ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಧ್ಯಮ ವರ್ಗದ ಬದುಕೆಂದರೆ…’ – ಜಯಶ್ರೀ ಬರೀತಾರೆ

ಜಯಶ್ರೀ ಬಿ ಕದ್ರಿ

ಇತ್ತಿಚೆಗೆ ನಾನು ಕೆ.ಸತ್ಯನಾರಾಯಣ ಅವರ ಪ್ರಬಂಧವನ್ನೊಂದು ಓದಿದೆ. ‘ಸರಿ ಹೊತ್ತಿನಲ್ಲಿ ಆರ್ವೆಲ್ ಜೊತೆ’ ಎಂದು ಅದರ ಹೆಸರು. ಮಧ್ಯಮ ವರ್ಗದವರನ್ನು ಟೀಕಿಸುವವರೇ ಜಾಸ್ತಿಯಾಗಿರುವಾಗ ಮಧ್ಯಮ ವರ್ಗದವರಲ್ಲಿನ ಘನತೆಯ ಬಗ್ಗೆ ಅವರು ಬರೆಯುತ್ತಾರೆ. ಮಧ್ಯರಾತ್ರಿಯಲ್ಲಿ ಎದ್ದು ಬೆಳಗ್ಗೆ ಬೇಗ ಟ್ರೈನಿಗೆ ಹೋಗುವ ಮಗನಿಗೋಸ್ಕರ ತಿಂಡಿ ಬೇಯಿಸುವ ತಾಯಿ, ರೋಗಗ್ರಸ್ಥ ಹೆಂಡತಿಯನ್ನು ನೋಡಿಕೊಳ್ಳುವ ಗಂಡ, ತಮ್ಮ ತಂಗಿಯರಿಗೋಸ್ಕರ ತ್ಯಾಗ ಮಾಡುವ ಅಣ್ಣಂದಿರು…. ಹೀಗೆ ನನಗೂ ಹೌದೆಂದೆನಿಸಿತು.
ಒಂದು ಟಿಪಕಲ್ ಮಧ್ಯಮ ವರ್ಗದ ದೈನಂದಿನ ಜೀವನ ಹೀಗಿರುತ್ತದೆ. ಬೆಳಗಾಗೆದ್ದು ರಂಗೋಲಿ ಹಾಕಿ (ಹಾಕುವುದಿದ್ದರೆ) ಮನೆಯ ಸ್ವಚ್ಛತೆ, ಅಡಿಗೆ, ಮಕ್ಕಳನ್ನು ಸ್ಕೂಲಿಗೆ ಕಳುಹಿಸುವುದು, ಬಟ್ಟೆ ಬರೆ ಒಗೆಯುವುದು, ಸಂಜೆಯ ತಿಂಡಿ, ಭಾನುವಾರವಾದರೆ ವಿಶೇಷ ಅಡಿಗೆ, ಸಾಧ್ಯವಾದರೊಂದು ಸಿನಿಮಾ ಇಲ್ಲವೇ ನೆಂಟರೊಂದಿಗೆ ಹರಟೆ. ಇವುಗಳ ನಡುವೆಯೇ ಅವರಿವರ ಬಗ್ಗೆ ಗಾಸಿಪ್, ನೆರೆಮನೆಯವರೊಂದಿಗೆ ಚಿಕ್ಕದಾಗಿ ಜಗಳ…. ಹೀಗೆಲ್ಲ. ಕೆಲಸಕ್ಕೆ ಹೋಗುವವರ ಮನೆ ಇದಕ್ಕೆ ವ್ಯತಿರಿಕ್ತ. ಅಲ್ಲೊಂದು ಸದಾ ಗಡಿಬಿಡಿ, ಆತ್ಮವಿಶ್ವಾಸ, ಗಲಾಟೆ, ಗೌಜಿ ಗೊಂದಲಗಳು, ಅಪರೂಪಕ್ಕೊಮ್ಮೆ ಝಲ್ಲನೆ ಚಿಮ್ಮವ ಪ್ರೀತಿ ವಾತ್ಸಲ್ಯಗಳು ಹೀಗೆ.

ತನ್ನ ಕೃತಿ ‘ದ ಗ್ರೇಟ್ ಇಂಡಿಯನ್ ಮಿಡಲ್ ಕ್ಲಾಸ್ನಲ್ಲಿ’ ಪಾವಂಕ ವರ್ಮಾ ಅವರು ಇದೊಂದು ಅತ್ಯಂತ ಸ್ವಾರ್ಥ ವರ್ಗ ಎನ್ನುತ್ತಾರೆ. ಸರಕಾರಗಳು ತಮ್ಮ ಲಾಭಕ್ಕನುಗುಣವಾಗಿ ಪ್ರವರ್ತಿಸುವಾಗ ತೆಪ್ಪಗಿರುವ ಇವರು ತಮ್ಮ ವಿರುದ್ಧ ಪಾಲಿಸಿಗಳು ಬಂದರೆ ಎಚ್ಚೆತ್ತುಕೊಂಡು ಪ್ರತಿಭಟಿಸುತ್ತಾರೆ ಎನ್ನುವುದು ಅವರ ವಾದ. ತಮ್ಮ ಸೀಮಿತ ವಲಯದ ಹಿತವೊಂದೇ ಅವರ ಪರಮ ಉದ್ದೇಶ ಎನ್ನುವುದು ಒಟ್ಟು ಸಾರಾಂಶ. ಬಹುಶ: ಇದು ಸ್ವಲ್ಪ ಮಟ್ಟಿಗೆ ಸರಿಯಾದರೂ ನಾಣ್ಯದ ಒಂದು ಮುಖ.
ತನಗೊಂದು ನೆಕ್ಲೇಸ್ ಬೇಕೆಂಬ ಬಯಕೆಯನ್ನು ಮಗನ ಇಂಜಿನಿಯರಿಂಗ್ ಓದಿಗೆಂದು ಕೂಡಿಡುವ ಗೃಹಿಣಿ, ಮನೆಯಲ್ಲಿನ ಪೂಜೆಗೋಸ್ಕರ ಆಫೀಸ್ ಪಿಕ್ನಿಕ್ಗೆ ಬಾರದಿರುವ, ಹೆಚ್ಚೇಕೆ ತನ್ನ ಎಟಿಎಂ ಕಾಡರ್್ ಕೂಡ ಗಂಡನ ಕೈಗೆ ಕೊಟ್ಟು ಬಿಡುವ, ಜಾಯಿಂಟ್ ಫ್ಯಾಮಿಲಿಯ ಅಗತ್ಯಕ್ಕನುಗುಣವಾಗಿ ತನ್ನನ್ನು ಒಗ್ಗಿಸಿಕೊಳ್ಳುತ್ತ ಒಳಗೂ ಹೊರಗೂ ದುಡಿಯುವ ಪಾಪದ ಉದ್ಯೋಗಸ್ಥ ಮಹಿಳೆ. ತನ್ನ ಮಗಳ ಮೇಲೆ ಯಾರದರೂ ಕೆಟ್ಟ ದೃಷ್ಟಿ ಬೀರಿದರೆ ಸಾಕು ಹೌಹಾರಿ ಬೆಳಿಗ್ಗೆ ಸಂಜೆ ತಾನೇ ಸ್ಕೂಲಿಗೆ ಕೊಂಡೊಯ್ಯುವ ತಂದೆ, ವಯಸ್ಸಾದ ತಂದೆಯನ್ನು ಊರುಗೋಲಿನಂತೆ ನಡೆಸುವ ಮಗ, ಹಾಸಿಗೆ ಹಿಡಿದ ಅತ್ತೆಯನ್ನು ಶುಶ್ರೂಷೆ ಮಾಡುವ ಸೊಸೆ.. ಹೀಗೆ ಮಧ್ಯಮ ವರ್ಗದ ಏಕತಾನತೆ, ಅಷ್ಟು ಮೆಟೀರಿಯಲ್ ಆಗಿರುವ ಬದುಕಿನಲ್ಲೂ ಒಂದು ರೀತಿಯ ಘನತೆ, ತ್ಯಾಗ ಇದೆ.
ನಮ್ಮ ಇಡೀ ಸಾಮಾಜಿಕ ವ್ಯವಸ್ಥೆಯನ್ನು (ವಿದ್ಯಾಭ್ಯಾಸ, ವಿವಾಹ ಪದ್ಧತಿ, ಸರಕಾರ) ಬದಲಾಯಿಸುವ ಶಕ್ತಿ ಮಧ್ಯಮ ವರ್ಗಕ್ಕಿದೆ. ಉದಾಹರಣೆಗೆ ವಿದ್ಯಾಭ್ಯಾಸ ಪದ್ದತಿ. ದೇಶದಾದ್ಯಂತ ಹೆಚ್ಚುತ್ತಿರುವ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು, ಸೈನ್ಸ್, ಕಲಿಯುವ ಉತ್ಕಟ ಆಕಾಂಕ್ಷೆ… ಒಂದು ರೀತಿಯ ಕ್ರಾಂತಿಯಂತೆಯೇ ನನಗೆ ಭಾಸವಾಗುತ್ತಿದೆ. ಹಾಗೆಯೇ ಸೋಷಿಯಲ್ ನೆಟ್ ವರ್ಕಿಂಗ್ ನಲ್ಲಿ   ರೂಪಿತವಾಗುತ್ತಿರುವ ಜನಾಭಿಪ್ರಾಯ ಕೂಡ.
ತೊಂಭತ್ತರ ದಶಕದಲ್ಲಿ ನಾನು ನೋಡುತ್ತಿದ್ದ ಹೆಚ್ಚಿನ ಸಿನೆಮಾಗಳು ಅದರಲ್ಲೂ ಅನಂತನಾಗ್, ರಾಜ್ಕುಮಾರ್ ಅವರ ಸಿನೆಮಾಗಳು ಮಧ್ಯಮ ವರ್ಗದ ಆಶೋತ್ತರಗಳನ್ನೇ ಪ್ರತಿಬಿಂಬಿಸುತಿದ್ದವು. ಧಾರಾವಾಹಿಗಳೂ ಹಾಗೆಯೇ. ಈಗ ನೋಡಿದರೆ ಸಿನೆಮಾ, ಧಾರಾವಾಹಿಗಳಲ್ಲೂ ನವ್ಯೋತ್ತರ ಛಾಪು ಢಾಳಾಗಿ ಕಾಣಿಸುತ್ತಿದೆ. ಮಧ್ಯಮ ವರ್ಗದ ತಮಾಷೆ ಎಂದರೆ ಅದು ಹಾಲಿವುಡ್ ಸಿನೆಮಾಗಳನ್ನು ರೆಗ್ಯುಲರ್ ಆಗಿ ನೋಡುತ್ತಲೇ ಇತ್ತ ಜಾತಕ, ಗುಡಿ, ಭೂತ ಕೋಲ, ನೇಮ ಹೀಗೆ ಅಪ್ಪಟ ಹತ್ತೊಂಭತ್ತನೇ ಶತಮಾನದಲ್ಲಿ ಇರುತ್ತದೆ. ಹಾಗೆಂದು ರೀತಿ ನೀತಿ, ನಡತೆ, ವರ್ತನೆ ಎಲ್ಲದಕ್ಕೂ ಒಂದು ರೀತಿಯ ಸಂಹಿತೆ ಈ ವರ್ಗಕ್ಕಿದೆ. ಇದನ್ನು ಮೀರಿದರೆ ಇದೇ ವರ್ಗ ಮರ್ಯಾದಾ ಹತ್ಯೆಗೂ ಹೇಸುವುದಿಲ್ಲ ಎಂದು ಇತ್ತೀಚೆಗಿನ ಬೆಚ್ಚಿ ಬೀಳುವ ವರದಿಗಳಿಂದ ತಿಳಿಯಬಹುದು. ಒಟ್ಟಿನ ಮೇಲೆ ಮಧ್ಯಮ ವರ್ಗವೆಂಬುದು ಶಾಂತವಾದರೂ ಅಲ್ಲಲ್ಲಿ ಒಳಸುಳಿಗಳಿರುವ ನದಿಯಿದ್ದಂತೆ.
 

‍ಲೇಖಕರು G

15 December, 2014

6 Comments

  1. mmshaik

    nice artical..mam.

  2. smitha Amrithraj

    nice article

  3. keshava prasad

    ಮಧ್ಯಮ ವರ್ಗದ ಬಗ್ಗೆ ಅತ್ಯುತ್ತಮ ಪ್ರಬಂಧ.

  4. k satyanarayana

    I am very happy that Jayashree Kadri has referred to my essay written 20 years ago.Girija sastry from Mumbai drew my attention to her note. SR Vijayashankar also wrote a column on MANUSHYANA GHANATHE by referring to the same essay.
    Susan Sontag in her book VOlcano Lover has written more receptively on the same topic.
    Jayasrees thoughtful note made me to remember all this.

  5. M A Sriranga

    ತಮ್ಮ ಎಲ್ಲಾ ಸಂಸಾರ ತಾಪತ್ರಯಗಳು, ಆಸೆ,.ನಿರಾಸೆ ಇವುಗಳ ನಡುವೆಯೇ ಸಾಹಿತ್ಯ,ಸಂಗೀತ, ರಾಜ್ಯ-ದೇಶ-ವಿದೇಶಗಳ ಸುದ್ದಿ ಎಂದು ಕೊಂಡು ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಬಾಳುತ್ತಿರುವವರು ಮಧ್ಯಮವರ್ಗದವರು. ಈ ವರ್ಗದವರ ಜೀವನವನ್ನು ತಮ್ಮ ಕತೆಗಳು ,ಕಾದಂಬರಿಗಳು ಮತ್ತು ಪ್ರಬಂಧಗಳ ಮೂಲಕ ಚಿತ್ರಿಸುತ್ತಿರುವವರು ಇಂದು ಬಹುಶಃ ಶ್ರೀ ಕೆ ಸತ್ಯನಾರಾಯಣ ಅವರು ಒಬ್ಬರೇ ಎಂದು ಕಾಣುತ್ತದೆ. ಉಳಿದಂತೆ ಇತರ ಸಾಹಿತಿಗಳು ಐಡಿಯಾಲಜಿಗಳೆಂಬ ಮಾಯಾಮೃಗದ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಅವರಿಗೆ ಆ ಮಾಯಾಮೃಗವನ್ನು ನಾವು ಇನ್ನೇನು ಇವತ್ತಲ್ಲ ನಾಳೆ ಹಿಡಿಯುತ್ತೇವೆ. ಅಂದು ನಮ್ಮ ಎಲ್ಲಾ ಸಮಸ್ಯೆಗಳಿಗೆ ‘ಸಾಹಿತ್ಯಿಕ’ ಪರಿಹಾರ ಖಾತ್ರಿ ಎಂಬ ಅತಿಯಾದ ಆತ್ಮ ವಿಶ್ವಾಸ. ಅವರ ಈ ಮೇಲಾಟಗಳಿಂದ ಸಾಹಿತ್ಯ ಸೊರಗಿದೆ. ಓದುಗರು ದಿನೇ ದಿನೇ ಸಾಹಿತ್ಯದಿಂದ ದೂರಸರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಶ್ರೀ ಕೆ ಸತ್ಯನಾರಾಯಣ ಅವರು ಸಾಹಿತ್ಯ ಪ್ರೇಮಿಗಳಿಗೆ ಒಂದು ಆಶಾಕಿರಣ.

  6. Jayashree B kadri

    Thank you so much for all these nice comments.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading