ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ
ಈಗ ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದ್ದಾರೆ
ಇನ್ನಷ್ಟು ನಿಮ್ಮ ಮನದಾಳದೊಳಗೆ ಉಕ್ಕುತ್ತಿದ್ದರೆ ತಡ ಯಾಕೆ ನೀವೂ ಬರೆದು ಕಳಿಸಿ

ಪಾರ್ಲರ್ ಕಿಟಕಿಯಿಂದ..

ಎಸ್. ಪಿ. ವಿಜಯಲಕ್ಷ್ಮಿ
ಬೆಳಿಗ್ಗೆಯಿಂದ ನನಗೆ ಒಂದೇತುಡಿತ. ಇಲ್ಲ, ನನಗೊಂದು ಬದಲಾವಣೆ ಬೇಕೇಬೇಕು. ನನಗೀಗ ಎಷ್ಟು ವಯಸ್ಸು, ನಲವತ್ಮೂರು. ನಲವತ್ತೆಂಟರ ಗಂಡ ನನ್ನೊಂದಿಗೆ ಮೊದಲಿನಂತಿಲ್ಲವೆಂದು ಹಾಳು ಸಂಶಯ. ಫಾರ್ಟಿ ಪ್ಲಸ್ ನಲ್ಲಿ ಗಂಡಸಿನ ಬುದ್ಧಿ ಬದಲಾಗುತ್ತಂತೆ. ಎರಡನೇ ಬಾರಿ ಹರಯ ಹೊತ್ತಂತೆ ಚಪಲಚಿತ್ತನಾಗುವನಂತೆ, ಹೆಂಡತಿಯೀಗ ಅವನಿಗೆ ಹಳಸಿದ ಊಟದಂತೆ ಬೇಸರವಾಗುವಳಂತೆ. ಹೊರಗೆ ಹೊರಟರೆ ಸಾಕು, ಕಣ್ಣ ದೃಷ್ಟಿಯಲ್ಲಿ ಕಾಮನಬಿಲ್ಲಿನ ‘ಥಕಧಿಮಿಥ’ ಶುರುವಾಗೇಬಿಡುತ್ತಂತೆ. ಕನ್ನಡಿಯ ಮುಂದೆ ಹೆಣ್ಣಿನಂತೆ ಗಂಟೆಗಟ್ಟಲೆ ನಿಂತು ತನ್ನಲ್ಲೇ ತಾನು ಮೋಹಿತನಾಗುವಂತೆ ಆತ್ಮರತಿಗೀಡಾಗುತ್ತಾನಂತೆ. ರಸ್ತೆಯಲ್ಲಿಎದುರಾಗುವ ಬೇರಾವುದೇ ಹೆಣ್ಣಲ್ಲಿ ಇಂದ್ರ ಲೋಕದ ಬೆಡಗಿಯರ ಇಂದ್ರಛಾಪವನ್ನೇ ಕನವರಿಸಿಬಿಡುವನಂತೆ…!.
‘ಛೇ’…ಎಷ್ಟೊಂದು ಅಂತೆಕಂತೆಗಳು ಈ ದುರ್ಬಲ ಮನಸ್ಸನ್ನು ಹೊಕ್ಕು ಎದೆಗೊಳವನ್ನು ರಾಡಿಮಾಡಿಬಿಟ್ಟಿವೆ. ಇಂತಹ ರಾಡಿ ಕೊಳದಲ್ಲಿ ಪ್ರೀತಿಯ ಕಮಲಗಳು ನಳನಳ ಎಂದು ಹೇಗಿರಲು ಸಾಧ್ಯ…? ಎಲ್ಲವೂ ಮುರುಟಿ ಮುದುಡಿದ ಸೂರ್ಯಾಸ್ತದ ದುಃಖಿತ ಕಮಲಗಳು…..
ಇಲ್ಲ, ನನ್ನೆದೆಗೊಳದಲ್ಲಿ ಹಗಲು ಸುಂದರ ತಾವರೆಗಳು ಅರಳರಳಿ ನಗಬೇಕು, ಹಾಗೇ ಸಂಜೆಯಾಗುತ್ತಿದ್ದಂತೆ ಚಂದಿರನನ್ನು ಸೆಳೆದು ತರುವ ನೈದಿಲೆಗಳು ಇಲ್ಲಿ ‘ಫಕಫಕನೆ’ ಬಿಚ್ಚಿ ಸೊಗ ಬೀರಬೇಕು. ಇರುಳುಗಳು ಜೊನ್ನಮಳೆಯಲ್ಲಿ ನೆನೆಯಬೇಕು. ನನ್ನ ಬಾಹುಗಳಾಚೆ ಅವನಿಗೊಂದು ಭ್ರಮಿತ ಲೋಕವಿರದಂತೆ ತಡೆಗೋಡೆ ಕಟ್ಟಬೇಕು. ಅರೆ, ಜಗತ್ತೇ ಅಂಗೈಯ್ಯಾಗಿರುವಾಗ, ಎಲ್ಲೆಲ್ಲಿಗೆಂದು ಗೋಡೆ ಕಟ್ಟಲಿ… ಇಂಥ ಗೋಡೆಗಳನ್ನು ಒಡೆಯುವುದು ಪುರುಷ ಬಲಕ್ಕೇನು ಅಸಾಧ್ಯವೇ ಅಥವಾ ಋಷಿ ಮುನಿಗಳ ಇಂದ್ರಿಯಗಳನ್ನೇ ಕಲಮಲ ಮಾಡಿಬಿಟ್ಟ ಮೇನಕೆ, ತಿಲೋತ್ತಮೆಯರನ್ನೂ ಮೀರಿಸುವ ಬೆಡಗಿಯರಿರುವ ಈ ಸ್ವಚ್ಛಂದ ಶತಮಾನದಲ್ಲಿ ನನ್ನ ಗೋಡೆಯನ್ನು ಪುಡಿಪುಡಿಗೈವ ಚಂದೊಳ್ಳಿ ಚೆಲುವೆಯರೇನು ಕಮ್ಮಿಯೇ…?
ಥಟ್ಟನೆ ಅವಳು ನೆನಪಾದಳು. ‘ರಜನಿ, ನೋಡೆ ಇದು ಕಾಂಪ್ಲಿಮೆಂಟರಿ ಕಾರ್ಡ್. ನಾನು ಹೇರ್ ಸ್ಟ್ರೈಟ್ ಮಾಡ್ಸಿದ್ದಕ್ಕೆ ಸಿಕ್ಕಿದೆ. ನಾನೀಗ ಮೈಸೂರಿಗೆ ಶಿಫ್ಟ್ ಆಗ್ತಿದ್ದೀನಿ. ಇದು ವೇಸ್ಟ್ ಆಗುತ್ತೆ. ನಂಗೊತ್ತು, ನಿಂಗೆ ಕೊಟ್ರೂ ವೇಸ್ಟೇ… ಇನ್ನೂರು ರೂಪಾಯಿಗೆ ಬಿಟ್ಟಿ ಸೇವೆ ಮಾಡಿಸ್ಕೋಬಹ್ದು. ನಿಂಗೆ ಬೇಡ್ದಿದ್ರೆ ಯಾರ್ಗಾದ್ರೂ ಕೊಡು.’ ಪರ್ಸ್ ನ ಜಿಪ್ ಎಳೆದೆ. ಆರು ತಿಂಗಳಿಂದ ತಣ್ಣಗೆ ಕತ್ತಲಲ್ಲೇ ಇದ್ದ ಕಾರ್ಡ್ ತೆಗೆದೆ. ಆ ಪುಟ್ಟಕಾರ್ಡಿನ ಜೊತೆ ಮತ್ತೆ ಅವಳೇ ಹೇಳಿದ ಮೇಲಿನ ‘ಫಾರ್ಟಿ ಪ್ಲಸ್ ಬ್ಲ್ಯೂಸ್’ಗಳೆಲ್ಲಾ ನೆನಪಾಯ್ತು..
‘ನೆನ್ನೆ ಎಷ್ಟು ನಳನಳ ಅಂತಿರೋ ಕೆಂಪು ಹರಿವೆ ಸೊಪ್ಪುತಂದಿದ್ದೆ. ತರುವಾಗ, ನನ್ ನಾಲಿಗೆ ‘ಸೊಪ್ಪಿನ ಸಾಸಿವೆ’ಯ ರುಚೀನೇ ಕನವರಿಸ್ತಿತ್ತು. ಇವತ್ ನೋಡಿದ್ರೆ, ಹಾಳು ಹುಳಿ ಮಾಡಿಟ್ಟಿದ್ದೀ. ಸೊಪ್ಪು ವೇಸ್ಟ್ಆಯ್ತು…’ಎಂದು ಬಾಯಲ್ಲಿ ಗೊಣಗುತ್ತ, ಎರಡೆರಡು ಸಾರಿ ಹುಳಿಯಲ್ಲಿ ಅನ್ನ ಕಲೆಸಿ ತಿಂದು, ಮೊಸರು ಹಾಗೇ ತಿನ್ನುವಾಗ, ‘ಛೇ, ಮೊಸರು ಹುಳಿ’ ಎಂದು ಅದಕ್ಕೂ ಒಂದಿಷ್ಟು ಸೊಪ್ಪಿನ ಹುಳಿ ಬೆರೆಸಿ ತಿಂದೆದ್ದ ರೋಹಿತನ ಮಾತು ನೆನಪಾಯ್ತು. ಮುಖದಲ್ಲಿ ಸೊಪ್ಪಿನ ಹುಳಿಯ ರುಚಿಯ ಸಂತೃಪ್ತಿ ಕಂಡಿದ್ದರೂ, ಹೇಳಲಿಚ್ಚಿಸದ ಬಿಗುಮಾನ, ಅಹಂ…ಅವನಿಗಿಷ್ಟವಾದದ್ದನ್ನು ಮಾಡದ ಬಗ್ಗೆ ಅಸಮಾಧಾನ….ಅಬ್ಬಾ, ಗಂಡೇ, ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲು ಅಂತಾರೆ. ಇವನಿಗೂ ‘ನಲವತ್ತರ ಹಸಿ ಹಚ್ಚನೆ ಗುಂಗು’ ಹತ್ತಿತಾ….?
ಇಲ್ಲ ಬದಲಾಗಬೇಕು, ಚಪ್ಪಲಿ ಮೆಟ್ಟಿ ಕಂಪ್ಯೂಟರ್ ಮುಂದಿದ್ದ ರೋಹಿತ್ ಗೆ ‘ಸ್ವಲ್ಪ ಕೆಲ್ಸಇದೆ ಹೊರಗೆ ಹೋಗ್ತಿದೀನಿ’ ಎಂದು ಉತ್ತರಕ್ಕೂ ಕಾಯದೆ ‘ಧಡ್’ ಎಂದು ಬಾಗಿಲು ತೆರೆದು ಹೊರಗಡಿಯಿಟ್ಟರೆ ಅವನ ಕಣ್ಣಲ್ಲಿ ಆಶ್ಚರ್ಯದ ಕಿಡಿ. ಮನೆಯ ಶಾಂತ ವಾತಾವರಣದಿಂದ ಬೀದಿಗೆ ಹೆಜ್ಜೆಯಿಟ್ಟಾಗ ಜಗತ್ತಿನ ಲೋಕವ್ಯಾಪಾರ ಯಾಕೋ ತಲೆಚಿಟ್ಟು ಹಿಡಿಸುವಂತೆ. ನಾನೋ ಈ ಲೋಕವ್ಯಾಪಾರದಿಂದ ಚೂರು ಹೊರತಾದವಳು.
ನಾನಿದುವರೆಗೂ ದುಂಡು ದುಂಡಾದ ಚಂದ್ರಮನ ಹಾಗೇ. ಬಿಟ್ಟಿಯಾಗಿ ನಿನ್ನ ‘ಕ್ಲಿಯೋಪಾತ್ರ’ಳ ಥರ ಲೋಕವನ್ನೇ ಸೆರೆ ಹಿಡಿವಂಥ ಚೆಲುವೆಯನ್ನಾಗಿ ಮಾರ್ಪಡಿಸುತ್ತೇವೆ ಎಂದಿದ್ದರೂ ಮರುಳಾಗದ ಮುಗ್ಧೆ. ಪಾರ್ಲರ್ ಮೆಟ್ಟಿಲು ತುಳಿದಿಲ್ಲ ಎಂದರೆ, ನೀವೇನೂ, ಯಾರೂ ನಂಬೋದಿಲ್ಲ. ಒಮ್ಮೆರೋಹಿತ್ ಗೆ ಕೇಳಿದ್ದೆ, ‘ನಾನೂ ಬ್ಯೂಟಿಪಾರ್ಲರ್ ನಲ್ಲಿ ಹೇರ್ ಟ್ರಿಮ್ ಮಾಡಿಸ್ಕಳ್ಲಾ…?’. ‘ಮಾರಾಯ್ತಿ, ಆಮೇಲೆ ಯಾರ ನೀಳ ಜಡೆ ಹಿಡ್ಕೊಂಡು ನನ್ನಿಷ್ಟದ ಹಾಡಾದ ‘ನನ್ನವಳು ನನ್ನೆದೆಯ ಹೊನ್ನಾಡನಾಡುವಳೂ, ಬೆಡಗೂಗೆನ್ನೇ ಚೆಲುವೆ ನನ್ನಾ ಹುಡುಗೀ…. ಕಪ್ಪುಗುರುಳನು ಬೆನ್ನಮೇಲೆಲ್ಲ ಹರಡಿದರೇ, ದೂರದಲೀ ಗಿರಿಯಾ ಮೇಲೇ ಇಳಿದಂತೆ ಇರುಳಾಮಾಲೇ…’ ಹೀಗಂತ ಹಾಡಲೀ ನೀನೇ ಹೇಳು….’ ಹೀಗೆಂದವನ ಕಣ್ಣಲ್ಲಿ ಕಂಡ ತುಂಟತನ, ರಸಿಕತೆ, ಕಣ್ಣ ದೃಷ್ಟಿಯಲ್ಲೇ ಕರಗಿಸಿ ತನ್ನೊಳಗೆ ಅಡಗಿಸಿಕೊಂಡು ಬಿಡುವ ಬೆಚ್ಚನೆ ಭಾವ…ಕನ್ನಡಿಯ ಮುಂದೆ ನಿಂತು ನಾನು ಹಿಗ್ಗಿಹೋಗಲು ಇದಕ್ಕಿಂತ ಪಾರ್ಲರ್ ಬೇಕಾ…?
ಆದರೆ, ನಾನೀಗ ಪಾರ್ಲರ್ ನಲ್ಲಿ ಬದಲಾಗಿ ಬರಬೇಕು……!
‘ಯೆಸ್ ಮೇಡಮ್…’ ಮನಸಿನ ತುಂಬೆಲ್ಲ ರೋಹಿತ್ ಮೇಲಿನ ಕೋಪ. ಆದ್ದರಿಂದಲೇ ಇರ್ಬೇಕು, ನಾಲ್ಕು ಮಹಡಿಯ ಅದೆಷ್ಟು ಮೆಟ್ಟಿಲು ಹತ್ತಿ ಬಂದೆ. ಆಯಾಸ ಚೂರೂ ಕಂಡಿಲ್ಲ. ಸೊಪ್ಪಿನಹುಳಿಗೆ ಹಾಗೆ ಮುಖ ಹಿಂಡಿದೋನ ಎದುರಿಗೆ ನಾನೀಗ ಟ್ರೋಜನ್ ವಾರ್ ಗೆ ಕಾರಣಳಾದ ಹೆಲೆನ್ ಳ ಥರ ಹೋಗಿ ನಿಲ್ಬೇಕು…..! ಯೋಚಿಸುತ್ತ ಆ ಆರಡಿ ಎಂಟಡಿಯ ಎಂಟ್ರೆಂಸ್ಸಿನಲ್ಲಿ ಕೂತವಳ ಮುಖ ನೋಡಿದೆ. ಇದ್ದ ಚೂರು ಕೂದಲನ್ನೇ ಎತ್ತಿ ಕಟ್ಟಿ ಸೈಡಲ್ಲೊಂದಿಷ್ಟು ಎಳೆಗಳನ್ನು ನೀಳಕ್ಕೆ ಬಿಟ್ಟುಕೊಂಡಿದ್ದಳು. ಮುಖ ಆಯ್ಲಿಯಾಗಿ ಹೊಳೆಯುತ್ತಿದ್ದರೂ ಪೇಲವನೇ. ಅಲ್ಲಿದ್ದ ಬೀರುಗಳ ತುಂಬಾ ಪ್ರದರ್ಶನಕ್ಕಿಟ್ಟ ಬೊಂಬೆಗಳಂತೆ ಕಾಸ್ಮೆಟಿಕ್ ಪ್ರಾಡಕ್ಟ್ಸ್ ಗಳು.
‘ಯೆಸ್ ಮ್ಯಾಮ್, ಬ್ಲೀಚಿಂಗ್, ಫೇಷಿಯಲ್, ವ್ಯಾಕ್ಸಿಂಗ್, ಹೇರ್ ಸ್ಟೈಲ್ ಯಾವ್ಯಾವ ಪ್ಯಾಕೇಜ್ ಬೇಕು’ ಟೇಬಲ್ ಮೇಲೆ ಕೆಟಲಾಗ್ ಹಾಳೆಗಳನ್ನು ತಿರುಗಿಸಿಕೊಳ್ಳುವಾಗ ನೋಡ್ದೆ. ಎಂಟು ನೂರು, ಸಾವಿರದಿನ್ನೂರು, ಎರಡೂವರೆ….’ಅಯ್ಯಯ್ಯೋ, ಈಗ ಸ್ಟೆಪ್ಸ್ ಹತ್ತಿದ ಆಯಾಸದ ಬೆವರೆಲ್ಲಾ ಕಿತ್ತುಕೊಳ್ತು. ಎದುರಿದ್ದ ಕನ್ನಡಿ ನೋಡ್ದೆ. ಹೇಗೆ ತಿರುಗಿದ್ರೂ ನಾನು ಲಕ್ಷಣವಾಗೇ ಇದೀನಿ….ಇನ್ನೂರು ರೂಪಾಯಿ ಕಾಂಪ್ಲಿಮೆಂಟರಿ ಕಾರ್ಡ್ಸ್ ಗೆ ಏನು ಪ್ಯಾಕೇಜು…. ಕೇಳಿದೆ. ದುಡ್ಡಿಗಿಂತ ಲುಕ್ಕೇ ಮುಖ್ಯ ಎಂದು ದಂಡು ಕಟ್ಟಿ ಬರೋ ಲಲನೆಯರು ಆ ಕುರ್ಚಿಗಳಲ್ಲಿ ಕೂತು ಜೇಬು ಕರಗಿಸಿಕೊಳ್ಳಲು ಅಪ್ಪಾಯಿಂಟ್ಮೆಂಟ್ ತಗೊಂಡು ಬರ್ಬೇಕಾದ್ರೆ, ಜುಜ್ಬಿ ಕಾಂಪ್ಲಿಮೆಂಟರಿ ಕಾರ್ಡ್ ಹಿಡ್ಕಂಡು (ಕೊಟ್ಟಿದ್ದು ಅವ್ರೇ ಆದ್ರೂ) ಬಂದ ನಾನು ಅನ್ಯಗ್ರಹದ ಜೀವಿಯ ಹಾಗೆ ಅವಳಿಗೆ ಕಂಡಿರಬೇಕು.
‘ಮ್ಯಾಮ್, ಇಪ್ಪತ್ತು ನಿಮಿಷ ಫೇಷಿಯಲ್ ಬರುತ್ತೆ…’ ಎನ್ನುತ್ತ ಬೇರೆಲ್ಲ ಆಮಿಷ ತೋರಿಸಿದಾಗ ರೋಹಿತ್ ಮೇಲಣ ಸೊಪ್ಪಿನ ಹುಳಿಯ ಸಿಟ್ಟು, ಫಾರ್ಟಿ ಪ್ಲಸ್ ನ ತೊಳಲಾಟ ನನ್ನ ಪರ್ಸ್ ನ ತೆಳ್ಳಗಾಗಿಸುವಲ್ಲಿ ಗೆದ್ದಿತು. ಒಳಗಿನ ಹಾಲಲ್ಲಿ ಹುಡುಗಿಯೊಬ್ಬಳು ಮದುವೆಗೆ ಹೋಗಲು ಮದುವೆ ಹೆಣ್ಣಿಗಿಂತಲೂ ಸಡಗರದಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿದ್ದಳು.
ತಿದ್ದಿದ ಹುಬ್ಬು, ಗಾಢವಾದ ಮೇಕಪ್, ತುಟಿ ರಂಗು, ಕಾಜಲ್, ನಕಲಿ ನೀಳ್ರೆಪ್ಪೆಗಳು, ಬೆನ್ನಮೇಲಿರುವ ವಿನ್ಯಾಸ ಮಾಡಿಯೂ ತೆಳುವಾದ ಕೂದಲುಗಳು….. ಗಂಟೆಯಿಂದ ಮಾಡಿಸಿಕೊಳ್ಳುತ್ತಿರುವಳಂತೆ. ಇಷ್ಟಕ್ಕೆ ಎರಡೋ ಮೂರೋ ಸಾವಿರವಾ….? ಕೂದಲು ಸ್ಟೈಲ್ ಮಾಡಿಸಿಕೊಳ್ಳುವ ಇರಾದೆಗೆ ರೆಸೆಪ್ಷನಿಷ್ಟ್ ತಲೆಯ ನಾಲ್ಕುಕೂದಲು ನೋಡಿದಾಗಲೇ ಎಳ್ಳುನೀರು ಬಿಟ್ಟಿದ್ದೆ. ಆದರೆ, ಅರ್ಜುನನನ್ನು ಗೆಲ್ಲಲು ಮದನನಿಂದ ವರಪಡೆದು ಸುರಸುಂದರಿಯಾದ ಚಿತ್ರಾಂಗದೆಯಂತೆ ಆಗಲು ಫೇಷಿಯಲ್ ಸೆಲೆಕ್ಟ್ ಮಾಡಿ ರೋಹಿತ್ ನನ್ನು ಮತ್ತೆ ಪೂರ್ತಿ ಸೋಲಿಸುವ ಜಿದ್ದಲ್ಲಿ ಒಳಹೊಕ್ಕೆ.
ಅದೆಷ್ಟೋ ಹುಡುಗೀರು ಮಲಗೆದ್ದ ಖಾಲಿಯಾದ ಬೆಡ್ಡಲ್ಲಿ ಮಲಗಿಸಿ ಒಂದಿಷ್ಟು ಕ್ರೀಮು, ಜೆಲ್ಲು ಹಚ್ಚಿ ಅರ್ಧಗಂಟೆಯ ‘ಗೋಲ್ಡನ್ ಫೇಷಿಯಲ್’ ಮಾಡಿ ಹೊರ ಕರೆತಂದಾಗ, ಆ ಹುಡುಗಿ ಇನ್ನೂ ಏನೇನೋ ಟಚಪ್ ಮಾಡಿಸಿಕೊಳ್ಳುತ್ತ, ಗಳಿಗೆಗೊಮ್ಮೆ ಮೊಬೈಲ್ಲಿನ ಮೆಸೇಜ್ ನೋಡುತ್ತ, ತುಟಿಯಲ್ಲಿ ನಗು ಚೆಲ್ಲುತ್ತ, ಮತ್ತೆ ಮೆಸೇಜ್ ಕಳಿಸುತ್ತ ಇರುವಾಗ, ಕನ್ನಡಿಯಲ್ಲಿ ನನ್ನ ನೋಡಿಕೊಂಡೆ. ನನ್ನ ಪ್ರತಿಬಿಂಬದಲ್ಲಿ ಅಂಥ ಯಾವ ಹೊಸ ಜಾದೂನೂ ಕಾಣಲಿಲ್ಲ. ಹಚ್ಚಿದ ಜೆಲ್ ಹೊಳೆಯುತ್ತಿತ್ತು ಅಷ್ಟೆ. ಮೊದಲೂ ನಾ ಹೀಗೇ ಕಾಣ್ತಿದ್ದೆ ಅಲ್ವಾ…? ‘ನಿಜ್ವಾಗ್ಲೂ ರಂಜೂ, ನೀ ಹೀಗೇ ಇದ್ದೀ…’ ಸೊಪ್ಪಿನಹುಳಿಯನ್ನು ಬೈದ ರೋಹಿತ್ ಕಿವಿಯಲ್ಲಿ ಪಿಸುಗಿದ್ದ.
ಬೆಚ್ಚಗಾದ ಕೆನ್ನೆಯ ಹೊಳಪು ಫೇಷಿಯಲ್ ಹೊಳಪಿಗಿಂತ ಚಂದವೆನ್ನಿಸಿತು. ಪಕ್ಕದಲ್ಲಿ ಮೇಕಪ್ ಢಾಳಾಗಿ ಮಾಡಿಸಿಕೊಳ್ಳುತ್ತಿರುವ ಆ ಹುಡುಗಿಗಿಂತ ನಾನು ಮುಗ್ಧವಾಗಿ, ಲಕ್ಷಣವಾಗಿ ಕಾಣಿಸುತ್ತಿದ್ದೇನೆಂದು, ಒಳಹೋಗುವ ಮೊದಲೂ ನಾ ಹೀಗೇ ಇದ್ದೆ ಎಂದು ಆ ಕನ್ನಡಿ ಹೇಳಿದ ಮಾತನ್ನು ನಂಬಬೇಕೆನ್ನಿಸಿತು.
ರೆಸೆಪ್ಷನಿಸ್ಟ್ ಕೊಟ್ಟ ಬಿಲ್ ಹಿಡಿದಾಗ ಮುಖ ಹಿಂಡಿದೆ.
‘ಓ..’ ಕೂಗಿದ ಹೊರಗಿನ ಗಾಜು ಒರೆಸುತ್ತಿದ್ದ ಪುಟ್ಟ ಹುಡುಗ. ತಿರುಗಿದೆ. ‘ನನ್ನರೂಪಾಯಿ ಬಿತ್ತು…’ ಎನ್ನುತ್ತ ಒರೆಸುವ ಬಟ್ಟೆ ಅಲ್ಲೇ ಎಸೆದು, ಬಿಟ್ಟಬಾಣದಂತೆ ಮೆಟ್ಟಿಲು ಇಳಿವಾಗ ನಾನೂ ಸಾವಿರ ರೂಪಾಯಿ ಕಕ್ಕಿ ಮೆಟ್ಟಿಲು ಇಳಿಯತೊಡಗಿದೆ. ಒಂದು ಫ್ಲೋರ್ ಇಳಿದಾಗ ಹುಡುಗ ಅಲ್ಲಿದ್ದ ಆಗಲೇ…. ‘ಸಿಕ್ತೇನೋ ರೂಪಾಯಿ….?’ ‘ಓ, ನೋಡಿ ಇಲ್ಲಿ.’ ಅಂಗೈ ಬಿಚ್ಚಿದ.
ರೋಹಿತ್ ಮೇಲಿನ ಸಿಟ್ಟಿಗೆ, ಬಿಟ್ಟಿ ಇನ್ನೂರು ರೂಪಾಯಿಯಲ್ಲಿ ಬಿಟ್ಟಿ ಪಾರ್ಲರ್ ರ್ಟ್ರೀಟ್ಮೆಂಟ್ ಗೆ ಬಂದವಳು ಸಾವಿರ ರೂಪಾಯಿ ಕಳಕೊಂಡ ಒಳಗುದಿ ಒಳಗೆಲ್ಲಾ ಹೊಗೆಯಂತೆ ತುಂಬಿಕೊಂಡಿರುವಾಗ, ಆ ಪುಟ್ಟ ಹುಡುಗನ ಒಂದು ರೂಪಾಯಿಯ ಬೆಲೆ, ನನ್ನ ಮನೆಯ ತಿಂಗಳ ಖರ್ಚಿಗಿಂತ ಹೆಚ್ಚೆನಿಸಿತು. ಸಾವಿರ ರೂಪಾಯಿಯಲ್ಲಿ ರೆಸೆಪ್ಷನಿಷ್ಟ್ ವಾಪಸ್ಕೊಟ್ಟ ಇಪ್ಪತ್ತು ರೂಪಾಯಿ ಹಿಡಿದ ಅಂಗೈ ತೆರೆದೆ. ಅವನ ಪುಟ್ಟ ಕೈ ಹಿಡಿದು, ‘ತೊಗೋ ಮಗು ಇಟ್ಕೋ ಇದನ್ನು…’ಎಂದ್ರೆ, ಹುಡುಗ ಬೆಚ್ಚಿದ. ‘ಬ್ಯಾಡ್ರೀ…’ಎಂದ ಮುಗ್ಧ ಕಂಗಳಲ್ಲಿ ಆಸೆಯೂ ಇತ್ತು. ಬಲವಂತವಾಗಿ ಕೈಬಿಡಿಸಿ ‘ಇಟ್ಕೋ…’ ಎನ್ನುತ್ತ ದಢ ದಢ ಮೆಟ್ಟಿಲು ಇಳಿಯುತ್ತ, ಇನ್ನುಇಲ್ಲಿ ಬರೋಲ್ಲ ಎಂದುಕೊಳ್ಳುವಾಗ ತುಂಬ ಆಯಾಸ ಮೈಯ್ಯಲ್ಲಿ..
ಟಕಟಕ ಬಾಗಿಲು ಬಡಿದರೆ, ಬಾಗಿಲ ತೆರೆದ ರೋಹಿತ್ ಜಡೆಯೆಳೆದ. ‘ದೂರದಲೀ ಗಿರಿಯಾ ಮೇಲೇ ಇಳಿದಂತೆ ಇರುಳಾಮಾಲೇ…..’ ಎಂದು ತುಂಟತನದಲ್ಲಿ ತನ್ನ ಕೊರಳಿಗೆ ನನ್ನಜಡೆ ಸುತ್ತಿಕೊಂಡಾಗ, ಜಡೆಗೆ ಪಾರ್ಲರ್ ಕತ್ತರಿ ಸೋಕಿಸದ ನನ್ನ ಜಾಣತನಕ್ಕೆ ಖುಷಿಯಾಯ್ತು, ಸಾವಿರ ರೂಪಾಯಿ ಕಳೆದ ನೋವಾಯ್ತು, ಪುಟ್ಟ ಹುಡುಗನ ಅನಿವಾರ್ಯತೆಯ ಕನಸಿಗೆ ಇಪ್ಪತ್ತು ರೂಪಾಯಿ ಕೊಟ್ಟ ನೆಮ್ಮದಿಯೂ ಆಯ್ತು. ರೋಹಿತ್ ನೆಡೆಗೆ ಬೆಚ್ಚಗಿನ ನಗು ಎಸೆದರೆ, ಅವನೋ ನಗುವನ್ನೇ ಬಂಧಿಸಿಬಿಟ್ಟ.
ಈಗವನು ಸೊಪ್ಪಿನಹುಳಿ ರುಚಿಯಿತ್ತು ಎನ್ನುವ ಸತ್ಯ ಬಿಚ್ಚಿಡುತ್ತಾನೆ. ಅವನು ಹಾಗೆ ಹೇಳದಿದ್ದರೂ, ಅವನ ಬೆಳಗ್ಗಿನ ಸಂತೃಪ್ತಿಯ ಭಾವವನ್ನು ನಾನು ಅರ್ಥಮಾಡಿಕೊಂಡಿಲ್ವಾ… ನೀವೇನೇ ಹೇಳಿ, ಗಂಡಿನಲ್ಲಿ ಚೂರು ಅಹಂ, ಬಿಗುಮಾನ ಇದ್ದರೇ ಚೆನ್ನ..





ಗಂಡಸರೇನಾದ್ರು ನಿಮ್ bottom line ಓದಿದ್ರೆ ಇನ್ನೂ ಅಹಂ ಜಾಸ್ತಿ ಆಗ್ಬಿಡುತ್ತೆ
ಕಾಯ್ಕಿಣಿಯವರ ಪಾರ್ಲರ್ ಗೆ ನನ್ನ ಲಹರಿಯನ್ನೂ ಸೇರಿಸಿದ ” ಅವಧಿ” ಗೆ ಧನ್ಯವಾದಗಳು