ನಾ ದಿವಾಕರ್
2012ರ ನಿರ್ಭಯ ಪ್ರಕರಣದ ನಂತರ ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ಪುರುಷ ಸಮಾಜದಲ್ಲಿ ಒಂದು ಜಾಗೃತಿ ಮೂಡಿರಬಹುದು ಎಂಬ ಭ್ರಮೆ ಸಮಸ್ತ ಭಾರತೀಯರನ್ನು ಆವರಿಸಿತ್ತು. ನಿರ್ಭಯ ಪ್ರಕರಣದ ವಿರುದ್ಧ ಲಕ್ಷಾಂತರ ಯುವಕರು ತಮ್ಮ ಪ್ರತಿರೋಧದ ದನಿ ವ್ಯಕ್ತಪಡಿಸಿದ್ದರು. ದೇಶದ ನಾಗರಿಕರು ನ ಭೂತೋ ನ ಭವಿಷ್ಯತಿ ಎಂಬಂತೆ ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ರೂಪಿಸುವಂತೆ ದೇಶವ್ಯಾಪಿಯಾಗಿ ಜನತೆ ಆಗ್ರಹಿಸಿದ್ದರು. ಕೇಂದ್ರ ಯುಪಿಎ ಸಕರ್ಾರ ಜನರ ಪ್ರತಿರೋಧದ ದನಿಗೆ ಮಣಿದು ಕಠಿಣ ಕಾನೂನು ರೂಪಿಸಿದ್ದೂ ಆಯಿತು. ಕಠಿಣ ಕಾನೂನುಗಳಿಗೆ ಹೆದರಿ ಪುರುಷ ಸಮಾಜದ ಒಂದು ವಿಕೃತ ವರ್ಗ ತನ್ನ ಕಾಮುಕ ದೃಷ್ಟಿಕೋನವನ್ನು ಬದಲಿಸಿ ಸಂವೇದನಾಶೀಲವಾಗಿ ಮನ್ವಂತರ ಹೊಂದುತ್ತದೆ ಎಂಬ ಭ್ರಮೆಯಲ್ಲಿ ಇಡೀ ಭಾರತೀಯ ಸಮಾಜ ತೇಲುತ್ತಿತ್ತು. ಆದರೆ ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾದರೂ ದೇಶದಲ್ಲಿ ನೂರಾರು ನಿರ್ಭಯ ಗಳ ಸೃಷ್ಟಿಯಾಗುತ್ತಿದೆ. ಎರಡು ವರ್ಷದ ಹಸುಳೆಯಿಂದ ಎಂಬತ್ತು ವರ್ಷದ ವೃದ್ಧೆಯವರೆಗೂ ಅತ್ಯಾಚಾರದ ಅಪಾಯವನ್ನು ಎದುರಿಸುತ್ತಿದ್ದಾರೆ. ಧರ್ಮಸ್ಥಳದ ಸೌಜನ್ಯ, ಮುಂಬೈನ ಪತ್ರಿಕಾ ಛಾಯಾಗ್ರಾಹಕಿ, ಅಸ್ಸಾಂನ ಮಹಿಳೆ, ಸೇನೆಯ ದೌರ್ಜನ್ಯಕ್ಕೆ ತುತ್ತಾದ ಮನೋರಮಾ, ಅತ್ಯಾಚಾರಕ್ಕೊಳಗಾದ ಐದು ವರ್ಷದ ಹಸುಳೆ ಹೀಗೆ ದೌರ್ಜನ್ಯಕ್ಕೊಳಗಾದ ನಾರಿಯರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಕರ್ನಾಟಕದ ರಾಜಧಾನಿ ಬೆಂಗಳೂರು ಈ ಪಟ್ಟಿಗೆ ಹಲವು ಮಹಿಳೆಯರನ್ನು ಸೇರ್ಪಡಿಸಿದೆ.

ಒಬ್ಬ ಶಾಲಾ ಬಾಲಕಿ, ಒಂದು ಹಸುಳೆ, ಒಬ್ಬ ಯುವತಿ, ಒಬ್ಬ ವಯಸ್ಕ ಮಹಿಳೆ, ಒಬ್ಬ ಅಂಗವಿಕಲೆ ಹೀಗೆ ಅತ್ಯಾಚಾರಕ್ಕೆ ಯಾವುದೇ ಚೌಕಟ್ಟುಗಳಿಲ್ಲ ಎಂದು ನಿರೂಪಿಸುವ ರೀತಿಯಲ್ಲಿ ವಿಕೃತ ಪುರುಷರು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ. ಶಾಲಾ ಬಾಲಕಿಯ ಮೇಲಿನ ಅತ್ಯಾಚಾರದ ವಿರುದ್ಧ ಪ್ರತಿಭಟನೆಯ ಕೂಗು ರಾಜ್ಯದೆಲ್ಲೆಡೆ ಪ್ರವಹಿಸುತ್ತಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಅಂಜುವಂತಹ ಪರಿಸ್ಥಿತಿ ಉದ್ಭವಿಸಿದೆ. ಒಂದು ನಾಗರಿಕ ಸಮಾಜದಲ್ಲಿ ಇಂತಹ ವಿದ್ಯಮಾನ ಸಹಿಸಲಸಾಧ್ಯವಾದುದು. ಆದರೆ ಆಡಳಿತ ವ್ಯವಸ್ಥೆಗೆ ಇದು ಸಹಿಸಲೂ ಸಾಧ್ಯ. ಕೆಲವರ ಬಂಧನ, ಕೆಲವರ ಅಮಾನತು, ಕೆಲವರ ವಿರುದ್ಧ ಕಾನೂನು ಕ್ರಮ, ಕಠಿಣ ಶಾಸನ, ಪೊಲೀಸ್ ರಕ್ಷಣೆ ಹೀಗೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಆಡಳಿತ ವ್ಯವಸ್ಥೆ ಸಜ್ಜಾಗುತ್ತಿದೆ. ರಾಜ್ಯ ಗೃಹ ಮಂತ್ರಿಗಳು ತಮ್ಮ ಕಾನೂನಾತ್ಮಕ ಕ್ರಮವೇ ತಮ್ಮ ಉತ್ತರದಾಯಿತ್ವದ ಪರಾಕಾಷ್ಠೆ ಎಂದು ಭಾವಿಸಿದ್ದು ತಮ್ಮ ಕರ್ತವ್ಯ ನಿಷ್ಠೆಗಾಗಿ ಆತ್ಮರತಿಯಲ್ಲಿ ತೊಡಗಿದ್ದಾರೆ. ಕೇಂದ್ರ ರೈಲ್ವೆ ಮಂತ್ರಿಗಳಿಗೆ ಅತ್ಯಾಚಾರಕ್ಕೊಳಗಾದ ಮಹಿಳೆಯರ ಸಂವೇದನೆಗಿಂತಲೂ ತಮ್ಮ ಪಿತೃ ಸಂಘಟನೆಯ ನೈತಿಕ ಪೊಲೀಸ್ಗಿರಿಯೇ ಪ್ರಧಾನವಾಗಿ ಕಾಣುತ್ತದೆ. ಇದೇ ನೈತಿಕ ಪೊಲೀಸ್ಗಿರಿಯಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದನ್ನು ಬಹುಶಃ ಸದಾನಂದಗೌಡರು ಮರೆತಿರಬೇಕು.
ಇರಲಿ, ಕಾನೂನಾತ್ಮಕ ಕ್ರಮಗಳು ಅಪರಾಧಿಗಳಿಗೆ ಶಿಕ್ಷೆ ನೀಡಲು ಸಹಾಯಕವಾಗುತ್ತವೆ. ಬೆಂಗಳೂರಿನ ಪ್ರಕರಣದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಠಿಣ ಕಾನೂನುಗಳಿಗಾಗಿ ಆಗ್ರಹ ಹೆಚ್ಚಾಗುತ್ತಿದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು, ಎನ್ಕೌಂಟರ್ನಲ್ಲಿ ಕೊಲ್ಲಬೇಕು, ಜೀವಾವಧಿ ಶಿಕ್ಷೆ ನೀಡಬೇಕು, ನ್ಯಾಯಾಲಯಗಳು ಅತ್ಯಾಚಾರಿಗಳಿಗೆ ಜಾಮೀನು ನೀಡಕೂಡದು ಈ ಎಲ್ಲಾ ಕೂಗುಗಳ ನಡುವೆ ಮಹಿಳೆಯರಿಗೆ ರಕ್ಷಣೆ ನೀಡಿ ಎಂಬ ಆಗ್ರಹ ಮುಗಿಲು ಮುಟ್ಟುತ್ತಿದೆ. ವಿರೋಧಾಭಾಸ ಇರುವುದು ಇಲ್ಲಿಯೇ ಎನಿಸುತ್ತದೆ. ಮಹಿಳೆಯರು, ಮಹಿಳಾ ಸಂವೇದನೆಯನ್ನು ಗೌರವಿಸುವವರು ಮಹಿಳೆಯರ ರಕ್ಷಣೆಗಾಗಿ ಆಗ್ರಹಿಸಬೇಕಿಲ್ಲ. ಯಾರಿಂದ ನಮಗೆ ರಕ್ಷಣೆ ಬೇಕಿದೆ ? ಪುರುಷ ಸಮಾಜದಿಂದಲೇ ಅಥವಾ ಪುರುಷ ಪ್ರಧಾನ ಸಂಸ್ಕೃತಿಯನ್ನು ಇಂದಿಗೂ ಆರಾಧಿಸುವ ಸ್ಥಾಪಿತ ವ್ಯವಸ್ಥೆಯಿಂದಲೇ ? ಅತ್ಯಾಚಾರ ಎಸಗುವ ವಿಕೃತ ಮನಸ್ಸುಗಳು ಶೂನ್ಯದಲ್ಲಿ ಜನಿಸುವುದಿಲ್ಲ. ಈ ವ್ಯವಸ್ಥೆಯ ಗರ್ಭದಲ್ಲೇ ಜನಿಸುತ್ತಾರೆ. ಮಹಿಳಾ ಸಂವೇದನೆಯ ಪರಿವೆಯೇ ಇಲ್ಲದ ಇಂತಹ ಒಂದು ಅನಾಗರಿಕ ವ್ಯವಸ್ಥೆಯಲ್ಲಿ ಜನಿಸಿದ ಮನಸ್ಸುಗಳು ಕೆಲವೇ ಕೆಲವು ಕಾನೂನಾತ್ಮಕ ಕ್ರಮಗಳಿಂದ ಮನ್ವಂತರ ಹೊಂದುವುದು ಸಾಧ್ಯವೇ ಎಂಬ ಮೂರ್ತ ಪ್ರಶ್ನೆಗೆ ನಾಗರಿಕ ಸಮಾಜ ಉತ್ತರಿಸಬೇಕಿದೆ.
ಮಹಿಳೆಯರಿಗೆ ರಕ್ಷಣೆ ನೀಡಿ ಎಂಬ ಆಗ್ರಹವೇ ಒಂದು ಅಸ್ವಸ್ಥ ಸಮಾಜದ ವಿಕೃತ ದೌರ್ಬಲ್ಯದ ಸಂಕೇತವಾಗಿ ಕಾಣುತ್ತದೆ. ಪುರುಷ ಕೇಂದ್ರಿತ ಸಾಂಸ್ಕೃತಿಕ ಪ್ರಭಾವಳಿಯಿಂದ ಸುತ್ತುವರೆದಿರುವ ಭಾರತದ ಶ್ರೇಣೀಕೃತ ಸಮಾಜದಲ್ಲಿ ಮಹಿಳೆಯನ್ನು ಇಂದಿಗೂ ರಕ್ಷಣೆ ನೀಡಬೇಕಾದ ಅಬಲೆ ಎಂದೇ ಕಾಣುವುದು ವ್ಯವಸ್ಥೆಯ ಊನವೇ ಹೊರತು ಮಹಿಳೆಯ ದೌರ್ಬಲ್ಯವಲ್ಲ. ರಕ್ಷಣೆಗಾಗಿ ಮೊರೆಹೋಗುವ ಪರಂಪರೆಯನ್ನು ತೊರೆದು ಆಧುನಿಕ ಮಹಿಳೆ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದಾಳೆ. ತನ್ನನ್ನು ತಾನು ರಕ್ಷಿಸಿಕೊಳ್ಳುವಂತಹ ದಾಷ್ಟ್ರ್ಯತೆಯನ್ನು ಮಹಿಳೆ ಪಡೆದುಕೊಂಡಿದ್ದಾಳೆ. ಸಮಾಜದ ಪಾರಂಪರಿಕ, ಸಾಂಪ್ರದಾಯಿಕ ಸಂಹಿತೆಗಳನ್ನು ಧಿಕ್ಕರಿಸಿ ತನ್ನ ಪ್ರಜ್ಞೆಗನುಸಾರವಾಗಿ ಮುನ್ನಡೆಯುವ ಸ್ಥೈರ್ಯ ಮಹಿಳೆಯರಲ್ಲಿ ಮೂಡಿದೆ. ದುರಂತವೆಂದರೆ ಈ ಸಕಾರಾತ್ಮಕ ಬೆಳವಣಿಗೆಯನ್ನು ಮುಕ್ತ ಮನಸ್ಸಿನಿಂದ , ಮಾನವೀಯ ದೃಷ್ಟಿಯಿಂದ, ಸಂವೇದನಾಶೀಲ ಮನಸ್ಸುಗಳ ಮೂಲಕ ಸ್ವೀಕರಿಸುವ ದಾರ್ಶನಿಕತೆ ಪುರುಷ ಸಮಾಜದಲ್ಲಿಲ್ಲ. ಹಾಗಾಗಿಯೇ ಸಾಂಸ್ಕೃತಿಕ ಹರಿಕಾರರು, ಧರ್ಮ ಮೀಮಾಂಸೆ ಮಾಡುವ ವಿದ್ವಾಂಸರು, ಹಿಂದೂ ಧರ್ಮ ರಕ್ಷಕರು ಮತ್ತು ದೇಶದ ಸುಶಿಕ್ಷಿತ ನಾಗರಿಕ ಸಮಾಜವೂ ಸಹ ಅತ್ಯಾಚಾರಕ್ಕೊಳಗಾದ ಮಹಿಳೆಯ ನಡತೆ, ವರ್ತನೆ, ಉಡುಪು, ಅಲಂಕಾರ ಮತ್ತು ಚಟುವಟಿಕೆಗಳನ್ನೇ ಕೇಂದ್ರೀಕರಿಸಿ ಆಕೆಯ ಮೇಲೆ ನಡೆಯುವ ಅತ್ಯಾಚಾರವನ್ನು ಸಹಜ ವಿದ್ಯಮಾನದಂತೆ ಪರಿಗಣಿಸುತ್ತಾರೆ. ಇದಕ್ಕೆ ಪೂರಕವಾಗಿ ಮಹಿಳೆಯ ಹಕ್ಕುಗಳೂ ಸಹ ನಿರ್ಬಂಧಿಸಲ್ಪಡುತ್ತವೆ . ಈ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ನಿರಂತರ ಭೀತಿಯಲ್ಲೇ ದಿನ ಸವೆಸುವ ಅಸಂಖ್ಯಾತ ಅಸಹಾಯಕ ಮಹಿಳೆಯರ ಮನದಾಳದ ನೋವು, ಆತಂಕಗಳನ್ನು ವಿಶ್ಲೇಷಿಸುವುದಿರಲಿ, ಪರಾಮಶರ್ಿಸುವ ಪ್ರಯತ್ನಗಳೂ ನಡೆಯುತ್ತಿಲ್ಲ ಎಂಬುದನ್ನು ವಿಷಾದದಿಂದ ನೆನೆಯಬೇಕಿದೆ. ಮಹಿಳೆ ತಾನು ಹಾಕಿದ ನಿರ್ಬಂಧಗಳ ಪಥದಲ್ಲಿ ನಡೆದಾಗ ಮಾತ್ರ ಸುರಕ್ಷಿತವಾಗಿರಲು ಸಾಧ್ಯ ಎಂಬ ಪುರುಷ ಸಮಾಜದ ಅಘೋಷಿತ-ಅಲಿಖಿತ ಆಜ್ಞೆ ಈ ದೇಶದ ಮಹಿಳೆಯರಿಗೆ ನೇಣುಕುಣಿಕೆಯಾಗಿ ಬಿಗಿಯುತ್ತಿದೆ. ಸಮಾಜದ ಸ್ವಾಸ್ಥ್ಯ, ಸಾಮಾಜಿಕ ಸೌಹಾರ್ದತೆ , ಪುರುಷರ ನಿಗ್ರಹ ಮತ್ತು ಪುರುಷ ಸಂತಾನದ ವೃದ್ಧಿ ಇವೆಲ್ಲದರ ನಿಯಂತ್ರಣ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಮಹಿಳೆಯ ಮೇಲೆ ಹೊರಿಸಲಾಗಿದೆ. ತನ್ನ ಜವಾಬ್ದಾರಿಯಲ್ಲಿ ವಿಫಲವಾಗುವ ಮಹಿಳೆ ಅಥವಾ ಈ ಸಂಹಿತೆಗಳನ್ನು ಉಲ್ಲಂಘಿಸುವ ಮಹಿಳೆ ಅತ್ಯಾಚಾರಕ್ಕೆ ಅರ್ಹ ವ್ಯಕ್ತಿಯಾಗಿಬಿಡುತ್ತಾಳೆ. ಮಹಿಳೆಗೆ ರಕ್ಷಣೆ ಬೇಕಿಲ್ಲ, ಘನತೆ ಗೌರವ ಬೇಕಿದೆ. ಆಧುನಿಕ ಪ್ರಬುದ್ಧ ಭಾರತೀಯ ಸಮಾಜ ಸಿದ್ಧವಾಗಿದೆಯೇ. ಇಲ್ಲವಾದಲ್ಲಿ ಇದನ್ನು ನಾಗರೀಕತೆಯ ಲಕ್ಷಣ ಎಂದಲ್ಲದೆ ಬೇರೇನನ್ನಲು ಸಾಧ್ಯ ?






ನಾ. ದಿವಾಕರ ಅವರಿಗೆ—-ನಮ್ಮ ಸಮಾಜದ ಬಹುಪಾಲು ಜನಗಳು ಯೋಚಿಸುವುದಕ್ಕಿಂತ ಭಿನ್ನವಾಗಿ ಚಿಂತಿಸುವುದು , ಲೇಖನಗಳನ್ನು ಬರೆಯುವುದು ಚಿಂತಕರು ಮತ್ತು ಬುದ್ಧಿಜೀವಿಗಳು ಲಗಾಯ್ತಿನಿಂದ ಮಾಡುತ್ತಾ ಬಂದಿರುವ ಕೆಲಸ. ಅದರಂತೆ ತಾವೂ ಸಹ ಈ ಲೇಖನ ಬರೆದಿದ್ದೀರಿ. ಮಹಿಳೆಯರು ತಮ್ಮ ಪ್ರಕೃತಿ ಸಹಜವಾದ ಕಾರಣಗಳಿಂದ ಪುರುಷರಿಗೆ ಹೋಲಿಸಿದರೆ ದೈಹಿಕವಾಗಿ ಅಶಕ್ತರು . ಇದನ್ನು ತಾವು ಅರಿತಿದ್ದೀರಿ ಎಂದು ಭಾವಿಸಿದ್ದೇನೆ. ಬಹು ಹಿಂದಿನ ಕಾಲದಲ್ಲಿ ಹೇಳುತ್ತಿದ್ದ ಒಂದು ಮಾತು ಹೇಳಿದರೆ ತಮಗೆ ಮತ್ತು ಸ್ತ್ರೀ ವಾದಿಗಳಿಗೆ ಕೋಪ ಬರಬಹುದು. ಆದರೂ ಹೇಳುತ್ತೇನೆ. ಅದು ಹೀಗಿದೆ–. ‘ಹೆಣ್ಣು ಮಕ್ಕಳು ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿ, ವಿವಾಹವಾದ ಮೇಲೆ ಗಂಡನ ರಕ್ಷಣೆಯಲ್ಲಿ ಮತ್ತು ವಯಸ್ಸಾದ ಮೇಲೆ ಗಂಡು ಮಕ್ಕಳ ರಕ್ಷಣೆಯಲ್ಲಿ ಬೆಳೆಯಬೇಕು ‘. ಈ ಮಾತನ್ನು ಇಂದು ಮಹಿಳಾವಾದಿಗಳು ಪುರುಷ ಸಮಾಜದ ಅಹಂಕಾರ, ಗಂಡಸಿನ ದಬ್ಬಾಳಿಕೆ, ಇತ್ಯಾದಿ ಪದಗಳಿಂದ ಟೀಕಿಸುತ್ತಾರೆ. ಹಿಂದಿನ ಕಾಲದ ಗಂಡಸರೆಲ್ಲಾ ಶ್ರೀರಾಮನ ಅಪರಾವತರದವರೇನೂ ಆಗಿರಲಿಲ್ಲ. ಇದಕ್ಕೆ ನಮ್ಮ ಮುಂದೆ ಅಹಲ್ಯೆ, ಸೀತೆ . ದ್ರೌಪದಿ ಇವರುಗಳ ದುಃಖದ ಕಥೆಯೇ ಇದೆ. ಇವರುಗಳ ಕಥೆಯ ಸಾರ ರೂಪವಾಗಿ ಆ ವಾಕ್ಯ ಹುಟ್ಟಿರಬಹುದು. ಅತ್ಯಾಚಾರವೆಸಗುವವರಿಗೆ ಶಿಕ್ಷೆಯ ಭಯವಿಲ್ಲದಿದ್ದರೆ ಇಂದಿನ ಹೆಣ್ಣುಮಕ್ಕಳು ಯಾವ ಧೈರ್ಯದಿಂದ ರಸ್ತೆಗಳಲ್ಲಿ ನಡೆಯಬೇಕು? ತಮ್ಮ ಕೆಲಸದ ಕಛೇರಿಗಳಲ್ಲಿ , ಶಾಲಾ ಕಾಲೇಜುಗಳಲ್ಲಿ ಪ್ರತಿ ದಿನವನ್ನೂ ಆತಂಕದಿಂದಲೇ ಕಳೆಯಬೇಕಾಗುತ್ತದಲ್ಲವೇ? ಅತ್ಯಾಚಾರಿಗಳ ಮನ ಪರಿವರ್ತನೆಯ ಕೆಲಸ ಮಾಡಿ ಒಂದೆರೆಡು ವರ್ಷಗಳ ನಂತರ ಈಚೆಗೆ ಬಿಟ್ಟರೆ ಅವರಿಗೆ ‘ಅಯ್ಯೋ ಇಷ್ಟೇ ತಾನೇ; ಒಂದೆರೆಡು ವರ್ಷ ಊಟ ಹಾಕಿ,ಪಾಠ ಮಾಡಿ ಕಳಿಸುತ್ತಾರೆ’ ಎಂಬ ಭಾವನೆ ಬೆಳೆಯುತ್ತದೆ. ಇಂದು ಅತ್ಯಾಚಾರ ಮಾಡುತ್ತಿರುವವರಲ್ಲಿ ಶಾಲಾ, ಕಾಲೇಜು ಮತ್ತು ವಿ ವಿ ಗಳ ಶಿಕ್ಷಕರು, ಪ್ರಾಧ್ಯಾಪಕರು, ಪ್ರೊಫೆಸರ್ ಗಳು ಹಾಗೂ ಪತ್ರಕರ್ತರು , ಸಾಕಷ್ಟು ಓದಿಕೊಂಡ ಪ್ರಬುದ್ಧ , ವಯಸ್ಸಾದ ರಾಜಕಾರಣಿಗಳು,ವೈದ್ಯರುಗಳೂ ಇದ್ದಾರೆ ಎಂಬುದನ್ನು ಮರೆಯಬಾರದಲ್ಲವೇ? ನೂರು, ಐನೂರು ಲಂಚ ಪಡೆದ ಸರ್ಕಾರಿ ನೌಕರರಿಗೂ ಕಮ್ಮಿಯೆಂದರೂ ಆರು ತಿಂಗಳ ಜೈಲು ಶಿಕ್ಷೆಯ ಜತೆಗೆ ಆಯಾ ಇಲಾಖೆಗಳ ನಿಯಮಗಳಂತೆ ಅವರುಗಳನ್ನು ಕೆಲಸದಿಂದ ಅಮಾನತ್ತು/ವಜಾ ಮಾಡಬಹುದು. ಅಂತಹುದರಲ್ಲಿ ಒಂದು ಹೆಣ್ಣಿನ ಮೇಲೆ ಮಾನಸಿಕವಾಗಿ ದೈಹಿಕವಾಗಿ ಹಲ್ಲೆ ನಡೆಸುವವರಿಗೆ ‘ಹಿತೋಪದೇಶ, ಭಗವದ್ಗೀತೆಯ ಪ್ರವಚನ ಮಾಡುವುದು ‘ ಸರಿಯೇ?