ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಮನೆ ಅಂಕಣ- ಆಗ… ಆಗಸದಲಿ ಚಂದ್ರ ನಗುತ್ತಿದ್ದನು… ನನ್ನ ನೋಡಿ ಅವಳೂ ನಕ್ಕಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

7

ನಾನು ಹಾಗೂ ಆ ಮೆಳ್ಳಗಣ್ಣಿನ ಹುಡುಗಿ ಇಬ್ಬರೂ ಕೂಡಿ ಮಾತಾಡಿ ಪರಸ್ಪರ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದು ಆ ಮನೆಯವರೆಲ್ಲರಿಗೂ ಖುಷಿಯಾಗಿತ್ತು… ನಾನು ಮತ್ತು ಭಾವಾಜಿ ಮತ್ತೆ ಬರುವುದಾಗಿ ಹೇಳಿ ಹಾಗೂ ಇನ್ನು ಕೆಲವೇ ದಿನಗಳಲ್ಲಿ ನಮ್ಮ ತಂದೆ ತಾಯಿ ಹಾಗೂ ಅಕ್ಕ ಭಾವನವರನ್ನು ಕರೆತರುವುದಾಗಿ ಹೇಳಿ ಹೊರಟಿನಿಂತೆವು…

ಆ ತಾಯಿ ಲಿಂಗಮ್ಮನವರು ಮುಖದ ತುಂಬಾ ಆನಂದವನ್ನು ತಂದುಕೊಂಡು ‘ಊಟ ಮಾಡ್ಕೊಂಡೋಗಿ ಆಗ್ಲೆ ಊಟದ ಟೇಮಾಗದೆ… ಇನ್ನು ಇವರೋಗಿ ಅಡ್ಗೆ ಮಾಡ್ಕೊಂಡು ಊಟ ಮಾಡೋದು ಎಷ್ಟೊತ್ತಾದದೋ ಏನೋ…’ ಎಂದರು. ಅದಕ್ಕೆ ಭಾವಾಜಿಯವರು ‘ಇಲ್ಲ ಇಲ್ಲ… ಎಲ್ಲಾ ಮಾತುಕತೆಯಾಗ್ಲಿ… ಹಿರಿಯರೆಲ್ಲ ಬಂದ ದಿನ ಒಬ್ಬಟ್ಟಿನೂಟ ಮಾಡ್ಬುಡಿ… ಅವತ್ತೇ ಇವತ್ತಿನದೂ ಸೇರಿ ಊಟ ಮಾಡ್ಬಿಡ್ತೀನಿ ಕಣ… ಇವತ್ತು ಊಟನ ಮಾಡೋದೂ ಶಾಸ್ತçವೂ ಅಲ್ಲ’ ಎಂದು ಎಲ್ಲರಿಗೂ ನಮಸ್ಕರಿಸಿ ಮುಂದೆ ಹೆಜ್ಜೆ ಹಾಕಿದರು.

‘ತಡಿರಿ… ಇನ್ನೊಂದಪ ಕಾಫಿ ಕುಡಿದೋಗಿವರಂತೆ’ ಎಂದರು ಆ ತಾಯಿ ನನಗೆ ಅದೇನು ಶಾಸ್ತ್ರವೋ ಅರ್ಥ ಆಗಲಿಲ್ಲ… ಈ ಶಾಸ್ತ್ರ ಗೀಸ್ತ್ರ ಎಲ್ಲಾ ಯಾರಿಗೆ ಗೊತ್ತು… ನನ್ನ ಒಂಟಿ ಜೀವನದಲ್ಲಿ ಟೈಮ್ ಟೈಮ್‌ಗೆ ಊಟ ಬೀಳೋದು ಕಷ್ಟವಾಗಿದ್ದ ಕಾಲ ಅದು… ಸಾಧ್ಯವಾದರೆ… ಅಡಿಗೆ ಮಾಡುವುದಿತ್ತು ಇಲ್ಲದಿದ್ದರೆ ಇಲ್ಲ… ಬ್ಯಾಚುರಲ್ಸ್ಗೆ ಅಡಿಗೆ ಮಾಡಿಕೊಳ್ಳುವುದು… ಹಾಗೂ ಪಾತ್ರೆಗಳನ್ನು ತೊಳೆಯುವುದು… ಮನೆಯ ಕಸ ಗುಡಿಸುವುದು… ಬಟ್ಟೆಗಳನ್ನು ಒಗೆದುಕೊಳ್ಳುವುದು ಒಂದು ರೇಜಿಗೆಯ ಕೆಲಸ… ಅದೆಷ್ಟೋ ದಿನಗಳಲ್ಲಿ ಉಳಿದ ಅನ್ನವನ್ನು… ಮಾಡಿದ ಅನ್ನ ಸಾರನ್ನು ಆಚೆಗೆ ಹಾಕದೆ ಪಾತ್ರೆ ಸಮೇತ ಬಚ್ಚಲಲ್ಲಿ ಹಾಕಿ ನಾಟಕ ಅಂತ ಊರೂರು ಸುತ್ತಿದ ದಿನಗಳು ಅದೆಷ್ಟು ಇದ್ಯಾವೋ… ವಾಪಸ್ ಬಂದು ನೋಡಿದರೆ ಆಹಾರ ಕೊಳೆತು ಮನೆಯಲ್ಲಾ ದುರ್ನಾತ ಹೊಡೆಯುತ್ತಿದ್ದದು ಅದೆಷ್ಟೋ ಕಾಲವೋ.

ಒಮ್ಮೊಮ್ಮೆ ಬಟ್ಟೆ ಒಗೆಯಲು ಎಂದು ನುನಿಯಾಕಿ ಸೋಂಬೇರಿ ತನದಿಂದ ನಾಳೆ ಒಗೆದರಾಯಿತು… ನಾಳಿದ್ದು ಒಗೆದರಾಯಿತು ಎಂದು ಐದಾರು ದಿನ ಹಾಗೇ ಬಿಟ್ಟು… ಆ ಬಟ್ಟೆಗಳು ವಾಸನೆ ಬಂದು ನಾರುತ್ತಿದ್ದ ಸಂದರ್ಭಗಳು ಅದೆಷ್ಟೋ… ಒಮ್ಮೊಮ್ಮೆ ಮನೆಕಸವನ್ನೇ ಗುಡಿಸದೇ ಕಾಲಕಳೆದದ್ದು ಉಂಟು ಕಣ್ರಿಪ್ಪಾ…

ನನ್ನಂತವರನ್ನು ಕಂಡೇ ಇರಬೇಕು ಬಸವಣ್ಣನವರು
ಮನೆಯೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ… ಮನೆಯೊಳಗೆ ರಜ ತುಂಬಿ…
ಈ ವಚನವನ್ನು ಬರದರೇನೋ ಅನ್ನಿಸಿಬಿಡುತ್ತಿದೆ… ಆದರೆ ಈ ವಚನದ ವಾಚ್ಯಾರ್ಥವನ್ನು ಅರ್ಥೈಸಿಕೊಳ್ಳದೇ ನಿರ್ಮಲ ಮನಸ್ಸಿನಿಂದ… ಪ್ರೀತಿಯಿಂದ… ಪ್ರೇಮದಿಂದ ಇರಬೇಕು ಆ ಮೂಲಕ ಮನದ ನೈರ್ಮಲ್ಯವನ್ನು ತೊಡೆದು ಹಾಕುವಂತೆ ಹೇಳುತ್ತಾ ಜಗದ ನೈರ್ಮಲ್ಯವನ್ನು ತೊಡೆದುಹಾಕು ಎಂದು ಈ ವಚನದ ಮುಂದಿನ ಸಾಲುಗಳು ಹೇಳುತ್ತವೆ ನೋಡಿ…
ತನುವಿನೊಳಗೆ ಹುಸಿ ತುಂಬಿ
ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ ಇಲ್ಲಾ
ಕೂಡಲಸಂಗಮ ದೇವಾ
ಸತಿ ಪತಿಗಳಾಗುವವರೂ ಅಷ್ಟೇ… ತನುವಿನೊಳಗೆ ಹುಸಿ ತುಂಬಿಕೊಂಡು ಇರಬಾರದು. ಮನದೊಳಗೆ ವಿಷಯ ತುಂಬಿಕೊಂಡು ಇರಬಾರದು. ಯಾವುದೇ ಕ್ಲೇಷ, ಯಾವುದೇ ಕಸ ತುಂಬಿಕೊಳ್ಳದೆ ಇರಿ… ಇದ್ದರೆ ಅದನ್ನು ಹೊರಹಾಕಿ… ಹೊರದಬ್ಬಿ… ತನು ಮತ್ತು ಮನವನ್ನು ಪರಿಶುದ್ಧವಾಗಿಟ್ಟುಕೊಂಡು ದಂಪತಿಗಳಾಗಬೇಕು- ಆ ದಾಂಪತ್ಯವನ್ನು ಶಿವ ಮೆಚ್ಚುವಂತೆ ಬದುಕಬೇಕು. ಆ ವಚನವನ್ನು ಹೀಗೂ ಅರ್ಥೈಸಲಿಕ್ಕೆ ಸಾಧ್ಯತೆ ಇದೆ… ವಚನದ ಭಾವಾರ್ಥ ಇದು ಆಗಿರಬೇಕು. ಹೆಣ್ಣು-ಗಂಡುಗಳ… ಗಂಡ-ಹೆಂಡತಿಯ ಅಂತರಂಗ ಬಹಿರಂಗಗಳ ಕುರಿತೂ ಸಹ ಈ ವಚನವನ್ನು ಹೇಳಿದ್ದಾನೆ ಬಸವ…

ನಾನು ಆ ಹುಡುಗಿಯ ಮನೆಯಿಂದ ಹೊರಟಾಗ… ನನ್ನ ಶ್ರೀನಿವಾಸನಗರದಲ್ಲಿನ ಆ ಮನೆಯ ಚಿತ್ರಣ-ನನ್ನ ಬದುಕಿನ ಸ್ಥಿತಿ ನೆನಪಾಯಿತು… ಬಸವನ ಈ ವಚನ ನನಗೆ ಆ ಸಂದರ್ಭದಲ್ಲಿ… ಹೊಸದೊಂದು ಹೊಳವನ್ನು ತಂದುಬಿಟ್ಟಿತು… ಮನೆ-ಮನ-ದಾಂಪತ್ಯ-ಕುಟುಂಬ- ಹೇಗಿರಬೇಕೆಂದು ಬಸವ ಹೇಳುತ್ತಿದ್ದಾನೆಯೇ ಎಂಬ ಫ್ಲಾಶ್ ಹೊಳೆದು… ನಾನು ಮತ್ತು ನನ್ನ ಮಡದಿಯಾಗುವವಳು ಮದುವೆಯ ನಂತರ ದಿನಗಳಲ್ಲಿ ಶಿವ ಮೆಚ್ಚುವಂತೆ… ಬಸವ ಹೇಳಿದಂತೆ ಬದುಕಬೇಕು ಎಂದು ನಿರ್ಧರಿಸಿಬಿಟ್ಟೆ…

ಆ ಹುಡುಗಿ, ಮನೆಯಿಂದ ಹೊರಡುವ ಸಮಯ ಬಂತು ನನ್ನ ಭಾವ ಮತ್ತೊಂದು ಬಾಂಬ್ ಹಾಕಿದರು. ‘ಸ್ವಾಮ್ಯೋರಾ… ಮುಂದಿನ ಶನಿವಾರ ನೀವು ಆದಿವಾಲಕ್ಕೋಗಿ… ಅಲ್ಲೆಲ್ಲೇ ನೋಡ್ಕೊಡು… ಅಂಗೇಯಾ ಹುಡ್ಗೀಯಾ ನಾಗಮಂಗಲಕ್ಕೂ ರ‍್ಕೊಂಡೋಗಿ ನಿಮ್ಮಮ್ಮ ಅಪ್ಪಾಜೀಗೂ ತೋರಿಸ್ಕೊಂಡು… ಅವರು ಯಾವತ್ತು ಹೆಣ್ಣಿನ ಮನೆ ನೋಡಕ್ಕೆ ಬತ್ತಾರೆ ಅನ್ನೋದನ್ನು ತಿಳಿಸ್ಬಿಡ್ರೀ… ಏನ್ ಯಜಮಾನ್ರೇ ನಮ್ಮುಡಗ… ನಿಮ್ಮುಡಿಗೆ ಕೆಲಸ ಮಾಡೋ ಊರಿಗೆ ಹೋಗಿ ಬರಬಹುದೇನ್ರಿ… ಏನಮ್ಮಾ… ಆದಿವಾಲಕ್ಕೆ ನಮ್ಮ ಸ್ವಾಮ್ಯೋರು ಬರಬಹುದೇನಮ್ಮಾ…’ ಎಂದು ಪ್ರಶ್ನೆ ಎಸೆದರು… ಅಲ್ಲಾ ಈ ಭಾವಾಜಿ ನನ್ನನೇನೂ ಕೇಳದೆ ನನಗೆ ಹೀಗೆ ಶಾಕ್ ಕೊಡ್ತಾ ಇರಾರೆಲ್ಲ ಎನಿಸಿತು… ನಾನು ಏನೂ ಮಾತಾನಾಡದೇ ಸುಮ್ಮನಿರಬೇಕಲ್ಲ… ಏನು ಮಾತಾಡಿದರೆ ಎನ್ ತಪ್ಪೋ… ನನ್ನದು ಉಭಯ ಸಂಕಟ… ನನ್ನ ಭಾವಾಜಿಯದು ಸುಗ್ರೀವಾಜ್ಞೆ…

‘ಅಲ್ಲಾ… ಇನ್ನು ಏನು ಮಾತುಕತೆಯಾಗಿಲ್ಲ… ಅವರ ಮನೆಯವರಾರು ನಮ್ಮನೆಗೆ ಬಂದಿಲ್ಲ… ಅದುಯೇನು ಇಲ್ದೇ… ಹುಡ್ಗ, ಹುಡ್ಗಿ ಕೆಲಸ ಮಾಡೋ ಜಾಗಕ್ಕೆ ಹೋಗೋದೂ… ನಮ್ಮ ಹುಡ್ಗಿ ಕರಕ್ಕೊಂಡು ಇಬ್ರೂ ಅವರೂರಿಗೋಗದು… ಸರಿಯೇ… ಇದೆಲ್ಲ ಆ ಮೇಲಾಗ್ಲಿ ಬಿಡಿ… ಮೊದ್ಲು… ಅವರ ತಂದೆ ತಾಯಿ ನಮ್ಮನೆಗೆ ರ‍್ಲಿ’ ಎಂದರು ಯಜಮಾನರು.

‘ಸುಮ್ಮಿರಪ್ಪಾ… ನಿನಗೇನು ತಿಳಿಯಕ್ಕಿಲ್ಲ… ಹೂಂ ಅನ್ನಕ್ಕೇನು ನಿಂಗೆ’ ಎಂದರು ಹುಡುಗಿಯ ಅಣ್ಣ ರೇಣುಕಪ್ಪನವರು
‘ಹೂಂ… ಹೋಗ್ಬನ್ನಿ… ಈಗಿನ ಕಾಲ ಅಂಗದೆ…’ ಎಂದು ಅರೆಮನಸ್ಸಿನಿಂದಲೇ ಒಪ್ಪಿಗೆ ಕೊಟ್ಟರು ಯಜಮಾನರು…
ಮತ್ತೊಂದು ಸುತ್ತು ಕಾಫಿ ಬಂದಿತು… ತಂದವಳು ಮೆಳ್ಳಗಣ್ಣಿ ಹುಡುಗಿಯ ತಂಗಿ ರೇಣುಕಾ… ಕಾಫಿ ಕುಡಿಯುತ್ತಾ ಯಜಮಾನರು… ಭಾವಾಜಿ… ರೇಣುಕಪ್ಪನವರು ಮನೆಯಿಂದ ಹೊರಹೋಗಿ ಮಾತಾಡಲು ನಿಂತರು… ಮನೆಯೊಳಗೆ ನಾನೊಬ್ಬನೇ…
‘ಕಾಫಿ ಚನ್ನಾಗಿದೆಯಾ… ಗಂಗಾನೇ ಮಾಡಿದ್ದು…’ ರೇಣುಕಾ ನಗುತ್ತಾ ಕೇಳಿದರು.
‘ಹೂಂ’ ಎಂದೆ ನಾನು…
‘ಗಂಗಾ ಒಪ್ಪಿಗೆ ಆದ್ಲ…’ ರೇಣುಕಳಿಂದ ಮತ್ತೊಮ್ಮೆ ನಗು… ಮತ್ತೊಂದು ಪ್ರಶ್ನೆ…
ನಾನು ಸುಮ್ಮನೆ ಕಾಫಿ ಕುಡಿಯುವವನಂತೆ ನಟಿಸಿದೆ… ನನ್ನ ಅಭಿನಯ ಚಾತರ‍್ಯ ಸಹಾಯಕ್ಕೆ ಬಂತು…
‘ಅಲ್ಲಾ ಗಂಗಾ ಕಪ್ಪಗಿದ್ದಳು… ನೀವು ಹ್ಯಾಂಡ್‌ಸಮ್… ಮತ್ತೆ ಬೆಳಗಿದ್ರಿ… ನೀವು ಗಂಗನ್ನ ಒಪ್ಪಿಕೊಳ್ಳಲ್ಲ ಅಂತಾ ಮಾತಾಡಿಕೊಳ್ಳುತ್ತಿದವು ಒಳಗಡೆ… ಆದರೆ ಗಂಗಾಳನ್ನು ನೀವು ಒಪ್ಪಿಕೊಂಡುಬಿಟ್ರೀ…’ ರೇಣುಕಾ ಮಾತು ಮುಗಿಸೇ ಇರಲಿಲ್ಲ… ಒಳಮನೆಯಿಂದ ‘ಸುಮ್ನೆ ಬಾಯ್ ಮುಚ್ಕೋಂಡು ಬಾರೇ…’ ದನಿ ಬಂತು. ಅದ್ಯಾರದೋ ದನಿಯೇ ಗೊತ್ತಾಗಲಿಲ್ಲ ನನಗೆ… ಹುಬ್ಬು ಮೇಲೆತ್ತಿ ಯಾರದು ಎಂದು ಪ್ರಶ್ನಿಸಿದೆ ರೇಣುಕಳಿಗೆ.

‘ಅವಳು ಇನ್ನೊಬ್ಬಕ್ಕ… ಮಂಗಳಾ ಅಂತ, ಅವಳು ಹಾಗೇ…’ ಎಂದಳು ರೇಣುಕೆ…
ಹೊರಗೆ ಮಾತಾಡುತ್ತಾ ನಿಂತಿದ್ದ ಆ ಮೂವರು ಒಳ ಬರುತ್ತಾ ಇದ್ದುದನ್ನು ಕಂಡು ರೇಣುಕಾಳು ನಾನು ಕಾಫಿ ಕುಡಿದಿಟ್ಟಿದ್ದ ಲೋಟವನ್ನು ತೆಗೆದುಕೊಂಡು ಒಳಗೋಡಿದಳು…
ಆ ಮನೆಯಿಂದ ಬೀಳ್ಕೊಂಡ ನಾವು ನಮ್ಮನಮ್ಮ ಮನೆ ತಲುಪಿದೋ…
ಹೆಣ್ಣಿನ ಮನೆಗೆ ಹೋಗಿ… ಮಾತಾಡಿದ್ದು ಎಲ್ಲ ವಿಷಯ ತಿಳಿಸಿ… ಮುಂದಿನ ಭಾನುವಾರ ನಾನು ಹಾಗೂ ಹುಡುಗಿ ನಾಗಮಂಗಲಕ್ಕೆ ಬರುತ್ತಾ ಇದ್ದೇವೆಂದು ಮನೆಗೆ ಪತ್ರ ಹಾಕಿದೆ…
ಆ ಶನಿವಾರ ಬಂದೇ ಬಿಟ್ಟಿತು… ನಾನು ನನ್ನ ಕೆಲಸ ಮುಗಿಸಿ… ಆದಿವಾಲದ ಕಡೆಯ ಬಸ್ ಹತ್ತಿದೆ… ಹಿರಿಯೂರು ತಲುಪಿದಾಗ ಸಂಜೆ ಐದರ ಸಮಯ… ಆದಿವಾಲ ತಲುಪಲು ಯಾವುದಾದರೂ ವಾಹನ ಹಿಡಿಯಬೇಕು… ಹಿರಿಯೂರಿನಿಂದ… ಆದಿವಾಲಕ್ಕೆ ನಾಲ್ಕು ಕಿ.ಮೀ. ಹಿಮ್ಮುಖ ಪಯಣ… ಅದಾಗಲೇ ಭರ್ತಿಯಾಗಿ ಹೆರಿಗೆಯಾಗಲು ಕ್ಷಣಗಣನೆ ಮಾಡುತ್ತಿದ್ದ ಬಸುರಿಯಂತಿದ್ದ ಆಟೋ ಹತ್ತಿ ಕುಳಿತೇ ಕಣ್ರೀ… ಆ ಚುಲ್ಟಾರಿ ಕಂಡಕ್ಟರ್-ಕಂ-ಕ್ಲೀನರ್-ಕಂ-ಏಜೇಂಟ್… ರಟ್‌ರಟ್ ರೈಟ್ ಎಂದ. ಆಹಾ… ಎಂಥಾ ಜರ್ನಿರೀ ಅದು…

ಅವರಿವರ ಮೈ ಮೈ ತಾಗಿ
ನಿದ್ದೆ ಬಂದವರ ತಲೆ ತಲೆಗಳು ತೂಗಿ
ಕುಳಿತ್ತಿದ್ದವರ ಮೂಳೆ ಮೂಳಗೆಗಳು ಬಾಗಿ
ಪಯಣದಲಿ ಬದುಕುಳಿದವನೇ ಯೋಗಿ
ಎನ್ನುತಾ… ಸಾಹಸದಲಿ ಬಂದೆನು ಸಾಗಿ
ಆದಿವಾಲಕೆ…
ಆಗ ಮಬ್ಬು ಸಂಜೆಯಾಗಿತ್ತು…
ಆಗಸದಲಿ ಚಂದ್ರ ನಗುತ್ತಿದ್ದನು…
ನನ್ನ ನೋಡಿ ಅವಳೂ ನಕ್ಕಳು…
‘ಅಗ್ಗೋ… ಬಂದೇ ಬಿಟ್ರು ಅಕ್ಕೋ’ ಎಂದಳು…

ಕಣಮಕ್ಕ ಹಾಗೂ ಕಣವೆಪ್ಪನವರು ನನ್ನನ್ನು ಬಹಳ ಪ್ರೀತಿ ಆದರಗಳಿಂದ ಸ್ವಾಗತಿಸಿದರು… ಆ ಮನೆಯ ಪಕ್ಕದ ಪುಟ್ಟದೊಂದು ರೂಮಿನಲ್ಲಿ ಆ ಮೆಳ್ಳಗಣ್ಣಿನ ಹುಡುಗಿ ವಾಸ್ತವ್ಯ ಹೂಡಿದ್ದಳು…
ಕಾಫಿಯ ಆತಿಥ್ಯವಾಯಿತು…

ಕಣವೆಪ್ಪನವರ ಮುಗಿಯದ ಮಾತು ಸಾಗೇ ಇತ್ತು… ‘ಬಂದೊರತ್ರ ಎಲ್ಲಾ ಅದೆಷ್ಟ್ರೀ ಮಾತು ನಿಮ್ದು… ಕಣಮಕ್ಕನವರು ಒಳಗಿನಿಂದಲೇ ಗದರಿಕೊಂಡರೂ ಕಣವೆಪ್ಪನದು ಮಾತು…ಮಾತು…ಮಾತು.
‘ತಡಿಯೇ… ನೀ ಸುಮ್ನಿರು… ಸಾಹಿತಿಗಳು-ಕಲಾವಿದರೂ… ನಮ್ಮನಿಕೆ ಬಂದವರೆ… ಅರ‍್ಜೊತೆಗೆ ಮಾತಾಡ್ತಿದ್ದೀನಿ… ನಿಂಜೊತಿಗೆ ಮಾತಾಡನೆ? … ನಿನ್ನಂತಿಕೆ ಮಾತಾಡದೇನದೆ ಕಣಿ… ಅಲ್ವೇ ಸಾ…’ ಎಂದು ಮತ್ತೆ ಮಾತು ಮುಂದುವರಿಸಿದರು… ಗಸಗಸೆ ಪಾಯಸದ ಗಮಲು ಅಡಿಗೆ ಮನೆಯಿಂದ ನಡುಮನೆಗೆ ಬರುತ್ತಿತ್ತು… ನಡುನಡುವೆ ಗುಸುಗುಸು ಮಾತು… ಮುಸು ಮುಸು ನಗೆ ಕಿವಿಯೆಡೆಗೆ ತೇಲಿ ಬರುತ್ತಿತ್ತು…

ಬಿಸಿ ಬಿಸಿಯಾದ ರಸಗವಳ… ಗಸ್ಗಸೆ ಪಾಯ್ಸ… ಕೊನೆಗೆ ಏಲಕ್ಕಿ ಬಾಳೆಹಣ್ಣು… ಉದುರ ಸಂತೃಪ್ತಿಯಾಯಿತು… ಎಲ್ಲರ ಊಟವೂ ಮುಗಿಯಿತು… ಆದರೆ ಕಣವೆಪ್ಪನವರ ಮಾತು ಮುಗಿಯದು… ಹೆಂಡತಿ ಕಣವೆಮ್ಮನಿಗೂ ಎಲೆಯಡಿಕೆಯನ್ನು ಮಡಿಸಿಕೊಟ್ಟು… ನನ್ನ ಮುಂದೆಯೂ ಎಲೆಯಡಿಕೆ ತಟ್ಟೆ ಇಟ್ಟು… ‘ಆಯ್‌ಕೊಳ್ಳಿ ಸಾ’ ಎನ್ನುತ್ತಾ… ಟೇಪ್‌ರೆಕಾರ್ಡ ಆನ್ ಮಾಡಿದರು… ನಾನು ಅವರೊಂದಿಗೆ ಆಡಿದ ಮಾತುಗಳನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ಬಿಟ್ಟಿದ್ದರು… ಅದನ್ನೆಲ್ಲ ಆ ಮೆಳ್ಳಗಣ್ಣಿಗೆ ಹಾಗೂ ಮಡದಿಗೆ ಕೇಳಿಸಿ… ‘ಗಂಗಮ್ಮೋರೆ… ಇಂತಾ ಯಜಮಾನರಾ ಪಡೆಯಕ್ಕೆ ಪುಣ್ಯ ಮಾಡಿದ್ರಿ… ಎಂಥಾ ಒಳ್ಳೆ ಮನ್ಸ… ಜೊತೆಗೆ ಕಲಾವಿದ… ಸಾಹಿತಿ… ಪುಣ್ಯ ಕಂಡ್ರಿ ನಿಮ್ದು…’ ಎಂದು ಮಾತಿಗೆ ಷರಾ ಬರೆದರು…

‘ಹೋದ ಸೋಮವಾರ ಟಿ.ವಿ.ಯಲ್ಲಿ ಕವನಾ ಓದಿದ್ರಂತೆ… ಪ್ರೇಮ ಪತ್ರ ಹಾಕಿದಳು’ ಎಂದು ನನ್ನತ್ರ ಅಭಿಮಾನದಿಂದ ನೋಡಿದಳು… ಆ ಹುಡುಗಿ.

‘ಅಗೊಳ್ಳಪ್ಪ… ನೀವು ಟಿ.ವೀಲಿ ಬಂದಿದ್ರಾ ಸಾ… ಕವನ ಓದಿದ್ರಾ ಸಾ…’ ಕಣವೆಪ್ಪನವರು ನನ್ನನ್ನು ಬೆರಗಿನಿಂದ ನೋಡಿದರು… ‘ಹೌದೇ… ನಮ್ಮನೆಲೂ ಟಿ.ವಿ. ಇದ್ದಿದ್ರೆ ನಾವೂ ನೋಡ್ಬಹುದಾಗಿತ್ತು… ತಗೊಳ್ಳಪ್ಪಾ… ಮೊದ್ಲೆ ಹೇಳಕ್ಕಿಲ್ವ ಮೇಡಂನವರೆ ಕೆಳಗಲ ಬೀದಿ ವೆಂಕಟಸಾಮಿ ಮನೇಲಾರ ಹೋಗಿ ನೋಡ್ಬಹುದಿತ್ತು… ಎಂದರು ಕಣವೆಪ್ಪನವರು.

ಆಗ ೧೯೯೧ರ ದಿನಗಳು… ಬೆಂಗಳೂರಿನ ದೂರದರ್ಶನದಲ್ಲಿ ವಾರಕ್ಕೊಮ್ಮೆ ‘ಯುವ ಕವಿಗೋಷ್ಠಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು… ‘ಕನ್ನಡದ ಹಾಮ್ಲೆಟ್’ ಶ್ರೀನಿವಾಸಪ್ರಭು ಆ ಕಾರ್ಯಕ್ರಮದ ರೂವಾರಿಗಳು… ಗೆಳೆಯ ರಂಗಸಂಘಟಕ ಕೆ.ವಿ. ನಾಗರಾಜ ಮೂರ್ತಿ ಆ ಕವಿಗೋಷ್ಠಿಗಳ ಸಂಘಟಕ… ಆ ಕರ‍್ಯಕ್ರಮದ ಮೊದಲ ಗೋಷ್ಠಿಗೇ ನನ್ನನ್ನೂ ಕವಿತೆ ಓದಲು ಆಹ್ವಾನಿಸಿದ್ದ… ಗೆಳೆಯ.

ಅಂದು ಕವಿತೆ ಓದಿದವರು ಯರ‍್ಯಾರು ಗೊತ್ತೇ ನಿಮಗೆ… ಅಂದಿಗೇ ಕವಿಗಳಾಗಿ ಹೆಸರು ಮಾಡಿದ್ದ ಕವಿಗಳಾದ ಗೆಳೆಯ ಜಿ.ಎನ್. ಮೋಹನ… ಹೆಚ್.ಎಲ್. ಪುಷ್ಪಾ… ಸಂಧ್ಯಾರೆಡ್ಡಿ… ಇವರ ಜೊತೆಗೆ ನಾನು ಅಂದಿನ ‘ಮಲ್ಲಿ’ ಆ ಗೋಷ್ಠಿಯ ಅಧ್ಯಕ್ಷತೆಯನ್ನು ಹೆಸರಾಂತ ಕವಿಗಳು ಹಾಗೂ ನಾಟಕಕಾರರು ಆದ ಹೆಚ್.ಎಸ್. ಶಿವಪ್ರಕಾಶ್ ವಹಿಸಿದ್ದರು.
ನಾನು ಅಂದು ಓದಿದ ಕವಿತೆ ‘ಅನಾಥ ಕರ್ಣ’.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

17 July, 2021

1 Comment

  1. ಲಲಿತಾ ಸಿದ್ಧಬಸವಯ್ಯ

    ಇಲ್ಲೀವರೆಗಿನ ಮಾಲಿಕೆ ಸರಾಗ ಗದ್ಯದಲ್ಲಿ , ಹಾಸ್ಯ ಧಾಟಿಯಲ್ಲಿ ಖುಷಿಯಿಂದ ಓದಿಸಿಕೊಳ್ಳುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading