ಕರೇಕೈಮನೆಯ ಹೆಬ್ಬಾಗಿಲಿಗೆ ನಮಿಸಿ
ರಜನಿ
ದೇವಾನುದೇವತೆಗಳನು
ತಲೆಯಲಿ ಹೊತ್ತಿರುವ
ನಮ್ಮಮನೆಯ ಹೆಬ್ಬಾಗಿಲು
ನಿತ್ಯವೂ ಗುಡಿಸಿ-ಸಾರಿಸಿ
ರಂಗೋಲಿಯಿಟ್ಟು ಅಲಂಕೃತ
ಅಜ್ಜ-ಮುತ್ತಜ್ಜರು ಪೇಟವನೇರಿಸಿ
ಉಸಿರು ಬಿಗಿಹಿಡಿದು
ಬುಗುಡಿಯೇರಿಸಿ
ತುರುಬುಕಟ್ಟಿದ
ಅಜ್ಜಿಯೊಂದಿಗೆ ಪೋಸುಕೊಟ್ಟು
ಖಾಯಮ್ಮಾಗಿ ಛಾಯೆಯಾದವರ
ಹೊಸ್ತಿಲು ದಾಟುವಾಗೆಲ್ಲ ದಿಟ್ಟಿಸುವ ಚಿತ್ರ
ನೋಡುತ್ತಲೇ ಪ್ರಾಯಸಲ್ಲುತ್ತ ನಡೆದಿದೆ
ಅಂಬೆಗಾಲಿಕ್ಕಿ
ಹೊಸ್ತಿಲ ಮೇಲೊಂದು ಕೈಯೂರಿ
ಪುಟ್ಟಪಾದಗಳನಿಟ್ಟು
ಹೆಬ್ಬಾಗಿಲವ ದಾಟಿದರೆ
ಅಜ್ಜ ಮುದ್ದಿಟ್ಟು
ಅಜ್ಜಿ ಬೆಲ್ಲ ತಿನಿಸಿದ ನೆನಪು
ಪಗಡೆ-ಗಜ್ಜುಗ ಹಿಡಿದು
ಗೆಳತಿಯರೊಂದಿಗೆ
ಕುಣಿ ಕುಣಿಯುತ ನಡೆದುದು
ಇದೇ ಹೆಬ್ಬಾಗಿಲನು ದಾಟಿ
ಮೈಯೆಲ್ಲ ಅರಳಿ
ಪುಟಿಪುಟಿಯುತ ಜಿಗಿದು
ತಲೆಬಾಗಿಲು ಬಡಿದು
ಹಣೆಯ ಗಾಯದ ಕಲೆ
ಹಾಗೇ ಉಳಿದಿದೆ ಇನ್ನೂ
ಹೆಬ್ಬಾಗಿಲು ಇದ್ದಕ್ಕಿದ್ದಂತೆ
ಎತ್ತರದ ಕೋಟೆಯಂತಾಗಿದ್ದು
ಸೋಜಿಗವು
ಮುಂದೆಲ್ಲ ಹೊಸ್ತಿಲನು ದಾಟುವ
ಸಾಹಸವು
ಅಮ್ಮನ ಬೇಗುದಿ ಕಳೆದು
ಅಪ್ಪನ ಹೆಗಲ ಭಾರವ ಇಳಿಸಿ
ಅವನ ಜೊತೆ
ಹೆಬ್ಬಾಗಿಲನು ದಾಟಿನಡೆದಾಗ
ನೆಮ್ಮದಿಯ ನಿಟ್ಟುಸಿರು ಬೆನ್ನಹಿಂದೆ
ಮೈಬಿರಿದು
ಒಡಲ ಭಾರವನಿಳಿಸಿ
ಕೈತುಂಬಿದ ಕಂದಮ್ಮನೊಂದಿಗೆ
ಇದೇ ಹೆಬ್ಬಾಗಿಲನು ದಾಟಿದ
ಮಧುರ ನೆನಪು
ಹೋಗಿಬರುವರೆಲ್ಲರ ಲೆಕ್ಕವಿಡುವ
ಹೆಬ್ಬಾಗಿಲಿಗೂ ಹೇಳದೆ
ಇದ್ದಕ್ಕಿದ್ದಂತೆ ಮೂಕನಾದ
ಅಪ್ಪ ನಮ್ಮ ಬಿಟ್ಟು
ನಡೆದುದು ಇದನು ದಾಟಿಯೆ
ಈಗ ನೌಕರಿಯಿಲ್ಲ
ನಮ್ಮ ಮನೆಯ ಹೆಬ್ಬಾಗಿಲಿಗೆ
ಬರುವವರ ಸ್ವಾಗತವಿಲ್ಲ
ನಡೆವವರ ವಿದಾಯವಿಲ್ಲ
ಬಂದುಹೋಗುವವರ
ಗುರುತು ರುಜುವಾತು
ಇಡುವ ಕೆಲಸವಿಲ್ಲ
ಜನ ಕರಗಿ
ಊರು ಕರಗಿ
ನಿರ್ಜನವಾದುದರ
ಲೆಕ್ಕ ಬರೆಯುತ್ತಲಿದೆ
ತೆರೆದ ಹೆಬ್ಬಾಗಿಲು…
so true …
ಹೋಗಿಬರುವರೆಲ್ಲರ ಲೆಕ್ಕವಿಡುವ
ಹೆಬ್ಬಾಗಿಲಿಗೂ ಹೇಳದೆ
ಇದ್ದಕ್ಕಿದ್ದಂತೆ ಮೂಕನಾದ
ಅಪ್ಪ ನಮ್ಮ ಬಿಟ್ಟು
ನಡೆದುದು ಇದನು ದಾಟಿಯೆ
Tumbaa ishtavaaytu.
ನೆನಪುಗಳು ಸಾಮಾಜಿಕ ಚಿತ್ರಣವನ್ನೇ ತರೆದಿಟ್ಟಿವೆ
bAgilina sA0skratika mahatvavanna tiLisuva che0dada kavite
ಮನಕಲಕುವ ಕವಿತೆ… ಎಷ್ಟೊಂದು ನೆನಪುಗಳು ಪ್ರವಾಹದಂತೆ ನುಗ್ಗಿ ಆಪ್ತವಾಗಿದ್ದ ಯಾವುದೋ ಒಂದನ್ನು ಕಳೆದುಕೊಂಡ ಭಾವ ಆವರಿಸಿತು. ಒಳ್ಳೆಯ ಕವಿತೆ. ಧನ್ಯವಾದಗಳು.