ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಭಾರತದ ನಂತರ..

ಮೂಲ – ಉದಯ್ ಪ್ರಕಾಶ್

ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಗಡಿ ಜಿಲ್ಲೆಯ ಅನುಪ್‌ಪುರ್‌-ದ ಸಣ್ಣ ಹಳ್ಳಿಯಾದ ಸೀತಾಪುರದಲ್ಲಿ ೧೯೫೨ ರಲ್ಲಿ ಜನಿಸಿದ ಉದಯ್ ಪ್ರಕಾಶ್ ತಮ್ಮ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಕಳೆದರು.  ಅವರು ವಿಜ್ಞಾನದಲ್ಲಿ ಪದವಿ ಪಡೆದರು ಮತ್ತು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೆ ಉದಯ್ ಪ್ರಕಾಶ್ ೧೯೮೦-ರ ದಶಕದ ಚರ್ಚಿತ ಕವಿಯಾಗಿದ್ದರು.  “ಸುನೊ ಕಾರೀಗರ್,” “ಅಬೂತರ್ ಕಬೂತರ್,” ರಾತ್ ಮೇ ಹಾರ್ಮೋನಿಯಮ್,” “ಏಕ್ ಭಾಷಾ ಹುವಾ ಕರ್ತೀ ಥಿ,” “ಅಂಬರ್ ಮೇ ಅಬಾಬೀಲ್,” ಹಾಗೂ “ಕವಿ ನೆ ಕಹಾ” ಉದಯ್ ಪ್ರಕಾಶ್ ಅವರ ಕವನ ಸಂಗ್ರಹಗಳು.  ಅವರು ಸಣ್ಣ ಕಥೆಗಳ ಕ್ಷೇತ್ರದಲ್ಲಿಯೂ ಪ್ರಸಿದ್ಧರಾಗಿರುವರು.  ಅವರ ಕಥೆಗಳನ್ನು ಅನೇಕ ಭಾರತೀಯ ಮತ್ತು ಪ್ರಮುಖ ವಿಶ್ವ ಭಾಷೆಗಳಿಗೆ ಅನುವಾದಿಸಲಾಗಿದೆ.    ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಉದಯ್ ಪ್ರಕಾಶ್ ಅವರು “ದಿನಮಾನ್,” “ಪೂರ್ವಾಗ್ರಹ್,” “ಸಂಡೇ ಮೇಲ್,” ಮತ್ತು “ಎಮಿನೆನ್ಸ್” ಇತ್ಯಾದಿ ಪತ್ರಿಕೆಗಳನ್ನು ಸಂಪಾದಿಸಿದ್ದಾರೆ,  ದೂರದರ್ಶನಕ್ಕಾಗಿ ಟಿವಿ ಧಾರಾವಾಹಿಗಳನ್ನು ಬರೆದಿದ್ದಾರೆ, ನಿರ್ದೇಶಿಸಿದ್ದಾರೆ, ಮತ್ತು ನಿರ್ಮಿಸಿದ್ದಾರೆ, ಹಾಗೂ  ಸಾಹಿತ್ಯ ಅಕಾಡೆಮಿ ಮತ್ತು ಹಿಂದಿ ಅಕಾಡೆಮಿಗಾಗಿ ಹಲವಾರು ಸಾಹಿತಿಗಳ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.  ಅವರು “ಟಿಬೆಟ್” ಕವಿತೆಗಾಗಿ ೧೯೮೦ ರ ಭಾರತ್ ಭೂಷಣ್ ಅಗರ್ವಾಲ್ ಪ್ರಶಸ್ತಿಯನ್ನು ಮತ್ತು “ಮೋಹನ್‌ದಾಸ್” ಕಾದಂಬರಿಗಾಗಿ ೨೦೧೦ ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.

ಕಳೆದ ಎರಡು ದಶಕಗಳಲ್ಲಿ ಪ್ರಕಟವಾದ ಉದಯ್ ಪ್ರಕಾಶ್ ಅವರ ಕಥೆಗಳು, ಅವುಗಳ ನಿರೂಪಣೆ ಮತ್ತು ಕಲ್ಪನಾತ್ಮಕ ರಚನೆಯೊಂದಿಗೆ ಸಾಂಪ್ರದಾಯಿಕ ಕಾದಂಬರಿ ಪಠ್ಯವನ್ನು ಸಂಪೂರ್ಣವಾಗಿ ಪರಿವರ್ತಿಸಿವೆ. ಉದಯ್ ಅವರ ಕಥೆಗಳು ಹೊಸ ಯುಗದ ವಾಸ್ತವತೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. “ತಿರಿಚ್,” “ದರಿಯಾಯಿ ಘೋಡಾ,” “ಔರ್ ಅಂತ್ ಮೆ ಪ್ರಾರ್ಥನಾ,” “ವಾರನ್ ಹೆಸ್ಟಿಂಗ್ಸ್ ಕಾ ಸಾಂಢ್,” “ಪಾಲ್ ಗೋಮ್ರಾ ಕಾ ಸ್ಕೂಟರ್,” “ದತ್ತಾತ್ರೇಯ್ ಕೆ ದುಃಖ್,” “ಪೀಲೀ ಛತ್ರಿವಾಲಿ ಲಡ್ಕಿ,” “ಮೈಂಗೋಸಿಲ್,” ಮತ್ತು “ಮೋಹನ್ ದಾಸ್” ಮುಂತಾದ ಕಥಾ ಸಂಕಲನಗಳು ಈ ಹೊಸ ಯುಗದ ಸೃಷ್ಟಿಗೆ ಕೊಡುಗೆ ನೀಡಿವೆ.

ಆಧುನಿಕ ಹಿಂದಿ ಸಾಹಿತ್ಯದ ಪ್ರಮುಖ ಕಥಾಕಾರರಾಗಿಯೂ ಹೆಸರಾಂತರಾಗಿರುವ ಉದಯ್ ಪ್ರಕಾಶ್ ಅವರು ತಾನು ಮೂಲತಃ ಒಬ್ಬ ಕವಿ ಎಂದು ಹೇಳುತ್ತಾರೆ.  “ನಾನು ಅನೇಕ ಕವಿತೆಗಳನ್ನು ಬರೆದಿದ್ದೇನೆ.  ನನ್ನ ಕಾಲೇಜು ದಿನಗಳಲ್ಲಿ, ನಾನು ಬರೆದ ಒಂದು ಕಥೆ ಬಹಳ ಜನಪ್ರಿಯವಾಯಿತು.  ಕಥೆಗಳು ಹೆಚ್ಚು ಓದುಗರನ್ನು ಪಡೆಯುತ್ತವೆ ಮತ್ತು ಹೆಚ್ಚಿನ ಜನರನ್ನು ತಲುಪುತ್ತವೆ, ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತವೆ ಎಂದು ನಾನು ನಂಬುತ್ತೇನೆ. ನಾನು ಮೂಲತಃ ಕವಿ.  ನನಗೂ ಇದು ಗೊತ್ತು, ಇತರರಿಗೂ ಗೊತ್ತು.  ನಾನು ಆಗಾಗ್ಗೆ ತಮಾಷೆ ಮಾಡುತ್ತೇನೆ, ನಾನು ಆಕಸ್ಮಿಕವಾಗಿ ಒಮ್ಮೆ ಅಂಗಿಯನ್ನು ಹೊಲಿದ ಒಬ್ಬ ಕುಂಬಾರ, ಮತ್ತು ಈಗ ಎಲ್ಲರೂ ಅವನನ್ನು ದರ್ಜಿ ಎಂದು ಕರೆಯುತ್ತಾರೆ. ಸತ್ಯವೆಂದರೆ, ನಾನೊಬ್ಬ ಕುಂಬಾರ. ಯಾರಾದರೂ ಅಂಗಿಯನ್ನು ಹೊಲಿದಾಗ, ಜನರು ಅವನನ್ನು ದರ್ಜಿ ಎಂದು ಭಾವಿಸಲು ಪ್ರಾರಂಭಿಸುತ್ತಾರೆ.  ಕುಂಬಾರನು ಜೇಡಿಮಣ್ಣಿನಿಂದ ಉತ್ತಮವಾಗಿ ಕೆಲಸ ಮಾಡಬಲ್ಲನೆಂದು ತಿಳಿದಿದ್ದರೂ ಮತ್ತು ಅದರಲ್ಲಿ ಹೆಚ್ಚಿನ ಸಂತೋಷವನ್ನು ಕಂಡುಕೊಂಡರೂ, ಜನರು ಮತ್ತೆ ಅವನ ಬಳಿಗೆ ಹೂಜಿ ಖರೀದಿಸಲು ಹೋಗುವುದಿಲ್ಲ.  ಕವಿಯಾಗಿದ್ದರೂ, ನಾನು ಕಥೆಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಎಂಬುದು ನನಗೆ ನಿಜ. ಹಿರಿಯ ಕವಿ ಕೇದಾರನಾಥ ಸಿಂಹ್ ಒಮ್ಮೆ ನನ್ನ ಕಥೆಗಳು ವಾಸ್ತವವಾಗಿ ನನ್ನ ಕವಿತೆಗಳ ವಿಸ್ತರಣೆಯಾಗಿದೆ ಎಂದು ಹೇಳಿದರು.  ಕಥೆಗಳನ್ನು ಬರೆಯುವಾಗ, ನಾನು ಕಥೆಗಳನ್ನು ಬರೆಯುತ್ತಿದ್ದೇನೆ ಎಂದು ನನಗೆ ಅನಿಸುವುದಿಲ್ಲ; ಬದಲಿಗೆ, ಕೆಲವೊಮ್ಮೆ ಕಾವ್ಯದಲ್ಲಿ ಬರದ ಕಾವ್ಯಾತ್ಮಕ ಸಂವೇದನೆ ಕಥೆಗಳಲ್ಲಿ ಬರುತ್ತದೆ.  ಕಥೆಗಳನ್ನು ಬರೆಯುವಾಗಲೂ ನಾನು ಕವಿ, ಮತ್ತು ಕವಿ ಯಾವಾಗಲೂ ಕವಿಯಾಗಿಯೇ ಇರುತ್ತಾನೆ.”

ಕನ್ನಡಕ್ಕೆ – ಎಸ್ ಜಯಶ್ರೀನಿವಾಸ ರಾವ್

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. 

ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ. 

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿಅವಧಿ, ಕೆಂಡಸಂಪಿಗೆಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.  

ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು. 

ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು.  ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.        

ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದವರು.

೧. ಮಹಾಭಾರತದ ನಂತರ
ಹಿಂದಿ ಮೂಲ: ಮಹಾಭಾರತ್ ಕೆ ಬಾದ್

ಅಗಸನ ಮಗ ಸ್ವಲ್ಪ ತುಂಟ,
ಸಭ್ಯತೆಯ ಕೊರತೆ ತುಂಬಾನೆ ಇದೆ ಅವನಲ್ಲಿ.
ಅವನು ಟಿ.ವಿ.ಯಲ್ಲಿ ಮಹಾಭಾರತವನ್ನು ನೋಡಲು ಬಯಸಿದ
ಅವನ ಕೊಳಕು-ಕೊಳಕಾಗಿರುವ ತಂಗಿಯನ್ನೂ ಜತೆಯಲ್ಲಿ ಕರೆತಂದ.

ಹೀಗಾಗುವುದು ಒಂದಾನೊಂದು ದಿನ
ಈ ಸೀರಿಯಲ್ ಮುಗಿದಿರಿವುದು.

ಮತ್ತೊಮ್ಮೆ ಧೃತರಾಷ್ಟ್ರ
ಇಡೀ ದೆಹಲಿಯಲ್ಲಿ ಯಾವನೋ ಅಗಸನ ಪತ್ತೆ ಕೇಳುತ್ತಾ ತಿರುಗುವನು,
ಆಗ ಅವನ ಕಿವಿಗೆ ಎಡೆಬಿಡದೇ ಬಡಿವುದು ಹಾರನ್-ಗಳ ಸದ್ದು.

ಕಾಲಚಕ್ರ ಹೇಳುವ ಪ್ರಕಾರ ಮಹಾಭಾರತ ಮುಗಿದ ನಂತರ
ಹಾರನ್-ಗಳು ಮಾತ್ರ ಬಡಿಯುತ್ತವೆ ಎಂದು,
ಎಷ್ಟು ಹುಡುಕಿದರೂ ಸಹ ಇಂದ್ರಪ್ರಸ್ಥದಲ್ಲಿ
ಎಲ್ಲಿಯೂ ಯಾವ ಅಗಸನೂ ಸಿಗುವುದಿಲ್ಲ ಎಂದು.

ಮಹಾಭಾರತದ ನಂತರ
ಪ್ರತಿಯೊಬ್ಬರ ಉಡುಪುಗಳಲ್ಲಿ ಕಾಣಿಸುವುದು ರಕ್ತದ ಕಲೆಗಳು.

೨.ರಾತ್ರಿಯಲ್ಲಿ ಉಳಿದು ಹೋಯಿತು ಹಾರ್ಮೊನಿಯಮ್
ಹಿಂದಿ ಮೂಲ: ರಾತ್ ಮೆ ಛೂಟ್ ಗಯಾ ಹಾರ್ಮೋನಿಯಮ್

ನಾನು ಆಳರಾತ್ರಿಯಲ್ಲಿ ಹಾರ್ಮೋನಿಯಮ್ ನುಡಿಸುತ್ತಿದ್ದೆ
ಆ ಹಾಡಿದೆಯಲ್ಲ ಎಷ್ಟು ದೂರದ ತನಕ ಹೋಗುತ್ತಿತ್ತೆಂದರೆ
ನನಗೇ ಕಾಣಿಸುತ್ತಿರಲಿಲ್ಲ

ನಂತರ ನನಗೆ ಒಂದು ಸಪೂರವಾದ ಬಿರುಕು ಕಂಡಿತ್ತು
ಅದರ ಒಳಗೆ ತೂರಿದೆ ನಾನು
ಕತ್ತಲೆಯ ಎರಡು ಪದರುಗಳ ಮಧ್ಯೆ
ನಿದ್ರೆಯಲಿ ಮುಳುಗಿದ ನೀರಿನ ಹಾಗೆ
ನಾನು ದೂರದ ತನಕ ಓಡತೊಡಗಿದೆ

ಅಲ್ಲಿ ಇಪ್ಪತ್ತು ವರ್ಷಗಳಿಂದ ಒಬ್ಬಳು ಹುಡುಗಿ
ಯಾರಿಗೂ ಯಾವತ್ತೂ ಕಾಣದೇ ನಿದ್ರಿಸುತ್ತಲೇ ಇದ್ದಳು
ಅವಳಿಗೆ ಎಚ್ಚರವೇನೂ ಆಗಲಿಲ್ಲ, ಆದರೆ ನಿದ್ದೆಯಲ್ಲೇ ನಕ್ಕಳು

ಕತ್ತಲೆಯಲ್ಲಿ ಆ ಹಾಡು ಹಾಗೂ ನೀರಿನ ಹಾಗೆ ಹರಿಯುತ್ತಿದ್ದದ್ದು
ಅದು ನಾನೇ ಅಗಿದ್ದೆ

ಆಮೇಲೆ ನಾನೂ ನಗತೊಡಗಿದೆ ರಾತ್ರಿಯಲ್ಲಿ
ಕತ್ತಲೆಯಲ್ಲಿ ಮರೆಯಾಗಿ

ದಪ್ಪದೇಹದ ಮಧ್ಯವಯಸ್ಸಿನ ಮನುಷ್ಯನೊಬ್ಬ
ಸಾಯಿ ಬಾಬಾ-ನ ಫೋಟೋವಿನ ಕೆಳಗೆ ಕೂತಿದ್ದ, ಪಿಸ್ತಾ ತಿನ್ನುತ್ತಿದ್ದ
ಅವನು ಬಂದೂಕು ತೋರಿಸಿ ನನ್ನನ್ನು ಹೆದರಿಸಿದ
ಕಣ್ಣುಗಳ ಕೆರಳಿಸುತ್ತಾ, ಬಾಯಿಯನ್ನು ತಿರುಚುತ್ತಾ

ಸಿಟ್ಟಿನಲ್ಲಿದ್ದವನು ಆ ಹುಡುಗಿಯ ಅಪ್ಪನಂತೆ
ಇಪ್ಪತ್ತು ವರ್ಷಗಳಿಂದ ನಿದ್ದೆಯೇ ಮಾಡಿಲ್ಲವಂತೆ
ಹುಡುಗಿಯ ಕನಸುಗಳ ಮೇಲೆ ನಿಗಾ ಇಡುತ್ತಾ

ನಾನೇನು ಮಾಡಲಿ? ಧೊಪ್ಪಂತ ಇಳಿದು ಹೊರಗೆ ಬಂದೆ
ಬೆಳಕಿನಲ್ಲಿ ಆ ಭಯಾನಕ ವ್ಯಕ್ತಿಯನ್ನು ಕಂಡು ಕೈಮುಗಿಯ ತೊಡಗಿದೆ
ಆದರೆ ನನ್ನ ಹಾರ್ಮೋನಿಯಮ್ ರಾತ್ರಿಯಲ್ಲೇ ಉಳಿದು ಹೋಯಿತು, ತುಂಬಾ ಹಿಂದೆ
ಅದು ನಾದಿಸುತ್ತಲೇ ಇತ್ತು
ಮತ್ತೆ ಆ ಹುಡುಗಿ ಯಾಕೆ ನಗುತ್ತಲೇ ಇದ್ದಳು
ಇದು ಹೇಳುವುದು ಕಷ್ಟ

೩.ರಾತ್ರಿಯ ಹೂವು
ಹಿಂದಿ ಮೂಲ: ರಾತ್ ಕಾ ಫೂಲ್

ಒಂದು ಹೂವು,
ರಾತ್ರಿಯ ಯಾವುದೋ ಕತ್ತಲ ಗಂಟಿನಲ್ಲಿ,
ಗಾಯದಂತೆ ಅರಳಿದೆ,
ಯಾವುದೋ ಬಂಜರ ಪ್ರದೇಶದಲ್ಲಿ,

ಮತ್ತೆ, ಅದರ ಬಣ್ಣದಲ್ಲಿ ಜಾದೂ ಇದೆ.

ಕುಸಿದುಬೀಳುತ್ತಿರುವ ಕುಟುಂಬ
ಕೈಜಾರುತ್ತಿರುವ ನೌಕರಿ, ಅಪಮಾನ ಹಾಗೂ ಅಭದ್ರತೆಗಳ
ಒತ್ತಡದಲ್ಲಿ ಒಡೆದುಚೂರಾಗುತ್ತಿರುವ ಮೆದುಳಿನಿಂದ
ಹೊರಹೊಮ್ಮುತ್ತದೆ ಯಾವುದೋ ಒಂದು ಕವಿತೆ.
ಅದರ ಕೋಪ ಹಾಗೂ ದುಃಖ ಹಾಗೂ ದ್ವೇಷದಲ್ಲಿ
ಕಲೆ ಇದೆ.

ಖಾಲಿ ಪಾತ್ರೆಗಳು, ಔಷಧಿ ಬಾಟ್ಲಿಗಳು,
ಹಾಗೂ ಸಾವಿನ ಗಾಢ ವಾಸನೆಯಿಂದ ತುಂಬಿದ
ಕೋಣೆಯಲ್ಲಿ
ನಗುತ್ತಿದ್ದಾನೆ ಆ ಎರಡೂವರೆ ವರ್ಷದ ಬಾಲಕ.

ಮತ್ತೆ, ಅವನ ಹಾಲುಹಲ್ಲುಗಳಿಗೆ
ಒಂದು ಅದ್ಭುತವಾದ ಹೊಳಪಿದೆ!

೪.ಹೊತ್ತಿಕೊಂಡು ಉರಿಯುವೆ ನಾನು ಒಂದು ದಿನ
ಹಿಂದಿ ಮೂಲ: ಏಕ್ ದಿನ ಜಲೂಂಗಾ ಮೈಂ

ಹಾಡುಹಗಲಿನಲ್ಲಿ
ನನ್ನ ಪುಸ್ತಕಗಳು ಹಾಗೂ ನನ್ನ ಜೇಬಿನಲ್ಲಿರುವ ನಾಣ್ಯಗಳು ಕೂಡ
ಹೊತ್ತಿಕೊಂಡು ಉರಿಯುವುದು

ಎಲ್ಲಕ್ಕಿಂತ ಮೊದಲು ಹೊತ್ತಿಉರಿಯುವುದು ನನ್ನ ಮನೆ
ನಂತರ ನೆರೆಮನೆಯ ಮಾಡು
ನಂತರ ಹೆಂಡತಿಯ ಕೈಗಳು

ಬನ್ನಿ ಋತುಗಳೇ, ಬನ್ನಿ,
ಎಲ್ಲ ದೇಶ-ದಿಕ್ಕುಗಳ ಘಟಾಟೊಪ ಮೋಡಗಳೇ, ಬನ್ನಿ,
ಭಾದ್ರಪದ-ಆಷಾಢಗಳ
ಭಾರಿ ತೇವ ತುಂಬಿದ ಕರೀ ಗಾಳಿಗಳೇ, ಬನ್ನಿ.

ಬನ್ನಿ, ಸಮಸ್ತ ಜಗತ್ತಿನ
ಸಹಾನುಭೂತಿಭರಿತ ಸಜ್ಜನರೇ,
ನಿಮ್ಮ ಹೃದಯದಲ್ಲಿ ನೀರು ತುಂಬಿಸಿಕೊಂಡು ಬನ್ನಿ.

ಬನ್ನಿ, ಏಕೆಂದರೆ, ಈ ಸಲ
ಹೊತ್ತಿಕೊಂಡು ಉರಿಯುವವನು ನಾನೇ.

೫.ನಾನು ಹಿಂದಿರುಗಿ ಹೋಗುವೆ
ಹಿಂದಿ ಮೂಲ: ಮೈಂ ಲೌಟ್ ಜಾವೂಂಗಾ

ಶರತ್ಕಾಲದೊಳಗೆ ಮೋಡಗಳು ಹಿಂದಿರುಗಿ ಹೋದ ಹಾಗೆ
ಆಷಾಡದೊಳಗೆ ಬಿಸಿಲು ಹಿಂದಿರುಗಿ ಹೋದ ಹಾಗೆ
ಅಂತರೀಕ್ಷದೊಳಗೆ ಇಬ್ಬನಿ ಸದ್ದಿಲ್ಲದೆ ಹಿಂದಿರುಗಿ ಹೋದ ಹಾಗೆ

ತನ್ನ ನೋಯುವ ಶರೀರವನ್ನು ಕಂಬಳಿಯೊಳಗೆ ಅಡಗಿಸಿ
ಕತ್ತಲು ಯಾವುದೋ ಅಜ್ಞಾತವಾಸಕ್ಕೆ ಹಿಂದಿರುಗಿ ಹೋಗುತ್ತದೆ
ಒಂದ್ಚೂರು ಸುಖ ಹಾಗೂ ಒಂದು ಚಿಟಕಿ ಸಾಂತ್ವನದ ಆಸೆಗೆ
ಎಲ್ಲರಿಂದ ತಲೆಮರೆಸಿ ಬಂದಿರುವ ವ್ಯಭಿಚಾರಿಣಿಯೊಬ್ಬಳು
ಹೆದರಿಕೊಂಡು ತನ್ನ ಗುಹೆಯೊಳಗೆ ಹಿಂದಿರುಗಿ ಹೋಗುತ್ತಾಳೆ

ಮರಗಳು ವಾಪಸ್ಸು ಬೀಜದೊಳಗೆ ಹಿಂದಿರುಗಿ ಹೋಗುತ್ತವೆ
ತಮ್ಮ ಪಾತ್ರೆ ಪಡಗಗಲು, ಅಸ್ತ್ರಗಳು, ಉಪಕರಣಗಳು ಹಾಗೂ ಅಸ್ಥಿಪಂಜರಗಳ ಜತೆಗೆ
ಎಲ್ಲಾ ವಿಕಸಿತ ನಾಗರೀಕತೆಗಳು ಭೂಮಿಯ ಗರ್ಭದೊಳಗೆ
ಪ್ರತಿ ಸಲವೂ ಹಿಂದಿರುಗಿ ಹೋದ ಹಾಗೆ

ಯಾವುದೋ ಸಮುದಾಯದ ಪುರಾಣ ದಂತಕಥೆಗಳೊಳಗೆ ಇತಿಹಾಸ ವಿಲೀನವಾದ ಹಾಗೆ
ಒಬ್ಬ ದೆವ್ವಬಿಡಿಸುವವನ ಮಾಟಮಂತ್ರದೊಳಗೆ ವಿಜ್ಞಾನ ವಿಲೀನವಾದ ಹಾಗೆ
ಮನುಷ್ಯನ ಅಸಂಖ್ಯಾತ ರೋಗಗಳಿಂದ ಔಷಧಿಗಳೆಲ್ಲವೂ ಸೋತುಹೋಗಿ
ಕೊನೆಗೆ ಯಾವುದೋ ಆದಿಮ ಸ್ಪರ್ಶ ಅಥವಾ
ಯಾವುದೋ ಮಂತ್ರದೊಳಗೆ ಹಿಂದಿರುಗಿ ಹೋದ ಹಾಗೆ

ಸಮಸ್ತ ಮಹಾಕಾವ್ಯಗಳು, ಸಕಲ ಸಂಗೀತಕಲೆಗಳು, ಎಲ್ಲ ಭಾಷೆಗಳು ಹಾಗೂ
ಎಲ್ಲ ಕವಿತೆಗಳು ಒಂದು ದಿನ ಬ್ರಹ್ಮಾಂಡದೊಳಗೆ ಹಿಂದಿರುಗಿ ಹೋದ ಹಾಗೆ
ನಾನು ಹಿಂದಿರುಗಿ ಹೋಗುವೆ
ಜೀವನದ ಮೂಟೆಯನ್ನು ತಲೆಯ ಮೇಲೆ ಹೊತ್ತು ಖಿನ್ನವಾಗಿ
ಒಂದು ದಿನ ಮೃತ್ಯು ಹೊರಟುಹೋದ ಹಾಗೆ
ರಕ್ತವು ಹಿಂದಿರುಗಿ ಹೋಗುತ್ತದೆ ಎಲ್ಲಿಗೆಯಂತ ಗೊತ್ತಿಲ್ಲ
ತನ್ನ ಹಿಂದೆ ರಕ್ತನಾಳಗಳಲ್ಲಿ ಬಿಟ್ಟು ಹೋಗುತ್ತದೆ
ನಿರ್ಜೀವ ನಿಷ್ಪಂದ ನೀರನ್ನು

ನಿರಪರಾಧಿ ಕೈದಿಯೊಬ್ಬ ದೀರ್ಘಾವಧಿ ಶಿಕ್ಷೆಯನ್ನು ಅನುಭವಿಸಿ ಹಿಂದಿರುಗಿ ಬರುವ ಹಾಗೆ,
ಆಸ್ಪತ್ರೆಯಲ್ಲಿ ಮನುಷ್ಯನೊಬ್ಬ ಬಹು ಕಾಲದ ಅಪ್ರಜ್ಞೆಯ ನಂತರ
ಒಂದು ಸಲ ಕಣ್ಣು ತೆರೆದು
ತನ್ನ ಕತ್ತಲೆಯೊಳಗೆ ಮತ್ತೆ ಹಿಂದಿರುಗಿ ಹೋಗುವ ಹಾಗೆ.

೬.ನಾನೇ ಹಾಸು … ನಾನೇ ಹೊಕ್ಕು
ಹಿಂದಿ ಮೂಲ: ಹಮ್ ಹೈ ತಾನಾ … ಹಮ್ ಹೈ ಬಾನಾ

ನಾನೇ ಹಾಸು, ನಾನೇ ಹೊಕ್ಕು.
ಚಾದರ ನಾನೇ, ನೇಕಾರ ನಾನೇ, ದಾರವು ನಾನೇ, ಮಗ್ಗವು ನಾನೇ. ನಾನೇ ಹಾಸು …

ನಾದವು ನಾನೇ, ಅನುನಾದವು ನಾನೇ, ನಿಶ್ಶಬ್ದವು ನಾನೇ ಗಂಭೀರಾ,
ಕತ್ತಲು ನಾನು, ಸೂರ್ಯ-ಚಂದಿರ ನಾನು, ಕೃಷ್ಣ ನಾನು ಮೀರಾ ನಾನು.
ಒಬ್ಬನು ನಾನೇ, ಇಬ್ಬರೂ ನಾನೇ, ನಾನೇ ಕಾಳು, ನಾನೇ ಧಾನ್ಯ. ನಾನೇ ಹಾಸು …

ಮಂದಿರ-ಮಸೀದಿ, ಗುರುದ್ವಾರಾ ನಾನು, ಮಠವು ನಾನು, ಬೈರಾಗಿ ನಾನು.
ನಾನೇ ಪೂಜಾರಿ, ನಾನೇ ದೇವರು, ನಾನೇ ಕೀರ್ತನೆ, ನಾನೇ ಗಾಯಕ.
ಅಕ್ಷತೆ-ಕುಂಕುಮ, ನಿರ್ಗುಣ-ವಿಭೂತಿ, ಹಲವು ರೂಪಗಳ ಧರಿಸುವೆ ನಾನು. ನಾನೇ ಹಾಸು …

ಮೂಲ ಪುಷ್ಪವು ನಾನು, ಋತು ಮೇಘವು ನಾನು, ನಾನೇ ಮಣ್ಣು, ನಾನೇ ನೀರು.
ನಾನೇ ಯಹೂದಿ ನಾನೇ ಮುಸಲ್ಮಾನ ನಾನೇ ಬ್ರಾಹ್ಮಣ, ಹರಿಜನ ನಾನು ಕ್ರೈಸ್ತ ನಾನು.
ಪೀರ ಅಘೋರಿ, ಸಿದ್ಧ ಔಲಿಯಾ, ನಾನೇ ಉದರ, ನಾನೇ ಊಟ. ನಾನೇ ಹಾಸು …

ಹೆಸರಿಲ್ಲ ವಿಳಾಸವಿಲ್ಲ, ಊರಿಲ್ಲ ಮನೆಯಿಲ್ಲ, ಇಲ್ಲ ಯಾವುದೇ ಜಾತಿ ಧರ್ಮ.
ದೇಶವು ನಾನೇ ಲೋಕವು ನಾನೇ, ರಾಜ ನಾನು ಪ್ರಜಾ ನಾನು, ಲಟ್ಟಣಿಗೆ ನಾನು, ನಾದಿದ ಹಿಟ್ಟು ನಾನು.
ನಾನೇ ಮದುಮಗ, ನಾನೇ ದಿಬ್ಬಣ, ಓಲಗ ನಾನು, ಚಪ್ಪರ ನಾನು. ನಾನೇ ಹಾಸು …

೭.ಬಂಡೆಕಲ್ಲು
ಹಿಂದಿ ಮೂಲ: ಪತ್ಧರ್

ಈ ಬಂಡೆಕಲ್ಲಿನ ಒಳಗೆ
ಒಬ್ಬ ದೇವರು ಖಂಡಿತ ಇದ್ದಾನೆ

ಆ ದೇವರ ಮಂತ್ರದ ಫಲವಾಗಿ
ಈ ಬಂಡೆಕಲ್ಲು ಇದೆ

ಯಾವುದೋ ದೇವರ ಮಂತ್ರದ ಫಲವಾಗಿ
ನಾವೆಲ್ಲ ಬಂಡೆಕಲ್ಲುಗಳಾಗಿ ಇರುವ ಹಾಗೆ


‍ಲೇಖಕರು Admin

27 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading