
ಪಾರ್ವತಿ ಜಿ.ಐತಾಳ್
‘ಸೇವಿಂಗ್ ಸಫಾ’ ಜಗತ್ಪ್ರಸಿದ್ಧ ಮಾಡೆಲಿಂಗ್ ತಾರೆ ವಾರಿಸ್ ಡಿರಿ ಬರೆದ ಅನುಭವ ಕಥನ. ಪ್ರಪಂಚದ ೮೫ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯನ್ನು ಪ್ರಸಾದ್ ನಾಯ್ಕ್ ಅವರು ಕನ್ನಡಕ್ಕೆ ಅನುವಾದಿಸಿದ್ದು ಇತ್ತೀಚೆಗೆ ಸೃಷ್ಟಿ ಪಬ್ಲಿಕೇಷನ್ಸ್ ಅದನ್ನು ಪ್ರಕಟಿಸಿದೆ. ಸಾವಿರಾರು ವರ್ಷಗಳಿಂದ ಆಫ್ರಿಕನ್ ಬುಡಕಟ್ಟು ಜನಾಂಗದವರು ಪಾಲಿಸಿಕೊಂಡು ಬಂದ ಎಳೆಯ ಹೆಣ್ಣುಮಕ್ಕಳ ಯೋನಿ ಛೇದನವೆಂಬ ಅಮಾನುಷವೂ ಕ್ರೂರವೂ ಆದ ಹಿಂಸಾ ಪ್ರಕ್ರಿಯೆಯ ವಿರುದ್ಧ ನಡೆಸಿದ ಹೋರಾಟವು ಇದರ ಮುಖ್ಯ ವಸ್ತು.
ಸ್ವತಃ ಈ ಕ್ರೌರ್ಯಕ್ಕೊಳಗಾಗಿ ಯಾತನೆಯ ನರಕದಲ್ಲಿ ಮಿಂದು ಬಂದ ಕಪ್ಪು ಸುಂದರಿ ವಾರಿಸ್ ಡಿರಿ ಆರಂಭಿಸಿದ ಈ ಹೋರಾಟವು ಆಕೆ ಸ್ಥಾಪಿಸುವ ಒಂದು ಸಂಸ್ಥೆಯನ್ನು ಸೇರಿಕೊಳ್ಳುವ ಹಲವು ಮಂದಿಯ ಮೂಲಕ ರೆಕ್ಕೆ ಬಿಚ್ಚಿ ಹಾರತೊಡಗುತ್ತದೆ. ಕೆಲವು ವರ್ಷಗಳ ಹಿಂದೆ ಆಕೆ ಬರೆದ ಆತ್ಮ ಕಥನದ ರೂಪದಲ್ಲಿರುವ ‘ಡೆಸೆರ್ಟ್ ಫ್ಲವರ್’ಎಂಬ ಕೃತಿಯ ಮುಂದುವರಿಕೆಯಂತೆ ಈ ಕೃತಿ ಇದೆ.
ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಜಗತ್ತಿನಾದ್ಯಂತ ಎಲ್ಲ ಪುರುಷ ಪ್ರಧಾನ ಸಮುದಾಯಗಳು ಹೆಣ್ಣಿನ ಮೇಲೆ ಅಸಂಖ್ಯ ಅರ್ಥಹೀನ ಕಟ್ಟುಪಾಡುಗಳನ್ನು ವಿಧಿಸಿವೆ, ದೌರ್ಜನ್ಯ ದಬ್ಬಾಳಿಕೆಗಳನ್ನು ನಡೆಸಿವೆ, ಹಿಂಸೆ-ಪೀಡನೆಗಳ ಮೂಲಕ ಅವರ ಬದುಕುವ ಹಕ್ಕನ್ನೇ ಕಸಿದುಕೊಮಡಿವೆ . ಎಲ್ಲ ಧರ್ಮಗಳಗೆ ಸೇರಿದ ಜನರ ದೃಷ್ಟಿಯಲ್ಲೂ ಹೆಣ್ಣು ನಿಕೃಷ್ಟಳೇ. ಹೆಣ್ಣು ನಡೆದು ಬಂದ ದಾರಿಯೇ ಯಾತನಾಮಯ. ಆದರೆ ‘ಸೇವಿಂಗ್ ಸಫಾ’ ಕೃತಿಯು ಹೇಳುವ ಹಿಂಸಾಚಾರವು ಭೀಭತ್ಸ, ಭಯಾನಕ ಮತ್ತು ಶೋಚನೀಯ. ಈ ಕೃತಿಯು ಹೇಳುವ ವಿಚಾರಗಳೂ ಕರುಳು ಹಿಂಡುವಂಥದ್ದು, ಓದಿದವರಲ್ಲಿ ಆಕ್ರೋಶ ಮೂಡಿಸುವಂಥದ್ದು ಮತ್ತು ಅದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಲು ಪ್ರೇರಣೆ ನೀಡುವಂಥದ್ದು.
ಯೋನಿಛೇದನವು ( ಎಫ್.ಜಿ.ಎಂ) ಮುಸಲ್ಮಾನ ಹೆಣ್ಣುಮಕ್ಕಳೆಲ್ಲರಿಗೆ ಕಡ್ಡಾಯವಾಗಿ ಮಾಡಿಸಲೇ ಬೇಕಾದ ಸಂಪ್ರದಾಯವೆಂದೂ ಖುರಾನಿನಲ್ಲಿ ಅದನ್ನು ಹೇಳಲಾಗಿದೆಯೆಂದೂ ಹೇಳುತ್ತ ಅಮಾಯಕ ಹೆಣ್ಣುಮಕ್ಕಳ ಯೋನಿಯನ್ನು ಅವರ ಎಳೆಯ ವಯಸ್ಸಿನಲ್ಲೇ ತೀರಾ ಅವೈಜ್ಞಾನಿಕವಾಗಿ ಅರಿವಳಿಕೆ ಔಷಧಿಯ ಬಳಕೆ ಮಾಡದೆ ತುಕ್ಕು ಹಿಡಿದ ಉಪಕರಣಗಳಿಂದ ಕತ್ತರಿಸಿ, ಸುತ್ತಮುತ್ತೆಲ್ಲ ರಕ್ತದ ಕೋಡಿ ಹರಿಸಿ, ತಿರುಗಿ ಮುಳ್ಳುಗಳಿಂದ ಮೂತ್ರ ಹೋಗುವಷ್ಟು ಚಿಕ್ಕ ತೂತನ್ನು ಮಾತ್ರ ಉಳಿಸುವ ಈ ಅಮಾನುಷ ಪದ್ಧತಿಗೆ ಧರ್ಮದ ಹುಸಿ ಲೇಪ ಹಚ್ಚಲಾಗಿದೆ .

ಹೀಗೆ ಯೋನಿಛೇದನ ಮಾಡಿಸಿಕೊಂಡ ಹೆಣ್ಣುಮಕ್ಕಳು ಮುಂದೆ ಮದುವೆಯಾದ ನಂತರ ಗಂಡನಿಂದ ಲೈಂಗಿಕ ಕ್ರಿಯೆಗೊಳಗಾದಾಗ ಇನ್ನೊಮ್ಮೆ ಅದೇ ರೀತಿಯ ಛೇದನಕ್ಕೆ ಒಳಗಾಗುತ್ತಾರೆ. ಜೀವನದುದ್ದಕ್ಕೂ, ಅಷ್ಟೇ ಏಕೆ, ಪ್ರತಿ ಬಾರಿ ಮೂತ್ರ ಮಾಡುವಾಗಲೂ ಅಸಹನೀಯ ನೋವನ್ನು ಅವರು ಅನುಭವಿಸುತ್ತಾರೆ. ಸಾವಿರಾರು ಹೆಣ್ಣುಮಕ್ಕಳು ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗಿ ಜೀವ ಕಳೆದುಕೊಳ್ಳುತ್ತಾರೆ.
‘ಸೇವಿಂಗ್ ಸಫಾ’ಕೃತಿಯ ಲೇಖಕಿ , ಸೋಮಾಲಿಯಾ ಸಂಜಾತೆ ವಾರಿಸ್ ಡಿರಿ ಸ್ವತಃ ಚಿಕ್ಕವಳಿದ್ದಾಗ ಈ ಹಿಂಸೆಗೆ ಒಳಗಾದವಳೇ ಆಗಿದ್ದಾಳೆ. ಆಕೆಗೆ ೧೩ ವರ್ಷ ಪ್ರಾಯವಾಗಿ ಆಕೆಯ ತಾಯ್ತಂದೆಯರು ಮದುವೆ ಮಾಡಿಸಲು ಹೊರಟಾಗ ಬುದ್ಧಿವಂತೆಯೂ ಸೂಕ್ಷ್ಮ ಸಂವೇದನೆಯುಳ್ಳವಳೂ ಆದ ಆಕೆ ಧೈರ್ಯ ಮಾಡಿ ಎಲ್ಲರನ್ನೂ ಧಿಕ್ಕರಿಸಿ ಮನೆಯಿಂದ ಓಡಿಹೋಗುತ್ತಾಳೆ. ಮರುಭೂಮಿಯಲ್ಲಿ ನೂರಾರು ಮೈಲಿಗಳಷ್ಟು ಬರಿಗಾಲಲ್ಲಿ ಓಡಿ ಬಂಧುಗಳ ಮನೆಸೇರಿ, ಅಲ್ಲೂ ಶೋಷಣೆಗೆ ಒಳಗಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸಿದ ನಂತರ ಲಂಡನ್ ತಲುಪಿ, ಅಲ್ಲಿ ಒಂದು ರೆಸ್ಟುರಾದಲ್ಲಿ ಕೆಲಸ ಮಾಡುತ್ತ ರಾತ್ರಿ ಶಾಲೆಗೆ ಹೋಗಿ ಛಲದಿಂದ ಇಂಗ್ಲಿಷ್ ಕಲಿಯುತ್ತಾಳೆ.
ಕೊನೆಗೆ ಅದೃಷ್ಟವಶಾತ್ ಕಪ್ಪು ಸುಂದರಿಯಾದ ಆಕೆ ಓರ್ವ ಛಾಯಾಗ್ರಾಹಕನ ಕಣ್ಣಿಗೆ ಬಿದ್ದು ಮುಂದೆ ಒಬ್ಬ ಮಾಡೆಲಿಂಗ್ ತಾರೆಯಾಗಿ ಜಗತ್ಪ್ರಸಿದ್ಧಳಾಗುತ್ತಾಳೆ. ಯಶಸ್ಸಿನ ತುತ್ತ ತುದಿಯನ್ನೇರಿದರೂ ಆಕೆಯ ಅಂತರಾತ್ಮವು ಒಂದೇ ಸಮನೆ ತನ್ನ ದೇಶದ ಹೆಣ್ಣುಮಕ್ಕಳ ದುಸ್ಥಿತಿಯನ್ನೆಣಿಸಿ ಕೂಗುತ್ತಿರುತ್ತದೆ. ಆಗ ಆಕೆ ಎಫ್.ಎಮ್.ಜಿ.ಯ ವಿರುದ್ಧ ಸಮರ ಸಾರುವ ನಿರ್ಧಾರ ಮಾಡಿ ಮೊದಲಿಗೆ ‘ಡೆಸೆಟ್ ಫ್ಲವರ್’ ಎಂಬ ಹೆಸರಿನಲ್ಲಿ ತನ್ನ ಆತ್ಮಕಥೆಯನ್ನು ಬರೆದು ಪ್ರಕಟಿಸುತ್ತಾಳೆ.
ಮುಂದೆ ಡೆಸೆರ್ಟ್ ಫ್ಲವರ್ ಫೌಂಡೇಶನ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿ ಅದರ ಮೂಲಕ ಯೋನಿ ಛೇದನದ ಕ್ರೌರ್ಯದ ಕುರಿತಾಗಿ ಯೂರೋಪ್ ಅಮೆರಿಕಾಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾಳೆ. ಮುಂದೆ ನೂರಾರು ಚಿತ್ರ ನಿರ್ಮಾಪಕರು ಆಕೆಯ ಆತ್ಮಕಥೆಯಿಂದ ಆಕರ್ಷಿತರಾಗಿ ಅದನ್ನು ಚಿತ್ರವಾಗಿ ನಿರ್ಮಿಸಲು ಮುಂದೆ ಬರುತ್ತಾರೆ. ಆದರೆ ಅವರಲ್ಲಿ ಯಾರಿಗೂ ತನ್ನ ಮುಖ್ಯ ಸಮಸ್ಯೆಯ ಬಗ್ಗೆ ಕಾಳಜಿ ಇಲ್ಲವೆಂದು ಅನ್ನಿಸಿದಾಗ ಕೊನೆಗೆ ಆ ಚಿತ್ರವನ್ನು ವಾರಿಸ್ ತಾನೇ ನಿರ್ಮಿಸುವ ನಿರ್ಧಾರ ಕೈಗೊಳ್ಳುತ್ತಾಳೆ. ಆಕೆಯ ಯೋಜನೆಗಳಿಗೆ ಸರಿ ಹೊಂದುವ ಓರ್ವ ನಿರ್ದೇಶಕನೂ ಆಕೆಗೆ ಸಿಗುತ್ತಾನೆ.
ಚಿತ್ರದಲ್ಲಿ ವಾರಿಸ್ ಚಿಕ್ಕ ಹುಡುಗಿಯಾಗಿದ್ದಾಗಿನ ಪಾತ್ರ ವಹಿಸಲು ಸಿದ್ಧಳಿರುವ ಹುಡುಗಿಗಾಗಿ ಚಿತ್ರ ತಂಡದೊಂದಿಗೆ ಆಕೆ ಸೋಮಾಲಿಯಾಕ್ಕೆ ಹೋಗಿ ಬಹಳಷ್ಟು ಹುಡುಕಾಟ ನಡೆಸಿ ದಾರಿದ್ರ್ಯದ ಬೇಗೆಯಲ್ಲಿ ಬೇಯುತ್ತಿದ್ದ ಜಿಬೌಟಿ ನಗರದ ಹೊರವಲಯದ ಬಲ್ಬಾಲಾದ ಇಡ್ರಿಸ್ ಮತ್ತು ಫೋಜಿಯಾರ ಮಗಳು ಚುರುಕು ಕಂಗಳ ಸುಂದರ ಮುಖದ ಸಫಾಳನ್ನು ಆರಿಸಿಕೊಳ್ಳುತ್ತಾರೆ.

ಆದರೆ ತಮ್ಮ ಮಗಳನ್ನು ಚಿತ್ರನಟಿಯಾಗಿಸಲು ಒಪ್ಪದ ಇಡ್ರಿಸ್‌ಗೆ ಹಣದ ಆಸೆ ತೋರಿಸಿಸಫಾಗೆ ಹದಿನೆಂಟು ವರ್ಷವಾಗುವ ತನಕ ಅವರ ಇಡೀ ಕುಟುಂಬದ ಎಲ್ಲಾ ಖರ್ಚನ್ನೂ ತನ್ನ ಸಂಸ್ಥೆ ನಿಭಾಯಿಸುವುದೆಂದೂ, ಸಫಾಳಿಗೆ ಯೋನಿಛೇದನ ಮಾಡಿಸಬಾರದೆಂದೂ ಷರತ್ತು ವಿಧಿಸಿ, ಒಂದು ಕಾನೂನು ರೀತ್ಯಾ ಒಪ್ಪಂದವನ್ನು ಮಾಡಿಕೊಂಡ ನಂತರ ಆಕೆಯ ಚಿತ್ರ ನಿರ್ಮಾಣ ಸಾಧ್ಯವಾಗುತ್ತದೆ. ಚಿತ್ರವು ಭರ್ಜರಿ ಯಶಸ್ಸು ಸಾಧಿಸಿ ದೇಶ ವಿದೇಶಗಳಿಂದ ಪ್ರಶಸ್ತಿಗಳನ್ನು ಪಡೆಯುತ್ತದೆ. ನಾಲ್ಕು ವರ್ಷಗಳ ಕಾಲ ವಾರಿಸ್ ತನ್ನ ಹೋರಾಟವನ್ನು ಮುಂದುವರಿಸುತ್ತಲೇ ಯೂರೋಪಿನಲ್ಲಿ ಕಳೆಯುತ್ತಾಳೆ.
‘ಸೇವಿಂಗ್ ಸಫಾ’ದ ಕಥನ ಆರಂಭವಾಗುವುದು ಇಲ್ಲಿಂದ. ವಾರಿಸ್‌ಳ ಕೈಗೆ ಏಳು ವರ್ಷ ಪ್ರಾಯದ ಸಫಾ ಬರೆದ ಪತ್ರ ಸಿಗುವುದರ ಮೂಲಕ. ಆದರೆ ಮೇಲೆ ಹೇಳಿದ ಹಲವಾರು ವಿಚಾರಗಳನ್ನು ಆಕೆ ಹಿಂಬೆಳಕಿನ ತಂತ್ರದ ಮೂಲಕ ಭೂತ-ವರ್ತಮಾನಗಳ ನಡುವೆ ಕಾಲವನ್ನು ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡುತ್ತ ನಿರೂಪಿಸುತ್ತಾಳೆ. ಸಫಾಳೊಂದಿಗೆ ಬೆಳೆದ ವಾರಿಸ್‌ಳ ಆತ್ಮಬಂಧದ ಕುರಿತಾದ ಹೃದಯಸ್ಪರ್ಶಿ ಚಿತ್ರಣ ನಮಗೆ ಇಲ್ಲಿ ಸಿಗುತ್ತದೆ.
ಜಿಬೌಟಿಯ ಫ್ರೆಂಚ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ಓದುತ್ತ ಫ್ರೆಂಚ್ ಭಾಷೆ ಕಲಿಯುತ್ತ ಜಾಣಳಾಗುವ ಸಫಾ ಬಹಳ ದಿಟ್ಟ ಸ್ವಭಾವದ ಚುರುಕು ಬುದ್ಧಿಯ ಆಕರ್ಷಕ ಬಟ್ಟಲುಗಂಗಳ ಹುಡುಗಿಯಾಗಿದ್ದಾಳೆ. ಡೆಸೆರ್ಟ್ ಫ್ಲವರ್ ಸಂಸ್ಥೆಯಲ್ಲಿ ವಾರಿಸ್‌ಳ ಜತೆಗೆ ಕೆಲಸ ಮಾಡುತ್ತಿರುವ ಸ್ನೇಹಿತ ವರ್ಗದವರು ಆಕೆಗೆ ನೀಡುತ್ತಿರುವ ಬೆಂಬಲ, ವಾರಿಸ್‌ಳ ಜಿಬೌಟಿ ಭೇಟಿ, ಸಫಾಳ ತಾಯಿ-ತಂದೆ-ಅಜ್ಜಿಯರ ಒರಟು ವರ್ತನೆ ನೋಡಿ ಅವರು ತಮ್ಮ ಒಪ್ಪಂದವನ್ನು ಮುರಿದು ಸಫಾಳ ಯೋನಿಛೇದನವನ್ನು ಗುಟ್ಟಾಗಿ ಮಾಡಿರಬಹುದೇ ಎಂಬ ಸಂದೇಹ ಹಾಗೂ ತೀವ್ರ ಆತಂಕದಿಂದ ಬಳಲಿ ವಾರಿಸ್ ದಿಕ್ಕುಗೆಡುವುದು, ಆ ಬಗ್ಗೆ ಆಕೆ ಕಾಣುವ ದುಃಸ್ವಪ್ನ, ಸಫಾಳನ್ನೂ ಆಕೆಯ ತಮ್ಮನ ಪಾತ್ರ ಮಾಡಿದ ಇಡ್ರಿಸ್‌ನ ಅಕ್ಕ ಸುಂದರಿ ಹಾಗೂ ಬುದ್ಧಿವಂತೆಯಾದ ಇನಾಬ್‌ಳನ್ನೂ ಸಫಾಳ ತಂದೆ ಇಡ್ರಿಸ್‌ನನ್ನೂ ಯೂರೋಪಿಗೆ ಕರೆಸಿಕೊಂಡು ಅಲ್ಲಿನ ಜನರು ತಮ್ಮ ವ್ಯಕ್ತಿ ಸ್ವಾತಂತ್ರ್ಯ, ಮತ್ತು ಹಕ್ಕುಗಳ ಅರಿವಿನೊಂದಿಗೆ ಆಧುನಿಕ ಶೈಲಿಯಲ್ಲಿ ಬದುಕುವ ರೀತಿಯನ್ನು ಅವರಿಗೆ ತೋರಿಸುವ ಪ್ರಯತ್ನವನ್ನು ವಾರಿಸ್ ಮಾಡುತ್ತಾಳೆ.
ನಡುನಡುವೆ ಅವಕಾಶ ಸಿಕ್ಕಾಗಲೆಲ್ಲ ಯೋನಿಛೇದನದ ಕ್ರೌರ್ಯವನ್ನು ಅದರ ಹಿಂದಿನ ಮೂಢ ನಂಬಿಕೆಯನ್ನೂ ಕುರಿತಾಗಿ ತಿಳಿಯ ಹೇಳಿ ಅವರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾಳೆ, ಆ ಮೂಲಕ ಆಫ್ರಿಕಾದಲ್ಲಿ ಸ್ವತಃ ಅವರೇ ತನ್ನ ಹೋರಾಟವನ್ನು ಮುಂದುವರಿಸಿಯಾರು ಎಂಬ ನಂಬಿಕೆಯನ್ನು ಆಕೆ ಇಟ್ಟುಕೊಳ್ಳುತ್ತಾಳೆ. ಆರಂಭದಲ್ಲಿ ಹೆಣ್ಣುಮಕ್ಕಳ ಮೇಲಿನ ಕಟ್ಟುಪಾಡುಗಳನ್ನು ಮೂರ್ಖನಂತೆ ಸಮರ್ಥಿಸುತ್ತಿದ್ದ ಇಡ್ರಿಸ್ ತನ್ನ ಮಾತುಗಳಿಂದ ಪೂರ್ತಿ ಬದಲಾಗಿ ಹೋರಾಟಕ್ಕೆ ಸಾಥ್ ನೀಡುವ ನಿರ್ಧಾರವನ್ನು ವ್ಯಕ್ತಪಡಿಸಿದಾಗ ವಾರಿಸ್ ಸಂತುಷ್ಟಳಾಗುತ್ತಾಳೆ.
ವಾರಿಸ್‌ಳ ಚಿತ್ರಕ್ಕೆ ಜರ್ಮನ್ ಸರಕಾರ ಕೊಡುವ ಥಾಮಸ್ ಡಾಹ್ಲರ್ ಎಂಬ ಅತ್ಯುಚ್ಚ ಪ್ರಶಸ್ತಿ ದೊರೆತಾಗ ಮ್ಯೂನಿಚ್ ನಗರದಲಿ ನಡೆಯುವ ಆ ಸಮಾರಂಭದಲ್ಲಿ ಭಾಗವಹಿಸಲು ಅವರೆನ್ನು ಆಕೆ ಕರೆದೊಯ್ಯುತ್ತಾಳೆ. ಅಲ್ಲದೆ ಸಫಾಳನ್ನು ತನ್ನ ಜತೆ ವೇದಿಕೆಗೆ ಕರೆದೊಯ್ದು ಎಲ್ಲರಿಗೂ ಪರಿಚಯ ಮಾಡಿಸಿ ಆಕೆಯೊಳಗಿನ ಶಕ್ತಿಯ ಕುರಿತು ಮಾತನಾಡುತ್ತಾಳೆ. ಅನ್ಯಾಯವನ್ನು ನೇರವಾಗಿ ಖಂಡಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸದಾ ಚಿಂತಿಸುವ ತನ್ನದೇ ಸ್ವಭಾವ ಸಫಾಳಲ್ಲೂ ಇರುವುದನ್ನು ಗುರುತಿಸಿದ ವಾರಿಸ್‌ಗೆ ಸಫಾಳ ಮೂಲಕ ತನ್ನ ಹೋರಾಟ ಮುಂದುವರಿದು ಮುಂದೊಂದು ದಿನ ಈ ಅನಿಷ್ಟ ಪದ್ಧತಿ ಅಂತ್ಯಗೊಳ್ಳುವುದು ಖಂಡಿತಾ ಎಂಬ ಭರವಸೆಯನ್ನು ಮೂಡಿಸಿ ಕಥನ ಕೊನೆಗೊಳ್ಳುತ್ತದೆ.
ಮಾಡೆಲಿಂಗ್ ತಾರೆಯಾಗಿ ತನ್ನ ಅಪರಿಮಿತ ಸೌಂದರ್ಯ, ಅಪಾರ ಬುದ್ಧಿಶಕ್ತಿ, ಅದಮ್ಯ ಪ್ರತಿಭೆಗಳ ಮೂಲಕ ಯಶಸ್ಸು ಸಾಧಿಸಿದ ವಾರಿಸ್ ಡಿರಿ ಓರ್ವ ಉತ್ತಮ ಕಥೆಗಾರ್ತಿಯೂ ಹೌದು ಎಂಬುದಕ್ಕೆ ‘ಸೇವಿಂಗ್ ಸಫಾ’ದ ಸುಂದರ ಕಥನ ಶೈಲಿ ಸಾಕ್ಷಿಯಾಗುತ್ತದೆ. ಆಕೆ ವಿಷಯಗಳನ್ನು ನಿರೂಪಿಸುವ ತಂತ್ರ, ರಚನಾ ಬಂಧಕ್ಕೆ ಒಂದಿಷ್ಟೂ ಚ್ಯುತಿಯಾಗದಂತೆ ವಿಷಯಗಳನ್ನು ಕ್ರಮಬದ್ಧವಾಗಿ ಜೋಡಿಸುವ ರೀತಿ, ಅಲ್ಲಲ್ಲಿ ಓದುಗನನ್ನು ಭಾವನಾತ್ಮಕ ಲಹರಿಯಲ್ಲಿ ತೇಲಿಸುವ ವರ್ಣನೆಗಳು, ನಿಸರ್ಗ ಸೌಂದರ್ಯದ ಚಿತ್ರಣಗಳು ಕೃತಿಯ ಅಂದವನ್ನು ಹೆಚ್ಚಿಸಿವೆ.
ಪ್ರಸಾದ ನಾಯ್ಕ್ ಅವರ ಅನುವಾದದ ಬಗ್ಗೆ ಎರಡು ಮಾತಿಲ್ಲ. ಅವರ ಸರಳ, ಸುಲಲಿತ ಭಾಷಾ ಶೈಲಿ, ಸಂದರ್ಭೋಚಿತವಾಗಿ ಬಳಸುವ ಪದ-ಪದಪುಂಜಗಳ ಯುಕ್ತತೆ, ಹುಡುಕಿದರೂ ಎಲ್ಲೂ ಕಾಣಸಿಗದ ದೋಷಗಳು ಕನ್ನಡದ ಓದುಗರಿಗೆ ಓದಿನ ಸುಖವನ್ನು ನೀಡುತ್ತವೆ.

ಅವರ ಸರಳ ಸುಂದರ ಹಾಗೂ ಕನ್ನಡದ ಸಹಜ ಶೈಲಿಗೆ ಒಂದು ಉದಾಹರಣೆ ನೋಡಿ . ತಾಯ್ನಾಡಿನ ಹೆಣ್ಣುಮಕ್ಕಳ ಸ್ಥಿತಿಗತಿಗಳನ್ನೆಣಿಸಿ ಚಿಂತಿಸುವ ವಾರಿಸ್ ಡಿರಿಯ ಒಂದು ಸ್ವಗತವಿದು :
ಆದರೆ ಈ ಪಯಣದಲ್ಲಿ ಎದುರಾದ ಹಲವು ಒಬ್ಬಂಟಿತನದ ಕ್ಷಣಗಳೂ ನನಗೆ ನೆನಪಿವೆ. ಹತಾಶೆಯನ್ನೇ ಉಸಿರಾಡುತ್ತಾ ನನ್ನ ಹಲವು ಮುಂಜಾನೆಗಳು ಕಣ್ಣೀರಿನೊಂದಿಗೆ ಆರಂಭವಾಗಿವೆ. ಬೇಸರಗೊಳ್ಳುತ್ತಾ, ಗೊಂದಲಗಳಲ್ಲಿ ತೊಳಲಾಡುತ್ತಾ, ‘ಇವುಗಳು ನನಗೇ ಯಾಕಾಗುತ್ತಿವೆ ?’ಎಂಬ ಪ್ರಶ್ನೆಯನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ನನ್ನಲ್ಲಿಯೇ ದುಃಖದಿಂದ ಕೇಳಿಕೊಂಡಿದ್ದೇನೆ. ಆದರೂ ಈ ಬಗ್ಗೆ ಏನನ್ನಾದರೂ ಮಾಡಲೇಬೇಕು ಎಂಬ ಹುರುಪೊಂದು ನನ್ನನ್ನು ಮುನ್ನೆಸಿದೆ. ಇಂಥದ್ದೇ ಒಂದು ಹುರುಪಿನೊಂದಿಗೆ ಹನ್ನೆರಡು ವರ್ಷಗಳ ಹಿಂದೆ ನಾನು ಮತ್ತು ನನ್ನ ಆತ್ಮೀಯ ಸನೇಹಿತರ ಬಳಗವು ಡೆಸೆರ್ಟ್ ಫ್ಲವರ್ ಫೌಂಡೇಶನ್ ನ್ನು ಸ್ಥಾಪಿಸಿತು.
ಮರಳುಗಾಡಿನ ಆ ಜಗತ್ತಿನಿಂದ ಸುಖದ ಸುಪ್ಪತ್ತಿಗೆಯ ಈ ಜಗತ್ತಿಗೆ ನಾನು ಬಂದಿದ್ದೇನೋ ನಿಜ. ಆದರೆ ಅದನ್ನು ಸಂಪೂರ್ಣವಾಗಿ ಸವಿಯಲು ನನ್ನಿಂದಾಗಲಿಲ್ಲ. ಅಸಲಿಗೆ ನನ್ನ ಹೃದಯವು ಇಲ್ಲಿರಲೇ ಇಲ್ಲ. ದಿನದಿನವೂ ನರಳುತ್ತಿರುವ , ಸಾವಿನಂಚಿಗೆ ಸಾಗುತ್ತಿರುವ , ದುರ್ಮರಣಕ್ಕೀಡಾಗುತ್ತಿರುವ ಆ ಹೆಣ್ಣುಮಕ್ಕಳ ನೆಲದಲ್ಲೇ ನನ್ನ ನನ್ನ ಹೃದಯವು ಉಳಿದುಹೋಗಿತ್ತು.’ ( ಪು.೨೭೩). ಇಂಥ ನೂರಾರು ಉದಾಹರಣೆಗಳನ್ನು ಕೃತಿಯಿಂದ ಕೊಡುತ್ತ ಹೋಗಬಹುದು.






ಬರ್ಬರತೆ ಕೊನೆಗೊಳ್ಳುವ ಆಶಾವಾದದ ಕತೆ. ಓದಬೇಕೆನಿಸಿದೆ
ಚಂದದ ಪ್ರತಿಕ್ರಿಯೆ
ತುಂಬಾ ವಿಶದವಾಗಿ ಅಗತ್ಯವಾದ ಎಲ್ಲಾ ವಿವರಗಳೊಂದಿಗೆ ಕೃತಿಯನ್ನು ಪರಿಚಯಿಸಿದ್ದೀರಿ, ಪಾರ್ವತೀ. ತುಂಬಾ ಸಂತೋಷವಾಯ್ತು.