ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಕಾಯ್ಕಿಣಿ ಪಾರ್ಲರ್ ಗೆ..

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ  ಪ್ರಕಟವಾಗಿತ್ತು.

ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.

ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

13164329_10206523971286215_7104719140827404938_nನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..

ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು. 

ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.

ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ

ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.     

ಸ್ಫೂರ್ತಿ ಗಿರೀಶ್ ಪಾರ್ಲರ್ ಹೊಕ್ಕ ನಂತರ ಈಗ ರವಿ ಕುಲಕರ್ಣಿಎಂಟ್ರಿ ಕೊಟ್ಟರು. 

ಅಂಗೋಲಾದಿಂದ, ಅಂಕೋಲಾ ಅಲ್ಲ- ಪ್ರಸಾದ್ ಕೆ ಪಾರ್ಲರ್ ನೊಳಗೆ ಹೆಜ್ಜೆ ಹಾಕಿದರು

ಶ್ರೀಕಾಂತ್ ಪ್ರಭು ಕಥೆಯನ್ನು ಇನ್ನೊಂದು ದಿಕ್ಕಿಗೆ ಒಯ್ದರು  

ನಂತರ ಒಳಹೊಕ್ಕಿದ್ದು ಡಿ ನಳಿನ 

ಈಗ ಮಾನಸಾ ಹೆಗ್ಡೆ ಕಿಟಕಿಯ ಭಾವಗಳನ್ನು ಮುಂದುವರಿಸಿದ್ದಾರೆ 

ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?

ನೀವೂ ಬರೆದು ಕಳಿಸಿ 

manasa hegde

ಮಾನಸಾ ಹೆಗಡೆ

ಪಕ್ಕದ ಪಾರ್ಲರಿಗೆಂದು ಮೆಟ್ಟಿಲೇರಿ ಬರುವ ಲಲನೆಯರ ಹೀಲ್ಸಿನ ಟಕ್ ಟಕ್ ಸದ್ದಿನ ಜೊತೆ ಮಿಳಿತವಾದ ಆ ಹುಡುಗನ ಹವಾಯಿ ಚಪ್ಪಲಿಯ ದಬ ದಬ ಸದ್ದು ಕೇಳಿ ಅವಳ ಕಿವಿಯ ಪಕ್ಕದ ನರಗಳು ಪಟಪಟಿಸಿದವು!! ತೆಂಗಿನ ಗರಿಯಿಂದಿಳಿವ ಹನಿಗಳ ಲಯಬದ್ಧ ಸದ್ದಿಗೆ ಜೊತೆಯಾಗುವ ಮಳೆಜಿರಲೆಗಳ ತಾರಕ ರಿವ್ ರಿವ್ ಸ್ವರದ ನೆನಪಾಗಿ ಪುಟ್ಟ ನಿಟ್ಟುಸಿರು ತೇಲಿ ಬಂತು!!

“ಹಾಳು ಹುಡುಗ ಅದೇನು ಓಡುತ್ತಾನೆ, ಕುಣಿಯುತ್ತಾನೆ…. ಇಡೀ ಬಿಲ್ಡಿಂಗಿಗೆ ತಾನೇ ಯಜಮಾನ ಎಂಬಂತೆ ವರ್ತಿಸುತ್ತಾನೆ. ಫೇಶಿಯಲ್, ಫೇಸ್ ಪ್ಯಾಕುಗಳ ಮಹಾಸಂಗ್ರಾಮ ಶುರುವಾಗುತ್ತಿದ್ದ ಹಾಗೆ ಓಡಿ ಬಂದುಬಿಡುತ್ತಾನೆ ಹರಟೆ ಹೊಡೆಯಲು! ಯಾರಾದರೂ ಆದೀತು, ಮಾತು ಶುರು !

two faces of an eveಬಲು ಚೂಟಿ, ಚೂರು ಧಿಮಾಕು, ‘ಅಕ್ಕ ಎಷ್ಟೇ ಅಲಂಕಾರ ಮಾಡಲಿ, ಹೆಂಗಸರ ನೆರಿಗೆಗಳನ್ನು, ಹುಡುಗಿಯರ ಮೊಡವೆಗಳನ್ನು ಹೇಗೇ ಮರೆ ಮಾಚಲಿ, ಅವರಿಗೆ ತಾವು ಚಂದ ಎನಿಸುವುದು ನಾನು ಕನ್ನಡಿಯನ್ನು ಚೊಕ್ಕವಾಗಿ ವರೆಸಿದಾಗಲೇ’ ಎನ್ನುತ್ತಾನೆ! ಇಡೀ ದಿನ ಅಕ್ಕ, ಅಕ್ಕ ಎಂದು ಅವಳ ಹಿಂದೆಯೇ ಓಡಾಡಿಕೊಂಡಿದ್ದರೂ ಅವಳನ್ನು ಆಡಿಕೊಳ್ಳುತ್ತಾನೆ! ಮೊನ್ನೆಯಷ್ಟೇ “ಅವಳು ಅಕ್ಕನ ಕೈಗೆ ಮುಖ ಕೊಡುವ ಮೊದಲೇ ಚೆನ್ನಾಗಿ ಕಾಣುತ್ತಿದ್ದಳು” ಎನ್ನುತ್ತಾ ಯಾರನ್ನೋ ನೋಡಿ ನಕ್ಕಿದ್ದ!

ಪಾಪದ ಹುಡುಗನೆಂದು ಸದರ ಕೊಟ್ಟರೆ ಮೊಬೈಲಿಗೇ ಕೈ ಹಾಕುತ್ತಾನೆ. ಅದಕ್ಕಿಂತಲೂ ಸಿಟ್ಟು ತರಿಸುವ ವಿಷಯ ಎಂದರೆ ಆತ, ನಾನು ಮಧ್ಯಾಹ್ನದ ಊಟಕ್ಕೆ ಏನು ತಂದಿದ್ದೇನೆಂದು ಆ ಪಾರ್ಲರಿನಾಕೆಗೆ ಹೇಳುತ್ತಾನೆ. ಎಂದೋ ಹಸಿವಿರದೆ ಏನೂ ತಿನ್ನದಿದ್ದರಂತೂ ಖಂಡಿತ ಹೋಗಿ ಹೇಳುತ್ತಾನೆ!! ಏನೋ ಪಾಪ ಹಸಿದಿರುತ್ತಾನೆ ಎಂದು ನನ್ನ ಊಟವನ್ನು ಇವನಿಗೆ ಕೊಡುವುದೇ ತಪ್ಪು !” ಅಂದುಕೊಳ್ಳುತ್ತಲೇ ಯಾರೋ ಕೊಟ್ಟ ಬಾಲಕಾರ್ಮಿಕರ ಬಗೆಗಿನ ಲೇಖನವನ್ನು ಟೈಪಿಸಿ ಮುಗಿಸಿದಳು. ತನ್ನ ಸೈಬರ್ ಕೆಫೆಗೆ ನಿಮ್ಮಂಥ ಆಂಟಿಯನ್ನು ಸೇರಿಸಿಕೊಂಡಿದ್ದೇ ಹೆಚ್ಚೆನುವ ತರುಣ ಮಾಲೀಕನಿಗೆ ಅದರ ಪ್ರತಿಯನ್ನೊಪ್ಪಿಸಿ ಬಂದು ಮೊಬೈಲ್ ತೆಗೆದದ್ದೇ ಮಗಳ ಮೆಸೇಜು ಕಣ್ಣಿಗೆ ಬಿತ್ತು. ಎಲ್ಲೋ ಅಲೆವ ದುಂಡು ಮುಖದ ಚಂದಿರನಿಗೆ ತನ್ನ ಕೋಪದ ಕೆಂಪಿನ ಫೇಸ್ ಪ್ಯಾಕ್ ಹಾಕಿ ಎಮೋಟಿಕಾನಾಗಿಸಿ ಕಳಿಸಿದ್ದಳು!!

ಮೊದಲ ಬಾರಿಗೆ ಪಾರ್ಲರಿಗೆ ಹೋಗುವ ತನ್ನ ಸಂಭ್ರಮದ ಆತಂಕಕ್ಕೆ ಜೊತೆಯಾಗು ಬಾ ಎಂದು ಅದೆಷ್ಟು ಗೋಗರೆದಿದ್ದಳು ಮಗಳು! ಇಂದೇ ಹೋಗಬೇಕೆಂಬ ಹಠ ಅವಳಿಗೆ! ಇವಳು ‘ಕೈತುಂಬ ಕೆಲಸವಿದೆ’ ಎಂದಿದ್ದಕ್ಕೆ “ನಿನ್ನ ಕೆಫೆಯ ಪಕ್ಕದ ಪಾರ್ಲರಿಗೇ ಬರುತ್ತೇನೆ” ಎಂದ ಮಗಳಿಗೆ ನೋವಾದೀತೆಂದು ಗೊತ್ತಿದ್ದರೂ ‘ಬೇಡ’ ಎಂದಿದ್ದಳು!

“ಈ ಬಾಯಿಬಡುಕಿ ಪಾರ್ಲರಿನಾಕೆ ನಮ್ಮಂತವರನ್ನೇ ಮರುಳು ಮಾಡುತ್ತಾಳೆ. ಇನ್ನು ಎಳೆ ಹುಡುಗಿಯರನ್ನು ಬಿಟ್ಟಾಳೆಯೇ! ಅದೂ ನನ್ನ ಮಗಳೆಂದು ತಿಳಿದ ಮೇಲೇ! ಅಂದು ಮಾರ್ಕೆಟ್ ನಲ್ಲಿ ಸಿಕ್ಕ ಮರುದಿನವೇ ಹೇಳಿದ್ದಳಲ್ಲ ‘ನಿಮ್ಮ ಮಗಳ ಕಣ್ಣು ನಿಮ್ಮ ಕಣ್ಣಂತೆ ಕಡುಗಪ್ಪು ಬಣ್ಣದ್ದಲ್ಲ” ಎಂದು! ಇನ್ನು ನನ್ನ ಮಗಳು ಇಲ್ಲಿಗೆ ಬಂದರಂತೂ ಮುಗಿಯಿತು. ಇಬ್ಬರೇ ಇರುತ್ತೀರಲ್ಲಾ ಎಂದು ಪ್ರಾರಂಭಿಸಿ ಕಣ್ಣು, ಮೂಗು ಪಾಕೆಟ್ ಮನಿ ಎನ್ನುತ್ತಾ ಏನೇನೋ ಕೇಳುತ್ತಾಳೆ!!

parlour1ಹುಡುಗನ ದೊರಗು ಕೆನ್ನೆಯ ಮೇಲೆ ಗುರುತು ಮೂಡಿಸುವಷ್ಟು ಗುಲಾಬಿಯನ್ನು ತುಟಿಗೆ ಹಚ್ಚಿ, ಚೂಪು ಹುಬ್ಬು , ಕಣ್ಣಿಗಿಷ್ಟು ಮೊನಚು, ಕಾಡುವ ಮುಂಗುರುಳು ಎನ್ನುತ್ತಾ ಆ ಹುಡುಗಿಯರ ಬತ್ತಳಿಕೆಯಲ್ಲಿ ತರತರದ ಅಸ್ತ್ರಗಳನ್ನು ತುರುಕುವ ಈ ಪಾರ್ಲರಿನಾಕೆ ನನ್ನ ಮಗಳ ತಲೆಯಲ್ಲಿ ಏನೇನೋ ಪ್ರಶ್ನೆಗಳನ್ನೂ ತುಂಬಿಸಿಬಿಟ್ಟರೆ? ಬೇಡ! ಅವಳಲ್ಲಿ ಇನ್ನಷ್ಟು ಪ್ರಶ್ನೆಗಳು ಮೂಡುವುದು ಬೇಡ! ಅದಕ್ಕೇ ಅವಳು ಈ ಪಾರ್ಲರಿಗೆ ಬರುವುದು ಬೇಡ ಅಂದಿದ್ದು!….. ಈ ಪಾರ್ಲರಿನಾಕೆಗಿನ್ನೂ ಗೊತ್ತಿಲ್ಲ, ಮುಖವನ್ನು ಸುಂದರವಾಗಿಸಿಕೊಂಡಷ್ಟು ಸುಲಭವಲ್ಲ ಬದುಕನ್ನು ಸುಂದರವಾಗಿಸಿಕೊಳ್ಳುವುದು!

ಇಲ್ಲಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾನು ಹೋದಾಗಲೇ ಏನೇನೋ ಕೇಳಿದ್ದಳು. ಬೇರೆಯವರು ಕನ್ನಡಿ ನೋಡುವಾಗ ಇಣುಕಿ ಇಣುಕಿ ಅಭ್ಯಾಸವಾಗಿ ಹೋಗಿದೆ ಅವಳಿಗೆ! ಬೇರೆಯವರ ಬದುಕಿನ ಬಗ್ಗೆಯೂ ಕೆಟ್ಟ ಕುತೂಹಲ!!

ಇವಳ ಸಹವಾಸವೇ ಸಾಕೆಂದು ಬೇರೆ ಪಾರ್ಲರಿಗೆ ಹೋದರೆ, ಕನ್ನಡಿಯೆದುರು ನಿಂತರೆ ನನಗೇ ಭಯ ಮೂಡಿಸುವ ಪೊದೆ ಹುಬ್ಬನ್ನು ತೆಳ್ಳಗಾಗಿಸಿಕೊಂಡರೆ, ಕೂದಲಿಗೊಂದು ಹೆಸರಿರುವ ಆಕಾರ ಕೊಟ್ಟರೆ ‘ಇವಳಿಗೇಕೆ?’ ಎನ್ನುವ ತೀಕ್ಷ್ಣ ನೋಟ ಬೀರುತ್ತಾಳೆ!! ‘ಕುಹಕ’ ಎನ್ನುವುದು ಸಾಂಕ್ರಾಮಿಕ ರೋಗ! ಬೇರೆಯವರನ್ನು ಕೊಲ್ಲುವ ಆ ರೋಗ ಅಕ್ಕಪಕ್ಕದ ಮಹಿಳೆಯರ ಕಣ್ಣಿಗೂ ಥಟ್ಟನೆ ಹರಡಿ ನನ್ನನ್ನು ಪದೇ ಪದೇ ಕೊಲ್ಲುತ್ತದೆ!!”

ಅವಳಿಗೇಕೋ ತನ್ನೂರಿನ ಲಚ್ಚಿಯ ನೆನಪಾಯಿತು. ಕೆದರುಗೂದಲು, ಮಾಸಲು ಕುಂಕುಮದ ಲಚ್ಚಿಯನ್ನು ಕಂಡು, ಊರ ಹೆಂಗಸರು ಹೇಳುತ್ತಿದ್ದ ‘ಇವಳ ಈ ವ್ಯಾಷಕ್ಕೇ ಅವ ಬಿಟ್ಟು ಹೋದದ್ದು’ ಎಂಬ ಫೇಮಸ್ ಡೈಲಾಗನ್ನು ನಿನ್ನೆಯಷ್ಟೇ ಕೇಳಿದಂತಿದೆಯಲ್ಲ ಅನಿಸಿ ಅಂಗುಷ್ಟದಿಂದ ಅಸಹ್ಯದ ಅಲೆಯೊಂದು ರಭಸವಾಗಿ ಬಂದು ತುಟಿಯ ಕೊಂಕಿಸಿ ವಿಷಾದದ ನಗೆಯಾಗಿ ಮಾರ್ಪಟ್ಟಿತು. ಈಗೀಗ ಆಡಿಕೊಳ್ಳುವವರ ಬಾಯಲ್ಲಿ ಮಾಡಿದವರ ಪಾಪಗಳಷ್ಟೇ ಅಲ್ಲ, ಮಾಡದ ಪಾಪಗಳೂ ನಲಿಯುತ್ತವೆ. ‘ಸಮಾಜ’ ಎಂದು ಕರೆಸಿಕೊಳ್ಳುವ ಈ ಸಮಾಜ ಇರುವುದೇ ಹೀಗೆ!

ಸೈಬರ್ ಕೆಫೆ ಮತ್ತು ಪಾರ್ಲರ್ ನಡುವಿನ ಗೋಡೆಗೆ ಒರಗಿದ್ದವಳ ಯೋಚನೆ ಹೀಗೇ ಸಾಗಿತ್ತು…..
” ‘ನಮ್ಮ ಯಜಮಾನರಿಗೆ ಬೆಳಿಗ್ಗೆ ಮಾಡಿದ ಪಲ್ಯ ರಾತ್ರಿ ಆಗೋದೇ ಇಲ್ಲ’ ಎಂಬ ಯಾರೋ ಬರೆದಿಟ್ಟ ದಡ್ಡ ಡೈಲಾಗನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಹೆಂಗಸರಲ್ಲಿ ನಾನೂ ಒಬ್ಬಳಾಗಿದ್ದರೆ, ಈ ರೀತಿ ಕಾಣದ ಕಿಟಕಿಯಿಂದ ಪಾರ್ಲರಿನೊಳಕ್ಕೆ ಇಣುಕಬೇಕಾಗಿರಲಿಲ್ಲ. ಅವರಂತೆಯೇ ನಾನೂ ಕೂಡ, ಹುಬ್ಬು ತೀಡಿಸಿಕೊಳ್ಳುವ ಕ್ಷಣದಲ್ಲಿ ತಲಾ ಕೂದಲಿಗೊಂದು ಹನಿ ಕಣ್ಣೀರ ಹಂಚಿ ನಿರಾಳವಾಗಬಹುದಿತ್ತು” ಎಂದುಕೊಳ್ಳುತ್ತಾ ತಾನು ತಂದ ಹರಿವೆ ಸೊಪ್ಪಿನ ಅನ್ನವನ್ನು ಪಾರ್ಲರಿನ ಹುಡುಗನಿಗೆ ಕೊಟ್ಟು ‘ಇವತ್ತೂ ನನಗೆ ಹಸಿವಿಲ್ಲ’ ಎಂದಳು!!…

‍ಲೇಖಕರು Admin

15 May, 2016

4 Comments

  1. ಚೈತ್ರಿಕಾ ಹೆಗಡೆ

    ಒಳ್ಳೇ ಬರಹ.. ಇಷ್ಟವಾಯ್ತು.

  2. ಮಾನಸಾ ಹೆಗಡೆ

    ಧನ್ಯವಾದಗಳು….

  3. ಸಂಜಯ ಭಟ್ಟ ಬೆಣ್ಣೆ

    ಮಾನಸಾ ಹೆಗಡೆಯವರೇ ಬರಹ ಸುಮಾರಾಗಿ ಇಷ್ಟವಾಯಿತು. ಮುಖ್ಯವಾಗಿ ಪ್ರಾರಂಭದ ಮೊದಲ ಪುಂಜ,ಹೀಲ್ಸ್ ಹವಾಯಿ ಯ ಆಮೇಲೆ ಅವಳ ಈ ವ್ಯಾಷಕ್ಕೇ ಅಂವ ಬಿಟ್ಟೋದದ್ದು ಹಾಗೂ ಕಡೆಗೆ ಇವತ್ತೂ ಹಸಿವಿಲ್ಲವೆಂದು ಅವನಿಗೆ ಕೊಟ್ಟ ಹರಿವಂ ಸೊಪ್ಪಿನ ಪಲ್ಯ; ಬಿಡಿಬಿಡಿಯಾಗಿ ಬಹುವಾಗಿ ತಾಕಿದವು

  4. Tejas watve

    ಬರಹ ಇಷ್ಟವಾಯ್ತು. ಮುಂದುವರಿಸಿ. ಶುಭಾಶಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading