ಮಧುಸೂದನ ವೈ ಎನ್
ಚಿನ್ಮಯ ತಾನು ಹೇಗೆ ಹೀಲಿಯಂ ಬಲೂನು ತಯಾರಿಸಬಲ್ಲೆ, ಹೇಗೆ ಮಾಳಿಗೆ ಮೇಲಿಂದ ಹಾರಿಸಬಲ್ಲೆ; ಅದಕ್ಕೊಂದು ಬುಟ್ಟಿ ಕಟ್ಟಿ ತಾನು ಅದರಲ್ಲಿ ಕುಳಿತು ಆಫೀಸು ತಲುಪಬಲ್ಲೆ- ಎಂದು ಹಾಸಿಗೆ ಮೇಲೆ ಉರುಳಾಡುತ್ತ ಯೋಜನೆ ರೂಪಿಸುತ್ತಿದ್ದನು. ಇದು ಸಾಧ್ಯವಾದರೆ ನರಕದ ದಾರಿ ರಿಂಗ ರೋಡಿನಿಂದ ಪಾರು. ನರಕದ ಸ್ಟಾಪುಗಳಾದ ಟಿನ್ ಫ್ಯಾಕ್ಟರಿ, ಮಾರತ್ತಳ್ಳಿ, ಸಿಲ್ಕಬೋರ್ಡುಗಳಿಂದ ಮುಕ್ತಿ.
ಅಂಕುಡೊಂಕುಗಳಿಲ್ಲದ ಗುಂಡಿ ಗುದ್ದರಗಳಿಲ್ಲದ ಸರಳ ರೇಖೆಯಲ್ಲಿ ಗಾಳಿಯಲ್ಲಿ ತೇಲುವುದು ಎಷ್ಟು ಮಜವಾಗಿರುತ್ತದೆ- ಏಕ್ದಂ ಸ್ವರ್ಗ ಪಥವಾಗಿಬಿಡುತ್ತದೆ. ಬೆಳಗ್ಗೆ ಏಳುವುದು ತಡವಾದರೆ ಬುಟ್ಟಿಯಲ್ಲಿ ಕುಳಿತು ತಿಂಡಿ ತಿನಕೊಂತ ಸಿಟಿಯ ಬರ್ಡ್ ವ್ಯೂ ಮಾಡಿಕೊಂಡು ಹೋಗಬಹುದು.
ಖಾರವಿದ್ದರೆ ಬಾಟಲಿ ತೆಗೆದು ಗೊಳ ಗೊಳ ಗೊಳ ನೀರು ಕುಡಿಯಬಹುದು. ತಿಂಡಿಯಲ್ಲಿ ಹಸಿ ಮೆಣಸಿನಕಾಯಿ ತುಂಡು ಸಿಕ್ಕರೆ- ಕೆಳಗೆ ಹಾಕುವುದು ಬೇಡ. ಹೇಗಿದ್ದರೂ ಬುಟ್ಟಿ ತನ್ನದೆ. ಅದರಲ್ಲೊಂದು ಡಸ್ಟ್ ಬಿನ್ ಇಡೋಣ. ಉಪಯೋಗವಾಗುತ್ತದೆ ಎಂದೆಲ್ಲ ಲೆಕ್ಕ ಹಾಕಿದ.
ಚಿನ್ಮಯನಿಗೆ ಐಡಿಯಾ ಅನ್ನು ಸೀರಿಯಸ್ಸಾಗಿ ತಗೊಬೇಕು ಅನಿಸಿತು. ಯಾರು ಯಾರೊ ಏನೇನೊ ಸ್ಟಾರ್ಟಪ್ ತೆಗಿತಾರಂತೆ.

ಎಲೆಕ್ಟ್ರಿಕ್ ಸ್ಕೂಟರುಗಳು ಬರುತ್ತಿದಾವಂತೆ. ನಾನು ಬಲೂನು ಕಂಪನಿ ಶುರು ಮಾಡಿದರೆ ಎಲೆಕ್ಟ್ರಿಕ್ ಸ್ಕೂಟರುಗಳಿಗಿಂತ ಹತ್ತು ಹೆಜ್ಜೆ ಮುಂದೆ. ಸ್ಟಿವ್ ಜಾಬ್ಸ್ ಹೇಳುತ್ತಾನೆ- ಯಶಸ್ವಿ ಪುರುಷರಿಗೂ ಸಾಧಾರಾಣ ಪುರುಷರಿಗೂ ಇರುವ ವ್ಯತ್ಯಾಸವೇನಂದರೆ ಯಶಸ್ವೀ ಪುರುಷ ಅಂಟಿಕೊಂಡ ಕುಂಡಿಯನ್ನು ಅಲುಗಾಡಿಸಿ ಎದ್ದು ಆಗಬೇಕಿರುವ ಕೆಲಸದ ಸಲುವಾಗಿ ಕಾಲ್ ಮಾಡುತ್ತಾನಂತೆ.
ಸೋಂಬೇರಿ ಕೂತಲ್ಲೆ ಕೂತಿರುತ್ತಾನಂತೆ. ತಾನೂ ಎದ್ದು ಯಾರಿಗಾದರೂ ಕಾಲ್ ಮಾಡಬೇಕು ಅನಿಸಿತು. ಯಾರಿಗೆ ಏನಂತ ಮಾಡುವುದು? ಕನಿಷ್ಠ ಗೂಗಲ್ ಮಾಡುವ ಎಂದುಕೊಂಡ. ಸಿಂಬಾಲಿಕಲಿ.
ಇತ್ತೀಚೆಗಷ್ಟೆ ಡ್ರೋನ್ ಹಾರಾಟ ನಿಯಂತ್ರಿಸಲು ಸರಕಾರ ಹೊಸ ಕಾನೂನು ಮಾಡಿತ್ತು. ಬಲೂನಿಗೂ ಅಂತಹುದೇನಾದರೂ ಕಾಯ್ದೆ ಇದ್ದಿರಬಹುದಾ, ಗೂಗಲ್ ನಲ್ಲಿ ಹುಡುಕಿದ. ಫಲಿತಾಂಶ ಅಸ್ತವ್ಯಸ್ತ. ಇವನು ಹುಡುಕಿದ್ದು ಏನೊ ಅದು ತೋರಿಸಿದ್ದು ಇನ್ನೇನೊ.
ಇಂಟರ್ನೆಟ್ಟು ಬಲೂನಿಗಿರುವ ಕಾನೂನು ಬದಲಾಗಿ ಬೇರೆ ದೇಶಗಳಲ್ಲಿನ ಹೀಲಿಯಂ ಬಲೂನಿನ ಹಬ್ಬಗಳ ಲಿಂಕುಗಳನ್ನು ತೋರಿಸಿತು. ಅಂದರೆ ಗೂಗಲ್ಲಿನಂತಹ ಗೂಗಲ್ಲಿಗೆ ತಾನು ಬೆಳ್ಳಂ ಬೆಳಿಗ್ಗೆ ಹಿಂದೆಂದೂ ಯಾರೂ ಕೇಳಿರದ ಹೊಚ್ಚ ಹೊಸ ಅಚ್ಚರಿಯ ಪ್ರಶ್ನೆ ಹಾಕಿದ್ದೇನೆ, ನನ್ನ ಪ್ರಶ್ನೆಗೆ ಗೂಗಲ್ ತತ್ತರಿಸಿಬಿಟ್ಟಿದೆ ಎಂದು ಹಿಗ್ಗಿದ.
“ಟೈಮ್ ಒಂಭತ್ತು ಗಂಟೆ ಆಯ್ತೂ”,
ಇದರ ಪೇಟೆಂಟ್ ತಗೊಂಡರೆ ಹೇಗೆ? ಅಪ್ರಾಯ್ಸಲ್ ಸಮಯದಲ್ಲಿ “ಇನ್ನೋವೇಶನ್” ಕೆಳಗೆ ಭರ್ತಿ ತುಂಬಿಸಬಹುದು. “ಹೀಲಿಯಂ ಬಲೂನಿನ ಮೂಲಕ ನಗರದೊಳಗೆ ಸುಗಮ ಸಂಚಾರ”- ಪೇಟಂಟಿನ ಶೀರ್ಷಿಕೆಯಾಗಿರುತ್ತದೆ. ಪತ್ರಿಕೆಗಳಲ್ಲಿ ಬರುತ್ತದೆ. ದೃಶ್ಯ ಮಾದ್ಯಮಗಳು ಸಂದರ್ಶನಕ್ಕೆಂದು ಕರೆಯುತ್ತಾರೆ; ಇಲ್ಲ, ಅವರೇ ಮನೆಗೆ ಬರುತ್ತಾರೆ. ಮನೆಯ ಎದುರು ಆಂಟೆನಾ ಹೊತ್ತ ಕಾರುಗಳು ಸಾಲಾಗಿ ನಿಂತಿರುತ್ತವೆ. ತನ್ನ ಯಶೋಗಾಥೆಯನ್ನು ಹೇಗೆ ಅರ್ಟಿಕ್ಯುಲೇಟ್ ಮಾಡಬೇಕು, ಎಲ್ಲಿಂದ ಆರಂಭಿಸಬೇಕು, ಯಾರನ್ನೆಲ್ಲ ಕೋಟ್ ಮಾಡಬೇಕು, ತಾನು ಎಂಥ ನಿರ್ಗತಿಕ ಸ್ಥಿತಿಯಿಂದ ಮೇಲೆ ಬಂದೆ – ಯಾಕೊ ಮಾತು ತುಸು ಡ್ರೋನ್ ಪ್ರತಾಪನ ದಿಕ್ಕಿನಲ್ಲಿ ಹೊರಳುತ್ತಿದೆಯಲ್ಲ, ಥೋ ಥೋ- ಅವನು ಮಗ್ಗುಲು ಬದಲಿಸಿದ.

ಇದೆಲ್ಲ ಸರಿ, ಬಲುನುಗಳು ಹಾರುವಾಗ ಒಂದಕ್ಕೊಂದು ಢಿಕ್ಕಿ ಹೊಡೆದುಕೊಳ್ಳುವುದಿಲ್ಲವೇ? ಪ್ರತಿಯೊಬ್ಬರೂ ತಮ್ಮ ಮನೆ- ತಮ್ಮ ಆಫೀಸಿನ ನಡುವೆ ನೇರ ಗೆರೆ ಎಳಕೊಂಡು ಕೂತರೆ ಆಕಾಶದ ತುಂಬ ಮಗು ಹಾಳೆ ಮೇಲೆ ಗೀಚಿದಂತೆ ಗೀರುಬಾರು ಮಾರ್ಗಗಳಾಗುತ್ತವೆ. ಕಿರ್ಚಾಫ್ ಲಾ ಹಚ್ಚಿ ಗಂಟು ಬಿಡಿಸಿ ಎಂಬ ತಮಾಷೆ ಹುಟ್ಟಿಕೊಳ್ಳುತ್ತದೆ.
ಪರಿಹಾರ? ಪರಿಹಾರವಿದೆ- ಒಂದೊಂದು ರೇಡಿಯೋ ಚಾನೆಲ್ಲಿಗೂ ಒಂದೊಂದು ಫ್ರೀಕ್ವೆನ್ಸಿ ಕೊಟ್ಟಿರುವಂತೆ ಒಂದೊಂದು ಮಾರ್ಗಕ್ಕೆ ಒಂದೊಂದು ಎತ್ತರ ನಿಗದಿ ಮಾಡಬಹುದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಪ್ರೀಕ್ವೆನ್ಸಿ ಕೊಡುವ ಬದಲು ರೂಟಿಗೆ ಒಂದು ಫಿಕ್ಸ್ ಮಾಡಬಹುದು. ಬಿಎಂಟಿಸಿ ರೂಟುಗಳ ತರಹ. ಬನಶಂಕರಿ ಟು ಬನಶಂಕರಿ- ರೂಟ್ ನಂಬರು ೬೦೦!.
ಚಿನ್ಮಯನಿಗೆ ತನ್ನೊಬ್ಬನಿಗೆ ಮಾಡಿಕೊಳ್ಳುವ ಎಂದುಕೊಂಡಿದ್ದ ವ್ಯವಸ್ಥೆಯನ್ನು ಇದೀಗ ಎಲ್ಲರಿಗೂ ವಿಸ್ತರಿಸಲು ಹೋಗಿ ಐಡಿಯಾ ತನ್ನ ನಿಯಂತ್ರಣ ಮೀರುತ್ತಿದೆ ಅನಿಸಿತು. ಈಗ ಆತ ಮನೆಯಿಂದ ನೇರ ಆಫೀಸಿಗೆ ಹಾರುವಂತಿಲ್ಲ. ಸ್ಥಳೀಯ ಬಲೂನು ಸ್ಟಾಪಿನ ತನಕ ಹೋಗಿ ಅಲ್ಲಿ ನಿಗದಿತ ಮಾರ್ಗದಲ್ಲಿ ಕ್ಯೂ ನಿಂತು ಹಾರಬೇಕು. ಫ್ಲೈಟುಗಳ ಟೈಪು. ಆಗ ಬಹುಶಃ ಒಂದು ಬುಟ್ಟಿಯಲ್ಲಿ ನಾಲ್ಕು ಮೂಲೆಯಲ್ಲಿ ನಾಲ್ಕು ಜನರನ್ನು ಕೂರಿಸುತ್ತಾರೆ. ಅಗತ್ಯ ಬಿದ್ದರೆ ನಡುವಲ್ಲಿ ಒಬ್ಬನಿಗೆ ನಿಲ್ಲುವ ಅವಕಾಶ ಕೊಡುತ್ತಾರೆ. ತಿಂಡಿ ತಿನ್ನುತ್ತ ಬರ್ಡ್ ವ್ಯೂ ಮಾಡುವ ಕನಸು ಲುಕ್ಸಾನು ಆಯ್ತು. ಪರವಾಗಿಲ್ಲ ಬರ್ಡ್ ವ್ಯೂ ಆದರೂ ಉಳೀತದಲ್ಲ.
ನಾನು ಯೋಚಿಸಲೇ ಇಲ್ಲ- ಪಕ್ಕದಲ್ಲಿನವನಿಗೆ ಕಫಯುಕ್ತ ಕೆಮ್ಮು ಬಂದರೆ ಏನು ಗತಿ? ಮೊದಲೇ ವೆದರು ಸರಿಯಿಲ್ಲ. ಕೆಳಗೆ ಥುಪಕ್ ಅಂತ ಉಗಿಯುತ್ತಾನೊ? ಯಾರದೊ ತಲೆ ಮೇಲೆ, ಯಾರದೊ ಕಾರಿನ ಗಾಜಿನ ಮೇಲೆ.. ಛೀ ಅಸಹ್ಯ. ಜನ ಹೀಗೆಲ್ಲ ಉಗಿಯಬಾರದೆಂದು ಬುಟ್ಟಿಗೆ ಪರದೆ ಕಟ್ಟುತ್ತಾರೆ. ಸೆಕೆಯಾಗಲು ಶುರುವಾಗುತ್ತದೆ. ಮಂದಿ ಉಸಿರು, ಬೆವರು. ಥೇಟು ಬಿ ಎಂ ಟಿ ಸಿ ಬಸ್ಸಿನ ಪ್ರಯಾಣ- ಸದಾ ಜೇಬಿನಲ್ಲಿ ಕೈಯಿಟ್ಟುಕೊಂಡಿರಬೇಕಾಗುತ್ತದೆ. ಪರ್ಸು ಮೊಬೈಲನ್ನು ಮುಟ್ಟಿ ಮುಟ್ಟಿ ನೋಡಿಕೊಳ್ತಾ…
ಅದು ಹೋಗಲಿ ಅಲ್ಲಿಯೂ ಸಿಗ್ನಲ್ ಅಂತ ಬಂದುಬಿಟ್ಟರೆ? ಬರದೇ ಇರುತ್ತದೆಯೇ? ಮಿನಿಸ್ಟರ್ ಹೋಗ್ತಿದಾನೆ ಅಂತ ಜೀರೋ ಟ್ರಾಫಿಕ್ ಮಾಡ್ತಾರೆ. ನಮ್ಮ ಬಲೂನುಗಳಿಗೆ ಸ್ಟಾಚೂ ಕೊಟ್ಟು ಮಿನಿಸ್ಟರ್ ಬಲೂನಿಗೆ ತೂರಿಕೊಂಡು ಹೋಗಲು ಅವಕಾಶ ಕೊಡ್ತಾರೆ. ಅಥವಾ ಅವನ ಬಲೂನಿಗೆ ವಿಶೇಷ ಎತ್ತರ ನಿಗದಿ ಮಾಡ್ತಾರೇನೊಪ್ಪ. ಟಾಲ್ ಗೇಟ್ ನಲ್ಲಿ ವಿಐಪಿ ಸಾಲು ಇರುತ್ತದಲ್ಲ ಹಾಗೆ.

ಓ, ಹಾಗಾದರೆ ಈಗ ಮೇನ್ ರೋಡು ಸರ್ವೀಸ್ ರೋಡಿದ್ದಂತೆ ಮೇಲೆಯೂ ಟಾಲ್ ಗೇಟ್ ಇಟ್ಟು ಟಾಲ್ ಕಟ್ಟಿಸಿಕೊಂಡು ಮಿನಿಸ್ಟರು ಮತ್ತು ಸರ್ವೀಸ್ ರೋಡಿನವರ ನಡುವಿನ ಎತ್ತರದಲ್ಲಿ ಹಾರಲು ಬಿಡ್ತಾರೆನೊ. ಏನೇ ಇರಲಿ ದಿನಾ ಓಡಾಡೋರಿಗೆ ಪಾಸ್ ವ್ಯವಸ್ಥೆ ಇಟ್ಟಿರಬೇಕಪ್ಪ. ಕಳ್ಳ ನನ್ನ ಮಕ್ಕಳು ನೈಸ್ ರೋಡಿನಲ್ಲಿ ಕಿಲೋಮೀಟರಿಗೆ ನಾಲ್ಕು ರುಪಾಯಿ ಕೀಳ್ತಾರೆ. ಪೆಟ್ರೋಲಿಗೆ ಅಷ್ಟುಕೊಡಲ್ಲ. ಖೇಣಿ ಮೇಲೂ ಬಂದು ಒಂದು ಫ್ರೀಕ್ವೆನ್ಸಿ ತನಗಾಗಿ ಎತ್ತಿಟ್ಟುಕೊಂಡು ಕಿಲೋಮೀಟರಿಗೆ ಹತ್ತು ರುಪಾಯಿ ಕಿತ್ತರೆ ನಮ್ಮಂತವರ ಪಾಡೇನು?
“ನಂದು ಸ್ನಾನ ಆಯ್ತೂ”
ಮೇಲೆ ಹೀಗೂ ಆಗಬಹುದೇ? ಕೆಲವರು ಐಷಾರಾಮಿ ಬಲೂನು ತರಬಹುದು. ಬಲೂನಿನ ಬುಟ್ಟಿಯೊಳಗೆ ಮೇಕಪ್ ಕಿಟ್ಟು, ಡ್ರಿಂಕ್ಸು, ಕಾಲು ಚಾಚಿ ಹಾಸಲು ಮಂಚ, ಹುಡುಗಿಯೊಡನೆ ಮಲಗಲು ಡಬಲ್ ಮಂಚ, ಖಾಸಗಿತನಕ್ಕೆಂದು ಸುತ್ತ ಕಪ್ಪು ಪರದೆ, ಒಳಗೆ ಏಸಿ… ಅದೂ… ಅದನ್ನು ಮಾಡುವಾಗ ಬಲೂನು ಕುಲುಕುತ್ತದೆಯೇ? ಕಿರ್ಕು ಕಿರ್ಕು…. ಸುತ್ತ ಜನರಿಗೆ ಗೊತ್ತಾಗೋದಿಲ್ಲವೇ?
ಮತ್ತು ಕೆಲವರು ಸಣ್ಣ ಪುಟ್ಟ ಬಲೂನಿನಲ್ಲಿ ತೇಲಿಕೊಂಡು ಬರುತ್ತಾರೇನೊ. ಅದಕ್ಕೆ ಬುಟ್ಟಿನೇ ಇರಲ್ಲ. ಬಸ್ಸಲ್ಲಿ ಕಂಬಿ ಹಿಡಿದು ನಿಂತಂತೆ ಬಲೂನಿನ ಕಂಬಿ ಹಿಡಿದು ನಿಂತು ಜೋತಾಡುವುದು. ಸಿಗ್ನಲ್ಲಿನಲ್ಲಿ ನಮ್ಮ ಬಲೂನುಗಳಿಗೆ ತಗುಲಿಸಿಕೊಂಡು ತೂರಿ ತೂರಿ ಮುಂದೆ ಹೋಗಿ ನಿಲ್ಲುವುದು.
“ಹ್ಹೇ.. ಹ್ಹೇ…ನಿಲ್ಲೊ.. ಟಚ್ ಮಾಡಿದೆ.. ನನ್ನ ಬಲೂನಿಗೆ ಸ್ಕ್ರಾಚ್ ಮಾಡಿದೆ…”
“ಟಚ್ಚಂತೆ, ನಾನೇನು ಗುದ್ದೇ ಬಿಟ್ನಾ. ಬೆಂಗಳೂರಲ್ಲಿ ಇದೆಲ್ಲ ಕಾಮನ್ನಮಾ. ಆಗಲ್ಲಾಂದರೆ ಹೊರಗೇ ಬರಬೇಡ. ಮನೇಲೆ ಕೂತ್ಕೊ. ಮೊಟ್ಟೆ ಇಟ್ಕೊಂಡು. ಹಾ ಹ್ಹಾ ಹ್ಹಾ ಹ್ಹಾ”
ಸಿಗ್ನಲ್ ಬಿಟ್ಟ ತಕ್ಷಣ ಕುದುರೆ ತರಹ ಕೀಹ್ಹಿಹ್ಹಿಹ್ಹಿ ಅಂದುಕೊಂತ “ಹಾರಿಸಿಬಿಡುವುದು”.
ಅಲ್ಲಾ ಅಲ್ಲಿ ಸಿಗ್ನಲ್ ಲೈಟು ಕಂಬಗಳನ್ನು ಹೇಗೆ ನಿಲ್ಲಿಸುತ್ತಾರೆ ಅಂತ? ಬಹುಶಃ ಪೊಲೀಸರು ಹೀಗೆ ಮಾಡ್ತಾರೆ- ಸದಾ ನಿಂತಲ್ಲೆ ನಿಲ್ಲಬಲ್ಲ ಬಲೂನು ಹಾರಿಸ್ತಾರೆ. ಅವುಗಳಿಗೆ ಬಲ್ಬು ಸಿಗಿಸಿ. ಅಷ್ಟಕ್ಕೆ ಸುಮ್ಮನಾಗುತ್ತಾರೆಯೇ? ತಾವೂ ಒಂದೊಂದು ಬಲೂನು ಬಿಟ್ಟುಕೊಂಡು ಹಾರಾಡ್ತಾ ಇರ್ತಾರೆ. ಫಕ್ಕನೆ ನಮ್ಮ ಬಲೂನನ್ನು ನಿಲ್ಲಿಸಿ- “ಎಲ್ಲಿ ಲೈಸನ್ಸ್ ತೆಗಿ, ಆರ್ ಸಿ ಕಾರ್ಡ್ ತೆಗಿ, ಸೀಟ್ ಬೆಲ್ಟೇ ಹಾಕಿಲ್ಲ, ಹತ್ತು ಸಾವಿರ ರುಪಾಯಿ ಕೊಡು ಬಿಲ್ ಕೊಡ್ತೀನಿ ” ಅಂತಾರೆ.
ಐನೂರು ರುಪಾಯಿ ತೆಗೆಯಲು ಪರ್ಸ್ ಗೆ ಕೈ ಹಾಕಿದರೆ- ದೂರದಲ್ಲಿ ನಿಂತಿರುವ ಟ್ರೈನೀ ಪೊಲೀಸಿನತ್ತ ಕೈತೋರಿಸಿ ಅಲ್ಲಿ ಮುಂದೆ ಹೋಗು, ಅವರು ನಿಂತಿದಾರಲ್ಲ ಅವರಿಗೆ ಕೊಡು ಅಂತಾರೆ. ನಾವು ಟಿವಿನವರು ಇರಬಹುದೆಂದು ಕ್ಯಾಮರಾ ಹಿಡಕೊಂಡಿರಬಹುದೆಂದು ಭಯ. ವಿಡಿಯೊ ವೈರಲ್ ಆದರೆ ಹೆಂಡ್ತಿ ಮಕ್ಕಳ ಮುಂದೆ ಬಂಧುಗಳ ಮುಂದೆ ಶೇಮ್ ಆಗ್ತದೆ ಅಂತ. ಸೀನಿಯರ್ ಆಫೀಸರ್ ಬೇರೆ, ಪ್ರೊಮೋಶನ್ನಿಗೆ ಹಿನ್ನಡೆ…
ಹೆಲ್ಮೆಟ್ ಕೇಳ್ತಾರಾ? ಅಲ್ಲಿ ಅಪಘಾತಗಳು ಆಗಲ್ವ? ಹೇಗೆ ಆಗ್ತದೆ? ಸಡನ್ನಾಗಿ ನಮ್ಮ ಹೀಲಿಯಂ ಕೈಕೊಟ್ಟರೆ? ನಮಗೆ ಆಗದವನು ಪಕ್ಕದಿಂದ ಬಂದು ಬಲೂನಿಗೆ ಚುಚ್ಚಿಬಿಟ್ಟರೆ? ಬಲೂನನ್ನು ಸೈಡಿಗೆ ಹಾಕಿ ನಿಲ್ಲಿಸಿಕೊಳ್ಳೋದಿಕ್ಕೆ ಆಗಲ್ಲ. ಬಿದ್ದು ಬಿಡ್ತೀವೇನೊ.
ಅದೆಲ್ಲ ಹೋಗಲಿ ಜೋರಾಗಿ ಗಾಳಿ ಬೀಸಿದರೆ ಏನು ಗತಿ? ಇದ್ದಕ್ಕಿದಂಗೆ ಬಿರುಮಳೆ ಹಿಡಿದುಕೊಂಡರೆ ಏನು ಗತಿ? ಮಾವಿನ ಮರದಿಂದ ತುಪತುಪನೆ ಹಣ್ಣುಗಳು ಉದುರಿದಂತೆ… ? ಮುಗೀತು ಕತೆ, ರಸ್ತೆ ಮೇಲೆಲ್ಲ ಬಲೂನುಗಳು; ಕೊರಳಿಗೆ ಟೈ ಕಟ್ಟಿಕೊಂಡು ಅಯ್ಯೋ ಅಮ್ಮಾ ಎಂದು ಉರುಳಾಡುವ ಮಂದಿ…
“ತಿಂಡಿ ರೆಡೀ..”
ತಿಂಡಿ ರೆಡೀನಾ.. ಅಬ್ಬ ಸದ್ಯ ಬಚಾವಾದೆ – ಚಿನ್ಮಯ ಉಸಿರು ಬಿಟ್ಟ. ಬೀಳುವುದರಿಂದ ತಪ್ಪಸಿಕೊಂಡವನಂತೆ.
“ಏನು ತಿಂಡಿ?”
“ಎಷ್ಟು ಸಲ ಕೇಳ್ತೀರಿ? ದೋಸೆ ಕುಂಬಳಕಾಯಿ ಪಲ್ಯ”
“ಕುಂಬಳ ಕಾಯಿ ಪಲ್ಯವಾ? ನಾನು ಯಾವಾಗ ಕೇಳಿದ್ದೆ?”
“ನಾ ಎದ್ದ ತಕ್ಷಣ ಕೇಳಿದ್ರಲ್ಲ, ಏನು ತಿಂಡಿ ಇವತ್ತು ಅಂತಾ”
ತಾಯ್ನಾಡ.. ಕುಂಬಳಕಾಯಿ ಹೀಲಿಯಂ ಬಲೂನು ಆಗಿಬಿಟ್ಟಿದೆ, ಎಂದು ಹಳಿದುಕೊಂಡ ಚಿನ್ಮಯ.
0 ಪ್ರತಿಕ್ರಿಯೆಗಳು