
ನವೆಂಬರ್ 2013 ರಲ್ಲಿ ಬಹುನಿರೀಕ್ಷಿತ ‘ಮಂಗಳಯಾನ್’ ಯೋಜನೆಯನ್ನು ಭಾರತ ಆರಂಭಿಸಿತು. ಒಂದು ವರ್ಷದ ನಂತರ, ಐದು ನಿರ್ಣಾಯಕ ಸಾಧನಗಳನ್ನು ಹೊತ್ತ ಹಗುರ ಉಪಗ್ರಹವು ಕೆಂಪು ಗ್ರಹವಾದ ಮಂಗಳದ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿ ಇತಿಹಾಸವನ್ನು ಸೃಷ್ಟಿಸಿತು! ಯು.ಎಸ್, ರಷ್ಯಾ ಮತ್ತು ಚೀನಾ- ಖರ್ಚು ಮಾಡಿದ ವೆಚ್ಚದ ಕಾಲು ಭಾಗದಷ್ಟನ್ನೇ ಮಾಡಿ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಉಪಗ್ರಹವನ್ನು ಮಂಗಳದ ಕಕ್ಷೆಗೆ ಕಳುಹಿಸಿದ ಹೆಗ್ಗಳಿಕೆ ನಮ್ಮ ದೇಶದ್ದು. ‘ಮಂಗಳಯಾನ್’ ಇಡೀ ಜಗತ್ತನ್ನೇ ದಿಗ್ಭ್ರಮೆಗೊಳಿಸಿತ್ತು. ಆದರೆ ಗ್ರಹಗಳ ಕ್ಲಬ್ನ ಬಾಗಿಲು ಬಡಿಯುವ ರೈತನ ‘ಜನಾಂಗೀಯ ವ್ಯಂಗ್ಯಚಿತ್ರ’ ವನ್ನು ಅಮೆರಿಕಾದ ಪತ್ರಿಕೆಗಳು ಪ್ರಕಟಿಸಿದವು.
ಇಸ್ರೋ ವಿಜ್ಞಾನಿಗಳು ಭಾರತದ ಮಂಗಳಯಾನದ ಕನಸನ್ನು ಹೇಗೆ ಸಾಕಾರಗೊಳಿಸಿದರು ಎಂಬುದೇ ‘ಮಿಷನ್ ಮಂಗಲ್’ ಸಿನಿಮಾದ ಕಥೆ. ಈ ಯೋಜನೆಗೆ ಉಂಟಾಗುವ ಅಡೆತಡೆಗಳನ್ನು, ಮುಖ್ಯವಾಗಿ ದುಡ್ಡಿನ ಕೊರತೆ, ಅಧಿಕಾರಶಾಹಿ ಧೋರಣೆ , ನಕಾರಾತ್ಮಕ ವಾತಾವರಣ ಮುಂತಾದ ವಿಷಯಗಳನ್ನು ಕಥೆಯಲ್ಲಿ ಪರಿಣಾಮಕಾರಿಯಾಗಿ ಹೆಣೆದಿದ್ದಾರೆ

‘ಹೌದು, ಮಂಗಳಯಾನ ಯಶಸ್ವಿಯಾಗಿದೆ. ಇದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ತಿಳಿದಿದ್ದೇವೆ. ಮತ್ತೆ ಈ ಚಲನಚಿತ್ರವನ್ನು ನೋಡುವ ಅಗತ್ಯವೇನಿದೆ’ ಎಂದು ಕೆಲವರಿಗಾದರೂ ಅನ್ನಿಸಬಹುದು. ಬಹುಶಃ ಇಷ್ಟಕ್ಕೆ ಈ ಚಿತ್ರ ಸೀಮಿತಗೊಂಡಿದ್ದರೆ ನಾವದನ್ನು ಇಷ್ಟಪಡುತ್ತಿರಲಿಲ್ಲವೇನೋ! ಆದರೆ ನಮಗೆಲ್ಲ ಗೊತ್ತಿರಲೇಬೇಕಾದ ವಿಷಯವೇನೆಂದರೆ ಮಂಗಳಯಾನದ `ಕೋರ್ ಟೀಮ್’ ನಲ್ಲಿ ಹೆಚ್ಚಾಗಿ ಮಹಿಳಾ ವಿಜ್ಞಾನಿಗಳೇ ಇದ್ದದ್ದು. ಸಮಾಜದ ಕಟ್ಟುಪಾಡುಗಳು, ಸಂಸಾರದ ಕಷ್ಟಗಳನ್ನು ಎದುರಿಸುತ್ತ, ತಮ್ಮ ಕನಸಿನ ಯೋಜನೆಯನ್ನು ಅದ್ಭುತವಾಗಿ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಬಹುಶಃ ಈ ದೇಶದ ಎಲ್ಲ ಹೆಣ್ಣುಮಕ್ಕಳ ಬದುಕಿನ ಸ್ಥಿತಿಯನ್ನು ಈ ಪಾತ್ರಗಳು ಸಮರ್ಥವಾಗಿ ಬಿಂಬಿಸುತ್ತವೆ.
ಇನ್ನು ಈ ಚಿತ್ರದಲ್ಲಿ ಹಲವಾರು ಪ್ರತಿಭಾನ್ವಿತ ನಟರು ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ದತ್ತಣ್ಣ, ಷರ್ಮನ್ ಜೋಶಿ, ಸೋನಾಕ್ಷಿ ಸಿನ್ಹಾ, ನಿತ್ಯ ಮೆನೆನ್ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲ ನಟರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ವಿದ್ಯಾ ಬಾಲನ್ ಇಡೀ ಚಿತ್ರವನ್ನು ತಮ್ಮದಾಗಿಸಿಕೊಂಡು ಅದ್ಭುತವಾಗಿ ನಟಿಸಿದ್ದಾರೆ. ಅವರ ನೈಜ, ಸಹಜ ಅಭಿನಯ ನಮ್ಮನ್ನು ಬಹುಕಾಲ ಕಾಡಬಲ್ಲದು.
ಗಂಭೀರವಾದ ಕಥೆಯಲ್ಲಿ ಹಾಸ್ಯದ ಸನ್ನಿವೇಶಗಳನ್ನು ತಂದಿರುವುದು ಪ್ರೇಕ್ಷಕರನ್ನು ಮನರಂಜಿಸುವುದಕ್ಕಾಗಿದ್ದರೂ ಎಲ್ಲಿಯೂ ಅದು ನಮ್ಮನ್ನು ಬೇಸರಗೊಳಿಸದಂತೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಇಡೀ ಯೋಜನೆಯ ಬಗ್ಗೆ ತಾತ್ಸಾರ ಮನೋಭಾವದ, ಕಿರಿಕಿರಿಗೊಳ್ಳುವ ಅನಂತ ಅಯ್ಯರ್ ಪಾತ್ರದಲ್ಲಿ ಕನ್ನಡದ ಹೆಮ್ಮೆಯ ನಟ ದತ್ತಣ್ಣ ಸಹಜವಾಗಿ ಅಭಿನಯಿಸಿದ್ದಾರೆ. ದತ್ತಣ್ಣ ಮತ್ತು ವಿಜ್ಞಾನಿ ಹೆಣ್ಣುಮಕ್ಕಳ ಪಾತ್ರಗಳು ಇನ್ನಷ್ಟು ತೆರೆಯಲ್ಲಿ ಕಾಣಿಸಿಕೊಂಡಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.

ವಿಜ್ಞಾನದ ಎಲ್ಲ ಪಾರಿಭಾಷಿಕ ಪದಗಳನ್ನು ಸರಳೀಕರಿಸಲು ಮಾಡಿರುವ ಪ್ರಯತ್ನ ಶ್ಲಾಘನೀಯವಾದರೂ ಕೆಲವೊಮ್ಮೆ ಬಾಲಿವುಡ್ ಚಿತ್ರಗಳ ಟಿಪಿಕಲ್ ಚೌಕಟ್ಟಿಗೆ ಸಿಕ್ಕಿ ನರಳುತ್ತದೆ. ಹಾಲಿವುಡ್ ಚಿತ್ರಗಳನ್ನು ಹೆಚ್ಚು ವೀಕ್ಷಿಸಿದವರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸ್ಪೇಸ್, ರಾಕೆಟ್, ಕಂಟ್ರೋಲ್ ಸೆಂಟರ್, ಗ್ರಾಫಿಕ್ ದೃಶ್ಯಗಳು ನಿರಾಶೆಯನ್ನುಂಟು ಮಾಡಬಹುದು. ಮಂಗಳಯಾನ ಯೋಜನೆಯ ನಿರ್ದೇಶಕನ ಪಾತ್ರ ಮಾಡಿರುವ ಅಕ್ಷಯ ಕುಮಾರ್ ಪಾತ್ರವನ್ನೂ ಮೀರಿ ತೆರೆಯ ಮೇಲೆ ವಿಜೃಂಭಿಸುವುದುಂಟು!
ಚಿತ್ರದ ಕ್ಲೈಮಾಕ್ಸ್ ದೃಶ್ಯ ಎಲ್ಲರೆದೆಯಲ್ಲಿ ದೇಶದ ಬಗ್ಗೆ ಹೆಮ್ಮೆ ಮೂಡಿಸುವುದಂತೂ ನಿಜ. ಚಿತ್ರದ ಆರಂಭದಲ್ಲಿ ರಾಕೆಟ್ ಉಡಾವಣೆ ವಿಫಲವಾದರೆ ಕೊನೆಯಲ್ಲಿ ಯಶಸ್ವಿಯಾಗುತ್ತದೆ. ಈ ಎರಡರ ಮಧ್ಯೆ ಬರುವ ‘ಸ್ಪೇಸ್ ಡೆಬ್ರಿ’ ಯಂತೆ ಕಾಣುವ ಹಲವು ವಿಷಯಗಳನ್ನು ಸಹಿಸಿಕೊಳ್ಳಲು ಸಾಧ್ಯವಾದರೆ ನಿರೀಕ್ಷೆಗಳು ಗಗನಕ್ಕೇರುತ್ತವೆ. ವಿದ್ಯಾಬಾಲನ್ ಅಭಿನಯಕ್ಕಾಗಿಯಾದರೂ ಈ ಚಿತ್ರವನ್ನು ಒಮ್ಮೆ ನೋಡಬೇಕು.






0 Comments