ ಕುಂಡಗಳನ್ನು ತಂದು
ಬಾಲ್ಕನಿಯಲ್ಲಿ ಇಟ್ಟುಬಿಟ್ಟೆ…
ಡ್ರಾಯಿಂಗ್ ರೂಮಿನ ಗೋಡೆಯ ಮೇಲೆ
ಹಚ್ಚಹಸಿರು ವೃಕ್ಷಗಳುಳ್ಳ ದೊಡ್ಡದೊಂದು ಪೋಸ್ಟರ್ ಅನ್ನು ಹಾಕಿಬಿಟ್ಟೆ…
ಕೋಣೆಯ ಮೂಲೆಯಲ್ಲಿ ದುಬಾರಿ ತಳಪಾಯದ ಮೇಲೆ,
ಬಣ್ಣಬಣ್ಣದ ಇಂಪೋರ್ಟೆಡ್ ಪ್ಲಾಸ್ಟಿಕ್ ಹೂಗಳನ್ನು ಇರಿಸಿದೆ…
ಗಾಜಿನ ಬೃಹತ್ತಾದ ಅಕ್ವೇರಿಯಂ ಅನ್ನು ಕೂಡ ತರಿಸಿಟ್ಟುಕೊಂಡೆ,
ಬಗೆಬಗೆಯ ಗಾತ್ರ ಮತ್ತು ಬಣ್ಣದ ಸುಂದರ ಮೀನುಗಳಿರುವಂಥದ್ದು…
ಬೆಡ್ ರೂಮಿನ ಗೋಡೆಯನ್ನಲಂಕರಿಸಿದೆ ನೀನು,
ಚಂದ್ರ-ತಾರೆಗಳನ್ನು ಹೊದ್ದ ಮಿನುಗುವ ಆಕಾಶದಂತಿನ ವಾಲ್-ಪೇಪರಿನಿಂದ…
ಹಾಗೆಯೇ ತಲೆದೂಗಿ ಹೇಳಿದೆ,
”ಇಗೋ ಮೇಡಂ… ನಿಮಗಾಗಿ ಇಡೀ ನಿಸರ್ಗವನ್ನೇ ಕೋಣೆಗೆ ತಂದಿದ್ದಾನೆ ಇನಿಯ”

‍ಲೇಖಕರು Admin

September 30, 2022

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This