ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನ ಹೊಸಪಾಳ್ಯ ನೆನಪಿಸಿಕೊಂಡ ನಾಗೇಶ್ ಹೆಗಡೆ ಮತ್ತು ಮಂಚಿಬೆಟ್ಟ

-ಮಲ್ಲಿಕಾರ್ಜುನ ಹೊಸಪಾಳ್ಯ

ಇಪ್ಪತ್ತು ವರ್ಷಗಳ ಹಿಂದಿನ ನೆನಪು. ತಮಿಳುನಾಡಿನ ಥಳಿ ಊರಿನಲ್ಲಿ ಕೆಲಸ. ಅದೇನೂ ದೂರದ ಊರಲ್ಲ. ಆನೇಕಲ್ ದಾಟಿ ಅರ್ಧ ಗಂಟೆ ಪ್ರಯಾಣಿಸಿದರೆ ಸಿಗುತ್ತದೆ. ಬೆಂಗಳೂರಿಗೆ ಅಷ್ಟು ಹತ್ತಿರವಿದ್ದರೂ ಆಗ ಅದೊಂದು ಬೇರೆಯದೇ ಲೋಕ. ಬ್ರಿಟೀಷರು ಆ ಊರಿಗೆ ‘ಲಿಟ್ಲ್ ಇಂಗ್ಲೆಂಡ್’ ಎಂದು ಕರೆಯುತ್ತಿದ್ದರು. ಅಷ್ಟೊಂದು ಚಳಿ. ತಮಿಳು-ಕನ್ನಡ-ತೆಲುಗು ಭಾಷಾ ಮಿಶ್ರಣದ ಜನರು, ಹಸುರು ಏರಿಳಿತದ ಭೂದೃಶ್ಯಗಳು, ವೈವಿಧ್ಯದ ಕೃಷಿ. ಅಲ್ಲಿ ಕೃಷ್ಣಪ್ರಸಾದ್ ಮೊದಲೇ ಕೆಲಸ ಮಾಡುತ್ತಿದ್ದರು. 1998ರಲ್ಲಿ ನಾನು ಹೋದೆ. ಮರುವರ್ಷ ಎಲ್.ಸಿ. ಚನ್ನರಾಜ್ ಬಂದರು. ಇನ್ನೂ ಹಲವು ಸಮಾನ ಮನಸ್ಕರಿದ್ದೆವು.

ಅಲ್ಲಿಂದ 50-60 ಕಿಲೋ ಮೀಟರ್ ಹೋದರೆ ಮಂಚಿಬೆಟ್ಟ ಎಂಬ ಮತ್ತೊಂದು ಬೆರಗಿನ ಪ್ರಪಂಚ ಸಿಗುತ್ತಿತ್ತು. ಬೆಟ್ಟದ ವೈಶಿಷ್ಟ್ಯದ ಬಗ್ಗೆ ನಮ್ಮಿಂದ ಕೇಳಿ ‘ಅದನ್ನು ನೋಡಲೇಬೇಕೆಂದು” 2000ನೇ ಇಸವಿಯ ಒಂದು ಭಾನುವಾರ ನಾಗೇಶ್ ಹೆಗಡೆಯವರು ಆರು ಗಂಟೆಯ ಕೆ.ಆರ್.ಎಂ.ಎಸ್ ಬಸ್ಸಿನಲ್ಲಿ ಬಂದೇಬಿಟ್ಟರು. ಅವರಾಗ ‘ಪ್ರಜಾವಾಣಿ’ಯಲ್ಲಿ ‘ಕರ್ನಾಟಕ ದರ್ಶನ’ ಹಾಗೂ ‘ಕೃಷಿ ಪುಟ’ ನೋಡಿಕೊಳ್ಳುತ್ತಿದ್ದರು. ಆಗಷ್ಟೇ ಬರವಣಿಗೆ ಸುರುಮಾಡಿದ್ದ ನನಗೆ ಅವರು ಕಾರ್ಡಿನಲ್ಲಿ ಸಲಹೆ ಸೂಚನೆ ನೀಡುತ್ತಾ ತಿದ್ದುತ್ತಿದ್ದರು. ಆ ಕಾರ್ಡುಗಳಿಗೇ ರೋಮಾಂಚಿತರಾಗಿದ್ದ ನಾನು ಅವರನ್ನು ಮೊಕ್ತಾ ನೋಡಿ ಮತ್ತೂ ರೋಮಾಂಚಿತನಾದೆ.

ಬಂದವರೇ ‘ಫ್ರೆಶ್ ಅಪ್ ಆಗಬೇಕ್ರೀ’ ಎಂದರು. ಬಿದಿರಿನ ತಡಿಕೆಯ ರೂಮು ತೋರಿಸಿದೆವು. ‘ಇದೆಲ್ಲಾ ಯಾಕ್ರೀ ಒಂದ್ ತಂಬಿಗೆ ಇದೆಯಾ’ ಅಂತ ಕೇಳಿ ಪಡೆದು ನೀರು ತುಂಬಿಕೊಂಡು ಸೀದಾ ನಮ್ಮ ಫಾರಮ್ಮಿನ ಹಿಂದೆ ಇದ್ದ ಕುರುಚಲು ಕಾಡಿಗೆ ಹೋಗೇಬಿಟ್ಟರು. ಅವರ ನೆಲಮೂಲ ಸಂಸ್ಕೃತಿಗೆ ನಾವೆಲ್ಲಾ ಮಾರುಹೋದೆವು.

ಮೊದಲೇ ನಿರ್ಧರಿಸಿದಂತೆ ನಾನು ಕೇಪಿ (ಕೃಷ್ಣಪ್ರಸಾದ್) ಅವರ ಎಂ 80 ಸ್ಕೂಟರಿನಲ್ಲಿ, ನಾಗೇಶ್ ಹೆಗಡೆಯವರು ಚನ್ನರಾಜು ಅವರ ರಾಜ್‌ದೂತ್ ಬೈಕಿನಲ್ಲಿ ಹೊರಟೆವು. ಅಷ್ಟೊತ್ತಿಗಾಗಲೇ ಒಮ್ಮೆ ಮಂಚಿಬೆಟ್ಟಕ್ಕೆ ನಾವು ಹೋಗಿ ಬಂದಿದ್ದರಿಂದ ದಾರಿ ಗೊತ್ತಿತ್ತು. ಡೆಂಕಣಿಕೋಟೆ ದಾಟಿ ಬೆಟ್ಟಮುಗಳಾಳದ ಮೇಲಾಸಿ ಕಾಲುದಾರಿಯಲ್ಲಿ ನಮ್ಮ ದ್ವಿಚಕ್ರ ವಾಹನಗಳ ಪ್ರಯಾಣ.

ಅರ್ಧ ದಾರಿ ಮುಗಿದಾಗ ಒಂದು ತಾರೆ ಮರದ ಕೆಳಗೆ ವಿಶ್ರಾಂತಿಗಾಗಿ ನಿಲುಗಡೆ. ಅಲ್ಲೊಬ್ಬ ಸೊಳ್ಳೆಪರದೆ ಮಾರುವವ ಸಿಕ್ಕಿದ. ಕುತೂಹಲದಿಂದ ಕಣ್ಣರಳಿಸಿ ಅವನತ್ತ ನೋಡಿದ ಹೆಗಡೆಯವರು “ಏನ್ರೀ ಚೆನ್ನಾಗಿದೆಯಾ ವ್ಯಾಪಾರ” ಎಂದರು. “ಈ ತಡ ಸೊಳ್ಳೆನೆ ಸ್ಯಾನೆ ಇಲ್ಲ ಸಾ, ಯಾಪಾರನು ವುಲ್ಲ ಏನೂ ವುಲ್ಲ”ಎಂದು ತುಂಬಾ ಬೇಜಾರಿನ ಮುಖ ಮಾಡಿಕೊಂಡುಬಿಟ್ಟ. ಅವನ ಪ್ರಕಾರ ಚೆನ್ನಾಗಿ ಮಳೆಯಾಗಿ ಜೌಗು ಬಂದು ರೈತರು ಹೆಚ್ಚಾಗಿ ಭತ್ತ ಬೆಳೆದರೆ ಆ ವರ್ಷ ಸಮೃದ್ಧಿಯಾಗಿ ಸೊಳ್ಳೆಗಳು ಏಳುತ್ತವೆ, ಆಗ ಆತನ ವ್ಯಾಪಾರವೂ ವೃದ್ಧಿಸುತ್ತದೆ. ಅವನ ಸಂಕಟವನ್ನು ತನ್ನದೇ ಎನ್ನುವಂತೆ ಪರಿಭಾವಿಸುತ್ತಾ ಚನ್ನರಾಜು ಬಾಯಿಯ ಮೇಲೆ ಬೆರಳಿಟ್ಟುಕೊಂಡು ಲೊಚಗುಟ್ಟುತ್ತಿದ್ದರು. ಅವರನ್ನು ಹಾಗೇ ಬಿಟ್ಟಿದ್ದರೆ ಮಳೆಯ ಏರುಪೇರಿಗೂ ಸೊಳ್ಳೆ ಪರದೆಗಳ ವ್ಯಾಪಾರಕ್ಕೂ ಇರುವ ಸಂಬಂಧವನ್ನು ವಿಶ್ಲೇಷಿಸಿ ಜಾಗತೀಕರಣಕ್ಕೆ ಲಿಂಕು ಮಾಡುತ್ತಿದ್ದರೇನೋ. ಆದರೆ ಮಳೆಯನ್ನು ಸೊಳ್ಳೆ ಉತ್ಪಾದಿಸುವ ಏಜೆಂಟನಂತೆ ಕಾಣುವ ಆತನ ಮಾತುಗಳನ್ನು ಕೇಳಿ ಎಲ್ಲರೂ ಪಕಾರನೆ ನಗಾಡಿದೆವು. ಆತ ಹೊರಟುಹೋದ.

ಹಾಗೆ ನಗಾಡುತ್ತಾ ನೋಡುತ್ತೇವೆ, ಚನ್ನರಾಜು ಅವರ ರಾಜ್‌ದೂತ್ ಬೈಕಿನ ಕ್ಲಚ್ ವೈರು ಜೂಲುಜೂಲಾಗಿ ಹರಿದು ಇನ್ನು ಒಂದೇ ಎಳೆ ಉಳಿದಿತ್ತು. ಆ ಏರಿಳಿತದ ಕಾಡುದಾರಿಯಲ್ಲಿ ಆಗಾಗ್ಗೆ ಕ್ಲಚ್ ಹಿಡಿದು ಗೇರು ಬದಲಾಯಿಸಲೇಬೇಕಿತ್ತು. ಹೆಗಡೆಯವರ ಮುಖ ನೋಡಿದೆವು. ಗಾಬರಿಯಾಗುವಂಥಾದ್ದೇನೂ ಕಾಣಲಿಲ್ಲ. ಬದಲಿಗೆ ‘ವಾಕ್ ಮಾಡೋಣ ಬಿಡ್ರೀ’ ಎಂದರು. ಸಸ್ಪೆನ್ಷನ್ನುಗಳೆಲ್ಲಾ ಕೆಲಸ ಮಾಡದೆ ಲಡ್ಡಾಗಿದ್ದ ಆ ಬೈಕಿನ ಮೇಲೆ ಕುಂತು ಬೆನ್ನುನೋವು ಬಂದಿದ್ದೂ ಸಹ ಅವರ ಆ ತೀರ್ಮಾನಕ್ಕೆ ಇನ್ನೊಂದು ಕಾರಣವಿರಬಹುದು. ಚನ್ನರಾಜು ಮಾತ್ರ ಕಂಗಾಲಾದರು. ನಡೆಯುವುದೇನೂ ಅವರಿಗೆ ಸಮಸ್ಯೆಯಲ್ಲ, ಆದರೆ ಆ ಧಡಿಯ ಬೈಕನ್ನೂ ತಳ್ಳಿಕೊಂಡು ನಡೆಯಬೇಕಲ್ಲ ಅನ್ನೋದೇ ಅವರ ಕಂಗಾಲಿಗೆ ಕಾರಣ. ಅಲ್ಲದೆ ಗುರುಗಳನ್ನು ನಡೆಸಿಕೊಂಡು ಹೋಗಲು ಅವರು ಸುತ್ರಾಂ ಒಪ್ಪಿರಲಿಲ್ಲ.

ಹೆಚ್ಚಿಗೆ ಯೋಚನೆ ಮಾಡದೆ ಕ್ಲಚ್ ಪೂರಾ ತುಂಡಾಗುವವರೆಗೂ ಸವಾರಿ ಮಾಡೋಣ ಅಂತ ನಿರ್ಧರಿಸಿ ಹೊರಟೆವು. ಚನ್ನರಾಜು ಆದಷ್ಟೂ ಗೇರು ಬದಲಾಯಿಸದೇ ಗಾಡಿ ಓಡಿಸಿ ಅಂತೂ ಮಂಚಿಬೆಟ್ಟದಲ್ಲಿ ಪರಿಚಿತರಾಗಿದ್ದ ಬೆಳ್ಳಪ್ಪನವರ ಹಳ್ಳಿಗೆ ತಲುಪಿದೆವು. ಹಳ್ಳಿ ಅಂದರೆ ನಾಲ್ಕೈದು ಜೋಪಡಿ ಮನೆಗಳು.

ಆವತ್ತು ಇಡೀ ಹಗಲು ಬೆಟ್ಟದಲ್ಲಿ ಅಡ್ಡಾಡಿದೆವು. ಅಲ್ಲಿದ್ದ ರಾಗಿ ಮತ್ತು ಅವರೆ ಮಿಶ್ರಣದ ಅಕ್ಕಡಿ ಸಾಲುಗಳನ್ನು ನೋಡಿ ಅಚ್ಚರಿಯಾಯಿತು. ಮದ್ಯಾಹ್ನ ಒಬ್ಬ ರೈತರ ಮನೆಯಲ್ಲಿ ಊಟ. ಉಂಡವರೆ ಕಾಳಿನ ಸಾಂಬಾರು. ಒಬ್ಬೊಬ್ಬರ ತಟ್ಟೆಗೂ ಅನ್ನವೇ ಕಾಣದಂತೆ ಅವರೆಕಾಳು ಬಡಿಸಿದ್ದರು. ಇಷ್ಟು ಅವರೆಕಾಳನ್ನು ಪಟ್ಟಣದವರು ಒಂದು ವಾರ ಬಳಸುತ್ತಾರೆ ಎಂಬ ಉದ್ಘಾರ ನಮ್ಮ ಕಡೆಯಿಂದ.

ಮಂಚಿಬೆಟ್ಟದಲ್ಲಿ ಯತೇಚ್ಚ ದನಗಳನ್ನು ಸಾಕಿದ್ದರು. ಕೆಲವರು ಅವುಗಳನ್ನು ಕಟ್ಟಿಹಾಕುತ್ತಲೂ ಇರಲಿಲ್ಲ. ಯಾವಾಗಲೋ ಬರುತ್ತಿದ್ದವು. ಯಾವಾಗಲೋ ಹೋಗುತ್ತಿದ್ದವು. ಬೇಸಾಯದ ಕಾಲದಲ್ಲಿ ಹಿಡಿದು ಉಳುಮೆ ಮಾಡುತ್ತಿದ್ದರು. ಇಂಥಾ ದನ ಸಮೃದ್ಧಿಯ ಸ್ಥಳದಲ್ಲಿ ಹಾಲು ಕುಡಿಯುವ ಮತ್ತು ಹಾಲು ಹಾಕಿ ಟೀ ಮಾಡುವ ಅಭ್ಯಾಸವೇ ಇರಲಿಲ್ಲ ಅಂದರೆ ನಂಬುತ್ತೀರೇನು. ನಂಬಲೇಬೇಕಾದ ಘಟನೆಯೊಂದು ನಡೆಯಿತು.

ಊಟದ ನಂತರ ಬೆಟ್ಟದ ಮೇಲೆ ಹರಡಿದ್ದ ಹಳ್ಳಿಗಳನ್ನು ಅಡ್ಡಾಡುತ್ತಾ ಅಲ್ಲಿನ ಮನೆಗಳಲ್ಲಿ ನೆಲದಿಂದ ಜಂತೆಯವರೆಗೂ ಪೇರಿಸಿದ್ದ ಮಣ್ಣಿನ ಗುಡಾಣ, ಮಡಕೆಗಳ ಸಾಲನ್ನು ಬೆರಗಿನಿಂದ ನೋಡುತ್ತಾ ನಾಗೇಶ್ ಹೆಗಡೆಯವರಿಗೆ ಟೀ ನೆನಪಾಗಿಬಿಟ್ಟಿತು. “ಒಂದ್ ಕಪ್ ಚಾ ಸಿಗುತ್ತಾ” ಎಂದರು ತಮ್ಮ ಸಣ್ಣ ಧ್ವನಿಯಲ್ಲಿ. “ಓ ಶ್ಯೂರ್” ಎಂದು ಚನ್ನರಾಜು ಬೆಳ್ಳಪ್ಪನ ಮುಖ ನೋಡಿದರು. ಆತ ಮಕ-ಮಕಾ ನೋಡಿದ. ಇಬ್ಬರೂ ಅವರಿವರ ಮನೆಗಳಿಗೆ ಎಡತಾಕಿ ಬಂದು “ಸಾರ್ ಇಲ್ಯಾರೂ ಹಾಲು ಬಳಸಿ ಟೀನೇ ಮಾಡುವುದಿಲ್ಲವಂತೆ” ಎಂಬ ದುರ್ವಾರ್ತೆಯನ್ನು ತಂದರು. “ಪರವಾಗಿಲ್ಲ ಬಿಡಿ” ಎಂದು ಹೆಗಡೆಯವರು ಸುಮ್ಮನಾದರೂ ಇವರು ಮತ್ತೆ-ಮತ್ತೆ ಪ್ರಯತ್ನಿಸಿ ಯಾರದೋ ಮನೆಯಲ್ಲಿ ಎಂಥದೋ ಕಷಾಯ ಮಾಡಿಸಿದರು. ಕಪ್ಪನೆಯ ಬೆಲ್ಲ ಹಾಕಿ ಮಾಡಿದ್ದ ಅದು ರುಚಿಯಾಗೇ ಇತ್ತು.

ಸಮತಟ್ಟು ನೆಲದಿಂದ ಐದಾರು ಕಿಲೋಮೀಟರ್ ಎತ್ತರ ಹತ್ತಿದರೆ ಕಣ್ಣಮುಂದೆ ನೂರಾರು ಎಕರೆ ಜಾಗ ಹರಡಿಕೊಳ್ಳುತ್ತಿತ್ತು. ಅದೇ ಮಂಚಿಬೆಟ್ಟದ ಸಾಲು. ಅಲ್ಲಿ ಶತಮಾನಗಳಿಂದ ಕೃಷಿ ಮಾಡಿಕೊಂಡಿದ್ದ ನೂರಾರು ಕುಟುಂಬಗಳಿದ್ದವು. ಒಟ್ಟು 28 ಸಣ್ಣ-ಸಣ್ಣ ಹಳ್ಳಿಗಳು. ನೆಲ ತಮಿಳುನಾಡಿಗೆ ಸೇರಿದ್ದರೂ ಎಲ್ಲರೂ ಕನ್ನಡಿಗರೇ. “ರಾಗಿ ಹಿಟ್ ಉಮ್ತಿರೋ ಹೆಂಗೆ” ಎಂಬ ಯಾಸೆ ಮಾತು. ನಾವು ಹೋದಾಗ ಅಲ್ಲಿಗೆ ಇನ್ನೂ ರಾಸಾಯನಿಕಗಳು ಸೋಕಿರಲಿಲ್ಲ. ಅಂದರೆ ದೇಶಾದ್ಯಂತ ಹಸಿರು ಕ್ರಾಂತಿ ಶುರುವಾಗಿ ನಾಲ್ಕು ದಶಕದ ನಂತರವೂ ಪರಿಶುದ್ಧ ಮಣ್ಣು. ಹೈಬ್ರಿಡ್ ಬೆಳೆಗಳ ಹೆಸರನ್ನೇ ಅವರು ಕೇಳಿರಲಿಲ್ಲ. ಜೋಪು ನೀರಿರುವ ಕಡೆ ಮರನೆಲ್ಲು, ಬಿಳಿನೆಲ್ಲು, ದೊಡ್ಡಭೈರನೆಲ್ಲು ಮುಂತಾದ ಭತ್ತದ ತಳಿ ಹಾಕುತ್ತಿದ್ದರು. ಮುಖ್ಯ ಬೆಳೆ ರಾಗಿ. ಅದರಲ್ಲಿ ಗಿಡ್ಡರಾಗಿ, ಬಿಳಿರಾಗಿ, ಕರಿಗಿಡ್ಡರಾಗಿ ತಳಿಗಳಿದ್ದವು. ರಾಗಿ ಬಿಟ್ಟರೆ ಅವರೆಯೇ ಮತ್ತೊಂದು ಮುಖ್ಯ ಬೆಳೆ. ಖಂಡುಗಗಟ್ಟಲೆ ಅವರೆ ಕಾಳು ಬೆಳೆಯುವ ಪ್ರದೇಶವದು. ಅವರೆಯಲ್ಲಿಯೇ ಕೆಂಪವರೆ, ಹಂಬವರೆ, ಸರಗವರೆ, ಬಿಳಿ ಅವರೆ ಎಂಬ ನಾಲ್ಕಾರು ತಳಿಗಳಿದ್ದವು. ಸಾಮೆ, ನವಣೆ, ಎತ್ತಿನ ಜೋಳ, ಬಿಳಿಜೋಳ, ಕರಿ ಅಲಸಂದೆ, ಕೆಂಪು ತೊಗರಿ, ಉರಿಬೀಜ ಇತ್ಯಾದಿ ದೇಸೀ ಬೀಜಗಳ ಕಣಜವೇ ತುಂಬಿತ್ತು. ನಮ್ಮ ಕಡೆ ಕಣ್ಮರೆಯಾಗಿದ್ದ ಮುಳ್ಳು ಬದನೆ ಅಲ್ಲಿ ಮನೆ-ಮನೆಗಳ ಹಿತ್ತಿಲಲ್ಲಿ ನಗುತಿದ್ದವು. ಎತ್ತರ ಬೆಳೆಯುವ ಮೆಣಸಿನಕಾಯಿ ತಳಿಯೊಂದನ್ನು ಕಂಡೆವು. ಆವರೆಗೆ ಎಲ್ಲಿಯೂ ಅಂಥಾ ತಳಿ ನೋಡಿರಲಿಲ್ಲ. ಮುಂದೆ ಅದನ್ನು ‘ಮಂಚಿಬೆಟ್ಟದ ಮೆಣಸಿನಕಾಯಿ’ ಹೆಸರಿನಲ್ಲೇ ಪ್ರಸಾರ ಮಾಡಿದೆವು.

ಒಂದು ಹಳ್ಳಿಯಲ್ಲಿ ಬಯಲಿನಲ್ಲಿಯೇ ಭತ್ತ ಕುಟ್ಟುವ ಒರಳು ಮತ್ತು ಮರದ ಕಡಿ ಇದ್ದವು. ಊರಿನ ಯಾರು ಬೇಕಾದರೂ ಬಂದು ಅದನ್ನು ಬಳಸಬಹುದಿತ್ತು. ಸಮುದಾಯದ ಆಸ್ತಿ. ಪ್ರತಿ ಮನೆಯಲ್ಲಿಯೂ ರಾಗಿ ಬೀಸೋ ಕಲ್ಲುಗಳ ಗುರು-ಗುರು ಸದ್ದು. ಮಳೆಯಿಂದ ರಕ್ಷಿಸಿಕೊಳ್ಳಲು ಮುತ್ತುಗ ಹಾಗೂ ತೇಗದ ಎಲೆಗಳಿಂದ ಗೊರಸಗಳನ್ನು ಹೆಣೆದುಕೊಳ್ಳುತ್ತಿದ್ದರು. ನೋಡಲು ಎಂಥಾ ಆಕರ್ಷಕವಾಗಿದ್ದವೆಂದರೆ ಒಂದು ಕಲಾಕೃತಿಯಂತೆ.

ನಾವು ಹೋದಾಗ ಅಲ್ಲಿನ ಇಪ್ಪತ್ತೆಂಟು ಪುಟ್ಟ-ಪುಟ್ಟ ಹಳ್ಳಿಗಳೆಲ್ಲಾ ಒಟ್ಟಾಗಿ ಸೇರಿ ಅಷ್ಟಮಿ ಹಬ್ಬವನ್ನು ಆಚರಿಸುತ್ತಿದ್ದರು. ಅದಕ್ಕಾಗಿ ಎಲ್ಲೆಡೆಯೂ ಹೆಣೆದಿದ್ದ ಬಿದಿರಿನ ಕಮಾನುಗಳು, ಎಪ್ಪತ್ತು ಅಡಿಯಷ್ಟು ಎತ್ತರದ ಬಿದಿರು ಗಳ, ಅದನ್ನು ಕಟ್ಟಲು ಬಳಸಿದ್ದ ಉಗನಿ ಅಂಬು ಮುಂತಾದುವೆಲ್ಲಾ ಬಲು ವಿಶಿಷ್ಟವಾಗಿದ್ದವು. ಮೂರು ವರ್ಷಕ್ಕೊಮ್ಮೆ ಆಚರಿಸುವ ಆ ಹಬ್ಬ ನಮಗಂತೂ ಹಲವು ಅಚ್ಚರಿಗಳ ಕಣಜ. ಬರೆದರೆ ಅದೇ ಒಂದು ದೊಡ್ಡ ಕಥೆ.

ನಾಗೇಶ್ ಹೆಗಡೆಯವರು ಇವನ್ನೆಲ್ಲಾ ಕುತೂಹಲದಿಂದ ಸಣ್ಣ-ಸಣ್ಣ ವಿವರಗಳನ್ನೂ ಗಮನಿಸುತ್ತಿದ್ದರು. ಆಗಾಗ ಫೋಟೋ ತೆಗೆಯುವುದು. ಹೆಚ್ಚಿಗೆ ಮಾತಿಲ್ಲ. ಬಡ-ಬಡ ಮಾತಾಡುವ ನನಗೆ ಅವರ ತನ್ಮಯತೆ ಒಂದು ಕಲಿಕೆಯಾಗಿತ್ತು.

ಅಂದು ರಾತ್ರಿ ಒಂದು ಶಾಲಾ ಕಟ್ಟಡದಲ್ಲಿ ತಂಗಿದೆವು. ಆ ಸ್ಕೂಲಿಗೆ ನಮ ಬೆಳ್ಳಪ್ಪನೇ ಏಕೈಕ ಮಾಸ್ತರು. ಅಸಲಿಗೆ ಮೂರನೇ ತರಗತಿಯೂ ಕಲಿಯದ ಆತ ಮಾಸ್ತರಾಗಿದ್ದೇ ಒಂದು ಸೋಜಿಗ. ಆ ಶಾಲೆಯ ಅಸಲೀ ಮಾಸ್ತರು ದೂರದ ನಾಟ್ರಾಪಾಳ್ಯದಲ್ಲಿದ್ದರು. ಸುಮಾರು 25 ಕಿಲೋ ಮೀಟರ್ ದೂರ. ಅವರು ಅಯ್ಯೂರುವರೆಗೂ ಬಸ್ಸಿನಲ್ಲಿ ಬಂದು ಅಲ್ಲಿಂದ 5-6 ಕಿಲೋಮೀಟರ್ ಬೆಟ್ಟ ಹತ್ತಿ ಮಂಚಿಗೆ ಬರಬೇಕಿತ್ತು. ಅಥವಾ ಮಂಚಿಬೆಟ್ಟದಲ್ಲೇ ವಾಸ ಇರಬೇಕಿತ್ತು. ಕಿಲಾಡಿಯಾದ ಆತ ಈ ಎರಡೂ ಆಯ್ಕೆಗಳನ್ನು ಬಿಟ್ಟು ಮೂರನೆಯದನ್ನು ಆರಿಸಿಕೊಂಡಿದ್ದರು. ಅಂದರೆ ಬೆಳ್ಳಪ್ಪನಿಗೆ ದಿನಾಲೂ ಇಸ್ಕೂಲು ಬಾಗಿಲು ತೆಗೆದು ಹುಡುಗರ ದಿನಚರಿ ತೆಗೆದುಕೊಳ್ಳುವ ತುಂಡು ಗುತ್ತಿಗೆ ಕೆಲಸ ಹಚ್ಚಿದ್ದರು.

ಮಾಸ್ತರು ಕಷ್ಟಪಟ್ಟು ತಿಂಗಳಿಗೆ ಒಂದು ಅಥವಾ ಎರಡು ಸಲ ಬಂದು ಸಂಬಳಕ್ಕೆ ಬೇಕಾದ ದಾಖಲಾತಿ ತೆಗೆದುಕೊಂಡು ಹೋಗುತ್ತಿದ್ದರು. ಬೆಳ್ಳಪ್ಪನಿಗೂ ನೂರೋ ಇನ್ನೂರೋ ಸಿಗುತ್ತಿತ್ತು. ಜೊತೆಗೆ ಸ್ಕೂಲ್ ಮೇಷ್ಟ್ರು ಎನ್ನುವ ಟ್ಯಾಗ್‌ಲೈನ್ ಬೇರೆ ಊರಲ್ಲಿ ಗೌರವ ತಂದಿತ್ತು. ಆದ್ದರಿಂದ ಅವನೂ ಖುಷ್. ಈ ಏಳುಸುತ್ತಿನ ಕೋಟೆಯಂಥಾ ಕಾಡಿಗೆ ಬಿ.ಇ.ಓ ಅಥವಾ ಇನ್ಸ್ಪೆಕ್ಟರ್ ಬಂದು ತಪಾಸಣೆ ಮಾಡುವುದು ಕನಸಿನ ಮಾತು. ಹಾಗಾಗಿ ಎಷ್ಟೋ ವರ್ಷಗಳಿಂದ ಇಂತಹಾ ಐನಾತಿ ಐಡಿಯಾ ನಡೆದುಬಂದಿತ್ತು. ಈ ವ್ಯವಸ್ಥೆ ಹಳ್ಳಿಯವರಿಗೆ ತಿಳಿದಿತ್ತಾದರೂ ಅವರೇನೂ ಕೇರು ಮಾಡುತ್ತಿರಲಿಲ್ಲ. ಯಾಕೆಂದರೆ ಹೊಲ-ಮನೆ ಕೆಲಸಕ್ಕೆ ಯಾವಾಗ ಕರೆದರೂ ಸ್ಕೂಲಿನಿಂದ ಮಕ್ಕಳನ್ನು ಬೆಳ್ಳಪ್ಪ ಕಳಿಸುತ್ತಿದ್ದ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಳೆಗಾಲದಲ್ಲಿ ಕೆಲಸ ಜಾಸ್ತಿ ಇದ್ದಾಗ ಸ್ಕೂಲೇ ತೆಗೆಯುತ್ತಿರಲಿಲ್ಲ. ಕನ್ನಡ ಮನೆ ಮಾತಾದ ಆ ಮಕ್ಕಳು ಸ್ಕೂಲಿನಲ್ಲಿ ಹೇಳಿಕೊಡುವ ತಮಿಳಿನಿಂದ ಪಾರಾಗಿದ್ದರು. ಹಾಗಾಗಿ ಅವರಿಗೂ ಖುಷಿ.

ಅಂಥಾ ಐತಿಹಾಸಿಕ ಹಿನ್ನೆಲೆಯ ಸ್ಕೂಲಿನಲ್ಲಿ ನಾವು ಮತ್ತು ನಾಗೇಶ್ ಹೆಗಡೆಯವರು ಉಳಿದಿದ್ದೆವು. ಅವರು ಸರ್ಕಾರವು ಆ ಸ್ಕೂಲು ನಡೆಸಲು ಮಾಡುತ್ತಿರುವ ಖರ್ಚು, ಮಾಸ್ತರ ಸಂಬಳ ಎಲ್ಲವನ್ನೂ ಲೆಕ್ಕ ಹಾಕಿ, ಮಕ್ಕಳು ಅಕ್ಷರಾಭ್ಯಾಸದಿಂದ ವಂಚಿತರಾಗುತ್ತಿರುವ ಬಗ್ಗೆ ಚಿಂತಿಸಿದರು. ಜೊತೆಗೆ ಆ ಮಾಸ್ತರನ ಕಿಲಾಡಿತನದ ಬಗ್ಗೆ “ವಾಹ್ ಎಂಥಾ ಬುದ್ದಿವಂತಿಕೆ” ಎಂದು ಮೆಚ್ಚುಗೆ ಸೂಚಿಸದೆ ಇರಲಿಲ್ಲ.

ಸ್ಕೂಲಿಗೆ ಅರ್ಧ ಪರ್ಲಾಂಗ್ ದೂರದಲ್ಲಿ ಒಂದು ಹಳ್ಳ ಹರಿಯುತ್ತಿತ್ತು. ಬೆಳಿಗ್ಗೆ ನಾನು ಮತ್ತು ಕೇಪಿ ಆ ಹಳ್ಳದಿಂದ ನೀರು ತರುವ ಹೆಣ್ಣು ಮಕ್ಕಳನ್ನು ಬ್ಯಾಕ್ ಲೈಟಿನಲ್ಲಿ ಚೆಂದದ ಫೋಟೋ ತೆಗೆಯಲು ಹೋದೆವು. ಮೂರು ಕಾಲಿನ ಟ್ರೈಪಾಡ್ ನಿಲ್ಲಿಸಿ ಅದರ ಮೇಲೆ ನಿಕಾನ್ ಐ10 ಕ್ಯಾಮರಾ ಕೂರಿಸಿ ಫೋಟೊ ತೆಗೆಯುತ್ತಿದ್ದ ನಮ್ಮನ್ನು ನೋಡಿ ಅವರು ಕಿಲಕಿಲಾಂತ ನಗೋರು.

ಕ್ಲಚ್ ವೈರ್ ಡ್ಯಾಮೇಜಾಗಿದ್ದ ಬೈಕಿನಲ್ಲಿ ಬೆಟ್ಟ ಇಳಿಯುವುದು-ಅದರಲ್ಲೂ ಡಬ್ಬಲ್ ರೈಡ್ ಹೋಗುವುದು ತೀರಾ ಅಪಾಯಕಾರಿ. ಹಾಗಾಗಿ ನಾನು ನಾಗೇಶ್ ಹೆಗಡೆಯವರು ನಡೆದು ವಾಪಸಾಗಲು ತೀರ್ಮಾನಿಸಿದೆವು. ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಚಿಬೆಟ್ಟದಿಂದ ಇಳಿಯಲು ಶುರು. ಮಂಚಿಯ ಗ್ರಾಮಸ್ಥರು ಈ ಕಾಲುದಾರಿಯನ್ನು ಹೆಚ್ಚಾಗಿ ಬಳಸುತ್ತಿದರು. ಹಾಗಾಗಿ ದಾರಿ ತಪ್ಪಲಿಲ್ಲ. ಇಳಿಯುತ್ತಾ “ಹೇಗಿತ್ತು ಸಾರ್ ಮಂಚಿಬೆಟ್ಟ” ಎಂದು ಕೇಳಿದೆ. “ಚೆನ್ನಾಗಿತ್ರೀ, ಬೆಂಗಳೂರಲ್ಲಿ ವಾರಾಂತ್ಯ ಒಳ್ಳೆ ಆಕ್ಸಿಜನ್ ಬೇಕು ಅಂತ ಪಾರ್ಕುಗಳಿಗೆ ಹೋಗ್ತಾ ಇದ್ದೆ, ಈ ವಾರ ಹೆವಿ ಡೋಸ್ ಆಗೋಯ್ತು” ಅಂದರು.

ಗೇರಟ್ಟಿ ಅಡ್ದರೋಡುವರೆಗೂ ನಡೆದು ಅಲ್ಲಿಂದ ಬಸ್ಸಿನಲ್ಲಿ ಡೆಂಕಣಿಕೋಟೆ ತಲುಪಿದೆವು. ಅಷ್ಟೊತ್ತಿಗೆ ಮದ್ಯಾಹ್ನವಾಗಿತ್ತು. ಬಸ್ ಸ್ಟ್ಯಾಂಡಿನಲ್ಲಿ ಹೋಟೆಲ್ ನೋಡಿದೊಡನೆ “ಬನ್ನಿ ಮಲ್ಲಿಕ್” ಎನ್ನುತ್ತಾ ಕರೆದೊಯ್ದರು. ಹೋಟೆಲ್ ಮುಂಭಾಗದಲ್ಲಿ ಸಿಲಿಂಡರಿನಾಕಾರದ ತಾಮ್ರದ ಪಾತ್ರೆಯಲ್ಲಿ ಬಿಸಿನೀರು ಕಾಸುತ್ತಾ ಟೀ ಮಾಡುವ ವಿಧಾನ ಹಾಗೂ ದೊಡ್ಡ ಕಡಪಾ ಕಲ್ಲಿನ ಮೇಲೆ ಠಪಾ ಠಪಾ ಎಂದು ಪರೋಟಾ ಸೆಣೆಯುವ ದೃಶ್ಯ ಗಮನಸೆಳೆಯಿತು.

“ಎನ್ನ ವೇಣು’ ಎಂದು ತಮಿಳುಲಿಯುತ್ತಾ ಹಾಜರಾದ ಲುಂಗಿ ಉಟ್ಟ ಹುಡುಗನಿಗೆ ‘ಎರಡು ಚಿಲ್ಲಡ್ ಬಿಯರ್, ಎಗ್ ಬುರ್ಜಿ, ಪರೋಟಾ’ ಎಂದು ಕನ್ನಡದಾರ್ಡರ್ ಮಾಡಿದರು ಗುರುಗಳು. ನನಗದು ಅನಿರೀಕ್ಷಿತ. ಆದರೆ ನಡೆದ ಆಯಾಸ ಹಾಗೂ ಬಿಸಿಲಿನ ಝಳಕ್ಕೆ ಆ ಥಣ್ಣನೆ ದ್ರವ ಅಪ್ಯಾಯಮಾನವಾಗಿತ್ತು. ಆದರೆ ಅರ್ಧ ಮುಗಿದಿದ್ದಾಗ ಒಬ್ಬ ಪೋಲೀಸಪ್ಪನ ಆಗಮನ. ಆ ಹೋಟೆಲ್ಲಲ್ಲಿ ಮದ್ಯಪಾನಕ್ಕೆ ಅವಕಾಶವಿರಲಿಲ್ಲ. ಕ್ಷಣಾರ್ಧದಲ್ಲಿ ಅಪಾಯದ ಸಾಧ್ಯತೆಗಳನ್ನು ಅಂದಾಜಿಸಿದ ಗುರುಗಳು ಮಿಂಚುಳ್ಳಿಯನ್ನು ಕಾಲಬುಡದಲ್ಲಿ ಜೋಪಾನ ಮಾಡಿಕೊಂಡರು. ನಾನೂ ವಿಧೇಯ ಶಿಷ್ಯನಂತೆ ಅವರನ್ನೇ ಅನುಸರಿಸಿದೆ. ಅವ ಹೋದ ನಂತರ ಮುಂದುವರಿಸಿದೆವು. ಊಟದ ನಂತರ ಅವರು ಬೆಂಗಳೂರಿನ ಬಸ್ಸು ಹತ್ತಿದರು. ನಾನು ಥಳಿಗೆ ವಾಪಸಾದೆ.

ಇವತ್ತಿಗೂ ಆ ಹೋಟೆಲ್ಲಿನ ಇಡೀ ಸನ್ನಿವೇಶ ಕಣ್ಣಿಗೆ ಕಟ್ಟಿದಂತಿದೆ. ಆ ಭೇಟಿಯಲ್ಲಿ ಇತರೆ ವಿವರಗಳನ್ನು ಮರೆತಿರಬಹುದು, ಆದರೆ ಇದು ಮಾತ್ರ ನೆನಪಿನಲ್ಲಿ ಅಚ್ಚೊತ್ತಿದೆ. ನಂತರದ ವರ್ಷಗಳಲ್ಲಿ ಗುರುಗಳನ್ನು ಭೇಟಿಯಾದಾಗೆಲ್ಲಾ ಇದನ್ನು ನೆನಪಿಸುತ್ತೇನೆ. ಸುಮ್ಮನೇ ನಗಾಡುತ್ತಾರೆ.

ಕೆನೆತ್ ಅಂಡರ್ಸನ್ 1930-40ರ ದಶಕದಲ್ಲಿ ಮಂಚಿಬೆಟ್ಟದ ಆಸು-ಪಾಸು ಮೂರ್ನಾಲ್ಕು ನರಭಕ್ಷಕ ಹುಲಿಗಳನ್ನು ಹೊಡೆಯುತ್ತಾನೆ. ಆ ಬಗ್ಗೆ ತೇಜಸ್ವಿಯವರು ತಮ್ಮ ಕಾಡಿನ ಕಥೆಗಳಲ್ಲಿ ಬರೆದಿದ್ದಾರೆ. ಆದರೆ 20 ವರ್ಷಗಳ ಹಿಂದೆ-ಅಂದರೆ 2000ನೇ ಇಸವಿಯಲ್ಲಿ ನಮಗೆ ಆ ವಿಷಯ ತಿಳಿದಿರುವುದಿಲ್ಲ. ಅದನ್ನು ಓದಿಯೂ ಇರಲಿಲ್ಲ. ನಾನು ನಾಗೇಶ ಹೆಗಡೆಯವರು ಮಂಚಿಯಿಂದ ಇಳಿದು ಬಂದ ಕಾಲಾದಿಯಲ್ಲೇ ನರಭಕ್ಷಕವೊಂದು ಒಬ್ಬ ಕಾಡುಪೂಜಾರಿಯನ್ನು ಕೊಂದಿರುತ್ತದೆ. ಅಂಡರ್ಸನ್ ವಿವರಿಸುವ ದಟ್ಟ ಅರಣ್ಯ, ಒತ್ತೊತ್ತಾದ ಬಿದಿರು ಮೆಳೆಗಳು ನಾವು ನೋಡುವಾಗ ಇರಲೇ ಇಲ್ಲ.

ಇನ್ನು ಈಗ, (2020ರಲ್ಲಿ) ಈ 20 ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿದೆಯೋ ತಿಳಿದಿಲ್ಲ. ನಮಗೆ ಮಂಚಿಬೆಟ್ಟದಲ್ಲಿ ಇದ್ದ ಏಕೈಕ ಸಂಪರ್ಕ ಬೆಳ್ಳಪ್ಪ. ಆತ ಏನಾಗಿದ್ದಾನೋ ತಿಳಿಯದು. ಅವಕಾಶ ಸಿಕ್ಕರೆ ಮತ್ತೊಮ್ಮೆ ಹೋಗಿ ಬರಬೇಕು.

‍ಲೇಖಕರು avadhi

22 July, 2020

7 Comments

  1. Krishna Prasad

    ಮಂಚಿಬೆಟ್ಟದ ಕನ್ನಡಿಗರ ಬವಣೆಯನ್ನು ತರೆದಿಟ್ಟ’ ತಮಿಳು ಶಿಖರದ ಮೇಲೆ ಕನ್ನಡದ ಬಡ ಬಾವುಟ’ ಎಂಬ ಲೇಖನವನ್ನು ನಾಗೇಶ ಹೆಗಡೆ ತಿದ್ದಿ ತೀಡಿ ಕರ್ನಾಟಕ ದರ್ಶನದಲ್ಲಿ ಪ್ರಕಟಿಸಿದ್ದರು.

    ಮಂಚಿಬೆಟ್ಟದ ಮರೆತ ನೆನಪುಗಳನ್ನು ಮೊಗೆದು ಕೊಟ್ಟ ಮಲ್ಲಿಕಾರ್ಜುನ ಹೊಸಪಾಳ್ಯರಿಗೆ ಅಭಿನಂದನೆಗಳು

    • Mallikarjuna Hosapalya

      ಧನ್ಯವಾದ. ಈ ಕೊರೊನಾ ಕಾಲ ಬೇಗ ಮುಗಿದು ನಾವೆಲ್ಲಾ ಮುಂಚಿನಂತೆಯೇ ಅಲೆದಾಟ ಮಾಡುವಂತಾಗಲಿ. ಮತ್ತೊಮ್ಮೆ ಮಂಚಿಬೆಟ್ಟಕ್ಕೆ ಹೋಗೋಣ. ಗುರುಗಳ ಸಹಿತ.

  2. T S SHRAVANA KUMARI

    ಚೆನ್ನಾದ ಲೇಖನ

    • Mallikarjuna Hosapalya

      ಧನ್ಯವಾದಗಳು

  3. Sudha ChidanandaGowda

    ಗುಡ್ಡದ ತುದಿಯೆಂದರೆ ಮುಗಿಲಿಗೆ ಹತ್ತಿರ
    ಮೋಡ ಮುಟ್ಟುವ ಹುಮ್ಮಸ್ಸು
    ಹಗರಿಬೊಮ್ಮನಹಳ್ಳಿಗೆ ಏಳೆಂಟು ಕಿ.ಮೀ. ದೂರವಿರುವ ರಂಗನಾಥ ಬೆಟ್ಟ
    ಅಷ್ಟು ಎತ್ತರದ್ದಲ್ಲ ಆದರೆ ತುಂಬ ವಿಶಿಷ್ಟವಾದದ್ದು.
    ಎತ್ತರದಲ್ಲಿ ನಿಂತು ನೋಡಿದರೆ ಕಣ್ತುಂಬುವ ಹೊಲಗದ್ದೆಯ ಹಸಿರು.
    ಮಳೆಗಾಲದಲ್ಲಿ ಹೋದರೆ ಗುಡ್ಡದ ಬುಡದಲ್ಲಿ ತುಂಗಭದ್ರೆಯ ಹಿನ್ನೀರಿನ ನೀಲ
    ಜಾನಪದ ಶೈಲಿಯ ಪೇಂಟಿಂಗ್ ಗಳಿರುವ ದೇವಸ್ಥಾನ,
    ರೊಟ್ಟಿಬುತ್ತಿ ತಂದು ಶರಣೆನ್ನುತ್ತಾ ಹಂಚಿತಿನ್ನುವ ರೈತರು
    ಮದುವೆಯೋ, ಮುಂಜಿಯೊ ಅಲ್ಲೇ ಒಲೆಹೂಡಿ ಘಮ್ಮೆನ್ನಿಸುವ ಒಗ್ಗರಣೆ.
    ನಿಂತು ಕತ್ತು ಬಗ್ಗಿಸಿ ನೋಡುವಾಗ ಕಾಣುವ ಹಿನ್ನೀರಿನ ಮಡಿಲಿಗಂಟಿದ ಹಳ್ಳಿಮನೆಗಳು

    ಬಯಲುಸೀಮೆಯ ಅನುಭವ ಬಿನ್ನವೇ..
    ಆದರೆ ಗುಡ್ಡಬೆಟ್ಟಗಳ ಆಕ್ಸಿಜನ್ ಭರಿತ ತಂಗಾಳಿ, ಹಸಿರಿನ ನೋಟ,
    “ರೊಟ್ಟಿ ಎಣ್ಣಿಗಾಯಿ ಉಣ್ಣು ಬರ್ರಿ” ಎನ್ನುವ ಹಳ್ಳಿಗರ ಸಡಗರ
    ಯಾವ ಬೆಟ್ಟಸೀಮೆಯಾದರೂ ಒಂದೇ

    ಸೊಗಸಾದ ಅನುಭವದ ಓದಿಗಾಗಿ ಧನ್ಯವಾದ

    • Mallikarjuna Hosapalya

      ನಿಮ್ಮೂರ ಬೆಟ್ಟದ ಬಗ್ಗೆ ಸೊಗಸಾಗಿ ವಿವರಿಸಿದ್ದೀರಾ, ಧನ್ಯವಾದ. ನಾನೂ ಈಗ ನಿಮ್ಮೂರ ಹತ್ತಿರದ ಹೊಸಪೇಟೆಯಲ್ಲಿ ಇದ್ದೇನೆ.

  4. Nagesh Hegde

    ಸ್ವರ್ಗ ಸಮಾನವಾದ ಆ ಮಂಚಿಬೆಟ್ಟಕ್ಕೆ ಮತ್ತೊಮ್ಮೆ ಹೋಗೋಣ ಮಲ್ಲಿಕಾರ್ಜುನ. ಆದರೆ ಮರಳಿ ಬರೋದು ಬೇಡ! ಆ ಬವಣೆಯನ್ನು ನೆನೆದರೆ ಈಗಲೂ ಕಾಲು ಕಂಪಿಸುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading