ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾನ್ಯ ದ್ವಾರಕಾನಾಥ್ ನೀವು ಭಾವುಕರಾಗಿ ಬರೆದಿದ್ದೀರಿ.. ಸಿ ಎನ್ ಆರ್ ಪತ್ರ

CNR

ಸಿ ಎನ್ ರಾಮಚಂದ್ರನ್

ಮಾನ್ಯ ದ್ವಾರಕಾನಾಥ್ ಅವರಿಗೆ-

ಕರ್ನಾಟಕದ ನೆಲ-ಜಲ-ಜನರ ಬಗ್ಗೆ ನಿಮಗಿರುವ ಕಾಳಜಿಯನ್ನು ಗೌರವಿಸುತ್ತಲೇ, ಮಹದಾಯಿ ಮಧ್ಯಂತರ ತೀರ್ಪನ್ನು ಕುರಿತು ನೀವು ಭಾವುಕರಾಗಿ ಬರೆದಿರುವ ಲೇಖನಕ್ಕೆ ಈ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ.

ಸಾಮಾನ್ಯವಾಗಿ ನೀವು ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಚರ್ಚಿಸುತ್ತೀರಿ; ಆದರೆ ಈ ಲೇಖನ ಏಕಪಕ್ಷೀಯವಾಗಿದೆ, ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಎಂದು ಹೇಳಲು ನನಗೆ ವ್ಯಥೆಯಾಗುತ್ತದೆ.

mahadayi mapನೀವು ಆಧರಿಸಿರುವ “ಕನ್ನಡಪ್ರಭ” ಪತ್ರಿಕೆಯ ಶುಕ್ರವಾರದ (೨೯/೭/೧೬) ಸಂಚಿಕೆಯ ಐದನೆಯ ಪುಟದಲ್ಲಿ “ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಜಿಜ್ಞಾಸೆಗಳು” ಎಂಬ ಲೇಖನವಿದೆ. ಅದರಲ್ಲಿ ದಾಖಲಿಸಿರುವ ಮುಖ್ಯಾಂಶಗಳು ಹೀಗಿವೆ:

೧) ಅರಣ್ಯ ಇಲಾಖೆಯ ಅನುಮತಿ: ಇದನ್ನು ಪಡೆದಿಲ್ಲ ಎಂಬುದು ಒಂದು ಆಕ್ಷೇಪ. ಆದರೆ, ೨೦೦೧ರಲ್ಲಿಯೇ ಕರ್ನಾಟಕ ಸರಕಾರ ಅನುಮತಿಗಾಗಿ ಬರೆದ ಪತ್ರಕ್ಕೆ ಉತ್ತರವಾಗಿ, ‘ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಂಡು ಬಂದ ನಂತರ ಅನುಮತಿ ಬಗ್ಗೆ ನಿರ್ಧರಿಸಲಾಗುವುದು’ ಎಂದು ಕೇಂದ್ರ ಸರಕಾರ ೨೦೦೩ರಲ್ಲಿ ಕ. ಸರಕಾರಕ್ಕೆ ಉತ್ತರ ಬರೆಯಿತು; ಅದರ ಪ್ರತಿ ನ್ಯಾಯಾಧಿಕರಣದ ಬಳಿ ಇದೆ.

೨) ’ಬರಗಾಲದ ಸಂದರ್ಭದಲ್ಲಿ ನೀರು ಬಳಸಿಕೊಳ್ಳುತ್ತೇವೆ ಎಂಬುದಕ್ಕೆ ಪೂರಕ ದಾಖಲೆ ಇಲ್ಲ’ ಎನ್ನುವುದೂ ಸರಿಯಲ್ಲ. ಗೋವಾ ಸರಕಾರ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ೨೦೫೦ರ ಹೊತ್ತಿಗೆ ಗೋವಾಕ್ಕೆ ಬೇಕಾಗುವ ನೀರನ್ನು ಬಳಸಿಯೂ ೧೪ ಟಿ ಎಂ ಸಿ ನೀರು ಹೆಚ್ಚುವರಿಯಾಗಿ ಉಳಿಯುತ್ತದೆ. ಈ ಅಧಿಕೃತ ಮಾಹಿತಿಯೂ ನ್ಯಾಯಾಧಿಕರಣದ ಬಳಿ ಇದೆ.

೩) ‘ವಿಸ್ತೃತ ಯೋಜನಾ ವರದಿ’: ನ್ಯಾಯಾಧಿಕರಣದ ತೀರ್ಪು ಬರದೆ (ಎಂದರೆ ಎಷ್ಟು ನೀರು ಕರ್ನಾಟಕಕ್ಕೆ ಬರುತ್ತದೆ ಎಂದು ಗೊತ್ತಾಗುವ ಮೊದಲೆ) ವಿಸ್ತೃತ ಯೋಜನೆಯನ್ನು ಸಿದ್ಧಪಡಿಸುವುದು ಹೇಗೆ? ಕೃಷ್ಣ ನ್ಯಾಯಾಧಿಕರಣದ ಸಂದರ್ಭದಲ್ಲಿ ಪರಿಸರ ಇಲಾಖೆಯ ಅನುಮತಿ ಇಲ್ಲದೆಯೇ ರಾಜ್ಯಕ್ಕೆ ಅನುಮತಿ ದೊರಕಿತ್ತು; ಅನಂತರ ರಾಜ್ಯ ಸರಕಾರ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು.

ಈ ಅಂಶಗಳ ಆಧಾರದ ಮೇಲೆ ”ನ್ಯಾಯಮಂಡಳಿ ಕರ್ನಾಟಕದ ಅರ್ಜಿ ವಜಾ ಮಾಡುವ ಮೊದಲು ಪೂರಕ ದಾಖಲೆಗಳನ್ನು ಪರಿಶೀಲಿಸದೆ ಆದೇಶ ನೀಡಿದೆ” ಎಂಬುದು ಆ ಲೇಖನದ ತೀರ್ಮಾನ. ಈ ತೀರ್ಮಾನವು ಸತ್ಯವೆ ಅಥವಾ ಸತ್ಯದೂರವೇ ಎಂಬುದನ್ನು ನಿಮ್ಮಂತಹ ತಜ್ಞರು ನಮಗೆ ತಿಳಿಸಿಕೊಡಬೇಕು.

courtಸಮಸ್ಯೆಗಳು ಎದುರಾದಾಗ ಅವನ್ನು ಎದುರಿಸುವ ಬಗೆಯನ್ನು ಕುರಿತು ಚಿಂತಿಸಬೇಕೇ ಹೊರತು ಮತ್ತೊಬ್ಬರ ಇನ್ನೊಬ್ಬರ ಹೆಗಲು ತೋರಿಸುವುದಲ್ಲ.

ಅದೇ ಪತ್ರಿಕೆಯ ಮತ್ತೊಂದು ಸಂಚಿಕೆಯಲ್ಲಿ ‘ನಾರಿಮನ್ ಈ ಮಧ್ಯಂತರ ತೀರ್ಪಿಗೆ ಅರ್ಜಿ ಹಾಕುವುದು ಬೇಡ ಎಂದು ಸರಕಾರಕ್ಕೆ ತಿಳಿಸಿದ್ದರು; ಆದರೆ, ವಿರೋಧ ಪಕ್ಷಗಳ ‘ಮಧ್ಯಂತರ ತೀರ್ಪಿಗೆ ಅರ್ಜಿ ಹಾಕಿ’ ಎಂಬ ಕೂಗಿಗೆ ಸರಕಾರ ಮಣಿಯಿತು’ ಎಂಬ ವರದಿಯೂ ಇದೆ.

ಸದ್ಯದಲ್ಲಿಯೇ ಕೊನೆಯ ತೀರ್ಪು ಬರಲಿರುವಾಗ ಮಧ್ಯಂತರ ತೀರ್ಪಿಗೆ, ಪ್ರಾಯಃ, ಕೋರಿಕೆ ಸಲ್ಲಿಸಬಾರದಾಗಿತ್ತು. ಇನ್ನು ರಾಜ್ಯದ ಮುಖ್ಯಮಂತ್ರಿಗಳು ಗೋವಾದ/ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಬೇಕಾಗಿತ್ತು; ಅಲ್ಲಿಯ ವಿರೋಧ ಪಕ್ಷಗಳನ್ನು ಒಲಿಸಬೇಕಿತ್ತು- ಎಂಬಂತಹ ವಿಚಾರಗಳೆಲ್ಲಾ ಅರ್ಥಹೀನ. ವೈಯಕ್ತಿಕ ನೆಲೆಯಲ್ಲಿ ಅಧಿಕಾರದಲ್ಲಿರುವವರು ಎಷ್ಟೇ ಸ್ನೇಹಪರರಾದರೂ, ಆ ಸ್ನೇಹವನ್ನು ರಾಜ್ಯದ ಆಗುಹೋಗುಗಳಿಗೆ ಯಾರೂ ಬಳಸುವುದಿಲ್ಲ. (ಚರ್ಚೆಗೆ ಹೋದಾಗ ಪ್ರೀತಿಯಿಂದ ಪಂಚತಾರಾ ಗೌರವವನ್ನು ತೋರಿಸಬಹುದು, ಅಷ್ಟೇ.)

ಕೊನೆಯದಾಗಿ,

ಕಷ್ಟ ಕಾಲದಲ್ಲಿ, ಆಪಾದನೆಗಳನ್ನು ಮಾಡುವ ಬದಲಿಗೆ ಎಲ್ಲರೂ ಒಂದಾಗಿ ಪರಿಹಾರ ಸೂತ್ರಗಳನ್ನು ಶೋಧಿಸಬೇಕು.

‍ಲೇಖಕರು Admin

1 August, 2016

1 Comment

  1. Rudranna Harthikote

    yes nimma matu satya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading