ಚಂದ್ರಶೇಖರ ಹೆಗ್ಡೆ
ಮಾನವ ಬ್ರಹ್ಮಾಂಡದ ಅದ್ವಿತೀಯ ಬುದ್ಧಿವಂತ ಪ್ರಾಣಿ. ಇವನಿಗಿರುವ ಆಲೋಚನಾ ಶಕ್ತಿ ಗೆ ಸರಿಸಮಾನವಾದ ಮತ್ತೊಂದು ಜೀವಿ ವಿಶ್ವದಲ್ಲಿನ್ನೂ ಜನ್ಮತಾಳಿಲ್ಲ. ಈತನ ಬುದ್ಧಿಮತ್ತೆಯ ವಿಲಾಸಕ್ಕೆ ವ್ಯೂಮ ಶರಧಿಯಾದಿಯಾಗಿ ಸಕಲ ಪಂಚಭೂತಗಳು ಬೆಚ್ಚಿಬಿದ್ದಿವೆ. ಈತನಿಗಿರುವ ಬಹುದೊಡ್ಡ ಸಾಮರ್ಥ್ಯವೆಂದರೆ ಅಗಾಧವಾದ ನೆನಪಿನ ಶಕ್ತಿ.
ಈ ಶಕ್ತಿಯೊಂದಿಲ್ಲದಿದ್ದರೆ ಮಾನವ ಮಾನಸಿಕವಾಗಿ ಪ್ರತಿಕ್ಷಣ ಮರುಹುಟ್ಟು ಪಡೆಯಬೇಕಾಗುತ್ತಿತ್ತು. ಎಷ್ಟೇ ವಯಸ್ಸಾದರೂ ಏನೊಂದೂ ಅರಿಯದ ಮುಗ್ಧ ಮಗುವಿನಂತೆ ಜೀವನ ಕಳೆಯಬೇಕಾಗಿತ್ತು. ಆದರೆ ಹಾಗಾಗಿಲ್ಲ.ಜಗತ್ತು ಇವನ ಲೀಲಾವಿನೋದದಲ್ಲಿ ಮೈಮರೆತು ತೇಲುತ್ತಿದೆ. ಕಟ್ಟಿಕೊಂಡ ನೆನಪುಗಳನ್ನು ಅಳಿಸಲಾಗದ ಶಕ್ತಿಯನ್ನು ಮನುಷ್ಯನೇನಾದರೂ ಪಡೆದಿದ್ದರೆ ಊಹಿಸಿಕೊಳ್ಳಲಾಗದ ತೊಂದರೆಗೀಡಾಗುತ್ತಿದ್ದ. ಪ್ರಕೃತಿ ದಯಪಾಲಿಸಿರುವ ಮೆದುಳಿನ ಅಲ್ಪಭಾಗದಲ್ಲಿಯೇ ಅಗಾಧವಾದ ನೆನಪುಗಳನ್ನು ತುಂಬಿಕೊಂಡು ಅವುಗಳಲ್ಲಿಯೇ ಕಳೆದುಹೋಗುತ್ತಿರುವ ಮನುಷ್ಯನಿಗೆ ಮರೆವು ಇರದಿದ್ದರೆ ಭೂಮಿಯ ಮೇಲೆ ಚಿತ್ರ ವಿಚಿತ್ರ ವರ್ತನೆಗಳ ಮಾನವ ಲೋಕವೇ ಸೃಷ್ಟಿಯಾಗಬಹುದಿತ್ತೇನೊ.
ಈ ಅನಾಹುತವನ್ನು ತಪ್ಪಿಸಲು ಅದೃಷ್ಟವಶಾತ್ ಮರೆವು ನಮಗೆ ನೆರವಾಗುತ್ತದೆ. ಮರೆವು ಮಾನವ ಜಗತ್ತಿನ ವಿಸ್ಮಯಗಳಲ್ಲಿ ಒಂದು. ಬೇಕೆಂದಾಗ ಬಾರದ ಬೇಡವೆಂದಾಗ ಬಿಡದ ನಮ್ಮನ್ನು ಸದಾ ಕಾಡುವ ಅತ್ಯಾಪ್ತ ಶತ್ರು ಅಲ್ಲದೇ ಹೇಳದೇ ಕೇಳದೇ ಧುತ್ತನೆ ಬಂದು ನಾವು ಮರೆಯಲಾಗದ ವಿಷ ಘಳಿಗೆಗಳನ್ನು ನಾವರಿಯದಂತೆ ನಮ್ಮ ಸ್ಮೃತಿಪಟಲದಿಂದ ಅಳಿಸಿ ಹೋಗಿಬಿಡುವ ಪ್ರಾಣಮಿತ್ರನೆಂದರೆ ಅದು ಮರೆವು.
ಯಾವುದೇ ಜಾತಿ, ಮತ, ವರ್ಗ, ವರ್ಣ, ಪಂಥ, ಪಂಗಡ, ಲಿಂಗ, ವಯಸ್ಸುಗಳ ಗೊಡವೆಯಿಲ್ಲದೇ ಸಕಲರಿಗೂ ಬಂದಪ್ಪಳಿಸಬಲ್ಲ ಮಹಾ ಮಾನವತಾವಾದಿ ಈ ಮರೆವು. ಕುವೆಂಪುರವರು ಹೇಳುವ ‘ಮನುಜ ಮತ ವಿಶ್ವಪಥ’ ಎಂಬ ವಾಕ್ಯ ಪರಿಪಾಲಕ ಈ ಮರೆವು. “ವಸುದೈವ ಕುಟುಂಬಕಂ” ಎಂದು ಹೊರಟು ಮಾನವಕುಲವನ್ನೆಲ್ಲಾ ತನ್ನ ಬಂಧು ಬಳಗದಂತೆ ಅಪ್ಪಿಕೊಳ್ಳುವ ಜಗತ್ತಿನ ಏಕೈಕ ಮಾನವ ಧರ್ಮಿಯೆಂದರೆ ಮರೆವು ಎಂದರೂ ಅತಿಶಯೋಕ್ತಿಯಾಗಲಾರದು!.
ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿರಸ್ತೇದಾರ, ಡಾಕ್ಟರ್, ನರ್ಸ್, ಲಾಯರ್, ಇಂಜಿನೀಯರ್, ಡ್ರೈವರ್, ಕಂಡಕ್ಟರ್, ಸರ್ವೇಯರ್, ಸುಪರ್ ವೈಸರ್ ಹೀಗೆ ಯಾವುದೇ ಹುದ್ದೆ, ಸ್ಥಾನ, ವೃತ್ತಿಗಳ ಭೇದ ಭಾವವಿಲ್ಲದೇ ಸರ್ವರನ್ನೂ ‘ಇವನಾರವ ಇವನಾರವ’ ಎಂದೆನಿಸದೇ ‘ಇವ ನಮ್ಮವ ಇವ ನಮ್ಮವ’ನೆಂದು ಕಾಡುವ ಸರ್ವಾಂತರ್ಯಾಮಿ ಈ ಮರೆವು. ತಾಯಿಯನ್ನೇ ಬೆಂಬತ್ತಿ ಮಡಿಲೇರಿ ಕೆಳಗಿಳಿಯದಂತೆ ರಚ್ಚೆ ಹಿಡಿಯುವ ಹಸುಳೆಗೊಂದು ಇಷ್ಟವಾದ ಆಟದ ಸಾಮಾನು ದೊರೆತರೆ ಸಾಕು ಕ್ಷಣಮಾತ್ರದಲ್ಲಿ ಹೆತ್ತಮ್ಮನನ್ನೇ ಮರೆತುಬಿಡುವಂತೆ ಮಾಡುವ ಈ ಮರೆವು ಅಮ್ಮನಿಗದೆಷ್ಟು ಉಪಕಾರಿ. ಹೀಗೆ ಮರೆವು ಹಸುಗೂಸಿನಿಂದ ಮುಪ್ಪಿನವರೆಗೂ ವಿಸ್ತ್ರುತವಾದ ಲೀಲಾಜಾಲವನ್ನು ಹೊಂದಿ ಅಲ್ಲಮನಿಗೆ ಕಾಡಿದ ಮಾಯೆಯೆಂಬಂತೆ ಪ್ರತಿ ಮಾನವನನ್ನೂ ಬಿಡದೇ ಕಾಡುತ್ತದೆ.
ವಿಸ್ಮೃತಿಯಿಂದ ಮನುಜನಿಗೆ ಲಾಭಗಳಿರುವಂತೆ, ಅಪಾರ ಸಂಕಷ್ಟಗಳೂ ಇವೆ. ಮನುಷ್ಯ ತಾನು ಮಾಡಿದ ಪಾಪಗಳೆಲ್ಲವನ್ನೂ ಮರೆಯಲು ಸಹಾಯಕವಾಗುವುದು ಈ ಮರೆವು. ಮನುಷ್ಯ ತನಗಾದ ನೋವು ಸಂಕಟ ದುಃಖ ಅಪಮಾನಗಳನ್ನು ಮರೆತು ಮತ್ತೆ ಜೀವನೋತ್ಸಾಹದಿಂದ ಪುಟಿಯಬೇಕಾದರೆ ಅದು ಮರೆವಿನಿಂದ ಮಾತ್ರ.ಇಲ್ಲದಿದ್ದರೆ ಆ ದುಃಖಸಾಗರದಲ್ಲಿ ಮುಳುಗಿದವನು ಮತ್ತೆ ಮೇಲೇಳಲು ಸಾಧ್ಯವಾಗದೇ ಕೊರಗಿ ನೆಲಕ್ಕೊರಗಬೇಕಾಗುತ್ತಿತ್ತು. ಯಾವುದೋ ವಿಷಮ ಘಳಿಗೆಯಲ್ಲಿ ತನ್ನ ಮೇಲಾಧಿಕಾರಿಗಳು ಬೈದ “ನೀನು ಬೇಜವಾಬ್ದಾರಿ ವ್ಯಕ್ತಿ” ಎಂಬ ಮಾತನ್ನು ಸಾಂದರ್ಭಿಕ ಒತ್ತಡದ ಪರಿಣಾಮವೆಂದು ನೌಕರ ಮರೆಯದಿದ್ದರೆ ಪ್ರಾಣವೇ ಭಾರವಾಗಿ ಕೊರಗುವಂತಾಗುತ್ತದೆ.
ಅತ್ಯಂತ ಪ್ರೀತಿಸುವ ಸಂಬಂಧಿಕರ ಸಾವಿನ ಆಘಾತದಿಂದ ಅಂದೇ ಅವರೊಂದಿಗೇ ಮಸಣ ಸೇರಿಬಿಡಬೇಕೆಂಬ ಆ ದಿನದ ವೈರಾಗ್ಯ ಹಾಗೂ ಜಿಗುಪ್ಸೆಗಳು ಕೆಲವೇ ದಿನಗಳ ನಂತರ ಕ್ರಮೇಣ ಮರೆಯಾಗಿ ಮನುಷ್ಯರನ್ನು ಯಥಾಪ್ರಕಾರ ನಿತ್ಯ ಜೀವನದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುತ್ತವೆ. ಈ ವಿಸ್ಮೃತಿ ಮಾನವನಿಗೆ ಪ್ರಕೃತಿದತ್ತವಾದ ವರ. ಈ ಕಾಣಿಕೆಯಿಲ್ಲದಿದ್ದರೆ ಜೀವನದಲ್ಲಿ ನಡೆದ ಅಪಘಾತ, ದುರಂತ, ಅಪಮಾನದ ಕಹಿಘಟನೆಗಳೇ ಮನುಷ್ಯನಿಗೆ ಭೂತವಾಗಿ ಬೆನ್ನತ್ತಿ ಬಲಿ ಪಡೆಯುತ್ತಿದ್ದವು. ಈ ಕಾರಣಕ್ಕೆ ವಿಸ್ಮೃತಿಗೆ ನಾವು ಋಣಿಯಾಗಿರಲೇಬೇಕು.ತನ್ನ ಸಾಮರ್ಥ್ಯಕ್ಕನುಗುಣವಾಗಿ ಸ್ಮರಣಶಕ್ತಿಯನ್ನು ಹೊಂದಿರುವ ಮಾನವನ ಮೆದುಳು ನಿರಂತರವಾಗಿ ಬಳಸದೇ ಇರುವ ಹಾಗೂ ನಮಗೆ ಅನವಶ್ಯಕವಾಗಿರುವ ಸಂಗತಿಗಳನ್ನೆಲ್ಲ ಮರೆಯುತ್ತ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬಂತೆ ಹೊಸ ಅನುಭವದ ಚಿಗುರನ್ನು ಹೊತ್ತು ಮತ್ತೆ ಹೊಸತನಕ್ಕೆ ತುಡಿಯುತ್ತಿರುತ್ತಲೇ ಇರುತ್ತದೆ.
ಸಾಕಿದ ಪ್ರೀತಿಯ ಪ್ರಾಣಿಗಳ ಸಾವೂ ಕೂಡ ನೆನಪಿನ ಬುತ್ತಿಯಲ್ಲಿ ಉಳಿದು ನಮ್ಮ ಕರುಳನ್ನು ಹಿಂಡುತ್ತದೆ. ಇಂತಹ ನೋವು ದುಃಖ ದುರಂತ ಸಂದರ್ಭಗಳಲ್ಲಿ ಕಣ್ಣಿಗೆ ಕಾಣದ ಮಾಯೆಯಂತೆ ಕ್ರಮೇಣ ಆವರಿಸಿಕೊಳ್ಳುವ ವಿಸ್ಮೃತಿ ಈ ಸಂಗತಿಗಳನ್ನು ಮರೆಸಿ ಮತ್ತೆ ನಿತ್ಯದ ಜೀವನ ಬಂಡಿಯನ್ನು ಮುನ್ನಡೆಸುತ್ತದೆ. ದ್ವೇಷ, ಜಗಳ,ಶೀತಲ ಸಮರದಂತಹ ಸಂದರ್ಭಗಳಲ್ಲಿ ಎದುರಾದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಹರಿಸಬೇಕಾದಾಗ ತಕ್ಷಣದ ಪ್ರತಿಕ್ರಿಯೆ ನೀಡದೇ “ನಿಮ್ಮ ಸಮಸ್ಯೆಗಳನ್ನು ಕಾಲವೇ ಪರಿಹರಿಸುತ್ತದೆ. ಒಂದಷ್ಟು ದಿನ ಕಳೆಯಲಿ” ಎಂದು ಕೆಲವರು ಹೇಳುವುದರ ಹಿಂದೆ ಮರೆವಿನ ತಂತ್ರವೂ ಅಡಗಿದೆ. ಕಂಪ್ಯೂಟರ್ ಮುಂದೆ ಕುಳಿತ ಮನಸ್ಸು ಎಲ್ಲ ಮಾಹಿತಿಗಳನ್ನು ‘ಸಿಪಿಯು’ದಲ್ಲಿ ಸ್ಟೋರ್ ಮಾಡಿದ ನಂತರ ನಾವು ಮರೆತು ಬಿಡುವುದರ ಬದಲಾಗಿ ನಮ್ಮಲ್ಲೇ ಕ್ರೋಢೀಕರಿಸಿಟ್ಟುಕೊಂಡರೆ ತಲೆ ಸಿಡಿದಂತಾಗಿ ಅಂದಿನ ಸಮಯವೆಲ್ಲ ವ್ಯಗ್ರತೆಯಲ್ಲಿ ಕಳೆಯಬೇಕಾಗಬಹುದು. ಹೀಗೆ ಮರೆವು ಧನಾತ್ಮಕ ವರವಾಗಿ ಮನುಷ್ಯನ ಮನಸ್ಸನ್ನು ಆರೋಗ್ಯಕರವಾಗಿರುವಂತೆ ಬೆಳಗುತ್ತದೆ.
ಮರೆವಿನಿಂದ ಮನುಷ್ಯನಿಗೆ ಪ್ರಯೋಜನಗಳಿರುವಂತೆ ಅಪಾಯಗಳೂ ಇವೆ. ಅದರಲ್ಲಿಯೂ ಪ್ರೊಫೆಸರ್ ಗಳಿಗಂತೂ ಮರೆವು ಅತ್ಯಾಪ್ತ ವೈರಿ. ತರಗತಿಯಲ್ಲಿ ಹೇಳಬೇಕೆಂದು ಸಿದ್ಧವಾಗಿ ತಯಾರಿಸಿಕೊಂಡ ಪಾಠ ಯೋಜನೆ ಕೆಲವು ಪಠ್ಯಭಾಗಗಳ ಮರೆವಿನಿಂದಾಗಿ ಕೆಲವೊಮ್ಮೆ ದಿಕ್ಕುತಪ್ಪುವುದುಂಟು. ಒಮ್ಮೆ ಜಿಲ್ಲಾ ಮಟ್ಟದ ವಿಜ್ಞಾನ ವಿಷಯದ ವಿಚಾರ ಸಂಕಿರಣದ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದ ನಾನು ವಿಚಾರ ಮಂಡನೆಯ ಮಹತ್ವದ ಸಮಯದಲ್ಲಿ ಒಂದೆರಡು ಸಂಗತಿಗಳು ಮರೆತುಹೋಗಿ ಫಜೀತಿಗಿಟ್ಡುಕೊಂಡಿದ್ದನ್ನು ಈಗಲೂ ಮರೆಯಲಾಗುತ್ತಿಲ್ಲ.
ಮರೆತ ಮನದ ಮೊರೆತ ಕೇಳುವವರಾರು?
ಒಂದು ಸಲ ನನ್ನ ಗೆಳೆಯ ಅಧ್ಯಾಪಕರೊಬ್ಬರು ಬೆಳಿಗ್ಗೆ ಕಾಲೇಜಿಗೆ ಹೋದಾಗ ಪ್ರಾಂಶುಪಾಲರು ಆಫೀಸೀನ ಯಾವುದೋ ಕಾರ್ಯದ ಅಸಮಾಧಾನದಲ್ಲಿ ಕೋಪದಿಂದ ಕುದಿಯುತ್ತಿದ್ದರು. ಈ ಅಧ್ಯಾಪಕರು ಹತ್ತಿರ ಹೋಗಿ ಹಸನ್ಮುಖಿಯಾಗಿ ‘ನಮಸ್ಕಾರ ಸರ್ ” ಎಂದು ಶುಭೋದಯದ ಸಲಾಂ ಹೊಡೆದರೆ ಅದಕ್ಕೆ ತಲೆ ಎತ್ತಿಯೂ ನೋಡದ ಪ್ರಾಂಶುಪಾಲರು ಕನಿಷ್ಠ ಪ್ರತಿಕ್ರಿಯೆಯಾಗಿ ಮುಖವನ್ನೂ ಇವರತ್ತ ತಿರುಗಿಸಲಿಲ್ಲ. ಯಾಕೋ ಸಂದರ್ಭ ವಿಷಮಯವಾಗಿದೆ ಎಂದುಕೊಂಡು ಅಟೆಂಡೆನ್ಸ್ ರಿಜಿಸ್ಟರ್ ಗೆ ಸಹಿ ಹಾಕಿ ಪ್ರಾಂಶುಪಾಲರ ಕಚೇರಿಯಿಂದ ನಿಧಾನವಾಗಿ ಹೊರಬಂದು ತಮ್ಮ ಕೋಣೆಗೆ ತೆರಳಿದರು. ಹೇಗೋ ತಪ್ಪಿಸಿಕೊಂಡೆಯಾ ಬಡಜೀವವೇ ಎಂದು ಎದೆಗೆ ಕೈಹಚ್ಚಿಕೊಂಡು ನಿರಮ್ಮಳವಾಗಿ ತಮ್ಮ ಕುರ್ಚಿಯ ಮೇಲೆ ಕೂರುತ್ತಿರುವಾಗಲೇ ” ಎಲ್ಲಿ ಆ ಮನಶಾಸ್ತ್ರದ ಅಧ್ಯಾಪಕರು ಕರೀರಿ ಅವರನ್ನ ” ಎಂಬ ಪ್ರಾಂಶುಪಾಲರ ಧ್ವನಿ ಅವರ ಹಿಂದೆಯೇ ಬೆನ್ನತ್ತಿ ಬಂದಂತಾಯಿತು.
ತಕ್ಷಣ ಎಚ್ಚೆತ್ತ ಅಧ್ಯಾಪಕರು ಇಂತಹ ಕೋಪದ ತಾಪವೆಲ್ಲ ಆವರಿಸಿಕೊಂಡಿರುವ ಈ ಸಮಯದಲ್ಲಿ ತನ್ನನ್ನೇಕೆ ಕರೆದರೋ ಎಂದು ಅಳುಕುತ್ತಲೇ ಪ್ರಾಂಶುಪಾಲರ ಕೋಣೆಯತ್ತ ಹೆಜ್ಜೆ ಹಾಕಿದರು. ಶುಭಮುಂಜಾವಿನ ಹೊತ್ತಲ್ಲಿ ಇನ್ನೇನು ಕಾದಿದೆಯೋ ಎಂದು ಹೆದರುತ್ತಲೇ ಪ್ರಾಂಶುಪಾಲರ ಕೋಣೆಯೊಳಕ್ಕೆ ಬಂದ ಅಧ್ಯಾಪಕರು ಅಲ್ಲಿ ಅದಾಗಲೇ ಆವರಿಸಿದ್ದ ಕೋಪತಾಪದ ಬಿಸಿಯಿಂದ ಬೆವೆತರು. ಕರ್ಚೀಫನ್ನು ತೆಗೆದು ಬೆವರು ಒರೆಸಿಕೊಂಡ ಅಧ್ಯಾಪಕರಿಗೆ ಪ್ರಾಂಶುಪಾಲರು ಗಂಭೀರವದನರಾಗಿ “ನಿನ್ನೆ ನೀವು ಮನಶಾಸ್ತ್ರದ ಪ್ರಯೋಗಕ್ಕೆ ಬಳಸಿದ ಕಂಪ್ಯೂಟರ್ ಲ್ಯಾಬ್ ಕೀ ಕಾಣ್ತಾ ಇಲ್ಲ ನೀವೇ ತಾನೇ ನಿನ್ನೆ ಬಳಸಿರೋದು. ಬಿ ಕಾಂ ತರಗತಿಯವರಿಗೆ ಕೊಡ್ರಿ ಅದನ್ನ. ಅವರದು ಲ್ಯಾಬ್ ಇದೆ ಹೋಗಿ ತಗೊಂಬರ್ರಿ.” ಎಂದಾಗ ಬೆವರು ನದಿಯಾಗಿ ದಳದಳನೆ ಹರಿಯಹತ್ತಿತು. ಹರಿದ ಬೆವರಿನ ಕಾಲುವೆಯಲ್ಲಿಯೇ ನಿಧಾನವಾಗಿ ಹೆಜ್ಜೆ ಹಾಕಿದ ಅಧ್ಯಾಪಕರ ಮುಖ ಬೆವರಿನಿಂದ ಕಪ್ಪಿಟ್ಟಿತು. “ಸರ್ ನನ್ನ ಕಪಾಟಿನಲ್ಲಿದೆ ತೆಗೆದುಕೊಂಡು ಬರುವೆ ” ಎಂದು ಸಂದರ್ಭಕ್ಕೊದಗಿದ ನುಡಿಯನ್ನುಲಿದು ಅಂಜುತ್ತಲೇ ಹೊರಬಂದ ಅಧ್ಯಾಪಕರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ.
ಇಡೀ ಕಾಲೇಜಿನಲ್ಲಿಯೇ ಸುಮಾರು ೩೦೦ ರಷ್ಟು ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಹೊಂದಿದ ಬಿ ಕಾಂ ಪ್ರಥಮ ವರ್ಷದ ತರಗತಿಯವರೆಲ್ಲ ಆ ದಿನದ ಎರಡನೇ ಅವಧಿಯಲ್ಲಿ ಕಂಪ್ಯೂಟರ್ ಪ್ರಯೋಗಾಲಯಕ್ಕೆ ತೆರಳಲು ಕಾಯುತ್ತಾ ಇಂಗ್ಲೀಷ್ ವಿಷಯದ ಪ್ರಥಮ ಅವಧಿಗೆ ಕುಳಿತಿದ್ದರು. ಹಿಂದಿನ ದಿನದ ಕೊನೆಯ ಅವಧಿಯಲ್ಲಿ ಪ್ರಾಯೋಗಿಕ ತರಗತಿಯನ್ನು ತೆಗೆದುಕೊಂಡಿದ್ದ ಈ ಮನಶಾಸ್ತ್ರದ ಅಧ್ಯಾಪಕರು ತಮ್ಮ ಅವಧಿ ಮುಗಿಯುತ್ತಲೇ ಕೋಣೆಗೆ ತಾವೇ ಬೀಗ ಹಾಕಿ ಕೀಯನ್ನು ನಂತರ ಆಫೀಸ್ ನಲ್ಲಿ ಕೊಟ್ಟರಾಯಿತೆಂದು ತಮ್ಮ ಜೇಬಿಗಿಳಿಸಿದ್ದರು. ಮನಶಾಸ್ತ್ರದ ಅಧ್ಯಾಪಕರ ಬಲಿಗೆ ಇದೇ ಸರಿಯಾದ ಸಂದರ್ಭವೆಂದು ಬಗೆದ ಮರೆವು ತನ್ನ ಕೈಚಳಕವನ್ನು ತೋರಿತ್ತು. ಆಗಲೇ ಸಮಯ ಮೀರಿದ್ದರಿಂದ ಊರಿಗೆ ಮರಳುವ ಭರದಲ್ಲಿ ಕೀಯನ್ನು ಕಚೇರಿಗೆ ಕೊಡದೇ ಜೇಬಿನಲ್ಲಿಟ್ಟುಕೊಂಡೇ ತೆರಳಿದ್ದರು. ಸುಮಾರು ೮೦ ಕಿಲೋಮೀಟರ್ ಪ್ರಯಾಣದ ಇವರ ಊರು ಅಮೋಘಪುರದಿಂದ ಮಾರನೇ ದಿನ ಕಾಲೇಜಿಗೆ ಬರುವಾಗ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದ ವಿಸ್ಮೃತಿ ಕೀಯನ್ನು ಮನೆಯಲ್ಲಿಯೇ ಮರೆತು ಹೋಗುವಂತೆ ಮಾಡಿತ್ತು.
ಇದನ್ನೆಲ್ಲ ಸ್ಮರಿಸಿಕೊಂಡ ಅಧ್ಯಾಪಕರು ತಮ್ಮ ಸ್ಥಿತಿಯನ್ನು ನೆನೆದು ಗಲಿಬಿಲಿಗೊಳಗಾಗಿ ಮುಂಜಾವಿನ ತಂಪಿನಲ್ಲಿಯೂ ಬೆವರುತ್ತಿದ್ದರು. ಇರುವ ಸತ್ಯವನ್ನು ಹೇಳಿ ಹೇಗೋ ನಿಭಾಯಿಸಬೇಕೆಂದರೆ ಕರ್ತವ್ಯದ ವಿಷಯದಲ್ಲಿ ಕಟ್ಟುನಿಟ್ಟಾಗಿದ್ದ ಪ್ರಾಂಶುಪಾಲರ ನರಸಿಂಹಾವತಾರ ಅಧ್ಯಾಪಕರ ಕಣ್ಣ ಮುಂದೆ ಬಂದು ಧುತ್ತನೆ ನಿಂತತಾಗಿ ಹೆದರಿಸಿದಂತಾಗುತ್ತಿತ್ತು. ಅಲ್ಲದೇ ಅಂದು ಬೆಳಿಗ್ಗೆ ಬೇರೆ ನಿರ್ಮಾಣವಾಗಿದ್ದ ವಿಷಮ ವಾತಾವರಣದ ಬಿಸಿ ಇನ್ನೂ ತಣ್ಣಗಾಗಿರಲಿಲ್ಲ.
ಹಾಳಾದ ಮರೆವಿನಿಂದಲೇ ಇದೆಲ್ಲ ಸಂಭವಿಸಿತಲ್ಲ ಎಂದು ಒಳಗೊಳಗೇ ಗೊಣಗುತ್ತಲೇ ಮುಂದೇನು ಮಾಡುವುದು ಎಂಬ ಯೋಚನೆಯ ಸಾಗರದಲ್ಲಿ ಮುಳುಗಿರಬೇಕಾದರೆ ಇರುವ ಒಂದು ಗಂಟೆಯಲ್ಲಿ ೧೫ ನಿಮಿಷ ಕಳೆದುಹೋಗಿತ್ತು. ಚಿಂತಿಸಿ ಬಿಸಿಯಾದ ತಲೆಯಿಂದ ಬೆವರ ಹನಿಗಳು ಕುಡಿಯೊಡೆಯುತ್ತಿದ್ದವು. ಹಾಕಿದ ಬೀಗವನ್ನು ಮುರಿಯಬೇಕೆಂದರೆ, ಕೀ ತಂದಿಲ್ಲವೆಂದೂ ಹೇಳಲು ಸಾಧ್ಯವಾಗದ ಕಠಿಣ ಸಂದರ್ಭದಲ್ಲಿ ಕೀಯನ್ನು ಬಿಟ್ಟುಬಂದು ಬೀಗವನ್ನು ಮುರಿಯುವುದೆಂದರೆ ಮಹಾ ಯುದ್ಧವೇ ನಡೆದುಹೋಗುತ್ತದೆ. ಸಾಕಷ್ಟು ಯೋಚಿಸಿದ ನಂತರ ಅನಿವಾರ್ಯವಾಗಿ ಕೊನೆಯ ದಾರಿಯೆಂಬಂತೆ ಊರಿನಿಂದ ತಮ್ಮ ಹುಡುಗನೊಬ್ಬನಿಗೆ ಹೇಳಿ ತಕ್ಷಣ ಕೀಯನ್ನು ತರಿಸಿಕೊಳ್ಳಲು ನಿರ್ಧರಿಸಿ “ಮನೆಯಲ್ಲಿರುವ ಕೀಯನ್ನು ತೆಗೆದುಕೊಂಡು ಪಕ್ಕದ ಮನೆಯ ಬಾಡಿಗೆ ಕಾರಿನಲ್ಲಿ ತಕ್ಷಣ ಕಾಲೇಜಿಗೆ ಹೊರಟು ಬಾ” ಎಂದು ಫೋನಾಯಿಸಿದರು.ಅಷ್ಟಾದರೂ ಸಮಾಧಾನವಿರದ ಸೂಕ್ಷ್ಮ ಮನಸ್ಸಿನ ಅಧ್ಯಾಪಕರು ಇನ್ನೆಷ್ಟು ಹೊತ್ತಿಗೆ ಕೀ ಬರುವುದೋ ಎರಡನೇ ಅವಧಿ ಪ್ರಾರಂಭವಾಗುವುದರೊಳಗಾಗಿ ಲ್ಯಾಬ್ ಕೀ ತಲುಪುತ್ತದೆಯೋ ಇಲ್ಲವೊ ಎಂದು ತಳಮಳಗೊಂಡು ಕೂತಲ್ಲಿ ಕೂಡದೇ ನಿಂತಲ್ಲಿ ನಿಲ್ಲದೇ ತಮ್ಮ ಕೋಣೆಯಲ್ಲಿ ಅತ್ತಿಂದಿತ್ತ ಓಡಾಡುತ್ತಲೇ ಇದ್ದರು.
ಒಂದೊಂದು ನಿಮಿಷಕ್ಕೂ ಗಡಿಯಾರ ನೋಡುತ್ತಾ ಕಾಲ ಓಡದಿರುವಂತೆ ಕಾಲಭೈರವನಿಗೆ ಮನದಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದರು. ತಮ್ಮ ಇಪ್ಪತ್ತು ವರ್ಷಗಳ ಸರಕಾರಿ ಸೇವೆಯಲ್ಲಿ ಮೇಲಾಧಿಕಾರಿಗಳಿಂದ ಒಂದೇ ಒಂದು ಕಠಿಣ ಶಬ್ದವನ್ನೂ ಕೇಳಿಸಿಕೊಳ್ಳದ ನನ್ನ ಗೆಳೆಯ ಅಧ್ಯಾಪಕರಿಗೆ ಇದೇ ಮೊದಲ ಬಾರಿ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿರುವುದು ಸಂಕಷ್ಟವನ್ನು ತಂದಿತ್ತು. ಒಂದು ಸಲ ಸಾಂದರ್ಭಿಕ ಒತ್ತಡದ ಸಮಯದಲ್ಲಿ “ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ” ಎಂದ ಪ್ರಾಂಶುಪಾಲರ ಒಂದೇ ಒಂದು ಮಾತಿಗೆ ನಾಲ್ಕು ದಿನ ನೊಂದು ಬೆಂದಿದ್ದ ಅಧ್ಯಾಪಕರನ್ನು ಪ್ರಾಂಶುಪಾಲರ ಇಂದಿನ ವಿರಾಟ್ ರೂಪ ಮತ್ತಷ್ಟು ತಲ್ಲಣಗೊಳಿಸಿತ್ತು.
ಅಷ್ಟರಲ್ಲಿ ಅಂಗಳದಲ್ಲಿ ಯಾವುದೋ ಕಾರು ಬಂದ ಶಬ್ದವಾಯಿತು. ತಕ್ಷಣ ಹೊರಹೋಗಿ ನೋಡಿದ ಅಧ್ಯಾಪಕರುಗೆ ಅತೀವ ಆನಂದವಾಯಿತು. ತಮ್ಮ ಊರಿನ ಹುಡುಗನೇ ಕೆಳಗಿಳಿದು ಬಂದು ಕೀಯನ್ನು ಕೈಯ್ಯಲ್ಲಿಟ್ಟಾಗ ಹೆದರಿ ಅಲೆಮಾರಿಯಾಗಿ ಹಾರಾಡುತ್ತಿದ್ದ ಜೀವ ಅಂಗೈಗೆ ಬಂದಿಳಿದಂತಾಗಿತ್ತು. ಸೇವೆಯಲ್ಲಿ ಇದುವರೆಗೂ ಉಳಿಸಿಕೊಂಡು ಬಂದ ಗೌರವಕ್ಕೆ ಧಕ್ಕೆಯಾಗಲಿಲ್ಲ ಎಂಬುದನ್ನು ನೆನೆದು ಸಂತಸಗೊಂಡರು. ಕೀಯನ್ನು ಕಂಪ್ಯೂಟರ್ ವಿಷಯದ ಅಧ್ಯಾಪಕರಿಗೆ ಕೊಟ್ಟು ಕೋಣೆಯೊಳಗೆ ಹೋಗಿ ನಿರಾಳರಾದರು. ಇಷ್ಟು ದಿನ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ಸೇವೆ ಸಲ್ಲಿಸಿದ ಅವರ ಗೌರವ ಈ ಕೀಯಿಂದ ಎಲ್ಲಿ ಹಾಳಾಗಿ ಮಣ್ಣುಪಾಲಾಗುವುದೋ ಎಂದು ಭಯಗೊಂಡಿದ್ದ ಈ ಅಧ್ಯಾಪಕರ ಜೀವವೀಗ ದಣಿವಾರಿಸಿಕೊಂಡಿತು.ಹೀಗೆ ಒಂದು ಕ್ಷಣದ ಮರೆವು ಏನೆಲ್ಲವನ್ನು ಮಾಡಬಲ್ಲದು ಎನ್ನುವುದಕ್ಕೆ ಈ ಘಟನೆ ನಿದರ್ಶನವಾಗಿದೆ. ಯಕಃಶ್ಚಿತ್ ಕೀಯನ್ನು ಮರೆತು ಪೇಚಿಗೆ ಸಿಲುಕಿದ ಮನಶಾಸ್ತ್ರದ ಪ್ರೊಫೆಸರ್ ರಿಗೆ ಮರೆವು ಅವರ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳುವಂತೆ ಮಾಡಿತ್ತು.
ಮರೆವು ಬೆಂಬಿಡದ ಮಾಯೆಯೆಂಬುದಕ್ಕೆ ಕಾಯಿಪಲ್ಲೆ ಖರೀದಿಗೆಂದು ಮಾರುಕಟ್ಟೆಗೆ ಬಂದ ಗೆಳೆಯರೊಬ್ಬರು ಪರ್ಸನ್ನೇ ತರಲು ಮರೆತಿದ್ದ ಸಂಗತಿಯೇ ಸಾಕ್ಷಿ. ಒತ್ತಡದ ಸಂದರ್ಭದಲ್ಲಿ ಮಾತ್ರವಲ್ಲ ನಿರಮ್ಮಳ ವಿಹಾರದ ನಿಶಾಂತತೆಯಲ್ಲಿಯೂ ಮರೆವು ಹೇಗೆ ಕಾಡಬಲ್ಲದು ಎಂಬುದನ್ನು ನೋಡಿ. ಸಂಜೆಯ ನಿತ್ಯದ ವಿಹಾರಕ್ಕೆ ಒಮ್ಮೆ ಅರ್ಧ ದಾರಿಯವರೆಗೆ ಬೈಕಿನಲ್ಲಿ ಬಂದ ನಾನು ಒಂದು ಸ್ಥಳದಲ್ಲಿ ಬೈಕನ್ನು ನಿಲ್ಲಿಸಿ ಗೆಳೆಯರೊಂದಿಗೆ ಹರಟುತ್ತಾ ನಡೆದೆ. ಕೆಲ ದೂರ ನಡೆದು ಮರಳಿದ ನಾನು ಮಾತಿನ ಭರಾಟೆಯಲ್ಲಿ ಸಾಗಿ ವಿಹಾರ ಮುಗಿಸಿ ಮನೆಗೆ ತೆರಳಿದೆ. ಕೆಲಹೊತ್ತು ವಿರಮಿಸಿಕೊಂಡು ಊಟ ಮಾಡಿ ರಾತ್ರಿ ಮಲಗುತ್ತಿದ್ದ ಸಮಯದಲ್ಲಿ ಇರುಳ ಆಗಸದಲ್ಲಿ ಮಿಂಚೊಂದು ಹೊಳೆದ ಹಾಗೆ ಮನದಲ್ಲಿ ಏನೋ ಹೊಳೆದಂತಾಗಿ ವಿಹಾರದ ಜಾಗದಲ್ಲಿಯೇ ಬೈಕ್ ಬಿಟ್ಟು ಬಂದ ವಿಷಯ ತಟ್ಟನೆ ನೆನಪಾಯಿತು. ಎದ್ದವನೇ ಓಡುತ್ತಾ ಹೋಗಿ ನೋಡಿದರೆ ರಾತ್ರಿಯ ಚಂದ್ರನ ತಂಪಾದ ಬೆಳದಿಂಗಳಿಗೆ ಹಾಯಾಗಿ ಮೈಯ್ಯೊಡ್ಡಿಕೊಂಡು ನಿಂತಿತ್ತು ನನ್ನ ಅನಾಥ ದ್ವಿಚಕ್ರ ರಥ.
ಮತ್ತೊಂದು ಸಲ ಈ ನನ್ನ ವಾಹನಕ್ಕೆ ಇಂಧನ ಭರಿಸಿಕೊಳ್ಳಲು ಇಂಧನದಂಗಡಿಗೆ ಹೋದಾಗ ಇಂಧನ ತುಂಬಿಸಿಕೊಂಡವನೇ ಬೈಕ್ ಸ್ಟಾರ್ಟ್ ಮಾಡಿ ಮುಂದೆ ಚಲಿಸಬೇಕೆನ್ನುವಷ್ಟರಲ್ಲಿ ಅಡ್ಡ ಕೈ ಹಾಕಿದ ಪೆಟ್ರೋಲ್ ಬಂಕ್ ಮಾಲೀಕ ಎರಡು ನೂರು ರೂಪಾಯಿ ಕೊಡ್ರಿ ಎಂದಾಗಲೇ ನಾನು ದುಡ್ಡು ಕೊಟ್ಟಿಲ್ಲವೆಂದು ಗೊತ್ತಾಗಿದ್ದು. ಭರಿಸಿಕೊಂಡ ಇಂಧನದ ಹಣ ಕೊಡುವುದನ್ನೇ ಮರೆತ ನನ್ನ ಮರೆಗುಳಿ ಗುಣಕ್ಕೆ ನಗು ಬಂದಿತು. “ಇಂತಹ ಸಾಕಷ್ಟು ಗಿರಾಕಿಗಳನ್ನು ನೋಡಿದ್ದೇನೆ ಹೋಗ್ರಿ.” ಎಂದ ಮಾಲೀಕನ ಮಾತು ಅವನ ದೃಷ್ಟಿಯಲ್ಲಿ ನನ್ನನ್ನು ಹಗಲುಗಳ್ಳನನ್ನಾಗಿ ಮಾಡಿತ್ತು. ಅಂದಿನ ನನ್ನ ಪಾಡನ್ನು ಕಂಡ ಮರೆವು ನನ್ನ ಹಿಂದೆ ಕುಳಿತು ಮುಸಿ ಮುಸಿ ನಕ್ಕಂತಾಯಿತು.
ಮತ್ತೊಂದು ಕಾಲೇಜಿನ ನನ್ನ ಗೆಳೆಯರೊಬ್ಬರು ಮರಗಿಡಗಳೆಲ್ಲಾ ಚಿಗುರೊಡೆದು ಎಳೆಹಸಿರು ಹಸುಳೆಲೆಗಳೊಂದಿಗೆ ತೂಗಾಡುತ್ತಿದ್ದ ಶಿವರಾತ್ರಿ ಹಬ್ಬದ ಶುಭೋದಯದಂದು ಬೆಳಿಗ್ಗೆ ಪ್ರಾತಃಕಾಲದಲೆದ್ದು ನಿತ್ಯಕರ್ಮಗಳನ್ನು ಮುಗಿಸಿ ಶಿವದರ್ಶನಕ್ಕೆ ಹೊರಡುವ ಸಿದ್ಧತೆಯಲ್ಲಿ ತೊಡಗಿದ್ದರು. ಗೆಳೆಯರು ತಮ್ಮ ಶ್ರೀಮತಿಯೊಂದಿಗೆ ಸಿದ್ಧರಾಗಿ ಬೆಳಗಿನ ನವೋಲ್ಲಾಸದಿಂದ ಹರಿಹರನ ಶಿವಭಕ್ತರಂತೆ ಶಿವದರ್ಶನದಿಂದ ಪುನೀತರಾಗಲು ತಮ್ಮ ಮನೆಯ ಹತ್ತಿರದ ಶಿವದೇವಾಲಯಕ್ಕೆ ಹೋದರು. ದೇವಾಲಯದಲ್ಲಿ ಶಿವರಾತ್ರಿಯ ದಿನವಾಗಿದ್ದರಿಂದ ಅಂದು ನಸುಕಿನಲ್ಲಿಯೇ ಪೂಜಾಕಾರ್ಯಗಳು ಪ್ರಾರಂಭವಾಗಿ ಘಂಟಾನಾದದೊಂದಿಗೆ ಶಿವಲಿಂಗದ ಅಭಿಷೇಕ ನಡೆದಿತ್ತು. ಭಕ್ತಿಯ ಪರವಶತೆಯಲ್ಲಿ ಶಿವನ ಆಸ್ಥಾನದೊಳಗೆ ಪ್ರವೇಶಿಸಿದ ದಂಪತಿಗಳಿಬ್ಬರು ಗರ್ಭಗುಡಿ ಪ್ರವೇಶಿಸಿ ಇಬ್ಬರು ಮಕ್ಕಳೊಂದಿಗೆ ತಾವೂ ಶಿರಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದರು.ಶಿವಾರ್ಚನೆ, ಅಭಿಷೇಕವಾಗುವವರೆಗೂ ನಿಂತು ಭಕ್ತಿಯ ನಮನಗಳನ್ನು ಸಲ್ಲಿಸಿದ ದಂಪತಿ ಹಾಗೂ ಮಕ್ಕಳಿಗೆ ಪುರೋಹಿತರು ಮಗಳಾರತಿಯೊಂದಿಗೆ ತೀರ್ಥಪ್ರಸಾದ ವಿತರಿಸಿದರು. ಭೂತನಾಥನ ದರ್ಶನ ಹಾಗೂ ಪ್ರಸಾದದ ಸೌಭಾಗ್ಯದಿಂದ ಪ್ರಸನ್ನಚಿತ್ತರಾಗಿ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರದ ಜಪದೊಂದಿಗೆ ದೇವಾಲಯದ ಮುಖಮಂಟಪದಲ್ಲಿ ಕಣ್ಮುಚ್ಚಿ ಧ್ಯಾನದಲ್ಲಿ ಕುಳಿತ ನನ್ನ ಸ್ನೇಹಿತರನ್ನು ಕೆಲ ಹೊತ್ತಿನ ನಂತರ ಯಾರೋ ಬಂದು ಎಚ್ಚರಿಸಿದಂತಾಯಿತು.
ಸಾಕ್ಷಾತ್ ಶಂಕರನೇ ದರ್ಶನ ನೀಡಲು ಧರೆಗಿಳಿದು ಬಂದನೇನೋ ನಮ್ಮ ಪುಣ್ಯ ಎಂದು ನಿಧಾನವಾಗಿ ಕಣ್ತೆರೆದು ನೋಡಿದರೆ ಆ ದೇವಾಲಯದ ಟ್ರಸ್ಟ್ ನ ಸದಸ್ಯರೊಬ್ಬರು ನಿಂತಿದ್ದಾರೆ. ನನ್ನ ಗೆಳೆಯರಿಗೆ ಮೊದಲೇ ಪರಿಚಯವಿದ್ದ ಆ ಸದಸ್ಯರು ನನ್ನ ಗೆಳೆಯರ ಪಕ್ಕದಲ್ಲಿ ಕುಳಿತು ಅವರ ಶ್ರೀಮತಿ ಹಾಗೂ ಮಕ್ಕಳ ಕುಶಲೋಪರಿಯನ್ನು ಮನೆಯ ಸದಸ್ಯರೆಂಬಂತೆ ವಿಚಾರಿಸಿದರು.ಈ ಹಿಂದೆ ಹಲವಾರು ಸಾರಿ ಭೇಟಿಯಾಗಿದ್ದರೂ ಇಷ್ಟೊಂದು ಆಪ್ತವಾಗಿ ಮಾತನಾಡದ ಆ ಸದಸ್ಯರು ಅಂದು ಮಾತನಾಡುತ್ತಲೇ ತಮ್ಮ ಕೈಯ್ಯಲ್ಲಿರುವ ರಶೀದಿ ಪುಸ್ತಕದ ಹಾಳೆಗಳನ್ನು ತಿರುವಿ ಹಾಕುತ್ತಾ ” ನಮ್ಮ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ನಿಮಿತ್ತ ಸಂಜೆ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ತಾವು ತನುಮನಪೂರ್ವಕವಾಗಿ ದೇಣಿಗೆಯನ್ನು ನೀಡಬೇಕು” ಎಂದಾಗ ಈ ಕಾಲದ ಇಂತಹ ಟ್ರಸ್ಟ್ ಗಳನ್ನು ನಂಬದೆ ಒಂದು ರೂಪಾಯಿ ಹಣ ಕೊಡಲೂ ಹಿಂದೇಟು ಹಾಕುತ್ತಿದ್ದ ನನ್ನ ಗೆಳೆಯರು ಶಿವರಾತ್ರಿಯ ಹಬ್ಬದ ದೇಣಿಗೆಗೆಂದು ತಿಳಿದು ‘ಆಯಿತು, ೧೦೦ ರೂಪಾಯಿ ತೆಗೆದುಕೊಳ್ಳಿ” ಎಂದು ತಮ್ಮ ಜೇಬಿನಿಂದ ಹಣ ತೆಗೆದು ಟ್ರಸ್ಟ್ ನ ಸದಸ್ಯರ ಕೈಗಿತ್ತರು. ಆ ಹಣವನ್ನು ಮುಟ್ಟದ ಸದಸ್ಯರು “ನೀವು ಅಧ್ಯಾಪಕ ನೌಕರಿಯಲ್ಲಿರುವವರು. ದೇವರು ನಿಮಗೆ ಅಷ್ಟೈಶ್ವರ್ಯ ಸಕಲ ಸೌಭಾಗ್ಯಗಳನ್ನು ದಯಪಾಲಿಸಿದ್ದಾನೆ.೧೦೦ ರೂಪಾಯಿ ದೇಣಿಗೆ ನಿಮಗೆ ತಕ್ಕುದಲ್ಲ” ಎಂದುಬಿಡಬೇಕೆ?
ಇದನ್ನು ಟ್ರಸ್ಟಿನ ಆ ಸದಸ್ಯರಿಂದ ನಿರೀಕ್ಷಿಸಿರದ ನನ್ನ ಗೆಳೆಯರು ” ದೇವಾಲಯದಲ್ಲಿ ಕುಳಿತು ಪೂಜೆ ಪುನಸ್ಕಾರ ಪ್ರಸಾದಕ್ಕೆಂದು ದೇಣಿಗೆ ಕೇಳುತ್ತಿದ್ದೀರಿ. ನಿಮ್ಮಂತಯೇ ಆಗಲಿ ಸರಿ ೫೦೦ ರೂಪಾಯಿ ತಗೊಳ್ಳಿ” ಎಂದು ೫೦೦ ರೂಪಾಯಿಯ ನೋಟಿಲ್ಲದ ಕಾರಣಕ್ಕೆ ೨೦೦೦ ರೂಪಾಯಿಗಳ ನೋಟನ್ನು ಆ ಪರಿಚಿತ ಸದಸ್ಯರ ಕೈಗಿತ್ತರು. ಆಗಲೂ ಮಣಿಯದ ಆ ಚೌಕಾಶಿ ಸದಸ್ಯರು “ನೀವಿರುವ ಸ್ಥಾನಮಾನ ಅಂತಸ್ತು ಹುದ್ದೆಗೆ ಈ ೨೦೦೦ ರೂಪಾಯಿ ಕೊಟ್ಟರೂ ಸಾಲದು ” ಎನ್ನುತ್ತಲೇ ಅವರ ಮರು ಅನುಮತಿಗಾಗಿ ಕಾಯದೇ ರಶೀದಿಯಲ್ಲಿ ೨೦೦೦ ರೂ ಎಂದು ಬರೆದು ಕಲ್ಲುಸಕ್ಕರೆಯ ಪ್ರಸಾದದೊಂದಿಗೆ ಅದನ್ನು ನನ್ನ ಗೆಳೆಯರ ಹಸ್ತಗಳಲ್ಲಿಟ್ಟುಬಿಟ್ಟ. ಮನೆಯಲ್ಲಿ ಮಗನ ಕೈಗೆ ಹತ್ತು ರೂಪಾಯಿಗಳನ್ನು ಕೊಡಲೂ ಹಿಂಜರಿಯುತ್ತಿದ್ದ ಗೆಳೆಯರೀಗ ಪೇಚಿಗೆ ಸಿಲುಕಿದರು. ಆ ಟ್ರಸ್ಟಿಯೊಂದಿಗೆ ವಾದ ಮಾಡಿ ಜಗಳಕ್ಕಿಳಿಯಲು ಸರಿಯಾದ ಸಂದರ್ಭವಲ್ಲವೆಂದು ಬಗೆದ ನನ್ನ ಗೆಳೆಯರು ಮರುಮಾತನಾಡದೆ ರಶೀದಿಯನ್ನು ಪಡೆಯಬೇಕಾಯಿತು. ಶಿವನ ದರ್ಶನಕ್ಕೆಂದು ಬಂದ ಇವರಿಗೆ ಶಿವನಿತ್ತ ವರ ವಿಶೇಷವಾಗಿಯೇ ಇತ್ತು. ಇವರು ಶಿವರಾತ್ರಿ ಹಬ್ಬದ ವಿಶೇಷ ದಿನವೆಂದು ಪ್ರಾತಃಕಾಲದ ಈ ಘಳಿಗೆಯಲ್ಲಿ ಹುಟ್ಟಿದ ಭಕ್ತಿಯ ಪಸನ್ನಚಿತ್ತತೆಯು, ಟ್ರಸ್ಟಿಯ ಪ್ರಸಾದ ವ್ಯವಹಾರದಲ್ಲಿ ಸೋರಿಹೋಗಿತ್ತು. ಅನ್ಯದಾರಿಯಿಲ್ಲದೇ ಅದೇ ಪೆಚ್ಚುಮೋರೆಯಲ್ಲಿ ಮತ್ತೊಮ್ಮೆ ಶಿವನಿಗೆ ಕೈಮುಗಿದು ಅಲ್ಲಿಂದ ಎದ್ದು ಬಂದ ನನ್ನ ಗೆಳೆಯರು ಮನೆಗೆ ಬಂದರು. ತಾವು ಇದುವರೆಗೂ ನಂಬಿಕೆಯಿಡದ ಇಂತಹ ಟ್ರಸ್ಟ್ ಗಳಿಗೆ ರೂ. ೧೦ ನ್ನು ಕೊಡಲೂ ಹಿಂಜರಿಯುತ್ತಿದ್ದ ಗೆಳೆಯರು ತಮ್ಮ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಅಂದು ರೂ. ೨೦೦೦ ಹಣ ಕೊಟ್ಟಿದ್ದಕ್ಕಾಗಿ ಪರದಾಡಿದ್ದನ್ನು ಹೇಳತೀರದು.
ಇವರ ಚಡಪಡಿಕೆಯನ್ನು ನೋಡಲಾಗದೆ ಸಮಾಧಾನ ಮಾಡಿದ ಅವರ ಶ್ರೀಮತಿಯವರು ಹೇಗೋ “ಹೋಗಲಿ ಬಿಡಿ. ದೇವರಿಗೆ ಕೊಟ್ಟಿದ್ದೀರಿ ತಾನೆ? “ಎಂದು ಹಲವಾರು ಸಲ ಹೇಳಿದ ಮೇಲೂ ವಿನಾಕಾರಣ ಎರಡು ಸಾವಿರ ರೂಪಾಯಿಗಳನ್ನು ಕಳೆದುಕೊಂಡ ಇವರ ಸಂಕಟ ಬಣ್ಣಿಸಲಸದಳವಾಗಿತ್ತು. ಮೂರು ದಿನ ಕಳೆದರೂ ಅದೇ ಚಡಪಡಿಕೆಯಲ್ಲಿದ್ದ ನನ್ನ ಗೆಳೆಯರಿಗೆ ಈ ಘಟನೆಯನ್ನು ಈಗಲೂ ಮರೆಯಲಾಗುತ್ತಿಲ್ಲ. ಅವರು ಮರೆಯಬೇಕೆಂದು ಪ್ರಯತ್ನಪಟ್ಟರೂ ಮರೆಯಲಾಗದ ಸಂಗತಿಯಾಗಿ ಮೇಲೆ ಹೇಳಿದಂತೆ ಬೇಡವೆಂದರೂ ಬಿಡದೇ ಬೆಂಬಿಡದ ಭೂತದಂತೆ ಕಾಡಿದ್ದು ಮರೆವಿನ ವಿಶೇಷತೆಯೇ. ಮರೆವು ಹೇಗೆಲ್ಲಾ ಕಾಡುತ್ತದೆಂದು ಮೊದಲೇ ಊಹಿಸಲು ಸಾಧ್ಯವಿಲ್ಲ. ಮರೆತ ಮೇಲೆಯೇ ಮರೆತಿರುವುದರ ಮರ್ಮ ತಿಳಿಯುವುದು.
ಒಂದು ಸಂಜೆ ಕರ್ತವ್ಯ ಮುಗಿಸಿ ಕಾಲೇಜಿನಿಂದ ನಾನು ಹಾಗೂ ಸಹೊದ್ಯೋಗಿ ಮಿತ್ರರಿಬ್ಬರು ಹೋಗುತ್ತಿದ್ದೆವು. ಮುಸ್ಸಂಜೆಯ ಹರಟೆಯಲ್ಲಿ ನಿಧಾನವಾಗಿ ಕಳೆದುಹೋಗುತ್ತಾ ವಿಹಾರದ ಸವಿಯನ್ನು ಆನಂದಿಸುತ್ತಾ ಸಾಗುತ್ತಿದ್ದೆವು. ಕಾಲೇಜಿನಿಂದ ಸುಮಾರು ಒಂದು ಕಿಲೋಮೀಟರ್ ದೂರವನ್ನು ವಿಹರಿಸಿ ಬಸ್ ಸ್ಟ್ಯಾಂಡ್ ಹತ್ತಿರ ಬಂದು ನಮ್ಮೂರಿನ ಬಸ್ಸುಗಳನ್ನು ಹುಡುಕುತ್ತಿದ್ದೆವು. ಅಷ್ಟರಲ್ಲಿ ನನ್ನ ಜೊತೆಗಿದ್ದ ಸ್ನೇಹಿತರೊಬ್ಬರು ಇದ್ದಕ್ಕಿದ್ದಂತೆ ಯಾಕೋ ಗಲಿಬಿಲಿಗೊಂಡರು. ಹೆಗಲಿಗೆ ಹಾಕಿರುವ ಬ್ಯಾಗ್ ಎಂಬ ಕಪ್ಪುಸುಂದರಿಯ ಮುಖ ನೋಡುತ್ತಲೇ ಗೊಂದಲಗೊಂಡರು. ಬ್ಯಾಗನ್ನು ಕೈಗೆತ್ತಿಕೊಂಡು ಎರಡು ಮೂರು ಬಾರಿ ತಿರುಗಿಸಿ ನೊಡಿ “ಛೇ! ಎಂಥ ಕೆಲಸ ಆಗಿ ಹೋಯ್ತು ” ಎಂದವರೇ ತಮ್ಮನ್ನು ತಾವೇ ಹಳಿದುಕೊಳ್ಳಲು ಪ್ರಾರಂಭಿಸಿದರು. ಇವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ತಿಳಿಯದೇ ನಾನೂ ಗಡಿಬಿಡಿಗೊಳಗಾದೆ. ನಾನು “ಯಾಕೆ ಸರ್ ಏನಾಯಿತು” ಎಂದಾಗ “ನನ್ನ ಬ್ಯಾಗ್ ನ್ನು ಕಾಲೇಜಿನಲ್ಲಿಯೇ ಬಿಟ್ಟು ನಾನು ಬೇರೆಯವರ ಬ್ಯಾಗನ್ನು ತಂದುಬಿಟ್ಟೆ, ಬ್ಯಾಗ್ ಬದಲಾಗಿದೆ” ಎಂದು ಬ್ಯಾಗಿನ ಮುಖವನ್ನು ನೋಡುತ್ತಲೇ ಸಪ್ಪೆ ಭಾವದಿಂದ ಗೊಣಗಿದರು.
ಇನ್ನೊಬ್ಬ ಪ್ರೊಫೆಸರ್ ರವರ ಬ್ಯಾಗ್ ಕೂಡ ಅವಳಿಯಂತೆ ಕಾಣುತ್ತಿದ್ದುದರಿಂದ ಅವರ ಬ್ಯಾಗನ್ನು ಸ್ನೇಹಿತರು ಎತ್ತಿಕೊಂಡು ಬಂದಿದ್ದರು.ತಮ್ಮ ಕಪ್ಪುಸುಂದರಿಯನ್ನು ಬಿಟ್ಟು ಬೇರೊಬ್ಬರ ಶ್ಯಾಮಲೆಯನ್ನು ಹೊತ್ತು ತಂದ ಅಪಹರಣಕಾರನ ದುಸ್ಥಿತಿ ನನ್ನ ಸ್ನೇಹಿತರದಾಗಿತ್ತು. ಕೆಲ ಹೊತ್ತು ಬಸ್ ನಿಲ್ದಾಣದ ಪ್ರಯಾಣಿಕರ ಆಸನದಲ್ಲಿ ತಲೆಯ ಮೇಲೆ ಕೈ ಹೊತ್ತು ಕುಳಿತ ಸ್ನೇಹಿತರು ಕಣ್ಣ ಮುಂದಿನ ತಮ್ಮೂರಿಗೆ ಹೋಗುವ ಅಪರೂಪದ ಬಸ್ಸನ್ನು ಬಿಟ್ಟು ವಿಧಿಯಿಲ್ಲದೆ ಮತ್ತೆ ಎದ್ದು ಕಾಲೇಜಿಗೆ ಓಡಬೇಕಾಯಿತು. ಅಷ್ಟರಲ್ಲಿ ಕಾಲೇಜಿನಲ್ಲಿದ್ದ ಬ್ಯಾಗ್ ಕಳೆದುಕೊಂಡ ಮತ್ತೊಬ್ಬ ಗೆಳೆಯರು ತಮ್ಮ ಬ್ಯಾಗನ್ನು ಹುಡುಕಲು ಇಡೀ ಕಾಲೇಜನ್ನೇ ತಡಕಾಡಿದ್ದರು. ಮರೆವಿನಿಂದ ತಮ್ಮ ಬ್ಯಾಗನ್ನು ಬಿಟ್ಟು ಬೇರೆಯವರ ಬ್ಯಾಗನ್ನು ತಂದ ನನ್ನ ಸ್ನೇಹಿತರು ಮರಳಿ ಕಾಲೇಜಿಗೆ ಹೋಗಿ ತಮ್ಮ ಬ್ಯಾಗು ತಂದು ಊರು ತಲುಪುವಷ್ಟರಲ್ಲಿ ರಾತ್ರಿಯ ಚಂದ್ರ ತನ್ನ ನಕ್ಷತ್ರಗಳ ಪರಿವಾರದೊಂದಿಗೆ ಜಗದರ್ಶನಕ್ಕಿಳಿದಿದ್ದ. ಮರೆವಿಗೆ ಪರ್ಯಾಯವಿಲ್ಲ ಅದು ಹೇಳಿದಂತೆ ಕೇಳುವುದೊಂದೇ ನಮಗಿರುವ ದಾರಿ.
ನನ್ನ ಗೆಳೆಯನ ಕಾಲೇಜಿಗೊಂದು ದಿನ ಮೈಸೂರು ಪದವಿ ಕಾಲೇಜೊಂದರಲ್ಲಿ ಏರ್ಪಡಿಸಿದ ಚರ್ಚಾ ಸ್ಪರ್ಧೆಗೆ ವಿದ್ಯಾರ್ಥಿ ಸ್ಪರ್ಧಿಗಳನ್ನು ಕಳುಹಿಸಲು ಕೋರಿ ಆಮಂತ್ರಣ ಪತ್ರ ಬಂತು. ಕಾಲೇಜಿನ ಸಾಂಸ್ಕೃತಿಕ ಘಟಕದ ಮುಖ್ಯಸ್ಥ ನನ್ನ ಸ್ನೇಹಿತರೇ ಆಗಿದ್ದರಿಂದ ಪತ್ರವನ್ನು ಹಿಡಿದು ಪ್ರಾಂಶುಪಾಲರ ಹತ್ತಿರ ಹೋಗಿ “ಸರ್,ಮೈಸೂರು ಕಾಲೇಜಿನಿಂದ ಚರ್ಚಾಕೂಟ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಕೋರಿ ಪತ್ರ ಬಂದಿದೆ …….” ಎನ್ನುತ್ತಿರುವಾಗಲೇ “ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಿದ್ಧಗೊಳಿಸಿ” ಎಂದರು. ಸರಿ ಎಂದು ಇನ್ನೂ ೧೦ ದಿನಗಳ ಸಮಯವಿದ್ದುದರಿಂದ ಬಿ ಎ ವಿಭಾಗದ ವಿದ್ಯಾರ್ಥಿಗಳಿಬ್ಬರನ್ನು ಮೈಸೂರಿಗೆ ಕಳುಹಿಸಲು ಸೂಕ್ತ ಮಾರ್ಗದರ್ಶನದೊಂದಿಗೆ ಸಿದ್ಧಗೊಳಿಸಿದರು.
ನನ್ನ ಸ್ನೇಹಿತ ಅಧ್ಯಾಪಕರು ಮೈಸೂರಿನ ಕಾರ್ಯಕ್ರಮಕ್ಕೆ ಹೊರಡುವ ಹಿಂದಿನ ಎರಡು ದಿನಗಳ ಮುಂಚೆ ಕೈಯ್ಯಲ್ಲಿ ವಿದ್ಯಾರ್ಥಿಗಳ ಪಟ್ಟಿಯನ್ನು ಹಿಡಿದು ಅಂತಿಮ ಅನುಮತಿಗಾಗಿ ಪ್ರಾಂಶುಪಾಲರ ಕೋಣೆಗೆ ಹೋದರು. “ಸರ್ ನಾಡಿದ್ದೇ ಮೈಸೂರಿನ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆ ಇದೆ ವಿದ್ಯಾರ್ಥಿಗಳಿಗೆ ಹೇಳಲಾಗಿದೆ ” ಎಂದು ಸ್ನೇಹಿತ ಅಧ್ಯಾಪಕರು ಹೇಳಿದಾಗ ಪ್ರಾಂಶುಪಾಲರು ” ಮೈಸೂರಿಗಾ? ಏಳುನೂರು ಕಿಲೋಮೀಟರುಗಳ ಅಷ್ಟು ದೊಡ್ಡ ಪ್ರಯಾಣ ನಮ್ಮ ವಿದ್ಯಾರ್ಥಿಗಳಿಗೆ ಬಲು ಕಷ್ಟ. ಸಮೀಪದ ಕಾಲೇಜುಗಳಲ್ಲಿದ್ದರೆ ಕಳುಹಿಸಿ” ಎಂದುಬಿಡಬೇಕೆ ?. ಮೊದಲ ಬಾರಿಗೆ ಯಾವುದೋ ಒತ್ತಡದ ಕೆಲಸವೊಂದರಲ್ಲಿ ಮಗ್ನರಾಗಿದ್ದು, ಮಧ್ಯೆ ಮಾತನಾಡುತ್ತಲೇ ನಮ್ಮ ಸ್ನೇಹಿತ ಅಧ್ಯಾಪಕರಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಅನುಮತಿ ನೀಡಿದ್ದ ಪ್ರಾಂಶುಪಾಲರು ಈಗ ತಾವು ಹೇಳಿದುದನ್ನು ಮರೆತು ಸುರಕ್ಷತೆಯ ದೃಷ್ಡಿಯನ್ನಿಟ್ಟುಕೊಂಡು ಕಳುಹಿಸಲು ಬೇಡವೆಂದಿದ್ದರು. ಪ್ರಾಂಶುಪಾಲರ ಮರೆವಿನ ಮಹಿಮೆಗೆ ಅವಾಕ್ಕಾದ ಅಧ್ಯಾಪಕರು ಉತ್ಸಾಹದಿಂದ ಸಿದ್ದಗೊಂಡಿದ್ದ ವಿದ್ಯಾರ್ಥಿನಿಯರಿಗೆ ಏನೆಂದು ಹೇಳುವುದು ಎಂದು ಚಿಂತಿಸುತ್ತಲೇ ಹೊರಬಂದರು.
ಸಾಂಸ್ಕೃತಿಕ ನಗರಿ ಮೈಸೂರಿನ ದರ್ಶನಕ್ಕೆಂದು ಸಿದ್ಧವಾಗಿದ್ದ ವಿದ್ಯಾರ್ಥಿನಿಯರು ವಿಷಯ ತಿಳಿದು ಪೆಚ್ಚು ಮೋರೆ ಹಾಕಿಕೊಂಡು ಸುಮ್ಮನಾದರು. ಹತ್ತಿರದ ಕಾಲೇಜುಗಳಲ್ಲಿ ನಡೆದಾಗ ಅವಕಾಶ ದೊರೆತರೆ ನಿಮ್ಮನ್ನೇ ಕಳುಹಿಸುತ್ತೇನೆ” ಎಂದು ವಿದ್ಯಾರ್ಥಿನಿಯರನ್ನು ಹೇಗೋ ಸಂಭಾಳಿಸಿ ಕಳುಹಿಸುವಷ್ಟರಲ್ಲಿ ನೆತ್ತಿಯ ಮೇಲಿದ್ದ ಸೂರ್ಯ ಗೂಡು ಸೇರಿದ್ದ. ಮರೆವು ಜಗತ್ತನ್ನೇ ಮರೆಸಬಲ್ಲಷ್ಟು ಮಹಾಪರಾಕ್ರಮಿ. ನಮ್ಮ ದೇಶದ ಐಶ್ವರ್ಯಲಕ್ಷ್ಮಿಯ ವಿಲಾಸಕ್ಕೆ ಬೆರಗಾದ ಆಂಗ್ಲರು ತಮ್ಮ ದೇಶಕ್ಕೆ ಮರಳುವುದನ್ನೇ ಮರೆತರು ಇದು ಐತಿಹಾಸಿಕ ಮರೆವು. ಕೆಲವರಿಗೆ ಶಾಶ್ವತ ಮರೆವನ್ನು ನೀಡಿ ಜಗತ್ತಿನ ಜಂಜಡಗಳಿಂದ ಮುಕ್ತಿ ನೀಡಿರುತ್ತಾನೆ ಈ ಸರ್ವಶಕ್ತ ವಿಸ್ಮೃತಿ.
ಅದೊಂದು ದಿನ ಕಾಲೇಜಿನ ವಿವಿಧ ಕಾರ್ಯಭಾರಗಳ ಒತ್ತಡದಲ್ಲಿ ಸ್ವಲ್ಪ ವಿಚಲಿತನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಕೆಲಸವೊಂದು ಮುಗಿಯಿತೆಂದು ನಿರಾಳವಾಗಿ ನನ್ನ ಕೋಣೆಗೆ ಬಂದು ಕುಳಿತರೆ ಮತ್ತೊಂದು ಪ್ರಮುಖ ಕಾರ್ಯವೊಂದು ನನಗಾಗಿ ಕಾದಿತ್ತು. ಆಂತರಿಕ ಅಂಕಗಳಿಗಾಗಿ ನಡೆಸುವ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಕಾಯಕ ನನ್ನನ್ನೇ ಕಾಯುತ್ತಾ ಮೇಜಿನ ಮೇಲೆ ಬಂದು ಕುಳಿತಿತ್ತು. ಹತ್ತಿರವಿದ್ದ ಬಿ ಎ ಪ್ರಥಮ ವರ್ಷದ ಅವಶ್ಯಕ ಕನ್ನಡ ವಿಷಯದ ೧೫೦ ಪತ್ರಿಕೆಗಳ ಕಟ್ಟನ್ನು ಬಿಚ್ಚಿ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೊಡಗಿದೆ. ಹೀಗೆಯೇ ಸುಮಾರು ಎರಡು ಗಂಟೆಯ ನಂತರ ೫೦ ನೆಯ ಪತ್ರಿಕೆಯನ್ನು ಪರಿಶೀಲಿಸುವಾಗ ತಟ್ಟನೆ ಜ್ಞಾನೋದಯವಾಗಿ ಒಂದು ಕ್ಷಣ ಸಾವರಿಸಿಕೊಂಡರೆ ಇವು ನನ್ನ ಮತ್ತೊಬ್ಬ ಸ್ನೇಹಿತರು ಬೋಧಿಸುತ್ತಿದ್ದ ಬಿ ಎ ಪ್ರಥಮ ವರ್ಷದ ಎ ವಿಭಾಗದ ಪತ್ರಿಕೆಗಳು. ಮೊದಲೇ ಸಮಯದ ಅಭಾವದ ಮಧ್ಯೆದಲ್ಲಿ ಈ ಮರೆವಿನ ಕಾಟ ಬೇರೆ ಎಂದು ಹಳಿದುಕೊಂಡು ಆ ಪತ್ರಿಕೆಗಳನ್ನು ಯಥಾಸ್ಥಿತಿಯಲ್ಲಿ ಕಟ್ಟಿ ತಣ್ಣಗೆ ಕುಳಿತೆ. ಆ ಸಮಯದಲ್ಲಿ ಆಕಸ್ಮಾತಾಗಿ ನನ್ನ ಕೋಣೆಗೆ ಬಂದ ಎ ವಿಭಾಗದ ಸ್ನೇಹಿತ ಅಧ್ಯಾಪಕರಿಗೆ ಹೀಗಾದ ವಿಷಯವನ್ನು ಅರುಹಿದರೆ ಅವರು “ಎರಡು ದಿನಗಳಿಂದ ಉತ್ತರ ಪತ್ರಿಕೆಗಳ ಕಡೆಗೆ ಗಮನಹರಿಸಲಾಗಿರಲಿಲ್ಲ. ನನ್ನ ಒತ್ತಡದ ಪರಿಸ್ಥಿತಿಯನ್ನರಿತು ನೀವಾದರೂ ಪರಿಶೀಲಿಸಿದಿರಲ್ಲ ನಿಮಗೆ ಅನಂತ ಧನ್ಯವಾದಗಳು ಸರ್ ” ಎನ್ನಬೇಕೆ ?
ಇನ್ನೂ ಆರದಿರುವ ಗಾಯದ ಮೇಲೆ ಚೆನ್ನಾಗಿಯೇ ಬರೆ ಎಳೆದ ಸ್ನೇಹಿತರನ್ನು ಕಡೆಗಣ್ಣಿನಿಂದೊಮ್ಮೆ ವೀಕ್ಷಿಸಿ ಬೇಡದ ಮೌನಕ್ಕೆ ಜಾರಿದೆ. ಮನಸ್ಸು ಚಿಪ್ಪಿನೊಳಕ್ಕೆ ಮುದುಡುಕೊಂಡಿತು. ಹೀಗೆ ಮರೆವಿನ ಲೀಲಾವಿಲಾಸ ವರ್ಣಿಸಲಸಾಧ್ಯವಾದದ್ದು. ಒಂದು ಬೆಳಿಗ್ಗೆ ಯಾವುದೋ ಕಾರ್ಯಕ್ರಮದ ಒತ್ತಡದಲ್ಲಿ ಸಿದ್ದವಾಗುತ್ತಿದ್ದ ಗೆಳೆಯರೊಬ್ಬರು ಮುಖಕ್ಷೌರಕ್ಕಾಗಿ ಮೇಜಿನ ಮೇಜಿನ ಮೇಲಿಟ್ಟಿದ್ದ ಪೇಸ್ಟನ್ನು ಮುಖಕ್ಕೆ ಅಂಟಿಸಿಕೊಂಡು ಬ್ರಶ್ ನಿಂದ ಉಜ್ಜುತ್ತಿದ್ದಾಗ ಬಂದ ಪರಿಮಳದಿಂದ ಅವರಿಗೆ ಗೊತ್ತಾಗಿದ್ದೇನೆಂದರೆ ತಾವು ಮೆತ್ತಿಕೊಂಡದ್ದು ಶೇವ್ ಜೆಲ್ ಅಲ್ಲ, ಅದು ಹಲ್ಲುಜ್ಜುವ ಮುಲಾಮು ಎಂದು. ಕೂಡಲೇ ಮುಖಮಜ್ಜನ ಮಾಡಿಕೊಂಡು ತಮ್ಮ ಮರೆಗುಳಿತನಕ್ಕಾಗಿ ಪೆಚ್ಚಾಗಿ ಕನ್ನಡಿಯಲ್ಲಿ ತಮ್ಮ ಮರೆಗುಳಿ ಮುಖವನ್ನೊಮ್ಮೆ ನೋಡಿ ಅಕ್ಕಪಕ್ಕದಲ್ಲಿ ಬೇರೆ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಮಂದಹಾಸ ಬೀರಿ ಬೆಪ್ಪಾದರು.






ಚಂದೈತಿ ಸರ್