ಮಾಲತಿ ಗೋರೆಬೈಲ್
ಮೂಡಿದ ಚಿತ್ರ
ಕಾಡಬೇಕು…
ನೂರು ತರಹ ರೂಪ ತಾಳಿ
ಮೆಲುಕಿಗೆ ಹತ್ತಿ
ಪಟಲ ತಾಕಿ
ಎದೆಯ ಹೂಕ್ಕು
ಸೋಲಬೇಕು
ನೆಲದಗಲ ಹರಡಬೇಕು…
ಕಹಿ ಚಿತ್ತಾರ
ನಲುಗಬೇಕು..
ಕರಾಳ ಮುಖದ ಚಹರೆ ಸೀಳಿ,
ನರನಾಡಿ ನಿರಾಳವಾಗಿ
ವಿಕೃತಿಯ ಸುಟ್ಟು ಎಸೆದು
ನಲುಮೆ ವಿರಾಜಿಸಿ;
ಭಾಷೆ ಕಂಪು ಬೀರಬೇಕು…
ಕೆಚ್ಚು ಹೆಚ್ಚಿ ಕೃತಿಯು ಮೆರೆದು
ಕಿಚ್ಚು ಆರಿಬಿಡಬೇಕು,
ಕೊಳಕು ಮನದ ಕದವ ಮುಚ್ಚಿ
ಅಂಗಳಕೆ ರಂಗೋಲಿ ತೀಡಬೇಕು!
ಸಲುಗೆ, ಒಲವು,ಗಂಧ ಸೂಸಿ
ನುಡಿ ನಗಬೇಕು,
ಮಣ್ಣ ಕಣವೂ ಪ್ರೀತಿ ನುಲಿದು,
ನಿತ್ಯ ಗೆಲ್ಲುತಿರಲೆ ಬೇಕು
ಸತ್ಯ ಉಸಿರುಗರೆಯಬೇಕು…….
0 ಪ್ರತಿಕ್ರಿಯೆಗಳು