ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮನೆಯೂ ಜೀವದ ಒಂದು ಅಂಗವಾಗಿ……..' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

ನನಗೆ ಗೊತ್ತಿದೆ. ಇದು ತೀರಾ ಖಾಸಗಿ ವಿಷಯ. ಆದರೂ ನಿಮ್ಮೊಡನೆ ಹೇಳಿಕೊಂಡರೆ ಒಂದಿಷ್ಟು ಸಮಾಧಾನ ಸಿಗಬಹುದೇನೋ ಎನ್ನಿಸಿದ್ದರಿಂದ ಹೇಳಿಕೊಳ್ಳುತ್ತಿದ್ದೇನೆ.
ಅಕ್ಟೋಬರ್ ರಜೆ ಮುಗಿಯುತ್ತ ಬಂದಿತ್ತು. ರಜೆ ಪ್ರಾರಂಭವಾದಾಗ ‘ಇವರಿಗೆ’ ಈ ಸಲ ನಾನು ಹಿರೇಗುತ್ತಿಯಲ್ಲಿ ಹೆಚ್ಚು ದಿನ ಉಳಿಯಲೇ ಎಂದು ಕೇಳಿದ್ದೆ. ಇವರಿಗೋ ಆಶ್ಚರ್ಯ. ‘ಏನಂತಹ ವಿಶೇಷ?’ ಎಂದಿದ್ದರು. ನನಗೋ ಮುಖ ಸಪ್ಪಗಾಗಿತ್ತು. ಇನ್ನು ಎಷ್ಟು ದಿನ ಆ ಮನೆಲಿ ಇರೋಕಾಗುತ್ತೋ ಗೊತ್ತಿಲ್ಲ. ಇರುವಷ್ಟು ದಿನದಲ್ಲಿ ಉಳಿಯೋಣ ಎಂದಿದ್ದೆ. ಇವರಿಗೆ ಆಗಲೂ ಅರ್ಥ ಆಗದಿದ್ದಾಗ ‘ಹೆದ್ದಾರಿ ಅಗಲೀಕರಣದಿಂದ ಮನೆ ಎಷ್ಟು ಭಾಗ ಹೋಗುತ್ತೋ ಗೊತ್ತಿಲ್ಲ. ಅದಕ್ಕೆ…’ ವಿವರಣೆ ನೀಡಿದ್ದೆ. ‘ಅಪ್ಪನ ಮನೆಯ ಪ್ರೀತಿ’ ಇವರು ರೇಗಿಸಿದ್ದರು. ನಿಜ ಅಪ್ಪನ ಮನೆಯ ಪ್ರೀತಿ ಯಾವ ಹೆಣ್ಣು ಮಕ್ಕಳಿಗೆ ಇರೋದಿಲ್ಲ ಹೇಳಿ?
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಎಂದಾಗಲೆಲ್ಲ ಎದೆಯಲ್ಲೊಂದು ಛಳಕು. ಅರಿವಾಗದ ನೋವು. ಕಳೆದ ನಾಲ್ಕೈದು ತಿಂಗಳಿಂದ ಅದೇ ಧ್ಯಾನ. ಎಷ್ಟು ಸಲ ಆ ಮನೆ ಕನಸಿನಲ್ಲಿ ಂತೋ ಗೊತ್ತಿಲ್ಲ. ಪ್ರತಿಸಲ ಕನಸಿನಲ್ಲಿ ಬಂದಾಗಲೂ ಕಣ್ಣೆಲ್ಲ ಒದ್ದೆ ಒದ್ದೆ. ರಾಷ್ಟ್ರೀಯ ಹೆದ್ದಾರಿ-೧೭ರ ಅಗಲೀಕರಣದ ಇಫೆಕ್ಟ ಇದು.
ಹಾಗೆ ನೋಡಿದರೆ ರಾಷ್ಟ್ರೀಯ ಹೆದ್ದಾರಿ ಅUಲೀಕರಣದ ಪ್ರಸ್ತಾಪ ಇರೋದು ತುಂಬಾ ಹಿಂದೇನೆ…ನಾನು ಚಿಕ್ಕವಳಿರುವಾಗಲೆ ‘ಹೈವೆ ಅಗಲ ಮಾಡ್ತರ ಕಡಾ. ನಿಮ್ಮನಿ ಹೋತಿದೇ’ ಎಂದು ಅವರಿವರು ಮಾತನಾಡುವುದನ್ನು ಕೇಳುತ್ತಲೇ ಬೆಳೆದವಳು ನಾನು. ಅಗಲೀಕರಣದ ಪ್ರಸ್ತಾಪ ಬಂದಾಗಲೆಲ್ಲ ಏನೋ ಸಂಕಟ. ಮತ್ತೆ ಅದು ನೆನೆಗುದಿಗೆ ಬಿದ್ದರೆ ಸಮಾಧಾನ. ಏಕೆಂದರೆ ಅಗಲೀಕರಣದ ನೇರ ಪ್ರಭಾವ ಆಗುತ್ತಿದ್ದುದು ನಮ್ಮ ಮನೆಯ ಮೇಲೆಯೇ. ಈಗಿನ ರಸ್ತೆಗೆ ನಿಗದಿ ಪಡಿಸಿದ ಅಂತರಕ್ಕಿಂತ ಸ್ವಲ್ಪವೇ ಸ್ವಲ್ಪ ದೂರದಲ್ಲೇ ಮನೆ ಇತ್ತು. ರಸ್ತೆ ಅಗಲೀಕರಣವಾದರೆ ಮನೆಯ ಅರ್ಧಭಾಗವನ್ನೇ ಅಗಲೀಕರಣದ ಹೆಸರಲ್ಲಿ ಕಳೆದುಕೊಳ್ಳಬೇಕಾಗುತ್ತಿತ್ತು. ಆದರೆ ಅದು ಬರಿ ರೂಮರ್ ಹಂತದಲ್ಲೇ ಇದ್ದುದರಿಂದ ಮತ್ತು ಸರಕಾರದ ಯೊಜನೆಗಳು ಹೇಳಿ, ಪ್ರಸ್ತಾವನೆ ಸಲ್ಲಿಸಿ, ಅನುಷ್ಟಾನಕ್ಕೆ ಬರುವಷ್ಟರಲ್ಲಿ ಒಬ್ಬ ವ್ಯಕ್ತಿಯ ಆಯಸ್ಸು ಮುಗಿದೇ ಹೊಗುತ್ತಿರುವುದರಿಂದ ಹೆಚ್ಚಿಗೆ ಯೋಚಿಸಿ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡಿದ್ದೆವು. ‘ಬಿಡು, ನಾನಿರುವವರೆಗೆ ಅದು ಆಗೋದಿಲ್ಲ. ನಂತರ ನೀವೇನಾದ್ರೂ ಮಾಡ್ಕೊಳ್ಳಿ’ ಅಪ್ಪ ನಿಶ್ಚಿಂತರಾಗಿದ್ದರು. ಆದರೂ ಅಗಲೀಕರಣ ಎಂದ ಕೂಡಲೇ ಮತ್ತೆ ಭಯ.. ‘ಎಷ್ಟು ಅಗಲ ಮಾಡ್ತಾರಂತೆ..?’ ಎನ್ನುವ ಪ್ರಶ್ನೆ, ಜೊತೆಗೆ ‘ಎಷ್ಟು ಅಗಲ ಮಾಡಿದರೆ ನಮ್ಮ ಮನೆ ಹೋಗೋದಿಲ್ಲ, ಎಷ್ಟು ಅಗಲ ಮಾಡಿದರೆ ನಮ್ಮ ಮನೆಯ ಎಷ್ಟು ಕೋಣೆಗಳು ಹೋಗುತ್ತವೆ?’ ಎನ್ನುವ ಲೆಕ್ಕಾಚಾರ.
ಈ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ನಾನು ತುಂಬಾ ಚಿಕ್ಕವಳಿದ್ದೆ. ಬಹುಶಃ ಒಂದನೇ ತರಗತಿ. ಮನೆ ತುಂಬಾ ನೆಂಟರು, ಬಂಧು ಬಳಗ. ‘ನನ್ನ ಮನೆ’ ಎಂದು ಹೆಮ್ಮೆಯಿಂದ ಅತ್ತಿತ್ತ ಓಡಾಡುತ್ತಿದ್ದವಳನ್ನು ಯಾರೋ ಒಬ್ಬರು ವಿಘ್ನ ಸಂತೋಷಿ ಎತ್ತಿಕೊಂಡು ‘ಹೈವೆ ಪಕ್ಕ ಮನೆ ಕಟ್ಟಿಸಿದ್ದೀರಿ, ರಸ್ತೆ ಮೇಲೆ ಓಡಾಡೋ ಗಾಡಿ ತಪ್ಪಿ ನಿಮ್ಮ ಮನೆ ಮೇಲೆ ಬಂದು ಬಿಟ್ಟರೆ ಏನು ಮಾಡ್ತಿ’ ಎಂದು ತಲೆಗೆ ಹುಳ ಬಿಟ್ಟು ಸತಾಯಿಸಿ ಬಿಟ್ಟಿದ್ದರು. ‘ಕಂಪೌಂಡ ದಾಟಿ ಇಷ್ಟು ದೂರ ಇರುವ ಮನೆಗೆ ಗಾಡಿ ಹೇಗೆ ನುಗ್ಗುತ್ತದೆ’ ಎಂದು ಯೋಚಿಸದ ನಾನು ಅದನ್ನೇ ನಿಜ ಎಂದುಕೊಂಡು ಕಂಗಾಲಾಗಿದ್ದೆ. ಅಪ್ಪ ಅಣ್ಣ ಕುಳ್ಳಿರಿಸಿಕೊಂಡು ಅದನ್ನು ವಿವರಿಸಿ ತಿಳಿ ಹೇಳುವವರೆಗೆ.
ಮನೆಯ ಮುಂದಿನ ಕಾಲುವೆಯಲ್ಲಿ ದೂರದ ನಮ್ಮ ಗದ್ದೆಯ ಪಕ್ಕ ಇರುವ ಸಿಡ್ಲಗುಂಡಿ ಕೆರೆಯಿಂದ ತಂದ ನೀರು ತುಂಬಿ ಹರಿಯುತ್ತಿತ್ತು. ಗದ್ದೆಗೆ ತೋಟಕ್ಕೆ, ಕಬ್ಬಿನಗದ್ದೆಗೆಲ್ಲ ಅದೇ ನೀರು. ಗೃಹಪ್ರವೇಶದ ಆಸುಪಾಸಿನಲ್ಲಿ ಬಂದ ಸುಶಿಲಕ್ಕೋರ ಮಗ ರವಿ ನನ್ನನ್ನು ಆ ಕಾಲುವೆಗೆ ದೂಡಿ ಹಾಕಿದ್ದ. ಮೈ ಕೈ ಒದ್ದೆ, ಹೊಸ ಬಟ್ಟೆಯೆಲ್ಲ ಒದ್ದೆಯಾಗಿ ಅಳುತ್ತ ಒಳಗೆ ಓಡಿದ್ದೆ. ರವಿಯ ತಂದೆ ಜಿ.ಆರ್ ನಾಯಕರು ನನ್ನನ್ನು ಸಮಾಧಾನ ಮಾಡಿ ಆತನಿಗೆ ಎರಡೇಟು ಹಾಕಿದ ನೆನಪು.
‘ಮನೆ ಕಟ್ಟಲು ಹತ್ತು ವರ್ಷ ಬೇಕಾಯ್ತು’ ಅಮ್ಮ ಈಗಲೂ ನಗುತ್ತಿರುತ್ತಾರೆ. ಅಪ್ಪ ಅಮ್ಮ ಶಿಕ್ಷಕರಾಗಿದ್ದರೂ ಕೇವಲ ಸಂಬಳವೊಂದನ್ನೇ ನೆಚ್ಚಿಕೊಂಡಿದ್ದ ಕಾಲ ಅದು. ಅದರಲ್ಲೂ ಅಪ್ಪ ಮನೆ ಕಟ್ಟಲು ಎಲ್ಲಿಯೂ ಸಾಲ ಮಾಡಲೆ ಬಾರದು ಎಂದು ಹಠ ಹಿಡಿದವರಂತೆ ತಿಂಗಳ ಸಂಬಳದಲ್ಲೇ ಉಳಿಸಿ, ಉಳಿಸಿ ಮನೆಗಾಗಿ ವಿನಿಯೋಗಿಸುತ್ತಿದ್ದರಂತೆ. ಪ್ರತಿ ಕಲ್ಲೂ, ಪ್ರತಿಯೊಂದು ಅಂಗುಲ ಅಂಗುಲವೂ ಅಪ್ಪನ ಶ್ರಮ, ಅಮ್ಮನ ತ್ಯಾಗವನ್ನು ನೆನಪಿಸುವ ಈ ಮನೆಯೆಂದರೆ ನಿಜಕ್ಕೂ ಹೆಮ್ಮೆ. ಮನೆ ಕಟ್ಟುವ ಖರ್ಚಿನ ಜೊತೆಗೆ ಬೆಳೆಯುತ್ತಿರುವ ಇಬ್ಬರು ಮಕ್ಕಳ ಖರ್ಚು, ಕೆಲವರನ್ನು ಓದಿಸುವ ಜವಾಬ್ಧಾರಿ ಕೂಡ ಅವರ ಮೇಲಿತ್ತು. ಇಷ್ಟಾದರೂ ಯಾವುದಕ್ಕೂ ಕೊರತೆ ಇಲ್ಲದಂತೆ ನಮ್ಮನ್ನು ಬೆಳೆಸಿದ್ದರು ಅಪ್ಪ. ಏನನ್ನೂ ಕೇಳದೇ, ಇದ್ದುದgಲ್ಲಿ ಸಮಾಧಾನ ತಾಳುತ್ತಿದ್ದ ಅಣ್ಣ, ಕಂಡಿದ್ದು, ಕೇಳಿದ್ದು ತಕ್ಷಣ ಬೇಕೆಂದು ಹಠ ಹಿಡಿಯುತ್ತಿದ್ದ ನಾನು, ಆದರೂ ಅಪ್ಪ ಅದು ಹೇಗೆ ಎಲ್ಲವನ್ನು ಇಲ್ಲ ಎನ್ನದೇ ಕೊಡಿಸುತ್ತಿದ್ದರು ಎಂಬುದು ನನಗೀಗಲೂ ಅಚ್ಚರಿಯ ವಿಷಯ.

ಬಾಡಿಗೆ ಮನೆಯಲ್ಲಿದ್ದವರಿಗೆ ಸ್ವಂತ ಮನೆಗೆ ಹೋಗುವ ಮಜವೇ ಬೇರೆ. ಯಾವಾಗ ರಜೆ ಪ್ರಾರಂಭವಾಗುತ್ತದೆಯೋ, ನಾನು ಯಾವಾಗ ಊರಿಗೆ ಹೋಗುತ್ತೇನೆಯೋ ಎಂದು ಕನವರಿಸುವುದು, ಕಾತರಿಸುವುದು ನಿಜಕ್ಕೂ ಬಾಲ್ಯದ ಸವಿ ನೆನಪುಗಳಲ್ಲೊಂದು. ಯಾಕೆಂದರೆ ಈಗಿನಂತೆ ಬೇಕೆನಿಸಿದಾಗ ಹೋಗಿ ಬರುವಂತಿರಲಿಲ್ಲ. ನಾವಿದ್ದ ಸಿರಸಿಯ ಹಳ್ಳಿಯಿಂದ ನಮ್ಮೂರಿಗೆ ಇರುವುದು ದಿನಕ್ಕೆ ಮೂರೋ ನಾಲ್ಕೋ ಬಸ್. ದೇವಿಮನೆ ಘಟ್ಟ ಹತ್ತಿ, ಇಳಿದು ಬರುವಷ್ಟರಲ್ಲಿ ಹೊಟ್ಟೆಯಲ್ಲಿದ್ದುದನ್ನೆಲ್ಲ ಘಟ್ಟದ ತಿರುವಿಗೆ ಆಪೋಷಣ ನೀಡಬೇಕಾಗುತ್ತಿತ್ತು. ಹೀಗಾಗಿ ವರ್ಷದ ಎರಡು ರಜೆಯನ್ನೇ ಕಾಯಬೇಕಾದ ಅನಿವಾರ್‍ಯತೆ. ಅಕ್ಟೋಬರ್ ಮುಗಿದರೆ ಎಪ್ರಿಲ್ ಯಾವಾಗ ಬರುತ್ತದೋ ಎಂದು ಕಾಯುವುದು, ಮೇ ಮುಗಿದರೆ ಮಳೆಗಾಲ ಕಳೆದು ಅಕ್ಟೋಬರ್ ಎಂದು ಬರುತ್ತದೋ ಎಂದು ನಿರೀಕ್ಷಿಸುವುದು. ಮನೆಗೆ ಬಂದರೆ ಆರು ತಿಂಗಳ ಧೂಳು ಇಡೀ ಮನೆಯನ್ನು ತುಂಬಿರುತ್ತಿತ್ತು. ಆದರೂ ಸ್ವಂತ ಮನೆಗೆ ಬಂದ ಉಮ್ಮೇದಿಯಲ್ಲಿ ಸ್ವಚ್ಛಗೊಳಿಸುವ ಕೆಲಸಕ್ಕೆ ನಾವೂ ಕೈ ಜೋಡಿಸುತ್ತಿದ್ದೆವು. ೬-೭ನೇ ತರಗತಿಗೆ ಬರುವಷ್ಟರಲ್ಲಿ ಅಪ್ಪ ಊರಿಗೆ ಹೊರಟಾಗಲೆಲ್ಲ ನನ್ನದೂ ಹಠ. ‘ನಾನೂ ಬರುತ್ತೇನೆ.’ ಬೆಳಿಗ್ಗೆ ಬಂದು ಗಿಡಮರಗಳಿಗೆಲ್ಲ ನೀರು ಹಾಕಿ ಸಂಜೆ ಹೊಗುವ ಗಡಿಬಿಡಿಯಲ್ಲಿ ನನಗೆ ಮನೆಗೆ ಬರುವ ಖುಷಿ. ಅಪ್ಪ ಏನಾದರು ಬೇಡ ಎಂದರೆ ಅಳುವೇ ಬಂದು ಬಿಡುತ್ತಿತ್ತು. ಬಹುಶಃ ಅಷ್ಟರಲ್ಲಾಗಲೇ ಅಣ್ಣ ಬಿ.ಇ.ಗೆಂದು ದಾವಣಗೆರೆಗೆ ಹೊರಟಾಗಿತ್ತು. ಏಕಾಂಗಿತನ ಮನೆಯ ಬಗ್ಗೆ ಹೆಚ್ಚಿನ ಅಟ್ಯಾಚ್‌ಮೆಂಟ್ ಬೆಳೆಯಲು ಕಾರಣವಾಗಿರಲೂಬಹುದು. ನಂತರದ ದಿನಗಳಲ್ಲಿ ‘ನಾನೊಬ್ಬಳೇ ಹೋಗಿ ನೀರು ಹಾಕಿ ಬರುತ್ತೇನೆ’ ಎಂದು ಒಬ್ಬಳೆ ಬರುತ್ತಿದ್ದುದೂ ಇತ್ತು.
ಮನೆಯಲ್ಲೊಂದು ಚಿಕ್ಕ ಲೈಬ್ರರಿ. ದಿನ ದಿನಕ್ಕೂ ಹೆಚ್ಚುತ್ತಿರುವ ಪುಸ್ತಕಗಳ ಸಂಖ್ಯೆಯನ್ನು ಕಂಡ ಅಪ್ಪ ಚೆಂದದ ಬುಕ್ ರಾಕ್ ಒಂದನ್ನು ಮಾಡಿಸಿಕೊಟ್ಟಿದ್ದರು. ‘ಇಡೀ ದಿನ ಪುಸ್ತಕ ಓದ್ತಾ ಇದ್ರೆ ಅಡುಗೆ ಕಲಿಯೋದು ಯಾವಾಗ?’ ಅಮ್ಮ ರೇಗುತ್ತಿದ್ದರೆ ‘ಕಲಿತಾಳೆ ಬಿಡು’ ಅಪ್ಪ ಸಪೋರ್ಟಗೆ ನಿಲ್ಲುತ್ತಿದ್ದರು.
ಅಣ್ಣ-ತಂಗಿ ಜಗಳ ಮಾಡಿಕೊಂಡು ನಾಲ್ಕಾರು ದಿನ ಮಾತು ಬಿಟ್ಟಿದ್ದು, ಇಡೀ ಮನೆಯ ಮಕ್ಕಳೆಲ್ಲ ಸೇರಿ ಆಟ ಆಡಿದ್ದು, ಮಾಳಿಗೆಯಿಂದ ಬಿದ್ದು ಗಾಯ ಮಾಡಿಕೊಂಡಿದ್ದು, ಮಾಳಿಗೆಯ ಮೇಲೆ ಕುಳಿತು ಬೀಳುವ ಮಳೆಗೆ ಕಾಲನ್ನು ಇಟ್ಟುಕೊಂಡು ಮಳೆಯ ಖುಷಿ ಅನುಭವಿಸಿದ್ದು, ಮದುವೆ, ಮಕ್ಕಳಿಬ್ಬರೂ ಹುಟ್ಟಿದ್ದು, ಅವರ ಆಟ, ಜೀವನದ ಅತೀ ಖುಷಿಯ ಕ್ಷಣಗಳನ್ನು ಕಳೆದದ್ದು ಎಲ್ಲವೂ ಪದೇ ಪದೇ ನೆನಪಾಗುತ್ತದೆ.
ಜೀವನದ ಹಲವಾರು ಖುಷಿ ಕ್ಷಣಗಳನ್ನು ಕಳೆದಂತೆ ನೋವಿನ ಕ್ಷಣಗಳಿಗೇನೂ ಕಡಿಮೆಯಿಲ್ಲ. ‘ನಡೆದಾಡೋಕೆ ಆಗೋದಿಲ್ಲ ಏನಿಲ್ಲ, ಯಾಕೆ ಬರೋಕೆ ಹೋಗ್ತಿ? ಒಂದು ಫೋನ್ ಮಾಡಿದ್ರೆ ನಾನೇ ಬರ್‍ತಿರಲಿಲ್ವ?’ ನನ್ನನ್ನು ನೋಡಬೇಕು ಎಂದೇ ಆ ವೃದ್ದಾಪ್ಯದಲ್ಲೂ ತಡವರಿಸುತ್ತ ಬಂದ ಅಜ್ಜ (ಅಪ್ಪನ ಚಿಕ್ಕಪ್ಪ)ನನ್ನು ‘ನಿನ್ನ ಜೊತೆ ಒಂದು ದಿನ ಈ ಮನೇಲಿ ಇರ್‍ತೇನೆ’ ಎಂದರೂ ಕೇಳದೆ, ‘ಮೊದಲು ಸ್ವಲ್ಪ ಹುಷಾರಾಗು, ನಂತರ ಇಟ್ಟುಕೊಳ್ತೇನೆ’ ಎಂದು ಗದರಿಸಿ ಒತ್ತಾಯದಿಂದ ಚಿಕ್ಕಪ್ಪನ ಮನೆಗೆ ಬಿಟ್ಟು ಬಂದಿದ್ದೆ. ಆದರೆ ಮಾರನೇ ದಿನವೇ ತೀರಿಕೊಂಡ ಅಜ್ಜನನ್ನು ಈ ಮನೆಯಲ್ಲಿ ಇಟ್ಟುಕೊಂಡು ಅವರ ಕೊನೆಯಾಸೆ ಈಡೇರಿಸಲು ಆಗಲಿಲ್ಲ ಎಂಬ ನೋವು ನನಗೀಗಲೂ ಇದೆ. ಮನೆಯ ಮುಂದೆಯೇ ಯಾರೋ ಅಪರಿಚಿತ ಬೈಕ್‌ನವನು ಗುದ್ದಿ ಕಾಲುಮುರಿದುಕೊಂಡು ಬಿದ್ದಿದ್ದ ಅಪ್ಪನ ಆ ಚಿತ್ರ ಈಗ ನೆನಪಾದರೂ ತಕ್ಷಣ ಅಪ್ಪನ ಬಳಿ ಹೋಗಿಬಿಡಲೇ ಎನ್ನುವ ನೋವು ಈಗಲೂ ಕಾಡುತ್ತದೆ. ಆ ಮನೆಯಲ್ಲಿ ಮುಚ್ಚಟೆಯಾಗಿ ಬೆಳೆಸಿದ್ದ ಅಮ್ಮನ ನೆನಪಾದರೆ ಮತ್ತೆ ಅಮ್ಮನ ಮಡಿಲಲ್ಲಿ ಮಗುವಾಗಿ ಬಿಡಲೇ ಎನ್ನುವ ಆಸೆ ಉಮ್ಮಳಿಸುತ್ತದೆ. ತಾನು ಪಡೆದುಕೊಂಡಿದ್ದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ನನಗೆ ನೀಡಿ ‘ನನ್ನ ತಂಗಿ ಸಾಧಿಸುತ್ತಾಳೆ’ ಎಂದು ಹೆಮ್ಮೆ ಪಡುತ್ತಿದ್ದ ಅಣ್ಣನನ್ನು ನೆನೆಸಿಕೊಂಡರೆ ದೊಡ್ಡವಳಾಗಲೇಬಾರದಿತ್ತು ಎನ್ನಿಸಿ ಅಳು ಉಕ್ಕುತ್ತದೆ.
 
ಜೀವನದ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಂತ ಮನೆ ನನ್ನ ಪಾಲಿಗೆ ಕೇವಲ ಕಲ್ಲು ಸಿಮೆಂಟಿನ ಕಟ್ಟಡವಲ್ಲ. ನನ್ನ ಪಾಲಿಗೆ ಮನೆಗೂ ಕೂಡ ಒಂದು ಜೀವವಿದೆ. ಮನೆಯಲ್ಲಿ ಬೀಗ ಹಾಕಿಟ್ಟು ಹೋದರೂ ಯಾರೂ ಇಲ್ಲದೇ ತಿಂಗಳುಗಟ್ಟಲೆ ಉಳಿದು ಬಿಡಬಲ್ಲೆ ಎಂಬುದು ಹೆಮ್ಮೆಯ ಮಾತಲ್ಲ. ಅದು ಈ ಮನೆಯ ಬಗ್ಗೆ ಇರುವ ಪ್ರೀತಿಯ ವಿಷಯ. ಇನ್ನು ಕೆಲವೇ ತಿಂಗಳುಗಳಲ್ಲಿ ರಾಷ್ಟ್ರಿಯ ಹೆದ್ದಾರಿಯ ಅಗಲೀಕರಣಕ್ಕೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದಾದ ಮನೆಯ ನೆನಪಾದರೆ ಏನೋ ಸಂಕಟಕ್ಕೆ ಹೈಕೋರ್ಟ ಉದಾರತೆ ತೋರಿದೆ. ಮುಂದಿ ಆದೇಶ ಬರುವವರೆಗೆ ಯಥಾಸ್ಥಿತಿ ಕಪಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ. ಕೊನೆಯ ಪಕ್ಷ ಅಪ್ಪ ಅಮ್ಮ ಇರುವವರೆಗಾದರೂ ಆ ಮನೆ ಹಾಗೇ ಇರಲಿ ಎನ್ನುವ ನನ್ನ ಆಶಯಕ್ಕೆ ಸ್ವಲ್ಪ ನೀರೆರೆದಂತಾಗಿದೆ. ಮನೆಯ ಪಕ್ಕದಲ್ಲೇ ಇರುವ ವಿಜಯ ನಗರದ ಅರಸರ ಸಪ್ತ ರಾಣಿಯರ ಸಮಾಧಿ, ಕೃಷ್ಣದೇವರಾಯನ ಕಾಲದ ಸ್ಮಾರಕಗಳು ಪುರಾತತ್ವ ಇಲಾಖೆಯ ಸುಪರ್ದಿಗಾದರೂ ಸೇರಿದರೆ ಅವನ್ನು ಉಳಿಸುವ ನೆಪದಲ್ಲಾದರೂ ನನ್ನ ತವರು ಉಳಿದೀತು ಎಂದು ಕಾಯುತ್ತಿದ್ದೇನೆ…..
ಇದನ್ನೆಲ್ಲ ಹೇಳಿಕೊಳ್ಳಬೇಕೋ ಬೇಡವೋ ಗೊತ್ತಿಲ್ಲ. ಆದರೂ ನಿಮ್ಮೊಡನೆ ಹಂಚಿಕೊಳ್ಳಬೇಕು ಅನ್ನಿಸಿದ್ದಕ್ಕೆ ಹೇಳಿಕೊಂಡಿದ್ದೇನೆ……………
 

‍ಲೇಖಕರು G

21 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading