– ಮಂಜುನಾಥ್
ಧಾರವಾಡ
ಹೀಗೆ ಒಂದು ರವಿವಾರ ರಜಾದಿನವಾದ್ದರಿಂದ, ಮನೇಲಿ ಕುಳಿತಿದ್ದೆ, ಹಿಂದೆ ಆಕಾಶವಾಣಿಯಲ್ಲಿ ಮಧುರವಾದ ಗೀತೆಯೊಂದು ಕೇಳಿಸುತ್ತಿತ್ತು, “ಮದುವೆಯ ಈ ಬಂಧ ಅನುರಾಗದ ಅನುಬಂಧ…..”, ನನ್ನ ಅಮ್ಮ ಬಂದು ಬೇಗ ಎದ್ದು ರೆಡಿಯಾಗು ಹೆಣ್ಣು ನೋಡೋಕೆ ಹೋಗಬೇಕು ಅಂದರು. ನಾನಾಗ ಏಳನೆ ಕ್ಲಾಸಿನಲ್ಲಿ ಓದುತ್ತಾ ಇದ್ದೆ. ಅಬ್ಬಬ್ಬಾ ಅಂದರೆ ಆಗ ನನಗೆ 11 ವಯಸ್ಸು, ಮದುವೆಯೆಂದರೇನು? ಹೆಣ್ಣು ನೋಡುವುದಂದರೇನು? ನನಗೊಂದು ತಿಳಿಯದು, ಆದರೆ ಗಾಡಿಯಲ್ಲಿ ಹೋಗಬೇಕೆಂದು ಹೇಳಿದಾಗ ಸಂಭ್ರಮದಿಂದ ಸ್ನಾನ ಮಾಡಿ ಹೊಸಬಟ್ಟೆ ಧರಿಸಿ ರೇಡಿಯಾಗಿ ಹೋರಟೆ.
ಗಾಡಿ ಹತ್ತಿದ ಮೇಲೆ ತಿಳಿದಿದ್ದು, ಹೆಣ್ಣು ನೋಡೋಕೆ ಹೋಗತ್ತಿರೋದು ನಮ್ಮ ಚಿಕ್ಕಪ್ಪನಿಗೆ ಅಂತಾ! ಅಲ್ಲೆ ನಮ್ಮ ಊರಿಂದ ಹತ್ತಿರ 15 ಕಿ.ಮೀ ದೂರದಲ್ಲಿರೊ ಊರು. ಹೋಗಿ ಅವರ ಮನೇಲಿ ಎಲ್ಲರೂ ಶಾಂತವಾಗಿ ಕುಳಿತಾಗ ನನ್ನ ತುಂಟತನ ನೋಡಿ ಅಮ್ಮ ಬಯ್ದರೂ ನನ್ನ ತುಂಟತನ ಕಡಿಮೆಯಾಗಲಿಲ್ಲ. ಅವಲಕ್ಕಿ, ಬಾಳೆಹಣ್ಣು, sweets ತಿನ್ನುವದರಲ್ಲಿ ಹೆಣ್ಣು ಯಾರೋ? ಯಾವಾಗ ಬಂದು ಯಾವಾಗ ಹೋದರೋ? ಒಂದು ತಿಳಿಯಲಿಲ್ಲ. ಎಲ್ಲರೂ ಮನೆಕಡೆ ನಡೆದದ್ದೊಂದೆ ಗೊತ್ತು ನನಗೆ. ಸ್ವಲ್ಪದಿನದ ನಂತರ ತಿಳಿಯಿತು, ಹುಡುಗಿ ಎಲ್ಲರಿಗೂ ಒಪ್ಪಿಗೆಯಾಗಿದೆ ಅಂತಾ.
ಇದಕ್ಕೂ ಮುಂಚೆ ನನ್ನ ಚಿಕ್ಕಪ್ಪನಿಗೆ ಹಲವಾರು ಕಡೆ ಹೆಣ್ಣು ನೋಡಿದ್ದರೂ ಯಾವುದು ಒಪ್ಪಿಗೆಯಾಗಿರಲಿಲ್ಲ. ಆಗ ನಾನು ಹೋಗಿರಲು ಇಲ್ಲ. ಇದೆ ಮೊದಲ ಬಾರಿಗೆ ಹೋಗಿದ್ದೇನಾದ್ದರಿಂದ ಮನೇಯಲ್ಲಿ ನನ್ನ ರಾದ್ದಾಂತ ಶುರುವಾಯಿತು, ನಾನು ಬಂದಿದ್ದರಿಂದಲೆ ಹುಡುಗಿ ಒಪ್ಪಿಗೆಯಾಗಿದ್ದು ಅಂತಾ.
ಅದೆನೋ ಹುಡುಗಿ ನೋಡಲು ಹೋದಾಗ ಓದಲು ಒಂದು ಪುಸ್ತಕ ಕೊಟ್ಟರು. ನಾನು ಅಮ್ಮನನ್ನು ಕೇಳಿದೆ, ನನಗೂ ಓದಲು ಬರುತ್ತಲ್ಲಾ, ಎಲ್ಲರಿಗೂ ಓದಿ ತೋರಿಸಲಾ ಎಂದು. ಅಮ್ಮ ಬಯ್ದಾಗ ಇಂಗು ತಿಂದ ಮಂಗನ್ ಹಾಗೆ ಸುಮ್ಮನೆ ಕೂತೆ. ಹುಡುಗಿಯ ಹೆಸರು ಕೆಳುವುದು, ಕೈ ರೇಖೆ ನೋಡುವುದು, ಕಾಲು ಕುಡಿಸಲು ಹೇಳುವುದು ನೋಡಿ, ನನಗಂತೂ ತುಂಬಾ ಆಶ್ಚರ್ಯವಾಯಿತು.
ಎರಡು ಕಡೆಯಿಂದ ಒಪ್ಪಿಗೆ ಸಿಕ್ಕಮೇಲೆ ಮದುವೆಯ ದಿನಾಂಕ Fix ಆಯಿತು. ಮದುವೆಯ ದಿನ ಹತ್ತಿರ ಬಂದ ಹಾಗೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ನಾವೆಲ್ಲಾ ಚಿಕ್ಕಮಕ್ಕಳಿಗಂತೂ ‘ಸ್ವರ್ಗಕ್ಕೆ ಮೂರೇ ಗೇಣು’ ಅಂತಾರಲ್ಲಾ ಹಾಗೆ. ಮನೆ ತುಂಬಾ ಬಂಧು ಬಳಗ ಇಂಥಾ ಸಮಯದಲ್ಲೇ ಕೆಳಿದ್ದೆಲ್ಲಾ ಕೈಗೆ ಸಿಗುತ್ತೆ ಅನ್ನೊ ಸತ್ಯ ಅರ್ಥವಾಗಿದ್ದು ನನಗೆ. ಮದುವೆಗೋಸ್ಕರ ಎಲ್ಲರಿಗೂ ಹೊಸ ಬಟ್ಟೆ ಖರಿಧಿಸಿದ್ದಾಯಿತು. ನನ್ನ ಅತ್ತೆ ಮಗಳು ಬಂದಿದ್ದಳು, ಅವಳೋ ತುಂಬಾ ಮುಂಗೋಪಿ (ಬಹುಶಃ ಅವಳಿಗಿಂತ ನಾನೇ ಒಂದು ಕೈ ಜಾಸ್ತಿ ಅನ್ನಿಸುತ್ತೆ) ಅವಳ ಜೊತೆ ಜಗಳವಾಡುತ್ತಾ, ಆಟವಾಡುತ್ತಾ, ಮದುವೆದಿನಗಳು ಹತ್ತಿರ ಬಂದಿದ್ದೆ ತಿಳಿಯಲಿಲ್ಲಾ.
ಮದುವೆಯ ಹತ್ತಿರದ ದಿನಗಳಲ್ಲಂತೂ ಮನೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ. ತಳಿರು ತೋರಣ, ಬಣ್ಣ ಬಣ್ಣದ ದೀಪಗಳಲಂಕಾರ, ಜಾತ್ರೆಗೆ ಸಜ್ಜಾದ ದೇವರಗುಡಿಯಂತೆ ಮನೆ ಕಂಗೊಳಿಸುವುದನ್ನಾ ನೋಡುವುದೇ ಒಂದು ಚೆಂದ. ಪ್ರತಿ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾ ಎಲ್ಲರೂ ಮದುವೆಗೆ ಅಣಿಯಾದರು. ಆಗ ಮನೆಯಲ್ಲೇ ಎಲ್ಲ ತರಹದ ಮದುವೆಯ ಅಡುಗೆ ಮಾಡುತ್ತಿದ್ದರು, ಅದರಲ್ಲೂ ನನಗೆ ಜಲೇಬಿ ಹಾಗೂ ಬುಂದೆ ಮಾಡುವುದನ್ನು ನೋಡುವುದರಲ್ಲಿ, ಹಾಗೂ ತಿನ್ನುವುದರಲ್ಲಿ ತುಂಬಾನೆ ಖುಷಿಯಾಗುತ್ತಿತ್ತು.
ಅಂತು ಇಂತು ಮದುವೆಯ ದಿನ ಬಂದೆ ಬಿಟ್ಟಿತು, ಎಲ್ಲರೂ ರೆಡಿಯಾಗಿ ಮದುವೆ ಮಂಟಪಕ್ಕೆ ಹೋಗಿದ್ದೊಂದೆ ಗೊತ್ತು ನನಗೆ. ನಾನು ನನ್ನ ತುಂಟಾಟಗಳಲ್ಲಿ, ನನ್ನತ್ತೆ ಮಗಳೊಂದಿಗೆ ಆಡುವುದರಲ್ಲೆ ಬ್ಯೂಸಿಯಾಗಿದ್ದೆ. ಯಾವಾಗ ಮದುವೆ ಮುಗಿಯಿತೋ, ಮದುವೆ ಹೇಗಾಯಿತೋ ತಿಳಿಯಲೆ ಇಲ್ಲಾ.
ಒಟ್ಟಿನಲ್ಲಿ ಆ ಮದುವೆಯ ಅನುಭವ ನನ್ನ ಜೀವನದಲ್ಲಿ ಅಚ್ಚಳಿಯದ ಛಾಪಾಗಿ ಮೂಡಿದೆ. ಅಂದಿನಿಂದ ಯಾರಾದರೂ ಮದುವೆಯೆಂದರೆ ನೆನಪಾಗುತ್ತೆ ಆ ಗತವೈಭವದ ಮದುವೆಯ ಮಧುರ ನೆನಪುಗಳು. ಮನಸ್ಸು ಉಲ್ಲಸಭರಿತವಾಗಿ ಕುಣಿಯುತ್ತದೆ.
ಇದೆಲ್ಲಾ ಆಗಿ 15 ವಸಂತಗಳ ನಂತರ – ಒಂದು ದಿನ ಮನೆಯಲ್ಲಿ ಕುಳಿತಿದ್ದೆ, ಹಿಂದೆ ಆಕಾಶವಾಣಿಯಲ್ಲಿ ಮತ್ತದೆ ಗೀತೆ, “ಮದುವೆಯ ಈ ಬಂಧ ಅನುರಾಗದ ಅನುಬಂಧ…”, ಮನೆಯಲ್ಲಿ ನನ್ನ ಮದುವೆಯ ವಿಚಾರ ಮಾತನಾಡುತ್ತಿದ್ದಾರೆ, ಆದರೆ ಮದುವೆಯೇಂದರೆ ಮೊದಲಿನ ಉತ್ಸಾಹವಾಗಲಿ, ಉಲ್ಲಾಸವಾಗಲಿ ಈಗ ಇಲ್ಲವೇ ಇಲ್ಲ. ಆಗ ಮದುವೆಯೇಂದರೆ ಒಂದು ಸಂಭ್ರಮವೆನಿಸುತ್ತಿತ್ತು, ಈಗ ಮದುವೆಯೊಂದು ಜವಾಬ್ದಾರಿಯಾಗಿ ಕಾಣಿಸುತ್ತೆ. ಆಗ ಮದುವೆಯೊಂದು ಹಬ್ಬದಂತಿದ್ದರೆ, ಈಗ ಒಂದು ಅನಿವಾರ್ಯವೆನ್ನಿಸುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಬಾಲ್ಯ ಹಾಗೂ ಯೌವನಗಳ ನಡುವಿನ ಈ ಮದುವೆಯ ಬಂಧಗಳಲ್ಲಿ ಸದ್ಯಕ್ಕಂತೂ ಬಾಲ್ಯದ ಆ ಸಿಹಿಯಾದ ಬುತ್ತಿಯಂತೂ ಕರಗುವುದಿಲ್ಲ.
ಬಾಲ್ಯದಲ್ಲಿ ನಾವುಗಳು ಆಡಿದ ಮದುವೆಯನ್ನೋ ಆಟವೇ ನಿಜವಾದ ಮದುವೆಗಿಂತ ಮಧುರವಾಗಿತ್ತು ಹಾಗೂ ಸುಮಧುರ ಕನಸ್ಸುಗಳನ್ನು ನೀಡಿತ್ತು. ನಾವು ಯಾವಾಗಲೂ ಹಾಗೆ ಮಕ್ಕಳಂತಿದ್ದರೆ ಚೆನ್ನಾಗಿರುತ್ತಿ ತ್ತ ಲ್ಲವೇ….?






ಲೇಖನ ತುಂಬಾ ಚೆನ್ನಾಗಿದೆ ಓದಿ ತುಂಬಾ ಖುಷಿಯಾಯಿತು.