-ಸೌಮ್ಯ ದಯಾನಂದ
ಕಾವೂ ಅವಳದೇ
ಕಾಳೂ ಅವಳದೇ
1.
ಕಿಬ್ಬೊಟ್ಟೆಯಲಿ
ಕುಡಿಯು ಮಿಸುಕಾಡಿದಾಗ
‘ಅಪ್ಪ..’ ಎಂಬ ದನಿ..
ನಾನೇ ತಾಯಿ;
ನನ್ನ ಭಾವವೇ ತಂದೆ ಎಂದರೆ
ಅದು ಸುಮ್ಮನಾದೀತೆ?!
ಹಂಗಿನರಮನೆಯ ತೊರೆದ ಜೀವಕೆ
ವಿಜ್ಞಾನದ ಚಾಪೆಯಾಸರೆ
ಎಲ್ಲರೂ
ರಂಗೋಲಿಯ ಮೇಲೆತ್ತಿ ನೋಡುವವರೇ..
ಎದೆಯ ಮಿಡಿತಕ್ಕೆ
ತೊಡೆಯ ಸೆಳೆತಕ್ಕೆ
‘ನಾನಿರುವೆ’ ಎಂದವನು,
ಮನೆಯ ವಿಳಾಸಕ್ಕೆ
ತನ್ನ ಹೆಸರು ಬೇಡವೆಂದವನು
ನನಗೆ ಬೇಕೇ?
ಹೆಗಲ ಮೇಲಿನ ಜಗತ್ತನ್ನು
ಅಮ್ಮ ತೋರಲಾರಳೇ..
ಬೆವರಿನಿಂದ ಬಾಲಕನ ಪಡೆದ
ಗೌರಿ.. ಅಮ್ಮನೆನಿಸಲಿಲ್ಲವೇ
ಶಿವ ಕಾಯಲಿಲ್ಲವೇ
ನಾನು ಗೌರಿಯಾಗುವೆ…
2.
ಅರ್ಜಿ ತುಂಬುವಾಗ
ಆ ಕಾಲಂ ನ ಬಳಿ ಕೈ ನಿಂತು
ಕಂಗಾಲಾದರೆ..!
ಅಪ್ಪನ ಗುರುತಿಲ್ಲದೆ
ಬದುಕು ಮುನಿಸಿಕೊಂಡರೆ..!
ಕಾಲನ ಕೇಳಿಯು ಎಲ್ಲೆ ದಾಟಿರುವಾಗ
ಅದರ ಸಂತಾನಕ್ಕಿನ್ನೂ
ಸನಾತನದ ಕಟ್ಟೇ..?
ಬೀದಿಯ ಕಂಗಳಲ್ಲಿ
ನಗೆಯಹೊಗೆ
ನನಗವು ಮೋಡವಾದವು..
ಪೊರೆದವು ಬಿಸಿಲಿನಿಂದ
ಮಳೆ ಸುರಿಸಲಿಲ್ಲ
ಮಿಂಚಿನ ಹಣತೆ ಹಚ್ಚಿದವು
ಜಗತ್ತೀಗ ನಿಚ್ಚಳ…
3.
ಮಾಯಕಾರನ ಕೈಯಲ್ಲಿ
ಹೆಣ್ಣು ಗಂಡಿನ ತಕ್ಕಡಿ
ಅವನು ಹುಟ್ಟು ಕುರುಡ
ತಟ್ಟೆ ಅದಲು ಬದಲು
ಲೋಕ ಮೇಲೆ – ಕೆಳಗು
4.
ಗೂಡು ಕಟ್ಟಬಯಸಿದ
ಹೆಣ್ಣು ಹಕ್ಕಿಗೆ
ಅವನ ಹಂಗಿಲ್ಲ; ಹೊಗೆಯಿಲ್ಲ
ಬಯಕೆ ಕೈಗೂಡಲಿಲ್ಲ
ಹಕ್ಕಿಯಾಗಬಯಸಿ
ಅವಳು ಹಾರಲಿಲ್ಲ
ಅವನು ಗೂಡು ಕಟ್ಟಲು
ಜೊತೆಯಾಗಲಿಲ್ಲ
ಸಿಮೆಂಟಿನ ಸೂರಿನಡಿಯ
ಮುರುಕು ಡಬ್ಬದಲ್ಲೀಗ
ಪುಟ್ಟ ಹಕ್ಕಿಯ ಕಲರವ
ಕಾವೂ ಅವಳದೇ…
ಕಾಳೂ ಅವಳದೇ..






ಸಮರ್ಥವಾಗಿದೆ ಭಾವ.
ನಿಮ್ಮ ಕವನದಲ್ಲಿನ ʻಅಪ್ಪʼ ಎನ್ನುವ ವ್ಯಕ್ತಿಯ ಚಿತ್ರ ಹಾಗೂ ಗಂಡ ಎನಿಸಿಕೊಂಡ ವ್ಯಕ್ತಿಯ ದಬ್ಬಾಳಿಕೆಯನ್ನು ಪ್ರಶ್ನಿಸುವ ರೀತಿ ಹೃದ್ಯವಾಗಿದೆ.
ಬಹಳ ಮುಖ್ಯವಾಗಿ ನಿಷೇಧಿತ ದೇವದಾಸಿ ಪದ್ಧತಿಗೆ ಈಡಾಗಿರುವ ಸಮುದಾಯದ ಮಕ್ಕಳ ಹಿನ್ನೆಲೆಯಲ್ಲಿ ಆಲೋಚಿಸಿದಾಗ ʻತಂದೆಯ ಹೆಸರು…ʼ ಎನ್ನುವುದು ದೊಡ್ಡ ತೊಡಕಾಗಿದೆ.
ಅಮ್ಮ ಅಪ್ಪ ಇಬ್ಬರೂ ಮುಖ್ಯ ಎನ್ನುವ ವಾಸ್ತವ ಮಕ್ಕಳಿಗೂ ವ್ಯಕ್ತಿಗಳಿಗೂ ಸಮಾಜಕ್ಕೂ, ಮುಖ್ಯವಾಗಿ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ತಿಳಿಯಲೇಬೇಕು.