ಮಾಲತಿ ಗೋರೆಬೈಲ್
ಲಜ್ಜೆ, ನೋವು
ನಡೆವ ಒಂದೊಂದು ಹೆಜ್ಜೆಯೂ
ಸೀರೆಯ ನಿರಿಗೆಯೊಂದಿಗೆ
ಬೆಸಗೊಂಡಿದ್ದಕ್ಕೇ ಹೀಗೆ,
ಹೆರಳ ಮುಡಿಯೊಳಗೆ
ದುಗುಡವ ಗಂಟುಕಟ್ಟಿ
ಸದಾ ನಗುವ ಹಂಚುತ್ತಲೇ ಇರುತ್ತಾಳೆ!
ಹತಾಶೆ, ಅವಮಾನ
ಪ್ರತಿ ಚಣವೂ
ಉಡಿಯ ಹಸಿವಿನೊಂದಿಗೇ
ಹೊಸೆದುಕೊಂಡಿದ್ದಕ್ಕೇ
ಇರಬಹುದು,
ನಿಟ್ಟುಸಿರ ಕಣಕೂ
ಒಲವ ಬೆರೆಸಿಟ್ಟು,
ಮುಗಿಲಿಗೇ ಕೊರಳೊಡ್ಡಿ
ಬೆಳಗುತ್ತಲೇ ಇರುತ್ತಾಳೆ..

ಹೆಣ್ತನ, ಬಯಕೆ
ಕುಡಿಮೂಡಿದ ಉಮೇದು
ಎದೆಯ ಮಿಡಿತದ ಸದ್ದಿಗೆ
ಆತುಕೊಂಡಿದ್ದಕ್ಕೇ ಹೀಗೆ,
ರಹದಾರಿಯ ಕವಲೊಳಗೆ
ಸೂಜಿ ಮಲ್ಲಿಗೆಯ
ಅರಳಿಸುತ್ತಾಳೆ..
ಮೋಹ, ಪ್ರೇಮ
ಮೌನದೊಳಗಿನ
ಶಬ್ಧವನಪ್ಪಿದ್ದಕ್ಕೇ
ಅವಳು ಹೀಗೆ;
ಬಯಲೊಳಗೆ ಬಯಲಾಗಿ
ಹರವಾಗುತ್ತಲೇ ಹೋಗುತ್ತಾಳೆ…
0 ಪ್ರತಿಕ್ರಿಯೆಗಳು