ಚೇತನಾ ತೀರ್ಥಹಳ್ಳಿ
ಮಾರ್ಚ್ ೨೦ರ ಮಧ್ಯಾಹ್ನ ರಜೆ ಹಾಕಿ ಮನೆಗೆ ಹೋಗಲಿಕ್ಕೆ ಎರಡು ಗಂಟೆಯಾಗೋದನ್ನೇ ಕಾಯುತ್ತ ಡೆಸ್ಕಿನ ಮೇಲೆ ತಲೆ ಇರಿಸಿ ಮಲಗಿದ್ದವಳಿಗೆ, ಗಾಜಿನ ಗೋಪುರದ ಮೇಲೆ ಹನಿಗಳು ಉದುರಿದಂತೆ ಭಾಸವಾಯ್ತು. ಕ್ಯಾಬಿನ್ನಿನ ಒಂದು ಬದಿಯ ಸಣ್ಣ ಕಿಟಕಿಯಿಂದ ಮಾತ್ರ ಅದು ಕಾಣುತ್ತಾದ್ದರಿಂದ ಎಲ್ಲೋ ಮರುದಿನದ ಗೌರಾಂಗ ಪೂರ್ಣಿಮೆಗೆ ಎಂದಿನಂತೆ ಗೋಪುರ ತೊಳೆದು ತಯಾರಿ ಮಾಡ್ತಿದಾರಂದುಕೊಂಡೆ. ತಲೆ ನೋವು ಏರುತ್ತ ಉಸಿರು ಕಟ್ಟಿದ ಹಾಗಾಗಿ ಕ್ಯಾಬಿನ್ನಿಂದ ಹೊರಬಂದು ನೋಡಿದರೆ, ಮಳೆ ಬೀಸಿ ಬೀಸಿ ಜಡಿಯುತ್ತಿತ್ತು. ಒಳ್ಳೆ, ರಚ್ಚೆ ಹಿಡಿದ ಮಗುವಿನ ಹಾಗೆ.
ಮಗುವಿನ ಹಾಗೆ ರಚ್ಚೆ ಹಿಡಿಯೋದು? ಹೌದು. ನನ್ನ ಎಲ್ಲ ಹಟಕ್ಕೂ ಅಂವ ಹಾಗನ್ನುತ್ತಲೇ ನಕ್ಕು ಮಣಿಸಿಬಿಡ್ತಾನೆ. ನನ್ನ ಹಟಗಳಾದರೂ ಹಾಗೇ ಇರುತ್ತವನ್ನಿ. ಅವತ್ತು ಮಳೆ ಬಂದ ದಿನ ಮಧ್ಯಾಹ್ನ ರಜೆ ಹಾಕಬೇಕೆಂದುಕೊಂಡಿದ್ದೆನಲ್ಲ, ಅವತ್ತೂ ಹಾಗೇ ಆಗಿತ್ತು. ನನ್ನ ಯಾವುದೋ ತರಲೆಗೆ ಅಂವ ಸೊಪ್ಪು ಹಾಕಲಿಲ್ಲ ಅನ್ನುವ ಒಂದೇ ಕಾರಣಕ್ಕೆ ಮುನಿಸಿಕೊಂಡು ಕುಂತಿದ್ದೆ. ಅವನ ತಪ್ಪುಗಳನೆಲ್ಲ ಹುಡುಹುಡುಕಿ ಪಟ್ಟಿ ಮಾಡಿ, ‘ನಾನೇ ಕೆಟ್ಟವಳು, ನೀ ನಂಗೆ ಬೇಡ’ ಅಂತೆಲ್ಲ ಲೆಟರ್ರು ಬರೆದಿಟ್ಟು ಬಂದಿದ್ದೆ. ಅತ್ತು ಅತ್ತು ಕಣ್ಣು ಊದಿಹೋಗಿತ್ತು. ಸಧ್ಯ! ಹಿಂದಿನ ದಿನವಷ್ಟೆ ಕಣ್ಣುಚಿಟ್ಟಲೆಯಾಗಿದ್ದರಿಂದ ಕಲೀಗಿಗೆ ಅದು ಮದ್ರಾಸ್ ಐ, ನಿಮಗೂ ತಾಗಬಹುದು ಅಂತೆಲ್ಲ ಹೆದರಿಸಿ, ಮಧ್ಯಾಹ್ನದ ಊಟಕ್ಕೆ ನನ್ನ ಕ್ಯಾಬಿನ್ನಿಗೆ ಬರದ ಹಾಗೆ ಮಾಡಿದ್ದೆ!
ಮಳೆ ಮಾತ್ರ ಅಳು ಮುಚ್ಚೋಕೆ ಸಹಾಯ ಮಾಡುತ್ತೆ ಅಂದುಕೊಂಡಿದ್ದ ನಂಗೆ, ಈ ಥರದ ಕಣ್ಣುಚಿಟ್ಟಲೆಯೂ ಸಹಾಯಕ್ಕೆ ಬರುತ್ತೆ ಅಂತ ಕಂಡುಕೊಂದಿದ್ದಕ್ಕೆ ಖುಷಿಯಾಗಿತ್ತು!!
ಪಿರಿ ಪಿರಿ ಮಳೆಯಲ್ಲಿ ನೆನೆಯುತ್ತ ನಡುಗುತ್ತ ಆಟೋ ಸ್ಟ್ಯಾಂಡಿನವರೆಗೆ ನಡೆದು ಹೋಗುತ್ತಿದ್ದಾಗ ರಸ್ತೆಯ ಮೇಲಿನ ಗಲೀಜು ಕಾಲಿಗೆಲ್ಲ ಸಿಡಿಯಿತು. ನಾನು ಮುಖ ಸಿಂಡರಿಸುತ್ತ ಬಾಟಮ್ಮನ್ನು ಕೊಂಚ ಮೇಲೆತ್ತಿ ಹಿಡಿದು ಮಧ್ಯ ದಾರಿಯಲ್ಲಿ ನಿಲ್ಲಿಸಲಾಗಿದ್ದ ‘ಶ್ರೀ ಗಣೇಶ ಪ್ರೀಯ ನೀರು ಸರಭರಾಜ್’ ಟ್ಯಾಂಕರಿನವನಿಗೆ ಹಿಡಿ ಶಾಪ ಹಾಕುತ್ತ ಸರ್ಕಸ್ ಮಾಡಿಕೊಂಡು ಹೋಗ್ತಿರುವಾಗ ಊರ ಮಳೆ ನೆನಪಾಗಿಬಿಟ್ಟಿತು. ಅದೂ ಹೇಳಿಕೇಳಿ ತೀರ್ಥಳ್ಳಿ ಮಳೆ!!
ಬೇಕಂತಲೇ ಛತ್ರಿ ಮಡಚಿ ನೆನೆಯುತ್ತ ಕೆಸರು- ಕೊಚ್ಚೆಯನ್ನ ಪಚಕ್ಕನೆ ತುಳಿದು ಪಕ್ಕದವರಿಗೆ ಹಾರಿಸ್ತಾ, ಕೊಡೆ ಬಿಡಿಸಿದ್ದರೆ, ಪಕ್ಕದವರ ಕೊಡೆಗೆ ಗುನ್ನ ಹಾಕುತ್ತ, ಬಟನ್ ಛತ್ರಿ ಉಲ್ಟಾ ಹೊಡೆದರೆ ‘ಹೋ…’ ಅರಚುತ್ತ…. ಆಹಾ, ಮಜವೇ ಮಜ.
ನಾನು ಅವಂಗೆ ಗಂಟುಬಿದ್ದಿದ್ದು ಕೂಡ ಇಂಥದೊಂದು ಛತ್ರಿ ಉಲ್ಟಾ ಹೊಡೆದ ದಿನವೇ. ಕಾಲೇಜಿಗೆ ಹೋಗುವ ಕುಶಾವತಿ ಬ್ರಿಡ್ಜಿನ ಮೇಲೆ ಛತ್ರಿ ಅಂಗಾತ ಮಗುಚಿ, ಸೊಯ್ಯೋ ಗಾಳಿಗೆ ನನ್ನ ದುಪಟ್ಟಾ ಹಾರಿ ಕೆಳಗಿನ ಕುಶಾವತಿಗೆ ಬಿದ್ದು, ಥೇಟು ಹಿಂದಿ ಸಿನೆಮಾಗಳ ಹೀರೋಯಿನ್ನಿನ ಹಾಗೆ ನಾನು ನೆನೆಯುತ್ತ ನಾಚಿಕೊಂಡು, ಅಂವ ಕೆಳಗಿಳಿದುಹೋಗಿ ಅದನ್ನ ತಂದುಕೊಟ್ಟು ಉಸಿರು ಬಿಟ್ಟಿದ್ದ!
ನಮ್ಮೂರ ಕಡೆ ಆಗೆಲ್ಲಾ ಮಾರ್ಚ್ – ಏಪ್ರಿಲ್ಲಲ್ಲಿ ಮೊದಲ ಸುತ್ತಿನ ಮಳೆ ಜೋರಾಗೇ ಬರ್ತಿತ್ತು. ಅದು ಎಕ್ಸಾಮ್ ಟೈಮು. ಬೇಸಿಗೆಯ ಮಳೆ ಹೆಚ್ಚಿನ ಪಕ್ಷ ಸಂಜೆ ಹೊತ್ತಿಗೇ ಬರೋದು. ಹಗಲ ಬಿಸಿಲನ್ನ ನೆಚ್ಚಿ ‘ಆ ಛತ್ರಿ ಬೇರೆ ಬಾಧಿ’ ಅಂತ ಸೊಕ್ಕು ಹೊಡಕೊಂಡು ಹೋಗುತ್ತಿದ್ದ ನಾನು ಸಂಜೆ ಮಳೆಗೆ ತಲೆ ಮೇಲೆ ಕೈಹೊತ್ತು ಕುಂತಿದ್ದರೆ, ಪಾಪ ನನ್ನಮ್ಮ ಮೂರು ಕಿಲೋಮೀಟರು ದೂರವಿದ್ದ ಮನೆಯಿಂದ ನನಗೆ, ತಮ್ಮನಿಗೆ ಛತ್ರಿ ಹೊತ್ತು ತರ್ತಿದ್ದಳು. ಮನೆ ಕೆಲಸವೆಲ್ಲ ಮುಗಿಸಿ, ಅಷ್ಟು ದೂರವೂ ನಡೆದುಕೊಂಡೇ ಬರ್ತಿದ್ದಳು.
ಬೆಂಗಳೂರಿನ ಮಳೆಯಲ್ಲಿ ತೋಯುತ್ತ ನಡೆಯುವಾಗೆಲ್ಲ ಅಮ್ಮನ ನೆನಪಾಗುತ್ತೆ. ಅವಳ ಕಾಳಜಿಯ ನೆನಪಾಗಿ ಮಳೆ ಹನಿಯೊಟ್ಟಿಗೆ ಕಣ್ಣೀರೂ ಹರಿದುಹೋಗುತ್ತೆ.
ಅವತ್ತೂ ನೆನಪಾಯ್ತು. ಎಲ್ಲ ನೆನಪಾಗುತ್ತ ಆಗುತ್ತ ಸುತ್ತಿ ಬಳಸಿ ಅವನ ಹಿಂದೆಯೇ ಬಂದು ಬೆಳಗಿನ ರಗಳೆಯೆದುರು ಧುತ್ತನೆ ನಿಂತುಬಿಡ್ತು. ಮಳೆಗಾಲದಲ್ಲೇ ನಾವು ನಂದಿಬೆಟ್ಟದ ಮೇಲೆ ಮದುವೆಯಾಗಿದ್ದು!
ಅಂವ ನನ್ನಪ್ಪನ ಮನೆಗೆ ಮೊದಲ ಸಾರ್ತಿ ಕಾಲಿಟ್ಟಿದ್ದೂ ಮಳೆಗಾಲದಲ್ಲೇ! ನಡುವೆ ಒಂದೆರಡು ವರ್ಷಗಳ ಅಂತರವಿತ್ತಷ್ಟೆ.
ಈಗ ನಾನು ಅವನ ಮೇಲೆ ಇನ್ನಿಲ್ಲದ ಹಾಗೆ ಮುನಿದುಕೊಂಡು ಅಂವನ್ನ ಬಿಟ್ತುಬಿಡ್ತೀನಿ ಅಂದ್ಕೊಂಡ ದಿನವೂ ಮಳೆ ಬರ್ತಿದೆ! ಹಹ್ಹ!! ಒಂದಕ್ಕೊಂದು ಲಿಂಕಿಲ್ಲದ ಹಾಗೆ ಯೋಚಿಸುತ್ತ ನಡೆದಿದ್ದೆ ನಾನು. ಆಟೋದವ ಇಪ್ಪತ್ತು ರುಪಾಯಿ ಆಗತ್ತೆ ಅಂದಿದ್ದಕ್ಕೆ ರೇಗಿತು. ಮಾಮೂಲಿಯಂತೆ ‘ನಿನ್ ಹೆಣ್ತಿ ಹೆಣ್ ಹಡಿಯ!’ ಅಂತ ಗೊಣಗಿಕೊಂಡು ಮುಖ ತಿರುಗಿಸಿ ನೆನೆಯುತ್ತ ನಿಂತೆ. ಅಷ್ಟೆಲ್ಲ ತಲೆನೋವುಗಳ ಮಧ್ಯದಲ್ಲೂ ನನ್ನ ಬೈಗುಳಕ್ಕೆ ನಂಗೇ ನಗು ಬರದೆ ಇರಲಿಲ್ಲ. ಹೀಗೇ ಬಾರದ ಆಟೋದವನಿಗೆ ಬೈದುಕೊಂಡು ನಿಂತಿದ್ದಾಗೊಮ್ಮೆ ಬೇರೊಬ್ಬ ಆಟೋದವನು ಬರ್ತೀನಂತ ನಿಲ್ಲಿಸಿದ್ದ. ಆಗ ಅಣ್ಣನ ಮಗಳು “ಅತ್ತೆ, ಇವ್ನ ಹೆಂಡ್ತಿ ಗಂಡು ಹಡೀತಾಳಲ್ವಾ?” ಅಂತೆಲ್ಲ ಕೇಳಿ ನನ್ನ ಸುಸ್ತುಹೊಡೆಸಿತ್ತು!
ಅದೆಲ್ಲ ನೆನಪಾಗಿ ತಡೆತಡೆದು ನಕ್ಕೆ.
ಹಾಗೂ ಹೀಗೂ ಮನೆ ಸೇರುವ ಹೊತ್ತಿಗೆ ಎಳೆಬಿಸಿಲು ಮೂಡ್ತಿತ್ತು.
ಒಂದು ದೊಡ್ಡ ಕಪ್ ಕಾಫಿ ಕುಡಿದು ಬಿದ್ದುಕೊಳ್ಬೇಕು. ಇವತ್ತು ಸಂಜೆ ಏನಾದ್ರೊಂದು ಡಿಸೈಡ್ ಮಾಡ್ಬೇಕು ಅಂತೆಲ್ಲ ಅಂದುಕೊಳ್ಳುತ್ತ ಲಟ ಪಟ ಮಾಡುತ್ತ ತಿರುಗದೆ ಸತಾಯಿಸ್ತಿದ್ದ ಕೀಯನ್ನೊಮ್ಮೆ ಎಳೆದು ಅಸಹನೆಯಿಂದಲೇ ಬಾಗಿಲು ತೆರೆದು ಒಳಹೋದೆ.
ರೂಮಲ್ಲಿ ಅಂವ ನಗುತ್ತ ಕುಂತಿದ್ದ. ‘ಕಣ್ಣಿಗೇನಾಯ್ತೋ?’ ಕೇಳಿದ. ‘ನಂಗೊತ್ತಿತ್ತು ನೀನಿವತ್ತು ಚಕ್ಕರ್ ಹಾಕಿ ಬರ್ತೀ ಅಂತ’ ಅಂದು ಬೆಳಗ್ಗೆ ನಾ ಬರೆದಿಟ್ಟಿದ್ದ ಲೆಟರ್ರು ಅಲ್ಲಾಡಿಸ್ತ ಕಣ್ಣು ಹೊಡೆದ.
ಅಷ್ಟೂ ಹೊತ್ತು ನಾನ್ಯಾತಕ್ಕೆ ಗೋಳಾಡ್ತಿದ್ದೆ? ಮರೆತು ಹೋಯಿತು.
ಹೊರಗೆ ಆಕಾಶ ಕೂಡ ಮಳೆ ಸುರಿಸಿದ್ದೇ ಸುಳ್ಳು ಅನ್ನೋಹಾಗೆ ನೀಟಾಗಿ ನೀಲಿ ಮೈ ಚಾಚಿಕೊಂಡು ಬಿದ್ದುಕೊಂಡಿತ್ತು!






ಕರಾವಳಿ-ಮಲೆನಾಡನ್ನು ಬಿಟ್ಟು ಬೆಂಗಳೂರು ಸೇರಿರುವ
ನಮಗೆಲ್ಲ ಸಾಕಷ್ಟು ಕಾಡುವುದು ಅಲ್ಲಿನ ಮಳೆ. ಮಳೆ
ಕುರಿತಾದ ಎಲ್ಲ ಸಾಹಿತ್ಯ ಎಷ್ಟೋ ನೆಮ್ಮದಿ ಕೊಡತ್ತೆ.
ಅದರಲ್ಲೂ ಚೇತನಾ ಬರೆವುದನ್ನು ಓದುವುದೆಂದರೆ
ಸಾಕಷ್ಟು ಖುಷಿ. ನಮ್ಮೆಲ್ಲರ ಪ್ರತಿನಿಧಿಯೋ ಚೇತನ?
-ಶಾರದಾ