ಮತ್ತೊಮ್ಮೆ ಬೆತ್ತಲಾದ ಸಾಹಿತ್ಯ ಪರಿಷತ್ತು

ನಾ ದಿವಾಕರ್ 

ಭಾರತದ ಎಲ್ಲ ಸಾರ್ವಜನಿಕ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ಅಸಹಿಷ್ಣುತೆ, ದಮನಕಾರಿ ಧೋರಣೆ, ದ್ವೇಷಾಸೂಯೆಯ ರಾಜಕಾರಣ ಮತ್ತು ಫ್ಯಾಸಿಸ್ಟ್ ಮನೋಭಾವ ಸಾಹಿತ್ಯ ಲೋಕವನ್ನು ಹೊರತುಪಡಿಸುತ್ತದೆ ಎಂದು ನಿರೀಕ್ಷಿಸುವುದೇ ತಪ್ಪು. ಸಮಾಜದ ಎಲ್ಲ ವಿಭಾಗಗಳಲ್ಲೂ, ಎಲ್ಲ ಹಂತಗಳಲ್ಲೂ, ಎಲ್ಲ ಮಜಲುಗಳಲ್ಲೂ ಅಧಿಕಾರ ರಾಜಕಾರಣದ ಅಧಿಪತ್ಯವನ್ನು ಸ್ಥಾಪಿಸಲು ವ್ಯವಸ್ಥಿತವಾಗಿ ಸಿದ್ಧತೆ ನಡೆಯುತ್ತಿದ್ದು ಇದೀಗ ಸಾಹಿತ್ಯವಲಯವನ್ನೂ ಆವರಿಸಿದೆ.

ಶೃಂಗೇರಿಯಲ್ಲಿ ಇದೇ 10 ಮತ್ತು  11ನೆಯ ತಾರೀಖು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ  ಮೂಲಕ ಮತಾಂಧತೆ ಮತ್ತು ದ್ವೇಷ ರಾಜಕಾರಣ  ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದೆ. ಜನಪರ  ಹೋರಾಟಗಾರ ಮತ್ತು ಚಿಂತಕ, ಸಾಮಾಜಿಕ ಕಳಕಳಿಯುಳ್ಳ ಪರಿಸರವಾದಿ ಕಲ್ಕುಳಿ ವಿಠ್ಠಲ್ ಹೆಗ್ಡೆಯವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದೇ ಸಾಂಸ್ಕೃತಿಕ ಅಧಿಪತಿಗಳನ್ನು ಕಂಗೆಡಿಸಿದೆ.

ಆಡಳಿತಾರೂಢ ಪಕ್ಷಗಳಿಗೆ, ಪ್ರಭುತ್ವಕ್ಕೆ ಪರಾಕು ಹೇಳುತ್ತಾ, ತುತ್ತೂರಿ ಊದುವ ಸಾಹಿತಿಗಳಿಗೇ ಮಣೆ ಹಾಕುವ ಒಂದು ದರಿದ್ರ ಪರಂಪರೆಯನ್ನು ಗಮನಿಸುತ್ತಲೇ ಬಂದಿದ್ದೇವೆ. ಬಂಡಾಯದ ದನಿಯನ್ನೇ ಸಹಿಸದ ಪ್ರಭುತ್ವ ವ್ಯವಸ್ಥೆಯ ನಡುವೆ  ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗಾಗಿ ಹೋರಾಡುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ.

ಇಂತಹ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕಲ್ಕುಳಿ ಹೆಗ್ಡೆಯವರಂತಹ ಹೋರಾಟಗಾರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹವೇ ಎನ್ನಬಹುದು. ಆದರೆ ಸರ್ಕಾರದ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಕ್ಕೆ ನೀಡಬೇಕಾದ ದೇಣಿಗೆ ಹಣವನ್ನು ಸಚಿವರ ಆದೇಶದ ಮೇರೆಗೆ ತಡೆಹಿಡಿದಿರುವುದು ಸಾಹಿತ್ಯ ಲೋಕಕ್ಕೆ ಅಪಚಾರ ಎಸಗಿದಂತಾಗಿದೆ. ಇದು ದ್ವೇಷ ರಾಜಕಾರಣದ ಸಾಹಿತ್ಯಕ ಸ್ವರೂಪವೇ ?

ಕಲ್ಕುಳಿ ಹೆಗ್ಡೆಯವರ ವ್ಯಕ್ತಿಗತ ಸೈದ್ಧಾಂತಿಕ ನಿಲುವನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಅಥವಾ ಪ್ರಭುತ್ವ ಮತ್ತು ಸಮಾಜದ ಒಂದು ವರ್ಗ ಅವರನ್ನು ನಕ್ಸಲ್ ಎಂದ ಮಾತ್ರಕ್ಕೆ ಅವರು ನಕ್ಸಲರಾಗುವುದಿಲ್ಲ. ಆದಿವಾಸಿಗಳ ಪರ, ಅರಣ್ಯ ರಕ್ಷಣೆಗಾಗಿ, ಪರಿಸರ ರಕ್ಷಣೆಗಾಗಿ, ಜೀವನಾಶಕ ಬೃಹತ್ ಯೋಜನೆಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಪ್ರಭುತ್ವದ  ದೃಷ್ಟಿಯಲ್ಲಿ ನಕ್ಸಲರಾಗಿಯೇ ಕಾಣುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಸಾಹಿತ್ಯಕ ಧೋರಣೆ ಮತ್ತು ಹೋರಾಟದ ಹಾದಿಯನ್ನು ಅಲ್ಲಗಳೆಯಲಾಗುವುದಿಲ್ಲ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಚದುರಂಗ ಪ್ರಶಸ್ತಿ ಪಡೆದಿರುವ ಕಲ್ಕುಳಿ ಹೆಗ್ಡೆಯವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅರ್ಹತೆ ಇರುವುದನ್ನು ಯಾರಿಂದಲೂ ಪ್ರಶ್ನಿಸಲಾಗುವುದಿಲ್ಲ.

ಆದರೂ ಕರ್ನಾಟಕದ ಸಂಸ್ಕೃತಿ ಇಲಾಖೆಯ ಸಚಿವರು ತಮ್ಮ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿ ಸಮ್ಮೇಳನಕ್ಕೆ ನೀಡಬೇಕಾದ ಹಣವನ್ನು ತಡೆಹಿಡಿದಿದ್ದಾರೆ. ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ಕಾರದ ಈ ಧೋರಣೆಯನ್ನು ಧಿಕ್ಕರಿಸಬೇಕಿತ್ತು ಆದರೆ ಶರಣಾಗಿಬಿಟ್ಟಿದ್ದಾರೆ . ಇದು ಇನ್ನೂ ಹೆಚ್ಚಿನ ದುರಂತ. ಅಧಿಕಾರಯುತ ಸ್ಥಾನಮಾನಗಳಿಗಾಗಿ ಅಧಿಕಾರ ರಾಜಕಾರಣಕ್ಕೆ ಶರಣಾಗುವ ಪರಂಪರೆ ಸಾಹಿತ್ಯ ಲೋಕವನ್ನು ಪ್ರವೇಶಿಸಿ ಹಲವು ವರ್ಷಗಳೇ ಸಂದಿವೆ. ಆದರೆ ಇಂದು ಪರಾಕಾಷ್ಠೆ ತಲುಪಿದೆ.

ಸರ್ಕಾರದ ಕೃಪೆಯಿಲ್ಲದೆಯೂ ಸಮ್ಮೇಳನ ನಡೆಸಬಹುದು ಎಂದು ನಿರೂಪಿಸಲು ಕನ್ನಡದ ಮನಸುಗಳು ಒಂದಾಗಿ ಜನರಿಂದಲೇ ದೇಣಿಗೆ ಸಂಗ್ರಹಿಸಲು ಮುಂದಾಗಿರುವುದು ನಿಜಕ್ಕೂ ಸ್ತುತ್ಯಾರ್ಹ. ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಆಳುವ ವರ್ಗಗಳಿಗೆ ಪರಾಕು ಹೇಳುವ ಒಡ್ಡೋಲಗ ಅಲ್ಲ ಇದು ಕನ್ನಡಿಗರ ಮತ್ತು ಕರ್ನಾಟಕದ ಜನತೆಯ ಹಬ್ಬ. ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಒಮ್ಮತದಿಂದ ಆಯ್ಕೆಯಾದ ಸಮ್ಮೇಳನಾಧ್ಯಕ್ಷರನ್ನು ವಿರೋಧಿಸುವ ಮೂಲಕ ಸಚಿವ ಸಿ ಟಿ ರವಿ ತಮ್ಮ ಶೂನ್ಯ ಸಂವೇದನೆಯನ್ನು ಹೊರಗೆಡಹಿದ್ದಾರೆ.

ಇವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗುವುದಿಲ್ಲವಾದರೂ ಕನಿಷ್ಟ ಸಾರ್ವಜನಿಕ ಪ್ರಜ್ಞೆಯಾದರೂ ಇರಬೇಕಿತ್ತಲ್ಲವೇ ?  ಸಚಿವರ ಉದ್ಧಟತನ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷರ  ನಿಷ್ಕ್ರಿಯತೆ, ಸಾಹಿತ್ಯ ಸಮ್ಮೇಳನದ ಮೂಲ ಆಶಯಗಳಿಗೇ ಧಕ್ಕೆ ಉಂಟುಮಾಡಲಿದೆ. ಸಮ್ಮೇಳನಕ್ಕೆ ಅಡ್ಡಿಯುಂಟುಮಾಡುವ, ಗಲಭೆ ಸೃಷ್ಟಿಸುವ ಬೆದರಿಕೆ ಹಾಕುವ ಪುಂಡರನ್ನು ನಿಯಂತ್ರಿಸಬೇಕಾದ ಸರ್ಕಾರ, ಸಮ್ಮೇಳನಕ್ಕೇ ಕೊಡಲಿ ಪೆಟ್ಟು ನೀಡಲು ಮುಂದಾಗಿರುವುದು ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನೇ ಪ್ರಶ್ನಿಸುವಂತಿದೆ.

ಆಡಳಿತಾರೂಢ ಪಕ್ಷ ಬಯಸಿದಂತೆಯೇ ನಡೆಯಲು ಇದು ರಾಜಕೀಯ ಸಮಾವೇಶವಲ್ಲ. ಇಲ್ಲಿ ಮಂಡನೆಯಾಗುವ ವಿಚಾರಗಳು, ವಾಚಿಸಲಾಗುವ ಕವಿತೆಗಳು ಪರಾಕುಗಳಂತೆ ಇರಬೇಕಿಲ್ಲ. ಇಲ್ಲಿ ನಡೆಯುವ ಚರ್ಚೆಗಳು ಅಧಿಕಾಸ್ಥರನ್ನು ಸಂತೃಪ್ತಿಪಡಿಸುವ ಭಟ್ಟಂಗಿ ಸಾಹಿತ್ಯವಾಗಬೇಕಿಲ್ಲ. ಇದು ಎಲ್ಲ ಸಾಹಿತ್ಯ ಸಮ್ಮೇಳನಗಳಿಗೂ ಅನ್ವಯಿಸುವ ನಿಯಮ. ರಾಜ್ಯ ಸರ್ಕಾರ ಮತ್ತು ಸಂಸ್ಕೃತಿ ಖಾತೆ ಸಚಿವರು ಇದನ್ನು ಅರಿತಿಲ್ಲವೆಂದರೆ ಅಡ್ಡಿಯಿಲ್ಲ ಆದರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಈ ಪರಿಜ್ಞಾನ ಇರಬೇಕಲ್ಲವೇ ?

ತಮ್ಮ ಕುರ್ಚಿಯ ಭದ್ರತೆಗಾಗಿ ಸಾಹಿತ್ಯ ಸಂವೇದನೆಯನ್ನೂ ಬಲಿಕೊಡುವವರು ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಅರ್ಹತೆಯನ್ನೂ ಕಳೆದುಕೊಳ್ಳುತ್ತಾರೆ. ಇದು ಕೇವಲ ಒಂದು ಸಮ್ಮೇಳನ, ಒಬ್ಬ ಅಧ್ಯಕ್ಷರ ಪ್ರಶ್ನೆಯಲ್ಲ ಕನ್ನಡ ಸಾಹಿತ್ಯ ಲೋಕದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಪ್ರಶ್ನೆ. ಈ ಸ್ವಾಯತ್ತತೆಯ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಲೋಕ ಹೋರಾಡದಿದ್ದರೆ ಬಹುಶಃ ರಾಜಪ್ರಭುತ್ವದ ಪಂಜರದ ಗಿಣಿಗಳೇ ಮೆರೆದಾಡಿಬಿಡುತ್ತವೆ. ಭಟ್ಟಂಗಿ ಸಾಹಿತ್ಯವೇ ಮೇಳೈಸಿಬಿಡುತ್ತದೆ.

ಸಾಹಿತ್ಯ ಪರಿಷತ್ ಅಧ್ಯಕ್ಷರ ನಿಷ್ಕ್ರಿಯತೆಯ ವಿರುದ್ಧ ಪರಿಷತ್ತಿನ ಪದಾಧಿಕಾರಿಗಳೂ ದನಿಎತ್ತುವ ಅವಶ್ಯಕತೆ ಇರುವುದನ್ನು ಮನಗಾಣಬೇಕಿದೆ. ಈಗಾಗಲೇ ತನ್ನ ಅಂತಃಸತ್ವ ಕಳೆದುಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತಷ್ಟು ಬೆತ್ತಲಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು.

‍ಲೇಖಕರು avadhi

January 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Beluru Ramamurthy

  ಇದೇನೂ ಹೊಸದಲ್ಲ. ನೂರು ಗ್ರಂಥಗಳನ್ನು ಬರೆದು ನಲವತ್ತು ವರ್ಷಗಳಿಂದ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿರುವ ನನಗೆ ನಮ್ಮೂರಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ಹೋಗಲಿ ಕವಿಗೋಷ್ಠಿ ಅಧ್ಯಕ್ಷತೆ ಹೋಗಲಿ ಸೌಜನ್ಯಕ್ಕೂ ಆಹ್ವಾನ ಪತ್ರಿಕೆ ಕಳಿಸೋದಿಲ್ಲ. ಇಂದು ಕಸಾಪದ ದುಸ್ತಿತಿ,ದುರ್ಗತಿ

  ಪ್ರತಿಕ್ರಿಯೆ
  • NA DIVAKAR

   ಇದು ಜಿಲ್ಲಾ ಸಮಿತಿಯ ನಿರ್ಣಯ ಅವರನ್ನೇ ಕೇಳಿ ಪ್ರಶ್ನೆ ಇರುವುದು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ಧೋರಣೆಯನ್ನು ಕುರಿತು. ಕಲ್ಕುಳಿ ಯಾರಿಗೂ ಅರ್ಜಿ ಹಾಕಿರಲಿಲ್ಲ.

   ಪ್ರತಿಕ್ರಿಯೆ
 2. T S SHRAVANA KUMARI

  ಸಾಹಿತ್ಯ ಪರಿಷತ್ತು ಸರ್ಕಾರದ ಹಿಡಿತದಿಂದ ಹೊರಬರದ ಹೊರತು ಉಳಿಗಾಲವಿಲ್ವ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: