ಮಹಾಂತೇಶ ಪಾಟೀಲ
**
ನಮ್ಮ ಹಾಲುಗೆನ್ನೆಗೆ
ಯಾರೋ ಹುಳಿ ಹಿಂಡಿದರು!
ಕಣ್ಣೀರ ಬಸಿದುಕೊಂಡು
ಭಾವಬೆಲ್ಲ ಬೆರೆಸಿ ನಾವು
ಪಾನಕ ಮಾಡಿಕೊಂಡೆವು.
ಮಾತು-ಮೌನಗಳ ನಡುವೆ
ಮೂಗು ತೂರಿಸಿದ ಮುಖವಿಲ್ಲದವರು
ನಾವು ಮುತ್ತಿಗೆ ಮುತ್ತು ಸೇರಿಸಿ
ಮೂಗುನತ್ತು ಮಾಡಿ
ಧರಿಸಿಕೊಂಡೆವು.
ಕಡ್ಡಿಗೀರದೆ ಬೆಂಕಿಯಿಟ್ಟರು
ನಮ್ಮ ನಲಿವು ನಿಲುವುಗಳ ನಡುವೆ
ತಣ್ಣಗಾದ ತುಟಿಗಳಿಂದ
ಮೈ ಬೆಚ್ಚಗಾಗಿಸಿಕೊಂಡೆವು
ನಾವು ನೋವನೈದಿಲೆಗಳು.
ಕಥೆ ಕಟ್ಟಿ, ರಗಳೆ ಮಾಡಿ
ಲಾಲಿ ಹಾಡಿದ ಲೊಳಲೊಟ್ಟೆಗಳು.
ಆಯ್ದು ಕತೆಯ ಕೂಡಿಸಿ
ನಾವು ಸಖೀಗೀತೆಯ
ಸಂಕಲನ ಲೋಕಾರ್ಪಣೆಗೊಳಿಸಿದೆವು.
ಏನು ಮಾಡಲಿ ಹೇಳು?
ಮಾತಿನ ಮೂಗು ಕೊಯ್ದು
ಉಸಿರಿಗೆ ಉರುಳು ಹಾಕಿ
ಮೊಸರಿಗೆ ಹುಳಿಹಿಂಡಿ ಹೋದ
ಜೀವದ ಜೀವವೇ !?
0 Comments