ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮದನಿಕೆಗೊಂದು ಬಿನ್ನವತ್ತಳೆ

jayashree_deshapandeಜಯಶ್ರೀ ದೇಶಪಾಂಡೆ 

ಮುನಿಸಿಕೊಂಡೆಯಾ ಮುಗುದೆ ?
ಅತ್ತ ಮೊಗದಿರುವಿಕೊಂಡೆಯಾ ?
ಮನದ ಮಾತಿಗೆ ಕವುಚಿ ಮೌನದ ಗವಸು,
ನಿಶ್ಶಬ್ದದ ಮೂಕದೆರೆಯಲಿ ಶಿಲೆಯಾಗಿ ಸ್ಥಿರಳಾದೆಯಾ ?
ಬಿಟ್ಟುಬಿಡು ತರಳೆ ಗಳಿತ-ಫಲಿತಗಳ, ಮರೆತುಬಿಡು ಮನದ ಕ್ಷತಿ.

she2ತಿರುಗೊಮ್ಮೆ ಇತ್ತ,
ನಿನ್ನ ಕಮಲವದನದೊಳಡಗಿರುವ ಭಾವವೇನೆಂಬ
ಹೊಳಹು  ಹೊರ ಚೆಲ್ಲಿಬಿಡೊಮ್ಮೆ…
ರಂಭೆ ಊವ೯ಶಿ ಮೇನಕೆಯರ ಅಣುವಣುಗಳು
ಮೈಯೊಳವತರಿಸಿದ ಕನ್ನಿಕೆ…ನೀ ಮದನಿಕೆ,
ಕಾಮಿತರ ಕಣ್ಣಕಮನೀಯ ಬೊಂಬೆ !

ಲಯ ಲಾವಣ್ಯ ಒನಪಿನೋಲಗವ
ಒಡಲಲ್ಲೇ ಹೊತ್ತು ಬಂದವಳು ನೀ…
ರತಿರೂಪಿಣಿ…ಲಂಬವೇಣಿ…,
ಮೃಗನಯನಿ…ಮಧುರರಾಗಾಲಾಪಿನಿ !
ರಸಿಕನೇತ್ರಕ್ಕೆ ಮೃಷ್ಟಾನ್ನ ಸ್ವರೂಪಿಣಿ…
ಕವಿ ಕಾವ್ಯದಂಕಣದಿ  ಸಾಲುಸಾಲಿನಕ್ಷರಗಳ
ತುಂಬಿ ಹರಿದು ಮತ್ತೇಭ -ಶಾರ್ದೂಲ ವಿಕ್ರೀಡಿತ ;
ಮಹಾಸೃಗ್ಧರಾ ವೃತ್ತಗಳಲಿ  ಮೂಡಿ ಬಂದ ಮಯೂರಿ ನೀ…

ಸಿಂಹಕಟಿಯ ಸುತ್ತುಬಳಸಿದ ಒಡ್ಯಾಣ
ಹೊರಲಾರದೆ ನಾಚಿತೇ ನಿನ್ನ ತುಂಬು ನಿತಂಬಗಳ ಮಾಂಸಲವ?
ಕಾಮನಾಡುಂಬೊಲದ ಜಘನಗಳ…

ಬಿಚ್ಚಿ ಹರವಿದರೆ ನಿನ್ನ ಬಿಳಿಬೆನ್ನ ಬಯಲಿಡೀ
ಹರಡಿ ಹಾಸುವ ಘನಕೇಶರಾಶಿಯದು
ಬೆರಳಬಳ್ಳಿಯೊಲು ಹೆಣೆದು ಹೆರಳಾಗಿ.
ಸಿರಿಮುಡಿಯ ಸೊಬಗು ಜಡೆಯಾಗಿ ಹರಿದು
ನಾಗನಾಟ್ಯಕೆ ಸಿಂಗಾರ ಬಿಲ್ಲೆ, ಮೊಲ್ಲೆ, ವಜ್ರಕುಚ್ಚುಗಳ ಸಡಗರ.

ಕಲ್ಲಾದರೇನಂತೆ ಶಿಲಾ ಸುಂದರಿ ನಿನ್ನ ಹೆರಳ ತುಂಬೆಲ್ಲ
ಹೂವ ಮುಡಿಸಬರುವವರಿಗಿಲ್ಲ ಕೊರತೆ.
ನಿಮ್ನ ನಿಮೀಲಿತ ನಿನ್ನ ನೇತ್ರಗಳಲಿ
ತಮ್ಮ ಕನಸುಗಳರರಸಿದವರೆಷ್ಟೋ ?

ನೀ ಜೀವ ತಳೆದುಬಿಡು..
ಹೆಜ್ಜೆಯರಳಿ ಘಲ್ ರಾಗಕ್ಕೆ ಮೊದಲಿಡುವ  ಗೆಜ್ಜೆಗೆ
ತಾನ ತಾಳಗಳ ಸಾಂಗತ್ಯವಿಟ್ಟು ನೀ ನವಿಲಾಗಿಬಿಡು..ಮತ್ತೆ…
ಏರಿಳಿವ ಮೇಘದೊಲು ಚಲಿಸಿ
ನಿನ್ನ ಬಳ್ಳಿದೋಳುಗಳ ಲಾಸ್ಯ, ಬಳುಕಿ ಹೊರಳಿ ಮರಳಿ
ಹಿಮ್ಮೇಳದ ಹಾಡಿಗೆ ಸವಾಲೆಸೆದು,
ನಿನ್ನ ಕಟಿ, ಕೊರಳು,ಪದಗಗತಿಗಳ
ಮೇರುಪ್ರದಶ೯ನ ತೋರಿಬಿಡು ಕೋಮಲೇ ! ನೀಳಕೇಶಿಯೇ..

ಬಾ ಇನ್ನು ಬಂದುಬಿಡು..ಮುನಿಸ ತೊರೆದು ಹೊರಳಿಬಿಡು,
ಶಿಲೆಯ ಸ್ತಬ್ಧ ಶೀತಲತೆಯೊಳಗಿಂದ ಹಾಡಾಗಿ ಹರಿದುಬಿಡು..
ಹನಿಯಾಗಿ ಇನಿದಾಗಿ ಶ್ರಾವಣದ ಸೊನೆಯಾಗಿ…ಗಂಗಾವತರಣವ
ನೀ ನತ೯ನದೆ ತುಂಬಿಬಿಡು…
ಬಾ ನಾಗವೇಣಿಯೇ ಬಾ.

‍ಲೇಖಕರು Admin

13 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading