‘ಮಲಗದ ಮಹಾನಗರಿಗೆ ಎಲ್ಲಿಯ ಜೋಗುಳ?’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಮಹಾನಗರಿಯು ಮಲಗುವುದಿಲ್ಲ ಎಂಬುದು ನಮಗೆ ಯಾವಾಗಲೋ ಗೊತ್ತಾಗಿಬಿಟ್ಟಿತ್ತು. 

ಹೀಗಾಗಿ ನಿಶಾಚರಿಗಳು ಅಥವಾ ಗೂಬೆಗಳು ಎಂದು ಸಾಮಾನ್ಯವಾಗಿ ಮೂದಲಿಸ್ಪಡುವ ಕೆಟಗರಿಯಿಂದಾಚೆಗೆ ಬಹಳಷ್ಟು ಮಂದಿ ಅದ್ಯಾವತ್ತೋ ಹೋಗಿಬಿಟ್ಟಿದ್ದರು. ಕತ್ತಲಾದ ನಂತರ ಶಹರವು ಗವ್ವೆನ್ನತೊಡಗಿದರೆ ಈ ಪದಗಳನ್ನು ಬಳಸುವುದಕ್ಕೊಂದು ಅರ್ಥವಿದೆ. ಆದರೆ ತೀವ್ರವಾಗಿ ಅರ್ಬನೈಸ್ ಆಗಿಬಿಟ್ಟ ದಿಲ್ಲಿ ಮತ್ತು ಸುತ್ತಮುತ್ತಲ ಎನ್.ಸಿ.ಆರ್ ಪ್ರದೇಶಗಳು ಸೂರ್ಯಾಸ್ತದ ನಂತರವೂ ಒಂದಿಲ್ಲೊಂದು ಕಾರಣಗಳಿಂದಾಗಿ ಎಚ್ಚರವಾಗಿರುವುದರಿಂದ, ಈ ಪದಗಳು ಇಲ್ಲಿ ಅನ್ವಯಿಸುವುದೂ ಇಲ್ಲ. ಅದು ಪ್ರಸ್ತುತವೂ ಅಲ್ಲ. 

ನಮ್ಮ ಬ್ಯಾಚುಲರ್ ದಿನಗಳ ಹೊತ್ತುಗೊತ್ತಿಲ್ಲದ ಓಡಾಟಗಳಿಗೆ ಶಹರವು ನಿದ್ರಿಸದಿರುವುದೂ ಒಂದು ಕಾರಣವಾಗಿತ್ತು. ಎಂಥಾ ಮೈಕೊರೆಯುವ ಚಳಿಯಾದರೂ ಅರ್ಧರಾತ್ರಿಯಲ್ಲಿ ನಾಲ್ಕೈದು ಕಿಲೋಮೀಟರು ನಡೆದುಕೊಂಡು ಹೋಗಿದ್ದ ದಿನಗಳನ್ನು ನಾನು ಸ್ವತಃ ಕಂಡಿದ್ದೆ. ಎಲ್ಲವೂ ಒಂದು ಕಪ್ ಟೀ ಗಾಗಿ. ಒಂದೊಳ್ಳೆಯ ಚಹಾವನ್ನು ನಮ್ಮ ರೂಮುಗಳಲ್ಲಿ ಸಿದ್ಧಪಡಿಸಲು ಸಾಧ್ಯವಿಲ್ಲವೆಂದಲ್ಲ. ಆದರೆ ನಮ್ಮ ನಾಲ್ಕೈದು ಮಂದಿ ಹುಡುಗರ ಗುಂಪು ಚಳಿಗಾಲದಲ್ಲಿ ಹೀಗೆ ಕಾಲ್ನಡಿಗೆಯಲ್ಲಿ ಸಾಗಿ, ಶುಂಠಿ ಕುಟ್ಟಿ ಹಾಕಿದ ಚಹಾವನ್ನು ಸವಿಯುವುದೇ ನಮ್ಮ ಅಪರೂಪದ ನಿರುಪದ್ರವಿ ಮೋಜುಗಳಲ್ಲೊಂದಾಗಿತ್ತು. 

ಹಾಗಂತ ಇಂತಹ ಅರ್ಥವಿಲ್ಲದ ಓಡಾಟಗಳು ಎಡವಟ್ಟಾಗದ ದಿನಗಳು ಇಲ್ಲವೆಂದಲ್ಲ. ಒಮ್ಮೆ ಚಹಾ ಹುಚ್ಚಿಗೆಂದು ಹೀಗೆ ಓಡಾಡುತ್ತಿದ್ದ ದಿನಗಳಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸರ ತಂಡವೊಂದು ನಮ್ಮನ್ನು ನಿಲ್ಲಿಸಿ ಮಾರ್ಗಮಧ್ಯದಲ್ಲೇ ವಿಚಾರಣೆಯನ್ನು ಆರಂಭಿಸಿತ್ತು. ನಂತರ ಎಲೆಕ್ಷನ್ ಟೈಮಿನಲ್ಲೆಲ್ಲಾ ಹೀಗೆ ಭೂತಗಳಂತೆ ಓಡಾಡುವುದು ಸರಿಯಲ್ಲವೆಂದು ಮನಮುಟ್ಟುವಂತೆ ಬುದ್ಧಿ ಹೇಳಿದ ನಂತರವೇ ನಮ್ಮ ಚಹಾ ಮೋಹವು ನಮ್ಮದೇ ಅಡುಗೆಮನೆಗಳಲ್ಲಿ ಶಾಶ್ವತವಾಗಿ ಕಾಲುಮುರಿದು ಉಳಿದುಕೊಂಡುಬಿಟ್ಟಿದ್ದು. 

ಇಂಥದ್ದೇ ಮತ್ತೊಂದು ಅನುಭವದಲ್ಲಿ ನನ್ನ ಕಾಲೇಜು ದಿನಗಳ ಗೆಳೆಯರ ತಂಡವೊಂದು ಪೋಲೀಸರೊಂದಿಗೆ ಗಂಭೀರ ಮಾತುಕತೆಯಲ್ಲಿ ತೊಡಗಿರುವುದನ್ನು ನಾನು ಕಂಡಿದ್ದೆ. ನನಗೆ ನೆನಪಿರುವಂತೆ ಅದೊಂದು ಚಳಿಗಾಲದ ರಾತ್ರಿ. ಆಫೀಸಿನ ಕಾರ್ಯನಿಮಿತ್ತ ಕೇರಳಕ್ಕೆ ತೆರಳಿದ್ದ ನಾನು, ಕೊಂಚ ತಡವಾಗಿ ದಿಲ್ಲಿಗೆ ಮರಳಿದ್ದೆ. ತಿರುವನಂತರಪುರದಿಂದ ಸಾಕಷ್ಟು ತಡವಾಗಿಯೇ ಹೊರಟಿದ್ದ ವಿಮಾನವು ದಿಲ್ಲಿ ತಲುಪುವುಷ್ಟರಲ್ಲಿ, ಚಳಿಗಾಲದ ತೀವ್ರ ಮಂಜಿನಿಂದಾಗಿ ಲ್ಯಾಂಡ್ ಆಗಲು ಮತ್ತಷ್ಟು ತಡವಾಗಿತ್ತು. ಹೀಗೆ ಹಲವು ಅಡೆತಡೆಗಳನ್ನು ದಾಟಿ ಮನೆಯ ಕಡೆ ಸಾಗುತ್ತಿದ್ದರೆ ನನ್ನ ಮಿತ್ರನೊಬ್ಬ ಪೋಲೀಸರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದನ್ನು ನಾನು ಆಕಸ್ಮಿಕವಾಗಿ ಕಂಡಿದ್ದೆ. ಅದೇನಾಯಿತೆಂದು ವಿಚಾರಿಸಲು ಇತ್ತ ನನ್ನ ಗಾಡಿಯು ನಿಂತಿತ್ತು. 

“ಏನ್ರೋ… ಎಲ್ಲಿ, ಯಾರ ತಲೆ ಒಡೆದು ಬಂದಿದ್ದೀರಿ?”, ಎಂದು ಪೋಲೀಸಪ್ಪನೊಬ್ಬ ಹುಡುಗರ ಗುಂಪಿನ ಸದಸ್ಯನೋರ್ವನನ್ನು ಕೇಳುತ್ತಿದ್ದ. ಅಸಲಿಗೆ ಆ ಕಾರು ನನ್ನ ಸಹೋದ್ಯೋಗಿ ಮಿತ್ರನೊಬ್ಬನದ್ದೇ ಆಗಿತ್ತು. ಅರುಣಾಚಲ ಪ್ರದೇಶ ಮೂಲದವನಾದ ಈತ ವಿಪರೀತವೆನ್ನುವಷ್ಟು ಪ್ರವಾಸಗಳನ್ನು ಮಾಡುತ್ತಿದ್ದ. ಆದರೆ ಕಾರನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಭ್ಯಾಸವು ಆತನಿಗಿರಲಿಲ್ಲ. ಹೀಗಾಗಿ ಮಳೆಗಾಲದಲ್ಲಿ ನಾಲ್ಕು ಹನಿ ವರ್ಷಧಾರೆಯಾದರೆ ಮಾತ್ರ ಸ್ನಾನದ ಭಾಗ್ಯವನ್ನು ಕಾಣುವ ಹರಿಯಾಣಾದ ಡಕೋಟ ಸರಕಾರಿ ಬಸ್ಸುಗಳಂತೆ, ಈ ಹಳೆಯ ಆಕ್ಸೆಂಟ್ ಕಾರು ತನ್ನ ಮೈಯನ್ನು ಅಲಂಕರಿಸಿದ್ದ ಧೂಳು, ಕೆಸರು ಮತ್ತು ಅಸಂಖ್ಯಾತ ಗೀರುಗಳಿಂದ ವಿಚಿತ್ರವಾಗಿ ಕಾಣುತ್ತಿತ್ತು. 

ಈ ಕಾರನ್ನು ಎಲ್ಲಿಂದಲೋ ಕಳ್ಳತನ ಮಾಡಿ ತಂದಿದ್ದಾರೆ ಎಂಬ ಸಂದೇಹವು ಹುಟ್ಟಿಕೊಂಡಿದ್ದರಿಂದಲೋ ಏನೋ! ಪೋಲೀಸಪ್ಪನ ವಿಚಾರಣೆಯು ಜೋರಾಗಿತ್ತು. ಗಾಡಿಯನ್ನು ಬದಿಗೆ ಹಾಕಿ, ಒಳಗಿದ್ದ ನಾಲ್ಕೈದು ಮಂದಿಯನ್ನು ಹೊರಗೆ ನಿಲ್ಲಿಸಿ ಅದ್ಯಾವುದೋ ಯಂತ್ರದಲ್ಲಿ ಗಾಳಿಯೂದುವಂತೆ ಹೇಳಿದ. ಎಲ್ಲರೂ ಒಬ್ಬೊಬ್ಬರಾಗಿ ಊದಿದರು. “ಸಾರ್, ಗಾಡಿ ಓಡಿಸುವವನು ಮದ್ಯಪಾನ ಮಾಡದಿದ್ದರೆ ಸಾಕು. ಉಳಿದವರು ಮಾಡಿದ್ದರೆ ಸಮಸ್ಯೆಯೇನು?”, ಎಂದು ಗುಂಪಿನಲ್ಲೊಬ್ಬ ರೊಳ್ಳೆ ತೆಗೆದ. ಇದು ಬೇಕಿತ್ತಾ ಎಂಬಂತೆ ಒಬ್ಬರನ್ನೊಬ್ಬರು ಮಾತಿಲ್ಲದೆ ದಿಟ್ಟಿಸಿದರು. ಕಿಲಾಡಿ ಪ್ರಶ್ನೆ ಕೇಳಿದವನಿಗೆ ಕಣ್ಣಲ್ಲೇ ಬೈದರು. ಪೋಲೀಸಪ್ಪನಿಗೆ ಪ್ರಶ್ನೆಯಿಂದ ಕಿರಿಕಿರಿಯಾದರೂ ಈ ಬಾರಿ ಗೊಣಗುವ ಗೋಜಿಗೆ ಹೋಗಲಿಲ್ಲ. ಆದರೆ ಪೋಲೀಸಪ್ಪನ ಯಂತ್ರವು ಮದ್ಯಪಾನದ ಸುಳಿವನ್ನು ನೀಡಿಲ್ಲವಾದ್ದರಿಂದ ಬಿಗಿಯಾಗಿದ್ದ ವಾತಾವರಣವು ಕೊಂಚ ತಿಳಿಯಾಯಿತು. 

ನಂತರ ಕಾರು ಓಡಿಸುತ್ತಿದ್ದ, ನನ್ನ ಅರುಣಾಚಲ ಪ್ರದೇಶ ಮೂಲದ ಮಿತ್ರನನ್ನು ಬದಿಗೆ ಕರೆದೊಯ್ದ ಪೋಲೀಸಪ್ಪ ಕಾರಿನ ದಾಖಲೆಗಳನ್ನು ಪರಿಶೀಲಿಸುವ ಸೋಗಿನಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದ. ಇವನೂ ಅದೇನೋ ಕತೆ ಹೇಳುತ್ತಿದ್ದ. ಇಬ್ಬರ ಮಾತುಕತೆಯನ್ನು ದೂರದಿಂದಲೇ ಕಾಣುತ್ತಿದ್ದ ನಮಗೆ ಈರ್ವರೂ ಚೌಕಾಶಿಯೊಂದರಲ್ಲಿ ಇವೆಲ್ಲದಕ್ಕೆ ಮಂಗಳ ಹಾಡಲು ಸಿದ್ಧರಾದಂತೆ ಅನಿಸುತ್ತಿತ್ತು. “ಅವನು ಬಿಡಪ್ಪಾ ಮಾಸ್ಟರ್ ಕನ್ವಿನ್ಸರ್. ಯಾರನ್ನಾದರೂ ಒಪ್ಪಿಸಿಬಿಡುತ್ತಾನೆ”, ಎಂದು ನಮ್ಮ ಗುಂಪಿನ ಸದಸ್ಯರಲ್ಲೊಬ್ಬ ಪೋಲೀಸಪ್ಪನೊಂದಿಗೆ ಚರ್ಚೆಯಲ್ಲಿರುವ ಗೆಳೆಯನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ತಂಡದ ಧೈರ್ಯವನ್ನು ಹೆಚ್ಚಿಸಿದ. ಅಂತೂ ಎಲ್ಲವೂ ಸುಖಾಂತ್ಯವಾಗುವಷ್ಟರಲ್ಲಿ ಮುಕ್ಕಾಲು ತಾಸು ಸರಿದೇಹೋಗಿತ್ತು. 

ಹಾಗೆ ನೋಡಿದರೆ ಕೊರೋನಾ ಪೂರ್ವದ ಕಾಲದಲ್ಲಿ ಇವೆಲ್ಲಾ ಬಹಳ ಸಾಮಾನ್ಯ ಸಂಗತಿಗಳಾಗಿದ್ದವು. ಶಹರ ಮತ್ತು ಶಹರದಲ್ಲಿರುವ ಕಾಲೋನಿಗಳ ಮಾರ್ಕೆಟ್ಟುಗಳಿಗೆ ಅರ್ಧರಾತ್ರಿಯಲ್ಲೂ ಜೀವವಿತ್ತು. ರಾತ್ರಿ ಪಾಳಿಗಾಗಿ ಕ್ಯಾಬುಗಳಲ್ಲಿ ಓಡಾಡುವ ಮಂದಿ, ಸುಖಾಸುಮ್ಮನೆ ವಾಕಿಂಗ್ ಮಾಡುವ ಮಂದಿ, ಅಲ್ಲಲ್ಲಿ ಅಪರೂಪಕ್ಕೆ ಕಾಣುವ ಪ್ರೇಮಿಗಳು, ಮೊಬೈಲ್ ಫೋನ್ ವ್ಯಸನಿಗಳು, ಗಸ್ತು ತಿರುಗುವ ಗೂರ್ಖಾಗಳು, ನಿಧಾನಗತಿಯಲ್ಲಿ ಓಡಾಡುತ್ತಿರುವ ಪಿ.ಸಿ.ಆರ್ ವ್ಯಾನುಗಳು… ಹೀಗೆ ಪುಟ್ಟ ಕಾಲೋನಿಗಳು ಅಪರಾತ್ರಿಯಲ್ಲೂ ಎಚ್ಚರವಾಗಿರುತ್ತಿದ್ದವು. ಇನ್ನು ವಾರದ ಸಂತೆಯ ದಿನಗಳಲ್ಲಂತೂ ಗಿಜಿಗಿಡುವ ಜನಸಂದಣಿಯು ಕರಗಿಹೋಗುವ ಹೊತ್ತಿಗೆ ಅರ್ಧರಾತ್ರಿಯು ದಾಟುತ್ತಿತ್ತು. 

ಹಿಂದೊಮ್ಮೆ ಪೋಲೀಸ್ ಪೇದೆಯೊಬ್ಬರನ್ನು ನಾನು ಸಂದರ್ಶಿಸುತ್ತಿದ್ದಾಗ ಇಂತಹ ಸಾಕಷ್ಟು ತಮಾಷೆಯ ಘಟನೆಗಳ ಬಗ್ಗೆ ವಿನೋದದ ಧಾಟಿಯಲ್ಲಿ ಅವರು ಹೇಳಿದ್ದರು. ಶಹರದ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಗಿಪಹರೆಗಳು ಅಗತ್ಯ ಎಂದೂ ಅವರು ಹೇಳುತ್ತಿದ್ದರು. ನೈಟ್ ಕ್ಲಬ್ ಹೆಸರಿನಲ್ಲಿ ಶಹರದ ಕುಖ್ಯಾತ ಶಾಪಿಂಗ್ ಮಾಲ್ ಒಂದರಲ್ಲಿ ನಡೆಯುತ್ತಿದ್ದ ಕೆಲ ಅನೈತಿಕ ಚಟುವಟಿಕೆಗಳ ಬಗ್ಗೆ ಪತ್ರಿಕೆಯೊಂದು ಆಗ ಬರೆದಿತ್ತು. ವಿಚಿತ್ರವೆಂದರೆ ಮಾಲ್ ಮುಂಭಾಗದಲ್ಲಿ ಯಾವಾಗಲೂ ವಾಹನಸಮೇತವಾಗಿ ನಿಂತಿರುತ್ತಿದ್ದ ಪೋಲೀಸರ ಕಣ್ಣೆದುರಿಗೇ ಇವೆಲ್ಲಾ ನಡೆಯುತ್ತಿದ್ದವು. ಈ ಬಗ್ಗೆ ಸುಮ್ಮನೆ ಮಾತುಮಾತಲ್ಲೇ ಕೇಳಿದಾಗ “ನೆಕ್ಸ್ಟ್ ಕ್ವೆಶ್ಚನ್ ಪ್ಲೀಸ್”, ಎಂದು ಪೋಲೀಸಪ್ಪ ಮಾತನ್ನು ಹಾರಿಸಿಬಿಟ್ಟರು. ಅಲ್ಲಿಗೆ ಪ್ರಶ್ನೆಯೊಂದು ಪ್ರಶ್ನೆಯಾಗಿಯೇ ಉಳಿದುಬಿಟ್ಟಿತ್ತು. 

ಇತ್ತ ದಿಲ್ಲಿ ವಿಮಾನ ನಿಲ್ದಾಣ ಸುತ್ತಮುತ್ತಲ ಭಾಗವಾದ ಮಹಿಪಾಲಪುರ ಪ್ರದೇಶವು ತನ್ನಲ್ಲಿರುವ ಹೋಟೇಲುಗಳಿಗೇ ಫೇಮಸ್ಸು. ಕತ್ತಲಾದ ನಂತರ ಝಗ್ಗನೆ ಬೆಳಗುವ ಇಲ್ಲಿಯ ಬಣ್ಣಬಣ್ಣದ ನಿಯಾನ್ ದೀಪಗಳು ಥಟ್ಟನೆ ಅಮೆರಿಕಾದ ಲಾಸ್ ವೇಗಾಸ್ ಅನ್ನು ನೆನಪಿಸುತ್ತವೆ. ಗಿಜಿಗುಡುವ ಶಾಂಘೈ ಮಾರುಕಟ್ಟೆಯಂತೆ ಅದಕ್ಕೊಂದು ವಿಚಿತ್ರ ಕಳೆಯೇ ಬಂದುಬಿಡುತ್ತದೆ. “ಬಿ.ಎ ಪಾಸ್” ನಂತಹ ಕೆಲವು ಚಲನಚಿತ್ರಗಳಲ್ಲಿ ಇಂತಹ ಪ್ರದೇಶಗಳಲ್ಲಿ ತಿರುಗುವ ತೃತೀಯಲಿಂಗಿಗಳನ್ನು ಸೇರಿದಂತೆ, ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳ ಬದುಕನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. 

ನೈಟ್ ಲೈಫ್ ಹೆಸರಿನಲ್ಲಿ ಶಹರವು ನಿಧಾನವಾಗಿ ಮಗ್ಗುಲು ಬದಲಾಯಿಸುವ ಪರಿಯನ್ನೂ ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಹಲವಾರು ರೆಸ್ಟೊರೆಂಟ್, ಪಬ್ಬುಗಳನ್ನು ಹೊಂದಿರುವ ಗುರುಗ್ರಾಮದ ಇಪ್ಪತ್ತೊಂಭತ್ತನೇ ಸೆಕ್ಟರಿನ ಮಾರ್ಕೆಟ್ಟು ರಾತ್ರಿ ಎಂಟರ ಹೊತ್ತಿಗೇನೇ ವಿಪರೀತವೆಂಬಷ್ಟಿನ ಜನಜಂಗುಳಿಗಾಗಿ ಸಿದ್ಧವಾಗುತ್ತದೆ. ನಿಮಿಷಗಳು ಕಳೆದಂತೆ ತಾರಕಕ್ಕೇರುವ ಕರ್ಕಶ ಹಾಡುಗಳು ತಮ್ಮ ಪಾಡಿಗೆ ಓಡಾಡಿಕೊಂಡಿದ್ದವರನ್ನೂ ಇದೇನಪ್ಪಾ ಎಂದು ಕುತೂಹಲದಿಂದ ಕಣ್ಣರಳಿಸಿ ನೋಡುವಂತೆ ಮಾಡುತ್ತವೆ. ಕೊಳ್ಳುಬಾಕತನದ ಇಂದಿನ ಕಾಲದಲ್ಲಿ ಇವೆಲ್ಲವನ್ನು “ನ್ಯೂ ನಾರ್ಮಲ್” ಎಂಬಂತೆ ಜನಸಾಮಾನ್ಯರ ನಿತ್ಯಬದುಕಿನ ಭಾಗವಾಗಿಸಿದ ಶಕ್ತಿಗಳ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. 

ಮಲಗದ ಶಹರಗಳಿಗಿರುವ ಮತ್ತೊಂದು ವಿಚಿತ್ರ ಸಮಸ್ಯೆಯೆಂದರೆ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳು. ಅದರಲ್ಲೂ ದಿಲ್ಲಿ-ಹರಿಯಾಣಾಗಳು ಇದರಿಂದ ರೋಸಿಹೋಗಿರುವುದು ಸ್ಪಷ್ಟ. ಸೈಕಲ್-ಬೈಕುಗಳು ಓಡಾಡುವ ಗಲ್ಲಿಯ ರಸ್ತೆಗಳಲ್ಲಿ ಪೆಡಂಭೂತಗಳಂತೆ ಕಾಣುವ ಐಷಾರಾಮಿ ಸ್ಪೋಟ್ರ್ಸ್ ಕಾರುಗಳು ರಾಕೆಟ್ ವೇಗದಲ್ಲಿ ಓಡಾಡತೊಡಗಿದರೆ ಎಲ್ಲಾದರೂ ಗುದ್ದಿ ಅಪ್ಪಚ್ಚಿಯಾಗುವುದು ಸಹಜವೇ. ಮದ್ಯಪಾನ ಮತ್ತು ಮಾದಕದ್ರವ್ಯ ಸಂಬಂಧಿ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ತೊಂಭತ್ತರ ದಶಕದ ಅಂತ್ಯದಲ್ಲಿ, ದಿಲ್ಲಿಯಲ್ಲಿ ನಡೆದಿದ್ದ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣವನ್ನು ಗಮನಿಸಬಹುದು. ಹಲವು ಕಾರಣಗಳಿಂದ ಕುಖ್ಯಾತಿಯನ್ನು ಗಳಿಸಿದ್ದ ಈ ಪ್ರಕರಣವು ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು.   

ಮದ್ಯಪಾನ ಮಾಡಿದವರು ಯಾವತ್ತೂ ಡ್ರೈವ್ ಮಾಡುವ ಗೋಜಿಗೆ ಹೋಗಬಾರದೆಂಬ ನಿಟ್ಟಿನಲ್ಲಿ ಶಹರದ ಕೆಲ ಬಾರುಗಳೂ ಅಲ್ಲಲ್ಲಿ ಸಣ್ಣಮಟ್ಟದಲ್ಲಿ ದನಿಯನ್ನು ಎತ್ತಿದ್ದಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋದ ಬಾರೊಂದು ಮತ್ತೇರಿದವರು ಮಾಡುವ ಅವಾಂತರಗಳ ಬಗ್ಗೆ, ಅವರಾಡುವ ಅರ್ಥವಿಲ್ಲದ ಮಾತುಗಳನ್ನು ವ್ಯಂಗೋಕ್ತಿಗಳಂತೆ ಬಳಸಿ ಲೇವಡಿ ಮಾಡಿದ್ದೂ ಇದೆ. ಇವರ ಪ್ರಕಾರ ಕೆಲ ಪೆಗ್ಗುಗಳು ಗಂಟಲಿಗಿಳಿದ ನಂತರ ಸಾಮಾನ್ಯವಾಗಿ ಕುಡುಕರು ಮಾತನಾಡುವ ನಿತ್ಯದ ಉಕ್ತಿಗಳು ಹೀಗಿರುತ್ತವಂತೆ:

“ತೂ ಭಾಯಿ ಹೇ ಮೇರಾ” (ನೀನ್ ನನ್ ತಮ್ಮ ಕಣಲೇ)

“ಬಸ್ ಆಜ್ ಹೀ ಆಖ್ರೀ ಬಾರ್” (ಇವತ್ತೇ ಲಾಸ್ಟು ಮಾರಾಯ)

“ಆಜ್ ಸಾಲಾ ಚಡ್ ನಹೀ ರಹೀ ಹೈ” (ಇವತ್ಯಾಕೋ ಏರ್ತಾನೇ ಇಲ್ವಲ್ಲೋ)

“ಏ ಮತ್ ಸೋಚ್ನಾ, ಕಿ ಮೇ ಪೀಕೆ ಬೋಲ್ ರಹಾಂ ಹೂಂ” (ನಾನ್ ಕುಡ್ದು ಟೈಟಾಗಿ ಹೀಗೆ ಮಾತಾಡ್ತಿದೀನಿ ಅಂತ ಯೋಚಿಸ್ಬೇಡ್ರೋ)

“ಆಜ್ ತೇರಾ ಭಾಯಿ ಗಾಡಿ ಚಲಾಯೇಗಾ” (ಇವತ್ತು ನಿಮ್ಮಣ್ಣ ಗಾಡಿ ಓಡಿಸ್ತಾನೆ ನೋಡ್ರೋ)

ಹೀಗೆ ಮಲಗದಿರುವ ಮಹಾನಗರಿಯಲ್ಲಿ ಕತ್ತಲಾದ ನಂತರವೂ ಕತೆಗಳಿರುತ್ತವೆ. ಅಲ್ಲಿ ವಿಷಾದ, ವಿನೋದ, ಹತಾಶೆ, ಹಟ, ಮಹಾತ್ವಾಕಾಂಕ್ಷೆ, ಮಾರ್ದವತೆ, ಕ್ರೈಮು, ಕನವರಿಕೆ… ಎಲ್ಲವೂ ಇವೆ. ಅಷ್ಟಕ್ಕೂ ತಾನು ನಿದ್ರಿಸುವುದಿಲ್ಲ ಎಂಬುದು ಮಹಾನಗರಿಯೊಂದಕ್ಕೆ ಹೆಮ್ಮೆಯೋ? ಹೆಗ್ಗಳಿಕೆಯೋ? ಅಥವಾ ಬ್ಯುಸಿ ಎಂಬ ಸಂಗತಿಯನ್ನು ಹೆಚ್ಚೇ ವೈಭವೀಕರಿಸಿರುವ ಮತ್ತು ಇದನ್ನು ನಾವಿರುವ ಶಹರಕ್ಕೂ ಅಂಟಿಸಿರುವ ನಮ್ಮಂಥವರ ತೆವಲೋ… ಗೊತ್ತಿಲ್ಲ!  

ಒಟ್ಟಿನಲ್ಲಿ ನಮ್ಮ ಶಹರವು ಮಲಗುವುದಿಲ್ಲ. ಹೀಗಾಗಿ ನಮ್ಮನ್ನೂ ನೀವು ಗೂಬೆ ನನ್ಮಕ್ಳು ಅನ್ನುವಂತಿಲ್ಲ. 

‍ಲೇಖಕರು Admin

September 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: