ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮದುವೆ’ ಎಂದರೆ ಹೀಗೇನಾ? – ಒಂದು ಸ್ವಗತ

–  ಸೂರ್ಯಕಾಂತ ಬಳ್ಳಾರಿ

ಮದುವೆ ಎಂಬುದು ಯಾಕೆ ಇಷ್ಟು ತ್ರಾಸದಾಯಕ ಸಂಸ್ಥೆಯಾಗಿ ರೂಪುಗೊಂಡಿದೆಯೋ ಗೊತ್ತಿಲ್ಲ. ಬಹಳ ಬೇಸರವಾಗಿದೆ. ಎರಡು ಜೀವಗಳು ಸಮಾನ ರೀತಿಯ ಆಲೋಚನಾಕ್ರಮ ಹೊಂದಿರುವ ಸಾಧ್ಯತೆಗಳಿದ್ದಾಗ ಒಟ್ಟಾಗಿ ಬದುಕು ನಡೆಸಲು ಅಣಿಯಾಗುವ ಈ ‘ಮದುವೆ’ ಅನ್ನೋದೇ ಒಣ ಪ್ರತಿಷ್ಠೆಯ ವಿಷಯವಾಗಿ ಮಾರ್ಪಾಡಾಗಿರುವುದು ತುಂಬಾ ನೋವಿನ ವಿಷಯ. ನನಗೊಬ್ಬ ಮುದ್ದಾದ ಸೂಕ್ಷ್ಮ ಮನಸ್ಸಿನ ತಂಗಿ ಇದ್ದಾಳೆ ಎಂದುಕೊಳ್ಳಿ. ತಂಗಿಯನ್ನು ನೋಡಲು ಬಂದವರು ಯಾರೂ ಚಂದ ಇಲ್ಲ ಅಥವಾ ಗುಣಸ್ವಭಾವ ಸರಿಯಿಲ್ಲ ಎಂದು ತಿರಸ್ಕರಿಸಿದ ಉದಾಹರಣೆನೇ ಇಲ್ಲ. ಆದರೂ ಈಗ ನಿಶ್ಚಯವಾಗಿರುವುದು ಸುಮಾರು 25 ನೇ ವರ. ಯಾಕೆ? ಗುಣ,ಸೌಂದರ್ಯ ಇವ್ಯಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ಕೇವಲ ‘ವರದಕ್ಷಿಣೆ’ ಕೊಡೋ ಸಾಮರ್ಥ್ಯವೇ ಮಾನದಂಡವಾಗಿರುವುದು ಯಾವುದರ ಸಂಕೇತ?. “ಹುಡುಗಿ ಒಪ್ಪಿಗೆಯಾಗಿದ್ದಾಳೆ ಆದರೆ ನೀವು ಕೊಡ್ತಿರೋ ‘ದಕ್ಷಿಣೆ’ ಕಡಿಮೆಯಾಯ್ತು. ಇದು ನಮ್ಮ ಪ್ರತಿಷ್ಟೆಯ ವಿಚಾರ. ಇಷ್ಟು ಓದಿಕೊಂಡಿದ್ದಕ್ಕೆ ಇಷ್ಟೇ ವರದಕ್ಷಿಣೆನಾ ಅಂತ ಜನ ವ್ಯಂಗ್ಯ ಮಾಡ್ತಾರೆ. ಇಷ್ಟು ಕಡಿಮೆ ತಗೆದುಕೊಂಡರೆ ನಮ್ಮ ಮರ್ಯಾದೆ ಏನಾಗಬೇಕು? ಛೆ ಛೆ ಆಗೊಲ್ಲ ಬಿಡಿ” ಎಂದು ಹಿಂದೆ ಸರಿದವರಾರೂ ಅನಕ್ಷರಸ್ತರು ಆಗಿರಲಿಲ್ಲ. ತುಂಬಾ ಓದಿಕೊಂಡವರು.ಒಂದು ಕರ್ಚೀಪ್ ಕೊಂಡುಕೊಳ್ಳಲೂ ಪಾಲಕರ ಹಣವನ್ನೇ ಅವಲಂಬಿಸಿದವರು. ‘ಏನು ಉದ್ಯೋಗ ಮಾಡ್ತೀರಿ? ಬದುಕಿಗೆ ಏನಾದರೂ ಆದಾಯದ ಮೂಲ ಕಟ್ಟಿಕೊಂಡಿದ್ದೀರೋ?” ಎಂದು ಕೇಳಿದರೆ; ‘ಇಷ್ಟರಲ್ಲೇ ನೌಕರಿ ಸಿಗ್ತದೆ, ಸಧ್ಯಕ್ಕೆ ಖಾಲಿ ಇದೀವಿ” ಎಂದು ನಿರ್ಭಿಡೆಯಿಂದ ಹೇಳುವವರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗೋರು ನೌಕರಿ ಇರೋರು. “ಸರ್ಕಾರಿ ನೌಕರಿ ಐತಿ.ನಾಲ್ಕಾರು ಲಕ್ಷ ಹಣ, 8 ರಿಂದ 10 ತೊಲ(80 ರಿಂದ 100 ಗ್ರಾಂ) ಚಿನ್ನ, ಒಂದು ಗಾಡಿ ಕೊಡೋದು ನ್ಯಾಯ. ಅಷ್ಟಿಲ್ಲದಿದ್ದರೆ ಮದುವೇನೇ ಬ್ಯಾಡ. ಸಮಾಜದೊಳಗೆ ಅಸಯ್ಯ ಆಗೋದಕ್ಕಾತಿ” ಎಂದು ತಾವೇ ದುಡಿದು ಕೊಟ್ಟೋರಂಗ ಅಧಿಕಾರದಿಂದ ಒತ್ತಾಯಿಸೋರನ್ನ ಕಂಡ್ರೆ ಬಹಳ ನೋವಾಗುತ್ತದೆ. ಮದುವೆ ರಿಸೆಪ್ಶನ್ ನಲ್ಲಿ ಸೂಟು ಬೇಕೇ ಬೇಕು. ಅದನ್ನು ಜೀವನದಲ್ಲಿ ಮತ್ತೆಂದೂ ಹಾಕುವುದೇ ಇಲ್ಲ ಎಂದು ಗೊತ್ತಿದ್ದರೂ ಹತ್ತಾರು ಸಾವಿರದ ಆ ಡ್ರೆಸ್ಸೇ ಬೇಕು. ಲಕ್ಷಾಂತರ ಹಣವನ್ನು ಖರ್ಚು ಮಾಡಿ ಆಡಂಬರದ ಸಮಾರಂಭವನ್ನೇ ಮಾಡಬೇಕು. ಇವೆಲ್ಲಾ ಪ್ರತಿಯೊಬ್ಬ ‘ವರ’ ನ ಬೇಡಿಕೆಗಳು.
ಈ ರೀತಿ ಮಾಡಿಕೊಂಡರೆ ಮಾತ್ರ ಮದುವೇನಾ?

ಹೆತ್ತವರ ಸಂಕಟ, ಅವರ ಆರ್ಥಿಕ ಸ್ಥಿತಿಗತಿ, ಅವರ ಭವಿಷ್ಯ ಇವ್ಯಾವುದೂ ಇಂಥವರ ಕಣ್ಣಿಗೆ ಕಾಣೋದಿಲ್ವೆ? ಕಷ್ಟಪಟ್ಟು ಸಾಲಸೂಲ ಮಾಡಿ ಮಗಳ ಮದುವೆ ಮಾಡಿಕೊಟ್ಟು ಹಲವಾರು ವರ್ಷಗಳ ಕಾಲ ಸಾಲ ತೀರಿಸಲಿಕ್ಕೆ ಕಷ್ಟಪಡುತ್ತಿರುವ ಹೆತ್ತವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ.
ವರದಕ್ಷಿಣೆ ಕೊಡೋದು, ತೆಗೆದುಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ ಎಂದು ವಾದಿಸುವುದು ತುಂಬಾ ಸುಲಭ. ಆದರೆ ಒಂದು ಮದುವೆಮಾಡಿಕೊಡುವುದು ಬಹಳ ಕಷ್ಠದ ಕೆಲಸ. ಇದಕ್ಕೆ ಬೇಸತ್ತಿದ್ದೇನೆ. ಯಾಕೆ ನಮ್ಮ ಸಮಾಜ ಈ ಸ್ಥಿತಿಗೆ ತಲುಪಿದೆ? ದುಡ್ಡಿದ್ದವರು ಸಂತೋಷಕ್ಕಾಗಿಯೋ, ಒಣ ಪ್ರತಿಷ್ಠೆಗಾಗಿಯೋ, ತಮ್ಮ ಸಂಪತ್ತಿನ ಪ್ರದರ್ಶನಕ್ಕಾಗಿಯೋ ದುಂದುವೆಚ್ಚ ಮಾಡಿ ಮದುವೆಮಾಡಿಕೊಳ್ಳುವುದು ಒಂದು ರೀತಿಯಾದರೆ, ಅವರನ್ನೇ ಅನುಕರಣೆ ಮಾಡಿ ಸಾಲದ ಸುಳಿಯಲ್ಲಿ ಹೆಣಗಾಡುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಗೋಳು ಹೇಳತೀರದು. ಮದುವೆಗಾಗಿ ಆಸ್ತಿ ಮಾರಿ ಪರದಾಡುವುದು ಬಡವರ ಪಾಲಿನ ಭಾಗ್ಯ ಎಂಬತ್ತಾಗಿದೆ.
ಹಾಗೆಂದು, ಏನನ್ನೂ ತೆಗೆದುಕೊಳ್ಳದೇ ಮದುವೆಯಾಗುವವರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುವುದಿಲ್ಲ. ಯಾವುದೋ ಕರತೆಯಿರಬೇಕು ಎಂದು ಭಾವಿಸುವವರೇ ಹೆಚ್ಚು. ಸರಳ ಮದುವೆಯಾಗುತ್ತೇನೆ ಎಂದು ಹೆಣ್ಣು ಕೇಳಿದರೆ ಕಪಾಳಕ್ಕೆ ಹಡೆದಂತೆ ಮಾತಾಡಿ ಕಳುಹಿಸುತ್ತಾರೆ. ಮಲಗುವ ಮಂಚ,ಹಾಸಿಗೆ ತಲೆದಿಂಬುಗಳಿಂದ ಹಿಡಿದು ಊಟ ಮಾಡು ತಟ್ಟೆ, ಜಳಕದ ಸಾಬೂನಿನವರೆಗೂ ಹೆಣ್ಣು ಹೆತ್ತವರು ಕೊಡಿಸಬೇಕು. ಆದಾಗಲೇ ಸಮಾಧಾನ.
ಹೋಗಲಿ ಬಿಡಿ, ಸಮಸಮಾಜದ ಬಗ್ಗೆ, ಜಾತ್ಯಾತೀತತೆ ಬಗ್ಗೆ ಮಾತಾಡುವ ‘ಪ್ರಗತಿಪರರು’ ಎಂಬ ಹಣೆಪಟ್ಟಿ ಕಟ್ಟಿಕೊಂಡವರ ಪಾಡು ಯಾರಿಗೂ ಬೇಡ. ಸಿದ್ಧಾಂತಗಳು ಇರುವುದು ಕೇವಲ ಮಾತನಾಡಲಿಕ್ಕೆ ಎಂಬ ಪರಿಸ್ಥಿತಿ ಉಂಟಾಗಿದೆ. ಎಲ್ಲೋ ಒಂದೊಂದು ಅಪವಾದಗಳೂ ಇವೆ. ಆದರೆ ಬಹುತೇಕರಿಗೆ ಮದುವೆ ಮಾಡಿಕೊಳ್ಳಲೇ ಬೇಕು ಎಂದರೆ ತಮ್ಮ ಸಿದ್ಧಾಂತಗಳನ್ನು ಗಂಟುಮೂಟೆ ಕಟ್ಟಿ ಮೂಲೆಯಲ್ಲಿಡುವುದು ಅನಿವಾರ್ಯ ಕರ್ಮವಾಗಿದೆ. ಇಲ್ಲದಿದ್ದರೆ ಮದುವೇನೆ ಇಲ್ಲ. ವರ್ಷಗಳೇ ಸಿದ್ಧಾಂತಗಳನ್ನು ಮಾತಾಡಿ, ಕೊನೆಯಲ್ಲಿ ತಮ್ಮ ಸಾಂಪ್ರದಾಯಿಕ ಮದುವೆಗಳಿಗೆ ಇನ್ನೂ ಸಿದ್ಧಾಂತಗಳನ್ನು ನಂಬಿ ಬದುಕುತ್ತಿರುವವರನ್ನು ಆಹ್ವಾನಿಸಲೂ ಮುಜುಗರ ಪಡುವಂಥ ಇಕ್ಕಟ್ಟಿನ ಸ್ಥಿತಿ.
ಏನೇ ಸಿದ್ಧಾಂತಗಳನ್ನು ಮಾತಾಡುತ್ತಿದ್ದರೂ ಅಥವಾ ಬದುಕುತ್ತಿದ್ದರೂ ತಮ್ಮ ಸಹೋದರ ಸಹೋದರಿಯರ ಮದುವೆ ಮಾಡಿಸುವುದು ಅಂತಹ ಸಿದ್ಧಾಂತಗಳನ್ನು ಬಿಟ್ಟಾಗಲೇ ಸಾಧ್ಯ. ಇದು ಇಂದಿನ ದುರಂತ ಸತ್ಯ.
ಬದಲಾವಣೆ ಜಗದ ನಿಯಮ. ನಿಜ. ಆದರೆ ಒಳ್ಳೆಯ ಬದಲಾವಣೆ ತ್ವರಿತಗತಿಯಲ್ಲಿ ಬರಲು ಅನೇಕರ ಪ್ರಯತ್ನ ಬಹಳ ಮುಖ್ಯ. ಮದುವೆಗಳ ಇಂತಹ ಕ್ರೂರ ವ್ಯವಸ್ಥೆಯ ಬದಲಾವಣೆಗೆ ಮುಂದಾಗುವುದು ಯಾರು? ಯಾವಾಗ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತದೆ.
 

‍ಲೇಖಕರು G

16 April, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading