ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಳೆಯಲಿ, ಜೊತೆಯಲಿ…’ – ಮಂಜುಳಾ ಬಬಲಾದಿ ಪ್ರವಾಸ ಕಥನ – ೫

ಓಹೋ! ಹಿಮಾಲಯ…

(ಇಲ್ಲಿಯವರೆಗೆ)

ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಇರದವಳಿಗೆ, ಬೆಳಗಾದ ಮೇಲೆ ಏಳುವುದು ಅಂಥ ಕಷ್ಟವಾಗಲಿಲ್ಲ. ನಿಜ ಹೇಳಬೇಕೆಂದರೆ ಮಾಮೂಲಿಗಿಂತ ಸ್ವಲ್ಪ ಬೇಗವೇ ಎದ್ದು ವಿಹಾರಕ್ಕೆ ನಡೆದಿದ್ದೆ. ರಾತ್ರಿ ನದಿ ಕರೆದಿತ್ತಲ್ಲ? ಬೈಗುನಿಯ ರೆಸಾರ್ಟ್ನಿಂದ ರಂಗೀತ್ ನದಿ ತೀರ ಸೇರಲು ಕಾಲುದಾರಿಯೂ ಇತ್ತು. ಏಕಾಂತಕ್ಕೆ ಇನ್ನೇನು ಬೇಕು? ಮೌನ, ಕಾಲುದಾರಿ, ಮುಂಜಾವು, ಮತ್ತು ನಿರ್ಜನ ನದಿ ತೀರ. ರಂಗೀತ್ ನದಿಯೂ ಅಷ್ಟೇ, ತೀಸ್ತಾಳಂತೆಯೇ ಚಂಗು-ಚಂಗೆಂದು, ಜಿಗಿದು, ಪುಟಿದು ಹರಿಯುತ್ತಿದ್ದಳು. ಆ ನೀರವತೆಯಲ್ಲಿ, ನದಿಯ ಆಲಾಪ… ಮನಸಿಗೇನೋ ಸೊಗಸು. ಖಾಲಿ-ಖಾಲಿ ಮನಸಿನಲ್ಲಿ, ಮೌನ ಗಾನ. ಇಂಥ ಸ್ಥಳಗಳಿಗೆ ಹೋದರೆ ಧ್ಯಾನ, ಮೌನ ಆಚರಿಸಲು ಕಷ್ಟ ಬೀಳಬೇಕಾದ್ದೇ ಇಲ್ಲವೇನೋ ಅನಿಸತ್ತೆ. ಮೌನವನ್ನು ಅನುಭವಿಸಿ, ಆರಾಧಿಸಿ, ಶಾಂತ ಚಿತ್ತಳಾಗಿ ಮರಳಿದ್ದೆ ಅಲ್ಲಿಂದ. ಆ ನದಿಯೊಡನೆ ಇನ್ನೊಂದಷ್ಟು ಗಂಟೆಗಳನ್ನು ಒಬ್ಬಳೇ ಕಳೆಯಲೇಬೇಕು ಎಂದು ನಿರ್ಧರಿಸಿ.

ನಮ್ಮ ಮೂಲ ಯೋಜನೆಯ ಪ್ರಕಾರ ನಾವಂದು ಸಂದರ್ಶಿಸಬೇಕಿದ್ದ ಸ್ಥಳ ನಾಮ್ಚಿ. ನಾ ಕೋಣೆಗೆ ಮರಳುವಷ್ಟರಲ್ಲೇ ನಮ್ಮವರು ಚರ್ಚೆ ಮುಂದುವರೆಸಲು ಸಿದ್ಧರಾಗಿದ್ದರು. ಅವರೂ ಡಾರ್ಜೀಲಿಂಗ್ ಹೋಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಚಾರಿಸಿ, ನಿರ್ಧಾರ ತೆಗೆದುಕೊಳ್ಳಲು ಒಪ್ಪಿದರು (ಯೇಯ್ ;-)) ನಾನು ಗಪ್-ಚುಪ್ ಅಂತ ನಾಮ್ಚಿ ನೋಡಲು ಹೋಗಲು ತಯಾರಾದೆ. ಅವರ ವಿಚಾರಣೆಯ ಫಲಿತಾಂಶವೂ ಅದೇ ಆಗಿತ್ತು. ಯೋಜನೆಯಲ್ಲಿ ಹಠಾತ್ ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ನನಗೆ ಕಂಡವು. ನಮ್ಮ ಜಂಟಿ ನಿರ್ಧಾರ, ಮಧ್ಯಾನ್ಹದವರೆಗೂ ನಾಮ್ಚಿಯ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಸಂಜೆ ನಾಲ್ಕರ ಹೊತ್ತಿಗೆ ಡಾರ್ಜೀಲಿಂಗ್ಗೆ ಹೊರಡುವುದು ಎಂದಾಯಿತು (ಹುರ್ರೇ.. :)))

ನಾಮ್ಚಿಯಲ್ಲಿ ಹೆಸರಿಸಲೇಬೇಕಾದ ಎರಡು ಸ್ಥಳಗಳು (ಮತ್ತು ನಾವು ಸಂದರ್ಶಿಸಿದ ಎರಡು ಪ್ರಮುಖ ಸ್ಥಳಗಳು) ಚಾರ್ಧಾಮ್ ಮತ್ತು ಸಂದ್ರುಪ್ತ್ಸೆ ಬೆಟ್ಟದ ಮೇಲಿರುವ ನೂರಾ ಹದಿನೆಂಟು ಅಡಿ ಎತ್ತರದ ಪದ್ಮಸಂಭವ ಮೂರ್ತಿ. ಚಾರ್ಧಾಮ್ ನಾಮ್ಚಿಯ ಹೊಸ ಆಕರ್ಷಣೆ. ಇಲ್ಲಿರುವ ನೂರೆಂಟು ಅಡಿ ಎತ್ತರದ ಶಿವನ ಮೂರ್ತಿ ಬಹಳ ದೂರದಿಂದಲೇ ಸ್ಪಷ್ಟವಾಗಿ ಕಾಣುತ್ತದೆ. ಚಾರ್ಧಾಮ್ನ ನಿಜವಾದ ವಿಶೇಷ, ಭಾರತದ ಪ್ರಮುಖ ತೀರ್ಥಯಾತ್ರಾ ಸ್ಥಳಗಳ ಯಥಾಕೃತಿ ಮಂದಿರಗಳನ್ನು ಒಂದೆಡೆಗೇ ನಿರ್ಮಿಸಿರುವುದು. ದ್ವಾರಕೆ, ರಾಮೇಶ್ವರ, ಬದರಿ, ಕೇದಾರ, ಶಿರಡಿ, ಹನ್ನೆರಡು ಜ್ಯೋತಿರ್ಲಿಂಗಳು ಇವೆಲ್ಲ ಒಂದೇ ಸ್ಥಳದಲ್ಲಿ ನಿಮಗೆ ನೋಡಸಿಗುತ್ತವೆ. ಪ್ರತಿ ಮಂದಿರದಲ್ಲೂ ಮೂಲ ಮಂದಿರದ ವಿವರಗಳ ಒಂದು ಫಲಕ. ಈ ಸ್ಥಳವನ್ನು ಸಂದರ್ಶಿಸಿಬಿಟ್ಟರೆ ಪ್ರಾಯಶಃ ನೀವು ತೀರ್ಥಕ್ಷೇತ್ರ ಯಾತ್ರೆ ಮಾಡುವುದೇ ಬೇಡವೇ ಅಂತ ಮರು ಪರಿಶೀಲಿಸಬೇಕಾಗುತ್ತದೆ. ನೂರಾ ಎಂಟಡಿಯ ಶಿವನ ಅಡಿಗೊಂದು ಶಿವನ ಮಂದಿರ. ಧ್ಯಾನಸ್ಥನಾದ ಶಿವನನ್ನು ಸುತ್ತುವರೆದ ನಾಲ್ಕು ಗೋಡೆಗಳಲ್ಲೂ ಶಿವನ ಕುರಿತ ಹಲವಾರು ಪೌರಾಣಿಕ ಕಥೆಗಳ ಸುಂದರ ಚಿತ್ರಣ.

ನಾಮ್ಚಿಯಿಂದ ಹೊರಟ ನಾವು ಮಾರ್ಗ ಮಧ್ಯದಲ್ಲಿ ಸಿಕ್ಕ ಸಾಯಿಬಾಬಾ ಮಂದಿರ, ಹೆಲಿಪ್ಯಾಡ್ಗಳನ್ನು ಸಂದರ್ಶಿಸಿ, ಸಂದ್ರುಪ್ತ್ಸೆ ಬೆಟ್ಟದೆಡೆಗೆ ಪಯಣ ಬೆಳೆಸಿದ್ದೆವು. ಅಲ್ಲಿ ತಲುಪಿದಾಗ ನಮಗೆ ಮತ್ತೆ ಎದುರಾದದ್ದು ನಿರಾಶೆ. ಇಲ್ಲ, ಇಲ್ಲ, ಪದ್ಮಸಂಭವ ಅಲ್ಲಿಂದ ಅದೃಶ್ಯವಾಗಿರಲಿಲ್ಲ 😉 ಆದರೆ ಮೇಸ್ತ್ರಿಗಳ ಉಳಿ ಪೆಟ್ಟುಗಳಿಗೆ ನಸು-ನಗುತ್ತ ಮೌನವಾಗಿದ್ದ. ಪದ್ಮಸಂಭವ ಮೂರ್ತಿಯ ಜೀರ್ಣೋದ್ಧಾರದ ಕೆಲಸ ನಡೆಯುತ್ತಿತ್ತು. ಆ ಸನ್ನಿವೇಶವನ್ನು ನೋಡಿದಾಗ, ಆ ಕ್ಷಣದಲ್ಲಿ ನನ್ನಲ್ಲಿ ಮೂಡಿದ್ದು, ಮೂರ್ತಿ ಪೂಜೆಯ ಬಗ್ಗೆ ಅದೇನೋ ಹೇಳಿಕೊಳ್ಳಲಾಗದಂಥ ಭಾವ.. ಶಾಲೆಯಲ್ಲಿ ಓದಿದ ಯಾವುದೋ ಒಂದು ಪಾಠದ ನೆನಪಾಗಿತ್ತು ’ದೇವರು ತನ್ನ ಮೈ ಮೇಲೆಲ್ಲ ಇಲಿಗಳು ಓಡಾಡಿದರೂ…’ ಹೀಗೇ ಏನೋ ಮುಂದುವರೆಯುತ್ತಿದ್ದ ಪಾಠವದು!

ಮರಳಿ ಕಾರ್ಗೆ ಬಂದವರಿಗಿದ್ದ ಮುಂದಿನ ತಲುಪುದಾಣ ಡೈರೆಕ್ಟ್ ಡಾರ್ಜೀಲಿಂಗ್. ಡಾರ್ಜೀಲಿಂಗ್ ನಮ್ಮ ಮುಂಚಿನ ಯೋಜನೆಯಲ್ಲಿ ಇಲ್ಲದ್ದರಿಂದ ನಾ ಅದರ ಬಗ್ಗೆಯೇನೂ ಓದಿ ತಿಳಿದಿರಲಿಲ್ಲ. ಕಾರ್ ಏರಿದವಳೇ ಪತಿರಾಯರ ಫೋನ್ ಪಡೆದು ಗೂಗಲ್ ಡಾರ್ಲಿಂಗ್ ಜೊತೆ ಕಳೆದು ಹೋದೆ. ಆ ಪುಟ, ಈ ಪುಟ ಎಲ್ಲ ತಿರುವಿ ಹಾಕಿ, ಫೋನ್ ಹಿಂತಿರುಗಿಸಿದಾಗ, ಮನದಲ್ಲೇ ನಿರ್ಧರಿಸಿದ್ದು, ಡಾರ್ಜೀಲಿಂಗ್ನಲ್ಲಿ ನನ್ನ ಅನುಭವದ ಮಡಿಲಿಗೆ ಉಡಿ ತುಂಬಿಸಿಕೊಳ್ಳಲು – ಟೈಗರ್ ಹಿಲ್ಸ್ನ ಸೂರ್ಯೋದಯ, ಚುಕು-ಬುಕು ಕಲ್ಲಿದ್ದಲು ರೈಲು, ಹಿಮಾಲಯನ್ ಮೌಂಟೆನಿಯರಿಂಗ್ ಇನ್ಸ್ಟಿಟ್ಯೂಟ್ನ ಭೇಟಿ, ಈ ಮೂರೂ ಬೇಕೇ ಬೇಕೆಂದು. (ಡಾರ್ಜೀಲಿಂಗ್ ಐತಿಹಾಸಿಕವಾಗಿಯೂ, ಭೌಗೋಳಿಕವಾಗಿಯೂ, ಭಾರತದ ಒಂದು ಮಹತ್ವಪೂರ್ಣ ಸ್ಥಳ. ಆದರೆ ನಮ್ಮ ಬಳಿ ಇದ್ದದ್ದು ಕೇವಲ ಮುಕ್ಕಾಲು ದಿನ!) ರಸ್ತೆಗುಂಟ ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡಲು ವಾಹನದ ವ್ಯವಸ್ಥೆ ಮಾಡಿದ್ದಾಯಿತು (ಸಿಕ್ಕಿಂ ನೋಂದಣೆಯ ಸಾರ್ವಜನಿಕ ವಾಹನಗಳನ್ನು ಡಾರ್ಜೀಲಿಂಗ್ನಲ್ಲಿ ಸೈಟ್ ಸೀಯಿಂಗ್ಗಾಗಿ ಬಳಸಲು ಅನುಮತಿಯಿಲ್ಲ! ಡಾರ್ಜೀಲಿಂಗ್ ಪಶ್ಚಿಮ ಬಂಗಾಳದ ಹೆಮ್ಮೆ!). ಡಾರ್ಜೀಲಿಂಗ್ ತಲುಪಿ, ಸಿಕ್ಕ ಯಾವುದೋ ಪುಟ್ಟ ಹೋಟೆಲ್ ಕೋಣೆಯೊಂದರಲ್ಲಿ ತಂಗಿದ್ದಾಯಿತು. ಹೇಗಿದ್ರೂ ಬೆಳಿಗ್ಗೆ ಏಳಬೇಕಾಗಿದ್ದು ೩ ಗಂಟೆಗೆ!

ಟೈಗರ್ ಹಿಲ್ಸ್ನ ಸೂರ್ಯೋದಯವನ್ನು ನೋಡಹೋಗಲು ಇರುವ ಪದ್ಧತಿಯೇ ಹಾಗೆ. ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ಮೂರೂವರೆ ಅಷ್ಟೊತ್ತಿಗೆ ಹೊರಡುವುದು. ಟೈಗರ್ ಹಿಲ್ಸ್ನ ಲಾಂಜ್ನಲ್ಲಿ ಕುಳಿತುಕೊಳ್ಳಲು ಟಿಕೆಟ್ ಪಡೆದು, ಲಾಂಜ್ನಲ್ಲಿ

ಹೋಗಿ ಕುಳಿತು ಸೂರ್ಯೋದಯಕ್ಕೆ ಕ್ಷಣಗಣನೆ ಮಾಡುವುದು (ಸೂರ್ಯೋದಯಕ್ಕಿನ್ನೂ ಗಂಟೆಗಳ ಸಮಯವಿದ್ದರೂ), ಕೊರೆಯೋ ಚಳಿಯಲ್ಲಿ ಚಹಾ ಹೀರುವುದು… ನಾವು ಬೆಳಗಾಗೆದ್ದು ಪ್ರಾರ್ಥಿಸಿದ್ದು ಹವಾಮಾನ ತಿಳಿಯಾಗಿರಲಿ, ಮಂಜು ಆವರಿಸದಿರಲಿ ಅಂತ. ಕಿಟಕಿಯಿಂದ ಹೊರ ನೋಡಿದಾಗ ಹವಾಮಾನ ಅನುಕೂಲಕರವಾಗಿಯೇ ಇದ್ದಂತಿತ್ತು. ಕಾರ್ನಲ್ಲಿ ಹೊರಟ ಎರಡೇ ನಿಮಿಷಕ್ಕೆ, ಕಾರ್ ಚಾಲಕ, ಕಾರ್ನ ಚಕ್ರ ಬದಲಿಸಬೇಕು ಅಂತ ಕಾರ್ ನಿಲ್ಲಿಸಿಬಿಟ್ಟ 🙁 ನನಗೆ ಅತಿಯಾದ ಕಸಿವಿಸಿಯಾಗಿತ್ತು ಆ ನಿಮಿಷಗಳಲ್ಲಿ. ಅದೃಷ್ಟ ಚೆನ್ನಾಗಿತ್ತು ಅನ್ನಿ. ಎರಡೇ ನಿಮಿಷಗಳಲ್ಲಿ ಮತ್ತೆ ಕಾರ್ ಓಡಿತು.

ಹಿಮಾಲಯವನ್ನು ಹಿಂದೆಂದೂ ಕಂಡವಳಲ್ಲ ನಾನು (ಚಿತ್ರಗಳನ್ನು, ವಿಡಿಯೋಗಳನ್ನು ಹೊರತುಪಡಿಸಿ). ಆಗಸದಲ್ಲಿದ್ದ ಮೋಡಗಳೆಲ್ಲ ಹಿಮಾಲಯದಂತೇ ಭಾಸವಾಗಹತ್ತಿದ್ದವು ನನಗೆ ಆ ಕ್ಷಣಗಳಲ್ಲಿ… ಅಂತೂ ಸೂರ್ಯೋದಯದ ಮುನ್ನ ನಾವು ಲಾಂಜ್ ಹೋಗಿ ತಲುಪಿದ್ದಾಗಿತ್ತು. ಅಲ್ಲಿ ಇನ್ನೊಂದು ಗೊಂದಲ. ಮೊದಲೇ ಹೇಳಿದಂತೆ ಇದು ನನ್ನ ಮೊದಲ ಡಾರ್ಜೀಲಿಂಗ್ ಭೇಟಿ. ಹೊಸ ಪ್ರಶ್ನೆ ಹುಟ್ಟಿದ್ದು, ಹಿಮಾಲಯ ಇರುವುದು ಲಾಂಜ್ನ ಎಡಕ್ಕೋ, ಬಲಕ್ಕೋ? ನಕ್ಷೆ, ದಿಕ್ಕುಗಳ ವಿಚಾರದಿಂದ ಗಜ ದೂರ ನಿಲ್ಲುವ ನನಗೆ ಈ ಪ್ರಶ್ನೆ ಮೂಡಿದ್ದು ತೀರಾ ಸ್ವಾಭಾವಿಕ.. ನನ್ನ ತುಮುಲವನ್ನು ಯಾರಿಗೂ ಹೇಳಲಾಗದೇ ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರು-ತಿರುಗಿ, ಟೆನಿಸ್ ಆಟ ನೋಡುವವಳಂತೆ, ನೋಡುತ್ತಲೇ ನಿಂತುಬಿಟ್ಟೆ ನಾನು. (ಅಂದ ಹಾಗೆ ನಾವು ನಿಂತದ್ದು ಲಾಂಜ್ನ ಬಲ ಮೂಲೆಯಲ್ಲಿ).

ಮೋಡಗಳು ಮೇಲೆರುತ್ತಿದ್ದವು, ಹೌದೋ ಅಲ್ಲವೋ ಅನ್ನುವಷ್ಟು ಬೆಳಕು ಇಣುಕ ಹತ್ತಿತ್ತು… ಸೇರಿದ ಜನರ ಉತ್ಸಾಹ ಹೆಚ್ಚುತ್ತಲಿತ್ತು…ಸೂರ್ಯೋದಯವನ್ನೂ ಹೀಗೂ ಆಚರಿಸಬಹುದೇ ಎಂದು ನಾನು ಮೂಕ ವಿಸ್ಮಿತಳಾಗಿದ್ದೆ.. ನನಗೆ ಸೂರ್ಯನಿಗಿಂತ ಹಿಮಾಲಯದ್ದೇ ಚಿಂತೆ! ಅಂತೂ-ಇಂತೂ ಬೆಳಕು ಬಂತು… ಓಹ್! ನನ್ನ ಮಬ್ಬುಗಣ್ಣಿಗೆ ಕಂಡಿದ್ದು, ದೂರದಲ್ಲಿನ ಹಿಮಾಲಯ… ಒಂದೆರಡು ಕ್ಷಣ ಸಂಶಯವೂ ಆಯ್ತು, ಕಲ್ಪನೆಗಳಲ್ಲಿ ತೇಲುವ ನನ್ನ ಕಣ್ಣುಗಳನ್ನು ನಂಬುವುದೂ ಕೆಲವೊಮ್ಮೆ ಬಲು ಕಷ್ಟ! ಆ ಎಡ ಮೂಲೆಯ ಕಿಟಕಿಯಲ್ಲಿ, ಅದೋ ಕಾಣುತ್ತಿತ್ತು ಹಿಮಾಲಯ! ಹೂಂ, ನಾ ಕಂಡಿದ್ದು ಕಲ್ಪನೆಯಲ್ಲ, ನಿಜವೇ ಎಂದು ಖಾತ್ರಿ ಪಡಿಸಿಕೊಳ್ಳಲು ಸಮಯ ತಗುಲಿದ್ದು ನಿಜ! ಸೂರ್ಯೋದಯ ಆದ ನಂತರ ಲಾಂಜ್ನಲ್ಲಿದ್ದ ಗದ್ದಲ ಸ್ವಲ್ಪ ಕಡಿಮೆಯಾಯ್ತು, ಜೊತೆಗೆ ನನ್ನ ಗೊಂದಲವೂ, ಜನ ಜಾಗ ಖಾಲಿ ಮಾಡುತ್ತಿದ್ದರೆ, ನಾ ತುಂಬಿಕೊಳ್ಳುತ್ತಲಿದ್ದೆ… ಕಾಂಚನಜುಂಗೆಯನ್ನ… ಅವಳ ಮೇಲರಳಿದ ಗುಲಾಬಿ-ಕೇಸರಿ ಮಿಶ್ರಿತ ಬಣ್ಣಗಳ ಸೊಬಗನ್ನ.. ಮನ ಅಂದಿತ್ತು ಧನ್ಯೋಸ್ಮಿ..! ಅದೆಷ್ಟು ಹೊತ್ತು ಆ ಗಿರಿಸಾಲುಗಳನ್ನು ನೋಡುತ್ತ ನಿಂತೆನೋ, ಅದೆಷ್ಟು ಫೋಟೊ ಕ್ಲಿಕ್ಕಿಸಿದೆನೋ ಲೆಕ್ಕವಿರಲಿಲ್ಲ. ಆ ಕ್ಷಣಕ್ಕೆ ಬಂತು ಬಿಸಿ-ಬಿಸಿ ಚಹಾ! ನಮ್ಮವರ ಕೈಯಿಂದ 🙂

ಲಾಂಜ್ನಿಂದ ಕೆಳಗಿಳಿದು ಬಂದವಳಿಗೆ ಚಂದ್ರನನ್ನು ತೋರಿಸಿದ್ದು ಮಗರಾಯ. ಸೂರ್ಯ ಆಗ ತಾನೇ ಬಂದಿದ್ದ, ಚಂದ್ರನಿನ್ನೂ ಜಾರಿರಲಿಲ್ಲ. ನೀಲಿಯಾಗಸದಲ್ಲಿ, ಸೂರ್ಯಂಗೂ, ತನಗೂ ಸಂಬಂಧವೇ ಇಲ್ಲ ಎನುವಂತೆ ಕೂಲ್ ನೋಟ ನೀಡಿದ್ದ ಚಂದಿರ 🙂 ಮೊದಲನೇ ಉಡಿ ಮಡಿಲು ತುಂಬಿತ್ತು… ಹಿಮಾಲಯ ಕಾರ್ನೊಂದಿಗೇ ಓಡಹತ್ತಿತ್ತು. ಅಲ್ಲಿಂದ ತೆರಳಿದ್ದು ಬತಾಸಿಯಾ ಲೂಪ್ಗೆ. ಇದು ಟಾಯ್ ಟ್ರೇನ್ ಹಾದು ಹೋಗುವ ಪ್ರಮುಖ ಸ್ಥಳ ಹಾಗೂ ನಿಲ್ದಾಣ. ಅಲ್ಲಿ ಮಧ್ಯದಲ್ಲಿ ಗೋರ್ಖ ಸಮರ ಸ್ಮಾರಕವೂ ಇದೆ. ಮತ್ತೆ ಹಿಮಾಲಯ ದರ್ಶನ. ನಲಿ, ನಲಿ -ನಲಿವಿನ ವೇಳೆ! 🙂 ಅಲ್ಲೇ ಬಾಡಿಗೆಗಿದ್ದ ದುರ್ಬೀನಿನಲ್ಲಿ ಕಾಂಚನಜುಂಗಾ ಶ್ರೇಣಿಯನ್ನು ವಿವರವಾಗಿ ನೋಡಿದ ಘಳಿಗೆ ಇನ್ನಷ್ಟು ಪುಳಕ! ದುರ್ಬೀನಿನ ಮಾಲಿಕ ತನ್ನ ಎಂದಿನ ಕರ್ತವ್ಯ ನಿಭಾಯಿಸುತ್ತಿದ್ದ ’ಅದೋ, ಆ ಎಡ ಅಂಚಿನಲ್ಲಿ ಕಾಣುತ್ತಿದೆಯಲ್ಲ ಅದು, ಕುಂಭಕರ್ಣ, ಮಧ್ಯದಲ್ಲಿ ಎಲ್ಲಕ್ಕಿಂತ ಎತ್ತರವಾಗಿ ಕಾಣುತ್ತಿದೆಯಲ್ಲ ಅದು ಕಾಂಚನಜುಂಗ…’ ಅವನ ವಿವರಣೆ ಮುಂದುವರೆದಿತ್ತು. ಟಾಯ್ ಟ್ರೇನ್ನ ಹಳಿಗಳ ಮೇಲೆ ಭರದಿಂದ ಸ್ವೆಟರ್, ಶಾಲ್, ಸಾಕ್ಸ್, ಇನ್ನಿತರ ಉಣ್ಣೆ ಉಡುಪುಗಳ ವ್ಯಾಪಾರ ಸಾಗಿತ್ತು. ಟ್ರೇನ್ ಸಮಯಕ್ಕೆ ಸರಿಯಾಗಿ ಹಳಿ ಖಾಲಿ ಮಾಡುವರಂತೆ ಈ ಜನ.. ಟ್ರೇನ್ ಹೋದ ನಂತರ ವಾಪಸ್ ಠಿಕಾಣಿ!

ನಂತರ ನಾವು ತೆರಳಿದ್ದು ದಾಲಿ ಮೊನಾಸ್ಟರಿಗೆ. ಇದು ಡಾರ್ಜೀಲಿಂಗ್ನಲ್ಲಿರುವ ಕರ್ಗ್ಯುಪ ಪಂಥದ ಪ್ರಮುಖ ಮೊನಾಸ್ಟರಿ. ಕ್ಯಬ್ಜ ಥಕ್ಸೆ ರಿಂಪಾಶ್(Kyabje Thuksey Rinpoche) ಅವರಿಂದ 1971ರಲ್ಲಿ ಪ್ರಾರಂಭವಾದ ಈ ಮೊನಾಸ್ಟರಿ, ಇತ್ತೀಚೆಗೆ 1993 ರಲ್ಲಿ ಮರು ನವೀಕರಣಗೊಂಡೀತ್ತು. ಹೊಸ ಕಟ್ಟಡದ ಉದ್ಘಾಟನೆಯನ್ನು ಪ್ರಸಿದ್ಧ ಗುರು ದಲಾಯಿ ಲಾಮಾರವರು ಮಾಡಿ ಮೂರು ದಿನಗಳ ಪಾಠ-ಪ್ರವಚನ ನೀಡಿದ್ದರಂತೆ. ಹಿಮಾಲಯನ್ ತಪ್ಪಲಿನ ವಟುಗಳೂ ಸೇರಿದಂತೆ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮೊನಾಸ್ಟರಿಯಲ್ಲಿ ಅಭ್ಯಸಿಸುತ್ತಾರೆ.

ಎತ್ತರದಲ್ಲಿರುವ ಈ ಮೊನಾಸ್ಟರಿ ತಲುಪಲು, ನಾವು ಸ್ವಲ್ಪ ಏರು ಏರಬೇಕಾಗುತ್ತದೆ. ಮೊನಾಸ್ಟರಿ ಕಟ್ಟಡಕ್ಕಿಂತ ಮೊದಲು ಎದರಾಗುವುದು, ಪ್ರಾರ್ಥನಾ ಮಂದಿರ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಪ್ರಾರ್ಥನಾ ವಿಧಿ ಜರಗುತ್ತದೆ. ಈ ಮಂದಿರದೊಳಗೆ, ಸಿಲಿಂಡರ್ ಆಕಾರದ ಬಂಗಾರ ಬಣ್ಣದ ದೊಡ್ಡ-ದೊಡ್ಡ ಪ್ರಾರ್ಥನಾ ಚಕ್ರಗಳು. ಮತ್ತು ಅವನ್ನು ತಿರುಗಿಸುತ್ತಾ ಮಂತ್ರ ಪಠಣ ಮಾಡುತ್ತಾ ಕುಳಿತಿದ್ದ, ನೋಡಿದರೇ ಮುದ್ದು ಬರುವಂತಿದ್ದ ಅಜ್ಜ-ಅಜ್ಜಿಯಂದಿರು. ಅವರು ಹೇಳುವ ಮಂತ್ರ ಅದಾವುದೆಂದು ನಾ ಒಬ್ಬ ಅಜ್ಜನನ್ನು ಕೇಳಿದರೆ, ಅಜ್ಜ ನನಗೆ ತಿಳಿ ಹೇಳುವ ರೀತಿಯಲ್ಲಿ ಹೇಳಿದರು – ’ನೀವು ಓಂ ನಮಃ ಶಿವಾಯ ಹೇಳುತ್ತೀರಲ್ಲ, ಇದೂ ಅದೇ ಥರದ ನಮ್ಮ ಮಂತ್ರ’ ಅಂತ 🙂 ಆ ಹಿರಿ ಜೀವಗಳಿಗೊಂದು ನಮನ ಸಲ್ಲಿಸಿ, ಮುಖ್ಯ ಕಟ್ಟಡ ತಲುಪಿದಾಗ ಕಂಡಿದ್ದು, ವಿಶಾಲ ಒಳಾಂಗಣದಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದ ಬೆಂಚುಗಳು, ಧರ್ಮ ಗ್ರಂಥಗಳು, ಅವುಗಳನ್ನೆದುರುಗೊಂಡಂತೆ ಇದ್ದ ಬೃಹದಾಕಾರದ, ಬುದ್ಧನ ವಿವಿಧ ಅವತಾರಗಳ ಮೂರ್ತಿಗಳು, ಕಣ್ಣು ತಿರುಗಿಸಿದಲ್ಲೆಲ್ಲ ಕಾಣುವ ಟಿಬೆಟನ್ ಮಾದರಿಯಲ್ಲಿ ಬಿಡಿಸಿದ ಧಾರ್ಮಿಕ ವರ್ಣಚಿತ್ರಗಳು. ಹೊಸ ಧರ್ಮ, ಹೊಸ ಮಂತ್ರಗಳ ಹೆಚ್ಚು ಮಾಹಿತಿಯಿಲ್ಲದ ನಾನು ಆಚರಿಸಿದ್ದು ಕೆಲವು ನಿಮಿಷಗಳ ಮೌನ ಮಂತ್ರ!

ನಂತರ ವಿರಾಮದ ಸಮಯವಾದ್ದರಿಂದ ನಾವು ಚೌರಸ್ತಾ ಮಾರ್ಗವಾಗಿ (ಇದೂ ಇಲ್ಲಿನ ಸಾಮಾನ್ಯ ಜನ ಜೀವನ ಗಮನಿಸಬಹುದಾದಂಥ, ಪ್ರಮುಖ ಆಕರ್ಷಣೆ ಹಾಗೂ ಶಾಪಿಂಗ್ ಸ್ಥಳ), ಡಾರ್ಜೀಲಿಂಗ್ನ ಒಂದು ಒಳ್ಳೆಯ ಚಹಾ-ಉಪಹಾರ ಮಂದಿರ ಹೊಕ್ಕು, ಡಾರ್ಜೀಲಿಂಗ್ ಚಹಾದ ಸವಿ ಸವಿದು, ಇಂಗ್ಲೀಷ್ ಶೈಲಿಯ ಬೆಳಗಿನ ಉಪಹಾರ ಮುಗಿಸಿದ್ದಾಯ್ತು. ಆ ದಿನ ಗುರುವಾದ್ದರಿಂದ ಮೌಂಟೆನಿಯರಿಂಗ್ ಇನ್ಸ್ಟಿಟ್ಯೂಟ್, ಮತ್ತು ಜುಆಲಾಜಿಕಲ್ ಪಾರ್ಕ್ಗಳಿಗೆ ವಾರದ ರಜೆಯಿತ್ತು. ಹೀಗಾಗಿ ಮುಂದೆ ನಾವು ತೆರಳಿದ್ದು ಶಾಂತಿ ಪಗೋಡ & ಜಪಾನೀಸ್ ಮಂದಿರದೆಡೆಗೆ. ಜಪಾನೀಸ್ ಮಂದಿರದಲ್ಲಿ ನನ್ನ ಮಂತ್ರ ಹೇಳುವ/ತಿಳಿಯುವ ಆಸೆ ಪೂರೈಸಿತು. ತಮ್ಮಟೆ ನಾದದೊಂದಿಗೆ ಎಲ್ಲರೂ ಹೇಳಿದ್ದ ಸಾಮೂಹಿಕ ಮಂತ್ರ ’ ನಾ ಮೂ ಮ್ಯೋ ಹೋ ರೆನ್ ಗಿ ಕ್ಯೋ…’ ಈ ಮಂತ್ರಕ್ಕೆ ಭಾಷೆಯ ಹಂಗಿಲ್ಲ. ಎಲ್ಲರೂ ಈ ಜಪಾನ್ ಉದ್ಭವಿತ ಮಂತ್ರವನ್ನು ಹೀಗೇ ಪಠಿಸುವುದು. ನನ್ನಲ್ಲಿನ ವಿಶ್ವ ಮಾನವನಿಗೆ ಆ ಕ್ಷಣದಲ್ಲಿ ಅದೇನೋ ವಿವರಿಸಲಾಗದ ಅನುಭೂತಿ!

ಎಲ್ಲ ಶಾಂತಿ ಪಗೋಡಗಳೂ ವಿಶ್ವ ಶಾಂತಿಯನ್ನು ಪಸರಿಸಲು ನಿರ್ಮಿಸಿದಂಥ ವಿನ್ಯಾಸಗಳು. ಫ಼ುಜೀ ಗುರುಗಳಿಂದ ನಿರ್ಮಿತವಾದ ಈ ನಿರ್ಮಾಣಗಳ ವಿನ್ಯಾಸವೇ ಬುದ್ಧನ ಆಕೃತಿಯ ಸಾಕಾರದಂತಿದ್ದು, ಶಾಂತಿಯನ್ನು ಹೊರಸೂಸುತ್ತವೆ (ಪದ್ಮ ಸೂತ್ರದ ಪ್ರಕಾರ). ಇಲ್ಲೂ ಅಷ್ಟೇ, ಪಗೋಡದ ನಾಲ್ಕು ಮೂಲೆಗಳಲ್ಲೂ ಶಾಂತಿಯೇ ಅವತಾರವೆತ್ತಂತಿರುವ ಬುದ್ಧನ ಸುಂದರ ಮೂರ್ತಿಗಳಿವೆ. ಆ ಮೊಗದ ಪ್ರಶಾಂತತೆಯನ್ನು ಪ್ರತಿ ಮೂಲೆಯಲ್ಲೂ ಆರಾಧಿಸಿ, ಅನುಭವಿಸಿ, ನಾ ಮೆಟ್ಟಲಿಳಿದಿದ್ದೆ. ಮುಂದೆ ಹೊರಟಿದ್ದು ಟಿಬೆಟನ್ ಪುನರ್ವಸತಿ ಕೇಂದ್ರಕ್ಕೆ.

ಆಗಷ್ಟೇ ಶಾಂತಿ ಸೌಹಾರ್ದದ ಸಂದೇಶವೋದಿ, ಬುದ್ಧನ ಮುಖದ ಪ್ರಶಾಂತತೆಯನ್ನು ಅನುಭವಿಸಿ, ಟಿಬೆಟನ್ ಪುನರ್ವಸತಿ ಕೇಂದ್ರಕ್ಕೆ ಹೋದಾಗ ಕಂಡದ್ದು, ತೀರಾ ತದ್ವಿರುದ್ಧ ಜಗತ್ತು. ಪುನರ್ವಸತಿ ಕೇಂದ್ರದಲ್ಲಿ ನಮ್ಮನ್ನು ಸ್ವಾಗತಿಸಿದ್ದು, ಟಿಬೆಟನ್ ಸಮರದ ಹೃದಯ ಬಿರಿಯುವಂಥ ಚಿತ್ರಗಳು. ಮನ ಕಲಕಿ ಹೋಯಿತು ಆ ಕ್ಷಣದಲ್ಲಿ. ಬದುಕ್ಯಾಕೆ ಹೀಗೆ? ಅಂತ ಬೇಜಾರಾಗಿ ಮುನ್ನಡೆದರೆ ಮುದ್ದು ಮುಖದ ಮುಗುಳ್ನಗೆಯ ಅಜ್ಜಿಯಂದಿರು, ತಮ್ಮ ಪುನರ್ವಾಸಿತ ಮನೆಯಲ್ಲಿ ಹೆಣಿಕೆ, ನೇಯ್ಗೆ ಇತ್ಯಾದಿ ಕೆಲಸದಲ್ಲಿ ತಲ್ಲೀನರಾಗಿದ್ದರು. ನಾವವರನ್ನು ಸಂದರ್ಶಿಸಿದ್ದು ಅವರಿಗೆ ಯಾವುದೇ ಮುಜುಗರ ಮೂಡಿಸಿರಲಿಲ್ಲ. ಅವರ ಪಾಡಿಗೆ ಅವರು ಕೆಲಸದಲ್ಲಿ ಮಗ್ನರು. ಆ ಮೌನ ಮುಖಗಳ ಹಿಂದಿನ, ಆ ತಲ್ಲೀನತೆಯ ಹಿಂದಿನ ಕಥೆಗಳೇನೋ..?! ನಂತರ ಟಿಬೆಟನ್ ಪುನರ್ವಸತಿ ಕೇಂದ್ರದ ಇತಿಹಾಸದ ಕುರಿತಾದ ಚಿತ್ರ ಸಂಗ್ರಹಾಲಯ ವೀಕ್ಷಿಸಿ, ಅದಕ್ಕೆ ಹತ್ತಿಕೊಂಡೇ ಇದ್ದ ಅಂಗಡಿಯಲ್ಲಿ ಒಂದೆರಡು ಶಾಲ್ಗಳನ್ನು ಖರೀದಿಸಿ (ಈ ಹಣ ಪುನಃ ಇಲ್ಲಿನ ಕುಶಲಕರ್ಮಿಗಳ ನೆರವಿಗಾಗಿ ಬಳಕೆಯಾಗುತ್ತದೆ), ಅಲ್ಲಿಂದ ಹೊರಟಾಗ, ಮನಸು ಗೊಂದಲಗಳ ಗೂಡು!

ಅಷ್ಟೊತ್ತಿಗೆ ಮಧ್ಯಾನ್ಹ. ಊಟ-ಉಪಹಾರಗಳ ಕಾರ್ಯಕ್ರಮ. ನಂತರ ಪಟ್ಟಿಯಲ್ಲಿದ್ದ ಕೊನೆಯ ಅನುಭವ.. ’ಕೂ ಚುಕು-ಬುಕು, ಚುಕು-ಬುಕು’. ಹೂಂ, ಟಾಯ್ ಟ್ರೇನ್ ಪಯಣ. ಟಾಯ್ ಟ್ರೇನ್ ಅನ್ನೋದು ಡಾರ್ಜೀಲಿಂಗ್ ಹಿಮಾಲಯನ್ ರೇಲ್ವೆಗಿರುವ ಜನ-ಬಳಕೆಯ ಹೆಸರು. ಎರಡು ಅಡಿ ಉದ್ದದ ಈ ಟಾಯ್ ಟ್ರೇನ್ಗೆ ತನ್ನದೇ ಆದ ಇತಿಹಾಸವಿದೆ. ಅಷ್ಟೇ ಅಲ್ಲದೇ, ಹೆಚ್ಚು-ಕಮ್ಮಿ ಸಮುದ್ರ ಮಟ್ಟದಿಂದ, ೭,೪೦೦ ಅಡಿ ಎತ್ತರ ಏರುವ ಈ ಉಗಿಬಂಡಿಯನ್ನು ಒಂದು ಅಭಿಯಾಂತ್ರಿಕ ಅದ್ಭುತವೆಂದೇ ಈ ದಿನಕ್ಕೂ ಪರಿಗಣಿಸಲಾಗುತ್ತದೆ. ಇದು ಮೊದಲು ಕಾರ್ಯ ಪ್ರಾರಂಭಿಸಿದ್ದು ೧೮೮೧ ರಲ್ಲಿ. ಅಂದಿನಿಂದ ಇಂದಿನವರೆಗೆ ಮಾರ್ಗನಕ್ಷೆಯಲ್ಲಿ, ನಿರ್ಮಾಣದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದರೂ, ಈ ದಿನಕ್ಕೂ ಈ ಉಗಿಬಂಡಿಯ ನೋಟ ಮತ್ತು ಅದರ ಪಯಣ ನಮ್ಮನ್ನು ಹಳೆಯ ಕಾಲಮಾನಕ್ಕೆ ಕರೆದೊಯ್ಯುವುದಲ್ಲದೇ, ಮಾರ್ಗ ಪೂರ್ತಿ ಭೂರಮೆಯ ಅಭೂತಪೂರ್ಣ ದರ್ಶನ ಮಾಡಿಸುತ್ತದೆ.

ಡಾರ್ಜೀಲಿಂಗ್ಗೆ ಬಂದಾಗಿನಿಂದ ನಾ ಬೆರಗುಗಣ್ಣಿಂದ ನೋಡಿದ್ದು, ರಸ್ತೆಯಲ್ಲೆಲ್ಲ ಹಾದು ಹೋಗಿದ್ದ ಆ ಪುಟ್ಟ ಹಳಿಗಳನ್ನ, ಹೊಗೆ ಬಿಡೋ ನೀಲಿ, ನೀಲಿ ಎಂಜಿನ್ ಅನ್ನ. ಆ ಉಗಿಬಂಡಿ ದರ್ಶನ ಆದಾಗಲೆಲ್ಲ, ಮನಸು ಕೂಸು.. ಅದೇ ಖುಶಿ, ಅದೇ ಮುಗ್ಧತೆ, ಅದೇ ಕುತೂಹಲ ಭರಿತ ಕಂಗಳು… ಅಂತೂ ಇಂತೂ ಕನಸಿನ ರಥ ಶುರುವಾಗಿದ್ದು ಸಂಜೆ ೪:೦೦ಕ್ಕೆ. ಅಂದ ಹಾಗೆ ಈ ಸವಾರಿಯ ಹೆಸರು ’ಜಾಯ್ ರೈಡ್’ (ಡಾರ್ಜೀಲಿಂಗ್-ಘುಮ್-ಡಾರ್ಜೀಲಿಂಗ್).. ಆಹಾ! ಸುಂದರ ದಿನಕ್ಕೊಂದು ಸುಂದರ ವಿದಾಯ… ಶುರುವಾಯ್ತು ಚುಕು-ಬುಕು ಪಯಣ. ಯಾಕೋ ಕರಡಿ ಶಿಶುಗವಿತೆ ’ಟ್ರೇನ್ ಎಟ್ ದ ಸ್ಟೇಶನ್… ಟಡಕ್, ಟಡಕ್…’ ನೆನಪಾಯ್ತು. ಆ ಟಡಕ್-ಟಡಕ್ ಪಯಣಕ್ಕೆ, ನಡುವೆ ಬಸ್ತಿಯಾ ಲೂಪ್ನಲ್ಲಿ ಒಂದು ನಿಲ್ದಾಣ. ಮೋಡ ಕವಿದ ಆ ತಂಪು-ತಂಪು ಡಾರ್ಜೀಲಿಂಗ್ ಸಂಜೆ, ಗುಲಾಬಿ ಬಣ್ಣದ ಹೂಗಳು, ನೀಲೀ ಉಗಿಬಂಡಿಯ ಬೆಚ್ಚನೆ ಭಾವ.. ಉಫ್…Life’s so dreamy… 🙂

ಘುಮ್ಗೇ ಪ್ರಯಾಣ ನಿಲ್ಲಿಸುವುದೆಂದು ಮೊದಲೇ ನಿರ್ಧರಿಸಿಯಾಗಿತ್ತು. ಘುಮ್ನಲ್ಲಿ ಇಳಿದು, ಕಲ್ಲಿದ್ದಲ ಎಂಜಿನ್, ಕೆಂಡವಾಗಿದ್ದ ಕಲ್ಲಿದ್ದಲು, ಅದರ ಹಿತವೆನಿಸುವ ಬಿಸಿ ಎಲ್ಲವನ್ನೂ ಕಡೆ ಬಾರಿ ಅನುಭವಿಸಿ,ಕಾರ್ ಏರಿದ್ದಷ್ಟೇ ನೆನಪು.. ಸಂಜೆಗೇ ನಾ ನಿದ್ರೆಗೆ ಶರಣು. ಕನಸು ಮುಂದುವರೆಯಬೇಕಿತ್ತಲ್ಲ! ಕಣ್ಬಿಟ್ಟಾಗ, ಕತ್ತಲು, ಬೈಗುನಿ, ಮತ್ತೆ ರಂಗೀತ್ಳ ಕರೆ!

(ಮುಂದುವರೆಯುವುದು…)

‍ಲೇಖಕರು G

19 October, 2012

4 Comments

  1. Badarinath Palavalli

    ಶಿವನ ಮೂರ್ತಿ ಬಹಳ ಸೊಗಸಾಗಿದೆ.

    ಡಾರ್ಜಲಿಂಗಿನ ರೈಲು ಮಾರ್ಗವೇ ಅದ್ಭುತ ಇಂಜನಿಯರಿಂಗ್ ಕುಶಲತೆ ಅಲ್ಲವೇ?

    ಅಲ್ಲಿನ ಊಟದ ಮೆನು ಹಾಕಬೇಕಿತ್ತು.

    ಮುಂದುವರೆಯಲಿ…

  2. Gopaal Wajapeyi

    ‘ಟೈಗರ್ ಹಿಲ್ಸ್’ ಸೂರ್ಯೋದಯ… ಸೂಪರ್ರೋ ಸೂಪರ್ರು… ನಾವೇ ನಿಮ್ಮ ಕಣ್ಣುಗಳ ಮೂಲಕ ಅದನ್ನು ಕಂಡುಕೊಂಡಷ್ಟು ಆನಂದ… ಇಡೀ ಲೇಖನ ಸತ್ಯಂ… ಶಿವಂ…ಸುಂದರಂ…!

  3. Geetha b u

    Nimma baraha dha moolaka nammannu nimmondhige karedhukondu hogidhakke thanks.

  4. ಮಂಜುಳಾ ಬಬಲಾದಿ

    ನಿಮ್ಮೆಲ್ಲರ ಅಭಿಪ್ರಾಯಕ್ಕೆ ಮತ್ತು ಮೆಚ್ಚುಗೆಗೆ ಧನ್ಯವಾದ. ಬದರಿ ನಮ್ಮ ಡಾರ್ಜೀಲಿಂಗ್ ಊಟದ ಮೆನು ಮಾಮೂಲು ಉತ್ತರ ಭಾರತದ ಊಟವಾಗಿತ್ತು, ವಿಶೇಷವಾದದ್ದೇನಿಲ್ಲ. ಅದಕ್ಕೇ ಬರೆಯಲಿಲ್ಲ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading